Wednesday, 30 November 2022

30-11-2022 ಚಾಮರಾಜನಗರ ಸುದ್ದಿ


 ನಿರ್ಗಮಿತ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಆತ್ಮೀಯ ಬೀಳ್ಕೊಡುಗೆ, ನೂತನ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರಿಗೆ ಸ್ವಾಗತ ಸಮಾರಂಭ 


      ಚಾಮರಾಜನಗರ, ನವೆಂಬರ್ 30  ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡಿರುವ ನಿರ್ಗಮಿತ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಆತ್ಮೀಯ ಬೀಳ್ಕೊಡುಗೆ ಹಾಗೂ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿ.ಎಸ್. ರಮೇಶ್ ಅವರಿಗೆ ಸ್ವಾಗತ ಸಮಾರಂಭ ಇಂದು ನಡೆಯಿತು.


ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನವದೆಹಲಿಯ ಕರ್ನಾಟಕ ಭವನದಲ್ಲಿ ಸಹಾಯಕ ರೆಸಿಡೆಂಟ್ ಕಮಿಷನರ್ ಆಗಿ ವರ್ಗಾವಣೆಯಾಗಿರುವ ಚಾರುಲತಾ ಸೋಮಲ್ ಹಾಗೂ ನೂತನ ಜಿಲ್ಲಾಧಿಕಾರಿಯಾಗಿರುವ ಡಿ.ಎಸ್. ರಮೇಶ್ ಅವರನ್ನು ಅಧಿಕಾರಿಗಳು, ಸಿಬ್ಬಂದಿ, ಸಂಘ ಸಂಸ್ಥೆಗಳ, ರೈತ ಸಂಘದ ಮುಖಂಡರು, ಕಲಾವಿದರು, ಸೇರಿದಂತೆ ಹಲವಾರು ಸಂಘಟನೆಗಳ ಪ್ರತಿನಿಧಿಗಳು ಗೌರವಿಸಿದರು. 


ಎಲ್ಲರ ಸನ್ಮಾನ ಗೌರವ ಸ್ವೀಕರಿಸಿ ಮಾತನಾಡಿದ ಚಾರುಲತಾ ಸೋಮಲ್ ಅವರು ಚಾಮರಾಜನಗರ ಜಿಲ್ಲೆಯಲ್ಲಿ 11 ತಿಂಗಳ ಅವಧಿಯಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು ನನಗೆ ದೊರೆತ ಅದೃಷ್ಟ ಅವಕಾಶವೆಂದೆ ಭಾವಿಸಿದ್ದೇನೆ. ನನ್ನ ಇಲ್ಲಿಯ ಸೇವಾ ಅವಧಿಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು, ಸಿಬ್ಬಂದಿ, ಸಂಘ ಸಂಸ್ಥೆಗಳ ಮುಖಂಡರು, ರೈತರ ಸಂಘಟನೆಯ ಪ್ರತಿನಿಧಿಗಳು ಸೇರಿದಂತೆ ಎಲ್ಲರಿಂದಲೂ ಸಹಕಾರ ಸಿಕ್ಕಿದೆ. ನನಗೆ ತೋರಿದ ಪ್ರೀತಿ ಬೆಂಬಲಕ್ಕೆ ಚಿರಋಣಿಯಾಗಿದ್ದೇನೆ ಎಂದರು. 


ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಮಾತನಾಡಿ ಚಾರುಲತಾ ಸೋಮಲ್ ಅವರ ಬಗ್ಗೆ ಅಪಾರವಾದ ಪ್ರೀತಿ ಸಹಕಾರ ವ್ಯಕ್ತವಾಗಿರುವುದನ್ನು ನೋಡಿದ್ದೇನೆ. ಜಿಲ್ಲೆಯ ಸಾರ್ವಜನಿಕರ ಹಿತದೃಷ್ಟಿ ಹಾಗೂ ಅಭಿವೃದ್ದಿಗೆ ತಾವೂ ಸಹ ಬದ್ದರಾಗಿದ್ದು ಎಲ್ಲರ ಸಹಕಾರ ಬೆಂಬಲ ಮುಂದುವರೆಯಲಿ ಎಂದರು.  


ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಮಾತನಾಡಿ ಚಾರುಲತಾ ಸೋಮಲ್ ಅವರು ಅಧಿಕಾರಾವಧಿಯಲ್ಲಿ ಜಿಲ್ಲಾ ಪಂಚಾಯತ್ ಅಭಿವೃದ್ದಿ ಕಾರ್ಯಗಳಿಗೆ ಸಹಕಾರ ನೀಡಿದ್ದಾರೆ. ಇದರಿಂದ ಹಲವು ಪ್ರಗತಿಪರ ಕೆಲಸಗಳು ಸಾಧ್ಯವಾಗಿವೆ. ಪ್ರಸ್ತುತ ಜಿಲ್ಲಾಧಿಕಾರಿಯಾಗಿರುವ ಡಿ.ಎಸ್. ರಮೇಶ್ ಅವರು ಸಹ ದಾವಣಗೆರೆ ಜಿಲ್ಲಾಧಿಕಾರಿಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರ ಅವಧಿಯಲ್ಲಿಯೂ ಜಿಲ್ಲೆಯ ಅಭಿವೃದ್ದಿಗೆ ಸಹಕಾರ ಮುಂದುವರೆಯಲಿದೆ ಎಂದರು. 


ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಮಾತನಾಡಿ ಚಾರುಲತಾ ಸೋಮಲ್ ಅವರು ಆಡಳಿತ ವಿಷಯದಲ್ಲಿ ಸ್ಪಷ್ಟ  ನಿರ್ಧಾರವನ್ನು ಕೈಗೊಳ್ಳುತ್ತಿದ್ದರು. ನೂತನ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರಿಗೂ ಸಹ ಆಡಳಿತ ವಿಚಾರದಲ್ಲಿ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದೇವೆ ಎಂದರು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್ ಅವರು ಮಾತನಾಡಿ ಪೊಲೀಸ್ ಇಲಾಖೆಗೆ ಚಾರುಲತಾ ಸೋಮಲ್ ಅವರು ಸಾಕಷ್ಟು ಬೆಂಬಲ ನೀಡಿದ್ದಾರೆ. ಜನಪರವಾಗಿ ಕೆಲಸ ಮಾಡಿದ್ದಾರೆ. ಈಗಿನ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಸಹ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ. ಎಲ್ಲರಿಗೂ ಅಭಿನಂದನೆಗಳು ಎಂದರು. 


  ರೈತ ಮುಖಂಡರಾದ ಭಾಗ್ಯರಾಜ್ ಮಾತನಾಡಿ ಚಾರುಲತಾ ಸೋಮಲ್ ಅವರು ಭ್ರಷ್ಟಾಚಾರ ರಹಿತ ಪ್ರಾಮಾಣಿಕವಾಗಿ ಆಡಳಿತ ನಡೆಸಿದ್ದಾರೆ. ರೈತರ ಸಮಸ್ಯೆಗಳಿಗೆ ಗಮನಹರಿಸಿದ್ದರು. ಈಗಿನ ಜಿಲ್ಲಾಧಿಕಾರಿಯವರು ಸಹ ರೈತರಿಗೆ ಸ್ಪಂದಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 


ಕಂದಾಯ ಇಲಾಖೆ ನೌಕರರ ಸಂಘದ ಉಲ್ಲಾಸ್ ಅವರು ಮಾತನಾಡಿ ಕಂದಾಯ ಇಲಾಖೆ ದಿನ ಆಚರಣೆಯಂದು ಚಾರುಲತಾ ಸೋಮಲ್ ಅವರು ಸ್ವತಹ ರಕ್ತದಾನ ಮಾಡುವ ಮೂಲಕ ಅರ್ಥಪೂರ್ಣ ಕಾರ್ಯಕ್ರಮ ನಡೆಸಿಕೊಟ್ಟರು. ಮಾತೃ ಹೃದಯಿಯಾಗಿದ್ದ ಅವರ ಸೇವಾ ಅವಧಿ ಸ್ಮರಣೀಯವಾಗಿದೆ. ಪ್ರಸ್ತುತ ಜಿಲ್ಲಾಧಿಕಾರಿಯವರ ಮಾರ್ಗದರ್ಶನದಲ್ಲಿ ನಾವೆಲ್ಲಾ ಕರ್ತವ್ಯ ನಿರ್ವಹಿಸುತ್ತೇವೆ ಎಂದರು. 


ಜಿಲ್ಲೆಯ ರೈತ ಮುಖಂಡರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ವಿಶೇಷ ಚೇತನರು, ಪೌರಕಾರ್ಮಿಕ ಸಂಘಟನೆಯ ಪ್ರತಿನಿಧಿಗಳು, ಜಿಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು, ಹಿರಿಯ ಅರಣ್ಯ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿ, ಕಲಾವಿದರು, ಸಾರ್ವಜನಿಕರು ಭಾಗವಹಿಸಿದ್ದರು. 


 



No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು