ನದಿ ಪಾತ್ರದ ಗ್ರಾಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ, ಪರಿಶೀಲನೆ
ಚಾಮರಾಜನಗರ, ಆ. 16 - ಕೊಳ್ಳೇಗಾಲ ತಾಲೂಕಿನ ಕಾವೇರಿ ನದಿ ಪ್ರವಾಹ ಪೀಡಿತ ವಿವಿಧ ಗ್ರಾಮಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಇಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಕಾವೇರಿ ನದಿ ತುಂಬಿ ಹರಿಯುತ್ತಿರುವ ಹಿನ್ನಲೆಯಲ್ಲಿ ಉಂಟಾಗಿರುವ ಪ್ರವಾಹ ಸ್ಥಿತಿಗೆ ಸಿಲುಕಿರುವ ಕೊಳ್ಳೇಗಾಲ ತಾಲೂಕಿನ ನದಿ ಪಾತ್ರದ ಗ್ರಾಮಗಳಿಗೆ ಬೆಳಿಗ್ಗೆಯಿಂದಲೇ ವ್ಯಾಪಕವಾಗಿ ಭೇಟಿ ಕೊಟ್ಟು ಅಲ್ಲಿ ಉಂಟಾಗಿರುವ ಬೆಳೆ ಹಾನಿ, ಜಲಾವೃತ ಮನೆಗಳು ಇನ್ನಿತರ ಪರಿಸ್ಥಿತಿಯನ್ನು ಸಚಿವರು ಖುದ್ದು ವೀಕ್ಷಿಸಿದರು.
ಮೊದಲಿಗೆ ದಾಸನಪುರ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು ಜಲಾವೃತಗೊಂಡಿರುವ ಬೆಳೆ, ರಸ್ತೆಯಲ್ಲಿ ಹರಿದಾಡುತ್ತಿರುವ ನೀರು ಇತರೆ ತೊಂದರೆಗಳನ್ನು ಪರಿಶೀಲಿಸಿದರು. ಜನರೊಂದಿಗೆ ಮಾತನಾಡಿ ಸಾಂತ್ವನ ಹೇಳಿದರು. ಬೆಳೆ ನಷ್ಟವನ್ನು ಅಧಿಕಾರಿಗಳು ಅಂದಾಜು ಮಾಡಲಿದ್ದಾರೆ. ಪ್ರವಾಹ ಪರಿಸ್ಥಿತಿಯಿಂದ ಆಗಿರುವ ನಷ್ಟವನ್ನು ಲೆಕ್ಕ ಹಾಕಲಾಗುತ್ತದೆ. ಅಗತ್ಯ ಪರಿಹಾರವನ್ನು ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಬಳಿಕ ಹಳೇ ಹಂಪಾಪುರ ಗ್ರಾಮಕ್ಕೆ ಬೇಟಿ ಕೊಟ್ಟರು. ಅಲ್ಲಿಯೂ ಜಲಾವೃತಗೊಂಡಿರುವ ಜಮೀನು, ಕೊಟ್ಟಿಗೆ ಸೇರಿದಂತೆ ಇತರೆ ಸ್ಥಳಗಳನ್ನು ವೀಕ್ಷಿಸಿದರು. ಗ್ರಾಮದಂಚಿನ ನಿವಾಸಿಗಳು ನೀರು ತುಂಬಿ ಆಗಿರುವ ಅನಾಹುತಗಳ ಬಗ್ಗೆ ಅಳಲು ತೋಡಿಕೊಂಡರು. ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದರೆ ಮತ್ತಷ್ಟು ಮುಳುಗಡೆಯಾಗುವ ಸಾಧ್ಯತೆ ಉಂಟಾಗಬಹುದೆಂಬ ಅತಂಕ ವ್ಯಕ್ತಪಡಿಸಿದರು.ಇದೇ ವೇಳೆ ಸ್ಥಳದಲ್ಲಿಯೆ ಇದ್ದ ಅಧಿಕಾರಿಗಳಿಗೆ ಮುಂದೆ ಹೆಚ್ಚಿನ ನೀರು ಆವೃತವಾದರೆ ಉಂಟಾಗಬಹುದಾದ ಪರಿಸ್ಥಿತಿ, ಪರಿಹಾರಕ್ಕೆ ಎಲ್ಲ ಅಗತ್ಯ ಸಿದ್ದತೆಗಳನ್ನು ಕಲ್ಪಿಸಲು ಸಜ್ಜಾಗಿರುವಂತೆ ಸಚಿವರು ನಿರ್ದೇಶನ ನೀಡಿದರು.
ಗ್ರಾಮದಲ್ಲಿ ಇರುವ ಶಾಲೆಯಲ್ಲಿ ಗಂಜೀ ಕೇಂದ್ರ ತೆರೆಯಲು ಆದೇಶಿಸಿದರು. ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಸಹ ಸ್ಪಂದಿಸಿ ಅಧಿಕಾರಿಗಳಿಗೆ ಗಂಜೀಕೇಂದ್ರ ಆರಂಭಕ್ಕೆ ಅಗತ್ಯ ಸಿದ್ದತೆ ಕೈಗೊಳ್ಳುವಂತೆ ಸೂಚಿಸಿದರು.
ಬಳಿಕ ಮುಳ್ಳೂರು ಗ್ರಾಮಕ್ಕೆ ತೆರಳಿದ ಸಚಿವರು ಅಲ್ಲಿಯೂ ಗ್ರಾಮದ ಕೊನೆಯ ಭಾಗದಲ್ಲಿ ನೀರು ತುಂಬಿಕೊಂಡು ಉಂಟಾಗಿರುವ ತೊಂದರೆ ಪರಿಸ್ಥಿತಿಯನ್ನು ವೀಕ್ಷಿಸಿದರು. ಅಲ್ಲಿಯೂ ಸಹ ಊರಿನ ಗ್ರಾಮಸ್ಥರು ಪರಿಹಾರ ಇನ್ನಿತರ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಮನವಿ ಮಾಡಿದರು.
ತದನಂತರ ಹಳೇ ಆಣಗಳ್ಳಿ, ಹರಳೆ ಗ್ರಾಮಗಳಿಗೂ ಸಚಿವರು ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಹೆಚ್ಚಿನ ನೀರು ಬಂದು ಮತ್ತಷ್ಟು ಪರಿಸ್ಥಿತಿ ಬಿಗಡಾಯಿಸುವ ಹಂತಕ್ಕೆ ಹೋಗದಂತೆ ಎಲ್ಲಿ ಜನರನ್ನು ಸ್ಥಳಾಂತರ ಮಾಡುವ ಅವಶ್ಯಕತೆ ಇದೆಯೋ ಅಂತಹ ಕೆಲಸವನ್ನು ಆದ್ಯತೆ ಮೇರೆಗೆ ಮಾಡಬೇಕು. ಕೊಳ್ಳೇಗಾಲ ಪಟ್ಟಣದಲ್ಲಿ ಪ್ರವಾಹ ಸಂತ್ರಸ್ಥರಿಗೆ ವಾಸ್ತವ್ಯ, ಊಟ, ಉಪಾಹಾರ ಸೇರಿದಂತೆ ಎಲ್ಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಉಸ್ತುವಾರಿ ಸಚಿವರು ಸೂಚಿಸಿದರು.
ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಸಹ ಗ್ರಾಮಗಳ ಜನರೊಂದಿಗೆ ಮಾತನಾಡಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಿದ್ದೇವೆ. ಎಲ್ಲಾ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಲಿದ್ದೇವೆ ಎಂದು ಧೈರ್ಯ ತುಂಬಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಉಪವಿಭಾಗಾಧಿಕಾರಿ ಫೌಜಿಯಾ ತರನ್ನುಂ, ತಹಶೀಲ್ದಾರ್ ಚಂದ್ರಮೌಳಿ, ಪ್ರವಾಹ ಪರಿಸ್ಥಿತಿ ಗ್ರಾಮಗಳ ಉಸ್ತುವಾರಿಗಾಗಿ ನೇಮಕವಾಗಿರುವ ನೋಡೆಲ್ ಅಧಿಕಾರಗಳಾದ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಲ್. ಗಂಗಾಧರ್, ರೇಷ್ಮೇ ಇಲಾಖೆ ಸಹಾಯಕ ನಿರ್ದೇಶಕರಾದ ರಾಚಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗೇಶ್, ಎನ್.ಆರ್.ಇ.ಜಿ ಸಹಾಯಕ ನಿರ್ದೇಶಕ ಲಿಂಗರಾಜು, ನಗರಸಭೆ ಆಯುಕ್ತರಾದ ಸುರೇಶ್ ಇತರೆ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.
ಕಬಿನಿ, ಕೆ.ಆರ್.ಎಸ್‍ನಿಂದ ಮತ್ತಷ್ಟು ನೀರು ಬಿಡುಗಡೆ: ಮುಂಜಾಗರೂಕತೆ ವಹಿಸಲು ಜಿಲ್ಲಾಧಿಕಾರಿ ಮನವಿ
ಚಾಮರಾಜನಗರ, ಆ. 16 – ಕಬಿನಿ ಜಲಾಶಯ ಹಾಗೂ ಕೆ.ಆರ್.ಎಸ್. ಅಣೆಕಟ್ಟೆಯಿಂದ ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಡುತ್ತಿರುವ ಸಾಧ್ಯತೆ ಹಿನ್ನಲೆಯಲ್ಲಿ ಕೊಳ್ಳೆಗಾಲ ತಾಲೂಕಿನ ನದಿ ಪಾತ್ರದಲ್ಲಿರುವ ಗ್ರಾಮಗಳ ಜನರು ಮುಂಜಾಗರೂಕತೆ ವಹಿಸಬೇಕು ಮತ್ತು ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಇಂದು ತಿಳಿಸಿದ್ದಾರೆ.ಕಬಿನಿ ಜಲಾಶಯದಿಂದ 75 ಸಾವಿರ ಕ್ಯೂಸೆಕ್ಸ್, ಕೆ.ಆರ್.ಎಸ್. ಅಣೆಕಟ್ಟೆಯಿಂದ 1 ಲಕ್ಷದ 25 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗುತ್ತಿದೆ ಎಂಬ ಮಾಹಿತಿ ಸೀಕರಿಸಲಾಗಿದೆ. ಮಳೆಯು ಸಹ ಹೆಚ್ಚಾಗುತ್ತಿರುವುದರಿಂದ ಕೆ.ಆರ್.ಎಸ್. ಅಣೆಕಟ್ಟೆಯಿಂದ ಮತ್ತಷ್ಟು ಹೆಚ್ಚಿನ ನೀರನ್ನು ಬಿಡುವ ಸಾಧ್ಯತೆ ಇರುವುದಾಗಿ ಮಾಹಿತಿ ತಿಳಿದು ಬಂದಿದೆ. ಈಗಾಗಲೇ ನದಿಗೆ ಬಿಡುಗಡೆಗೊಳಿಸಿರುವ ನೀರಿನಿಂದ ದಾಸನಪುರ, ಮುಳ್ಳುರು, ಹಳೇ ಹಂಪಾಪುರ, ಹಳೇ ಅಣಗಳ್ಳಿ ಗ್ರಾಮಗಳು ನೀರಿನಿಂದ ಅವೃತವಾಗಿದ್ದು, ಗಂಜೀಕೇಂದ್ರ ತೆರೆಯಲು ಕ್ರಮ ವಹಿಸಲಾಗುತ್ತಿದೆ.
ಪ್ರಸ್ತುತ ನದಿಗೆ ಜಲಾಶಯಗಳಿಂದ ಹೆಚ್ಚಿನ ನೀರನ್ನು ಹೊರಬಿಡುತ್ತಿರುವುದರಿಂದ ಕೊಳ್ಳೇಗಾಲ ತಾಲೂಕಿನ ನದಿ ಪಾತ್ರದಲ್ಲಿರುವ ಗ್ರಾಮಗಳ ಜನರು ಮತ್ತು ನದಿದಂಡೆಗಳಲ್ಲಿ, ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಆಸ್ತಿ-ಪಾಸ್ತಿ, ಜಾನುವಾರುಗಳ ರಕ್ಷಣೆಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ನದಿಗಳಲ್ಲಿ ಬಟ್ಟೆ ಒಗೆಯುವುದು, ಸ್ನಾನ ಮಾಡುವುದು, ಜಾನುವಾರು ತೊಳೆಯುವುದು, ಈಜು ಇನ್ನಿತರ ಚಟುವಟಿಕೆಗಳನ್ನು ಮಾಡಬಾರದು. ನದಿ, ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರು ನದಿಗೆ ಇಳಿಯಬಾರದು. ಪ್ರವಾಹದಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗರೂಕತೆ ವಹಿಸಲು ನಿಯೋಜಿತರಾಗಿರುವ ಆಗಮಿಸುವ ಅಧಿಕಾರಿ, ಸಿಬ್ಬಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆ ಮುಂದೂಡಿಕೆ
ಚಾಮರಾಜನಗರ, ಆ. 16 – ಸಿವಿಲ್ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಆಗಸ್ಟ್ 19ರಂದು ನಿಗದಿ ಮಾಡಲಾಗಿದ್ದ ಲಿಖಿತ ಪರೀಕ್ಷೆಯನ್ನು ಮುಂದೂಡಲಾಗಿದೆ.ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಪ್ರವಾಹದ ಕಾರಣದಿಂದ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಲು ಅನಾನುಕೂಲ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ನಡೆಸಲು ತೀರ್ಮಾನಿಸಲಾಗಿದ್ದ ಲಿಖಿತ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ಪ್ರಕಟ: ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
ಚಾಮರಾಜನಗರ, ಆ. 16 – 2018-19ನೇ ಸಾಲಿನ ಪರಿಷ್ಕರಿಸಿರುವ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ಬೆಲೆಯನ್ನು ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದಾಗಿದೆ.ಜಿಲ್ಲೆಯ ಎಲ್ಲಾ ಉಪ ನೋಂದಣಿ ಕಚೇರಿಯಲ್ಲಿ ಮಾರ್ಗಸೂಚಿ ಬೆಲೆ ಕುರಿತು ಪ್ರಕಟಿಸಲಾಗಿದೆ. ಆಕ್ಷೇಪಣೆಗಳಿದ್ದಲ್ಲಿ ಸಂಬಮಧಪಟ್ಟ ಉಪ ನೊಂದಣಾ ಕಚೇರಿಗೆ 15 ದಿನದೊಳಗಾಗಿ ಸಲ್ಲಿಸುವಂತೆ ಜಿಲ್ಲಾ ನೊಂದಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಶುಭಾಗ್ಯ ಯೋಜನೆ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಆ. 16– ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯು ಪ್ರಸಕ್ತ ಸಾಲಿನ ಪಶುಭಾಗ್ಯ ಯೋಜನೆಯಡಿ ಮಹಿಳೆಯರಿಗಾಗಿ (ಅಮೃತ ಯೋಜನೆ) ಕರು ಸಾಕಾಣಿಕೆ, ಹೈನುಗಾರಿಕೆ, ಕುರಿ, ಮೇಕೆ ಸಾಕಾಣಿಕೆ ಘಟಕಗಳ ಯೋಜನೆಗೆ ನೀಡುವ ನೆರವಿಗೆ ಅರ್ಜಿ ಆಹ್ವಾನಿಸಿದೆ.
ಬಡತನ ರೇಖೆಗಿಂತ ಕೆಳಗಿರುವ ಭೂರಹಿತ ಕೃಷಿ ಕಾರ್ಮಿಕ ಮಹಿಳೆಯರು, ಅಲ್ಪಸಂಖ್ಯಾತರು, ವಿಕಲಚೇತನರು, ವಿಧವೆಯರು, ದೇವದಾಸಿಯರು, ಸಂಕಷ್ಟಕ್ಕೊಳಗಾದ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ.
ಅರ್ಜಿಯನ್ನು ಆಯಾ ತಾಲೂಕಿನ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರಿಂದ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸೆಪ್ಟೆಂಬರ್ 10ರೊಳಗರ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಪಶು ಆಸ್ಪತ್ರೆ ಕಚೇರಿಗೆಖುದ್ದಾಗಿ ಅಥವಾ ಚಾಮರಾಜನಗರ ದೂರವಾಣಿ ಸಂಖ್ಯೆ: 08226-222757, ಗುಂಡ್ಲುಪೇಟೆ 08229-222346, ಕೊಳ್ಳೇಗಾಲ 08224-252215, ಯಳಂದೂರು 08226-240128 ಸಂಪರ್ಕಿಸುವಂತೆ ಇಲಾಖೆಯ ಉಪನಿರ್ದೇಶಕರಾದ ಡಾ. ಎಂ.ಸಿ. ಪದ್ಮನಾಭ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರಸಭೆ ಚುನಾವಣೆ: 39 ನಾಮಪತ್ರ ಸಲ್ಲಿಕೆ
ಚಾಮರಾಜನಗರ, ಆ. 16- ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆಗೆ ಇಂದು ಒಟ್ಟು 39 ನಾಮಪತ್ರ ಸಲ್ಲಿಕೆಯಾಗಿದೆ.ಚಾಮರಾಜನಗರ ನಗರಸಭೆ ಚುನಾವಣೆಗೆ 24 ಹಾಗೂ ಕೊಳ್ಳೇಗಾಲ ನಗರಸಭೆಗೆ ಚುನಾವಣೆಗೆ 15 ನಾಮಪತ್ರಗಳು ಇಂದು ಸಲ್ಲಿಕೆಯಾಗಿವೆ ಎಂದು ಪ್ರಕಟಣೆ ತಿಳಿಸಿದೆ.
No comments:
Post a Comment