ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ವೇಳಾ ಪಟ್ಟಿ ಪ್ರಕಟ : ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ
ಚಾಮರಾಜನಗರ, ಜು. 28 - ಭಾರತ ಚುನಾವಣಾ ಆಯೋಗವು ದಿನಾಂಕ 01.01.2019ಕ್ಕೆ ಅರ್ಹತಾ ದಿನಾಂಕ ನಿಗದಿಪಡಿಸಿ ಭಾವಚಿತ್ರವಿರುವ ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ನಡೆಸಲು ಆದೇಸಿಶಿ ವೇಳಾಪಟ್ಟಿ ಪ್ರಕಟಿಸಿದೆಜುಲೈ16ರಿಂದ ಆಗಸ್ಟ್ 10ರವರೆಗೆ ಮತಗಟ್ಟೆ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಲಿದ್ದಾರೆ, ಆಗಸ್ಟ್ 27ರಿಂದ ಸೆಪ್ಟಂಬರ್ 15ರವರೆಗೆ ಮತಗಟ್ಟೆಗಳ ಪುನರ್‍ವಿಂಗಡಣೆ, ಮತಗಟ್ಟೆಗಳ ಭೌತಿಕ ಪರಿಶೀಲನೆ ನಡೆಸಲಾಗುತ್ತದೆ. ಸೆಪ್ಟಂಬರ್ 17ರಿಂದ ಅಕ್ಟೋಬರ್ 10ರವರೆಗೆ ಪೂರಕ ಪಟ್ಟಿ ತಯಾರಿಕೆ. ಇಂಟಿಗ್ರೇಶನ್ ಮತ್ತು ಕರಡು ಮತದಾರರ ಪಟ್ಟಿ ತಯಾರಿಕೆ ಪ್ರಕ್ರಿಯೆ ನಡೆಯಲಿದೆ. ಅಕ್ಟೋಬರ್ 10ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಅಕ್ಟೋಬರ್ 10ರಿಂದ ನವಂಬರ್ 20ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಆಯಾ ತಾಲ್ಲೂಕಿನ ಮತಗಟ್ಟೆಗಳಲ್ಲಿ ಬಿ.ಎಲ್.ಓ ಮೂಲಕ ಹಾಗೂ ಆಯಾ ತಾಲ್ಲೂಕು ಕಚೇರಿಯಲ್ಲಿ ಸ್ವೀಕರಿಸಲಾಗುತ್ತದೆ. ಡಿಸೆಂಬರ್ 20ರಂದು ಹಕ್ಕು ಮತ್ತು ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲಾಗುತ್ತದೆ. 2019ರ ಜನವರಿ 3ರೊಳಗೆ ಮತದಾರರ ಪಟ್ಟಿಗೆ ಹೆಸರು, ಫೋಟೋ ಸೇರ್ಪಡೆ, ಪೂರಕ ಪಟ್ಟಿಗಳನ್ನು ಸಿದ್ದಪಡಿಸಲಾಗುತ್ತದೆ. ಜನವರಿ 4ರಂದು ಅಂತಿಮ ಮತದಾರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳಿಗೆ ನೇಮಕ ಮಾಡಲಾಗಿರುವ ಮತಗಟ್ಟೆ ಮಟ್ಟದ ಅಧಿಕಾರಿಗಳು ಆಗಸ್ಟ್ 10ರವರೆಗೆ ಮನೆಮನೆಗೆ ಭೇಟಿನೀಡಿ ಹಾಲಿ ಇರುವ ಮತದಾರರ ಪಟ್ಟಿಯಲ್ಲಿ ಸಂಬಂಧಿಸಿದ ಕುಟುಂಬದ ಎಲ್ಲಾ ಸದಸ್ಯರ ಹೆಸರು ಇರುವ ಬಗ್ಗೆ ಖಚಿತಪಡಿಸಿಕೊಳ್ಳಲು ಮನೆಯ ಮುಖ್ಯಸ್ಥರೊಡನೆ ಪರಿಶೀಲಿಸುವರು.
ಪರಿಶೀಲನಾ ಸಮಯದಲ್ಲಿ ದಿನಾಂಕ 01.01.2018ಕ್ಕೆ 18 ವರ್ಷ ತುಂಬಿರುವ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದಿರುವ ಹಾಗೂ ದಿನಾಂಕ 01.01.2019ಕ್ಕೆ 18 ವರ್ಷ ತುಂಬುವ ಮತದಾರರ ಹೆಸರನ್ನು ಸೇರ್ಪಡೆಗೊಳಿಸಲು ನಮೂನೆ-6ರಲ್ಲಿ ಅರ್ಜಿಸಲ್ಲಿಸಬೇಕಿದೆ. ಮೃತ ಮತದಾರರ ಹಾಗೂ ಪುನಾರಾವರ್ತನೆಗೊಂಡಿರುವ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಡಲು ನಮೂನೆ-7ರಲ್ಲಿ, ಮತದಾರರ ಪಟ್ಟಿಯಲ್ಲಿರುವ ಹೆಸರುನ್ನು ತಿದ್ದುಪಡಿಮಾಡಲು ನಮೂನೆ-8ರಲ್ಲಿ ಅರ್ಜಿಸಲ್ಲಿಸಬೇಕು. ಒಂದು ವಿಧಾನಸಭಾ ಕ್ಷೇತ್ರದ ಮತಗಟ್ಟೆಯಿಂದ ಮತ್ತೊಂದು ವಿಧಾನಸಭಾ ಕ್ಷೇತ್ರದ ಮತಗಟ್ಟೆಗೆ ವರ್ಗಾವಣೆ ಮಾಡಬೇಕಾದಲ್ಲಿ ನಮೂನೆ-8ಎ ರಲ್ಲಿ ಹಾಗೂ ಅನಿವಾಸಿಭಾರತೀಯರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಮೂನೆ-6ಎರಲ್ಲಿ ಅರ್ಜಿ ಸಲ್ಲಿಸಬೇಕು.
ಮತಗಟ್ಟೆ ಮತದ ಅಧಿಕಾರಿಗಳು ಮನೆಮನೆಗೆ ತೆರಳಿ ಪರಿಶೀಲನೆ ನಡೆಸುವ ಸಮಯದಲ್ಲಿ ನಾಗರಿಕರು ಅಗತ್ಯ ಮಾಹಿತಿ ನೀಡಬೇಕು. ಭಾರತ ಚುನಾವಣಾ ಆಯೋಗದ ಮಹತ್ತರವಾದ ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಂಡು ಶೇ100ರಷ್ಟು ದೋಷರಹಿತ ಮತದಾರರ ಪಟ್ಟಿ ತಯಾರಿಕೆಗೆ ನಾಗರಿಕರು ಹೆಚ್ಚಿನ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು ಮನವಿ ಮಾಡಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಹೆಚ್ಚಿನ ವಿವರಗಳಿಗಾಗಿ ಮತದಾರರ ನೊಂದಣಾಧಿಕಾರಿ ಹಾಗೂ ಕೊಳ್ಳೇಗಾಲ ಉಪವಿಭಾಗ ಅಧಿಕಾರಿ ಮತ್ತು ಆಯಾ ತಾಲ್ಲೂಕಿನ ತಹಶೀಲ್ದಾರ್, ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಚೇರಿ ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾದಕ ವ್ಯಸನಗಳ ವಿರುದ್ಧ ಜಾಗೃತಿ ಅಗತ್ಯ: ಜಿಲ್ಲಾ ನ್ಯಾಯಾಧೀಶರ ಸಲಹೆ
ಚಾಮರಾಜನಗರ, ಜು. 28:- ಆಧುನಿಕ ಸಮಾಜದಲ್ಲಿ ವಿದ್ಯಾವಂತ ಯುವ ಜನರೆ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುತ್ತಿದ್ದು ಇದರ ಪರಿಹಾರಕ್ಕೆ ಜಾಗೃತಿ ಮೂಡಿಸಬೇಕಾದ ಅವಶ್ಯಕತೆಯಿದೆ ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾದೀಶರಾದ ಜಿ. ಬಸವರಾಜ ಅವರು ತಿಳಿಸಿದರು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಇತರೆ ಇಲಾಖೆಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾದಕ ಔಷದ ವಿಪತ್ತು ನಿರ್ಮೂಲನೆ ಕುರಿತ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿದಾಗ 16ರಿಂದ 22ರ ವಯೋಮಿತಿಯ ಯುವ ಜನರು ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವನೆ ಚಟಕ್ಕೆ ಒಳಗಾಗಿರುವುದು ಆತಂಕಕಾರಿ ವಿಷಯವಾಗಿದೆ. ಅದರಲ್ಲೂ ಅಕ್ಷರಸ್ಥರೆ ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವಸ್ತುಗಳ ಬಳಕೆಗೆ ಮುಂದಾಗಿರುವುದು ಕಂಡುಬಂದಿದೆ. ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾದ ಯುವ ಜನರು ಅಪಾಯಕಾರಿ ವ್ಯಸನಕ್ಕೆ ಮೊರೆಹೋಗಿರುವುದಕ್ಕೆ ವ್ಯಾಪಕವಾಗಿ ಅರಿವು ಮೂಡಿಸಿ ಸರಿದಾರಿಯಲ್ಲಿ ತರಬೇಕಿದೆ ಎಂದರು.
18ವರ್ಷ ಒಳಪಟ್ಟವರಿಗೆ ಧೂಮಪಾನ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ. ಇದಕ್ಕಾಗಿ ಕಾಯಿದೆ ಸಹ ತರಲಾಗಿದೆ. ಮಧ್ಯ, ಮಾದಕ ವಸ್ತುಗಳ ಮೋಹಕ್ಕೆ ಬಲಿಯಾಗಿ ಜೀವನ ಹಾಳುಮಾಡಿಕೊಳ್ಳುವ ಯುವ ಜನರನ್ನು ಎಚ್ಚರಿಸಿ ಮುಖ್ಯವಾಹಿನಿಗೆ ತರುವ ಕೆಲಸವನ್ನು ಆದ್ಯತೆ ಮೇಲೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹ ಜಾಗೃತಿ ಮೂಡಿಸಲು ಕಾರ್ಯಗಾರಗಳನ್ನು ಆಯೋಜನೆ ಮಾಡುತ್ತಿದೆ ಎಂದು ಜಿಲ್ಲಾ ನ್ಯಾಯಾದೀಶರು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರÀ ಸದಸ್ಯ ಕಾರ್ಯದರ್ಶಿಯವರಾದ ಸಿ.ಜಿ. ವಿಶಾಲಾಕ್ಷಿ ಮಾತನಾಡಿ ಯುವಶಕ್ತಿ ದೇಶದ ಅಮೂಲ್ಯ ಆಸ್ತಿ. ಇಂತಹ ಯುವ ಜನರನ್ನು ಮಾದಕ ಔಷದ, ವಸ್ತುಗಳನ್ನು ನೀಡಿ ದಾರಿ ತಪ್ಪಿಸುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಎಚ್ಚರವಹಿಸಬೇಕಿದೆ. ಉತ್ತಮ ಸಮಾಜ ನಿರ್ಮಾಣಮಾಡಲು ಯುವ ಜನರಿಗೆ ಮಾರ್ಗದರ್ಶನಮಾಡಬೇಕಿದೆ ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ ಮಾತನಾಡಿ ಬದಲಾದ ಆಧುನಿಕ ಜೀವನ ಶೈಲಿಯು ಮಾದಕ ವಸ್ತುಗಳ ಬಗ್ಗೆ ಯುವಜನರನ್ನು ಆಕರ್ಷಿಸುತ್ತಿದೆ. ನಗರ ಪ್ರದೇಶಗಳಲ್ಲಿ ಪೋಷಕರ ಪ್ರೀತಿ ವಾತ್ಸಲ್ಯದಿಂದ ವಂಚಿತರಾದವರು, ಸಹಪಾಠಿಗಳ ಪ್ರಭಾವಕ್ಕೆ ಒಳಗಾಗುವರು ಕೆಟ್ಟ ಹವ್ಯಾಸಗಳನ್ನು ರೂಢಿಸಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ವ್ಯಾಸಂಗಕ್ಕೆ ಮಾತ್ರ ಮಹತ್ವ ನೀಡಬೇಕು. ಇದರಿಂದ ಭವಿಷ್ಯದಲ್ಲಿ ಉತ್ತಮ ಅವಕಾಶಗಳು ದೊರೆತು ನೆಮ್ಮದಿಯ ಬದುಕು ಸಾಗಿಸಬಹುದೆಂದು ಸಲಹೆ ಮಾಡಿದರು.
ಜಂಟಿ ಕೃಷಿ ನಿರ್ದೇಶಕರಾದ ಎಂ. ತಿರುಮಲೇಶ್ ಮಾತನಾಡಿ ವಿದ್ಯಾರ್ಥಿಗಳು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಚಿಂತನ ಲಹರಿಯನ್ನು ಉತ್ತಮ ವಿಷಯಗಳಿಗೆ ಕೇಂದ್ರೀಕರಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆಯಿಂದ ಓದಿನೆಡೆಗೆ ತೊಡಗಿಕೊಳ್ಳಬೇಕು. ಅನಗತ್ಯ ವಿಚಾರಗಳನ್ನು ದೂರಮಾಡಿದರೆ ಜೀವನ ಸುಂದರವಾಗಲಿದೆ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಇಂದುಶೇಖರ್ ಮಾತನಾಡಿ ಯುವ ಜನರು ಮಾದಕ ವಸ್ತುಗಳ ಸೇವನೆಯನ್ನು ಹೆಚ್ಚು ಮಾಡಿರುವ ವಿಷಯವನ್ನು ಇತ್ತೀಚಿನ ವರದಿಗಳು ದೃಢಪಡಿಸಿವೆ. ಪಟ್ಟಣ ನಗರ ಕೇಂದ್ರಿತ ಪ್ರದೇಶಗಳಲ್ಲೇ ಮಾದಕ ವಸ್ತುಗಳಿಗೆ ವಿದ್ಯಾರ್ಥಿಗಳು ಮೋಹಿತರಾಗಿರುವುದು ವಿಷಾದ ಸಂಗತಿ. ವಿದ್ಯಾರ್ಥಿಗಳನ್ನು ಜಾಗೃತಗೊಳಿಸುವ ಕೆಲಸಕ್ಕೆ ಎಲ್ಲರೂ ಕೈ ಜೋಡಿಸಬೇಕಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕೆ.ಎಚ್.ಪ್ರಸಾದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಎ. ರಮೇಶ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿ ಜಯಶೀಲ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್. ಅರುಣ್‍ಕುಮಾರ್, ಬಾಲ ನ್ಯಾಯಮಂಡಳಿ ಸದಸ್ಯರಾದ ಟಿ.ಜೆ ಸುರೇಶ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವೈದ್ಯಕೀಯ ಕಾಲೇಜಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಭೇಟಿ : ಮೂಲಸೌಕರ್ಯ ಪರಿಶೀಲನೆ
ಚಾಮರಾಜನಗರ, ಜು. 28 - ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರು ನಗರದ ಹೊರವಲಯದಲ್ಲಿರುವ ಚಾಮರಾಜನಗರ ವೈದ್ಯಕೀಯ ಕಾಲೇಜಿಗೆ ಇಂದು ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಮೊದಲಿಗೆ ಕಾಲೇಜು ಕಟ್ಟಡಕ್ಕೆ ಭೇಟಿ ನೀಡಿದ ಸಚಿವರು ಭೋದಕ ವರ್ಗದಿಂದ ಕಾಲೇಜು ವಿಷಯಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದರು. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.
ಬಳಿಕ ಪುರುಷವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಸಚಿವರು ವಿದ್ಯಾರ್ಥಿಗಳ ಕೊಠಡಿಗಳನ್ನು ಖುದ್ದು ವೀಕ್ಷಿಸಿದರು. ಕೊಠಡಿಗಳಲ್ಲಿ ಸರಿಯಾದ ವ್ಯವಸ್ಥೆ ಇದೆಯೇ? ಊಟ ಉಪಹಾರದ ಗುಣಮಟ್ಟ ಚೆನ್ನಾಗಿದೆಯೇ? ಉತ್ತಮ ಸಾಮಾಗ್ರಿಗಳನ್ನು ಬಳಕೆಮಾಡಲಾಗುತ್ತಿದೆಯೇ? ಎಂದು ಪ್ರಶ್ನಿಸಿದರು.
ಅಡುಗೆ ತಯಾರಿಸುವ ಕೋಣೆ, ಅಡುಗೆ ಸಾಮಾಗ್ರಿಗಳನ್ನು ದಾಸ್ತಾನು ಮಾಡಿರುವ ಕೊಠಡಿ, ಊಟದ ಹಾಲ್‍ಗಳನ್ನು ಸಚಿವರು ಪರಿಶೀಲಿಸಿದರು, ಕುಡಿಯುವ ನೀರು ಪೂರೈಸಲು ಅಳವಡಿಸಿರುವ ವ್ಯವಸ್ಥೆಯನ್ನು ವೀಕ್ಷಿಸಿ ಶುದ್ಧ ಸರಬರಾಜಿಗೆ ಕ್ರಮ ಹೇಗೆ ವಹಿಸಲಾಗಿದೆ ಎಂಬ ಬಗ್ಗೆ ಮಾಹಿತಿ ಪಡೆದರು, ವಿದ್ಯಾರ್ಥಿಗಳಿಗೆ ಸಿದ್ಧಪಡಿಸಲಾಗುತ್ತಿದ್ದ ಆಹಾರವನ್ನು ಸಹ ವೀಕ್ಷಿಸಿದರು.
ವಿದ್ಯಾರ್ಥಿನಿಯರ ಹಾಸ್ಟಲ್‍ಗೂ ಭೇಟಿಕೊಟ್ಟ ಸಚಿವರು ಊಟ ಶುಚಿತ್ವ, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯಗಳು ಸರಿಯಾಗಿ ಇದೆಯೇ? ಎಂದು ಕೇಳಿ ತಿಳಿದುಕೊಂಡರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಪದೇಪದೇ ವಿದ್ಯುತ್ ಸಂಪರ್ಕ ಕಡಿತವಾಗುತ್ತದೆ. ಜನರೇಟರ್ ವ್ಯವಸ್ಥೆ ಸಮರ್ಪಕವಾಗಿ ಒದಗಿಸಬೇಕು. ವಾರಾಂತ್ಯ ರಜೆಯಲ್ಲಿ ಪಟ್ಟಣಕ್ಕೆ ಹೋಗಿಬರಲು ಬಸ್ ವ್ಯವಸ್ಥೆ ಮಾಡಬೇಕು ಎಂದು ಕೋರಿದರು.
ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ಜನರೇಟರ್ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಬೇಕು, ಕಾಲೇಜು ಆವರಣದ ಬಳಿ ಘನತ್ಯಾಜ್ಯ ಸುರಿಯುವುದನ್ನು ನಾಳೆಯಿಂದಲೇ ನಿಲ್ಲಿಸಬೇಕು ಎಂದು ಸಚಿವರು ಸೂಚಿಸಿದರು. ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ ವಾರದಲ್ಲಿ ರಜೆ ದಿನಗಳಂದು ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಕಲ್ಪಿಸುವಂತೆ ನಿರ್ದೇಶನ ನೀಡಿದರು.
ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು ಹಾಸ್ಟೆಲ್‍ನಲ್ಲಿ ಕೆಲ ವ್ಯವಸ್ಥೆಗಳು ಸರಿಯಿಲ್ಲವೆಂಬ ಕೆಲ ಮಾಹಿತಿ ಹಿನ್ನಲೆಯಲ್ಲಿ ಭೇಟಿ ನೀಡಲಾಗಿದೆ. ಆದರೆ ವಿದ್ಯಾರ್ಥಿಗಳು ಊಟ ಉಪಹಾರ ವ್ಯವ¸ ಬಗ್ಗೆ ಯಾವುದೇ ದೂರು ನೀಡಿಲ್ಲ. ಬಸ್, ವಿದ್ಯುತ್, ಸಮಸ್ಯೆಗಳನ್ನು ಮುಂದಿಟ್ಟಿದ್ದಾರೆ. ಈ ಎಲ್ಲಾ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು
ಕಾಲೇಜು ಆವರಣ ಕಾಂಪೌಂಡ್‍ಗೆ 4.25ಕೋಟಿರೂ. ರಸ್ತೆ ನಿರ್ಮಾಣಕ್ಕೆ 5.75ಕೋಟಿರೂ. ಅನುದಾನ ನಿಗದಿಯಾಗಿದ್ದು ಕಾಮಗಾರಿ ನಿರ್ವಹಿಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಆದಷ್ಟು ಶೀಘ್ರವೇ ಕಾಮಗಾರಿ ಆರಂಭವಾಗಲಿದ್ದು ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದರು.
ನಗರಸಭೆ ಉಪಾಧ್ಯಕ್ಷರಾದ ಆರ್.ಎಂ.ರಾಜಪ್ಪ, ಸದಸ್ಯರಾದ ಚೆಂಗುಮಣಿ, ವೈದ್ಯಕೀಯ ಕಾಲೇಜು ಡೀನ್ ಡಾ. ಡಿ.ಹೆಚ್.ರಾಜೇಂದ್ರ, ಜಿಲ್ಲಾ ಸರ್ಜನ್ ಡಾ. ರಘುರಾಮ್, ಡಾ. ಮಹೇಶ್ ಇತರೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
No comments:
Post a Comment