Friday, 11 November 2022

11-11-2022 ಚಾಮರಾಜನಗರ ಸುದ್ದಿ

 


ತಾರ್ಕಿಕ ಚಿಂತನೆಗಳು, ಕೀರ್ತನೆಗಳ ಮೂಲಕ ಕನಕದಾಸರು ಮನುಕುಲವನ್ನು ಬೆಳಗಿದರು : ವಿ. ಶ್ರೀನಿವಾಸಪ್ರಸಾದ್ 


  

      ಚಾಮರಾಜನಗರ, ನವೆಂಬರ್ 11 - ತಾರ್ಕಿಕ ಚಿಂತನೆಗಳು, ಸಕಾರಾತ್ಮಕ ಕೀರ್ತನೆಗಳ ಮೂಲಕ ಇಡೀ ಮನುಕುಲವನ್ನೇ ಬೆಳಗಿದ ಕನಕದಾಸರು ದಾಸಶ್ರೇóಷ್ಠರಲ್ಲಿ ಅಗ್ರಗಣ್ಯರಾಗಿದ್ದಾರೆ ಎಂದು ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಅವರು ತಿಳಿಸಿದರು. 


     ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಶ್ರೀ ಕನಕದಾಸ ಜಯಂತೋತ್ಸವ ಸಮಿತಿ ಮತ್ತು ಜಿಲ್ಲೆಯ ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ದಾಸಶ್ರೇಷ್ಠ ಶ್ರೀ ಕನಕದಾಸರ 535ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 


     ಸಾಮಾನ್ಯ ಜನರಿಗೆ ಸರಳವಾಗಿ ಅರ್ಥವಾಗುವಂತಹ ಕೀರ್ತನೆಗಳನ್ನು ರಚಿಸಿ ಸಮಾಜವನ್ನು ಸನ್ಮಾರ್ಗದೆಡೆಗೆ ನಡೆಸಿದ ಸಮಾಜ ಸುಧಾರಕರಲ್ಲಿ ಕನಕದಾಸರು ಪ್ರಮುಖರಾಗಿದ್ದಾರೆ. ದೇಶದಲ್ಲಿ ಮಹಾನ್ ಪುರುಷರು, ಚಿಂತಕರು, ಸಾಧುಸಂತರು ಸಾಕಷ್ಟು ವಿಚಾರಧಾರೆಗಳನ್ನು ಬಿತ್ತಿಹೋಗಿದ್ದಾರೆ. ಆದರೆ ಅವರ ಚಿಂತನೆಗಳು ಸಮರ್ಪಕವಾಗಿ ಅನುಷ್ಠಾನವಾಗಿಲ್ಲದಿರುವುದು ವಿಷಾದದ ಸಂಗತಿಯಾಗಿದೆ. ಕಾಲಮಾನ, ನಾಗರೀಕತೆ ಬದಲಾದಂತೆ ನಾವೆಲ್ಲರೂ ಸಹ ಪ್ರಜ್ಞಾವಂತ ನಾಗರಿಕರಾಗಬೇಕಾಗಿದೆ ಎಂದರು.


     ಭಾರತದಲ್ಲಿ ಸಾವಿರಾರು ಜಾತಿ, ಉಪಜಾತಿಗಳಿವೆ. ಇಂದು ಎಲ್ಲೆಡೆ ಜಾತೀ ವೈಭವೀಕರಣವಾಗುತ್ತಿದೆ. ಇದು ಸಲ್ಲದು. ಪ್ರತಿಯೊಬ್ಬರು ಮನುಷ್ಯತ್ವ, ಸಮಾಜದ ಬಗ್ಗೆ ಚಿಂತನೆ ಮಾಡಬೇಕು. ಭಾರತ ದೇಶ ದೊಡ್ಡದು. ಆದರೆ ದೇಶದ ಜನ ದೊಡ್ಡತನವಿಲ್ಲ. ಜಾತೀಯತೆಯ ಮನಸ್ಸುಗಳು ಪರಿವರ್ತನೆಯಾಗಬೇಕು. ಎಲ್ಲರನ್ನು ಪ್ರೀತಿ, ವಿಶ್ವಾಸದಿಂದ ಕಾಣುವ ಮೂಲಕ ಕನಕದಾಸರಿಗೆ ಗೌರವ ಸಲ್ಲಿಸಬೇಕು ಎಂದ ಶ್ರೀನಿವಾಸಪ್ರಸಾದ್ ಅವರು ಜಿಲ್ಲಾಕೇಂದ್ರದಲ್ಲಿ ಕನಕ ಸಮುದಾಯ ಭವನ ನಿರ್ಮಾಣಕ್ಕೆ ಸಂಸದರ ನಿಧಿಯಿಂದ 10 ಲಕ್ಷ ರೂ. ಗಳ ನೀಡಲಾಗುವುದು ಎಂದು ತಿಳಿಸಿದರು. 


     ನಿವೃತ್ತ ಶಿಕ್ಷಕರಾದ ಶಿವಣ್ಣ ಇಂದ್ವಾಡಿ ಅವರು ಮುಖ್ಯ ಭಾಷಣ ಮಾಡಿ ದಾಸಸಾಹಿತ್ಯದ ಪ್ರವರ್ತಕರಾಗಿದ್ದ ಕನಕದಾಸರು ಈ ಜಗತ್ತು ಕಂಡ ಶ್ರೇಷ್ಠಕವಿ, ಭಕ್ತರು, ವಾಗ್ಮೇಯಿ. ಅಖಂಡ ಕರ್ನಾಟಕದ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಶೇಷ ಸಾಹಿತ್ಯ ಪ್ರಾಕಾರ ಎಂದರೇ ಅದು ದಾಸಸಾಹಿತ್ಯ. ಸುಸಂಸ್ಕøತ ಸ್ವಸ್ಥ ಸಮಾಜವನ್ನು ಕಟ್ಟಲು ದಾಸಶ್ರೇಷ್ಠರು ಕೀರ್ತನೆಗಳ ಮೂಲಕ ಆಂದೋಲನವನ್ನು ಪ್ರಾರಂಭಿಸಿದರು ಎಂದರು.


     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಕನಕದಾಸರು ಬಹಳ ಅರ್ಥಗರ್ಭಿತ ಕೀರ್ತನೆಗಳನ್ನು ರಚಿಸಿ ಸಮಾಜವನ್ನು ತಿದ್ದಿ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದವರು. ಅವರ ಕೀರ್ತನೆಗಳ ಸಾರವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು. 


    ಮೈಸೂರು ಜಿಲ್ಲೆಯ ಕೆ.ಆರ್. ನಗರದ ಕಾಗಿನೆಲೆ ಕನಕ ಗುರುಪೀಠದ ಶ್ರೀ ಶಿವಾನಂದಪುರಿ ಸ್ವಾಮಿಯವರು ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.


    ನಗರಸಭೆ ಅಧ್ಯಕ್ಷರಾದ ಸಿ.ಎಂ. ಆಶಾ, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ. ಹೆಚ್ಚುವರಿ ಪೊಲೀಸ್ ವರಿಷ್ಠಧಿಕಾರಿ ಕೆ.ಎಸ್. ಸುಂದರರಾಜು, ಡಿವೈಎಸ್.ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿದೇಶಕರಾದ ಗುರುಲಿಂಗಯ್ಯ, ಸಮಾಜದ ತಾಲೂಕು ಅಧ್ಯಕ್ಷರಾದ ಸಿ.ಎನ್. ಬಾಲರಾಜು, ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು. 


     ಆರಂಭದಲ್ಲಿ ಆರ್. ಮಹೇಂದ್ರ ಮತ್ತು ತಂಡದವರು ನಡೆಸಿಕೊಟ್ಟ ದಾಸರ ಪದಗಳು, ಕೀರ್ತನೆಗಳನ್ನು ಹಾಡಿದರು. 


     ವೇದಿಕೆ ಕಾರ್ಯಕ್ರಮಕ್ಕೂ ಮೊದಲು ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಅಂಗವಾಗಿ ನಗರದ ಪ್ರವಾಸಿಮಂದಿರದಲ್ಲಿ ವಿವಿಧ ಕಲಾತಂಡಗಳೊಡನೆ ಹೊರಟ ಕನಕದಾಸರ ಭಾವಚಿತ್ರದ ಮೆರವಣಿಗೆಗೆ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು. 

------------

ಸತತ ಪರಿಶ್ರಮ ಪ್ರಯತ್ನದಿಂದ ಗುರಿ, ಸ್ಪಷ್ಟತೆ ಹೊಂದಿರಬೇಕು : ಜಿ.ಪಂ. ಸಿ.ಇ.ಒ ಕೆ.ಎಂ. ಗಾಯತ್ರಿ 


      ಚಾಮರಾಜನಗರ, ನವೆಂಬರ್ 11 :- ವಿದ್ಯಾರ್ಥಿ ಜೀವನದಲ್ಲಿ ಸತತ ಪರಿಶ್ರಮ, ನಿರಂತರ ಅಧ್ಯಯನ ಪ್ರಯತ್ನದಿಂದ ಸಾಗುವ ಗುರಿಯೆಡೆಗೆ ವಿದ್ಯಾರ್ಥಿಗಳು ಸ್ಪಷ್ಠತೆಯನ್ನು ಹೊಂದಿರಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ಅಭಿಪ್ರಾಯಪಟ್ಟರು.  


     ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾ ಪಂಚಾಯತ್ ವತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಮತ್ತು ವ್ಯಕ್ತಿತ್ವ ವಿಕಸನ ಕುರಿತು ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  


     ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆಗೈಯಲು ಉತ್ತಮ ಅವಕಾಶಗಳು ಬೇಕಾಗಿವೆ. ವಿಷಯಗಳ ಆಯ್ಕೆಯಲ್ಲಿ ಸ್ಪರ್ಧಾತ್ಮಕತೆ ಇರಬೇಕು. ಕೆಲ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಬರೆದರೆ ಇನ್ನುಳಿದವರು ಖಾಸಗೀ ಕ್ಷೇತ್ರದತ್ತ ಒಲವು ಹೊಂದಿರುತ್ತಾರೆ. ಒಟ್ಟಾರೆ ವಿಷಯಗಳ ಮಾಹಿತಿಯನ್ನು ತಲುಪಿಸುವ ಸಲುವಾಗಿ ಹಾಗೂ ವಿದ್ಯಾರ್ಥಿಗಳ ಬುದ್ದಿಮತ್ತೆಯನ್ನು ಹೆಚ್ಚಿಸುವ ಉದ್ದೇಶದಿಂದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಮತ್ತು ವ್ಯಕ್ತಿತ್ವ ವಿಕಸನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಮಟ್ಟದಲ್ಲಿ ಇದರ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.


     ಮೊಬೈಲ್ ಬಳಕೆಯಿಂದ ಇಂದಿನ ವಿದ್ಯಾರ್ಥಿಗಳಲ್ಲಿ ಆಲೋಚನಾ ಕ್ರಮ ಕಡಿಮೆಯಾಗುತ್ತಿದೆ. ಯಾವುದನ್ನೇ ಆಗಲಿ ಮಿತವಾಗಿ ಬಳಸುವ ಮೂಲಕ ಸಕಾರಾತ್ಮಕ ಚಿಂತನೆಯೊಂದಿಗೆ ವಿದ್ಯಾರ್ಥಿಗಳು ಮುನ್ನಡೆಯಬೇಕು. ವಿಷಯತಜ್ಞರ ಜೊತೆಗೆ ಚರ್ಚಿಸುವ ಮೂಲಕ ಸಕಾರಾತ್ಮಕ ಅರಿವು ಹೊಂದಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ವಿದ್ಯಾರ್ಥಿಗಳು ಉತ್ತಮ ಭವಿಷ್ಯದೊಂದಿಗೆ ಬದುಕು ಕಟ್ಟಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.


     ವಿದ್ಯಾರ್ಥಿನಿಲಯಗಳಲ್ಲಿ ಊಟ, ವಸತಿ, ಇನ್ನಿತರೆ ಮೂಲಸೌಕರ್ಯಗಳೊಂದಿಗೆ ಮಕ್ಕಳ ಜ್ಞಾನಾರ್ಜನೆಗಾಗಿ ಸುವ್ಯಸ್ಥಿತ ಗ್ರಂಥಾಲಯಗಳಿರಬೇಕು. ಮುಂದಿನ ದಿನಗಳಲ್ಲಿ ಗ್ರಂಥಾಲಯಗಳಿಗೆ ಅವಶ್ಯವರುವ ಪುಸ್ತಕಗಳ ಪಟ್ಟಿ ನೀಡಬೇಕು. ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳಿಕೆಗಾಗಿ ಖಾಸಗಿಯಾಗಿ ಕುಳಿತು ಓದಲು ಪ್ರತ್ಯೇಕ ಅಧ್ಯಯನ ಕೊಠಡಿಗಳು ಇರಬೇಕು. ಅಲ್ಲದೆ ವಾರಾಂತ್ಯದಲ್ಲಿ ವಿಷಯತಜ್ಞರ ಪಠ್ಯವಿಷಯಗಳ ಕುರಿತು ಕೂಲಕುಂಶವಾಗಿ ಚರ್ಚಿಸಲು ಅವಕಾಶ ಕಲ್ಪಿಸಲಾಗುತ್ತದೆ. ಈ ನಿಟ್ಟಿನಲ್ಲಿ ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದು ಸಿ.ಇ.ಒ ಗಾಯತ್ರಿ ಅವರು ತಿಳಿಸಿದರು. 


     ಮೈಸೂರಿನ ಕನ್ನಡಪ್ರಭ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರು ಹಾಗೂ ಹಿರಿಯ ಪತ್ರಕರ್ತರು, ಲೇಖಕರಾದ ಅಂಶಿ ಪ್ರಸನ್ನಕುಮಾರ್ ಅವರು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ಇದು ಸ್ಪರ್ಧಾತ್ಮಕ ಯುಗ. ಇಂದು ಯುವಜನತೆ ಸಾಕಷ್ಟು ಉದ್ಯೋಗ ಅವಕಾಶಗಳನ್ನು ಹೊಂದಿದ್ದಾರೆ. ಪ್ರಪಂಚದ ಬೇರೆಬೇರೆ ದೇಶಗಳಲ್ಲಿ ಭಾರತೀಯರು, ಕರ್ನಾಟಕದವರು, ಜಿಲ್ಲೆಯವರು ವಿವಿಧ ಉದ್ಯೋಗಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಸ್ಪರ್ಧಾತ್ಮಕ ಅವಕಾಶಗಳೇ ಕಾರಣವಾಗಿವೆ ಎಂದರು. 


     ಬದಲಾದ ಕಾಲಘಟ್ಟದಲ್ಲಿ ಇಂದು ಪ್ರತಿಯೊಂದು ಹುದ್ದೆಗಳಿಗೂ ಪ್ರವೇಶ ಪರೀಕ್ಷೆ ಇದೆ. ಇದಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಾಗಾರ ವಿದ್ಯಾರ್ಥಿಗಳಿಗೆ ಅತ್ಯಗತ್ಯವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದ ವಿಶ್ವದ ಯಾವುದೇ ಭಾಗದಲ್ಲಿ ಏನೇ ನಡೆದರೂ ಕ್ಷಣಾರ್ಧದಲ್ಲಿ ಎಲ್ಲರಿಗೂ ತಿಳಿಯಲಿದೆ. ಪ್ರಚಲಿತ ವಿದ್ಯಮಾನದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಯುವಜನರಿಗೆ ಸಾಕಷ್ಟು ಅವಕಾಶಗಳಿವೆ. ಸಾಮಾನ್ಯ ಜ್ಞಾನವಿರುವ ಯಾವುದೇ ವ್ಯಕ್ತಿ ಮಾಧ್ಯಮ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.


     ಸಮಾಜ ಹಾಗೂ ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಮಾಧ್ಯಮ ಕ್ಷೇತ್ರದಲ್ಲಿಂದು ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಸ್ವರೂಪ ಬದಲಾಗಿದೆ. ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ಶಿಕ್ಷಣದ ಜೊತೆಗೆ ಕೌಶಲ್ಯಾಭಿವೃದ್ಧಿ ತರಬೇತಿಯು ಅವಶ್ಯವಾಗಿದೆ. ವಿದ್ಯಾರ್ಥಿಗಳು ದಿನಪತ್ರಿಕೆಗಳನ್ನು ಓದುವ ಹವ್ಯಾಸದೊಂದಿಗೆ ಮೊಬೈಲ್, ಟಿ.ವಿ ಬಳಕೆಯನ್ನು ಕಡಿಮೆ ಮಾಡಿ ಗ್ರಂಥಾಲಯಗಳಲ್ಲಿ ಹೆಚ್ಚಿನ ಪುಸ್ತಕಗಳನ್ನು ಓದಿ ವಿಷಯಗಳನ್ನು ಮನನ ಮಾಡಿಕೊಳ್ಳಬೇಕು. ವೈಜ್ಞಾನಿಕ ಹಾಗೂ ವೈಚಾರಿಕ ಮನೋಭಾವಗಳನ್ನು ಬೆಳೆಸಿಕೊಳ್ಳಬೇಕು. ಸಾಮಾಜಿಕ ಸ್ವಾಥ್ಯ ಕಾಪಾಡಿಕೊಂಡು ಸಮಾಜದ ಸತ್ಪ್ರಜೆಗಳಾಗಬೇಕು ಎಂದು ಅಂಶಿ ಪ್ರಸನ್ನಕುಮಾರ್ ಅವರು ತಿಳಿಸಿದರು.  


      ಕಾರ್ಯಾಗಾರದಲ್ಲಿ ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಭೂಗೋಳಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಪಿ.ಎನ್. ಹೇಮಚಂದ್ರ ಅವರು ಉದ್ಯೋಗ ಮಾರ್ಗದರ್ಶನ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಒಂದು ಪರಿಚಯ ಕುರಿತು, ಮೈಸೂರಿನ ಸಿದ್ದಾರ್ಥ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲೀಷ್ ವಿಭಾಗದ ಸಹ ಪ್ರಾಧ್ಯಾಪಕರಾದ ಕೆ.ಎ. ಪ್ರಸನ್ನಕುಮಾರ್ ಅವರು ವ್ಯಕ್ತಿತ್ವ ವಿಕಸನ ಮತ್ತು ಜೀವನ ಕೌಶಲಗಳು ಕುರಿತು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಅನಿತಾ ಅವರು ಕ್ರೀಡಾ ಕ್ಷೇತ್ರ ಕುರಿತು ವಿಷಯ ಮಂಡಿಸಿದರು.


      ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿಂದಿಯಾ, ಇತರರು ಕಾರ್ಯಾಗಾರದಲ್ಲಿ ಹಾಜರಿದ್ದರು.


      ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಮತ್ತು ವ್ಯಕ್ತಿತ್ವ ವಿಕಸನ ಕುರಿತು ಏರ್ಪಡಿಸಲಾಗಿದ್ದ ಕಾರ್ಯಾಗಾರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ವಿಷಯಗ್ರಹಿಕೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಿದ್ದರು. 


                


No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು