Monday, 13 August 2018

ಕೇಂದ್ರೀಯ ವಿದ್ಯಾಲಯದಲ್ಲಿ ಕನ್ನಡ ಕಲಿಕೆ ಅವಕಾಶಕ್ಕೆ ಮಾತುಕತೆ:ಕೇಂದ್ರ ಸಚಿವರಾದ ಅನಂತಕುಮಾರ್

ಕೇಂದ್ರೀಯ ವಿದ್ಯಾಲಯದಲ್ಲಿ ಕನ್ನಡ ಕಲಿಕೆ ಅವಕಾಶಕ್ಕೆ ಮಾತುಕತೆ:ಕೇಂದ್ರ ಸಚಿವರಾದ ಅನಂತಕುಮಾರ್ 

ಚಾಮರಾಜನಗರ, ಆ. 13 - ಕೇಂದ್ರಿಯ ವಿದ್ಯಾಲಯದಲ್ಲಿ 1ನೇ ತರಗತಿಯಿಂದಲೇ ಕನ್ನಡ ಭಾಷೆ ಕಲಿಸಲು ಅವಕಾಶ ಮಾಡಿಕೊಡುವ ಸಂಬಂಧ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವರೊಂದಿಗೆ ಮಾತುಕತೆ ನಡೆಸುವುದಾಗಿ ಕೇಂದ್ರ ರಸಾಯನಿಕ, ರಸಗೊಬ್ಬರ ಹಾಗೂ ಸಂಸತ್ತಿನ ವ್ಯವಹಾರಗಳ ಸಚಿವರಾದ ಅನಂತಕುಮಾರ್ ಅವರು ತಿಳಿಸಿದರು.
ತಾಲೂಕಿನ ಮಾದಾಪುರದಲ್ಲಿ ಇಂದು ನೂತನವಾಗಿ ನಿರ್ಮಾಣವಾಗಿರುವ ಕೇಂದ್ರೀಯ ವಿದ್ಯಾಲಯ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ರಾಜ್ಯದಲ್ಲಿ ಆಯಾ ರಾಜ್ಯದ ಮಾತೃಭಾಷೆ ಕಲಿಕೆಗೂ ಒತ್ತು ನೀಡಬೇಕಿದೆ. ಅದೇ ರೀತಿ ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಕೇಂದ್ರಿಯ ವಿದ್ಯಾಲಯದಲ್ಲಿ ಕಲಿಸಬೇಕು ಎಂಬ ಬೇಡಿಕೆ ಇದೆ. ಮಾತೃಭಾಷೆ ಅಂದರೆ ಸಂಸ್ಕøತಿ ನೆಲದ ಸೊಗಡು ಇರುತ್ತದೆ. ಹೀಗಾಗಿ ಕೇಂದ್ರೀಯ ವಿದ್ಯಾಲಯದಲ್ಲಿ ಕನ್ನಡವನ್ನು ಕಲಿಸಬೇಕೆಂದು ಕೇಂದ್ರ ಮಾನವ ಸಂಪನ್ಮೂಲ ಸಚಿವರಾದ ಪ್ರಕಾಶ್ ಜಾವೇಡ್‍ಕರ್ ಅವರೊಂದಿಗೆ ಸಮಾಲೋಚಿಸಿ ಕನ್ನಡ ಕಲಿಕೆ ಜಾರಿಗೆ ತರಲು ಪ್ರಯತ್ನಿಸುವುದಾಗಿ ಅನಂತಕುಮಾರ್ ಅವರು ತಿಳಿಸಿದರು.
ಸ್ಥಳೀಯ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರತಿ ತರಗತಿಗಳ ಪ್ರಸ್ತುತ 1 ವಿಭಾಗವಿದೆ. ಇದನ್ನು 2 ವಿಭಾಗಗಳನ್ನಾಗಿ ಹೆಚ್ಚಳ ಮಾಡಿದರೆ ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಅವಕಾಶ ಸಿಗಲಿದೆ ಎಂಬ ಲೋಕಸಭಾ ಸದಸ್ಯರಾದ ಧ್ರುವನಾರಾಯಣ ಅವರ ಬೇಡಿಕೆಯಾಗಿದೆ. ಅಲ್ಲದೆ ಮತ್ತೊಂದು ನವೋದಯ ವಿದ್ಯಾಲಯವನ್ನು ಜಿಲ್ಲೆಗೆ ಮಂಜೂರು ಮಾಡುವಂತೆ ಧ್ರುವನಾರಾಯಣ ಅವರು ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವರ ಗಮನ ಸೆಳೆದು ಮಂಜೂರಾತಿ ಮಾಡಿಸಲು ಮುಂದಾಗುವುದಾಗಿ ಅನಂತಕುಮಾರ್ ಅವರು ತಿಳಿಸಿದರು.
ಇಲ್ಲಿನ ನೂತನ ಕಟ್ಟಡ ಅತ್ಯುತ್ತಮವಾಗಿದೆ. ಸಸಿಗಳನ್ನು ನೆಟ್ಟು ಉತ್ತಮ ಪರಿಸರ ನಿರ್ಮಿಸಲು ಶ್ರಮಿಸಲಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಐ.ಎ.ಎಸ್. ಐ.ಪಿ.ಎಸ್ ನಂತಹ ಪರೀಕ್ಷೆಗಳಲ್ಲೂ ತೇರ್ಗಡೆಯಾಗಿ ಉನ್ನತ ಹುದ್ದೆಗಳನ್ನು ಪಡೆಯುವಂತಾಗಲಿ. ವಿದ್ಯಾಲಯದಲ್ಲಿ ಹೆಚ್ಚಿನ ಅಂಕಗಳೊಂದಿಗೆ ವ್ಯಾಸಂಗ ಪೂರೈಸುವಂತಾಗಲಿ ಎಂದು ಅನಂತಕುಮಾರ್ ಅವರು ಆಶಿಸಿದರು.
ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಸಚಿವರಾದ ಎನ್. ಮಹೇಶ್ ಅವರು ಮಾತನಾಡಿ ಇಲ್ಲಿನ ಕೇಂದ್ರಿಯ ವಿದ್ಯಾಲಯದಲ್ಲಿ ನೀಡುವ ಶಿಕ್ಷಣ ಗುಣಮಟ್ಟದಿಂದ ಕೂಡಿರಬೇಕು. ಈ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಎಲ್ಲಾ 46 ಕೇಂದ್ರೀಯ ವಿದ್ಯಾಲಯಗಳಿಗೆ ತಾವು ಭೇಟಿ ನೀಡಿ ಅಲ್ಲಿನ ಕಲಿಕಾ ಗುಣಮಟ್ಟವನ್ನು ನೋಡಲಿದ್ದೇನೆ. ಇಲ್ಲಿಯೂ ಆಗಬೇಕಿರುವ ಗಮನಾರ್ಹ ಬದಲಾವಣೆಯತ್ತ ಅಸಕ್ತಿ ಹೊಂದಿದ್ದೇನೆ ಎಂದರು.
ಮಾತೃಭಾಷೆ ಕನ್ನಡ ಕಲಿಕೆಗೆ ಕೇಂದ್ರೀಯ ವಿದ್ಯಾಲಯದಲ್ಲಿ ಅವಕಾಶ ದೊರೆಯಬೇಕು. ಇದರಿಂದ ಇಲ್ಲಿನ ಸಾಂಸ್ಕøತಿಕ ಬೇರುಗಳು ಗಟ್ಟಿಗೊಳ್ಳಲಿವೆ. ಸ್ಥಳೀಯರ ಬೇಡಿಕೆ ಈಡೇರಬೇಕು ಎಂದು ಸಚಿವರಾದ ಮಹೇಶ್ ನುಡಿದರು.
ಸಿಬ್ಬಂದಿ ವಸತಿ ಗೃಹ ಉದ್ಘಾಟಿಸಿ ಮಾತನಾಡಿದ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು 16 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ವಿದ್ಯಾಲಯ ಕಟ್ಟಡದಿಂದ ಜಿಲ್ಲೆಗೆ ಅನುಕೂಲವಾಗಲಿದೆ. ಈಗಾಗಲೇ ಜಿಲ್ಲೆಯಲ್ಲಿ 1 ನವೋದಯ ಶಾಲೆ ಇದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನಸಂಖ್ಯೆ ಹೆಚ್ಚಿರುವ ಜಿಲ್ಲೆಗಳಲ್ಲಿ ಮತ್ತೊಂದು ನವೋದಯ ಶಾಲೆ ಆರಂಭಿಸಲು ಅವಕಾಶವಿದೆ. ಜಿಲ್ಲೆಯಲ್ಲೂ ಪರಿಶಿಷ್ಟರ ಜನಸಂಖ್ಯೆ ಹೆಚ್ಚು ಇರುವ ಹಿನ್ನಲೆಯಲ್ಲಿ ಇನ್ನೊಂದು ನವೋದಯ ಶಾಲೆ ಮಂಜೂರು ಮಾಡಲು ಕೇಂದ್ರ ಮಾನವ ಸಂಪನ್ಮೂಲ ಸಚಿವರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಅನಂತಕುಮಾರ್ ಅವರಿಗೆ ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ, ಶಾಸಕರಾದ ಸಿ.ಎಸ್. ನಿರಂಜನ್‍ಕುಮಾರ್, ಎಸ್. ರಾಮದಾಸ್, ಜಿ.ಪಂ. ಉಪಾಧ್ಯಕ್ಷರಾದ ಯೋಗೀಶ್, ಸದಸ್ಯರಾದ ಸಿ.ಎನ್. ಬಾಲರಾಜು, ತಾ.ಪಂ. ಅಧ್ಯಕ್ಷರಾದ ದೊಡ್ಡಮ್ಮ, ಸದಸ್ಯರಾದ ಪುಷ್ಪಲತ, ಗ್ರಾ.ಪಂ. ಅದ್ಯಕ್ಷರಾದ ಕೆ.ಎಸ್. ಸಿದ್ದರಾಜು, ಮಾಜಿ ಶಾಸಕರಾದ ಜಿ.ಎನ್. ನಂಜುಂಡಸ್ವಾಮಿ, ಬಾಲರಾಜು, ಸಿ. ರಮೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಕೇಂದ್ರೀಯ ವಿದ್ಯಾಲಯ ಸಂಘಟನೆಯ ಉಪ ಅಯುಕ್ತರಾದ ಡಾ. ಪಿ. ದೇವಕುಮಾರ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು