ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆಗೆ ಸಹಕರಿಸಿ : ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ
ಚಾಮರಾಜನಗರ, ಆ. 03 - ಭಾವಚಿತ್ರವಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣಾ ಪ್ರಕ್ರಿಯೆಯು ಆರಂಭವಾಗಿದ್ದು ಶೇ. 100ರಷ್ಟು ದೋಷರಹಿತ ಮತದಾರರ ಪಟ್ಟಿ ಸಿದ್ದಗೊಳಿಸುವ ಸಲುವಾಗಿ ರಾಜಕೀಯ ಪಕ್ಷಗಳು ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಬಿ. ಬಿ. ಕಾವೇರಿಯವರು ಮನವಿ ಮಾಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಭಾವಚಿತ್ರವಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಿನಾಂಕ 1.1.2019ಕ್ಕೆ ಅರ್ಹತಾ ದಿನಾಂಕ ನಿಗದಿಪಡಿಸಿ ಭಾವಚಿತ್ರವಿರುವ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯ ನಡೆಸಲು ಭಾರತ ಚುನಾವಣಾ ಆಯೋಗವು ವೇಳಾಪಟ್ಟಿ ನಿಗದಿಮಾಡಿದೆ. ಮತಗಟ್ಟೆ ಅಧಿಕಾರಿಗಳು ಆಗಸ್ಟ್ 10ರವರೆಗೂ ಮನೆಮನೆಗೆ ಭೇಟಿ ನೀಡಲಿದ್ದಾರೆ. ಆಗಸ್ಟ್ 27ರಿಂದ ಸೆಪ್ಟೆಂಬರ್ 15ರವರೆಗೆ ಮತಗಟ್ಟೆಗಳ ಪುನರ್ವಿಂಗಡಣೆ ಭೌತಿಕ ಪರಿಶೀಲನೆ ನಡೆಸಲಾಗುತ್ತದೆ. ಸೆಪ್ಟೆಂಬರ್ 17ರಿಂದ ಅಕ್ಟೋಬರ್ 10ರವರೆಗೆ ಪೂರಕಪಟ್ಟಿ ಇಂಟಿಗ್ರೇಷನ್ ಮತ್ತು ಕರಡು ಮತದಾರರ ಪಟ್ಟಿ ತಯಾರಿಸಲಾಗುತ್ತದೆ. ಅಕ್ಟೋಬರ್ 10ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅಕ್ಟೋಬರ್ 10ರಿಂದ ನವೆಂಬರ್ 20ರವರೆಗೆ ಹಕ್ಕು ಆಕ್ಷೇಪಣೆಗಳನ್ನು ಆಯಾ ತಾಲೂಕು ಮತಗಟ್ಟೆಗಳಲ್ಲಿ ಬಿಎಲ್‍ಓ ಸ್ವೀಕರಿಸಲಿದ್ದಾರೆ. ತಾಲೂಕು ಕಚೇರಿಯಲ್ಲಿಯೂ ಸಹ ಸ್ವೀಕರಿಸಲಾಗುತ್ತದೆ. ಡಿಸೆಂಬರ್ 20ರೊಳಗೆ ಹಕ್ಕು ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲಾಗುತ್ತದೆ. 