Tuesday, 8 November 2022

08-11-2022 ಚಾಮರಾಜನಗರ ಸುದ್ದಿ

 ಬಾಲಕಾರ್ಮಿಕ ಪದ್ದತಿ ಮುಕ್ತ ಜಿಲ್ಲೆಯಾಗಿಸಲು ಎಲ್ಲರ ಸಹಕಾರ ಅಗತ್ಯ : ನ್ಯಾಯಾಧೀಶರಾದ ಎಂ. ಶ್ರೀಧರ 




      ಚಾಮರಾಜನಗರ, ನವೆಂಬರ್ 08 - ಬಾಲಕಾರ್ಮಿಕ ಪದ್ದತಿಯನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಿ ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಲು ಸಾರ್ವಜನಿಕರು, ಜನಪ್ರತಿನಿಧಿಗಳು, ವಿವಿಧ ಇಲಾಖೆಗಳು ಸೇರಿದಂತೆ ಎಲ್ಲರ ಸಹಕಾರ ಅಗತ್ಯವಾಗಿದೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಎಂ. ಶ್ರೀಧರ ಅವರು ಅಭಿಪ್ರಾಯಪಟ್ಟರು.


     ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆ.ಡಿ.ಪಿ ಸಂಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿμÉೀಧ ಮತ್ತು ನಿಯಂತ್ರಣ ಕಾಯ್ದೆಯ ಸೆಕ್ಷನ್ 17ರಡಿ ನೇಮಕಗೊಂಡಿರುವ ನಿರೀಕ್ಷಕರುಗಳಿಗೆ ಬಾಲಕಾರ್ಮಿಕ ಪದ್ಧತಿ ಹಾಗೂ ಬಾಲ್ಯವಿವಾಹ ಪದ್ಧತಿ ನಿರ್ಮೂಲನೆಯಲ್ಲಿ ಸೆಕ್ಷನ್ 17ರಡಿ ನೇಮಕಗೊಂಡ ನಿರೀಕ್ಷಕರ ಪಾತ್ರ ಹಾಗೂ ಇ ಶ್ರಮ್ ನೋಂದಣಿ ಬಗ್ಗೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.


     ಗ್ರಾಮಗಳಲ್ಲಿ ಬಾಲಕಾರ್ಮಿಕರನ್ನು ಗುರುತಿಸಿ ಅವರಿಗೆ ಪುನರ್ವಸತಿ ಕಲ್ಪಿಸಬೇಕು. ಶಾಲೆಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತಂದು ಶಿಕ್ಷಣ ಕೊಡಿಸಬೇಕು. ಮಾನವ ಕಳ್ಳಸಾಗಣೆಯನ್ನು ತಡೆಯಬೇಕು. ಶೇ.30ರಷ್ಟು ಜನರಿಗೆ ಮಾತ್ರ ಕಾನೂನಿನ ಅರಿವಿದೆ. ಇನ್ನುಳಿದವರಿಗೂ ಕಾನೂನಿನ ಜಾಗೃತಿ ಮೂಡಿಸಿ ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ಕಿತ್ತೊಗೆದು ಜಿಲ್ಲೆಯನ್ನು ಬಾಲಕಾರ್ಮಿಕ ಪದ್ದತಿ ಮುಕ್ತಗೊಳಿಸಲು ಎಲ್ಲರ ಸಹಕಾರ ಅವಶ್ಯವಾಗಿದೆ ಎಂದರು. 


     ಬಾಲಕಾರ್ಮಿಕ ಪದ್ದತಿ ನಿರ್ಮೂಲನೆಗಾಗಿ ಸರ್ಕಾರವು ಸಾಕಷ್ಟು ಕ್ರಿಯಾಶೀಲ ಯೋಜನೆಗಳನ್ನು ಜಾರಿಗೊಳಿಸಿದೆ. ಕಾರ್ಮಿಕರ ಕಲ್ಯಾಣ ಯೋಜನೆ, ಕಾರ್ಯಕ್ರಮಗಳ ಬಗ್ಗೆ ಅರಿವು ಪಡೆದು ಸದುಪಯೋಗ ಮಾಡಿಕೊಳ್ಳುವಲ್ಲಿ ಮುಂದೆ ಬರಬೇಕು. ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಅನುದಾನ ಮೀಸಲಿಟ್ಟಿದೆ. ಸಂಘಟಿತ ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಸೌಲಭ್ಯಗಳನ್ನು ತಲುಪಿಸಲು 13 ಇಲಾಖೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ನ್ಯಾಯಾಧೀಶರಾದ ಶ್ರೀಧರ ಅವರು ತಿಳಿಸಿದರು.


     ಮೈಸೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಾದ ನಾಜಿಯಾ ಸುಲ್ತಾನ ಅವರು ಮಾತನಾಡಿ ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಯಲ್ಲಿ ಗ್ರಾಮಮಟ್ಟದ ಅಧಿಕಾರಿಗಳು ಗ್ರಾಮಪಂಚಾಯಿತಿಯನ್ನು ಬಾಲಕಾರ್ಮಿಕ ಮುಕ್ತಗೊಳಿಸಿ ಮುಂದಿನ ಪೀಳಿಗೆ ಉತ್ತಮ ಭವಿಷ್ಯಕ್ಕಾಗಿ ಮಕ್ಕಳನ್ನು ದೈಹಿಕ, ಮಾನಸಿಕವಾಗಿ ಸದೃಢಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದರು. 


