ಸೆಪ್ಟೆಂಬರ್ 8ರಂದು ಜಿಲ್ಲಾದ್ಯಂತ ಲೋಕ್ ಅದಾಲತ್: ಸದುಪಯೋಗಕ್ಕೆ ಜಿಲ್ಲಾ ನ್ಯಾಯಾಧೀಶರ ಮನವಿ
ಚಾಮರಾಜನಗರ, ಸೆ. 07 :- ರಾಷ್ಟ್ರೀಯ ಸೇವಾ ಪ್ರಾಧಿಕಾರದ ನಿರ್ದೇಶನದಂತೆ ರಾಷ್ಟ್ರಾದ್ಯಂತ ಲೋಕ್ ಅದಾಲತ್ ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲೂ ಸಹ ಸೆಪ್ಟೆಂಬರ್ 8ರಂದು ಲೋಕ್ ಅದಾಲತ್ ನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಜಿ. ಬಸವರಾಜ ಅವರು ತಿಳಿಸಿದರು.ನಗರದ ಜಿಲ್ಲಾ ನ್ಯಾಯಾಲಯ ಅವರಣದಲ್ಲಿರುವ ವ್ಯಾಜ್ಯಪೂರ್ವ ಪರಿಹಾರ ಕೇಂದ್ರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಲೋಕ್ ಅದಾಲತ್ ಕುರಿತು ವಿವರ ನೀಡಿದರು.
ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು ಮತ್ತು ಕೊಳ್ಳೇಗಾಲಕ್ಕೆ ಸಂಬಂಧಿಸಿದಂತೆ ಒಟ್ಟು 10 ಬೈಟಕ್‍ಗಳಿಗೆ ಸಂಧಾನಕಾರರನ್ನು ನೇಮಿಸಿ ಅ ಮೂಲಕ ಆಯಾ ನ್ಯಾಯಾಲಯದ ಅವರಣದಲ್ಲಿ ಲೋಕ್ ಅದಾಲತ್ ನಡೆಸಲಾಗುತ್ತದೆ. ಯಳಂದೂರಿಗೆ ನ್ಯಾಯಾಧೀಶರು ನೇಮಕವಾಗದಿರುವ ಹಿನ್ನಲೆಯಲ್ಲಿ ಅಲ್ಲಿಗೆ ಸಂಬಂಧಿಸಿದ ಲೋಕ್ ಅದಾಲತ್ ಪ್ರಕರಣಗಳನ್ನು ಚಾಮರಾಜನಗರದಲ್ಲಿಯೆ ಕೈಗೆತ್ತಿಕೊಳ್ಳಲಾಗುತ್ತದೆ ಎಂದರು.
ಲೋಕ್ ಅದಾಲತ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳನ್ನು ಹೊರತುಪಡಿಸಿ ಇತರೆ ಎಲ್ಲಾ ರೀತಿಯ ಸಿವಿಲ್ ಪ್ರಕರಣಗಳು, ದಾಂಪತ್ಯ ಹಕ್ಕುಗಳ ಪುನರ್ ಸ್ಥಾಪನೆ, ಜೀವನಾಂಶ, ಮಕ್ಕಳ ಸಂರಕ್ಷಣೆ, ಮೋಟಾರು ವಾಹನ ಅಪಘಾತ ಪ್ರಕರಣಗಳು, ಕೈಗಾರಿಕೆ ವಿವಾದ ಕಾಯ್ದೆ, ರಾಜೀ ಮಾಡಿಕೊಳ್ಳಬಹುದಾದ ಎಲ್ಲಾ ಅಪರಾಧ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣ, ಕಾರ್ಮಿಕ ಕಾಯ್ದೆಯಡಿ ಬರುವ ಪ್ರಕರಣಗಳು, ವಿದ್ಯುತ್ ಕಳವು, ಅಕ್ರಮ ಕಲ್ಲು, ಮರಳು ಸಾಗಾಣಿಕೆ ಸಂಬಂಧ ಪ್ರಕರಣಗಳು ಸೇರಿದಂತೆ ಯಾವುದೇ ಅಪರಾಧಿಕ ಸ್ವರೂಪದ ರಾಜಿ ಆಗಬಹುದಾದ ಅಪರಾಧ ಪ್ರಕರಣಗಳನ್ನು ಲೋಕ್ ಅದಾಲತ್‍ನಲ್ಲಿ ಕೈಗೆತ್ತಿಕೊಳ್ಳಲಿದ್ದು, ರಾಜಿ ಮಾಡಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ವಿವಿಧ ನ್ಯಾಯಾಲಯಗಳು ಲೋಕ್ ಅದಾಲತ್ ನಲ್ಲಿ ಕ್ಯಗೆತ್ತಿಕೊಳ್ಳಲು 2878 ಪ್ರಕರಣಗಳನ್ನು ಕಳುಹಿಸುತ್ತಿವೆ. ಅವುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲೋಕ್ ಅದಾಲತ್ ನಲ್ಲಿ ತೀರ್ಮಾನಿಸಿ ಇತ್ಯರ್ಥಗೊಳಿಸಲು ಪ್ರಯತ್ನಿಸಲಿದ್ದೆವೆ. ವಕೀಲರು, ಕಕ್ಷಿದಾರರು ಸಹಕಾರ ನೀಡಬೇಕು. ಸಂಧಾನಕಾರರು ಹೇಳುವ ಸಲಹೆಗಳನ್ನು ಪಾಲಿಸಿ ಪ್ರಕರಣವನ್ನು ಲೋಕ್ ಅದಾಲತ್‍ನಲ್ಲಿ ಬಗೆಹರಿಸಿಕೊಳ್ಳಬೇಕು ಎಂದು ಜಿಲ್ಲಾ ನ್ಯಾಯಾಧೀಶರು ಮನವಿ ಮಾಡಿದರು.
ಲೋಕ್ ಅದಾಲತ್‍ನಲ್ಲಿ ಸಂಧಾನದ ಮೂಲಕ ತೀರ್ಮಾನವಾಗಿ ಬಂದಂತಹ ತೀರ್ಪಿನ ವಿರುದ್ಧ ಮೇಲ್ಮನವಿಗೆ ಅವಕಾಶವಿರುವುದಿಲ್ಲ. ಅಮೂಲ್ಯವಾದ ಸಮಯವು ಉಳಿಯಲಿದೆ. ಉಭಯ ಪಕ್ಷಗಾರರ ನಡುವೆ ಸಾಮರಸ್ಯ ಉಂಟಾಗಲಿದೆ ಎಂದು ನ್ಯಾಯಾಧೀಶರಾದ ಬಸವರಾಜ ಅವರು ತಿಳಿಸಿದರು.
ಕಳೆದ ಜುಲೈನಲ್ಲಿ ನಡೆದ ಲೋಕ್ ಅದಾಲತ್‍ನಲ್ಲಿ ಜಿಲ್ಲೆಯಲ್ಲಿ ಒಟ್ಟು 208 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಸೆಪ್ಟೆಂಬರ್ 8ರಂದು ನಡೆಯಲಿರುವ ಲೋಕ್ ಅದಾಲತ್‍ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ತೀರ್ಮಾನಿಸುವ ಪ್ರಕ್ರಿಯೆಗೆ ಉತ್ತಮ ಸ್ಪಂದನೆ ನೀಡಬೇಕೆಂದು ಜಿಲ್ಲಾ ನ್ಯಾಯಾಧೀಶರು ಮನವಿ ಮಾಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಯವರಾದ ವಿಶಾಲಾಕ್ಷಿ, ಜಿಲ್ಲಾ ವಕಿಲರ ಸಂಘದ ಅಧ್ಯಕ್ಷರಾದ ಇಂದುಶೇಖರ್, ಪ್ರಧಾನ ಕಾರ್ಯದರ್ಶಿ ಅರುಣ್‍ಕುಮಾರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಗ್ರಂಥಾಲಯ ಸೇವೆ ಸದ್ಭಳಕೆಗೆ ಧ್ರುವನಾರಾಯಣ ಸಲಹೆ
ಚಾಮರಾಜನಗರ, ಸೆ. 07 ಜ್ಞಾನ ಸಂಪಾದನೆಗೆ ಅಗತ್ಯವಾಗಿರುವ ಗ್ರಂಥಾಲಯಗಳ ಸೇವೆಯನ್ನು ಪ್ರತಿಯೊಬ್ಬರು ಸದುಪಯೋಗ ಮಾಡಿಕೊಳ್ಳಬೇಕೆಂದು ಲೋಕಸಭಾ ಸದಸ್ಯರಾದ ಆರ್.ಧ್ರುವನಾರಾಯಣ ಅವರು ಸಲಹೆ ಮಾಡಿದರು.ನಗರದ ಜಿಲ್ಲಾ ನ್ಯಾಯಾಲಯ ಅವರಣದ ಸಂಕೀರ್ಣದಲ್ಲಿ ವಕೀಲರಿಗಾಗಿ ರಾಜ್ಯ ಸರ್ಕಾರದ ಅನುದಾನದಡಿ ವ್ಯವಸ್ಥೆ ಮಾಡಲಾಗಿರುವ ಇ-ಲೈಬ್ರರಿ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಜಾನಾರ್ಜನೆಗೆ ಪೂರಕವಾಗಿರುವ ಗ್ರಂಥಾಲಯಗಳು ಪ್ರತಿ ಜಿಲ್ಲೆ, ತಾಲೂಕು ಸೇರಿದಂತೆ ಎಲ್ಲೆಡೆ ಇರಬೇಕು. ಆದರೆ ಗ್ರಂಥಾಲಯಗಳಿಗೆ ನಿರೀಕ್ಷಿತ ಅದ್ಯತೆಯನ್ನು ನೀಡಲಾಗುತ್ತಿಲ್ಲ. ಅಧ್ಯಯನಕ್ಕೆ ಗ್ರಂಥಾಲಯಗಳು ತುಂಬಾ ಅವಶ್ಯಕವಾಗಿದೆ. ಹೀಗಾಗಿ ಎಲ್ಲೆಡೆ ಗ್ರಂಥಾಲಯಗಳ ಸೇವೆಗೆ ಮುಂದಾಗಬೇಕಿದೆ ಎಂದರು.
ವಕೀಲರಿಗೆ ವೃತ್ತಿ ನಿರ್ವಹಿಸಲು ನಿರಂತರ ಅಧ್ಯಯನ ಅಗತ್ಯವಿದೆ. ಇದಕ್ಕಾಗಿ ಪ್ರತಿ ತಾಲೂಕು ನ್ಯಾಯಾಲಯಗಳಲ್ಲಿಯೂ ವಕೀಲರಿಗೆ ಇ-ಲೈಬ್ರರಿ ಸೇವೆ ವ್ಯವಸ್ಥೆಯನ್ನು ಕಲ್ಪಿಸುವಂತೆ ರಾಜ್ಯ ಕಾನೂನು ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ಧ್ರುವನಾರಾಯಣ ತಿಳಿಸಿದರು.
ಜಿಲ್ಲೆಗೆ ಕಾನೂನು ಕಾಲೇಜು ಮಂಜೂರಾಗಿದೆ. ಕೇಂದ್ರೀಯ ವಿದ್ಯಾಲಯವು ತಾತ್ಕಾಲಿಕವಾಗಿ ನಡೆಯುತ್ತಿದ್ದ ಕಟ್ಟಡದಲ್ಲಿ ಕಾನೂನು ಕಾಲೇಜು ಆರಂಭಿಸಲು ಸಿದ್ದತೆ ನಡೆದಿದೆ. ಇನ್ನು 2-3 ದಿನಗಳಲ್ಲಿಯೇ ಎಲ್ಲ ಪ್ರಕ್ರಿಯೆ ಮುಗಿಯಲಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿಯೆ ಕಾನೂನು ಕಾಲೇಜು ಆರಂಭವಾಗಲಿದೆ ಎಂದು ಧ್ರುವನಾರಾಯಣ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಜಿ. ಬಸವರಾಜ ಅವರು ಮಾತನಾಡಿ ವಕೀಲರು ಹೆಚ್ಚಿನ ಜ್ಞಾನ, ತಿಳಿವಳಿಕೆ ಹೊಂದಲು ಇ-ಲೈಬ್ರರಿ ಅಗತ್ಯವಿತ್ತು. ಸೌಲಭ್ಯವು ಇನ್ನುಮುಂದೆ ಜಿಲ್ಲಾ ನ್ಯಾಯಾಲಯದಲ್ಲಿ ಲಭ್ಯವಿರುವುದರಿಂದ ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಇತ್ತೀಚಿನ ಕಾಯಿದೆ, ತಿದ್ದುಪಡಿ, ಅದೇಶಗಳು ಸೇರಿದಂತೆ ವಕೀಲ ವೃತ್ತಿಗೆ ಬೇಕಿರುವ ಅನೇಕ ಮಾಹಿತಿಗಳು ಇ-ಲೈಬ್ರರಿ ಮೂಲಕ ಪಡೆಯಬಹುದಾಗಿದೆ. ಈ ಉಪಯುಕ್ತ ಸೇವೆ ದೊರಕಿರುವುದು ಶ್ಲಾಘನೀಯವೆಂದು ಜಿಲ್ಲಾ ನ್ಯಾಯಾಧೀಶರು ನುಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್ ಅವರು ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ರಮೇಶ್, ಸಿ.ಜೆ. ವಿಶಾಲಾಕ್ಷಿ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿ. ದೀಪಾ, ಉಮೇಶ್, ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾದ ಬಿ.ಆರ್. ಚಂದ್ರಮೌಳಿ, ವಿಶಾಲ್ ರಘು, ಸರ್ಕಾರಿ ವಕೀಲರಾದ ಎಚ್.ಎನ್. ಲೋಕೇಶ್, ವಿಶೇಷ ಸರ್ಕಾರಿ ಅಭಿಯೋಜಕರಾದ ಕೆ. ಯೋಗೀಶ್, ಯಳಂದೂರು ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ಕೆ.ಬಿ. ಶಶಿಧರ್, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್. ಅರುಣ್‍ಕುಮಾರ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
x
No comments:
Post a Comment