2019ರ ಜನವರಿ 3ರೊಳಗೆ ಮತದಾರರ ಪಟ್ಟಿಗೆ ಹೆಸರು, ಫೋಟೋ ಸೇರ್ಪಡೆ ಮಾಡಿ ಪೂರಕಪಟ್ಟಿ ಸಿದ್ಧಪಡಿಸಲಾಗುತ್ತದೆ. ಜನವರಿ 4ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಮತದಾರರ ಪಟ್ಟಿ ಪರಿಷ್ಕರಣಾ ನಡೆಸುವ ಸಂಬಂಧ ಹಾಲಿ ಇರುವ ಮತದಾರರ ಪಟ್ಟಿಯಲ್ಲಿ ದಿನಾಂಕ 1.1.2018ಕ್ಕೆ 18 ವರ್ಷ ತುಂಬಿದ ಅರ್ಹ ಮತದಾರರ ಹೆಸರು ಕೈಬಿಟ್ಟುಹೋಗಿದ್ದಲ್ಲಿ ಅಂತಹ ಮತದಾರರ ಹೆಸರುಗಳನ್ನು ಸೇರ್ಪಡೆಗೊಳಿಸಲಾಗುತ್ತದೆ. ದಿನಾಂಕ 1.1.2019ಕ್ಕೆ 18 ವರ್ಷ ತುಂಬುವ ಮತದಾರರ ಹೆಸರನ್ನು ಪಟ್ಟಿಗೆ ಸೇರಿಸಲಾಗುತ್ತದೆ ಎಂದರು. ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯಲ್ಲಿರುವ ಹೆಸರುಗಳ ವಿವರವನ್ನು ಓದಿ ತಿಳಿಸಲಿದ್ದಾರೆ. ಈ ಸಮಯದಲ್ಲಿ ಕಾಗುಣಿತ ದೋಷ, ವಯಸ್ಸು, ಲಿಂಗ, ಇತರೆ ಲೋಪದೋಷಗಳನ್ನು ಸರಿಪಡಿಸಲಿದ್ದಾರೆ. ಹೀಗಾಗಿ ಮತಗಟ್ಟೆಮಟ್ಟದ ಅಧಿಕಾರಿಗಳಿಗೆ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಕಾವೇರಿ ಕೋರಿದರು.
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಬಿಡತಕ್ಕಂತದ್ದು, ತಿದ್ದುಪಡಿ, ಸ್ಥಳಾಂತರ ಸಂಬಂಧ ರಾಜಕಿಯ ಪಕ್ಷಗಳ ಮತಗಟ್ಟೆ ಮಟ್ಟದ ಏಜೆಂಟರು ಹೆಚ್ಚಿನ ಅರ್ಜಿಗಳನ್ನು ನೀಡಬಹುದಾಗಿದೆ. ಆದರೆ ಈ ತರಹದ ಅರ್ಜಿಗಳ ಸಂಖ್ಯೆ ಒಂದೇ ದಿನ ಮತ್ತು ಒಂದೇ ಸಮಯದಲ್ಲಿ 10 ಅರ್ಜಿಗಳನ್ನು ಮೀರುವಂತಿಲ್ಲ. ಪರಿಷ್ಕರಣಾ ಅವಧಿಯಲ್ಲಿ 30 ಅರ್ಜಿಗಳಿಗಿಂತ ಹೆಚ್ಚು ಸಲ್ಲಿಸಿದ್ದಲ್ಲಿ ಅಂತಹ ಅರ್ಜಿಗಳನ್ನು ಮತದಾರರ ನೋಂದಣಾಧಿಕಾರಿ ಅಥವ ಸಹಾಯಕ ಮತದಾರರ ನೋಂದಣಾಧಿಕಾರಿಗಳಿಂದ ಮರುಪರಿಶೀಲನೆ ನಡೆಸಲಾಗುತ್ತದೆ ಎಂದರು.
ವಿಕಲಚೇತನರಿಂದಲೂ ನಮೂನೆ 6ರಲ್ಲಿ ಅರ್ಜಿ ಸ್ವೀಕರಿಸಲಾಗುತ್ತದೆ. ಹೆಸರು ದಾಖಲಿಸಿ ಅಂಗವಿಕಲತೆ ಪ್ರಮಾಣದ ಕುರಿತು ಮಾಹಿತಿ ಪಡೆಯಲಾಗುತ್ತದೆ. ಇದರಿಂದ ಮತಗಟ್ಟೆಯಲ್ಲಿ ಅಗತ್ಯ ಸೌಲಭ್ಯ ಒದಗಿಸಲು ಅನುಕೂಲವಾಗಲಿದೆ. ಒಟ್ಟಾರೆ ಮತದಾರರ ಪಟ್ಟಿ ಪರಿಷ್ಕರಣೆಯಂತಹ ಮಹತ್ತರ ಕಾರ್ಯಕ್ಕೆ ರಾಜಕೀಯ ಪಕ್ಷಗಳು ಸಂಪೂರ್ಣವಾಗಿ ಸಹಕಾರ ನೀಡಿ ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸಲು ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಕಾವೇರಿಯವರು ತಿಳಿಸಿದರು.
ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಸೈಯದ್ ರಫಿ, ಸಿ.ಎಂ. ಕೃಷ್ಣಮೂರ್ತಿ, ಆಲೂರು ಮಲ್ಲು, ಕೆ.ಆರ್. ನಾರಾಯಣ್, ಬಸವರಾಜು ಹಂಡ್ರಕಳ್ಳಿ, ಚಂದ್ರಶೇಖರ ರಾವ್, ಪಿ. ರಂಗಸ್ವಾಮಿ, ಇತರರು ಸಭೆಯಲ್ಲಿ ಹಾಜರಿದ್ದರು.
ಸ್ವಚ್ಚ ಸರ್ವೇಕ್ಷಣ್ ಮಾಹಿತಿಗೆ ಸಹಕರಿಸಿ : ಜಿಪಂ ಸಿಇಓ ಡಾ. ಕೆ. ಹರೀಶ್ ಕುಮಾರ್
ಚಾಮರಾಜನಗರ, ಆ. 03 - ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ಬಳಕೆ ಮಾಡುವವರ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ವಿದ್ಯಾರ್ಥಿಗಳಿಂದ ಕೈಗೊಳ್ಳಲು ಶಿಕ್ಷಕರು ಆದ್ಯ ಗಮನ ನೀಡುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ತಿಳಿಸಿದರು.ನಗರದ ಜೆ ಎಚ್ ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಚ ಸರ್ವೇಕ್ಷಣ್ ಗ್ರಾಮೀಣ್ ಕಾರ್ಯಕ್ರಮದ ಅಂಗವಾಗಿ ಶೌಚಾಲಯಗಳ ಬಳಕೆ ಕುರಿತು ಶಾಲಾಶಿಕ್ಷಕರಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಶೌಚಾಲಯಗಳನ್ನು ಈಗಾಗಲೇ ಹೆಚ್ಚು ಸಂಖ್ಯೆಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ಶೌಚಾಲಯಗಳನ್ನು ಪೋಷಕರು ಬಳಕೆ ಮಾಡುತ್ತಿದ್ದಾರÉಯೇ ಎಂಬ ಬಗ್ಗೆ ವಿದ್ಯಾರ್ಥಿಗಳಿಂದ ತಿಳಿಯಬಹುದು. ಇದರಿಂದ ಸರಿಯಾದ ಮಾಹಿತಿ ಪಡೆಯಬಹುದು. ಹೀಗಾಗಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕೆಂದು ಹರೀಶ್ ಕುಮಾರ್ ತಿಳಿಸಿದರು.
ಮನೆಗಳಲ್ಲಿ ಮಾತ್ರವಲ್ಲ, ಶಾಲೆ, ಅಂಗನವಾಡಿಗಳಲ್ಲಿಯೂ ಸಹ ಶೌಚಾಲಯ ಬಳಕೆ ಎಷ್ಟರಮಟ್ಟಿಗೆ ಆಗುತ್ತಿದೆ ಎಂಬ ಕುರಿತು ಸಹ ಮಾಹಿತಿ ಪಡೆಯಬೇಕಿದೆ. ಇದಕ್ಕಾಗಿಯೂ ವಿದ್ಯಾರ್ಥಿಗಳ ಸಹಕಾರ ಪಡೆದುಕೊಳ್ಳಬೇಕು. ಬಳಕೆ ಮಾಡದೇ ಇರುವ ಕುಟುಂಬಗಳಿಗೆ ವಿದ್ಯಾರ್ಥಿಗಳಿಂದಲೇ ಬಳಕೆಯಿಂದಾಗುವ ಪ್ರಯೋಜನ ಕುರಿತು ತಿಳಿವಳಿಕೆ ನೀಡಬೇಕೆಂದು ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಗಳ ನಿರ್ಮಾಣ, ಬಳಕೆ ಕುರಿತು ಸ್ವಚ್ಚ ಸರ್ವೇಕ್ಷಣ್ ತಂಡವು ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದೆ. ಇದಕ್ಕೆ ಪೂರಕವಾಗಿ ಜಿಲ್ಲೆಯ ಕರಾರುವಕ್ಕಾದ ಮಾಹಿತಿ ಸಂಗ್ರಹಣೆಯನ್ನು ಪೂರ್ವಭಾವಿಯಾಗಿ ಪಡೆಯಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಈ ಸ್ವಚ್ಚ ಸರ್ವೇಕ್ಷಣ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಬೇಕಿದೆ ಎಂದು ಹರೀಶ್ ಕುಮಾರ್ ತಿಳಿಸಿದರು.
ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ನಾರಾಯಣಸ್ವಾಮಿ ಮಾತನಾಡಿ ಬಯಲು ಬಹಿರ್ದೆಸೆಯಿಂದ ನಾನಾ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಅರಿವು ಮೂಡಿಸಿದರೆ ಅವರು ಪೋಷಕರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಾಗಲಿದೆ. ಹೀಗಾಗಿ ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡುವ ಕಾರ್ಯವನ್ನು ಹೆಚ್ಚು ಮಾಡಬೇಕಿದೆ ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಶ್ರೀನಿವಾಸ್, ಸ್ವಚ್ಚ ಭಾರತ್ ಮಿಷನ್ ಕಾರ್ಯಕ್ರಮ ಅಧಿಕಾರಿಗಳಾದ ಮಹದೇವ್, ಜೋಸೆಫ್ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕ್ರೀಡಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಆ. 03 - ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು ಕ್ರೀಡಾ ವಿದ್ಯಾರ್ಥಿ ವೇತನಕ್ಕೆ ಪ್ರತಿಭಾವಂತ ಮಾಧ್ಯಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ರಾಜ್ಯ ಕ್ರೀಡಾ ಪ್ರಾಧಿಕಾರದಲ್ಲಿ ನೋಂದಾಯಿತ ಕ್ರೀಡಾಸಂಸ್ಥೆಗಳು ದಿನಾಂಕ 1.1.2017ರ ನಂತರ ನಡೆಸಿದ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮಸ್ಥಾನ ಪಡೆದಿರಬೇಕು ಅಥವಾ ರಾಷ್ಟ್ರೀಯಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿರಬೇಕು. ದಿನಾಂಕ 1.1.2017ರಿಂದ 31.12.2017ರ ಸಾಧನೆಯನ್ನು ಪರಿಗಣಿಸಲಾಗುವುದು.
ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಡೆಸಿದ ರಾಜ್ಯಮಟ್ಟದ ಗ್ರಾಮೀಣ ಕ್ರೀಡಾಕೂಟ ಮಹಿಳಾ ಕ್ರೀಡಾಕೂಟದಲ್ಲಿ ಪ್ರಥಮಸ್ಥಾನ ಪಡೆದಿದ್ದಲ್ಲಿ ಅಥವಾ ರಾಷ್ಟ್ರೀಯ ಗ್ರಾಮೀಣ ಅಥವಾ ಮಹಿಳಾ ಕ್ರೀಡಾಕೂಟದಲ್ಲಿ ರಾಜ್ಯತಂಡವನ್ನು ಪ್ರತಿನಿಧಿಸಿದ್ದವರು ಅರ್ಜಿ ಸಲ್ಲಿಸಬಹುದು. ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಯೋಜನೆಯಡಿ ನಡೆಸಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದಿದ್ದಲ್ಲಿ ಅಥವಾ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದವರು ಸಹ ಅರ್ಜಿ ಸಲ್ಲಿಸಲು ಅರ್ಹರು. ವಾರ್ಷಿಕ 10 ಸಾವಿರ ರೂ.ಗಳನ್ನು ವಿದ್ಯಾರ್ಥಿವೇತನವಾಗಿ ನೀಡಲಾಗುತ್ತದೆ.
ಅರ್ಜಿಗಳನ್ನು ನಗರದ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿ ಆಗಸ್ಟ್ 25ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ.ಸಂ. 08226-224932 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ವಿದ್ಯಾರ್ಥಿನಿಯರ ವಸತಿನಿಲಯ ಪ್ರವೇಶ ಸೌಲಭ್ಯ
ಚಾಮರಾಜನಗರ, ಆ. 03 (ಕರ್ನಾಟಕ ವಾರ್ತೆ):- ಕೊಳ್ಳೇಗಾಲ ಪಟ್ಟಣದಲ್ಲಿ ಆರ್‍ಎಂಎಸ್‍ಎ ವತಿಯಿಂದ ಪ್ರಾರಂಭಿಸಲಾಗಿರುವ ವಿದ್ಯಾರ್ಥಿನಿಯರ ವಸತಿನಿಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
9, 10ನೇ ತರಗತಿ ಹಾಗೂ ಪಿಯುಸಿ ವಿದ್ಯಾರ್ಥಿನಿಯರಿಗೆ ವಸತಿನಿಲಯದ ಸೌಲಭ್ಯ ಲಭಿಸಲಿದೆ. ಉಚಿತ ಊಟ, ವಸತಿ, ಇತರೆ ಮೂಲಸೌಕರ್ಯ ಕಲ್ಪಿಸಲಾಗುತ್ತದೆ. ಆಸಕ್ತ ವಿದ್ಯಾರ್ಥಿನಿಯರು ಕೊಳ್ಳೇಗಾಲ ಪಟ್ಟಣದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಅಥವಾ ನಗರದ ಜಿಲ್ಲಾಡಳಿತ ಭವನದಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಯೋಜನಾ ಕಚೇರಿ (ಕೊಠಡಿ ಸಂಖ್ಯೆ 205) ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು. ಅಲ್ಲದೆ ದೂ.ಸಂಖ್ಯೆ 08224-252241 ಹಾಗೂ 08226-224429ಗೆ ಕರೆ ಮಾಡಿಯೂ ಮಾಹಿತಿ ಪಡೆಯಬಹುದು ಎಂದು ಸಮಗ್ರ ಶಿಕ್ಷಣ ಅಭಿಯಾನದ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹನಿ ನೀರಾವರಿ ನಿರ್ವಹಣೆ ತರಬೇತಿ ಕಾರ್ಯಾಗಾರ ಮುಂದೂಡಿಕೆ
ಚಾಮರಾಜನಗರ, ಆ. 03 :- ತೋಟಗಾರಿಕೆ ಇಲಾಖೆ ವತಿಯಿಂದ ಆಗಸ್ಟ್ 6ರಂದು ನಗರದಲ್ಲಿ ನಿಗದಿಯಾಗಿದ್ದ ಹನಿ ನೀರಾವರಿ ಪದ್ಧತಿ ಅಳವಡಿಕೆ ಹಾಗೂ ನಿರ್ವಹಣೆ ಕುರಿತ ಕಾರ್ಯಾಗಾರವನ್ನು ನಗರ ಸ್ಥಳೀಯ ಸಂಸ್ಥೆ ಸಾರ್ವತ್ರಿಕ ಚುನಾವಣೆ ನೀತಿಸಂಹಿತೆ ಜಾರಿ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
x
No comments:
Post a Comment