     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಗುಡೂರು ಭೀಮಸೇನ ಅವರು ಮಾತನಾಡಿ ಬಾಲಕಾರ್ಮಿಕ ಪದ್ದತಿ ನಿರ್ಮೂಲನೆಗಾಗಿ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಮೂಡಿಸದಿದ್ದರೆ ಕಾನೂನುಗಳು ಕಾಗದದ ಮೇಲೆ ಮಾತ್ರ ಇರಲಿವೆ. ಅವುಗಳ ಪರಿಣಾಮಕಾರಿ ಅನುಷ್ಠಾನದಿಂದ ಯಾವುದೇ ಸಾಮಾಜಿಕ ಪಿಡುಗುಗಳನ್ನು ತೊಡೆದು ಹಾಕಬಹುದು ಎಂದು ತಿಳಿಸಿದರು. 

     ಮಹಿಳಾ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಶೇಖರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ. ಮಹದೇವಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಕೆ.ಬಿ. ಪ್ರಭುಸ್ವಾಮಿ, ಕಾರ್ಮಿಕ ನಿರೀಕ್ಷಕರಾದ ವೀಣಾ, ಕೊಳ್ಳೇಗಾಲ ವೃತ್ತದ ಕಾರ್ಮಿಕ ನಿರೀಕ್ಷಕರಾದ ಚಂದ್ರು, ಗುಂಡ್ಲುಪೇಟೆ ವೃತ್ತದ ನಾರಾಯಣಮೂರ್ತಿ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು. 


     ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕರಾದ ಎಂ. ಮಹೇಶ್ ಅವರು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿμÉೀಧ ಮತ್ತು ನಿಯಂತ್ರಣ ಕಾಯ್ದೆಯ ಸೆಕ್ಷನ್ 17ರಡಿ ನೇಮಕಗೊಂಡಿರುವ ನಿರೀಕ್ಷಕರುಗಳಿಗೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೋವಿಂದ ಅವರು ಬಾಲ್ಯವಿವಾಹ ಪದ್ಧತಿ ನಿರ್ಮೂಲನೆಯಲ್ಲಿ ಸೆಕ್ಷನ್ 17ರಡಿ ನೇಮಕಗೊಂಡ ನಿರೀಕ್ಷಕರ ಪಾತ್ರ ಹಾಗೂ ಇ ಶ್ರಮ್ ನೋಂದಣಿ ಬಗ್ಗೆ ಮಾಹಿತಿ ನೀಡಿದರು. 


     ಕಾರ್ಯಕ್ರಮ ಬಳಿಕ ಜಿಲ್ಲೆಯಾದ್ಯಂತ 10 ದಿನಗಳ ಕಾಲ ಸಂಚರಿಸಿ ಇ-ಶ್ರಮ್ ನೋಂದಣಿ ಬಗ್ಗೆ ಅರಿವು ಮೂಡಿಸುವ ಪ್ರಚಾರ ವಾಹನಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ ಅವರು ಸೇರಿದಂತೆ ಗಣ್ಯರು ಚಾಲನೆ ನೀಡಿದರು.  


------


ನವೆಂಬರ್ 12ರಂದು ಮೆಗಾ ಲೋಕ್ ಅದಾಲತ್ : ರಾಜಿ ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥಕ್ಕೆ ಅವಕಾಶ-ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ 


       ಚಾಮರಾಜನಗರ, ನವೆಂಬರ್ 08 - ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಶೀಘ್ರ ಇತ್ಯರ್ಥಪಡಿಸುವ ಸಲುವಾಗಿ ಚಾಮರಾಜನಗರ ಜಿಲ್ಲೆಯಲ್ಲಿ ನವೆಂಬರ್ 12ರಂದು ಮೆಗಾ ಲೋಕ್ ಅದಾಲತ್ ಅನ್ನು ನಡಸಲಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ತಿಳಿಸಿದರು. 


      ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.


     ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು ಮತ್ತು ಕೊಳ್ಳೇಗಾಲದ ನ್ಯಾಯಾಲಯಗಳಲ್ಲಿ ಬೈಟಕ್‍ಗಳನ್ನು ಏರ್ಪಡಿಸಿ ಸಂಧಾನಕಾರರನ್ನು ನೇಮಿಸಿ ಆ ಮೂಲಕ ಲೋಕ್ ಅದಾಲತ್ ಅನ್ನು ಆಯಾ ನ್ಯಾಯಾಲಯದಲ್ಲಿ ನವೆಂಬರ್ 12ರಂದು ನಡೆಸಲಾಗುತ್ತದೆ. ಈ ಮೆಗಾ ಲೋಕ್ ಅದಾಲತ್ ಗೆ ಸಂಬಂಧಪಟ್ಟ ವಕೀಲರು, ಕಕ್ಷಿದಾರರು ತಮ್ಮ ಸಹಕಾರವನ್ನು ನೀಡಿದ್ದಲ್ಲಿ ಸಂಧಾನಕಾರರು ನೀಡುವ ಸಲಹೆಗಳನ್ನು ಆಲಿಸಿ, ಪರಸ್ಪರ ಒಪ್ಪಿಗೆಯಾದಲ್ಲಿ ಪ್ರಕರಣವನ್ನು ಲೋಕ ಅದಾಲತ್ ನಲ್ಲಿ ಬಗೆಹರಿಸಿಕೊಳ್ಳಬಹುದು.  ಇದರಿಂದ ಕಕ್ಷಿದಾರರ ಸಮಯ ಮತ್ತು ಹಣ ಉಳಿತಾಯವಾಗುತ್ತದೆ ಮತ್ತು ಪಕ್ಷಾಕಾರರ ನಡುವೆ ಬಾಂಧವ್ಯ ಚೆನ್ನಾಗಿರುತ್ತದೆ ಎಂದರು.

    

     ಲೋಕ್ ಅದಾಲತ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳನ್ನು ಹೊರತುಪಡಿಸಿ, ಇತರೆ ಯಾವುದೇ ರೀತಿಯ ಸಿವಿಲ್ ಪ್ರಕರಣಗಳು, ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ದಾಂಪತ್ಯ ಹಕ್ಕುಗಳ ಪುನರ್ ಸ್ಥಾಪನೆ, ಜೀವನಾಂಶ, ಮಕ್ಕಳ ಸಂರಕ್ಷಣೆಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳು, ಮೋಟಾರ್ ವಾಹನ ಅಪಘಾತಕ್ಕೆ ಸಂಬಂಧಪಟ್ಟ ಪ್ರಕರಣಗಳು, ಕೈಗಾರಿಕಾ ವಿವಾದ ಕಾಯ್ದೆ ಅಡಿಯಲ್ಲಿರುವ ಪ್ರಕರಣಗಳು ಹಾಗೂ ಇತರೆ ಎಲ್ಲಾ ಸ್ವರೂಪದ ಪ್ರಕರಣಗಳು ಮತ್ತು ರಾಜಿ ಯೋಗ್ಯ ಕ್ರಿಮಿನಲ್ ಪ್ರಕರಣಗಳು, ವಿಶೇಷ ಕಾನೂನಿನಿಂದ ಶಿಕ್ಷಿಸಲ್ಪಡುವ ಅಪರಾಧಗಳಾದ ಚೆಕ್ಕು ಅಮಾನ್ಯ ಪ್ರಕರಣಗಳು, ಕಾರ್ಮಿಕ ಕಾಯ್ದೆಯಲ್ಲಿ ಬರುವಂತಹ ಪ್ರಕರಣಗಳು, ವಿದ್ಯುಚ್ಛಕ್ತಿ ಕಾಯ್ದೆ ಅಡಿಯಲ್ಲಿ ವಿದ್ಯುತ್ ಕಳವಿಗೆ ಸಂಬಂಧಿಸಿದ ಪ್ರಕರಣಗಳು, ಅಕ್ರಮ ಕಲ್ಲು, ಮರಳು ಸಾಗಾಣಿಕೆಗೆ ಸಂಬಂಧಪಟ್ಟ ಅಪರಾಧಗಳು, ಇತರೆ ಯಾವುದೇ ರಾಜೀ ಯೋಗ್ಯ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳಬಹುದು. ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಸಹ ಲೋಕ್ ಅದಾಲತ್ ನಲ್ಲಿ ರಾಜಿ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು. 


      ಯಾವುದೇ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ರಾಜಿ ಯೋಗ್ಯ ಪ್ರಕರಣಗಳಲ್ಲಿ ಪಕ್ಷಕಾರರು ಸಂಬಂಧಪಟ್ಟ ನ್ಯಾಯಾಲಯಕ್ಕೆ ನವೆಂಬರ್ 12ರಂದು ನಡೆಯಲಿರುವ ಲೋಕ್ ಅದಾಲತ್ ಗೆ ಪ್ರಕರಣವನ್ನು ವರ್ಗಾಯಿಸಲು ಮನವಿ ಸಲ್ಲಿಸಿದ್ದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಲೋಕ ಅದಾಲತ್‍ನ ಮುಂದೆ ಕಳುಹಿಸಲಾಗುತ್ತದೆ. ನಿಗದಿಯಾಗಿರುವ ಪ್ರಕರಣಗಳನ್ನು ಮುಂಗಡ ಅರ್ಜಿಯನ್ನು ಸಲ್ಲಿಸುವ ಮುಖಾಂತರ ಲೋಕ್ ಅದಾಲತ್‍ನಲ್ಲಿ ತರಿಸಿಕೊಂಡು ವ್ಯಾಜ್ಯ ಇತ್ಯರ್ಥಕ್ಕೆ ಪ್ರಯತ್ನಿಸುವ ಅವಕಾಶವನ್ನು ಕೂಡ ಕಲ್ಪಿಸಲಾಗಿದೆ. ಅಲ್ಲದೇ ಪೂರ್ವಭಾವಿ ಸಮಾಲೋಚನಾ ಕೇಂದ್ರಗಳಲ್ಲಿ ನ್ಯಾಯಾಲಯದಿಂದ ಸಾಕಷ್ಟು ಪ್ರಕರಣಗಳು ಪೂರ್ವಭಾವಿ ಸಮಾಲೋಚನೆಯ ಮುಖಾಂತರ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆ ಪ್ರಕಾರ ಕಳೆದ ಒಂದು ತಿಂಗಳಿಂದ ಸಾಕಷ್ಟು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಮತ್ತು ನ್ಯಾಯಾಲಯದ ಬಾಕಿ ಪ್ರಕರಣಗಳನ್ನು ಪೂರ್ವಭಾವಿ ಸಮಾಲೋಚನೆ ಮುಖಾಂತರ ಇತ್ಯರ್ಥಪಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು. 


      ಲೋಕ್ ಅದಾಲತ್‍ನಲ್ಲಿ ಪಕ್ಷಗಾರರು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಿ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಕೊಳ್ಳಬಹುದಾಗಿದೆ. ಮುಂಬರುವ ಲೋಕ ಅದಾಲತ್ ನಲ್ಲಿ ಹೆಚ್ಚೆಚ್ಚು ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವ ಸಲುವಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ವಿಮಾ ಕಂಪನಿಗಳು, ಭೂ ಸ್ವಾಧೀನಾಧಿಕಾರಿಗಳು, ಬ್ಯಾಂಕುಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ, ವಕೀಲರು, ಕಂದಾಯ ಇಲಾಖೆ, ಅಬಕಾರಿ ಇಲಾಖೆ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.


     ಈಗಾಗಲೇ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ ಪ್ರತಿದಿನ ಹಾಗೂ ಎಲ್ಲಾ ನ್ಯಾಯಾಲಯಗಳಲ್ಲಿ ನಿತ್ಯ ಲೋಕ್ ಅದಾಲತ್ ಪೂರ್ವಭಾವಿ ಸಮಾಲೋಚನಾ ಸಭೆಯನ್ನು ಏರ್ಪಡಿಸಿದ್ದು. ರಾಜೀ ಯೋಗ್ಯ ಪ್ರಕರಣಗಳಲ್ಲಿ, ಎರಡೂ ಪಕ್ಷಾಕಾರರನ್ನು ಕರೆಸಿ ಪೂರ್ವಭಾವಿ ಸಮಾಲೋಚನೆಯನ್ನು ನಡೆಸುತ್ತಾ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.  


     ಈ ಹಿಂದೆ ನಡೆದ ಲೋಕ್ ಅದಾಲತ್ ವಕೀಲರು, ಕಕ್ಷಿದಾರರು, ಪೊಲೀಸರು, ವಿಮಾ ಕಂಪನಿಗಳು ಮತ್ತು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಯಶಸ್ವಿಯಾಗಿತ್ತು.  ಇದೇ ನವೆಂಬರ್ 12ರಂದು ನಡೆಯುವ ಲೋಕ್ ಅದಾಲತ್ ನಲ್ಲಿ ಅಂದಾಜು 10 ಸಾವಿರ ಮೇಲ್ಪಟ್ಟ ಪ್ರಕರಣಗಳು ಇತ್ಯರ್ಥವಾಗುವ ನಿರೀಕ್ಷೆ ಹೊಂದಲಾಗಿದೆ. ಪ್ರತಿಯೊಬ್ಬ ಪಕ್ಷಗಾರರು ಲೋಕ್ ಅದಾಲತ್ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ಮನವಿ ಮಾಡಿದರು. 


     ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಎಂ. ಶ್ರೀಧರ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎನ್. ಕೆ. ವಿರೂಪಾಕ್ಷ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

-------


ನ. 9ರಂದು ನಗರದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ, ಕಾನೂನು ಅರಿವು ನೆರವು ಕುರಿತ ವಸ್ತು ಪ್ರದರ್ಶನ


      ಚಾಮರಾಜನಗರ, ನವೆಂಬರ್: ಕರ್ನಾಟಕ ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕುರಿತು ವಸ್ತು ಪ್ರದರ್ಶನವನ್ನು ನವೆಂಬರ್ 9ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಪೇಟೆಪ್ರೈಮರಿ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. 


     ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಅಧ್ಯಕ್ಷತೆ ವಹಿಸುವರು. 


     ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಎಂ. ಶ್ರೀಧರ, ಜಿಲ್ಲಾ ವಕೀಲರ ಸಂಘÀದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ. 

    -------

ಲೇಖನ

(ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ:

    ಬಡತನವೆಂದು ಕಾನೂನಿನಿಂದ ವಂಚಿತರಾಗಬೇಡಿ : ಉಚಿತವಾಗಿ ಕಾನೂನು ನೆರವು ಪಡೆಯಿರಿ


1995 ರಿಂದ ಪ್ರತಿ ವರ್ಷ ನವೆಂಬರ್ 9 ರಂದು ಕಾನೂನು ಸೇವಾ ದಿನವನ್ನು ಆಚರಿಸಲಾಗುತ್ತಿದ್ದು, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಅಧೀನದಲ್ಲಿ ಬರುವ ಎಲ್ಲ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳು ಇದರ ಅಧೀನದ ಎಲ್ಲ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ದೇಶಾದ್ಯಂತ ಹಲವು ಕಾನೂನು ಸಾಕ್ಷರತೆಯ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಪ್ರಾಧಿಕಾರದ ವತಿಯಿಂದ ಸಿಗಬಹುದಾದ ಉಚಿತ ಕಾನೂನು ಸೇವೆಗಳು, ಇದರಿಂದಾಗುವ ಅನುಕೂಲ, ದುರ್ಬಲ ವರ್ಗದವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಕಾನೂನು ಸೇವಾ ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ. ಈ ಕಾರ್ಯಕ್ರಮಗಳಲ್ಲಿ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳೂ ಪಾಲ್ಗೊಳ್ಳುತ್ತವೆ. 


     ಸಮಾಜದ  ದುರ್ಬಲ ವರ್ಗದವರಿಗೆ  ಉಚಿತ ಕಾನೂನು ಸೇವೆಗಳನ್ನು ಒದಗಿಸುವ ಹಾಗೂ  ಉಚಿತ ಸೇವೆಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯನಿರ್ವಹಿಸುತ್ತಿದೆ. ಆದರೆ ಉಚಿತ ಕಾನೂನು ಸೇವೆಗಳು ಯಾರಿಗೆ ಸಿಗುತ್ತವೆ? ಹೇಗೆ  ಸಿಗುತ್ತವೆ? ಎಂಬ ಮಾಹಿತಿಯ ಕೊರತೆಯಿಂದಾಗಿ ಕಾನೂನು ಸೇವಾ ಪ್ರಾಧಿಕಾರದ ಉದ್ದೇಶಗಳು ನಿರೀಕ್ಷಿತ ಮಟ್ಟದಲ್ಲಿ ಈಡೇರುತ್ತಿಲ್ಲ ಎಂಬುದನ್ನು ಮನಗಂಡು  ಸರ್ವೋಚ್ಛ ನ್ಯಾಯಾಲಯವು  ಈ ಬಗ್ಗೆ  ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕಾನೂನು ಸೇವಾ ದಿನವನ್ನು ಆಚರಿಸಲು ನಿರ್ಧರಿಸಿತು. 


ಪ್ರಾಧಿಕಾರದ ಕಾರ್ಯವಿಧಾನ : ಆರ್ಥಿಕವಾಗಿ ಹಿಂದುಳಿದವರು, ಪರಿಶಿಷ್ಟ ಜಾತಿ, ವರ್ಗಗಳು, ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ಅಂಗವಿಕಲರು, ನೈಸರ್ಗಿಕ ವಿಕೋಪಕ್ಕೆ ಒಳಗಾದವರು ಸೇರಿ ಸಮಾಜದ ದುರ್ಬಲ ವರ್ಗಗಳಿಗೆ ಅಗತ್ಯ ಕಾನೂನು ನೆರವು ನೀಡುವುದು ಹಾಗೂ ಉಚಿತ ಕಾನೂನು ಸೇವೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದೇ ಕಾನೂನು ಸೇವೆಗಳ ಪ್ರಾಧಿಕಾರದ ಉದ್ದೇಶವಾಗಿದೆ. ಇಲ್ಲಿ ದೊರೆಯುವ ಕಾನೂನು ಸೇವೆಗಳು ಸಂಪೂರ್ಣ ಉಚಿತವಾಗಿರಲಿವೆ. ಇದಲ್ಲದೆ ಕೊಲೆ, ಅತ್ಯಾಚಾರ, ಮಾನವ ಕಳ್ಳಸಾಗಣೆ, ಆಸಿಡ್ ದಾಳಿಯಂತಹÀ ಅಪರಾಧ ಕೃತ್ಯಗಳ ಸಂತ್ರಸ್ತರಿಗೆ ಸಂತ್ರಸ್ತ ಪರಿಹಾರ ಯೋಜನೆ ಪ್ರಕಾರ ಶೀಘ್ರ ಪರಿಹಾರ ಒದಗಿಸುವ ದಿಸೆಯಲ್ಲೂ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯೋನ್ಮುಖವಾಗಿದೆ. ಸಂತ್ರಸ್ತ ಪರಿಹಾರ ಯೋಜನೆಗೆ ರಾಜ್ಯ ಸರ್ಕಾರ ಪ್ರತಿವರ್ಷ ಹಣ ಬಿಡುಗಡೆ ಮಾಡುತ್ತದೆ. 


ಸಂತ್ರಸ್ತರಿಗೆ ವರವಾದ ಪರಿಹಾರ ಯೋಜನೆ : ಅಪರಾಧ ಕೃತ್ಯಗಳಲ್ಲಿ ಸಂತ್ರಸ್ತರಾದವರಿಗೆ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ 2012 ರಿಂದ ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ ಜಾರಿಗೆ ತಂದಿದೆ. ಅಪರಾಧ ಪ್ರಕರಣಗಳ ಸಂತ್ರಸ್ತರಿಗೆ ಶೀಘ್ರ ಪರಿಹಾರ ಕಲ್ಪಿಸುವ ಜತೆಗೆ ಅವರಲ್ಲಿ ನೈತಿಕ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತರಲಾಗಿದ್ದು, ವರ್ಷದಿಂದ ವರ್ಷಕ್ಕೆ ಪರಿಹಾರ ಕೋರಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಯೋಜನೆಯ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಲು ಮುಂದಾಗಿರುವ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಕ್ರಿಮಿನಲ್ ಪ್ರಕರಣದಲ್ಲಿ ದೂರು ನೀಡಲು ಬರುವ ಸಂತ್ರಸ್ತರಿಗೆ ಪರಿಹಾರ ಯೋಜನೆ ಕುರಿತು ಸೂಕ್ತ ಮಾಹಿತಿ ನೀಡುವಂತೆ ಎಲ್ಲ ಪೋಲೀಸ್ ಠಾಣೆಗಳಿಗೆ ಸೂಚಿಸಿದೆ.


ಯಾರಿಗೆ ಉಚಿತ ಕಾನೂನು ಸೇವೆ : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮಹಿಳೆಯರು, ಮಕ್ಕಳು, ಕೂಲಿ ಕಾರ್ಮಿಕರು, ಅಂಗವಿಕಲರು, ಮಾನಸಿಕ ಅಸ್ವಸ್ಥರು, ಭೂಕಂಪ, ಪ್ರವಾಹದಂತಹ ನೈಸರ್ಗಿಕ ವಿಕೋಪಗಳ ಸಂತ್ರಸ್ತರು, ಗುಂಪು ಘರ್ಷಣೆ, ಜನಾಂಗೀಯ ಗಲಭೆಗಳಲ್ಲಿ ಗಾಯಗೊಂಡವರು, ಮಾನವ ಕಳ್ಳಸಾಗಣೆ ಹಾಗೂ ವೇಶ್ಯಾವಾಟಿಕೆಗೆ ಬಲಿಯಾದವರು, ಆರ್ಥಿಕವಾಗಿ ಹಿಂದುಳಿದವರು, ವಾರ್ಷಿಕ ವರಮಾನ 3 ಲಕ್ಷ ರೂಪಾಯಿಗಳಿಗಿಂತ  ಕಡಿಮೆ ಹೊಂದಿರುವ ಸಮಾಜದ ಎಲ್ಲ ದುರ್ಬಲ ವರ್ಗದವರಿಗೆ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಉಚಿತ ಕಾನೂನು ನೆರವು ಹಾಗೂ ಸೇವೆಗಳು ದೊರೆಯುತ್ತವೆ. 


ಲೋಕ ಆದಾಲತ್ : ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಶೀಘ್ರ ಇತ್ಯರ್ಥಪಡಿಸಲೆಂದೇ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಲೋಕ ಆದಾಲತ್ (ಜನತಾ ನ್ಯಾಯಾಲಯ) ಆಯೋಜಿಸಲಾಗುತ್ತದೆ. ಅಪರಾಧ ಪ್ರಕರಣಗಳು. ಸಿವಿಲ್ ವ್ಯಾಜ್ಯಗಳು, ಮೋಟಾರು ಅಪಘಾತ ಪರಿಹಾರ ಪ್ರಕರಣಗಳು, ಬ್ಯಾಂಕ್ ವ್ಯಾಜ್ಯಗಳು, ವಿಮೆ, ಕೌಟುಂಬಿಕ ಪ್ರಕರಣಗಳು ಸೇರಿ ಹಲವು ಪ್ರಕರಣಗಳಲ್ಲಿ ಎರಡೂ ಕಡೆಯವರನ್ನು ಕರೆಸಿ ರಾಜಿ ಸಂಧಾನ ನಡೆಸಿ ಇತ್ಯರ್ಥ ಪಡಿಸಲಾಗುತ್ತದೆ. ಇದರಿಂದ ನ್ಯಾಯಾಲಯಗಳ ಸಮಯದ ಜತೆಗೆ ಸಾರ್ವಜನಿಕರ ಹಣವೂ ಉಳಿತಾಯವಾಗಲಿದೆ.

     ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ಓಂಐSಂ ಒಔಃIಐಇ ಂPP ನ್ನು ಬಿಡುಗಡೆಗೊಳಿಸಿದ್ದು, ಸಾರ್ವಜನಿಕರು ಮೊಬೈಲ್ ಪ್ಲೇ ಸ್ಟೋರ್ ನಲ್ಲಿ ಡೌನ್‍ಲೋಡ್ ಮಾಡಿಕೊಂಡು ಈ ಮೊಬೈಲ್ ಆಪ್ ಮೂಲಕ ಉಚಿತ ಕಾನೂನು ಸಲಹೆ ಹಾಗೂ ನೆರವು ಪಡೆಯಬಹುದಾಗಿದೆ. 


     ಬಡವರಿಗೆ, ಹಿಂದುಳಿದವರಿಗೆ, ಉಚಿತ ಕಾನೂನು ಸೇವೆ ಒದಗಿಸಲು ಕಾರ್ಯನಿರ್ವಹಿಸುತ್ತಿರುವ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಈ ಕುರಿತು ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದೆ. ಕಾನೂನು ಸೇವಾ ದಿನದಂದು ಪ್ರತಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳು ಆಯಾ ಜಿಲ್ಲೆಗಳಲ್ಲಿ ವಿವಿಧ ಕಾರ್ಯಕ್ರಮಗಳು, ಶಿಬಿರಗಳನ್ನು ಆಯೋಜಿಸಿ ಉಚಿತ ಕಾನೂನು ಸೇವೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತದೆ.


      ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಉಚಿತ ಸಹಾಯವಾಣಿ ಸಂಖ್ಯೆ:- 15100, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಉಚಿತ ಸಹಾಯವಾಣಿ ಸಂಖ್ಯೆ:-1800-425-90900 ಇ-ಮೇಲ್,  ಞಚಿಡಿsಟsಚಿ@gmಚಿiಟ.ಛಿom    Weಜsiಣe- ತಿತಿತಿ.ಞsಟsಚಿ.ಞಚಿಡಿ.ಟಿiಛಿ.iಟಿ ಲಭ್ಯವಿದ್ದು ಜನತೆ ಪ್ರಯೋಜನ ಪಡೆಯುವಂತೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್. ಭಾರತಿ ಅವರು ತಿಳಿಸಿದ್ದಾರೆ.  


-----------

ನವೆಂಬರ್ 11ರಂದು ನಗರದಲ್ಲಿ ದಾಸಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮ 


      ಚಾಮರಾಜನಗರ, ನವೆಂಬರ್ 08 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ದಾಸಶ್ರೇಷ್ಠ ಶ್ರೀ ಕನಕದಾಸ ಜಯಂತೋತ್ಸವ ಸಮಿತಿ ಮತ್ತು ಜಿಲ್ಲೆಯ ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ನವೆಂಬರ್ 11ರಂದು ನಗರದಲ್ಲಿ ಆಯೋಜಿಸಲಾಗಿದೆ. 


     ನವೆಂಬರ್ 11ರಂದು ಬೆಳಿಗ್ಗೆ 9.30 ಗಂಟೆಗೆ ನಗರದ ಪ್ರವಾಸಿಮಂದಿರದಲ್ಲಿ ವಿವಿಧ ಕಲಾತಂಡಗಳೊಡನೆ ನಡೆಯಲಿರುವ ಕನಕದಾಸರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. 


     ಮೈಸೂರು ಜಿಲ್ಲೆಯ ಕೆ.ಆರ್. ನಗರದ ಕಾಗಿನೆಲೆ ಕನಕ ಗುರುಪೀಠದ ಶ್ರೀ ಶಿವಾನಂದಪುರಿ ಸ್ವಾಮಿಯವರು ದಿವ್ಯ ಸಾನಿಧ್ಯ ವಹಿಸುವರು. ವಸತಿ, ಮೂಲ ಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು.


     ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್, ಶಾಸಕರಾದ ಆರ್. ನರೇಂದ್ರ, ಎನ್. ಮಹೇಶ್, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ಶಾಸಕರಾದ ಸಿ.ಎಸ್. ನಿರಂಜನಕುಮಾರ್, ಮರಿತಿಬ್ಬೇಗೌಡ, ಡಾ. ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಮಧು ಜಿ. ಮಾದೇಗೌಡ, ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಜಿ. ನಿಜಗುಣರಾಜು, ನಗರಸಭೆ ಅಧ್ಯಕ್ಷರಾದ ಸಿ.ಎಂ. ಆಶಾ, ಉಪಾಧ್ಯಕ್ಷರಾದ ಪಿ. ಸುಧಾ, ಸದಸ್ಯರಾದ ಮಮತ ಬಾಲಸುಬ್ರಮಣ್ಯಂ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. 


     ನಿವೃತ್ತ ಶಿಕ್ಷಕರಾದ ಶಿವಣ್ಣ ಇಂದ್ವಾಡಿ ಅವರು ಮುಖ್ಯ ಭಾಷಣ ಮಾಡುವರು. ಆರ್. ಮಹೇಂದ್ರ ಮತ್ತು ತಂಡದವರು ದಾಸರ ಪದಗಳನ್ನು ಹಾಡುವರು ಎಂದು ಪ್ರಕಟಣೆ ತಿಳಿಸಿದೆ.


ನ. 9ರಂದು ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಜಾಗೃತಿಗಾಗಿ ಸೈಕಲ್ ಜಾಥಾ


       ಚಾಮರಾಜನಗರ, ನವೆಂಬರ್ 08 (ಕರ್ನಾಟಕ ವಾರ್ತೆ):- ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023ರ ಸಂಬಂಧ ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ನವೆಂಬರ್ 9ರಂದು ಬೆಳಿಗ್ಗೆ 8 ಗಂಟೆಗೆ ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಡಳಿತ ಭವನದವರೆಗೆ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  


ನ. 18, 19ರಂದು ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ (ಪರಿಷ್ಕøತ)


     ಚಾಮರಾಜನಗರ, ನವೆಂಬರ್ 08 - ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ನವೆಂಬರ್ 18, 19ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಪರಿಷ್ಕøತ ವಿವರ ಇಂತಿದೆ. 


     ನವೆಂಬರ್ 18ರಂದು ಬೆಳಿಗ್ಗೆ 11.30 ಗಂಟೆಗೆ ಚಾಮರಾಜನಗರ ತಾಲೂಕಿನ ತಮ್ಮಡಹಳ್ಳಿಗೆ ಆಗಮಿಸಿ ಜಿಲ್ಲೆಯಲ್ಲಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಂಬಂಧಿಸಿದಂತೆ ತಾಲೂಕಿನ ತಮ್ಮಡಹಳ್ಳಿ, ಉಡಿಗಾಲ ಹಾಗೂ ಆನೆಮಡುಗಳಲ್ಲಿ ಸ್ಥಳ ಪರಿವೀಕ್ಷಣೆ ನಡೆಸುವರು. ಮಧ್ಯಾಹ್ನ 12.30 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯಲ್ಲಿರುವ ಕೆರೆಗಳಿಗೆ ನೀರು ತುಂಬಿಸುವ ಹಾಗೂ ರೈತರಿಗೆ ಸಂಬಂಧಿಸಿದ ವಿಷಯಗಳ ಕುರಿತು ಸಭೆ ನಡೆಸುವರು. 


     ಮಧ್ಯಾಹ್ನ 1.45 ಗಂಟೆಗೆ ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರದ ಶ್ರೀ ಮಂಟೇಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವರು. ಮಧ್ಯಾಹ್ನ 2.30 ಗಂಟೆಗೆ ಸುವರ್ಣಾವತಿ ಡ್ಯಾಂ ಅತಿಥಿ ಗೃಹದಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳೊಡನೆ ಚರ್ಚೆ ನಡೆಸುವರು. ಸಂಜೆ 4 ಗಂಟೆಗೆ ಕೊಳ್ಳೇಗಾಲಕ್ಕೆ ಆಗಮಿಸಿ ರಾಜೀವ್‍ಗಾಂಧಿ ವಸತಿ ನಿಗಮದ ವತಿಯಿಂದ ಆಶ್ರಯ ಯೋಜನೆಯಡಿ ಫಲಾನುಭವಿಗಳಿಗೆ ಕಾರ್ಯಾದೇಶ ನೀಡುವ ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ವತಿಯಿಂದ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 5.30 ಗಂಟೆಗೆ ಶಿಂಷಾದ ಕೆ.ಎಸ್.ಟಿ.ಡಿ.ಸಿ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡುವರು. ನವೆಂಬರ್ 19ರಂದು ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿಗೆ ತೆರಳುವರು ಎಂದು ಪ್ರಕಟಣೆ ತಿಳಿಸಿದೆ.

ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆಯ ತರಬೇತಿಗೆ ಅರ್ಜಿ ಆಹ್ವಾನ 


       ಚಾಮರಾಜನಗರ, ನವೆಂಬರ್ 08:- ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಹಾಗೂ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ ವತಿಯಿಂದ ಕರ್ನಾಟಕದಲ್ಲಿರುವ ಕನ್ನಡ ಬಾರದ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರಿಗೆ ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ ತರಬೇತಿ ನಡೆಸಲಿದ್ದು, ಅರ್ಜಿ ಆಹ್ವಾನಿಸಲಾಗಿದೆ.


     ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆಗೆ ನಗರಸಭೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ, ಕೆಎಸ್‍ಆರ್‍ಟಿಸಿ, ವಿಶ್ವ ವಿದ್ಯಾಲಯಗಳು, ಶಾಲಾ ಕಾಲೇಜುಗಳು, ಸರ್ಕಾರಿ ಅನುದಾನ ಪಡೆಯುವ ಸಂಸ್ಥೆಗಳ ನೌಕರರು, ರಾಷ್ಟ್ರೀಕೃತ ಬ್ಯಾಂಕುಗಳ ನೌಕರರು ನೋಂದಾಯಿಸಿಕೊಳ್ಳಬಹುದು. ನೊಂದಣಿಗೆ ಯಾವುದೇ ಶುಲ್ಕ ಇರುವುದಿಲ್ಲ. 

      

     ಸರ್ಕಾರಿ ನೌಕರರು ಸಂಪರ್ಕ ಶಿಬಿರ ಹಾಗೂ ಪರೀಕ್ಷೆಗಳಿಗೆ ಹಾಜರಾಗುವಾಗ ಅವರ ಕಚೇರಿ ಗೈರು ಹಾಜರಿಯನ್ನು ಅನ್ಯಕಾರ್ಯ ನಿಮಿತ್ತ ಎಂದು ಪರಿಗಣಿಸಲಾಗುವುದು. ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆಗೆ ನೋಂದಾಯಿಸಿಕೊಂಡು ಉತ್ತೀರ್ಣರಾದವರಿಗೆ ಕರ್ನಾಟಕ ಲೋಕಸೇವಾ ಆಯೋಗದ ಕನ್ನಡ ಪರೀಕ್ಷೆಯಿಂದ ಅಧಿಸೂಚನೆ ಅನ್ವಯ ವಿನಾಯಿತಿ ಇದೆ. 

     

     ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ ತರಬೇತಿಯನ್ನು ಸಾರ್ವಜನಿಕರು ಸಹ ಪಡೆಯಬಹುದಾಗಿದೆ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. 18 ರಿಂದ 50ರ ವಯೋಮಿತಿಯೊಳಗಿರಬೇಕು. ಆಸಕ್ತರು ಭರ್ತಿ ಮಾಡಿದ ಅರ್ಜಿಯ ಜೊತೆಯಲ್ಲಿ 250 ರೂ. ಡಿಮ್ಯಾಂಡ್ ಡ್ರಾಫ್ಟ್ ಕಳುಹಿಸಿಕೊಡಬೇಕು. ನೋಂದಾಯಿತರಿಗೆ 20 ಪಾಠಾವಳಿಗಳನ್ನು ಕಳುಹಿಸಿಕೊಡಲಾಗುವುದು. ತರಬೇತಿ ಮತ್ತು ಸಂಪರ್ಕ ಶಿಬಿರದ ಅಂತ್ಯದಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು.


     ಅರ್ಜಿ ನಮೂನೆ ಮತ್ತು ತರಬೇತಿ ವಿವರಗಳನ್ನು ಪ್ರಭಾರಿ ಅಧಿಕಾರಿ, ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ, ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ, ಮಾನಸ ಗಂಗೋತ್ರಿ ಮೈಸೂರು-570006 (ದೂ.ಸಂ 0821-2345128) ಇವರಿಗೆ 5 ರೂ. ಗಳ ಅಂಚೆ ಚೀಟಿಯನ್ನು ಹಚ್ಚಿದ ಸ್ವ ವಿಳಾಸವುಳ್ಳ ಲಕೋಟೆ ಕಳುಹಿಸಿ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಕೆಗೆ ಡಿಸೆಂಬರ್ 10 ಕಡೆಯ ದಿನವಾಗಿದೆ ಎಂದು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಉಪನಿರ್ದೇಶಕರಾದ ಡಾ. ಪಿ.ಆರ್. ಧಮೇಶ್ ಫರ್ನಾಂಡಿಜ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

No comments:

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು