ಜಿಲ್ಲಾ ನ್ಯಾಯಾಧೀಶರಿಂದ ಜಿಲ್ಲಾ ಪೊಲೀಸ್ ಕ್ರೀಡಾಕೂಟ ಸಮಾರಂಭ ಉದ್ಘಾಟನೆ
ಚಾಮರಾಜನಗರ, ನವೆಂಬರ್ 20 :- ಮೂರು ದಿನಗಳ ಕಾಲ ನಡೆಯಲಿರುವ ಚಾಮರಾಜನಗರ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ನಗರದಲ್ಲಿ ಇಂದು ಚಾಲನೆ ದೊರೆಯಿತು.
ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿಂದು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ 25ನೇ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ಪಾರಿವಾಳ ಹಾಗೂ ಬಲೂನ್‍ಗಳನ್ನು ಆಕಾಶಕ್ಕೆ ಹಾರಿಬಿಡುವ ಮೂಲಕ ಉದ್ಘಾಟಿಸಿ ಕ್ರೀಡಾಜ್ಯೋತಿಯನ್ನು ಸ್ವೀಕರಿಸಿದರು.
ಇದೇ ವೇಳೆ ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ಪೊಲೀಸ್ ಇಲಾಖೆಯಲ್ಲಿ ಪ್ರತಿನಿತ್ಯ ಒತ್ತಡದಲ್ಲಿ ಕೆಲಸ ನಿರ್ವಹಿಸುವ ಪೊಲೀಸರ ದೈಹಿಕ ಹಾಗೂ ಮಾನಸಿಕ ಸಾಮಥ್ರ್ಯ ಹೆಚ್ಚಿಸಲು ಕ್ರೀಡೆ ಸಹಕಾರಿಯಾಗಲಿದೆ ಎಂದರು.
ಬಳಿಕ ವಸತಿ, ಮೂಲ ಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಪುರುಷರ ಹಾಗೂ ಮಹಿಳೆಯರ 200 ಮೀ. ಓಟ ಸ್ಪರ್ಧೆಗಳಿಗೆ ಗನ್‍ಶೂಟ್ (ಸಿಡಿಮದ್ದು ಸಿಡಿಸಿ) ಮಾಡುವ ಮೂಲಕ ಚಾಲನೆ ನೀಡಿದರು.
ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ, ತೃತೀಯ ಸ್ಥಾನ ಪಡೆದ ವೀಜೇತರಿಗೆ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಎಲ್ಲಾ ಕ್ರೀಡಾಳುಗಳು ಕ್ರೀಡಾಸ್ಪೂರ್ತಿ ಮೆರೆಯಬೇಕು. ವಿಜೇತ ಕ್ರೀಡಾಪಟುಗಳು ರಾಜ್ಯಮಟ್ಟದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಜಿಲ್ಲೆಗೆ ಕೀರ್ತಿ ತರಬೇಕು ಎಂದು ಶುಭ ಹಾರೈಸಿದರು.
ಜಿಲ್ಲಾ ಪೊಲೀಸ್ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಭಾಗವಹಿಸಿ ಕ್ರೀಡಾಪಟುಗಳನ್ನು ಆತ್ಮೀಯವಾಗಿ ಮಾತನಾಡಿಸಿ ಉತ್ಸಾಹ ತುಂಬಿ ವಿಜೇತರಿಗೆ ಬಹುಮಾನ ವಿತರಿಸಿದ್ದು ಕ್ರೀಡಾಕೂಟದ ವಿಶೇಷವಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್ ಅವರು ಮಾತನಾಡಿ ಕೌಟುಂಬಿಕ ನೆಮ್ಮದಿಯನ್ನು ಕಡೆಗಣಿಸಿ ಕರ್ತವ್ಯದಲ್ಲಿ ತೊಡಗಬೇಕಾಗಿರುವ ಪೊಲೀಸರು ಮಾನಸಿಕ, ದೈಹಿಕ ಸದೃಢತೆ ಕಾಪಾಡಿಕೊಂಡು ಸ್ಪರ್ಧಾತ್ಮಕ ಮನೋಭಾವ ಮೈಗೂಡಿಸಿಕೊಳ್ಳಲು ಕ್ರೀಡಾಕೂಟ ನೆರವಾಗಲಿದೆ. ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರರಾಜು, ಡಿವೈಎಸ್‍ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ನಾಗರಾಜು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮುಖ್ಯಮಂತ್ರಿಯವರ ಭೇಟಿ ಹಿನ್ನೆಲೆ : ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜನೆ - ಜಿಲ್ಲಾ ಉಸ್ತುವಾರಿ ಸಚಿವರಿಂದ ಸ್ಥಳ ಪರಿಶೀಲನೆ
ಚಾಮರಾಜನಗರ, ನವೆಂಬರ್ 20 :- ಮುಖ್ಯಮಂತ್ರಿಯವರು ಜಿಲ್ಲೆಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜನೆಗಾಗಿ ವಸತಿ, ಮೂಲ ಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಇಂದು ನಗರದಲ್ಲಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.
ನಗರದ ಮೆಡಿಕಲ್ ಕಾಲೇಜು ಬಳಿ ಇರುವ ಜೆ.ಎಸ್.ಎಸ್. ಗೆ ಸೇರಿದ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಿಸಿದರು. ತದನಂತರ ನಗರದ ಪ್ರಮುಖ ಭಾಗದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮುಖ್ಯಮಂತ್ರಿಯವರ ಕಾರ್ಯಕ್ರಮಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣವೇ ಸೂಕ್ತವೆಂದು ಇಲ್ಲಿಯೇ ಕಾರ್ಯಕ್ರಮ ಏರ್ಪಾಡು ಮಾಡಲು ನಿರ್ಧರಿಸಲಾಯಿತು.
ಅಧಿಕಾರಿಗಳೊಂದಿಗೆ ಕ್ರೀಡಾಂಗಣವನ್ನು ವ್ಯಾಪಕವಾಗಿ ವೀಕ್ಷಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಪ್ರಸ್ತುತ ಇರುವ ತೇವಾಂಶ ಹೋಗಲಾಡಿಸುವ ಹಾಗೂ ನೀರು ಹರಿದಿರುವುದನ್ನು ತಡೆಯುವ ಕೆಲಸವನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣ ಎಲ್ಲಾ ರೀತಿಯಲ್ಲಿಯೂ ಕಾರ್ಯಕ್ರಮಕ್ಕೆ ಸೂಕ್ತವಾಗಿದೆ. ಹೀಗಾಗಿ ಕ್ರೀಡಾಂಗಣವನ್ನು ಅಚ್ಚುಕಟ್ಟಾಗಿ ಸಜ್ಜುಗೊಳಿಸಬೇಕು. ಕಾರ್ಯಕ್ರಮದ ಸಿದ್ದತೆಗಾಗಿ ಕೈಗೊಳ್ಳಬೇಕಿರುವ ಕಾರ್ಯವನ್ನು ತುರ್ತಾಗಿ ನಿರ್ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ನಿರ್ದೇಶನ ನೀಡಿದರು.
ಕಾರ್ಯಕ್ರಮದಲ್ಲಿ ಹೆಚ್ಚು ಜನರು ಕುಳಿತುಕೊಳ್ಳಲು ಅನುಕೂಲವಾಗುವ ಶಾಮಿಯಾನ, ಅಸನಗಳು ಸಮಾರಂಭಕ್ಕೆ ಎತ್ತರದ ವೇದಿಕೆ ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ಏರ್ಪಾಡು ಮಾಡಲು ಸಚಿವರು ತಿಳಿಸಿದರು.
ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿಯವರು ಜಿಲ್ಲೆಗೆ ಇದೇ ನವೆಂಬರ್ ಇಲ್ಲವೇ ಡಿಸೆಂಬರ್‍ನಲ್ಲಿ ಭೇಟಿ ನೀಡಲಿರುವುದು ನಿಶ್ಚಿತವಾಗಿದೆ. ಭೇಟಿಯ ದಿನಾಂಕವನ್ನು ಇಂದು ಅಥವಾ ನಾಳೆಯೊಳಗೆ ಪ್ರಕಟಿಸಲಾಗುತ್ತದೆ. ಚಾಮರಾಜನಗರ ಪಟ್ಟಣಕ್ಕೂ ಮುಖ್ಯಮಂತ್ರಿಯವರು ಬರಲಿದ್ದಾರೆ. ಬಳಿಕ ಹನೂರು, ಮಲೆ ಮಹದೇಶ್ವರ ಬೆಟ್ಟಕ್ಕೂ ಭೇಟಿ ನೀಡಲಿದ್ದಾರೆ. ಚಾಮರಾಜನಗರ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲೇ ಮುಖ್ಯಮಂತ್ರಿಯವರ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ ಎಂದರು.
ಕ್ರೀಡಾಂಗಣದಲ್ಲಿ ನೀರು ನಿಂತಿದ್ದು, ತೇವಾಂಶವಿದೆ. ಇದನ್ನು ಸರಿಪಡಿಸಬೇಕಿದೆ. ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ. ಕಾರ್ಯಕ್ರಮ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲೆ ಮಾಡುವುದರಿಂದ ಯೋಜನೆಯ ಫಲಾನುಭವಿಗಳು, ಜನರು ಬರಲು ಅನುಕೂಲವಾಗಲಿದೆ. ಹೀಗಾಗಿ ಕಾರ್ಯಕ್ರಮ ಆಯೋಜನೆಗೆ ಕ್ರೀಡಾಂಗಣವನ್ನು ಸಜ್ಜುಗೊಳಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಎಸ್. ಸುಂದರರಾಜು, ಡಿವೈಎಸ್‍ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ತಹಶೀಲ್ದಾರ್ ಬಸವರಾಜು, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರಾದ ವಿನಯ್‍ಕುಮಾರ್, ಸಹಾಯಕ ಕಾರ್ಯಪಾಲಕ ಎಂಜಿನಿಯರಾದ ಆರ್.ಸಿ. ಕೆಂಪರಾಜು, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಇಬ್ರಾಯಿಂ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯಪಾಲಕ ಎಂಜಿನಿಯರ್ ವಸಂತ್‍ಕುಮಾರ್, ನಗರಸಭೆ ಆಯುಕ್ತರಾದ ರಾಮದಾಸ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.
No comments:
Post a Comment