Monday, 21 November 2022

21-11-2022 ಚಾಮರಾಜನಗರ ಸುದ್ದಿ


 ನಗರದಲ್ಲಿ ಸ್ವಚ್ಚತಾ ಓಟ, ಮತದಾರರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ


      ಚಾಮರಾಜನಗರ, ನವೆಂಬರ್ 21 - ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಸ್ವಚ್ಚತಾ ಓಟ ಹಾಗೂ ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ ಕುರಿತ ಜಾಗೃತಿ ಕಾರ್ಯಕ್ರಮಗಳಿಗೆ ನಗರದಲ್ಲಿ ಇಂದು ಚಾಲನೆ ದೊರೆಯಿತು. 

     ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಸ್ವಚ್ಚತಾ ಓಟ ಹಾಗೂ ಮತದಾರರ ಜಾಗೃತಿ ಕಾರ್ಯಕ್ರಮಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್ ಅವರು ಹಸಿರು ನಿಶಾನೆ ತೋರಿದರು.

     ಗ್ರಾಮೀಣ ಜನರಲ್ಲಿ ನೈರ್ಮಲ್ಯ ಕುರಿತು ಹೆಚ್ಚಿನ ಅರಿವು ಮೂಡಿಸಲು ಸ್ವಚ್ಚತಾ ಓಟ ಹಾಗೂ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಆರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಪ್ರವಾಸಿ ಮಂದಿರದಲ್ಲಿ ಅಂತ್ಯಗೊಂಡಿತು. ಸ್ವಚ್ಚತಾ ಓಟದಲ್ಲಿ ಅಧಿಕಾರಿಗಳು, ವಿವಿಧ ಶಾಲಾ ಮಕ್ಕಳು, ಸ್ಕೌಟ್ಸ್ ಮತ್ತು ಗೈಡ್ ವಿದ್ಯಾರ್ಥಿಗಳು, ಸಾರ್ವಜನಿಕರು, ಇನ್ನಿತರರು ಪಾಲ್ಗೊಂಡಿದ್ದರು.

     ಇದೇ ವೇಳೆ ಸ್ವಚ್ಚತಾ ಓಟ ಹಾಗೂ ಮತದಾರರ ಜಾಗೃತಿ ಕಾರ್ಯಕ್ರಮದ ಕುರಿತು ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಅವರು ಜಿಲ್ಲೆಯ ಎಲ್ಲಾ ಗ್ರಾಮೀಣ ಭಾಗದಲ್ಲಿ ಸ್ವಚ್ಚತೆ, ಶೌಚಾಲಯಗಳ ಸದ್ಭಳಕೆ, ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತ ಪರಿಕಲ್ಪನೆಯಡಿ ಸಾಂಕೇತಿಕವಾಗಿ ಇಂದು ಸ್ವಚ್ಚತಾ ಓಟ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರು ಮುಕ್ತ ಮತದಾನ ಮಾಡಲು ಅನುಕೂಲವಾಗುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಕುರಿತು ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

     ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್‍ರಾಜು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಲ್ಲಿಕಾರ್ಜುನ್, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಗಂಗಾಧರ್, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣೇಗೌಡ, ಇನ್ನಿತರರು ಸ್ವಚ್ಚತಾ ಓಟದಲ್ಲಿ ಪಾಲ್ಗೊಂಡಿದ್ದರು.  

18 ವರ್ಷ ತುಂಬಿದ ಪ್ರತಿಯೊಬ್ಬರನ್ನು ಮತದಾರರ ಪಟ್ಟಿ ಸೇರ್ಪಡೆಗೆ ಅಗತ್ಯ ಕ್ರಮ : ಜಿ.ಪಂ. ಸಿಇಒ ಕೆ.ಎಂ. ಗಾಯಿತ್ರಿ

       ಚಾಮರಾಜನಗರ, ನವೆಂಬರ್ 21 - ಮುಂಬರುವ ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆಗಾಗಿ ಶೇ. 100ರಷ್ಟು ಮತದಾರರನ್ನು ನೊಂದಣಿ ಮಾಡುವ ಸಂಬಂಧ ಜಿಲ್ಲೆಯಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಸೂಚನೆ ನೀಡಿದರು. 

      ನಗರದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ರಾಷ್ಟ್ರೀಯ ಮತದಾರರ ಪಟ್ಟಿ ನೋಂದಣಿ ಮತ್ತು ಪರಿಷ್ಕರಣೆ-2023 ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಡೆದ ಜಿಲ್ಲಾ ಸ್ವೀಪ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮುಂಬರುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆಗಾಗಿ ಶೇ.100ರಷ್ಟು ಮತದಾರರನ್ನು ನೊಂದಣಿ ಮಾಡುವ ಸಂಬಂಧ ಈಗಾಗಲೇ ಆಯೋಗವು ಕರಡು ಮತದಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ಸಮನ್ವಯತೆ ಸಾಧಿಸಿ 18 ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಯಲ್ಲಿ ನೊಂದಣಿಯಾಗಿರುವ ಬಗ್ಗೆ ಪರಿಶೀಲಿಸಬೇಕು ಎಂದರು. 

ನೊಂದಣಿಯಾಗದೆ ಇರುವ ಮತದಾರರನ್ನು ಮತದಾರರ ಪಟ್ಟಿಗೆ ನೊಂದಣಿ ಮಾಡಿಸಲು ಹಾಗೂ ತಿದ್ದುಪಡಿ, ಬದಲಾವಣೆಗಳಿದ್ದಲ್ಲಿ ಪರಿಷ್ಕರಣೆ ಮಾಡಿಕೊಳ್ಳುವ ಸಂಬಂಧ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಮಟ್ಟಗಳಲ್ಲಿ ವಿವಿಧ ಸ್ವೀಪ್ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿ ಇರುವ ವಿದ್ಯಾರ್ಥಿನಿಲಯಗಳು, ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ, 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಮತದಾರರÀ ಪಟ್ಟಿಯಲ್ಲಿ ನೊಂದಣಿಯಾಗಿರುವ ಬಗ್ಗೆ ಪರಿಶೀಲಿಸಬೇಕು. ನೊಂದಣಿಯಾಗಿಲ್ಲದಿದ್ದಲ್ಲಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಸಮನ್ವಯದಿಂದ ನೊಂದಣಿಗೆ ಕ್ರಮವಹಿಸಬೇಕು. ಮತದಾನದ ಬಗ್ಗೆ ಅರಿವು ಮೂಡಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ತಿಳಿಸಿದರು. 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ವಿಕಲಚೇತನರು, ಸಾಂತ್ವನ ಮತ್ತು ಸ್ವಾಧಾರ ಕೇಂದ್ರ ಹಾಗೂ ವೃದ್ಧಾಶ್ರಮಗಳಲ್ಲಿರುವ 18 ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಯಲ್ಲಿ ನೊಂದಣಿಯಾಗಿರುವ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಟದ ಎಂಬಿಕೆಗಳಿಂದ ಪರಿಶೀಲಿಸಬೇಕು. ಮತದಾನದಲ್ಲಿ ಸಕ್ರಿಯವಾಗಿ ಭಾಗವಹಿಸಲು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 

ಲಿಂಗತ್ವ ಅಲ್ಪಸಂಖ್ಯಾತರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಂಬಂಧ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸ್ವೀಪ್ ಕಾರ್ಯಕ್ರಮವನ್ನು ಆಯೋಜಿಸಿ ಮತದಾರರ ಪಟ್ಟಿಯಲ್ಲಿ ನೊಂದಣಿ ಮತ್ತು ಪರಿಷ್ಕರಣೆ ಮಾಡುವ ಬಗ್ಗೆ ಹಾಗೂ ಮತದಾನದ ಪ್ರಾಮುಖ್ಯತೆ ಕುರಿತು ಅರಿವು ಮೂಡಿಸಬೇಕು. ಜಿಲ್ಲೆಯಲ್ಲಿ ಸೋಲಿಗ, ಬುಡಕಟ್ಟು ಜನಾಂಗದವರು ವಾಸಿಸುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬರನ್ನು ಮತದಾರರ ಪಟ್ಟಿಯಲ್ಲಿ ನೊಂದಣಿ ಮಾಡಲು ಹಾಗೂ ಮತದಾದನದ ಬಗ್ಗೆ ಅರಿವು ಮೂಡಿಸಲು ಸಮುದಾಯದ ಮುಖಂಡರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಸ್ವೀಪ್ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಆಯೋಜಿಸುವಂತೆ ಸೂಚನೆ ನೀಡಿದರು. 

ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ಬರುವ ಕಾಲೇಜು, ವಿದ್ಯಾರ್ಥಿನಿಲಯಗಳು, ಸ್ವ ಸಹಾಯ ಸಂಘಗಳು ಮತ್ತು ಸಂಘಟನೆಗಳ ಮೂಲಕ ಮತದಾರರ ಪಟ್ಟಿಯಲ್ಲಿ 18 ವರ್ಷ ಮೇಲ್ಪಟ್ಟವರ ಹೆಸರುಗಳನ್ನು ನೊಂದಣಿ ಮತ್ತು ಪರಿಷ್ಕರಣೆ ಮಾಡುವ ಬಗ್ಗೆ ಹಾಗೂ ಮತದಾನದ ಕುರಿತು ಅರಿವು, ಜಾಗೃತಿ ಮೂಡಿಸುವ ಸಂಬಂಧ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸ್ವೀಪ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಸೂಚಿಸಿದರು. 
      ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಗೀತಾಲಕ್ಷ್ಮಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. 

ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳಿಗಾಗಿ ವಿಕಲಚೇತನರಿಂದ ಅರ್ಜಿ ಆಹ್ವಾನ

      ಚಾಮರಾಜನಗರ, ನವೆಂಬರ್ 21- ತಾಲೂಕಿನ ನವಿಲೂರು, ಚಂದಕವಾಡಿ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳಿಗಾಗಿ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ. 

      ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಸ್ಥಳೀಯರಾಗಿದ್ದು, ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ ಸೇರಿದವರಾಗಿರಬೇಕು ಹಾಗೂ ಅದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ಯಾರೂ ಅರ್ಜಿ ಸಲ್ಲಿಸದಿದ್ದಲ್ಲಿ ಬೇರೆ ಗ್ರಾಮ ಪಂಚಾಯಿತಿಯ ವಿಕಲಚೇತನರಿಗೆ ಅವಕಾಶ ಕಲ್ಪಿಸಲಾಗುವುದು. ಅರ್ಜಿದಾರರು 18ರಿಂದ 45ರ ವಯೋಮಿತಿಯ ಆರೋಗ್ಯವಂತರಾಗಿರಬೇಕು. ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು. ಅಂಗವಿಕಲರಾಗಿರಬೇಕು, ಅಂಧರಿಗೆ ಭಾಗಶಃ ಶ್ರವಣದೋಷವುಳ್ಳವರಿಗೆ (ಮೈಲ್ ಮತ್ತು ಮಾಡರೇಟ್) ಮತ್ತು ದೈಹಿಕ ಅಂಗವಿಕಲರಿಗೆ ಅವಕಾಶ ಕಲ್ಪಿಸಲಾಗುವುದು.

      ಮೂರು ರೀತಿಯ ಅಂಗವಿಕಲರಿಗೆ ಸಮನಾಗಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ಆಯ್ಕೆ ಮಾಡಬೇಕು. ಒಂದು ವರ್ಗದ ಅಂಗವಿಕಲರು ಆಯ್ಕೆಗೆ ಲಭ್ಯವಿಲ್ಲದಿದ್ದಲ್ಲಿ ಇನ್ನೊಂದು ವರ್ಗದಲ್ಲಿರುವ ಅಂಗವಿಕಲ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಅಂಗವಿಕಲತೆಯು ಶೇ.40 ಕ್ಕಿಂತ ಹೆಚ್ಚು ಹಾಗೂ ಶೇ. 75 ಕ್ಕಿಂತ ಕಡಿಮೆ ಇದ್ದು, ವೈದ್ಯಕೀಯ ಪ್ರಮಾಣ ಪತ್ರ, ಗುರುತಿನ ಚೀಟಿಯ ದಾಖಲೆ ಹೊಂದಿರಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಿ ಮಾಹಿತಿ ಅಥವಾ ಸೌಲಭ್ಯ ಕಲ್ಪಿಸಲು ಸಮರ್ಥರಾಗಿರಬೇಕು. 

      ಗೌರವಧನ ನೇಮಕಾತಿಯು ಒಂದು ವರ್ಷದ ನಂತರ ಪುನರ್ ಪರಿಶೀಲನೆಗೆ ಒಳಪಟ್ಟಿರುತ್ತದೆ. ಪುನರ್ ಪರಿಶೀಲನೆಯಲ್ಲಿ ಕೆಲಸ ಕಾರ್ಯಗಳ ನಿರ್ವಹಣೆ, ಪ್ರಗತಿ, ವಿಕಲಚೇತನರೊಂದಿಗೆ ಸಂಬಂಧ, ವಿವಿಧ ಇಲಾಖೆಗಳೊಂದಿಗೆ, ಸ್ವಯಂ ಸೇವಾ ಸಂಸ್ಥೆ ಸಮುದಾಯದೊಂದಿಗೆ ಇಟ್ಟುಕೊಂಡಿರುವ ಸಂಬಂಧಗಳನ್ನು ಪರಿಶೀಲಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಸರ್ಕಾರ ನಿಗದಿಪಡಿಸಿರುವ ಕರ್ತವ್ಯಗಳನ್ನು ನಿರ್ವಹಿಸಲು ಸಮರ್ಥರೆಂಬ ಬಗ್ಗೆ ಪರಿಶೀಲಿಸಿ ಆಯ್ಕೆ ಮಾಡಲಾಗುವುದು. ಹುದ್ದೆಯು ಗೌರವಧನದ ಆಧಾರದ ಮೇಲೆ ಇರುವುದರಿಂದ ಸೇವೆ ಅಗತ್ಯವಿಲ್ಲವೆಂದು ಕಂಡು ಬಂದಲ್ಲಿ ಕರ್ತವ್ಯದಿಂದ ಬಿಡುಗಡೆ ಮಾಡಬಹುದಾಗಿದೆ. ಗೌರವಧನದ ಆಧಾರದ ಮೇಲೆ ಕೆಲಸ ನಿರ್ವಹಿಸುವುದನ್ನು ಖಾಯಂಗೊಳಿಸುವಂತೆ ಕೋರಲು ಅವಕಾಶವಿರುವುದಿಲ್ಲ.

    ಕಚೇರಿಯಿಂದ ನಿಗದಿತ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಡಿಸೆಂಬರ್ 5ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಗರದ ತಾ.ಪಂ ಕಾರ್ಯಾಲಯದ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನು ಸಂಪರ್ಕಿಸುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ನ. 29ರಂದು ಯಳಂದೂರು ತಾಲೂಕು ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಹಿತರಕ್ಷಣಾ ಸಮಿತಿ ಸಭೆ

       ಚಾಮರಾಜನಗರ, ನವೆಂಬರ್ 21 - ಯಳಂದೂರು ತಾಲೂಕು ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಹಿತರಕ್ಷಣಾ ಸಮಿತಿ ಸಭೆಯು ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 29ರಂದು ಬೆಳಿಗ್ಗೆ 11 ಗಂಟೆಗೆ ಯಳಂದೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. 

     ತಾಲೂಕಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಭೆಗೆ ಆಗಮಿಸಿ ಸೂಕ್ತ ಸಲಹೆಗಳನ್ನು ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಯಳಂದೂರಿನ ಕುಂಬಾರಗುಂಡಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು (ಗ್ರೇಡ್-2), ಕಚೇರಿ ದೂ.ಸಂ 08226-240309 ಸಂಪರ್ಕಿಸುವಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಹಿತರಕ್ಷಣಾ ಸಮಿತಿಯ ಅಧ್ಯಕ್ಷರು ಹಾಗೂ ತಹಶೀಲ್ದಾರ್ ಪ್ರಕಟಣೆಯಲ್ಲಿ ಕೊರಿದ್ದಾರೆ. 

ನ. 22ರಂದು ನಗರದಲ್ಲಿ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ 

     ಚಾಮರಾಜನಗರ, ನವೆಂಬರ್ 21 - ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವತಿಯಿಂದ 2022-23ನೇ ಸಾಲಿನ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನವನ್ನು ನವೆಂಬರ್ 22ರಂದು ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ. 

     ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ವಿಜ್ಞಾನ ವಸ್ತು ಪ್ರದರ್ಶನದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕರು (ಅಭಿವೃದ್ದಿ) ಹಾಗೂ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ನ. 24ರಂದು ಗುಂಡ್ಲುಪೇಟೆ, ಬೇಗೂರು ವ್ಯಾಪ್ತಿಯ ವಿವಿಧೆಡೆ ವಿದ್ಯುತ್ ವ್ಯತ್ಯಯ 

       ಚಾಮರಾಜನಗರ, ನವೆಂಬರ್ 21 :- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಗುಂಡ್ಲುಪೇಟೆ ಮತ್ತು ಬೇಗೂರು ಉಪವಿಭಾಗ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ನವೆಂಬರ್ 24 ರಂದು ಹಮ್ಮಿಕೊಂಡಿರುವುದರಿಂದ ಅಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

     ಗುಂಡ್ಲುಪೇಟೆ, ಭರಗಿ, ಕೋಡಿಹಳ್ಳಿ, ಬೇರಂಬಾಡಿ, ನೆನೆಕಟ್ಟೆ, ವೀರನಪುರ ಮತ್ತು ಬೊಮ್ಮಲಾಪುರ, ಬೆಳವಾಡಿ, ಬಾಚಳ್ಳಿ, ದಾರಿಬೇಗೂರು, ಕೊಡಸೋಗೆ, ಹೆಗ್ಗವಾಡಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. 

      ಹಂಗಳ, ಶಿವಪುರ, ಕಲ್ಲಿಗೌಡನಹಳ್ಳಿ ಎನ್.ಜೆ.ವೈ, ಎಲಚಟ್ಟಿ, ಗೋಪಾಲ್‍ಪುರ ಎನ್.ಜೆ.ವೈ, ದೇವರಹಳ್ಳಿ, ಹೊನ್ನೇಗೌಡನಹಳ್ಳಿ, ಮಲ್ಲಯ್ಯನಪುರ ಮತ್ತು ಬರಗಿ, ಹೊಂಗಹಳ್ಳಿ ಐಪಿ, ಮುಂಟಿಪುರ ಐಪಿ, ಹೆಚ್.ಎಸ್.ಹುಂಡಿ ಎನ್.ಜೆ.ವೈ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. 
      
      ಸಾರ್ವಜನಿಕರು ನಿಗಮದ ಜೊತೆ ಸಹಕರಿಸಬೇಕು. ವಿದ್ಯುತ್ ಸಂಬಂಧಿತ ದೂರು ಮತ್ತು ಸಹಾಯಕ್ಕಾಗಿ ಗ್ರಾಹಕರು ಉಚಿತ ದೂ.ಸಂ 1912 ಸಂಪರ್ಕಿಸುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಪ್ಲಾಸ್ಟಿಕ್ ಕ್ರೇಟ್ಸ್‍ಗೆ ಸಹಾಯಧನ

     ಚಾಮರಾಜನಗರ, ನವೆಂಬರ್ 21 - ತೋಟಗಾರಿಕೆ ಇಲಾಖೆಯಿಂದ 2022-23ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್‍ಕೆವಿವೈ) ಯಡಿ ಪ್ಲಾಸ್ಟಿಕ್ ಕ್ರೇಟ್ಸ್‍ಗೆ ಸಹಾಯಧನ ನೀಡುವ ಕಾರ್ಯಕ್ರಮವನ್ನು ಅನುμÁ್ಠನಗೊಳಿಸಲಾಗುತ್ತಿದೆ. 

     ಯೋಜನೆಯಡಿ ತೋಟಗಾರಿಕೆ ಬೆಳೆಗಳ ಫಸಲಿನಲ್ಲಿ ಹಣ್ಣು, ತರಕಾರಿ ಬೆಳೆ ಕೊಯ್ಲೂತ್ತರ ನಷ್ಟವನ್ನು ತಡೆಗಟ್ಟಲು ಹಾಗೂ ಸಮರ್ಪಕ ಕೊಯ್ಲೂತ್ತರ ನಿರ್ವಹಣೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಪ್ಲಾಸ್ಟಿಕ್ ಕ್ರೇಟ್ಸ್ ಬಳಕೆ ಪ್ರಮುಖ ಪಾತ್ರವಹಿಸುತ್ತದೆ. ಇಲಾಖೆ ಅನುಮೋದಿತ ಕಂಪನಿ, ಸಂಸ್ಥೆಗಳಿಂದ ಮಾತ್ರ ಖರೀದಿಸುವ ಪ್ಲಾಸ್ಟಿಕ್ ಕ್ರೇಟ್ಸ್‍ಗಳಿಗೆ ಎಲ್ಲಾ ವರ್ಗದ ರೈತರಿಗೆ ಶೇ. 50ರ ಸಹಾಯಧನ (ಆರ್‍ಕೆವಿವೈ ಯೋಜನೆಯಡಿ- ಶೇ. 25, ಹೊಂದಾಣಿಕೆ ವೆಚ್ಚ ಸಿಎಚ್‍ಡಿ ಯೋಜನೆಯಡಿ- ಶೇ.25)  ರಂತೆ ಎರಡು ಕಂತುಗಳಲ್ಲಿ ಒಟ್ಟು 7500 ರೂ. ಗಳನ್ನು ಪ್ರತಿ ಹೆಕ್ಟೇರ್ ಗೆ (ಗರಿಷ್ಟ ಎರಡು ಹೆಕ್ಟೇರ್ ಮೀರದಂತೆ) ಸಹಾಯಧನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

     ಸೌಲಭ್ಯಕ್ಕಾಗಿ ಭಾವಚಿತ್ರ, ಪ್ರಸಕ್ತ ಸಾಲಿನ ಪಹಣಿ, ಗಣಕಿಕೃತ ಬೆಳೆ ದೃಡೀಕರಣ, ತೋಟಗಾರಿಕೆ ಬೆಳೆಯಿರುವ ತಾಕಿನ ಪೋಟೊ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಾದಲ್ಲಿ ಜಾತಿ ಪ್ರಮಾಣ ಪತ್ರದೊಂದಿಗೆ ಅಗತ್ಯ ದಾಖಲೆಗಳನ್ನು ತಾಲೂಕಿನ ತೋಟಗಾರಿಕೆ ಇಲಾಖೆಗೆ ಸಲ್ಲಿಸಿ ಅನುಮೋದಿತ ಕಂಪನಿ, ಸಂಸ್ಥೆ ವಿವರವನ್ನು ಪಡೆದು ಪ್ಲಾಸ್ಟಿಕ್ ಕ್ರೇಟ್ಸ್‍ಗಳನ್ನು ಖರೀದಿಸಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ತೋಟಗಾರಿಕೆ ಇಲಾಖೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ವಾಣಿಜ್ಯ ಹಣ್ಣಿನ ಬೆಳೆಗಳ ನಿರ್ವಹಣೆಗೆ ತೋಟಗಾರಿಕೆ ಇಲಾಖೆಯಿಂದ ಸಲಹೆ

      ಚಾಮರಾಜನಗರ, ನವೆಂಬರ್ 21 :- ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್‍ಕೆವಿವೈ) ಯಡಿ 2022-23ನೇ ಸಾಲಿನಲ್ಲಿ ಜಿಲ್ಲೆಯ ವಾಣಿಜ್ಯ ಹಣ್ಣಿನ ಬೆಳೆಗಳಾದ ಮಾವು, ಸೀತಾಫಲ, ಸೀಬೆ, ಸಪೋಟ, ದಾಳಿಂಬೆ, ನಿಂಬೆ, ಗೋಡಂಬಿ ಇತ್ಯಾದಿ ಬೆಳೆಗಳ ಮೇಲಾವರಣ ನಿರ್ವಹಣೆಗೆ ತೋಟಗಾರಿಕೆ ಇಲಾಖೆ ಸಲಹೆ ಮಾಡಿದೆ. 
     ಮಾವು, ಸೀತಾಫಲ, ಸೀಬೆ, ಸಪೋಟ, ದಾಳಿಂಬೆ, ನಿಂಬೆ, ಗೋಡಂಬಿ ಇತ್ಯಾದಿ ಬೆಳೆಗಳನ್ನು ಅಧಿಕ ಸಾಂದ್ರತೆ ನಾಟಿ ಪದ್ದತಿಯಲ್ಲಿ ಬೆಳೆಯಾಲಾಗುತ್ತಿದ್ದು, ಸದರಿ ಪದ್ದತಿಯಲ್ಲಿ ಗಿಡಗಳ ಅಂತರ ಅತಿ ಕಡಿಮೆ ಇರುವುದರಿಂದ ಗಿಡಗಳ ಮೇಲಾವರಣ ನಿರ್ವಹಣೆ ಅತ್ಯಾವಶ್ಯಕವಾಗಿರುತ್ತದೆ. ಇದರಿಂದ ಗುಣಮಟ್ಟದ ಹಣ್ಣುಗಳನ್ನು ಪಡೆಯುವುದಲ್ಲದೆ ತೋಟದ ನಿರ್ವಹಣೆ ಸುಲಭವಾಗಿರುತ್ತದೆ.

     ಮೇಲಾವರಣ ನಿರ್ವಹಣೆಗಳಾದ ಕೀಟರೋಗ ಬಾದಿತ, ನೆಲಕ್ಕೆ ತಾಗುವ ಅನಗತ್ಯ ರೆಂಬೆ, ಕೊಂಬೆಗಳನ್ನು ಕತ್ತರಿಸಬೇಕು, ಸೂರ್ಯನ ಕಿರಣ ಎಲ್ಲಾ ಭಾಗಗಳಿಗೂ ಬೀಳುವಂತೆ ಮಾಡಬೇಕು, ಗಿಡ ಬೆಳೆಯಲು ಆಕಾರ ಕೊಡುವುದು ಪುನಶ್ಚೇತನ ಕೈಗೊಳ್ಳಲು ಇತ್ಯಾದಿ ಚಟುವಟಿಕೆಯನ್ನು ಕೈಗೊಳ್ಳಲು ಸದರಿ ಯೋಜನೆಯಡಿ ಪ್ರತಿ ಫಲಾನುಭವಿಗಳಿಗೆ ಶೇ. 25 ರಂತೆ 10000 ರೂ. ಗಳನ್ನು ಪ್ರತಿ ಹೆಕ್ಟೇರ್ ಗೆ (ಗರಿಷ್ಟ 2 ಹೆಕ್ಟೇರ್ ಗೆ ಮೀರದಂತೆ) ಸಹಾಯಧನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. 

     ಅಧಿಕ ಸಾಂದ್ರತೆ ಪದ್ದತಿಯಲ್ಲಿ ಹಣ್ಣಿನ ಬೆಳೆ ನಾಟಿಮಾಡಿರುವ ಆಸಕ್ತ ರೈತರು ಭಾವಚಿತ್ರ, ಪ್ರಸಕ್ತ ಸಾಲಿನ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್, ತಾಕಿನಲ್ಲಿ ಹಣ್ಣಿನ ಬೆಳೆಯೊಂದಿಗೆ ಛಾಯಚಿತ್ರ, ಗಣಕೀಕೃತ ಬೆಳೆ ದೃಡೀಕರಣ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಾದಲ್ಲಿ ಜಾತಿ ಪ್ರಮಾಣ ಪತ್ರ ಇತ್ಯಾದಿ ದಾಖಲೆಗಳನ್ನು ತಾಲೂಕಿನ ತೋಟಗಾರಿಕೆ ಇಲಾಖೆಗೆ ಸಲ್ಲಿಸಿ ಮಾಹಿತಿ ಪಡೆದು ಯೋಜನೆಯ ಸದುಪಯೋಗಪಡಿಸಿಕೊಳ್ಳುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು