Thursday, 21 September 2017

ಗುಣಮಟ್ಟದಿಂದ ಚಾಮರಾಜೇಶ್ವರ ರಥ ನಿರ್ಮಾಣ : ಶಾಸಕರು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ (21-09-2017)

     

ಗುಣಮಟ್ಟದಿಂದ ಚಾಮರಾಜೇಶ್ವರ ರಥ ನಿರ್ಮಾಣ : ಶಾಸಕರು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ


ಚಾಮರಾಜನಗರ, ಸೆ. 21 - ಚಾಮರಾಜನಗರದ ಇತಿಹಾಸ ಪ್ರಸಿದ್ಧ ಚಾಮರಾಜೇಶ್ವರ ರಥ ನಿರ್ಮಾಣ ಕಾರ್ಯವನ್ನು ಗುಣಮಟ್ಟದಿಂದ ನಿರ್ವಹಿಸುವಂತೆ  ಸಂಬಂಧಪಟ್ಟ ನಿರ್ಮಾಣಕಾರರಿಗೆ ಸೂಚನೆ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ.ರಾಮು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಥನಿರ್ಮಾಣ ಸಂಬಂಧ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರ ಸಮ್ಮುಖದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಜಿಲ್ಲಾಧಿಕಾರಿಯವರು ಮಾತನಾಡಿದರು.

ರಥ ನಿರ್ಮಾಣ ಹಾಗೂ ಇದರ ಪೂರಕ ಕೆಲಸಗಳಿಗೆ ಒಟ್ಟು 1.20 ಕೋಟಿ ರೂ ರಥ ಅನುದಾನ ನಿಗಧಿಯಾಗಿದೆ. 1 ಕೋಟಿ ರೂ ವೆಚ್ಚದಲ್ಲಿ ರಥ ನಿರ್ಮಾಣ ಮಾಡಬೇಕಿದ್ದು ಉಳಿದ 20 ಲಕ್ಷ ರೂ ಅನುದಾನದಲ್ಲಿ ತೇರಿನ ಮನೆಯನ್ನು ನಿರ್ಮಿಸಬೇಕಿದೆ ಈ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ರಥ ನಿರ್ಮಿಸುವ ಸಂಬಂಧ ವಿವರವಾಗಿ ಚರ್ಚಿಸಲಾಯಿತು.

ರಥ ನಿರ್ಮಾಣ ಕೆಲಸದಲ್ಲಿ ರಾಜೀಯಾಗುವ ಪ್ರಶ್ನೆಯೆ ಇಲ್ಲ. ಉತ್ತಮ ಗುಣಮಟ್ಟದ ಕೆತ್ತನೆ ನಿರ್ಮಾಣ ಕಾರ್ಯ ಮಾಡಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗುತ್ತದೆ. ಎಲ್ಲ ಸಾಂಪ್ರಾದಾಯಿಕ ವಿಧಾನಗಳನ್ನು ಅನುಸರಿಸುವಂತೆ ಸೂಚಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ.ರಾಮು ತಿಳಿಸಿದರು.

ರಥನಿರ್ಮಾಣಕ್ಕೆ ಅಗತ್ಯವಿರುವ ಗುಣಮಟ್ಟದ ಮರ ಆಯ್ಕೆಯನ್ನು ಅರಣ್ಯಾಧಿಕಾರಿಗಳ ಸಹಕಾರ ಪಡೆದು ಮಾಡಲಾಗುತ್ತದೆ. ಇದಕ್ಕಾಗಿಯೆ ಪ್ರತ್ಯೇಕ ಸಮಿತಿಯನ್ನು ರಚನೆ ಮಾಡಲಾಗುತ್ತದೆ. ಗುಣಮಟ್ಟದ ವಸ್ತುಗಳನ್ನು ಬಳಸಲು ಸೂಚಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ರಥ ನಿರ್ಮಾಣ ಕಾರ್ಯವು ಇಲ್ಲಿಯೆ ನಡೆಯಬೇಕು. ಬೇರೆಕಡೆ ನಿರ್ಮಾಣ ಮಾಡಬಾರದು. ರಥ ಕೆಲಸವು ಪಾರದರ್ಶಕವಾಗಿರಬೇಕು. ರಥ ನಿರ್ಮಾಣ ಕಾರ್ಯವನ್ನು ಜನರು ವೀಕ್ಷಿಸಲು ಅವಕಾಶವಾಗಬೇಕು ಎಂದು ನಿರ್ಮಾಣ ಹೊಣೆ ನಿರ್ವಹಿಸಲಿರುವ ಸಂಸ್ಥೆಗೆ ತಿಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ರಾಮು ವಿವರಿಸಿದರು.

ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಐತಿಹಾಸಿಕ ಚಾಮರಾಜೇಶ್ವರ ರಥ ನಿರ್ಮಾಣ ಕೆಲಸವು ಶೀಘ್ರವಾಗಿ ಆರಂಭವಾಗಬೇಕು. ಜನರ ನಿರೀಕ್ಷೆಗೆ ಅನುಗುಣವಾಗಿ ಕೆಲಸ ಪೂರ್ಣವಾಗಬೇಕು. ಈ ನಿಟ್ಟಿನಲ್ಲಿ ವಹಿಸಬೇಕಿರುವ ಪ್ರಕ್ರಿಯೆ ತ್ವರಿತವಾಗಿ ನಡೆಯಬೇಕೆಂದು ತಿಳಿಸಿದರು.

ಇದೇ ವೇಳೆ ಸಭೆಯಲ್ಲಿ ಹಾಜರಿದ್ದ ಮುಖಂಡರು ದೇವಾಲಯದ ಸುತ್ತಮುತ್ತಲ ಪರಿಸರವು ಸ್ವಚ್ಚವಾಗಿಡಲು ಅಗತ್ಯ ಕ್ರಮವಹಿಸಬೇಕು. ಮುಂಬರುವ ಆóಷಾಢ ಮಾಸದ ರಥೋತ್ಸವ ಸಂದರ್ಭದ ವೇಳೆಗೆ ನೂತನ ರಥ ನಿರ್ಮಾಣವಾಗಬೇಕು ಎಂಬುದು ಸೇರಿದಂತೆ ಇತರೆ ಸಲಹೆಗಳನ್ನು  ಸಭೆಯ ಮುಂದಿಟ್ಟರು.

ತಹಶೀಲ್ದಾರ್ ಪುರಂದರ್, ನಗರಸಭೆ ಆಯುಕ್ತರಾದ ರಾಜಣ್ಣ, ಚಾಮರಾಜೇಶ್ವರ ದೇವಾಲಯದ ಕಾರ್ಯನಿರ್ವಾಹಕಾಧಿಕಾರಿ ಮಂಜೇಶ್, ಅರ್ಚಕರಾದ ನಾಗರಾಜ ದೀಕ್ಷಿತ್, ಮುಖಂಡರಾದ ಸುದರ್ಶನ್‍ಗೌಡ, ರಾಜುನಾಯಕ, ಚಾ.ರಂ.ಶ್ರೀನಿವಾಸಗೌಡ, ಸಿ.ಎಂ.ಮಂಜುನಾಥ ಗೌಡ, ಸುರೇಶ್ ನಾಯಕ,  ಪ್ರಭುಸ್ವಾಮಿ, ಗು.ಪುರುಷೋತ್ತಮ್, ಎಂ.ನಾಗೇಶ್, ಭಾಸ್ಕರ್, ಶಿವಣ್ಣ,  ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಸೆಪ್ಟಂಬರ್ 22 ರಂದು ನಗರದಲ್ಲಿ ರಾಜ್ಯ ಲೋಕಾಯುಕ್ತರ ಸಭೆ


ಚಾಮರಾಜನಗರ, ಸೆ. 21:-  ಗೌರವಾನ್ವಿತ ರಾಜ್ಯದ ಲೋಕಾಯುಕ್ತ ನ್ಯಾಯಮೂರ್ತಿಯವರಾದ ಪಿ.ವಿಶ್ವನಾಥಶೆಟ್ಟಿ ಅವರು ಜಿಲ್ಲಾ ಪ್ರವಾಸ ಕೈಗೊಂಡಿದ್ದು ಸೆಪ್ಟಂಬರ್ 22 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ಮಧ್ಯಾಹ್ನ 3 ಗಂಟೆಗೆ ಚಾಮರಾಜನಗರದಿಂದ ನಿರ್ಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.



ಸೆ. 22 ರಂದು ನಗರಕ್ಕೆ ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ  ದೌರ್ಜನ್ಯ ನಿಯಂತ್ರಣಾ ಸಮಿತಿ ಅಧ್ಯಕ್ಷರ ಭೇಟಿ


ಚಾಮರಾಜನಗರ, ಸೆ. 21 - ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ತಜ್ಞರ ಸಮಿತಿ  ಅಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸದಸ್ಯರು ಆದ ವಿ.ಎಸ್.ಉಗ್ರಪ್ಪ ಅವರು ಸೆಪ್ಟಂಬರ್ 22 ರಂದು ನಗರಕ್ಕೆ ಭೇಟಿ ನೀಡುವರು.

ಬೆಳಗ್ಗೆ 10.30 ಗಂಟೆಗೆ ನಗರಕ್ಕೆ ಆಗಮಿಸುವರು. ಬಳಿಕ ಆದಿಕವಿ ಶ್ರೀ ಮಹರ್ಷಿವಾಲ್ಮೀಕಿ ಅವರ ಪುತ್ಥಳಿ ಲೋಕಾರ್ಪಣೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 12 ಗಂಟೆಗೆ ಮೈಸೂರಿಗೆ ತೆರಳುವರೆಂದು ಅಧ್ಯಕ್ಷರ ಅಧೀನ ಕಾರ್ಯದರ್ಶಿಯವರು ತಿಳಿಸಿದ್ದಾರೆ.

ಕೃಷಿ ಹೊಂಡಗಳ ಸುತ್ತಲೂ ರಕ್ಷಣಾತ್ಮಕ ಕ್ರಮ ವಹಿಸಲು ಕೃಷಿ ಇಲಾಖೆ ಮನವಿ


ಚಾಮರಾಜನಗರ, ಸೆ. 21 - ಕೃಷಿಭಾಗ್ಯ ಯೋಜನೆಯಡಿ ರೈತರಿಗಾಗಿ ನಿರ್ಮಿಸಲಾಗಿರುವ ಕೃಷಿ ಹೊಂಡಗಳ ಸುತ್ತ ರಕ್ಷಣಾತ್ಮಕ ಕ್ರಮಗಳನ್ನು ಅನುಸರಿಸುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ತಿರುಮಲೇಶ್ ಮನವಿ ಮಾಡಿದ್ದಾರೆ.

ಕೃಷಿ ಹೊಂಡ ಕಾಮಗಾರಿ ಪೂರ್ಣವಾದ ನಂತರ  ಮಳೆ ನೀರು ತುಂಬಿ ಮಣ್ಣಿನಲ್ಲಿ ಇಂಗುವುದನ್ನು ತಡೆಯುವ ಸಲುವಾಗಿ ಪಾಲಿಥೀನ್ ಹೊದಿಕೆಯನ್ನು ಕೃಷಿಹೊಂಡಗಳಿಗೆ ಹಾಕಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 4489 ಕೃಷಿ  ಹೊಂಡಗಳ ಕಾಮಗಾರಿ ಕೆಲಸ ಪೂರ್ಣಗೊಂಡಿದ್ದು 1904 ಕೃಷಿಹೊಂಡಗಳಿಗೆ ಪಾಲಿಥೀನ್ ಹೊದಿಕೆ ಹಾಕಲಾಗಿದೆ.

ಪ್ರಸ್ತುತ ಮಳೆ ಹೆಚ್ಚಾಗುತ್ತಿರುವ ಕಾರಣ ಕೃಷಿಹೊಂಡಗಳಲ್ಲಿ 9 ಅಡಿಗೂ ಹೆಚ್ಚು ನೀರು ಸಂಗ್ರಹಣೆಯಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿಹೊಂಡದ ಸುತ್ತಲು ಮುನ್ನೆಚರಿಕೆಯಾಗಿ ಬೇಲಿಗಳನ್ನು ನಿರ್ಮಿಸಬೇಕು  ಈ ಮೂಲಕ ಜಾನುವಾರುಗಳು ಮಕ್ಕಳು ಹೊಂಡ ಹತ್ತಿರ ಪ್ರವೇಶಿಸದಂತೆ ತಡೆಯಬೇಕು. ಕೃಷಿಹೊಂಡಗಳಿಗೆ ಟೈರಿನ ಟ್ಯೂಬ್‍ಗಳು, ಉದ್ದವಾದ ಹಗ್ಗವನ್ನು ಕಟ್ಟಿ ಹೊಂಡಗಳಿಗೆ ಬಿಡಬೇಕು. ಕೃಷಿಹೊಂಡಗಳ ಸುತ್ತಲು ನೆರಳುಪರದೆ ಅಳವಡಿಸಬೇಕು. ನೆರಳುಪರದೆ ಅಳವಡಿಸುವ ರೈತರಿಗೆ ಶೇ.50.ರಷ್ಟು ಸಹಾಯಧನ ನೀಡಲಾಗುತ್ತದೆ. ರೈತರು ಹತ್ತಿರದ ರೈತಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆಯಬೇಕು.

ಕೃಷಿಹೊಂಡಗಳ ಸುತ್ತಲು ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮುನ್ನೆಚರಿಕೆ ವಿಧಾನಗಳನ್ನು ಪಾಲಿಸುವಂತೆ ಜಂಟಿಕೃಷಿ ನಿರ್ದೇಶಕರಾದ ತಿರುಮಲೇಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಸೆ.23 ರಂದು ನೇರ ಫೋನ್ ಇನ್ ಕಾರ್ಯಕ್ರಮ


ಚಾಮರಾಜನಗರ, ಸೆ. 21 - ಜಿಲ್ಲೆಯ ನಾಗರಿಕರ ಕುಂದು ಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಸೆಪ್ಟಂಬರ್ 23 ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೇರಫೋನ್ ಇನ್ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಜಿಲ್ಲಾಧಿಕಾರಿಗಳು, ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿಗಳು, ಜಿಲ್ಲಾ ಪೊಲೀಸ್‍ವರಿಷ್ಠಾಧಿಕಾರಿಗಳು, ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಫೋನ್ ಇನ್ ಕಾರ್ಯಕ್ರಮದಲ್ಲಿ  ಉಪಸ್ಥಿತರಿರುತ್ತಾರೆ. ನಾಗರಿಕರು ಯಾವುದೇ ದೂರು ಕುಂದುಕೊರತೆಗಳು ಇದ್ದಲ್ಲಿ ದೂರವಾಣಿ ಸಂಖ್ಯೆ 08226-224888 ಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸೆ.25 ರಂದು ಕೊಳ್ಳೇಗಾಲ, 26 ರಂದು ಯಳಂದೂರಿಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ : ದೂರು ಸ್ವೀಕಾರ


ಚಾಮರಾಜನಗರ, ಸೆ. 21 :- ಜಿಲ್ಲೆಯ ಲೋಕಾಯುಕ್ತ ಅಧಿಕಾರಿಗಳು ಸೆಪ್ಟಂಬರ್ 25 ರಂದು ಕೊಳ್ಳೇಗಾಲ ಹಾಗೂ ಸೆಪ್ಟಂಬರ್ 26 ರಂದು ಯಳಂದೂರಿಗೆ ಭೇಟಿ ನೀಡಿ ನಾಗರಿಕರಿಂದ ದೂರುಗಳನ್ನು ಸ್ವೀಕರಿಸುವರು.

ಕೊಳ್ಳೇಗಾಲದ ಸರ್ಕಾರಿ ಅತಿಥಿಗೃಹ ಹಾಗೂ ಯಳಂದೂರು ಅತಿಥಿಗೃಹದಲ್ಲಿ ನಿಗದಿತ ದಿನಾಂಕದಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾರ್ವಜನಿಕರಿಂದ ಭರ್ತಿಮಾಡಿದ ಮತ್ತು ನೋಟರಿಯವರಿಂದ ಅಫಿಡವಿಟ್ ಮಾಡಿಸಿದ ಅರ್ಜಿಗಳನ್ನು ಸ್ವೀಕರಿಸುವರು.

ಸರ್ಕಾರಿ ಕಚೇರಿಯಲ್ಲಿ ಕೆಲಸಕ್ಕೆ ವಿಳಂಬ, ಇನ್ನಿತರ ತೊಂದರೆ ನೀಡುತ್ತಿರುವ ಅಧಿಕಾರಿ ನೌಕರರ ವಿರುದ್ಧ ದೂರುಗಳಿದಲ್ಲಿ ನಮೂನೆ 1 ಮತ್ತು 2 ರಲ್ಲಿ ಭರ್ತಿಮಾಡಿ ಅಫಿಡವಿಟ್ ಮಾಡಿಸಿ ಸಲ್ಲಿಸಬಹುದು ಎಂದು ಜಿಲ್ಲಾ ಲೋಕಾಯುಕ್ತ ಪೊಲೀಸ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.































No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು