Tuesday, 29 November 2022

29-11-2022 ಚಾಮರಾಜನಗರ ಸುದ್ದಿ



 ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಸಮರ್ಪಕ ನಿರ್ವಹಣೆಗೆ ಮತದಾರರ ಪಟ್ಟಿ ವೀಕ್ಷಕರಾದ ಬಿ.ಬಿ. ಕಾವೇರಿ ಸೂಚನೆ 


ಚಾಮರಾಜನಗರ, ನವೆಂಬರ್ 29 - ಜಿಲ್ಲಾ ವ್ಯಾಪ್ತಿಯಲ್ಲಿ ನಡೆಸಲಾಗುತ್ತಿರುವ ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಮತದಾರರ ಪಟ್ಟಿ ವೀಕ್ಷಕರು ಹಾಗೂ ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರಾದ ಬಿ.ಬಿ. ಕಾವೇರಿ ಅವರು ಸೂಚನೆ ನೀಡಿದರು. 


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕೈಗೊಂಡಿರುವ ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ  ಅವರು ಮಾತನಾಡಿದರು. 


ದಿನಾಂಕ 1-01-2023ಕ್ಕೆ ಅರ್ಹತಾ ದಿನಾಂಕ ನಿಗದಿಪಡಿಸಿ ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಇದೇ ನವೆಂಬರ್ 9ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಹಕ್ಕು ಆಕ್ಷೇಪಣೆಗಳನ್ನು ಆಯಾ ತಾಲೂಕಿನ ಮತಗಟ್ಟೆಗಳಲ್ಲಿ ಹಾಗೂ ತಾಲೂಕು ಕಚೇರಿಯಲ್ಲಿ ಡಿಸೆಂಬರ್ 8 ರವರೆಗೂ ಸ್ವೀಕರಿಸಲಾಗುತ್ತಿದೆ. ಈ ಕಾರ್ಯವನ್ನು ಅಚ್ಚುಕಟ್ಟಾಗಿ ನಡೆಸುವಂತೆ ಬಿ.ಬಿ. ಕಾವೇರಿ ಅವರು ತಿಳಿಸಿದರು. 


ಹಕ್ಕು ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ಅತ್ಯಂತ ಜಾಗರೂಕತೆಯಿಂದ ದಾಖಲೆಗಳನ್ನು ಸ್ವೀಕರಿಸಿ ಪರಿಶೀಲಿಸಬೇಕು. ಎಲ್ಲಿಯೂ ಯಾವುದೇ ಲೋಪಕ್ಕೆ ಅವಕಾಶವಾಗದ ಹಾಗೇ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಅರ್ಹ ಮತದಾರರು ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ಎಲ್ಲಾ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕು ಎಂದರು. 


18ರಿಂದ 19 ವರ್ಷ ವಯಸ್ಸಿನವರು, ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವ ಸಂಬಂಧ ಹೆಚ್ಚು ಕೇಂದ್ರೀಕರಿಸಬೇಕು. ನೊಂದಣಿಗೆ ವಿಶೇಷ ಗಮನ ಹರಿಸಬೇಕು. ಈ ಬಗ್ಗೆ ಹೆಚ್ಚು ಪ್ರಚುರ ಪಡಿಸಬೇಕು. ಅರ್ಹರೆಲ್ಲರೂ ಮತದಾರರ ಪಟ್ಟಿಗೆ ಸೇರ್ಪಡೆಯಾಗುವ ನಿಟ್ಟಿನಲ್ಲಿ ವಹಿಸಬೇಕಿರುವ ಕ್ರಮಗಳ ಬಗ್ಗೆ ನಿಯಮ ಅನುಸಾರ ಎಲ್ಲವನ್ನೂ ಪಾಲನೆ ಮಾಡಬೇಕು ಎಂದು ಮತದಾರರ ಪಟ್ಟಿ ವೀಕ್ಷಕರು ತಿಳಿಸಿದರು.


ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣಾ ಕಾರ್ಯ ಅತ್ಯಂತ ಮಹತ್ತರ ಜವಾಬ್ದಾರಿಯಾಗಿದೆ. ಈ ಕಾರ್ಯಕ್ಕೆ ಇತರೆ ಇಲಾಖೆಗಳೂ ಸಹ ಅಗತ್ಯ ಸಹಕಾರ ನೀಡಬೇಕು. ಸಾಂವಿಧಾನಿಕ ಹೊಣೆಗಾರಿಕೆಯನ್ನು ಅಧಿಕಾರಿಗಳು ಎಚ್ಚರಿಕೆಯಿಂದ ನಿರ್ವಹಿಸಬೇಕು. ಮತದಾರ ಮಟ್ಟದ ಅಧಿಕಾರಿಗಳು ಸಹ ಪರಿಷ್ಕರಣಾ ಕರ್ತವ್ಯವನ್ನು ಗಂಭೀರವಾಗಿ ಪರಿಗಣಿಸಿ ದೋಷರಹಿತ ಮತದಾರರ ಪಟ್ಟಿ ತಯಾರಿಕೆಗೆ ಪೂರಕವಾಗಿ ಕ್ರಮ ವಹಿಸಬೇಕು ಎಂದು ಮತದಾರರ ಪಟ್ಟಿ ವೀಕ್ಷಕರು ಹಾಗೂ ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರಾದ ಬಿ.ಬಿ. ಕಾವೇರಿ ಅವರು ನಿರ್ದೇಶನ ನೀಡಿದರು.


 ಇದೇ ವೇಳೆ ಮತಗಟ್ಟೆಯ ಮಟ್ಟದ ಅಧಿಕಾರಿ (ಬಿಎಲ್‍ಒ) ಗಳೊಂದಿಗೆ ಸಂವಾದ ನಡೆಸಿದ ಬಿ.ಬಿ. ಕಾವೇರಿ ಅವರು ಕಾರ್ಯನಿರ್ವಹಣೆ ಸಂಬಂಧ ವಿವರ ಪಡೆದುಕೊಂಡರು. ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪೋಸ್ಟರ್ ರಚನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಬಿ.ಬಿ. ಕಾವೇರಿ ಅವರು ಅಭಿನಂದಿಸಿದರು.  


ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಜಿಲ್ಲೆಯಲ್ಲಿ ಕೈಗೊಂಡಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯದ ಕುರಿತು ವಿವರ ಒದಗಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಮತದಾರರ ಜಾಗೃತಿ ಸಂಬಂಧ ಕೈಗೊಂಡಿರುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.


ಉಪವಿಭಾಗಾಧಿಕಾರಿ ಗೀತಾ ಹುಡೇದ, ತಹಶೀಲ್ದಾರರಾದ ಬಸವರಾಜು, ರವಿಶಂಕರ್, ಮಂಜುಳಾ, ಆನಂದಯ್ಯ, ಗ್ರೇಡ್-2 ತಹಶೀಲ್ದಾರ್ ಶಿವರಾಜು, ಚುನಾವಣಾ ತಹಶೀಲ್ದಾರ್ ಜಯಪ್ರಕಾಶ್, ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. 



ಇಲಾಖಾ ಯೋಜನೆ ಕಾರ್ಯಕ್ರಮಗಳ ತ್ವರಿತ ಪ್ರಗತಿಗೆ ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಬಿ.ಬಿ. ಕಾವೇರಿ ತಾಕೀತು


ಚಾಮರಾಜನಗರ, ನವೆಂಬರ್ 29 -- ವಿವಿಧ ಇಲಾಖೆಗಳು ತಮ್ಮ ವ್ಯಾಪ್ತಿಯ ಯೋಜನೆ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯವಹಿಸದೇ ತ್ವರಿತವಾಗಿ ಪ್ರಗತಿ ಸಾಧಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿಯು ಆಗಿರುವ ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರಾದ ಬಿ.ಬಿ.ಕಾವೇರಿ ಅವರು ತಾಕೀತು ಮಾಡಿದರು. 


ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಕುಡಿಯುವ ನೀರು, ಮೂಲಸೌಕರ್ಯ, ಕಟ್ಟಡ ನಿರ್ಮಾಣ ಸೇರಿದಂತೆ ಯಾವುದೇ ಅಭಿವೃದ್ದಿ ಕಾಮಗಾರಿಗಳಿರಲಿ ಆ ಸಂಬಂಧ ಅಂದಾಜು ಪಟ್ಟಿ ಅಂತಿಮಗೊಳಿಸಿ, ಟೆಂಡರ್ ಪ್ರಕ್ರಿಯೆಯನ್ನು ಕೈಗೊಳ್ಳಬೇಕು. ಕಾರ್ಯಾದೇಶ ನೀಡಲು ವಿಳಂಬ ಮಾಡಬಾರದು. ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕು. ಗುಣಮಟ್ಟದ ಕೆಲಸ ಆಗುತ್ತಿದೆಯೇ ಎಂಬ ಬಗ್ಗೆ ಇಲಾಖೆ ಮುಖ್ಯಸ್ಥರೇ ಖುದ್ದಾಗಿ ಪರಿಶೀಲಿಸಬೇಕು ಎಂದು ಜಿಲ್ಲಾ ಪಂಚಾಯತ್ ಆಡಳಿತ ಅಧಿಕಾರಿ ಕಾವೇರಿ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. 


ಅಮೃತ ಮಹೋತ್ಸವದ ಅಂಗವಾಗಿ ಅನುಷ್ಠಾನವಾಗಬೇಕಿರುವ ಯೋಜನೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಅಮೃತ ಸರೋವರ ಇತರೆ ಕಾಮಗಾರಿಗಳಿಗೆ ವಿಶೇಷ ಗಮನ ನೀಡಿ ನಿಗದಿತ ಅವಧಿಯೊಳಗೆ ಪೂರ್ಣವಾಗುವಂತೆ ನೋಡಿಕೊಳ್ಳಬೇಕು. ಇಲಾಖೆ ಅಧಿಕಾರಿಗಳು ಕಾಲಕಾಲಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು ಎಂದರು. 


ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೆಚ್ಚಿನ ಪ್ರಗತಿಯಾಗಬೇಕು. ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿಯೂ ಸಹ ಉದ್ಯೋಗ ಖಾತರಿ ಯೋಜನೆಯಡಿ ಹೆಚ್ಚು ಕೆಲಸಗಳನ್ನು ನಿರ್ವಹಿಸಬೇಕು. ಕೆಲವೇ ಗ್ರಾಮ ಪಂಚಾಯಿತಿಗಳಲ್ಲಿ ಮಾತ್ರ ಕೇಂದ್ರೀಕೃತಗೊಳಿಸಬಾರದು. ಕಡಿಮೆ ಸಾಧನೆ ಇರುವ ಇಲಾಖೆಗಳು ಚುರುಕಾಗಿ ತೊಡಗಿಕೊಂಡು ಪರಿಣಾಮಕಾರಿಯಾಗಿ ಯೋಜನೆ ಅನುಷ್ಠಾನಗೊಳಿಸಬೇಕೆಂದು ಕಾವೇರಿ ಅವರು ತಿಳಿಸಿದರು. 


ವಸತಿ ಯೋಜನೆಯು ಅತ್ಯಂತ ಮಹತ್ವದಾಗಿದೆ. ಮನೆ ಸೌಲಭ್ಯ ತಲುಪಿಸುವ ಯೋಜನೆಯಲ್ಲಿ ಬಾಕಿ ಇರುವ ಕೆಲಸಗಳನ್ನು ವಿಳಂಬ ಮಾಡದೇ ಆಸಕ್ತಿಯಿಂದ ಮಾಡಿ. ಹೊಸದಾಗಿ 2457 ಮನೆಗಳಿಗೆ ಮಂಜೂರಾತಿ ನೀಡಿದ್ದು ಇದಕ್ಕಾಗಿ ಗ್ರಾಮ ಸಭೆ ನಡಾವಳಿ, ಫಲಾನುಭವಿಗಳ ಆದ್ಯತಾ ಪಟ್ಟಿ ಇನ್ನಿತರ ದಾಖಲೆಗಳನ್ನು ಸೂಚಿತ ಅವಧಿಯೊಳಗೆ ಕಳುಹಿಸಿ. ಈ ಕಾರ್ಯದಲ್ಲಿ ನೋಡಲ್ ಅಧಿಕಾರಿಗಳ ಸಹಕಾರ ಪಡೆದು ಎಲ್ಲಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಫಲಾನುಭವಿಗಳಿಗೆ ಸವಲತ್ತು ತಲುಪಿಸಿ ಎಂದರು.


ಹಾಸ್ಟೆಲ್‍ಗಳ ನಿರ್ವಹಣೆ ಉತ್ತಮವಾಗಿರಲಿ. ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾರ್ಯ, ದುರಸ್ತಿ ನಿಧಾನಗತಿಯಲ್ಲಿ ಆಗುವುದ ಬೇಡ. ಕಟ್ಟಡಕ್ಕಾಗಿ ನಿಗದಿಯಾಗಿರುವ ಅನುದಾನ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಲಿ. ಶಾಲೆಗಳಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ, ಎಲ್ಲಿಯೂ ಶಿಕ್ಷಣ ಮೊಟಕುಗೊಳಿಸದಂತೆ ಮಕ್ಕಳನ್ನು ನೋಡಿಕೊಳ್ಳಿ. ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಹೆಚ್ಚಿನ ಮುತುವರ್ಜಿ ವಹಿಸಿ ಎಂದು ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದರು.


ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಮಾತನಾಡಿ ಘನತ್ಯಾಜ್ಯ ಘಟಕ ನಿರ್ವಹಣೆ, ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿ, ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಆಗುತ್ತಿರುವ ಗಿಡಗಳ ನೆಡುವಿಕೆ ಕಾರ್ಯ ಸಮರ್ಪಕವಾಗಿ ಆಗಬೇಕೆಂದು ತಿಳಿಸಿದರು.


ಕೃಷಿ, ಆರೋಗ್ಯ, ತೋಟಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೀನುಗಾರಿಕೆ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ, ಅಲ್ಪಸಂಖ್ಯಾತರ ಕಲ್ಯಾಣ, ರೇಷ್ಮೆ, ವಿವಿಧ ನಿಗಮಗಳು ಸೇರಿದಂತೆ ಇತರೆ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು.  


ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಗುಡೂರು ಭೀಮಸೇನ, ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. 


ಡಿ. 1ರಂದು ನಗರದಲ್ಲಿ ವಿಶ್ವ ಏಡ್ಸ್ ದಿನ ಆಚರಣೆ : ಜಾಥಾ, ವೇದಿಕೆ ಕಾರ್ಯಕ್ರಮ ಆಯೋಜನೆ


ಚಾಮರಾಜನಗರ, ನವೆಂಬರ್ 29 - ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ವತಿಯಿಂದ ಜಿಲ್ಲಾ ಮಟ್ಟದ ವಿಶ್ವ ಏಡ್ಸ್ ದಿನ ಆಚರಣೆ ಕಾರ್ಯಕ್ರಮವನ್ನು ಡಿಸೆಂಬರ್ 1 ರಂದು ನಗರದಲ್ಲಿ ಏರ್ಪಡಿಸಲಾಗಿದೆ.


ವಿಶ್ವ ಏಡ್ಸ್ ದಿನ ಅಂಗವಾಗಿ ಡಿಸೆಂಬರ್ 1 ರಂದು ಬೆಳಿಗ್ಗೆ 9.30 ಗಂಟೆಗೆ ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಜಿಲ್ಲಾಡಳಿತ ಭವನದವರೆಗೆ ಜಾಥಾ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿಯವರು ಜಾಥಾ ಉದ್ಘಾಟಿಸುವರು. ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸಮಾರಂಭ ನಡೆಯಲಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ರವಿಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  


ಹಿಂಗಾರು ಹಂಗಾಮಿಗೆ ಫಸಲ್ ಬಿಮಾ ಯೋಜನೆ : ವಿಮಾ ಕಂತು ಪಾವತಿಗೆ ನವೆಂಬರ್ 30 ಕಡೆಯ ದಿನ 


ಚಾಮರಾಜನಗರ, ನವೆಂಬರ್ 29 - ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು 2022-23ರ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ಅನುಷ್ಟಾನಗೊಳಿಸಲಾಗುತ್ತಿದೆ.  


ಯೋಜನೆಯಡಿ ಹಿಂಗಾರು ಹಂಗಾಮಿನಲ್ಲಿ ಮಳೆ ಆಶ್ರಿತ ಹುರುಳಿ ಬೆಳೆಯನ್ನು ವಿಮೆಗೆ ಒಳಪಡಿಸಿ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹಾಗೂ ಇತರೇ ಬೆಳೆಗಳಾದ ಮುಸುಕಿನ ಜೋಳ, ಈರುಳ್ಳಿ, ಟೊಮೆಟೊ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ ಅಧಿಸೂಚಿಸಲಾಗಿದೆ. 


     ನೀರಾವರಿ ಆಶ್ರಿತ ಮುಸುಕಿನ ಜೋಳಕ್ಕೆ ಪ್ರತಿ ಎಕರೆಗೆ 358 ರೂ., ಮಳೆ ಆಶ್ರಿತ ಮುಸುಕಿನಜೋಳ ಬೆಳೆಗೆ ಪ್ರತಿ ಎಕರೆಗೆ 304 ರೂ., ನೀರಾವರಿ ಆಶ್ರಿತ ಈರುಳ್ಳಿ ಬೆಳೆಗೆ ಪ್ರತಿ ಎಕರೆಗೆ 1518 ರೂ., ಮಳೆ ಆಶ್ರಿತ ಹುರುಳಿ ಬೆಳೆಗೆ ಪ್ರತಿ ಎಕರೆಗೆ 109 ರೂ., ಟೊಮೆಟೊ ಬೆಳೆಗೆ ಪ್ರತಿ ಎಕರೆಗೆ 2388 ರೂ., ವಿಮಾ ಕಂತು ಪಾವತಿಸಬೇಕಿದೆ. ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಈ ಬೆಳೆಗಳಿಗೆ ಬೆಳೆ ವಿಮೆ ಪಾವತಿಸಲು ನವೆಂಬರ್ 30 ಅಂತಿಮ ದಿನವಾಗಿರುತ್ತದೆ.


ರೈತರು ವಿಮಾ ಕಂತನ್ನು ಪಾವತಿಸಿ ನೋಂದಾಯಿಸಿಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರಾದ ಮಧುಸೂದನ್ ಅವರು  ಪ್ರಕಟಣೆಯಲ್ಲಿ ಕೋರಿದ್ದಾರೆ. 




 


No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು