ನವೆಂಬರ್ 11ರಂದು ನಗರದಲ್ಲಿ ದಾಸಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮ
ಚಾಮರಾಜನಗರ, ನವೆಂಬರ್ 09- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ದಾಸಶ್ರೇಷ್ಠ ಶ್ರೀ ಕನಕದಾಸ ಜಯಂತೋತ್ಸವ ಸಮಿತಿ ಮತ್ತು ಜಿಲ್ಲೆಯ ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ನವೆಂಬರ್ 11ರಂದು ನಗರದಲ್ಲಿ ಆಯೋಜಿಸಲಾಗಿದೆ.
ನವೆಂಬರ್ 11ರಂದು ಬೆಳಿಗ್ಗೆ 9.30 ಗಂಟೆಗೆ ನಗರದ ಪ್ರವಾಸಿಮಂದಿರದಲ್ಲಿ ವಿವಿಧ ಕಲಾತಂಡಗಳೊಡನೆ ನಡೆಯಲಿರುವ ಕನಕದಾಸರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಮೈಸೂರು ಜಿಲ್ಲೆಯ ಕೆ.ಆರ್. ನಗರದ ಕಾಗಿನೆಲೆ ಕನಕ ಗುರುಪೀಠದ ಶ್ರೀ ಶಿವಾನಂದಪುರಿ ಸ್ವಾಮಿಯವರು ದಿವ್ಯ ಸಾನಿಧ್ಯ ವಹಿಸುವರು. ವಸತಿ, ಮೂಲ ಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು.
ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್, ಶಾಸಕರಾದ ಆರ್. ನರೇಂದ್ರ, ಎನ್. ಮಹೇಶ್, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ಶಾಸಕರಾದ ಸಿ.ಎಸ್. ನಿರಂಜನಕುಮಾರ್, ಮರಿತಿಬ್ಬೇಗೌಡ, ಡಾ. ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಮಧು ಜಿ. ಮಾದೇಗೌಡ, ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಜಿ. ನಿಜಗುಣರಾಜು, ನಗರಸಭೆ ಅಧ್ಯಕ್ಷರಾದ ಸಿ.ಎಂ. ಆಶಾ, ಉಪಾಧ್ಯಕ್ಷರಾದ ಪಿ. ಸುಧಾ, ಸದಸ್ಯರಾದ ಮಮತ ಬಾಲಸುಬ್ರಮಣ್ಯಂ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ನಿವೃತ್ತ ಶಿಕ್ಷಕರಾದ ಶಿವಣ್ಣ ಇಂದ್ವಾಡಿ ಅವರು ಮುಖ್ಯ ಭಾಷಣ ಮಾಡುವರು. ಆರ್. ಮಹೇಂದ್ರ ಮತ್ತು ತಂಡದವರು ದಾಸರ ಪದಗಳನ್ನು ಹಾಡುವರು ಎಂದು ಪ್ರಕಟಣೆ ತಿಳಿಸಿದೆ.
ಕರಡು ಮತದಾರರ ಪಟ್ಟಿ ಪ್ರಕಟ : ಹಕ್ಕು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ-ಜಿಲ್ಲಾಧಿಕಾರಿ ಡಿ.ಎಸ್. ರಮೇಶ್
ಚಾಮರಾಜನಗರ, ನವೆಂಬರ್ 09 - ಚುನಾವಣಾ ಆಯೋಗದ ನಿರ್ದೇಶನದಂತೆ ದಿನಾಂಕ: 01.01.2023 ಕ್ಕೆ ಅರ್ಹತಾ ದಿನಾಂಕ ನಿಗದಿಪಡಿಸಿ ಇಂದು ಜಿಲ್ಲೆಯ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಆಕ್ಷೇಪಣೆ ಸಲ್ಲಿಕೆಗೆ ಡಿಸೆಂಬರ್ 8ರವರೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 212344 ಮತದಾರರು, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 211375, ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 203746, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 208389 ಮತದಾರರು ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ 835854 ಮತದಾರರಿದ್ದಾರೆ ಎಂದರು.
ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು 2022ರ ನವೆಂಬರ್ 9ರಿಂದ ಡಿಸೆಂಬರ್ 8ರವರೆಗೂ ಅವಕಾಶವಿರುತ್ತದೆ. ಈ ಅವಧಿಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಬಿಡತಕ್ಕವು, ತಿದ್ದುಪಡಿ ಮತ್ತು ಸ್ಥಳಾಂತರ ಇವುಗಳಿಗೆ ಸಂಬಂಧಿಸಿದಂತೆ, ಸಾರ್ವಜನಿಕರು ಸಂಬಂಧಿಸಿದ ಮತಗಟ್ಟೆ ಮಟ್ಟದ ಅಧಿಕಾರಿಗಳ ಮುಖಾಂತರ ಅಥವಾ ಸಂಬಂಧಿಸಿದ ಉಪ ವಿಭಾಗಾಧಿಕಾರಿಗಳ ಕಚೇರಿ, ತಹಶೀಲ್ದಾರ್ ಕಚೇರಿಗಳಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ನವೆಂಬರ್ 12, ನವೆಂಬರ್ 20, ಡಿಸೆಂಬರ್ 3 ಹಾಗೂ 4 ರಂದು ವಿಶೇಷ ಆಂದೋಲನ ನಡೆಸಲಾಗುತ್ತಿದ್ದು, ಈ ಸಮಯದಲ್ಲಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಹಾಜರಿರುತ್ತಾರೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಬಿಡತಕ್ಕವು, ತಿದ್ದುಪಡಿ ಮತ್ತು ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಬಹುದು ಎಂದರು.
ಡಿಸೆಂಬರ್ 26ರಂದು ಹಕ್ಕು ಮತ್ತು ಆಕ್ಷೇಪಣೆಗಳನ್ನು ಇತ್ಯರ್ಥ ಪಡಿಸಲಾಗುತ್ತದೆ. 2023ರ ಜನವರಿ 5ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆಮನೆ ಸಮೀಕ್ಷೆ ಕಾರ್ಯ ನಡೆಸುತ್ತಿದ್ದು, ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆಮನೆ ಭೇಟಿ ನೀಡುವ ವೇಳೆಯಲ್ಲಿ ಕರಡು ಮತದಾರರ ಪಟ್ಟಿಯಲ್ಲಿರುವ ಮತದಾರರ ಹೆಸರುಗಳನ್ನು ಓದಿ ಸಂಬಂಧಿಸಿದ ಮತದಾರರಿಗೆ ತಿಳಿಸಿ, ಲೋಪದೋಷಗಳು ಕಂಡುಬಂದಲ್ಲಿ ಅವುಗಳನ್ನು ಸರಿಪಡಿಸಲು ಕ್ರಮ ವಹಿಸಲಿದ್ದಾರೆ ಎಂದು ಅವರು ವಿವರಿಸಿದರು.
18 ವರ್ಷ ತುಂಬಿದ ಯುವ ಮತದಾರರ ಹೆಸರುಗಳು ಸೇರ್ಪಡೆಯಾಗದಿದ್ದಲ್ಲಿ, ಅಂತಹವರಿಂದ ನಮೂನೆ-6 ರಲ್ಲಿ ಅರ್ಜಿ ಪಡೆದು, ಮತದಾರರ ಪಟ್ಟಿಗೆ ಹೆಸರು ಸೇರ್ಪಡಿಸಲು ಕ್ರಮ ವಹಿಸಲಾಗುತ್ತದೆ. ಅಲ್ಲದೇ ಸಾರ್ವಜನಿಕರು ವೋಟರ್ ಹೆಲ್ಪ್‍ಲೈನ್ ಆಪ್ (ಗಿಊಂ) ಮುಖಾಂತರವು ಸಹ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಬಹುದು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಭಾರತ ಚುನಾವಣಾ ಆಯೋಗವು ಪ್ರತಿವರ್ಷ 1ನೇ ಜನವರಿಯನ್ನು ಅರ್ಹತಾ ದಿನಾಂಕವೆಂದು ಪರಿಗಣಿಸಿ, ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ಕೈಗೊಳ್ಳುತ್ತಿದೆ. ಪ್ರಸ್ತುತ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ವರ್ಷಕ್ಕೆ 4 ಅವಕಾಶಗಳನ್ನು ನೀಡಿದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು 1ನೇ ಜನವರಿ, 1ನೇ ಏಪ್ರಿಲ್, 1ನೇ ಜುಲೈ ಹಾಗೂ 1ನೇ ಅಕ್ಟೋಬರ್ ಅನ್ನು ಅರ್ಹತಾ ದಿನಾಂಕವಾಗಿ ಪರಿಗಣಿಸಿದೆ. ಈ ಯಾವುದೇ ದಿನಾಂಕದಂದು ಅಥವಾ ಅದಕ್ಕೂ ಮೊದಲು 18 ವರ್ಷ ಪೂರೈಸಿದ್ದರೆ ಹಾಗೂ 17 ವರ್ಷ ತುಂಬಿರುವ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಅರ್ಜಿ ಸಲ್ಲಿಸಬಹುದಾಗಿದೆ. ಸಂಬಂದಪಟ್ಟ ಬಿ.ಎಲ್.ಒ. ಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಅಥವಾ ಗಿಊಂ ಆಪ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದರು.
ಜಿಲ್ಲೆಯಲ್ಲಿ ಕಾಡಂಚಿನ ಗ್ರಾಮಗಳಲ್ಲಿ, ಗುಡ್ಡಗಾಡು ಪ್ರದೇಶಗಳಲ್ಲಿ ವಾಸವಾಗಿರುವವರು, ಅನಿವಾಸಿ ಭಾರತೀಯರು, ಸೇವಾ ಮತದಾರರು, ವಿಶೇಷಚೇತನರು, ತೃತೀಯ ಲಿಂಗಿಗಳು ಮತ್ತು ಲೈಂಗಿಕ ಕಾರ್ಯಕರ್ತೆಯರುಗಳ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಬಗ್ಗೆ ಮನೆಮನೆ ಸಮೀಕ್ಷೆ ವೇಳೆಯಲ್ಲಿ ಪರಿಶೀಲಿಸಿ, ಮತದಾರರ ಪಟ್ಟಿಗೆ ಸೇರ್ಪಡೆಯಾಗದೇ ಇರುವವರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಮ ವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಮತದಾರರ ಪಟ್ಟಿಗೆ ಮತದಾರರ ಆಧಾರ್ ಸಂಖ್ಯೆಯನ್ನು ಜೋಡಿಸುವ ಪ್ರಕ್ರಿಯೆಯು ಚಾಲನೆಯಲ್ಲಿದ್ದು, ಪ್ರಸ್ತುತ ಜಿಲ್ಲೆಯ 835854 ಮತದಾರರ ಪೈಕಿ, 638282 ಜನ ಮತದಾರರ ಆಧಾರ್ ಸಂಖ್ಯೆಯನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದ್ದು, ಶೇ. 76.36 ರಷ್ಟು ಪ್ರಗತಿ ಸಾಧಿಸಲಾಗಿದೆ. ಉಳಿಕೆ 197572 ಮತದಾರರ ಗುರುತಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.
ಪ್ರಕಟಿಸಲಾಗಿರುವ ಕರಡು ಮತದಾರರ ಪಟ್ಟಿಯನ್ನು ಸಾರ್ವಜನಿಕರು ಪರಿಶೀಲಿಸಿ ತಮ್ಮ ಹೆಸರು ಇರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೆ ಹೆಸರು ಕೈಬಿಟ್ಟು ಹೋಗಿದ್ದಲ್ಲಿ, ಸೇರ್ಪಡೆ ಮಾಡಬೇಕಿದ್ದಲ್ಲಿ ಅರ್ಜಿ ಸಲ್ಲಿಸಿ ಸೇರಿಸಲು ಅವಕಾಶವಿದೆ. ಮತದಾರರ ಪಟ್ಟಿ ಪರಿಷ್ಕರಣೆ ಅವಕಾಶವನ್ನು ಸದುಪಯೋಗಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಮನವಿ ಮಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಸುದ್ದಿಗೋಷ್ಠಿಯಲ್ಲಿ ಇದ್ದರು.
ದೋಷರಹಿತ ಮತದಾರರ ಪಟ್ಟಿ ತಯಾರಿಕೆಗೆ ಸಹಕರಿಸಿ : ಜಿಲ್ಲಾಧಿಕಾರಿ ಡಿ.ಎಸ್. ರಮೇಶ್
ಚಾಮರಾಜನಗರ, ನವೆಂಬರ್ 09 - ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಸಿದ್ದತೆ ಕಾರ್ಯವನ್ನು ಅತ್ಯಂತ ಮಹತ್ವದ್ದೆಂದು ಪರಿಗಣಿಸಿದ್ದು, ಶೇ. 100ರಷ್ಟು ದೋಷರಹಿತ ಮತದಾರರ ಪಟ್ಟಿ ತಯಾರಿಕೆಗೆ ರಾಜಕೀಯ ಪಕ್ಷಗಳು ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕರಡು ಮತದಾರರ ಪಟ್ಟಿ ಪ್ರಕಟ ಸಂಬಂಧ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ, ದಿನಾಂಕ: 01.01.2023 ಕ್ಕೆ ಅರ್ಹತಾ ದಿನಾಂಕ ನಿಗದಿಪಡಿಸಿ, ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಡೆಸಲಾಗುತ್ತಿದ್ದು, ಈ ಸಂಬಂಧ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಇಂದು ಪ್ರಚುರ ಪಡಿಸಲಾಗಿದೆ.
ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಆಕ್ಷೇಪಣೆಗಳನ್ನು ಆಯಾ ತಾಲೂಕಿನ ಮತಗಟ್ಟೆಗಳಲ್ಲಿ ಬಿಎಲ್‍ಒ ಮೂಲಕ ಹಾಗೂ ತಾಲೂಕು ಕಚೇರಿಯಲ್ಲಿ ನವೆಂಬರ್ 9ರಿಂದ ಡಿಸೆಂಬರ್ 8ರವರೆಗೆ ಸ್ವೀಕರಿಸಲಾಗುತ್ತದೆ. ಡಿಸೆಂಬರ್ 26ರಂದು ಹಕ್ಕು ಆಕ್ಷೇಣೆಗಳನ್ನು ಇತ್ಯರ್ಥ ಪಡಿಸಲಾಗುತ್ತದೆ. 2023ರ ಜನವರಿ 5ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಯಾವುದೇ ಅರ್ಹ ಮತದಾರರು ಮತದಾನದಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಿ, ಶೇ. 100ರಷ್ಟು ದೋಷರಹಿತ ಮತದಾರರ ಪಟ್ಟಿ ತಯಾರಿಸಬೇಕಾಗಿದೆ. ರಾಜಕೀಯ ಪಕ್ಷಗಳು ಮತದಾರರ ಪಟ್ಟಿ ತಯಾರಿಕೆಗೆ ಸಂಪೂರ್ಣ ಸಹಕಾರ ನೀಡಿ, ಭಾರತ ಚುನಾವಣಾ ಆಯೋಗದ ಮಹತ್ತರವಾದ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಮನವಿ ಮಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಚಿಕ್ಕಮಹದೇವು, ಬ್ಯಾಡಮೂಡ್ಲು ಬಸವಣ್ಣ, ಸಯ್ಯದ್ ಅಕ್ರಂ, ಚುನಾವಣಾ ತಹಶೀಲ್ದಾರ್ ಜಯಪ್ರಕಾಶ್,ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಮತದಾರರ ಪಟ್ಟಿಯ ಪರಿಷ್ಕರಣೆ ಜಾಗೃತಿ : ಜಿಲ್ಲಾಧಿಕಾರಿ, ವಿದ್ಯಾರ್ಥಿಗಳಿಂದ ನಡೆದ ಸೈಕಲ್ ಜಾಥಾ
ಚಾಮರಾಜನಗರ, ನವೆಂಬರ್ 09 ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾಧಿಕಾರಿಯವರಾದ ಡಿ.ಎಸ್. ರಮೇಶ್ ಅವರ ನೇತೃತ್ವದಲ್ಲಿ ಇಂದು ನಗರದಲ್ಲಿ ನಡೆದ ಸೈಕಲ್ ಜಾಥಾ, ಕಾಲ್ನಡಿಗೆ ಜಾಥಾ ವಿಶೇಷ ಗಮನಸೆಳೆಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಜಾಗೃತಿಗಾಗಿ ಆಯೋಜಿಸಿದ್ದ ಸೈಕಲ್ ಜಾಥಾ ಹಾಗೂ ಕಾಲ್ನಡಿಗೆ ಜಾಥಾಗೆ ನಗರದ ಪ್ರವಾಸಿಮಂದಿರದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಎಂ. ಶ್ರೀಧರ ಅವರು ಹಸಿರು ನಿಶಾನೆ ತೋರಿದರು.
ಉದ್ಘಾಟನೆ ವೇಳೆ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ಅರಣ್ಯ ವಾಸಿಗಳು ಸಾಂಪ್ರದಾಯಿಕ ಗೊರುಕನ ನೃತ್ಯ ಪ್ರದರ್ಶನದ ಮೂಲಕ ಮತ್ತಷ್ಟು ಮೆರಗು ನೀಡಿದರು.
ಪ್ರವಾಸಿಮಂದಿರದಿಂದ ಆರಂಭಗೊಂಡ ಸೈಕಲ್ ಜಾಥಾ ಹಾಗೂ ಕಾಲ್ನಡಿಗೆ ಜಾಥಾದಲ್ಲಿ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಗುಡೂರು ಭೀಮಸೇನ ಅವರು ಪಾಲ್ಗೊಂಡರು.
ಪ್ರವಾಸಿಮಂದಿರ, ಅರಣ್ಯ ಕಚೇರಿ ವೃತ್ತ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ರಸ್ತೆ, ಜೈ ಭುವನೇಶ್ವರಿ ವೃತ್ತ ಮೂಲಕ ಸಾಗಿ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿ ಹಾದು ಜಿಲ್ಲಾಡಳಿತ ಭವನದಲ್ಲಿ ಜಾಥಾ ಮುಕ್ತಾಯವಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಇಂದು ಕರಡು ಮತದಾರರ ಪಟ್ಟಿಯನ್ನ ಪ್ರಕಟಿಸಲಾಗಿದೆ. ದಿನಾಂಕ 1-01-2023ಕ್ಕೆ 18 ವರ್ಷ ತುಂಬಿದವರು ಮತದಾನ ಮಾಡಲು ಅವಕಾಶವಿದೆ. ಹೊಸದಾಗಿ ನಿಯಮಗಳಲ್ಲಿ ತಿದ್ದುಪಡಿ ತಂದು ವರ್ಷಕ್ಕೆ 4 ಬಾರಿ ಅಂದರೆ ಜನವರಿ 1, ಏಪ್ರಿಲ್ 1, ಜುಲೈ 1, ಅಕ್ಟೋಬರ್ 1ಕ್ಕೂ 18 ವರ್ಷ ತುಂಬಿದರೂ ಸಹ ಮತದಾರರ ಪಟ್ಟಿಯಲ್ಲಿ ಸೇರಲು ಅವಕಾಶ ಕಲ್ಪಿಸಲಾಗಿದೆ. ಮತದಾರರು ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬ ಬಗ್ಗೆ ಪರಿಶೀಲಿಸಿಕೊಳ್ಳಬೇಕು. ಯಾವುದಾರೂ ಕಾರಣಕ್ಕೆ ಹೆಸರು ಕೈಬಿಟ್ಟು ಹೋಗಿದ್ದಲ್ಲಿ ಮತ್ತೆ ಅರ್ಜಿಯನ್ನು ಕೊಟ್ಟು ಸೇರ್ಪಡೆ ಮಾಡಲು ಅವಕಾಶವಿದೆ ಎಂದರು.
ಮತಗಟ್ಟೆ ಮಟ್ಟದ ಅಧಿಕಾರಿಗಳಲ್ಲಿ (ಬಿಎಲ್‍ಒ), ತಹಶೀಲ್ದಾರ್ ಕಚೇರಿಗಳಲ್ಲಿ, ಚುನಾವಣಾ ಶಾಖೆಗಳಲ್ಲಿ, ಅರ್ಜಿ ಸಲ್ಲಿಸಬಹುದು. ಅಲ್ಲದೇ ಆನ್‍ಲೈನ್ ಮೂಲಕವು ನೇರವಾಗಿ ಅರ್ಜಿ ಸಲ್ಲಿಕೆಗೆ ಚುನಾವಣಾ ಆಯೋಗ ಅವಕಾಶ ನೀಡಿದೆ. ಗರುಡ ಆಪ್, ವಿಹೆಚ್ ಆಪ್, ಮೊಬೈಲ್ ಆಪ್, ವೆಬ್‍ಸೈಟ್ ಸಹ ಇದೆ. ಅದರಲ್ಲಿ ನೇರವಾಗಿ ಮತದಾರರೆ ಸ್ವತಃ ಆಧಾರ್ ಕಾರ್ಡ್, ವಿಳಾಸ ದಾಖಲೆ ಅಪ್ ಲೋಡ್ ಮಾಡುವ ಮೂಲಕ ಹೆಸರು ನೊಂದಾಯಿಸಿಕೊಳ್ಳಬಹುದು. ಈ ಅವಕಾಶವನ್ನು ಜನತೆ ಸದುಪಯೋಗಪಡಿಸಿಕೊಳ್ಳಬೇಕು. ಈ ಬಗ್ಗೆ ಎಲ್ಲರ ಸಹಕಾರದೊಂದಿಗೆ ಅರಿವು ಮೂಡಿಸುವ ಸಲುವಾಗಿಯೇ ಸೈಕಲ್ ಜಾಥಾ, ವಾಕಥಾನ್ ಮೂಲಕ ಪ್ರಚಾರ ಆಂದೋಲನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲ ಜನರಿಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಸೇರಿದಂತೆ ಎಲ್ಲಾ ವಿಷಯಗಳ ಕುರಿತು ಮನವರಿಕೆ ಮಾಡಿಕೊಡಬೇಕು. ಮತದಾನದ ಮಹತ್ವವನ್ನು ಪ್ರತಿಯೊಬ್ಬರಿಗೂ ತಿಳಿಸಿಕೊಡಬೇಕು. ಈ ಮೂಲಕ ಪ್ರಜಾಪ್ರಭುತ್ವ ಬಲಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಸಲಹೆ ಮಾಡಿದರು.
ತಹಶೀಲ್ದಾರ್ ಬಸವರಾಜು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುನಾಥ್, ನಗರಸಭೆ ಆಯುಕ್ತರಾದ ರಾಮದಾಸ್, ಜಿಲ್ಲಾ ಪಂಚಾಯತ್ ಲೆಕ್ಕಾಧಿಕಾರಿ ಹೆಚ್.ಎಸ್. ಗಂಗಾಧರ್ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.
ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ : ಇಲಾಖೆಗಳಿಂದ ಯೋಜನೆ ಕಾರ್ಯಕ್ರಮಗಳ ಮಾಹಿತಿ ವಸ್ತು ಪ್ರದರ್ಶನ
ಚಾಮರಾಜನಗರ, ನವೆಂಬರ್ 09 - ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಹಾಗೂ ಇದರ ಅಂಗವಾಗಿ ನಗರದಲ್ಲಿ ಏರ್ಪಾಡಾಗಿದ್ದ ಕಾನೂನು ಅರಿವು ನೆರವು ಮತ್ತು ವಿವಿಧ ಇಲಾಖೆಗಳ ಯೋಜನೆ ಕಾರ್ಯಕ್ರಮಗಳ ಕುರಿತು ವಸ್ತು ಪ್ರದರ್ಶನ ಯಶಸ್ವಿಯಾಗಿ ನಡೆಯಿತು.
ಕರ್ನಾಟಕ ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಹಾಗೂ ವಸ್ತು ಪ್ರದರ್ಶನಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಹಾಗೂ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಚಾಲನೆ ನೀಡಿದರು.
ವಸ್ತು ಪ್ರದರ್ಶನದ ಇಲಾಖೆಗಳ ಪ್ರತಿ ಮಳಿಗೆಗಳಿಗೂ ಭೇಟಿ ನೀಡಿದ ಜಿಲ್ಲಾಧಿಕಾರಿ ಡಿ. ಎಸ್. ರಮೇಶ್ ಅವರು ಇಲಾಖೆ ನೀಡುತ್ತಿರುವ ಜನೋಪಯೋಗಿ ಯೋಜನೆ ಸೌಲಭ್ಯಗಳ ಮಾಹಿತಿ ಬಗ್ಗೆ ವಿವರ ಪಡೆದುಕೊಂಡರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ತೋಟಗಾರಿಕೆ, ಕೃಷಿ, ಕಾರ್ಮಿಕ ಇಲಾಖೆ, ಪಶುಪಾಲನ ಮತ್ತು ಪಶು ವೈದ್ಯ ಸೇವಾ, ರೇಷ್ಮೆ, ಕೈಮಗ್ಗ ಮತ್ತು ಜವಳಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಸಮಾಜ ಕಲ್ಯಾಣ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ದಿ ನಿಗಮ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಪೊಲೀಸ್ ಇಲಾಖೆ, ಅಂಚೆ ಇಲಾಖೆ, ನಗರಾಭಿವೃದ್ದಿ ಇಲಾಖೆ ಸೇರಿದಂತೆ ಇತರೆ ಇಲಾಖೆಗಳು ತೆರೆದಿರುವ ಮಾಹಿತಿ, ಸೌಲಭ್ಯ ಯೋಜನೆಗಳ ಮಳಿಗೆಗಳನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ನ್ಯಾಯಾಧೀಶರು, ಇತರೆ ಅಧಿಕಾರಿಗಳು ವೀಕ್ಷಿಸಿದರು.
ಇದೇ ವೇಳೆ ಆಯೋಜಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಆರೋಗ್ಯ ತಪಾಸಣಾ ಶಿಬಿರಕ್ಕೂ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ರಕ್ತದಾನಿಗಳಿಗೆ ಪ್ರಶಂಸನಾ ಪತ್ರ ವಿತರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಮಿಕ ಇಲಾಖೆ ವತಿಯಿಂದ ಕಾರ್ಮಿಕರಿಗೆ ಟೂಲ್ ಕಿಟ್ ಗಳನ್ನು ವಿತರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ಅಂಗವಾಗಿ ಸರ್ಕಾರದ ವಿವಿಧ ಇಲಾಖೆಗಳು ಸಾರ್ವಜನಿಕರಿಗೆ ನೀಡುತ್ತಿರುವ ಯೋಜನೆಗಳು, ಸೌಲಭ್ಯಗಳು ಸೇವೆಗಳ ಕುರಿತು ತಿಳಿಸುವ ಸಲುವಾಗಿ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಆರೋಗ್ಯ ಹಿತದೃಷ್ಠಿಯಿಂದಲೂ ಜಾರಿಗೆ ತಂದಿರುವ ಹಲವು ಕಾರ್ಯಕ್ರಮಗಳ ಅರಿವು ಮೂಡಿಸಲಾಗುತಿದೆ. ಅಲ್ಲದೇ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರದಂತಹ ಉಪಯುಕ್ತ ಸೌಲಭ್ಯಗಳಿಗೆ ಏರ್ಪಾಡು ಮಾಡಲಾಗಿದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ಮಾತನಾಡಿ ಕಾನೂನು ಸೇವೆಗಳ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಸರ್ಕಾರದ ಸೇವಾ ಇಲಾಖೆಗಳು ಜನರಿಗೆ ತಲುಪಿಸುತ್ತಿರುವ ಸೌಲಭ್ಯಗಳ ಕುರಿತು ತಿಳಿವಳಿಕೆ ನೀಡುವ ಕಾರ್ಯಕ್ರಮವೂ ಸಹ ಇಂದಿನ ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿ ಇಲಾಖೆಗಳು ಪೂರಕವಾಗಿ ಸ್ಪಂದಿಸಿವೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಎಂ. ಶ್ರೀಧರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್‍ರಾಜ್, ಡಿವೈಎಸ್‍ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಮಲ್ಲಿಕಾರ್ಜುನ್, ಜಿಲ್ಲಾ ಕಾರ್ಮಿಕ ಅಧಿಕಾರಿ ಮಹದೇವಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಗೀತಾಲಕ್ಷ್ಮಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಮುತ್ತುರಾಜ್, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಪ್ರಮೋದ್, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಸುಧಾ, ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಮಾಧ್ಯಮ ಕ್ಷೇತ್ರದ ಅಪ್ರೆಂಟಿಸ್ ತರಬೇತಿಗೆ ಪ.ಜಾ, ಪ.ಪಂಗಡದ ಪತ್ರಿಕೋದ್ಯಮ ಪದವೀಧರರಿಂದ ಅರ್ಜಿ ಆಹ್ವಾನ
ಚಾಮರಾಜನಗರ, ನವೆಂಬರ್ 09 2022-23ನೇ ಸಾಲಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಪದವಿ, ಸ್ನಾತಕೋತ್ತರ ಪದವಿ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಮಾಧ್ಯಮ ಕ್ಷೇತ್ರದ ಒಂದು ವರ್ಷದ ಅವಧಿಯ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ.
ಪರಿಶಿಷ್ಟ ಜಾತಿಯ ವಿಶೇಷ ಘಟಕ ಯೋಜನೆಯಡಿ ಹಾಗೂ ಗಿರಿಜನ ಉಪಯೋಜನೆಯಡಿ ತರಬೇತಿ ನೀಡಲಿದ್ದು, ಚಾಮರಾಜನಗರ ವಾರ್ತಾ ಇಲಾಖೆಯ ಜಿಲ್ಲಾ ಕಚೆÉೀರಿಗೆ ಪರಿಶಿಷ್ಟ ಜಾತಿಗೆ ಸೇರಿದ ಓರ್ವ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಓರ್ವ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ತರಬೇತಿ ಅವಧಿಯಲ್ಲಿ ಪ್ರತಿ ಮಾಹೆಯಾನ ಅಭ್ಯರ್ಥಿಗೆ 15 ಸಾವಿರ ರೂ. ಸ್ಟೈಫಂಡ್ ನೀಡಲಾಗುತ್ತದೆ.
ಕರ್ನಾಟಕ ರಾಜ್ಯದಲ್ಲಿ ಕಾನೂನಾತ್ಮಕವಾಗಿ ಸ್ಥಾಪಿತಗೊಂಡ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತ್ತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. ಕಂಪ್ಯೂಟರ್ ಜ್ಞಾನ, ಕನ್ನಡ ಭಾಷೆ ಬಳಕೆ ಬಗ್ಗೆ ಪ್ರಬುದ್ದತೆ ಇರಬೇಕು. ಮೆರಿಟ್ ಹಾಗೂ ಸಂದರ್ಶನ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು 35 ವರ್ಷ ಮೀರಿರಬಾರದು. ಅಭ್ಯರ್ಥಿಗಳು ಪದವಿ, ಸ್ನಾತ್ತಕೋತ್ತರ ಅಂತಿಮ ವರ್ಷದ ಪದವಿಯ ಅಂಕಪಟ್ಟಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಅಂಕಪಟ್ಟಿಯನ್ನು ನಿರೀಕ್ಷಿಸಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
ನಿಗದಿತ ನಮೂನೆಯ ಅರ್ಜಿಯನ್ನು ಭರ್ತಿ ಮಾಡಿ ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಪದವಿ, ಸ್ನಾತ್ತಕೋತ್ತರ ಪದವಿ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಪಾಸ್‍ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ ಇನ್ನಿತರ ಪೂರಕ ದಾಖಲೆಗಳನ್ನು ಲಗತ್ತಿಸಿ ನವೆಂಬರ್ 15 ರೊಳಗೆ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾ ಭವನ, ಜಿಲ್ಲಾ ಆಡಳಿತ ಭವನದ ಆವರಣ, ಬಿ. ರಾಚಯ್ಯ ಜೋಡಿ ರಸ್ತೆ, ಚಾಮರಾಜನಗರ ಇಲ್ಲಿಗೆ ಸಲ್ಲಿಸಬೇಕು.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾ ಭವನ, ಜಿಲ್ಲಾ ಆಡಳಿತ ಭವನದ ಆವರಣ, ಬಿ. ರಾಚಯ್ಯ ಜೋಡಿ ರಸ್ತೆ, ಚಾಮರಾಜನಗರ ಸಂಪರ್ಕಿಸುವಂತೆ ವಾರ್ತಾ ಇಲಾಖೆ ಪ್ರಕಟಣೆ ತಿಳಿಸಿದೆ.
No comments:
Post a Comment