ನಗರ ಸಭೆ ಚುನಾವಣೆ : ಚಾ.ನಗರ ಶೇ 72.03, ಕೊಳ್ಳೇಗಾಲ ಶೇ.73.71ರಷ್ಟು ಮತದಾನ
ಚಾಮರಾಜನಗರ, ಆಗಸ್ಟ್. 31 - ಜಿಲ್ಲೆಯ ಚಾಮರಾಜನಗರ ನಗರ ಸಭೆ ಚುನಾವಣೆಗೆ ಇಂದು ಶೇ.72.03ರಷ್ಟು ಮತದಾನವಾಗಿದೆ. ಕೊಳ್ಳೇಗಾಲ ನಗರಸಭೆ ಚುನಾವಣೆಗೆ ಶೇ.73.71 ರಷ್ಟು ಮತದಾನವಾಗಿದೆ.ಚಾಮರಾಜನಗರ ನಗರ ಸಭೆಯ ವ್ಯಾಪ್ತಿಯಲ್ಲಿ 26066 ಪುರುಷರು, 27641 ಮಹಿಳೆಯರು,ಇತರೆ 7 ಮಂದಿ ಸೇರಿದಂತೆ ಒಟ್ಟು 53714 ಮತದಾರರು ಇದ್ದಾರೆ. ಈ ಪೈಕಿ 19156 ಪುರುಷರು 19536 ಮಹಿಳೆಯರು ಸೇರಿದಂತೆ ಒಟ್ಟಾರೆ 38692 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ.73.49 ರಷ್ಟು ಪುರುಷರು, ಶೇ70.68ರಷ್ಟು ಮಹಿಳೆಯರು ಮತದಾನ ಮಾಡಿದ್ದಾರೆ.
ಕೊಳ್ಳೇಗಾಲ ನಗರ ಸಭೆಯ ವ್ಯಾಪ್ತಿಯಲ್ಲಿ 20676 ಪುರುಷರು, 21212 ಮಹಿಳೆಯರು, ಇತರೆ 4 ಮಂದಿ ಸೇರಿದಂತೆ ಒಟ್ಟು 41892 ಮತದಾರರು ಇದ್ದಾರೆ. ಈ ಪೈಕಿ 15461 ಪುರುಷರು 15416 ಮಹಿಳೆಯರು ಸೇರಿದಂತೆ ಒಟ್ಟಾರೆ 30877 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ.74.78 ರಷ್ಟು ಪುರುಷರು, ಶೇ72.68ರಷ್ಟು ಮಹಿಳೆಯರು ಮತದಾನ ಮಾಡಿದ್ದಾರೆ.
ನಗರ ಸಭೆ ಚುನಾವಣೆ ಮತ ಎಣಿಕೆ ಹಿನ್ನಲೆ:ಸೆಪ್ಟಂಬರ್ 3ರಂದು ನಿಷೇಧಾಜ್ಞೆ
ಚಾಮರಾಜನಗರ, ಆಗಸ್ಟ್. 31 - ಜಿಲ್ಲೆಯ ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆ ಚುನಾವಣೆ ಮತ ಎಣಿಕೆ ಕಾರ್ಯವು ಸೆಪ್ಟಂಬರ್ 3ರಂದು ನಡೆಯಲಿರುವ ಹಿನ್ನಲೆಯಲ್ಲಿ ಕೊಳ್ಳೇಗಾಲ ಮತ್ತು ಚಾಮರಾಜನಗರ ಟೌನ್ ವ್ಯಾಪ್ತಿಯಲ್ಲಿ ಸೆಪ್ಟಂಬರ್ 3ರಂದು ಬೆಳಿಗ್ಗೆ 6ರಿಂದ ಮಧ್ಯರಾತ್ರಿ 12ಗಂಟೆಯವರೆಗೆ (ಮತ ಎಣಿಕೆ ಕೇಂದ್ರದ ಸಮೀಪ ಮತ ಎಣಿಕೆ ಮುಕ್ತಾಯದವರೆಗೆ ಹೊರತುಪಡಿಸಿ) ಮೆರೆವಣಿಗೆ, ಸಭೆ, ಸಮಾರಂಭ, ಪಟಾಕಿ ಸಿಡಿಸುವುದು, ಗುಂಪುಗೂಡುವುದು ಹಾಗೂ ವಿಜಯೋತ್ಸವ ಆಚರಣೆ ಇತ್ಯಾದಿಗಳನ್ನು ಸಿ.ಆರ್.ಪಿ.ಸಿ ಕಲಂ144ರ ಅನ್ವಯ ನಿಷೇಧಿಸಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ.ಚಾಮರಾಜನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಾಗೂ ಕೊಳ್ಳೇಗಾಲದ ಸರ್ಕಾರಿ ಎಂ.ಜಿ.ಎಸ್.ವಿ ಜೂನಿಯರ್ ಕಾಲೇಜು ಮತ ಎಣಿಕೆ ಕೇಂದ್ರಗಳಾಗಿವೆ ಎಂದು ಪ್ರಕಟಣೆ ತಿಳಿಸಿದೆ.
ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೇವೆ ಲಭ್ಯ
ಚಾಮರಾಜನಗರ, ಆಗಸ್ಟ್. 31 :- ಭಾರತೀಯ ಅಂಚೆ ಇಲಾಖೆಯು ಚಾಮರಾಜನಗರದ ಮುಖ್ಯ ಅಂಚೆ ಕಚೇರಿಯಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕಿನ ಶಾಖೆಯನ್ನು ಆರಂಭಿಸುತ್ತಿದೆ.ನಗರದ ಜಿಲ್ಲಾಡಳಿತಭವನದಲ್ಲಿರುವ ಅಂಚೆ ಕಚೇರಿ, ಕೊಳ್ಳೇಗಾಲ ಮುಖ್ಯ ಅಂಚೆ ಕಚೇರಿ, ಉಡಿಗಾಲ ಹಾಗೂ ಬದನಗುಪ್ಪೆ ಗ್ರಾಮದ ಅಂಚೆ ಕಚೇರಿಗಳನ್ನು ಸದರಿ ಸೇವೆಯ ಸಲುವಾಗಿ ಸಹಾಯಕ ಕೇಂದ್ರಗಳನ್ನಾಗಿ ನಿಯೋಜಿಸಲಾಗಿದೆ.
ಬ್ಯಾಂಕಿನ ಮೂಲ ಉದ್ದೇಶ ಪ್ರಸ್ತುತ ಬ್ಯಾಂಕ್ ಸೇವೆಯಿಂದ ವಂಚಿತರಾಗಿರುವ ಅದರಲ್ಲೂ ಅತಿ ಹೆಚ್ಚು ಹಳ್ಳಿಗಳಲ್ಲಿ ನೆಲೆಸಿರುವ ನಾಗರಿಕರಿಗೆ ಬ್ಯಾಂಕಿಂಗ್ ಸೌಲಭ್ಯ ಒದಗಿಸುವುದು, ಆರ್ಥಿಕ ಸಾಕ್ಷರತೆ ಜಾಗೃತಿ ಮೂಡಿಸುವುದು, ಹಣ ಸಂದಾಯಗಳನ್ನು ಸರಳಗೊಳಿಸುವುದು ಆಗಿದೆ. ದೇಶದಲ್ಲಿ ಸೆಪ್ಟಂಬರ್ 1ರಿಂದ 650ಶಾಖೆಗಳನ್ನು ತೆರೆಯಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಎಲ್ಲ ಅಂಚೆ ಕಚೇರಿಗಳನ್ನು ಬ್ಯಾಂಕಿನ ಶಾಖೆಯ ಸಹಾಯಕ ಕೇಂದ್ರಗಳನ್ನಾಗಿ ಹಂತ ಹಂತವಾಗಿ ಮಾರ್ಪಾಡು ಮಾಡಲಾಗುತ್ತದೆ. ಬ್ಯಾಂಕಿಂಗ್ ಅವಶ್ಯಕತೆಗಳನ್ನು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕಿನ ಮೂಲಕ ಅತ್ಯಂತ ಸುಲಭ, ವಿಶ್ವಾಸರ್ಹ ಮತ್ತು ಜವಾಬ್ದಾರಿಯುತವಾಗಿ ಅಂಚೆ ಇಲಾಖೆಯು ನಿರ್ವಹಿಸಲಿದೆ.
ಚಾಮರಾಜನಗರ, ಕೊಳ್ಳೇಗಾಲ, ಉಡಿಗಾಲ ಮತ್ತು ಬದನಗುಪ್ಪೆ ಗ್ರಾಮದ ಎಲ್ಲ ನಾಗರಿಕರು ಬ್ಯಾಂಕಿನ ಸದುಪಯೋಗ ಮಾಡಿಕೊಳ್ಳುವಂತೆ ಅಂಚೆ ಅಧೀಕ್ಷಕರಾದ ಹೆಚ್. ಸಿ ಸದಾನಂದ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
No comments:
Post a Comment