ಡಿ.ದೇವರಾಜ ಅರಸು, ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಅರ್ಥಪೂರ್ಣ ಆಚರಣೆಗೆ ತೀರ್ಮಾನ
ಚಾಮರಾಜನಗರ, ಆ. 14- ಜಿಲ್ಲಾಡಳಿತದ ವತಿಯಿಂದ ಹಿಂದುಳಿದ ವರ್ಗಗಳ ಹರಿಕಾರ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿಯವರಾದ ಡಿ. ದೇವರಾಜ ಅರಸು ಅವರ ಜನ್ಮ ದಿನಾಚರಣೆ ಮತ್ತು ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮವನ್ನು ಜಿಲ್ಲಾ ಕೇಂದ್ರದಲ್ಲಿ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಜಯಂತಿ ಆಚರಣೆ ಕುರಿತ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಆಯೋಜಿಸಲು ನಿರ್ಧಾರ ಕೈಗೊಳ್ಳಲಾಯಿತು.
ಡಿ. ದೇವರಾಜ ಅರಸು ಜನ್ಮದಿನ ಆಚರಣೆ ಸಂಬಂಧ ಸಲಹೆ ಪಡೆಯುವ ವೇಳೆ ಸಭೆಯಲ್ಲಿ ಹಾಜರಿದ್ದ ಮುಖಂಡರು ಆಗಸ್ಟ್ 20ರಂದು ಡಿ. ದೇವರಾಜ ಅರಸು ಅವರ ಜನ್ಮದಿನ ಆಚರಿಸಬೇಕಿದೆ. ಕಾಲಾವಕಾಶ ಕಡಿಮೆ ಇದ್ದು ತಡವಾಗಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಈ ಅವಧಿಯಲ್ಲಿ ಸಿದ್ಧತಾ ಕಾರ್ಯ ಹೇಗೆ ನಡೆಯಲಿದೆ. ಹೀಗಾಗಿ ಆಗಸ್ಟ್ 20ರ ಬದಲು ಮತ್ತೊಂದು ದಿನ ಕಾರ್ಯಕ್ರಮ ಆಯೋಜಿಸಬೇಕೆಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರು ಗಣ್ಯರ ಲಭ್ಯತೆ ಇನ್ನಿತರ ಅಗತ್ಯ ಸಿದ್ದತೆಗಳನ್ನು ಗಮನಿಸಿಕೊಂಡು ಕಾಯ್ಕ್ರಮಕ್ಕೆ ದಿನಾಂಕ ನಿಗದಿ ಮಾಡಲಾಗುವುದು. ಉಳಿದಂತೆ ಕಾರ್ಯಕ್ರಮಕ್ಕೆ ಆಗಬೇಕಿರುವ ಸಿದ್ದತೆ, ಮುಖ್ಯ ಭಾಷಣಕಾರರ ಆಯ್ಕೆ, ಇತರೆ ಕೆಲಸಗಳನ್ನು ನಿರ್ವಹಿಸಲಾಗುವುದು ಎಂದರು.
ಅರಸು ಅವರ ದಿನಾಚರಣೆ ಅರ್ಥಪೂರ್ಣವಾಗಿ ನಡೆಯಬೇಕು. ಅರಸು ಅವರ ಬಗೆಗಿನ ಪುಸ್ತಕಗಳನ್ನು ವಿತರಿಸುವಂತಗಬೇಕು ಎಂದು ಮುಖಂಡರು ಸಲಹೆ ಮಾಡಿದರು.
ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮವನ್ನು ಆಗಸ್ಟ್ 27ರಂದೇ ಹಮ್ಮಿಕೊಳ್ಳಲು ನಿರ್ಣಯ ತೆಗೆದುಕೊಳ್ಳಲಾಯಿತು. ಕಾರ್ಯಕ್ರಮಕ್ಕೂ ಮುಖ್ಯ ಉಪನ್ಯಾಸಕರನ್ನು ಆಯ್ಕೆ ಮಾಡಲು ಹಾಜರಿದ್ದ ಮುಖಂಡರಿಗೆ ಸಲಹೆ ಕೇಳಲಾಯಿತು. ಎಲ್ಲಾ ಅಭಿಪ್ರಾಯ ಆಲಿಸಿ ಅಂತಿಮವಾಗಿ ಉಪನ್ಯಾಸಕರನ್ನು ಅಯ್ಕೆ ಮಾಡಿಕೊಳ್ಳಲು ನಿರ್ಧರಿಸಲಾಯಿತು. ಬ್ರಹ್ಮಶ್ರೀ ನಾರಾಯಣ ಗುರು ಕುರಿತ ಪುಸ್ತಕಗಳ ಮಾರಾಟ, ವಿತರಣೆಗೂ ಸಮಾರಂಭದಲ್ಲಿ ಅವಕಾಶ ಮಾಡಿಕೊಡಬೇಕೆಂಬ ಸಲಹೆ ಕೂಡ ಕೇಳಿಬಂದ ಹಿನ್ನಲೆಯಲ್ಲಿ ಇದಕ್ಕೆ ಪೂರಕವಾಗಿ ಸ್ಪಂದಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿಯವರು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಕಾರ್ಯಕ್ರಮ ಆಯೋಜನೆಗೆ ಎಲ್ಲ ಸಿದ್ದತಾ ಕ್ರಮಗಳನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕೈಗೊಳ್ಳಲಿದೆ. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಏರ್ಪಡಿಸಲು ಅಗತ್ಯವಿರುವ ಸಹಕಾರವನ್ನು ನೀಡಬೇಕೆಂದು ಹೆಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಮನವಿ ಮಾಡಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಚೆನ್ನಪ್ಪ, ಸಂಘಟನೆಗಳ ಮುಖಂಡರಾದ ಶಾ. ಮುರಳಿ, ಸಿ.ಎಂ. ಕೃಷ್ಣಮೂರ್ತಿ, ಚಾ.ರಂ. ಶ್ರೀನಿವಾಸಗೌಡ, ಕೆ.ಎಂ. ನಾಗರಾಜು, ನಿಜಧ್ವನಿ ಗೋವಿಂದರಾಜು, ರಾಮಸಮುದ್ರ ಸುರೇಶ್, ಪರ್ವತರಾಜು, ಅರಕಲವಾಡಿ ನಾಗೇಂದ್ರ, ಗು. ಪುರುಷೋತ್ತಮ್, ಆಲೂರು ನಾಗೇಂದ್ರ, ಕಂದಹಳ್ಳಿ ನಾರಾಯಣ, ನಾಗೇಶ್, ಶಿವಣ್ಣ, ಶಿವಕುಮಾರ್, ವೆಂಕಟೇಶ್, ರಮೇಶ್, ಇತರೆ ಪ್ರತಿನಿಧಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಆ. 15ರ ಸ್ವಾತಂತ್ರ್ಯ ದಿನಾಚರಣೆಯಂದು ಕಾರ್ಮಿಕರಿಗೆ ರಜೆ ನೀಡಲು ಸೂಚನೆ
ಚಾಮರಾಜನಗರ, ಆ. 14 - ಸ್ವಾತಂತ್ರ್ಯ ದಿನ ಆಚರಣೆಯ ಆಗಸ್ಟ್ 15ರಂದು ಜಿಲ್ಲೆಯ ಎಲ್ಲಾ ಅಂಗಡಿ, ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ಹಾಗೂ ಕೆಲಸಗಾರರಿಗೆ ರಜೆ ನೀಡುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಸೂಚಿಸಿದ್ದಾರೆ.
ಕರ್ನಾಟಕ ಕೈಗಾರಿಕಾ ಸಂಸ್ಥೆಗಳ (ರಾಷ್ಟ್ರೀಯ ಮತ್ತು ಹಬ್ಬಗಳ ರಜೆ) ಕಾಯಿದೆ ಹಾಗೂ ನಿಯಮಗಳ ಅನ್ವಯ ರಾಷ್ಟ್ರೀಯ ಹಬ್ಬವಾದ ಸ್ವಾತಂತ್ರ್ಯ ದಿನಾಚರಣೆಯಂದು ರಜೆ ನೀಡಬೇಕು. ಆದರೆ ಕಾರ್ಮಿಕರು ರಜೆ ನಿರಾಕರಿಸಿ ಸ್ವಚ್ಚೆಯಿಂದ ಅಂದು ಕೆಲಸ ಮಾಡಲು ಬಯಸಿದರೆ ಅಂತಹ ಕಾರ್ಮಿಕರಿಗೆ ಹೆಚ್ಚುವರಿಯಾಗಿ ಒಂದು ಪಟ್ಟು ವೇತನ ನೀಡಬೇಕೆಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಸೂಚನೆ ನೀಡಿದ್ದಾರೆ.
ಆ. 15ರಂದು ಜಿಲ್ಲಾಡಳಿತದಿಂದ ಸ್ವಾತಂತ್ರ್ಯ ದಿನಾಚರಣೆ
ಚಾಮರಾಜನಗರ, ಆ. 14 ಜಿಲ್ಲಾಡಳಿತದ ವತಿಯಿಂದ 72ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಆಗಸ್ಟ್ 15ರಂದು ಬೆಳಿಗ್ಗೆ 9 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಧ್ವಜಾರೋಹಣ ನೆರವೇರಿಸಿ ಅಧ್ಯಕ್ಷತೆ ವಹಿಸುವರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವರಾದ ಎನ್. ಮಹೇಶ್ ಅವರು ಘನ ಉಪಸ್ಥಿತಿ ವಹಿಸುವರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಆರ್. ನರೇಂದ್ರ, ಸಿ.ಎಸ್. ನಿರಂಜನಕುಮಾರ್, ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ನಗರಸಭೆ ಅಧ್ಯಕ್ಷರಾದ ಶೋಭ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೀಶ್, ತಾಲೂಕು ಪಂಚಾಯತ್ ಅಧ್ಯಕ್ಷರಾದ ದೊಡ್ಡಮ್ಮ, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಸಂಜೆ 5.30 ಗಂಟೆಗೆ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದೆ. ಸಂಜೆ 5.30 ರಿಂದ 6.30ರವರೆಗೆ ಅರುಣ್ ಕುಮಾರ್ ಮತ್ತು ತಂಡದವರಿಂದ ದೇಶಭಕ್ತಿ ಗೀತೆ ಗಾಯನ, ಸಂಜೆ 6.30 ರಿಂದ 7.30ರವರೆಗೆ ಶಾಲಾ ಮಕ್ಕಳಿಂದ ಕಾರ್ಯಕ್ರಮ ನಡೆಯಲಿದೆ. 7.30 ರಿಂದ 8 ಗಂಟೆÀಯವರೆಗೆÉ ಚಾಮರಾಜನಗರದ ಅವತಾರ್ ನೃತ್ಯ ಶಾಲೆಯ ಅವತಾರ್ ಪ್ರವೀಣ್ ಮತ್ತು ತಂಡದವರಿಂದ ನೃತ್ಯ ರೂಪಕ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕಬಿನಿ, ಕೆ.ಆರ್.ಎಸ್‍ನಿಂದ ಹೆಚ್ಚು ನೀರು ಬಿಡುಗಡೆ: ಮುನ್ನೆಚ್ಚರಿಕೆ ವಹಿಸಲು ಡಿ.ಸಿ. ಮನವಿ
ಚಾಮರಾಜನಗರ, ಆ. 14 ಕಬಿನಿ ಜಲಾಶಯ ಹಾಗೂ ಕೆ.ಆರ್.ಎಸ್. ಅಣೆಕಟ್ಟೆಯಿಂದ ಹೆಚ್ಚು ನೀರನ್ನು ನದಿಗೆ ಬಿಡುತ್ತಿರುವ ಸಾಧ್ಯತೆ ಹಿನ್ನಲೆಯಲ್ಲಿ ಕೊಳ್ಳೆಗಾಲ ತಾಲೂಕಿನ ನದಿ ಪಾತ್ರದಲ್ಲಿರುವ ಜನರು ಮುನ್ನೆಚ್ಚರಿಕೆ ವಹಿಸಬೇಕು ಹಾಗೂ ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ತಿಳಿಸಿದ್ದಾರೆ.
ಕಬಿನಿ ಜಲಾಶಯದಿಂದ 40 ಸಾವಿರ ಕ್ಯೂಸೆಕ್ಸ್, ಕೆ.ಆರ್.ಎಸ್. ಅಣೆಕಟ್ಟೆಯಿಂದ 1 ಲಕ್ಷ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗುತ್ತಿದೆ ಎಂಬ ಮಾಹಿತಿ ಸೀಕರಿಸಲಾಗಿದೆ. ಮಳೆಯು ಅಧಿಕವಾಗುತ್ತಿರುವುದರಿಂದ ಕೆ.ಆರ್.ಎಸ್. ಅಣೆಕಟ್ಟೆಯಿಂದ ಇನ್ನು ಹೆಚ್ಚಿನ ನೀರನ್ನು ಬಿಡುವ ಸಾಧ್ಯತೆ ಇರುವುದಾಗಿ ಮಾಹಿತಿ ಬಂದಿದೆ. ಈ ಹಿನ್ನಲೆಯಲ್ಲಿ ಕೊಳ್ಳೇಗಾಲ ತಾಲೂಕಿನ ನದಿ ಪಾತ್ರದಲ್ಲಿರುವ ಗ್ರಾಮಗಳ ಜನರು ಮತ್ತು ದಂಡೆಗಳಲ್ಲಿ, ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಆಸ್ತಿ-ಪಾಸ್ತಿ, ಜಾನುವಾರುಗಳ ರಕ್ಷಣೆಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ನದಿಗಳಲ್ಲಿ ಬಟ್ಟೆ ಒಗೆಯುವುದು, ಸ್ನಾನ ಮಾಡುವುದು, ಜಾನುವಾರು ತೊಳೆಯುವುದು, ಈಜು ಇನ್ನಿತರ ಚಟುವಟಿಕೆಗಳನ್ನು ಮಾಡಬಾರದು. ನದಿ, ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರು ನದಿಗೆ ಇಳಿಯಬಾರದು. ಪ್ರವಾಹದಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗರೂಕತೆ ವಹಿಸಲು ಆಗಮಿಸುವ ಅಧಿಕಾರಿ, ಸಿಬ್ಬಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರಸಭೆ ಚುನಾವಣೆ : ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಸೂಚನೆ
ಚಾಮರಾಜನಗರ, ಆ. 07 :- ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆಗೆ ನಿಯೋಜಿತರಾಗಿರುವ ಅಧಿಕಾರಿಗಳು ಅತ್ಯಂತ ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಗರಸಭೆ ಚುನಾವಣೆಗೆ ನೇಮಕವಾಗಿರುವ ಚುನಾವಣಾ ಅಧಿಕಾರಿ, ಮಾದರಿ ನೀತಿಸಂಹಿತೆ ಪಾಲನೆ ತಂಡ, ಸೆಕ್ಟರ್ ಅಧಿಕಾರಿಗಳು, ಚುನಾವಣಾ ವೆಚ್ಚ ನಿರ್ವಹಣಾ ತಂಡದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಳ್ಳೇಗಾಲ ಹಾಗೂ ಚಾಮರಾಜನಗರ ನಗರಸಭಾ ಚುನಾವಣೆಗೆ ಈಗಾಗಲೇ ವೇಳಾಪಟ್ಟಿ ಪ್ರಕಟಿಸಲಾಗಿದೆ. ಆಗಸ್ಟ್ 10ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಅಂದಿನಿಂದಲೇ ನಾಮಪತ್ರಗಳ ಸಲ್ಲಿಕೆ ಪ್ರಕ್ರಿಯೆ ಅವಧಿಯೂ ಆರಂಭವಾಗಲಿದೆ. ಹೀಗಾಗಿ ಚುನಾವಣೆ ಕೆಲಸಕ್ಕೆ ನೇಮಕಗೊಂಡಿರುವ ಅಧಿಕಾರಿಗಳು ಚುನಾವಣಾ ಕೆಲಸವನ್ನು ಹಗುರವಾಗಿ ಪರಿಗಣಿಸದೆ ಜವಾಬ್ದಾರಿಯುತವಾಗಿ ಕರ್ತವ್ಯ ನಿಭಾಯಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಎರಡೂ ನಗರಸಭೆಗಳಲ್ಲಿ ತಲಾ 31 ವಾರ್ಡ್‍ಗಳು ಇವೆ. ಚಾಮರಾಜನಗರ ನಗರಸಭೆಯಲ್ಲಿ 61, ಕೊಳ್ಳೇಗಾಲ ನಗರಸಭೆಯಲ್ಲಿ 45 ಮತಗಟ್ಟೆಗಳು ಬರಲಿವೆ. ಈ ಮತಗಟ್ಟೆಗಳಲ್ಲಿ ವಿದ್ಯುತ್, ಕುಡಿಯುವ ನೀರು ಇತರೆ ಮೂಲಸೌಕರ್ಯಗಳು ಲಭ್ಯವಿದೆಯೇ ಎಂಬ ಬಗ್ಗೆ ತುರ್ತಾಗಿ ಮತ್ತೊಮ್ಮೆ ಪರಿಶೀಲಿಸಬೇಕು. ಅಗತ್ಯ ಸೌಲಭ್ಯಗಳು ಬೇಕಿದ್ದರೆ ಕಲ್ಪಿಸುವ ಕೆಲಸವನ್ನು ಶೀಘ್ರವೇ ಪೂರ್ಣಗೊಳಿಸಬೇಕು ಎಂದÀು ನಿರ್ದೇಶನ ನೀಡಿದರು.
ಮಾದರಿ ಚುನಾವಣಾ ಸಂಬಂಧ ಆಗಸ್ಟ್ 2ರಿಂದಲೇ ಸದಾಚಾರಸಂಹಿತೆ ಜಾರಿಗೆ ಬಂದಿದೆ. ಚುನಾವಣೆ ಪ್ರಕ್ರಿಯೆ ಮುಗಿಯುವ ಸೆಪ್ಟೆಂಬರ್ 1ರವರೆಗೆ ಸದಾಚಾರ ಸಂಹಿತೆ ಇರಲಿದೆ. ಈ ಅವಧಿಯಲ್ಲಿ ನೀತಿಸಂಹಿತೆ ಉಲ್ಲಂಘನೆಯಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಈಗಾಗಲೇ ಸದಾಚಾರ ಸಂಹಿತೆ ಪಾಲನೆ ಸಂಬಂಧ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕಾವೇರಿ ಅವರು ಸೂಚಿಸಿದರು.
ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ವೆಚ್ಚ ಮಾಡಲಿರುವ ಲೆಕ್ಕಪತ್ರಗಳ ಕುರಿತು ನಿಗಾ ವಹಿಸಲು ನಿಯೋಜಿತರಾಗಿರುವ ಚುನಾವಣಾ ವೆಚ್ಚ ನಿರ್ವಹಣಾ ತಂಡದ ಅಧಿಕಾರಿಗಳು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಅವಧಿ ದಿನದಿಂದಲೇ ಅಭ್ಯರ್ಥಿಗಳ ಖರ್ಚುವೆಚ್ಚವನ್ನು ಲೆಕ್ಕಕ್ಕೆ ಪರಿಗಣಿಸಬೇಕಾಗುತ್ತದೆ. ಸೆಕ್ಟರ್ ಅಧಿಕಾರಿಗಳು ಸಹ ನೇಮಕವಾಗಿದ್ದು ಆಯಾ ನಿಗದಿತ ವಾರ್ಡುಗಳಲ್ಲಿ ಚುನಾವಣಾ ಸಂಬಂಧ ವಹಿಸಬೇಕಿರುವ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದರು.
ಚುನಾವಣಾ ಅಕ್ರಮ ತಡೆಗಟ್ಟುವ ಸಲುವಾಗಿ ನಗರಸಭೆ ವ್ಯಾಪ್ತಿಯ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ತೆರೆಯಲಾಗುತ್ತಿದೆ. ಚಾಮರಾಜನಗರ ನಗರಸಭೆಗೆ ಸಂಬಂಧಿಸಿದಂತೆ 5, ಕೊಳ್ಳೇಗಾಲ ನಗರಸಭೆಗೆ ಸಂಬಂಧಿಸಿದಂತೆ 4 ಚೆಕ್ ಪೋಸ್ಟ್‍ಗಳ ಕಾರ್ಯಚಟುವಟಿಕೆಗಳಿಗೆ ಸ್ಥಳ ನಿಗದಿಮಾಡಲಾಗಿದೆ. ಆಯಾ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಚೆಕ್ ಪೋಸ್ಟ್‍ಗಳು ಕಾರ್ಯ ನಿರ್ವಹಿಸಲಿವೆ. ಇನ್ನೂ ಅಗತ್ಯಬಿದ್ದಲ್ಲಿ ಸ್ಥಾಪನೆ ಮಾಡಬಹುದಾದ ಚೆಕ್ ಪೋಸ್ಟ್‍ಗಳ ವಿವರಗಳನ್ನು ಆಯಾ ಭಾಗದ ಚುನಾವಣಾ ಅಧಿಕಾರಿಗಳು ನೀಡುವಂತೆ ಕಾವೇರಿ ಅವರು ತಿಳಿಸಿದರು.
ಮತದಾನ ಅಧಿಕಾರಿ ಸಿಬ್ಬಂದಿ ಸೇರಿದಂತೆ ಇನ್ನಿತರ ಚುನಾವಣೆ ಕೆಲಸಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡಲು ಮಾಸ್ಟರ್ ಟ್ರೈನರ್ಸ್‍ಗಳನ್ನು ನೇಮಕ ಮಾಡಲಾಗಿದೆ. ಶ್ರೀಘ್ರವೇ ತರಬೇತಿ ಆಯೋಜನೆಗೆ ಅಗತ್ಯ ಕ್ರಮ ವಹಿಸಬೇಕು. ಒಟ್ಟಾರೆ ಚುನಾವಣೆಗೆ ನಿಯೋಜಿತರಾಗಿರುವ ಎಲ್ಲ ಹಂತದ ಅಧಿಕಾರಿ ಸಿಬ್ಬಂದಿ ಯಾವುದೇ ಲೋಪವಿಲ್ಲದೆ ಚುನಾವಣಾ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಲು ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಇದೇವೇಳೆ ಪವರ್ ಪಾಯಿಂಟ್ ಮೂಲಕ ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ತರಬೇತಿ ಸಹ ನೀಡಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಚುನಾವಣಾ ಕಾರ್ಯಕ್ಕೆ ನೇಮಕವಾಗಿರುವ ತಹಸೀಲ್ದಾರರು, ನಗರಸಭೆ ಆಯುಕ್ತರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ತೆರೆ
ಎನ್‍ಎಂಎಂಎಸ್ ವಿದ್ಯಾರ್ಥಿವೇತನಕ್ಕೆ ಮಾಹಿತಿ ಅಪ್ ಲೋಡ್ ಮಾಡಲು ಸೂಚನೆ
ಚಾಮರಾಜನಗರ, ಆ. 07 - ಜಿಲ್ಲೆಯಲ್ಲಿ 2014ರಿಂದ 2017ನೇ ಸಾಲಿನವರೆಗೆ ನಡೆದ ಎನ್‍ಎಂಎಂಎಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿವೇತನಕ್ಕೆ ಅರ್ಹರಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಅಕ್ಟೋಬರ್ 31ರೊಳಗೆ ಅಪ್ ಲೋಡ್ ಮಾಡುವಂತೆ ಸೂಚಿಸಲಾಗಿದೆ.
2014, 2015, 2016 ಹಾಗೂ 2017ನೇ ಸಾಲಿನಲ್ಲಿ ಎನ್‍ಎಂಎಂಎಸ್ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಎಲ್ಲ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಪಡೆಯಲು ನವದೆಹಲಿಯ ಎಂಎಚ್‍ಆರ್‍ಡಿ ಸಿದ್ಧಪಡಿಸಿರುವ ಎನ್‍ಎಸ್‍ಪಿ - 2.0 ತಿತಿತಿ.sಛಿhoಟಚಿಡಿshiಠಿs.gov.iಟಿ ನಲ್ಲಿ ವಿದ್ಯಾರ್ಥಿಗಳ ವಿವರವನ್ನು ಅಪ್ ಲೋಡ್ ಮಾಡುವುದು ಕಡ್ಡಾಯವಾಗಿದೆ.
ನಿಗದಿತ ಕಡೆಯ ದಿನಾಂಕದ ನಂತರ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ವಿದ್ಯಾರ್ಥಿವೇತನಕ್ಕೆ ಅರ್ಹತೆ ಹೊಂದಿರುವ ವಿದ್ಯಾರ್ಥಿಗಳು ಹಾಗೂ ಶಾಲಾ ಮುಖ್ಯಶಿಕ್ಷಕರಿಂದ ಮಾಹಿತಿ ಅಪ್ ಲೋಡ್ ಮಾಡಿಸುವುದು ಆಯಾ ಬ್ಲಾಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಸಾಧಾರಣ ದೈರ್ಯ, ಸಾಹಸ ಪ್ರದರ್ಶಿಸಿದ ಬಾಲಕ ಬಾಲಕಿಯರಿಗೆ ಪ್ರಶಸ್ತಿ : ಅರ್ಜಿ ಆಹ್ವಾನ
ಚಾಮರಾಜನಗರ, ಆ. 07 ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಸಾಧಾರಣ ದÉೈರ್ಯ ಸಾಹಸ ಪ್ರದರ್ಶಿಸಿದ ಬಾಲಕ ಬಾಲಕಿಯರಿಗೆ ನೀಡುವ 2018-19ನೇ ಸಾಲಿನ ಹೊಯ್ಸಳ ಹಾಗೂ ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.
6 ರಿಂದ 18 ªರ್ಷ ಒಳಗಿನವರು ಅರ್ಜಿ ಸಲ್ಲಿಸಬಹುದು. ಆಗಸ್ಟ್ 2017ರಿಂದ ಜುಲೈ 2018ರ ನಡುವೆ ನಡೆದಿರುವ ಸಾಧನೆಯನ್ನು ಪರಿಗಣಿಸಲಾಗುವುದು. ದೈರ್ಯ ಶೌರ್ಯ ಕುರಿತ ಜಿಲ್ಲಾಮಟ್ಟದ ಸಾಧನೆ ಪ್ರದರ್ಶಿಸಿದ ಬಗ್ಗೆ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿರಬೇಕು. ಇತರೆ ಅಗತ್ಯ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ ಆಗಸ್ಟ್ 31ರೊಳಗೆ ಸಲ್ಲಿಸಬೇಕು. ವಿವರಗಳಿಗೆ ಸದರಿ ಕಚೇರಿ ಸಂಪರ್ಕಿಸುಂತೆ ಇಲಾಖೆ ಪ್ರಕಟಣೆ ತಿಳಿಸಿದೆ.
No comments:
Post a Comment