Wednesday, 16 November 2022

16-11-2022 ಚಾಮರಾಜನಗರ ಸುದ್ದಿಗಳು


ಬಿಸಿನೆಸ್ ಕರೆಸ್ಪಾಂಡೆಂಟ್ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ  

 ಚಾಮರಾಜನಗರ, ನವೆಂಬರ್ 16 :- ಜಿಲ್ಲಾ ಪಂಚಾಯಿತಿಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‍ಆರ್‍ಎಲ್‍ಎಂ) ಹಾಗೂ ಎಸ್.ಬಿ.ಐ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಮಿಶನ್ ಒನ್ ಜಿಪಿ ಒನ್ ಬಿಸಿನೆಸ್ ಕರೆಸ್ಪಾಂಡೆಂಟ್ ಸಖಿ ತರಬೇತಿಯ ಬೀಳ್ಕೊಡುಗೆ ಕಾರ್ಯಕ್ರಮ ನಗರದಲ್ಲಿ ಮಂಗಳವಾರ ನಡೆಯಿತು.

ನಗರದ ಜಿಲ್ಲಾ ಎಸ್.ಬಿ.ಐ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರದಲ್ಲಿ 33 ಗ್ರಾಮ ಪಂಚಾಯಿತಿಗಳ ಎನ್.ಆರ್.ಎಲ್.ಎಂ ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ನವೆಂಬರ್ 9ರಿಂದ ನವೆಂಬರ್ 15 ರವರೆಗೆ ಮಿಶನ್ ಒನ್ ಜಿಪಿ ಒನ್ ಬಿಸಿನೆಸ್ ಕರೆಸ್ಪಾಂಡೆಂಟ್ ಸಖಿ ತರಬೇತಿಯನ್ನು ಯಶಸ್ವಿಯಾಗಿ ನಡೆಸಲಾಗಿದೆ.  ಈ ಹಿನ್ನೆಯಲ್ಲಿ ನಗರದ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ಬೀಳ್ಕೊಡುಗೆ ನೀಡಲಾಯಿತು.  ಐಐಬಿಎಫ್ ಪರೀಕ್ಷೆ ಉತ್ತೀರ್ಣರಾದ 33 ಬಿಸಿನೆಸ್ ಕರೆಸ್ಪಾಂಡೆಂಟ್ ಸಖಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ ಗಾಯತ್ರಿ ಅವರು ಪ್ರಮಾಣ ಪತ್ರ ವಿತರಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕೆ.ಎಂ. ಗಾಯಿತ್ರಿ ಅವರು ಎಲ್ಲರಿಗೂ ಬಿಸಿನೆಸ್ ಕರೆಸ್ಪಾಂಡೆಂಟ್ ಸಖಿಗಳ ಸೇವೆ ಸಿಗುವಂತಾಗಬೇಕು. ಗ್ರಾಮೀಣ ಪ್ರದೇಶದಲ್ಲಿನ ಜನರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಹಾಗೂ ಹಣಕಾಸು ಸೇವೆಗಳು, ಸಾಮಾಜಿಕ ಸುರಕ್ಷಾ ಸೇವೆಗಳನ್ನು ಮತ್ತು ಉತ್ತಮ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುಕೂಲವಾಗುವಂತೆ ಹಣಕಾಸು ಸಾಕ್ಷರತೆ ತರಬೇತಿ ನೀಡಲಾಗಿದೆ ಎಂದರು.

ಸ್ವ-ಸಹಾಯ ಗುಂಪಿನ ಸದಸ್ಯರು ಮತ್ತು ಕುಟುಂಬದವರ ಆರ್ಥಿಕ ಮಟ್ಟವನ್ನು ಸುಧಾರಿಸುವ ಸಲುವಾಗಿ ಸ್ವ-ಸಹಾಯ ಗುಂಪಿನ ಸದಸ್ಯರನ್ನು ಬಿಸಿನೆಸ್ ಕರೆಸ್ಪಾಂಡೆಂಟ್ ಸಖಿ, ಡಿಜೀ-ಪೇ ಸಖಿ, ಬ್ಯಾಂಕ್ ಸಖಿ, ವಿಮಾ ಸಖಿಯನ್ನಾಗಿ ಆಯ್ಕೆ ಮಾಡಿ ತರಬೇತಿ ನೀಡುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ ಗಾಯಿತ್ರಿ ಅವರು ಸಲಹೆ ಮಾಡಿದರು.ಜಿಲ್ಲಾ ಎಸ್‍ಬಿಐ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕರಾದ ರಾಕೇಶ್ ಅಕುಲ್, ಎನ್‍ಆರ್‍ಎಲ್‍ಎಂ ಜಿಲ್ಲಾ ವ್ಯವಸ್ಥಾಪಕರಾದ ಎಸ್. ಕಿಶೋರ್ ಕುಮಾರ್, ಜಿಲ್ಲಾ ಎಸ್‍ಬಿಐ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ಕಾರ್ಯಕ್ರಮ ಸಂಯೋಜಕರಾದ ರವಿ, ಜಿಲ್ಲಾ ನಿವೃತ್ತ ಸಹಾಯಕ ಮಹಾ ಪ್ರಬಂಧಕರಾದ ವಿವಿ ಕೃಷ್ಣಮೂರ್ತಿ, ಮಹೇಂದ್ರ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಸಾಂತ್ವನಾ ಮತ್ತು ಸ್ವಾಧಾರ ಗೃಹಗಳಿಗೆ ಜಿ.ಪಂ ಸಿಇಒ ಭೇಟಿ : ಪರಿಶೀಲನೆ 


       ಚಾಮರಾಜನಗರ, ನವೆಂಬರ್ 16 - ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಚಾಮರಾಜನಗರ ಪಟ್ಟಣ ವ್ಯಾಪ್ತಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖಾ ವತಿಯಿಂದ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಸಲಾಗುತ್ತಿರುವ ಸಾಂತ್ವನಾ ಮತ್ತು ಸ್ವಾಧಾರ ಗೃಹಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. 

ಮಹಿಳೆಯರನ್ನು ವಯಸ್ಸಿನ ಆಧಾರದ ಮೇಲೆ ವಿಂಗಡಿಸಿ, ಅವರಿಗೆ ಆಸಕ್ತಿಯಿರುವ ವಿಷಯಗಳ ಕುರಿತು ಕೌಶಲ್ಯಾಭಿವೃದ್ದಿ ತರಬೇತಿ ನೀಡುವ ಮೂಲಕ ಸಮಾಜದಲ್ಲಿ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲೀಕರಣಗೊಳ್ಳಲು ಪ್ರೋತ್ಸಾಹಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ತಿಳಿಸಿದರು. 

ಕೇದ್ರದಲ್ಲಿರುವ ಪ್ರತಿಯೊಬ್ಬರ ಕುರಿತು ಸಂಪೂರ್ಣ ವೈಯಕ್ತಿಕ ವಿವರವುಳ್ಳ ದಾಖಲಾತಿಗಳನ್ನು ನಿರ್ವಹಣೆ ಮಾಡಬೇಕು. ಕೇಂದ್ರದಲ್ಲಿ ಒಂದು ಗ್ರಂಥಾಲಯವನ್ನು ಪ್ರಾರಂಭಿಸಿ ನಿಯತಕಾಲಿಕ ಪುಸ್ತಕಗಳು, ದಿನಪತ್ರಿಕೆಗಳನ್ನು ಒದಗಿಸಿ ಶೈಕ್ಷಣಿಕ ಜ್ಞಾನ ಹೆಚ್ಚಿಸಲು ಒತ್ತು ನೀಡಬೇಕು. ಕುಂದು ಕೊರತೆಗಳನ್ನು ಪರಿಹರಿಸಿ ಅಗತ್ಯ ಮೂಲಸೌಲಭ್ಯ ಒದಗಿಸಲು ಕ್ರಮವಹಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರಾದ ಗೀತಾಲಕ್ಷ್ಮಿ ಅವರಿಗೆ ರವರಿಗೆ ಸೂಚಿಸಿದರು. ಸ್ವಯಂಸೇವಾ ಸಂಸ್ಥೆಯ ಸಿಬ್ಬಂದಿ, ಕೇಂದ್ರದ ಮೇಲ್ವಿಚಾರಕರು ಹಾಜರಿದ್ದರು.



 ಮತದಾರರ ಜಾಗೃತಿಯ ಸ್ಪರ್ಧಾ ಚಟುವಟಿಕೆಗಳಿಗೆ ಚಾಲನೆ 


       ಚಾಮರಾಜನಗರ, ನವೆಂಬರ್ 16- ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿರುವ ಜಿಲ್ಲಾ ಮಟ್ಟದ ಸ್ಪರ್ಧಾ ಚಟುವಟಿಕೆಗಳ ಕಾರ್ಯಕ್ರಮಗಳಿಗೆ ಇಂದು ಚಾಲನೆ ದೊರೆಯಿತು.


      ನಗರದ ಸರ್ಕಾರಿ ಪದವಿಪೂರ್ವ ಬಾಲಕರ ಕಾಲೇಜಿನಲ್ಲಿಂದು ಜಿಲ್ಲಾ ಸ್ವೀಪ್ ಸಮಿತಿ, ಪದವಿಪೂರ್ವ ಶಿಕ್ಷಣ ಇಲಾಖೆ, ಮತದಾರರ ಸಾಕ್ಷರತಾ ಸಂಘ ಸಹಯೋಗದೊಂದಿಗೆ ಪ್ರಬಂಧ, ರಸಪ್ರಶ್ನೆ, ಭಿತ್ತಿಪತ್ರ ರಚನೆ ಸ್ಪರ್ಧಾ ಚಟುವಟಿಕೆಗಳ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ  ಅವರು ಉದ್ಘಾಟಿಸಿದರು. 


      ಇದೇ ವೇಳೆ ಮಾತನಾಡಿದ ಅವರು ವಿದ್ಯಾರ್ಥಿಗಳು ಮತದಾರರ ಪಟ್ಟಿಯಲ್ಲಿ ನೋಂದಾಯಿಸಬೇಕು. 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾನದಲ್ಲಿ ಭಾಗವಹಿಸಬೇಕು. ಮತದಾನದ ಪ್ರಾಮುಖ್ಯತೆ ಅರಿಯಬೇಕು. ಪ್ರಸ್ತುತ ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಹೊರಡಿಸಲಾಗಿರುವ ಕರಡು ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಂಡು ವೈಯಕ್ತಿಕ ಮಾಹಿತಿಗಳನ್ನು ಪರಿಷ್ಕರಣೆ ಮಾಡಿಕೊಳ್ಳಬೇಕು ಎಂದರು.

 ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಮತದಾನದ ಪ್ರಾಮುಖ್ಯತೆ ತಿಳಿಸುವ ದಿಸೆಯಲ್ಲಿ ನಾನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ರಾಜ್ಯ ಮಟ್ಟದ ಸ್ಪರ್ಧೆಗಳಿಗೂ ಆಯ್ಕೆಯಾಗಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಹಾರೈಸಿದರು. 

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ ಪ್ರಸನ್ನ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

-----

ಪ್ರತಿ ಟನ್ ಕಬ್ಬಿಗೆ 2,949 ರೂ. ಗಳ ಬೆಲೆ ನಿಗದಿ 


       ಚಾಮರಾಜನಗರ, ನವೆಂಬರ್ 16 :- ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕುಂತೂರು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ವ್ಯಾಪ್ತಿಗೆ 9.92 ಶೇಕಡ ಇಳುವರಿ ಪ್ರಮಾಣದಂತೆ 2022-23ನೇ ಸಾಲಿಗೆ ಪ್ರತಿ ಟನ್ ಕಬ್ಬಿಗೆ 2,949 ರೂ. ಗಳ ನ್ಯಾಯ ಮತ್ತು ಲಾಭದಾಯಕ ಬೆಲೆ (ಎಫ್.ಆರ್.ಪಿ) ದರವನ್ನು ನಿಗದಿಪಡಿಸಲಾಗಿದೆ.


     ಕಬ್ಬು ಅಭಿವೃದ್ದಿ ಆಯುಕ್ತರು ಹಾಗೂ ಸಕ್ಕರೆ ನಿರ್ದೇಶಕರ ಆದೇಶ ಪತ್ರ ಸಂಖ್ಯೆ:ಡಿಎಸ್‍ಕೆ/ಎಸ್‍ಕೆ/04/2022-23 ದಿನಾಂಕ:18-10-2022 ರಂತೆ ಕೊಳ್ಳೇಗಾಲ ತಾಲೂಕಿನ ಕುಂತೂರು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ವ್ಯಾಪ್ತಿಗೆ 9.92 ಶೇಕಡ ಇಳುವರಿ ಪ್ರಮಾಣದಂತೆ 2022-23ನೇ ಸಾಲಿಗೆ ಪ್ರತಿ ಟನ್ ಕಬ್ಬಿಗೆ 2,949 ರೂ. ಗಳ ನ್ಯಾಯ ಮತ್ತು ಲಾಭದಾಯಕ ಬೆಲೆ (ಎಫ್.ಆರ್.ಪಿ) ದರವನ್ನು ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರಾದ ಡಿ.ಎಸ್. ರಮೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ನ. 19ರಂದು ಕೆ.ಎಸ್.ದೊಡ್ಡಿ (ಮೀಣ್ಯಂ ದಾಖಲೆ) ಗ್ರಾಮದಲ್ಲಿ ಜಿಲ್ಲಾಧಿಕಾರಿ ಗ್ರಾಮವಾಸ್ತವ್ಯ : ಇತರೆ ತಾಲೂಕುಗಳ ಗ್ರಾಮಗಳಲ್ಲಿ ತಹಶೀಲ್ದಾರ್ ವಾಸ್ತವ್ಯ


      ಚಾಮರಾಜನಗರ, ನವೆಂಬರ್ 16 :- ಸಾರ್ವಜನಿಕರ ಅಹವಾಲು ಆಲಿಸಿ ಪರಿಹರಿಸುವ ಸಂಬಂಧ ನವೆಂಬರ್ 19ರಂದು ಹನೂರು ತಾಲೂಕಿನ ಲೊಕ್ಕನಹಳ್ಳಿ ಹೋಬಳಿಯ ಕೆ.ಎಸ್. ದೊಡ್ಡಿ (ಮೀಣ್ಯಂ ದಾಖಲೆ) ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಜಿಲ್ಲಾಧಿಕಾರಿಯವರು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.


     ಬೆಳಿಗ್ಗೆ 10 ಗಂಟೆಯಿಂದ ಜಿಲ್ಲಾಧಿಕಾರಿಯವರು ಸಾರ್ವಜನಿಕರಿಂದ ಅಹವಾಲುಗಳ ಸ್ವೀಕಾರ ಮಾಡಲಿದ್ದಾರೆ. ಅಲ್ಲದೆ ಜಿಲ್ಲೆಯ ಆಯಾ ತಾಲೂಕಿನ ತಹಶೀಲ್ದಾರರು ಆಯಾ ತಾಲೂಕಿನ ಗ್ರಾಮ ಒಂದರಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಕೊಳ್ಳೇಗಾಲ ತಾಲೂಕಿನ ಕಸಬಾ ಹೋಬಳಿಯ ಲಿಂಗಣಾಪುರ ಗ್ರಾಮ, ಯಳಂದೂರು ತಾಲೂಕಿನ ಅಗರ ಹೋಬಳಿಯ ಕೆಸ್ತೂರು ಗ್ರಾಮ, ಗುಂಡ್ಲುಪೇಟೆ ತಾಲೂಕಿನ ಕಸಬಾ ಹೋಬಳಿಯ ವೀರನಪುರ ಗ್ರಾಮ ಹಾಗೂ ಚಾಮರಾಜನಗರ ತಾಲೂಕಿನ ಚಂದಕವಾಡಿ ಹೋಬಳಿಯ ಕನ್ನೇರಿ ಕಾಲೋನಿ ಗ್ರಾಮದಲ್ಲಿ ತಹಶೀಲ್ದಾರರು ನವೆಂಬರ್ 19ರಂದು ವಾಸ್ತವ್ಯ ಮಾಡಲಿದ್ದಾರೆ. ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಿ ಪರಿಹಾರ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




ನ. 18ರಂದು ನಗರದಲ್ಲಿ ವಿದ್ಯುತ್ ಜನಸಂಪರ್ಕ ಸಭೆ


       ಚಾಮರಾಜನಗರ, ನವೆಂಬರ್ 16 :- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಚಾಮರಾಜನಗರ-ಕೊಡಗು ವೃತ್ತ, ಮೈಸೂರು ಅಧೀಕ್ಷಕ ಎಂಜಿನಿಯರ್ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 18ರಂದು ಬೆಳಿಗ್ಗೆ 11 ರಿಂದ 12 ಗಂಟೆಯವರೆಗೆ ಚಾಮರಾಜನಗರದ ನಿಗಮದ ಉಪವಿಭಾಗದ ಕಚೇರಿ ಆವರಣದಲ್ಲಿ ತ್ರೈಮಾಸಿಕ ಜನಸಂಪರ್ಕ ಸಭೆ ಏರ್ಪಡಿಸಿದೆ. 


     ಸಾರ್ವಜನಿಕರು ವಿದ್ಯುತ್ ಸಂಬಂಧಿತ ಕುಂದು ಕೊರತೆಗಳು ಹಾಗೂ ಸಮಸ್ಯೆಗಳಿದ್ದಲ್ಲಿ ಸಭೆಗೆ ಹಾಜರಾಗಿ ಪರಿಹರಿಸಿಕೊಳ್ಳುವಂತೆ ನಿಗಮದ ಕಾರ್ಯ ಮತ್ತು ಪಾಲನಾ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನ. 18ರಂದು ಹರದನಹಳ್ಳಿಯಲ್ಲಿ ವಿದ್ಯುತ್ ಜನಸಂಪರ್ಕ ಸಭೆ


       ಚಾಮರಾಜನಗರ, ನವೆಂಬರ್ 16:- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಅಧೀಕ್ಷಕ ಎಂಜಿನಿಯರ್ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 18ರಂದು ಮಧ್ಯಾಹ್ನ 12.30 ರಿಂದ 1.30 ಗಂಟೆಯವರೆಗೆ ತಾಲೂಕಿನ ಹರದನಹಳ್ಳಿಯ ನಿಗಮದ ಉಪವಿಭಾಗದ ಕಚೇರಿಯಲ್ಲಿ ಜನಸಂಪರ್ಕ ಸಭೆ ಹಮ್ಮಿಕೊಳ್ಳಲಾಗಿದೆ. 


     ಸಾರ್ವಜನಿಕರು ಸಭೆಗೆ ಹಾಜರಾಗಿ ವಿದ್ಯುತ್ ಸಂಬಂಧಿತ ಕುಂದು ಕೊರತೆಗಳಿದ್ದಲ್ಲಿ ತಿಳಿಸಿ ಪರಿಹರಿಸಿಕೊಳ್ಳುವಂತೆ ನಿಗಮದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು