Thursday, 10 November 2022

10-11-2022 ಚಾಮರಾಜನಗರ ಸುದ್ದಿ




 

ಪರಿಶಿಷ್ಟರ ಯೋಜನೆಗಳಡಿ ತ್ವರಿತವಾಗಿ ಗುರಿ ಸಾಧಿಸಿ : ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಸೂಚನೆ


         ಚಾಮರಾಜನಗರ, ನವೆಂಬರ್ 10 :- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪಯೋಜನೆಯಡಿ ವಿವಿಧ ಇಲಾಖೆಗಳು ಫಲಾನುಭವಿಗಳನ್ನು ತ್ವರಿತವಾಗಿ ಆಯ್ಕೆ ಮಾಡಿ ನಿಗದಿತ ಗುರಿ ಸಾಧಿಸುವಂತೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 


     ನಗರದ ಜಿಲ್ಲಾಧಿಕಾರಿ ಕಚೇರಿ ಸಬಾಂಗಣದಲ್ಲಿಂದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಯಡಿ ಅಕ್ಟೋಬರ್ ಮಾಹೆಯ ಅಂತ್ಯದವರೆಗಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


     ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪಯೋಜನೆಯಡಿ ಸೌಲಭ್ಯಗಳನ್ನು ಒದಗಿಸಲು ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಶೀಘ್ರವೆ ಪೂರ್ಣಗೊಳಿಸಿ ಪಟ್ಟಿ ಮಾಡಬೇಕು. ಅರ್ಜಿಗಳನ್ನು ಆಹ್ವಾನಿಸಿದ್ದಲ್ಲಿ ನಿಗದಿತ ಅವಧಿಯೊಳಗೆ ಪ್ರಕ್ರಿಯೆ ಕೈಗೊಂಡು ಪಟ್ಟಿ ಸಿದ್ದಪಡಿಸಬೇಕು. ಫಲಾನುಭವಿಗಳಿಗೆ ಆದಷ್ಟು ಶೀಘ್ರವೇ ಸೌಲಭ್ಯಗಳು ತಲುಪುವಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿಯವರು ತಿಳಿಸಿದರು. 


     ಪ್ರತೀ ಇಲಾಖೆಗೆ ಪರಿಶಿಷ್ಟರ ಕಾರ್ಯಕ್ರಮಗಳಿಗಾಗಿ ಪ್ರತ್ಯೇಕವಾಗಿ ಹಣ ನಿಗದಿಯಾಗುತ್ತದೆ. ಫಲಾನುಭವಿಗಳ ಗುರಿ ಸಹ ನಿರ್ಧಾರವಾಗಿರುತ್ತದೆ. ಆದರೂ ಸಹ ವಿಳಂಬವಾಗಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಸುವುದು ಸರಿಯಲ್ಲ. ಆದಷ್ಟು ಮುಂಚಿತವಾಗಿಯೇ ಗುರಿಗೆ ಅನುಸಾರ ಫಲಾನುಭವಿಗಳ ಪಟ್ಟಿ ಸಿದ್ದಪಡಿಸಿಕೊಳ್ಳಬೇಕು. ಈ ಕಾರ್ಯದಲ್ಲಿ ವಿಳಂಬ ಮಾಡಬಾರದು ಎಂದು ಜಿಲ್ಲಾಧಿಕಾರಿ ರಮೇಶ್ ಅವರು ಸೂಚಿಸಿದರು. 


     ಕೆಲವು ಇಲಾಖೆಗಳು ನಿರೀಕ್ಷೆಗೆ ಹಾಗೂ ಗುರಿಗೆ ಅನುಗುಣವಾಗಿ ಪ್ರಗತಿ ಸಾಧಿಸುತ್ತಿವೆ. ಇನ್ನೂ ಕೆಲವು ಇಲಾಖೆಗಳು ಕೆಲ ನಿರ್ದಿಷ್ಟ ಯೋಜನೆಗಳನ್ನು ಅನುಷ್ಠಾನ ಮಾಡಬೇಕಿದೆ. ಹೀಗಾಗಿ ಬಾಕಿ ಇರುವ ನಿಯಮಾನುಸಾರ ಪ್ರಕ್ರಿಯೆಗಳನ್ನು ಕೈಗೊಂಡು ಅನುದಾನ ಪರಿಶಿಷ್ಟರ ಕಲ್ಯಾಣಕ್ಕೆ ಸದುಪಯೋಗವಾಗುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ಮುಂದಿನ ಸಭೆಯ ವೇಳೆಗೆ ಹೆಚ್ಚಿನ ಪ್ರಗತಿ ಗುರಿಮುಟ್ಟಬೇಕೆಂದು ತಿಳಿಸಿದರು.


     ಸೂಚಿತ ಅವಧಿಯೊಳಗೆ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ತಾಲೂಕು ಹಂತದ ಅಧಿಕಾರಿಗಳು ಕಾರ್ಯ ಕ್ಷೇತ್ರದಲ್ಲಿ ತೊಡಗಿಕೊಳ್ಳಲು ಸೂಚಿಸಬೇಕು. ವಿಶೇಷ ಸಭೆಗಳನ್ನು ನಡೆಸಿ ನಿರ್ದಿಷ್ಟ ಪಡಿಸಿರುವ ಗುರಿಗೆ ಅನುಗುಣವಾಗಿ ಆದಷ್ಟು ಮೊದಲೇ ಸಾಧನೆ ಮಾಡುವಂತೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ನಿರ್ದೇಶನ ನೀಡಿದರು. 


     ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಗುಡೂರು ಭೀಮಸೇನ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಲ್ಲಿಕಾರ್ಜುನ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಮಂಜುನಾಥ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್ ಪ್ರಸನ್ನ, ಜಿಲ್ಲಾ ಕಾರ್ಮಿಕ ಅಧಿಕಾರಿ ಮಹದೇವಸ್ವಾಮಿ,  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಅನಿತಾ, ಜಂಟಿ ಕೃಷಿ ನಿರ್ದೇಶಕರಾದ ಮಧುಸೂದನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಗೀತಾಲಕ್ಷ್ಮಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಪಿ. ಸುಧಾ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಇಬ್ರಾಹಿಂ, ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.  

    

 ನವೆಂಬರ್ 11ರಂದು ನಗರದಲ್ಲಿ ದಾಸಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮ 


      ಚಾಮರಾಜನಗರ, ನವೆಂಬರ್ 10 :- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ದಾಸಶ್ರೇಷ್ಠ ಶ್ರೀ ಕನಕದಾಸ ಜಯಂತೋತ್ಸವ ಸಮಿತಿ ಮತ್ತು ಜಿಲ್ಲೆಯ ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ನವೆಂಬರ್ 11ರಂದು ನಗರದಲ್ಲಿ ಆಯೋಜಿಸಲಾಗಿದೆ. 


     ನವೆಂಬರ್ 11ರಂದು ಬೆಳಿಗ್ಗೆ 9.30 ಗಂಟೆಗೆ ನಗರದ ಪ್ರವಾಸಿಮಂದಿರದಲ್ಲಿ ವಿವಿಧ ಕಲಾತಂಡಗಳೊಡನೆ ನಡೆಯಲಿರುವ ಕನಕದಾಸರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. 


     ಮೈಸೂರು ಜಿಲ್ಲೆಯ ಕೆ.ಆರ್. ನಗರದ ಕಾಗಿನೆಲೆ ಕನಕ ಗುರುಪೀಠದ ಶ್ರೀ ಶಿವಾನಂದಪುರಿ ಸ್ವಾಮಿಯವರು ದಿವ್ಯ ಸಾನಿಧ್ಯ ವಹಿಸುವರು. ವಸತಿ, ಮೂಲ ಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು.


     ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್, ಶಾಸಕರಾದ ಆರ್. ನರೇಂದ್ರ, ಎನ್. ಮಹೇಶ್, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ಶಾಸಕರಾದ ಸಿ.ಎಸ್. ನಿರಂಜನಕುಮಾರ್, ಮರಿತಿಬ್ಬೇಗೌಡ, ಡಾ. ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಮಧು ಜಿ. ಮಾದೇಗೌಡ, ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಜಿ. ನಿಜಗುಣರಾಜು, ನಗರಸಭೆ ಅಧ್ಯಕ್ಷರಾದ ಸಿ.ಎಂ. ಆಶಾ, ಉಪಾಧ್ಯಕ್ಷರಾದ ಪಿ. ಸುಧಾ, ಸದಸ್ಯರಾದ ಮಮತ ಬಾಲಸುಬ್ರಮಣ್ಯಂ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. 


     ನಿವೃತ್ತ ಶಿಕ್ಷಕರಾದ ಶಿವಣ್ಣ ಇಂದ್ವಾಡಿ ಅವರು ಮುಖ್ಯ ಭಾಷಣ ಮಾಡುವರು. ಆರ್. ಮಹೇಂದ್ರ ಮತ್ತು ತಂಡದವರು ದಾಸರ ಪದಗಳನ್ನು ಹಾಡುವರು ಎಂದು ಪ್ರಕಟಣೆ ತಿಳಿಸಿದೆ.

 ನ. 11ರಂದು ನಗರದಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಾಗಾರ 


      ಚಾಮರಾಜನಗರ, ನವೆಂಬರ್ 10 - ಜಿಲ್ಲಾ ಪಂಚಾಯತ್ ವತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಒಂದು ದಿನದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಾಗಾರವನ್ನು ನವೆಂಬರ್ 11ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾ ಪಂಚಾಯತ್‍ನ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. 


     ಮೈಸೂರಿನ ಕನ್ನಡಪ್ರಭ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರು ಹಾಗೂ ಹಿರಿಯ ಪತ್ರಕರ್ತರು, ಲೇಖಕರಾದ ಅಂಶಿ ಪ್ರಸನ್ನಕುಮಾರ್ ಅವರು ಕಾರ್ಯಾಗಾರ ಉದ್ಘಾಟಿಸುವರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಅಧ್ಯಕ್ಷತೆ ವಹಿಸುವರು. 


      ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಭೂಗೋಳಶಾಸ್ತ್ರ ವಿಭಾಗÀದ ಸಹ ಪ್ರಾಧ್ಯಾಪಕರಾದ ಡಾ. ಪಿ.ಎನ್. ಹೇಮಚಂದ್ರ ಅವರು ಉದ್ಯೋಗ ಮಾರ್ಗದರ್ಶನ ಮತ್ತು ಸ್ಪಾರ್ಧತ್ಮಕ ಪರೀಕ್ಷೆಗಳ ಒಂದು ಪರಿಚಯ ಕುರಿತು, ಮೈಸೂರಿನ ಸಿದ್ದಾರ್ಥ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲೀಷ್ ವಿಭಾಗದ ಸಹ ಪ್ರಾಧ್ಯಾಪಕರಾದ ಕೆ.ಎ. ಪ್ರಸನ್ನಕುಮಾರ್ ಅವರು ವ್ಯಕ್ತಿತ್ವ ವಿಕಸನ ಮತ್ತು ಜೀವನ ಕೌಶಲಗಳು ಕುರಿತು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಅನಿತಾ ಅವರು ಕ್ರೀಡಾ ಕ್ಷೇತ್ರ ಕುರಿತು ವಿಷಯ ಮಂಡಿಸುವರು ಎಂದು ಪ್ರಕಟಣೆ ತಿಳಿಸಿದೆ. 


ಜಾತ್ರೆ, ಸಂತೆಗಳಿಗೆ ಜಾನುವಾರುಗಳ ಕರೆತರುವುದು, ಸಾಗಾಣಿಕೆ ನಿಬರ್ಂಧಿಸಿ ಜಿಲ್ಲಾಧಿಕಾರಿ ಡಿ. ಎಸ್. ರಮೇಶ್ ಆದೇಶ 


         ಚಾಮರಾಜನಗರ, ನವೆಂಬರ್ 10 :- ಜಾನುವಾರುಗಳಿಗೆ ಚರ್ಮಗಂಟು ರೋಗ ಹರಡುವಿಕೆಯನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಚರ್ಮಗಂಟು ರೋಗ ನಿಯಂತ್ರಣಕ್ಕೆ ಬರುವವರಗೆ ಜಿಲ್ಲೆಯಾದ್ಯಂತ ನಡೆಯುವ ಜಾತ್ರೆ ಹಾಗೂ ಸಂತೆಗಳಿಗೆ ಜಾನುವಾರುಗಳನ್ನು ಕರೆತರುವುದನ್ನು ಮತ್ತು ರೋಗ ಪೀಡಿತ ಜಾನುವಾರುಗಳ ಸಾಗಾಣಿಕೆಯನ್ನು ನಿಬರ್ಂಧಿಸಿ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಆದೇಶ ಹೊರಡಿಸಿದ್ದಾರೆ. 


     ಈ ಆದೇಶವನ್ನು ಉಲ್ಲಂಘಿಸಿದವರ ವಿರುದ್ದ ಭಾರತೀಯ ದಂಡ ಸಂಹಿತೆಯಲ್ಲಿ ಅನ್ವಯವಾಗಬಹುದಾದ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಯವರು ಆದೇಶದಲ್ಲಿ ತಿಳಿಸಿದ್ದಾರೆ. 


ನ. 13ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ 


       ಚಾಮರಾಜನಗರ, ನವೆಂಬರ್ 10 - ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಚಾಮರಾಜನಗರ ಉಪವಿಭಾಗ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ನವೆಂಬರ್ 13ರಂದು ಹಮ್ಮಿಕೊಂಡಿರುವುದರಿಂದ ಅಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

      ಚಾಮರಾಜನಗರ ಟೌನ್-1, ಕೋಡಿಮೋಳೆ, ರಾಮಸಮುದ್ರ, ಮಾದಾಪುರ, ಕಾಗಲವಾಡಿ, ಸೋಮವಾರಪೇಟೆ (ಟೌನ್-2), ಹರದನಹಳ್ಳಿ, ಬೇಡರಪುರ, ಟಿ.ಕೆ ಮೋಳೆ, ಶಿವಪುರ, ಗೂಳಿಪುರ ಎನ್.ಜೆ.ವೈ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

     

      ಸಾರ್ವಜನಿಕರು ನಿಗಮದ ಜೊತೆ ಸಹಕರಿಸಬೇಕು. ವಿದ್ಯುತ್ ಸಂಬಂಧಿತ ದೂರು ಮತ್ತು ಸಹಾಯಕ್ಕಾಗಿ ಗ್ರಾಹಕರು ಉಚಿತ ದೂ.ಸಂ 1912 ಸಂಪರ್ಕಿಸುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ನ. 14ರಿಂದ ಅಂಗನವಾಡಿ ಕೇಂದ್ರಗಳಿಗೆ ಆಹಾರ ಪದಾರ್ಥಗಳ ವಿತರಣೆ


         ಚಾಮರಾಜನಗರ, ನವೆಂಬರ್ 10 :- ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಕೊಳ್ಳೇಗಾಲ ಹಾಗೂ ಹನೂರು ತಾಲೂಕು ವ್ಯಾಪ್ತಿಯ 472 ಅಂಗನವಾಡಿ ಕೇಂದ್ರಗಳಿಗೆ ನವೆಂಬರ್ 14ರಿಂದ 25ರವರೆಗೆ ಆಹಾರ ಪದಾರ್ಥಗಳನ್ನು ವಿತರಿಸಲಾಗುತ್ತದೆ. 


      ನವೆಂಬರ್ 14ರಂದು ಹನೂರು, ಸತ್ತೇಗಾಲ, 15ರಂದು ಬಂಡಳ್ಳಿ, ತೆಳ್ಳನೂರು, 16ರಂದು ಅಜ್ಜೀಪುರ, ಕಸಬಾ-1, 17ರಂದು ರಾಮಾಪುರ, ಕಸಬಾ-2, 18ರಂದು ಪಿ.ಜಿ.ಪಾಳ್ಯ, ಮಧುವನಹಳ್ಳಿ-1, 19ರಂದು ಲೊಕ್ಕನಹಳ್ಳಿ, ಮಧುವನಹಳ್ಳಿ-2, 21ರಂದು ಕೂಡ್ಲೂರು, ಕಾಮಗೆರೆ, 22ರಂದು ಮಾರ್ಟಳ್ಳಿ, ಚಿಲಕವಾಡಿ, 23ರಂದು ಕೌದಳ್ಳಿ, 24ರಂದು ದಂಟಳ್ಳಿ ಹಾಗೂ 25ರಂದು ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಗೆ ಆಹಾರ ಪದಾರ್ಥಗಳನ್ನು ವಿತರಿಸಲಾಗುತ್ತದೆ ಎಂದು ಕೊಳ್ಳೇಗಾಲ ತಾಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಉದ್ಯೋಗ ನೆರವಿಗಾಗಿ ವೆಬ್ ಪೋರ್ಟಲ್ : ನೋಂದಣಿಗೆ ಮನವಿ 


         ಚಾಮರಾಜನಗರ, ನವೆಂಬರ್ 10 :- ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮದ ವತಿಯಿಂದ ಅಧಿಕೃತವಾಗಿ ಉದ್ಯೋಗ ನೆರವಿಗಾಗಿ ವೆಬ್ ಪೋರ್ಟಲ್ ಅನ್ನು ಅನಾವರಣಗೊಳಿಸಲಾಗಿದೆ. 


     ಈ ವೆಬ್ ಪೋರ್ಟಲ್‍ನಲ್ಲಿ ಪ್ರತಿಷ್ಠಿತ ಕಂಪನಿಗಳು ನೋಂದಾಯಿಸಿಕೊಳ್ಳಲಾಗಿದೆ. ನೋಂದಾಯಿಸಿಕೊಂಡಿರುವ ಕಂಪನಿಗಳಿಂದ ಅಭ್ಯರ್ಥಿಗಳ ಬಯೋಡೇಟಾವನ್ನು ವೀಕ್ಷಿಸಿ (ಪರಿಶೀಲಿಸಿ) ಉದ್ಯೋಗಕ್ಕೆ ಪರಿಗಣಿಸುವುದರಿಂದ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ಕೌಶಲ್ಯ ಹಾಗೂ ಅನುಭವವನ್ನು hಣಣಠಿs://sಞiಟಟಛಿoಟಿಟಿeಛಿಣ.ಞಚಿushಚಿಟಞಚಿಡಿ.ಛಿom  ನಲ್ಲಿ ನೋಂದಾಯಿಸಿಕೊಂಡು ಸದುಪಯೋಗ ಮಾಡಿಕೊಳ್ಳಬಹುದು. 

-----



ಪರವಾನಗಿ ಪಡೆದ ಶಸ್ತ್ರಾಸ್ತ್ರ (ಬಂದೂಕು) ಠೇವಣಿ ಸಂಬಂಧ ಸ್ಕ್ರೀನಿಂಗ್ ಕಮಿಟಿ ಸಭೆ 


         ಚಾಮರಾಜನಗರ, ನವೆಂಬರ್ 10 - ಸಾರ್ವತ್ರಿಕ ಹಾಗೂ ಉಪಚುನಾವಣೆಗಳ ಸಂದರ್ಭದಲ್ಲಿ ಸಾರ್ವಜನಿಕರು ಪಡೆದಿರುವ ಪರವಾನಗಿ ಪಡೆದ ಶಸ್ತ್ರಾಸ್ತ್ರ (ಬಂದೂಕು) ಠೇವಣಿ ಮಾಡುವ ಕುರಿತು ರಚಿಸಲಾಗಿರುವ ಸ್ಕ್ರೀನಿಂಗ್ ಕಮಿಟಿ ಸಭೆ ಬುಧವಾರ ನಡೆಯಿತು. 


     ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಸಾರ್ವತ್ರಿಕ ಹಾಗೂ ಉಪಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕರು ಪಡೆದಂತಹ ಪರವಾನಗಿ ಪಡೆದ ಶಸ್ತ್ರಾಸ್ತ್ರಗಳ (ಬಂದೂಕು) ಠೇವಣಿ ಸಂಬಂಧ ಚುನಾವಣಾ ಆಯೋಗದ ನಿರ್ದೇಶನ ಅಂಶಗಳ ಬಗ್ಗೆ ವಿವರವಾಗಿ ಚರ್ಚಿಸಲಾಯಿತು. 


     ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಮಾತನಾಡಿ ಚುನಾವಣಾ ಕೆಲಸ ಕಾರ್ಯಗಳಲ್ಲಿ ಯಾವುದೇ ಲೋಪ ಉಂಟಾಗದಂತೆ ಅತ್ಯಂತ ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಬೇಕು. ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಿದರು. 


     ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್ ಮಾತನಾಡಿ ಜಿಲ್ಲಾ ವ್ಯಾಪ್ತಿಯಲ್ಲಿ ಬಂದೂಕು ಪರವಾನಗಿ ಹೊಂದಿರುವ ವ್ಯಕ್ತಿಗಳಿಗೆ ಚುನಾವಣಾ ಸಂದರ್ಭದಲ್ಲಿ ನೋಟಿಸ್ ಜಾರಿ ಮಾಡಿ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಬಂದೂಕುಗಳನ್ನು ಠೇವಣಿ ಮಾಡಿಸಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ನಂತರ ಸಂಬಂಧಪಟ್ಟವರಿಗೆ ಬಂದೂಕುಗಳನ್ನು ಹಸ್ತಾಂತರಿಸಲಾಗುತ್ತದೆ. ಮುಮದಿನ ಚುನಾವಣೆ ಸಮಯದಲ್ಲಿಯೂ ಈ ಪ್ರಕ್ರಿಯೆಯಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. 


     ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್, ಉಪವಿಭಾಗಾಧಿಕಾರಿ ಗೀತಾ ಹುಡೇದ, ಸೇರಿದಂತೆ ಡಿವೈಎಸ್‍ಪಿ, ಎಲ್ಲಾ ತಹಶೀಲ್ದಾರರು, ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.


ವಿವಿಧ ಗ್ರಾಮ ಪಂಚಾಯಿತಿಗಳಿಗೆ ಜಿ.ಪಂ ಸಿಇಒ ಕೆ.ಎಂ. ಗಾಯಿತ್ರಿ ಭೇಟಿ : ಪರಿಶೀಲನೆ 


         ಚಾಮರಾಜನಗರ, ನವೆಂಬರ್ 10 :  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಶಾಲೆ, ಗ್ರಂಥಾಲಯ ಪರಿಶೀಲಿಸಿದರು.


     ಚಾಮರಾಜನಗರ ತಾಲೂಕು ಸಂತೇಮರಹಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿಯ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿ, ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸುವಂತೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗೆ ತಿಳಿಸಿದರು. 


     ಉಡಿಗಾಲ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲಾ ಕೊಠಡಿಗಳು, ಅಕ್ಷರ ದಾಸೋಹ ಕಾರ್ಯಕ್ರಮದ ಅಡುಗೆ ಕೋಣೆ, ಆಹಾರ ದಾಸ್ತಾನು ಕೊಠಡಿ, ಕುಡಿಯುವ ನೀರು ಮತ್ತು ಶೌಚಾಲಯಗಳನ್ನು ಪರಿಶೀಲಿಸಿದರು. 


ಶಾಲೆಯಲ್ಲಿನ ಮೂಲಭೂತ ಸೌಕರ್ಯವಾದ ಕುಡಿಯುವ ನೀರು ವ್ಯವಸ್ಥೆಗೆ ಅನುಕೂಲವಾಗುವಂತೆ ನಳಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಶಾಲಾ ಸುತ್ತುಗೋಡೆ ಹಾಗೂ ಆಟದ ಮೈದಾನವನ್ನು ನಿರ್ಮಿಸಲು ಕ್ರಿಯಾಯೋಜನೆಯನ್ನು ತಯಾರಿಸಬೇಕು. ಶಾಲಾ ಆವರಣದಲ್ಲಿ ಸುಮಾರು ವರ್ಷಗಳಿಂದ ಹಳೆಯದಾಗಿರುವ ಮರಗಳಿದ್ದು, ಅವುಗಳನ್ನು ಶೀಘ್ರವಾಗಿ ತೆರವುಗೊಳಿಸಲು ನಿಯಮಾನುಸಾರ ಕ್ರಮವಹಿಸುವಂತೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗೆ ಸೂಚಿಸಿದರು.


ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದಿಂದ ಅನುಷ್ಠಾನಗೊಳ್ಳುತ್ತಿರುವ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಯ ಜೊತೆಗೆ ವಿದ್ಯಾರ್ಥಿಗಳಿಗೆ ಕೈತೊಳೆಯುವ ವ್ಯವಸ್ಥೆಯನ್ನು ಕಲ್ಪಿಸಲು ನಿರ್ದೇಶನ ನೀಡಿದರು. 


ತೆರಕಣಾಂಬಿ ಗ್ರಾಮ ಪಂಚಾಯಿತಿ ಗ್ರಂಥಾಲಯಕ್ಕೆ ಭೇಟಿ ನೀಡಿ, ಗಾಳಿ-ಬೆಳಕಿನ ವ್ಯವಸ್ಥೆ ಕಲ್ಪಿಸಲು ಹಾಗೂ ಹೆಚ್ಚಿನ ಸದಸ್ಯತ್ವಕ್ಕೆ ನೋಂದಾಯಿಸುವಂತೆ  ತಿಳಿಸಿದರು. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಘನತ್ಯಾಜ್ಯ ನಿರ್ವಹಣಾ ಘಟಕ, ಕಸ ಸಂಗ್ರಹಣೆ ಮತ್ತು ಸಮರ್ಪಕ ವಿಲೇವಾರಿ, ಜಲಜೀವನ್ ಮಿಷನ್ ಯೋಜನೆಯಡಿ ನಳನೀರು ಸಂಪರ್ಕ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕುರಿತು, ಮನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಿದರು.


     ಎನ್.ಆರ್.ಎಲ್.ಎಂ ಯೋಜನೆಗಳಡಿ ಕೈಗೊಂಡಿರುವ ಅಭಿವೃದ್ದಿ ಕಾಮಗಾರಿಗಳÀ ಶೀಘ್ರ ಅನುಷ್ಠಾನ ಮತ್ತು ಪ್ರಗತಿ ಸಾಧಿಸುವ ಬಗ್ಗೆ, ಗ್ರಂಥಾಲಯ ನಿರ್ಮಾಣ, ತೆರಿಗೆ ವಸೂಲಾತಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಮೂಲಭೂತ ಸೌಲಭ್ಯಗಳ ಕುರಿತು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಸಭೆ ನಡೆಸಿದರು.


ಗುಂಡ್ಲುಪೇಟೆ ತಾಲೂಕು ಪಂಚಾಯಿತಿಗೆ ಭೇಟಿ ನೀಡಿ, ತಾಲೂಕು ಪಂಚಾಯಿತಿಯ ಸಾಮಥ್ರ್ಯ ಸೌಧದಲ್ಲಿ ಗುಂಡ್ಲುಪೇಟೆ ತಾಲ್ಲೋಕಿನ ಆಲತ್ತೂರು, ಬೇಗೂರು ಮತ್ತು ಬೇರಂಬಾಡಿ ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳಿಗೆ ದೂರದೃಷ್ಟಿ ಯೋಜನೆ ಸಿದ್ದಪಡಿಸುವಿಕೆ ಕುರಿತು ಆಯೋಜಿಸಲಾಗಿರುವ ತರಬೇತಿಯಲ್ಲಿ ಪಾಲ್ಗೊಂಡರು.


ದೂರದೃಷ್ಟಿ ಯೋಜನೆ ಸಿದ್ದಪಡಿಸುವಿಕೆ ಯಲ್ಲಿ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಪಾತ್ರ, ಸಹಭಾಗಿತ್ವ, ಭಾಗವಹಿಸುವಿಕೆ, ಯೋಜನೆಯ ತಯಾರಿ, ವಿವಿಧ ಸಭೆಗಳ ಆಯೋಜನೆ, ಸೇರ್ಪಡೆ-ಮಾರ್ಪಾಡುವಿನ ಅವಶ್ಯಕತೆ, ಸಂಪನ್ಮೂಲ ಕ್ರೋಢೀಕರಣ, ಜನರ ಅಗತ್ಯತೆಗಳು ಮತ್ತು ಸಮಸ್ಯೆಗಳಿಗೆ ಒತ್ತು ನೀಡುವ ಮೂಲಕ ಯೋಜನೆಗಳನ್ನು ರೂಪಿಸುವುದರ ಕುರಿತು ಹಾಗೂ ಸರ್ಕಾರದ ಮಾರ್ಗಸೂಚಿಗಳನುಸಾರ ಇತರೆ ಅಭಿವೃದ್ದಿ ಇಲಾಖೆಗಳ ಸಹಭಾಗಿತ್ವದಲ್ಲಿ ಸಾಧಿಸಬೇಕಾಗಿರುವ ಸುಸ್ಥಿರ ಅಭಿವೃದ್ದಿ ಗುರಿಗಳು, ಅನುಷ್ಠಾನಗೊಳಿಸಬೇಕಾಗಿರುವ ಅಭಿವೃದ್ದಿ ಕಾರ್ಯಕ್ರಮಗಳನ್ನು ಗುರುತಿಸುವುದರ ಕುರಿತು ಚುನಾಯಿತ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು.


ಕಣ್ಣೇಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ ಕಾಲೋನಿ ಗ್ರಾಮದ ಶ್ರೀ ಮಲೆಮಹದೇಶ್ವರ ಮಹಿಳಾ ಸ್ವ-ಸಹಾಯ ಸಂಘದ ಫಲಾನುಭವಿಯು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆಯಡಿ ಪೃಥ್ವಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ವತಿಯಿಂದ ಸಹಾಯಧನ ಪಡೆದು ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಪ್ರಾರಂಭಿಸಿರುವ ಕ್ಯಾಂಟಿನ್‍ನನ್ನು ಹಾಗೂ ಹೊನ್ನೇಗೌಡನ ಹಳ್ಳಿ ಗ್ರಾಮದಲ್ಲಿ ಎನ್.ಆರ್.ಎಲ್.ಎಂ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳ ಒಗ್ಗೂಡಿಸುವಿಕೆಯಲ್ಲಿ ಪೃಥ್ವಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ವತಿಯಿಂದ ಸಹಾಯಧನ ಪಡೆದು ನಿರ್ಮಿಸಲಾಗಿರುವ ಅರಣ್ಯ ಮತ್ತು ತೋಟಗಾರಿಕಾ ಸಸಿಗಳ ನರ್ಸರಿಯನ್ನು ಪರಿಶೀಲಿಸಿದರು.


ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಪಂಚಾಯತ್ ರಾಜ್ ಇಂಜಿನೀಯರಿಂಗ್ ವಿಭಾಗ ಕಾರ್ಯಪಾಲಕ ಅಭಿಯಂತರರಾದ ಇಬ್ರಾಹಿಂ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪೂರ್ಣಿಮಾ, ಶ್ರೀಕಂಠರಾಜೇ ಅರಸ್, ಇತರೆ ಅಧಿಕಾರಿಗಳು ಹಾಜರಿದ್ದರು. 






ಹಿಂಗಾರು, ಬೇಸಿಗೆ ಹಂಗಾಮಿಗೆ ಫಸಲ್ ಬಿಮಾ ಯೋಜನೆ ಅನುಷ್ಠಾನ : ಸದುಪಯೋಗಕ್ಕೆ ಕೃಷಿ ಇಲಾಖೆ ಮನವಿ 


         ಚಾಮರಾಜನಗರ, ನವೆಂಬರ್ 10 - ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು 2022-23 ರ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ಅನುಷ್ಟಾನಗೊಳಿಸಲಾಗುತ್ತಿದೆ. 


      ಯೋಜನೆಯಡಿ ಹಿಂಗಾರು ಹಂಗಾಮಿನಲ್ಲಿ ಮಳೆ ಆಶ್ರಯದ ಹುರುಳಿ ಬೆಳೆಯನ್ನು ವಿಮೆಗೆ ಒಳಪಡಿಸಿ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಅಧಿಸೂಚಿಸಲಾಗಿದೆ. 


     ಹಿಂಗಾರು ಹಂಗಾಮಿಗೆ ಚಾಮರಾಜನಗರ ತಾಲೂಕಿನ ಕಸಬಾ ಹೋಬಳಿ ಹಾಗೂ ಚಂದಕವಾಡಿ ಹೋಬಳಿಗಳಲ್ಲಿ ಮಳೆ ಆಶ್ರಿತ ಕಡಲೆ, ಮುಸುಕಿನಜೋಳ, ಸಂತೇಮರಹಳ್ಳಿ ಹೋಬಳಿಯಲ್ಲಿ ಮಳೆ ಆಶ್ರಿತ ಕಡಲೆ, ಹರದನಹಳ್ಳಿ ಹೋಬಳಿಯಲ್ಲಿ ಮಳೆ ಆಶ್ರಿತ ಕಡಲೆ, ಟೊಮ್ಯಾಟೋ (ಅನಿರ್ದಿಷ್ಟ), ಹರವೆ ಹೋಬಳಿಯಲ್ಲಿ ಮಳೆ ಆಶ್ರಿತ ಕಡಲೆ, ನೀರಾವರಿ ಆಶ್ರಿತ ಈರುಳ್ಳಿ ಬೆಳೆ ವಿಮೆ ವ್ಯಾಪ್ತಿಗೆ ಒಳಪಡಲಿದೆ. 


      ಗುಂಡ್ಲುಪೇಟೆ ತಾಲೂಕು ಕಸಬಾ ಹೋಬಳಿಯಲ್ಲಿ ನೀರಾವರಿ ಆಶ್ರಿತ ಈರುಳ್ಳಿ, ಮಳೆ ಆಶ್ರಿತ, ಕಡಲೆ, ಮುಸುಕಿನಜೋಳ, ಟೊಮ್ಯಾಟೋ (ಅನಿರ್ದಿಷ್ಟ), ತೆರಕಣಾಂಬಿ ಹೋಬಳಿಯಲ್ಲಿ ಮಳೆಆಶ್ರಿತ ಕಡಲೆ, ಮುಸುಕಿನಜೋಳ ನೀರಾವರಿ ಆಶ್ರಿತ ಮುಸುಕಿನಜೋಳ, ಈರುಳ್ಳಿ ಟೊಮ್ಯಾಟೋ (ಅನಿರ್ದಿಷ್ಟ), ಬೇಗೂರು ಹೋಬಳಿಯಲ್ಲಿ ಮಳೆ ಆಶ್ರಿತ ಕಡಲೆ, ನೀರಾವರಿ ಆಶ್ರಿತ ಈರುಳ್ಳಿ, ಟೊಮ್ಯಾಟೋ (ಅನಿರ್ದಿಷ್ಟ), ಹಂಗಳ ಹೋಬಳಿಯಲ್ಲಿ  ಮಳೆಆಶ್ರಿತ ಕಡಲೆ ಮುಸುಕಿನಜೋಳ, ನೀರಾವರಿ ಆಶ್ರಿತ ಈರುಳ್ಳಿ, ಟೊಮ್ಯಾಟೋ (ಅನಿರ್ದಿಷ್ಟ) ಬೆಳೆಗಳು ವಿಮೆ ವ್ಯಾಪ್ತಿಗೆ ಸೇರಲಿವೆ. 


     ಕೊಳ್ಳೇಗಾಲ ತಾಲೂಕು ಕಸಬಾ ಹೋಬಳಿಯಲ್ಲಿ ನೀರಾವರಿ ಆಶ್ರಿತ ಭತ್ತ, ಮುಸುಕಿನಜೋಳ, ಪಾಳ್ಯ ಹೋಬಳಿಯಲ್ಲಿ ನೀರಾವರಿ ಆಶ್ರಿತ  ಮುಸುಕಿನಜೋಳ, ಹನೂರು ತಾಲೂಕಿನ ಹನೂರು ಹೋಬಳಿಯಲ್ಲಿ ನೀರಾವರಿ ಆಶ್ರಿತ  ಮುಸುಕಿನಜೋಳ, ಮಳೆ ಆಶ್ರಿತ ಕಡಲೆ , ಲೊಕ್ಕನಹಳ್ಳಿ ರಾಮಾಪುರ ಹೋಬಳಿಯಲ್ಲಿ ನೀರಾವರಿ ಆಶ್ರಿತ ಮುಸುಕಿನಜೋಳ      ಯಳಂದೂರು ತಾಲೂಕು ಕಸಬಾ ಹೋಬಳಿಯಲ್ಲಿ ಮಳೆ ಆಶ್ರಿತ ಹುರುಳಿ, ಅಗರ ಹೋಬಳಿಯಲ್ಲಿ ನೀರಾವರಿ ಆಶ್ರಿತ ಮುಸುಕಿನಜೋಳ ಬೆಳೆ ವಿಮೆ ವ್ಯಾಪ್ತಿಗೆ ಬರಲಿವೆ. 


     ಬೇಸಿಗೆ ಹಂಗಾಮಿಗೆ ಗುಂಡ್ಲುಪೇಟೆ ತಾಲೂಕು ಕಸಬಾ ಹೋಬಳಿಯಲ್ಲಿ ನೀರಾವರಿ ಆಶ್ರಿತ ಈರುಳ್ಳಿ, ಟೊಮ್ಯಾಟೋ (ಅನಿರ್ದಿಷ್ಟ), ಬೇಗೂರು ಹೋಬಳಿಯಲ್ಲಿ  ನೀರಾವರಿ ಆಶ್ರಿತ ಈರುಳ್ಳಿ, ಟೊಮ್ಯಾಟೋ (ಅನಿರ್ದಿಷ್ಟ), ಹಂಗಳ ಹೋಬಳಿಯಲ್ಲಿ ನೀರಾವರಿ ಆಶ್ರಿತ ಈರುಳ್ಳಿ, ತೆರಕಣಾಂಬಿ ಹೋಬಳಿ ಟೊಮ್ಯಾಟೋ (ಅನಿರ್ದಿಷ್ಟ) ಬೆಳೆಗಳು ವಿಮೆ ವ್ಯಾಪ್ತಿಗೆ ಸೇರಲಿವೆ. 


     ಕೊಳ್ಳೇಗಾಲ ತಾಲೂಕು ಕಸಬಾ ಹೋಬಳಿಯಲ್ಲಿ ನೀರಾವರಿ ಆಶ್ರಿತ ಭತ್ತ, ರಾಗಿ, ಪಾಳ್ಯ ಹೋಬಳಿಯಲ್ಲಿ ನೀರಾವರಿ ಆಶ್ರಿತ ಭತ್ತ, ಯಳಂದೂರು ತಾಲೂಕು ಕಸಬಾ ಹೋಬಳಿಯಲ್ಲಿ ನೀರಾವರಿ ಆಶ್ರಿತ ರಾಗಿ ಬೆಳೆ ವಿಮೆ ವ್ಯಾಪ್ತಿಗೆ ಒಳಪಡಲಿವೆ. 


     2022-23ನೇ ಸಾಲಿನ ಹಿಂಗಾರು ಹಂಗಾಮಿಗೆ ನೀರಾವರಿ ಆಶ್ರಿತ ಮುಸುಕಿನ ಜೋಳ, ಈರುಳ್ಳಿ, ಮಳೆಯಾಶ್ರಿತ ಮುಸುಕಿನಜೋಳ, ಹುರಳಿ ಹಾಗೂ ಟೊಮ್ಯಾಟೊ ಬೆಳೆಗೆ ವಿಮಾಕಂತು ಪಾವತಿಸಲಿ ನವೆಂಬರ್ 30 ಕಡೆಯ ದಿನವಾಗಿದೆ. ಮಳೆ ಆಶ್ರಿತ ಕಡಲೆ ಬೆಳೆಗೆ ವಿಮಾ ಕಂತು ಪಾವತಿಸಲು ಡಿಸೆಂಬರ್ 16 ಕಡೆಯ ದಿನವಾಗಿದೆ. ನೀರಾವರಿ ಆಶ್ರಿತ ಭತ್ತ ಬೆಳೆಗೆ ವಿಮಾಕಂತು ಪಾವತಿಸಲು ಡಿಸೆಂಬರ್ 31 ಕಡೆಯ ದಿನವಾಗಿದೆ. 


    2022-23ನೇಸಾಲಿನ ಬೇಸಿಗೆ ಹಂಗಾಮಿಗೆ ನೀರಾವರಿ ಆಶ್ರಿತ ಭತ್ತ, ರಾಗಿ, ಈರುಳ್ಳಿ ಹಾಗೂ ಟೊಮ್ಯಾಟೊ ಬೆಳೆಗೆ ವಿಮಾಕಂತು ಪಾವತಿಸಲು 2023ರ ಫೆಬ್ರವರಿ 28 ಕೊನೆಯ ದಿನವಾಗಿದೆ. 


      ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ/ಖಾತೆ/ಪಾಸ್ ಪುಸ್ತಕ/ಕಂದಾಯ ರಶೀದಿಯನ್ನು ನೀಡಬೇಕು. 


     ಹೆಚ್ಚಿನ ಮಾಹಿತಿಗಾಗಿ ಆಯಾ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಬ್ಯಾಂಕುಗಳನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರಾದ ಮಧುಸೂದನ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ. 


                                 


     ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಅಥವಾ ಇಲಾಖೆಯ ಕಚೇರಿಯ ಜಿಲ್ಲಾ ಸಂಯೋಜಕರಾದ ಡಿ. ನಾಗರಾಜು ಮೊ.ಸಂ 7892190137 ಸಂಪರ್ಕಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು