ಕಾಲುಬಾಯಿ ಜ್ವರ ಲಸಿಕೆ ಆಂದೋಲನ ಸಮರ್ಪಕ ನಿರ್ವಹಣೆಗೆ ಜಿಲ್ಲಾಧಿಕಾರಿ ಸೂಚನೆ
ಚಾಮರಾಜನಗರ, ಮೇ. 30 - ಜಿಲ್ಲೆಯಲ್ಲಿ ಜೂನ್ 1ರಿಂದ 25ರವರೆಗೆ ಹಮ್ಮಿಕೊಳ್ಳಲು ಉದ್ದೇಶಿಸಿರುವ 14ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕೆ ಕಾರ್ಯಕ್ರಮವನ್ನು ಯಾವುದೇ ಲೋಪವಿಲ್ಲದೆ ಸಮರ್ಪಕವಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಜಿಲ್ಲೆಯಲ್ಲಿ ನಡೆಸಲಿರುವ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಾನುವಾರುಗಳಲ್ಲಿ ಕಂಡುಬರುವ ಕಾಲುಬಾಯಿ ಜ್ವರವನ್ನು ತಡೆಯುವ ಉದ್ದೇಶದಿಂದ ಜಿಲ್ಲೆಯಲ್ಲಿ 14ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯಲ್ಲಿ ಗುರುತಿಸಲಾಗಿರುವ ಎಲ್ಲ ಜಾನುವಾರುಗಳಿಗೆ ನಿಗಧಿತ ವೇಳೆಯಲ್ಲಿ ಲಸಿಕೆ ನೀಡಬೇಕು. ನಿಯೋಜಿತವಾಗಿರುವ ತಂಡಗಳು ಆಯಾ ದಿನವೇ ಲಸಿಕೆ ನೀಡುವ ಕಾರ್ಯದ ಪ್ರಗತಿ ಸಾಧಿಸಬೇಕು ಎಂದರು.
ಜಾನುವಾರುಗಳಿಗೆ ನೀಡಲಾಗುವ ಲಸಿಕೆಯಿಂದ ಯಾವುದೇ ತೊಂದರೆ ಕಂಡುಬಾರದಂತೆ ಮುಂಜಾಗ್ರತೆ ವಹಿಸಬೇಕು. ಜಾನುವಾರು ಮಾಲೀಕರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಸಹ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಯಾವ ಯಾವ ಗ್ರಾಮಗಳಲ್ಲಿ ಲಸಿಕೆ ನೀಡಲಾಗುತ್ತದೆ ಎಂಬ ಬಗ್ಗೆ ಮಾಹಿತಿಯನ್ನು ಆದಷ್ಟು ಮೊದಲೇ ಪ್ರಚುರಪಡಿಸಬೇಕು. ಯಾವುದೇ ಗೊಂದಲಕ್ಕೆ ಅವಕಾಶವಾಗಬಾರದು. ಪೂರ್ವ ಸಿದ್ಧತೆಯೊಂದಿಗೆ ಲಸಿಕಾ ಆಂದೋಲನವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಕಾವೇರಿ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ಮಾತನಾಡಿ ಗ್ರಾಮೀಣ ಭಾಗದಲ್ಲಿ ಲಸಿಕಾ ಆಂದೋಲನ ಕುರಿತು ಸಮರ್ಪಕವಾಗಿ ಮಾಹಿತಿ ಒದಗಿಸಬೇಕು. ಗುರುತಿಸಲಾಗಿರುವ ಎಲ್ಲ ಪ್ರದೇಶಗಳಲ್ಲೂ ಪೂರ್ವನಿಯೋಜಿತ ವೇಳಾಪಟ್ಟಿ ಅನುಸಾರ ಕಾರ್ಯಕ್ರಮ ಪೂರ್ಣಗೊಳಿಸಬೇಕು ಎಂದರು.
ಚಾಮುಲ್ ವ್ಯವಸ್ಥಾಪಕ ನಿರ್ದೇಶಕರಾದ ಡಾ. ವಿಜಯಕುಮಾರ್, ಪಶುಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆ ಪ್ರಭಾರ ಉಪನಿರ್ದೇಶಕರಾದ ವೆಂಕಟರಾಮು, ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಗ್ರಾಮ ಪಂಚಾಯಿತಿ ಉಪಚುನಾವಣೆ : ಅಧಿಸೂಚನೆ ಪ್ರಕಟ
ಚಾಮರಾಜನಗರ, ಮೇ. 30 - ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರೆವಾಗಿರುವ ಜಿಲ್ಲೆಯ ಮೂರು ತಾಲೂಕುಗಳ 4 ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ಚುನಾವಣಾ ವೇಳಾಪಟ್ಟಿ ನಿಗದಿಪಡಿಸಿದ್ದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಇಂದು ಅಧಿಸೂಚನೆ ಹೊರಡಿಸಿದ್ದಾರೆ.ಜೂನ್ 2ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ನಾಮಪತ್ರಗಳ ಪರಿಶೀಲನೆಯನ್ನು ಜೂನ್ 4ರಂದು ನಡೆಸಲಾಗುತ್ತದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಜೂನ್ 6 ಕಡೆಯ ದಿನವಾಗಿದೆ. ಜೂನ್ 14ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. (ಮತದಾನ ಅವಶ್ಯವಿದ್ದರೆ) ಮರು ಮತದಾನ ಅವಶ್ಯವಿದ್ದಲ್ಲಿ ಜೂನ್ 15ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲÁಗುತ್ತದೆ. ಮತಗಳ ಎಣಿಕೆ ಕಾರ್ಯವು ತಾಲೂಕು ಕೇಂದ್ರಗಳಲ್ಲಿ ಜೂನ್ 17ರಂದು ಬೆಳಿಗ್ಗೆ 8 ಗಂಟೆಗೆ ಆರಂಭವಾಗುತ್ತದೆ. ಜೂನ್ 17ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಲಿದೆ.
ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮ ಪಂಚಾಯಿತಿಯ ಬಡಗಲಪುರ (ಸಾಮಾನ್ಯ (ಮಹಿಳೆ)), ಬಾಗಳಿ(ಸಾಮಾನ್ಯ), ಕೊಳ್ಳೇಗಾಲ ತಾಲೂಕಿನ ಕೊಂಗರಹಳ್ಳಿ (ಸಾಮಾನ್ಯ) ಗ್ರಾಮ ಪಂಚಾಯಿತಿ, ಯಳಂದೂರು ತಾಲೂಕಿನ ಯರಿಯೂರು (ಅನುಸೂಚಿತ ಪಂಗಡ (ಮಹಿಳೆ)) ಗ್ರಾಮ ಪಂಚಾಯಿತಿಯ ತಲಾ ಒಂದು ಸದಸ್ಯ ಸ್ಥಾನ ಸೇರಿದಂತೆ ಒಟ್ಟು 4 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಸಿಕಾ ಕಾರ್ಯಕ್ರಮದ ಯಶಸ್ಸಿನ ಮೌಲ್ಯಮಾಪನ ನಡೆಸಿ : ಡಾ. ಹರೀಶ್ ಕುಮಾರ್ ಸಲಹೆ
ಚಾಮರಾಜನಗರ, ಮೇ. 30 :- ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಅನುಷ್ಠಾನಗೊಳ್ಳುವ ಲಸಿಕಾ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಪ್ರತ್ಯೇಕ ಸಂಸ್ಥೆಯಿಂದ ಮೌಲ್ಯಮಾಪನ ನಡೆಸಿ ಅದರಿಂದ ವ್ಯವಸ್ಥೆಯಲ್ಲಿ ಅಳವಡಿಸಬಹುದಾದ ಸುಧಾರಣೆಗಳ ಬಗ್ಗೆ ಕ್ರಮ ವಹಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ಹರೀಶ್ ಕುಮಾರ್ ಅವರು ಸಲಹೆ ನೀಡಿದರು.ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಮಿಷನ್ ಅಂತ್ಯೋದಯ ಹಾಗೂ ಮಿಷನ್ ಇಂದ್ರಧನುಷ್ ಕಾರ್ಯಕ್ರಮಗಳ ಲಸಿಕಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಕಿಅಂಶಗಳಲ್ಲಿ ಗುರಿ ಮುಟ್ಟುವುದರಿಂದ ಮಾತ್ರ ಲಸಿಕಾ ಕಾರ್ಯಕ್ರಮದ ಯಶಸ್ಸನ್ನು ಅಳೆಯಲು ಸಾಧ್ಯವಿಲ್ಲ. ಬುಡಮಟ್ಟದಲ್ಲಿ ಕಾರ್ಯನಿರ್ವಹಿಸುವಂತ ಅಂಗವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ತಮ್ಮ ವ್ಯಾಪ್ತಿಯಲ್ಲಿರುವ ಎಲ್ಲ ಲಸಿಕಾ ಫಲಾನುಭವಿಗಳ ಸಂಪೂರ್ಣ ಮಾಹಿತಿ ಲಭ್ಯವಿರಬೇಕು. ಅದನ್ನು ಆಧರಿಸಿ ಲಸಿಕಾ ಕಾರ್ಯಕ್ರಮದ ಸಮರ್ಪಕ ಅನುಷ್ಠಾನ ಮಾಡುವುದು ಅವರ ಜವಾಬ್ದಾರಿಯಾಗಿರಬೇಕು ಎಂದ ಅವರು ಈ ವ್ಯವಸ್ಥೆಯನ್ನು ಬಲಪಡಿಸಲು ಪ್ರತ್ಯೇಕ ಸಂಸ್ಥೆಯಿಂದ ಮೌÀಲ್ಯಮಾಪನ ಕಾರ್ಯವನ್ನು ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪ್ರಸಾದ್ ಅವರಿಗೆ ಸಲಹೆ ನೀಡಿದರು.
ಇದೊಂದು ವಿನೂತನ ಪ್ರಯತ್ನವಾಗಲಿ ಎಂದ ಅವರು ಲಸಿಕಾ ಕಾರ್ಯಕ್ರಮ ಅನುಷ್ಠಾನದ ಸಾಧಕಬಾಧಕಗಳನ್ನು ಅಳೆಯಲು ಇದು ಸೂಕ್ತ ಸಾಧನವಾಗಲಿದ್ದು ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಮಾದರಿಯಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಲಸಿಕಾ ಕಾರ್ಯಕ್ರಮದ ಸಂಪೂರ್ಣ ಯಶಸ್ಸಿಗೆ ಆಶಾ ಕಾರ್ಯಕರ್ತೆಯರಿಗೆ ಕಾಲಕಾಲಕ್ಕೆ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿಗಳನ್ನು ಆಯೋಜಿಸುವುದು ಅಗತ್ಯವೆಂದು ತಿಳಿಸಿದ ಡಾ. ಹರೀಶ್ ಕುಮಾರ್ ಇಲಾಖೆಯು ಎಲ್ಲ ಫಲಾನುಭವಿಗಳನ್ನು ತಲುಪಲು ಅಳವಡಿಸಿಕೊಂಡಿರುವ ಸಾಮೂಹಿಕ ವಿಧಾನದ ಜೊತೆಜೊತೆಗೆ ವಯಕ್ತಿಕವಾಗಿ ಅವರುಗಳನ್ನು ತಲುಪುವ ಪ್ರಯತ್ನಗಳನ್ನು ಮಾಡಬೇಕು ಎಂದು ಸೂಚಿಸಿದರು. ತಳಮಟ್ಟದ ನಿರ್ವಹಣೆ ಇಲ್ಲಿ ಹೆಚ್ಚಿನ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪ್ರಸಾದ್ ಮಾತನಾಡಿ ಇಲಾಖೆಯು ಲಸಿಕಾ ಕಾರ್ಯಕ್ರಮ ಅನುಷ್ಠಾನಕ್ಕೆ ಗುರಿ ಮುಕ್ತ ವಿಧಾನವನ್ನು ಅನುಸರಿಸುತ್ತಿದ್ದು, ಪ್ರತಿ ಗುರುವಾರ ಲಸಿಕಾ ದಿನವಾಗಿ ಹಾಗೂ ಪ್ರತಿ ಮಂಗಳವಾರದಂದು ಮನೆಮನೆಗೆ ತೆರಳಿ ಲಸಿಕೆ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಪ್ರಸ್ತುತ ಲಸಿಕಾ ಕಾರ್ಯಕ್ರಮ ಸಾಧನೆಯ ಯಾವುದೇ ಮಾಹಿತಿ ತಪ್ಪಾಗಿರಲು ಸಾಧ್ಯತೆ ಇರುವುದಿಲ್ಲ ಎಂದು ಸ್ಪಷ್ಠಪಡಿಸಿದರು.
ಮಿಷನ್ ಇಂದ್ರಧನುಷ್ ಅಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 24 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅವುಗಳಲ್ಲಿ ಚಾಮರಾಜನಗರದಲ್ಲಿ 09, ಗುಂಡ್ಲುಪೇಟೆಯಲ್ಲಿ 01, ಕೊಳ್ಳೇಗಾಲದಲ್ಲಿ 11 ಹಾಗೂ ಯಳಂದೂರಿನಲ್ಲಿ 03 ಗ್ರಾಮಗಳನ್ನು ಗುರುತಿಸಲಾಗಿದೆ ಎಂದರು.
ಸದರಿ ಗ್ರಾಮಗಳಲ್ಲೇ ಮೌಲ್ಯಮಾಪನ ಕಾರ್ಯವನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದರು.
ಮಿಷನ್ ಅಂತ್ಯೋದಯದಡಿ ಒಟ್ಟು 10 ಗ್ರಾಮಪಂಚಾಯಿತಿಗಳನ್ನು ಗುರುತಿಸಿ ಲಸಿಕಾ ಕಾರ್ಯಕ್ರಮದ ಶೇ.100ರಷ್ಟು ಪ್ರಗತಿ ಸಾಧಿಸಲು ಕ್ರಮ ವಹಿಸಲಾಗಿದೆ ಎಂದು ಡಾ. ಪ್ರಸಾದ್ ಸಭೆಗೆ ತಿಳಿಸಿದರು.
ಸಭೆಯಲ್ಲಿ ಸಮಿತಿಯ ಸದಸ್ಯರು ಹಾಗೂ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
ನಾಳೆ ವಿಶ್ವ ತಂಬಾಕು ದಿನಾಚರಣೆ
ಚಾಮರಾಜನಗರ, ಮೇ. 30 - ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಸಾಧನಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಮೇ 31ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ನ್ಯಾಯಾಲಯದ ಆವರಣದಲ್ಲಿ ವಿಶ್ವ ತಂಬಾಕು ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲÁಗಿದೆ.ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ. ಬಸವರಾಜು ಅವರು ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯÁದ ಸಿ.ಜಿ. ವಿಶಾಲಾಕ್ಷಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ರಮೇಶ್, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿ. ದೀಪಾ, ಬಾಲ ನ್ಯಾಯ ಮಂಡಳಿ ಅಧ್ಯಕ್ಷರಾದ ಟಿ.ಜೆ. ಸುರೇಶ್, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಕುಮಾರ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ನಾಳೆ ಆಕಾಶವಾಣಿಯಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತ ನೇರ ಫೋನ್ ಇನ್ ಕಾರ್ಯಕ್ರಮ
ಚಾಮರಾಜನಗರ, ಮೇ. 30 - ಬೆಂಗಳೂರಿನ ವಿವಿಧ ಭಾರತಿ (ಆಕಾಶವಾಣಿ) ಹಾಗೂ ರಾಜ್ಯ ಕಾರ್ಮಿಕ ಇಲಾಖೆ ಸಹಯೋಗದಿಂದ ನಾಳೆ ಅಂದರೆ ಮೇ 31ರಂದು ಸಂಜೆ 7.45 ರಿಂದ 8.42ರವರೆಗೆ ಪ್ರಸಾರವಾಗುವ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ ಕಾರ್ಮಿಕ ಪದ್ಧತಿಯ ನಿರ್ಮೂಲನೆ ಕುರಿತು ಕಾರ್ಮಿಕ ಆಯುಕ್ತರಾದ ವಿ. ಚೈತ್ರ ಅವರು ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಆಸಕ್ತರು ತಮ್ಮ ಪ್ರಶ್ನೆಗಳನ್ನು ದೂರವಾಣಿ ಸಂಖ್ಯೆ 080-22370477, 22370488, 22370499ಗಳ ಮೂಲಕ ಕೇಳಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಸದಸ್ಯ ಕಾರ್ಯದರ್ಶಿ ವಿನುತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅತಿಥಿ ಶಿಕ್ಷಕರ ನೇಮಕಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 30 - ಯಳಂದೂರು ತಾಲೂಕಿನ ಅಗರ ಮಾಂಬಳ್ಳಿ (ಮೆಳ್ಳಹಳ್ಳಿ ಗೇಟ್) ಯಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ (ಆಂಗ್ಲ ಮಾಧ್ಯಮ) 2018-19ನೇ ಸಾಲಿಗೆ ಅತಿಥಿ ಶಿಕ್ಷಕರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.ಕನ್ನಡ ಬಿಎ ಬಿಎಡ್ (ಕನ್ನಡ ಮೇಜರ್), ಇಂಗ್ಲೀಷ್ ಬಿಎ ಬಿಎಡ್ (ಇಂಗ್ಲೀಷ್ ಮೇಜರ್), ವಿಜ್ಞಾನ ಬಿಎಸ್ಸಿಬಿಎಡ್ (ಸಿಬಿಜಡ್), ದೈಹಿಕ ಶಿಕ್ಷಕರು ಬಿಎಬಿಪಿಇಡಿ, ಸ್ಟಾಫ್ ನರ್ಸ್ - ಜಿಎನ್‍ಎಂ ಹುದ್ದೆಗಳು ಇವೆ.
ಮಹಿಳೆಯರಿಗೆ ಮೊದಲ ಆದ್ಯತೆ ಇದ್ದು ಆಂಗ್ಲ ಮಾಧ್ಯಮದಲ್ಲಿ ಬೋಧಿಸಲು ಸಾಮಥ್ರ್ಯ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಜೂನ್ 4 ಕೊನೆಯ ದಿನ ಆಗಿರುತ್ತದೆ.
ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಥವಾ, ಪ್ರಾಂಶುಪಾಲರು, ಕಿತ್ತೂರುರಾಣಿ ಚೆನ್ನಮ್ಮ ವಸತಿಶಾಲೆ (ಮೆಳ್ಳಹಳ್ಳಿ ಗೇಟ್), ಯಳಂದೂರು ತಾಲೂಕು (ಮೊ. 8050291883) ಇವರನ್ನು ಸಂಪರ್ಕಿಸುವಂತೆ ವಸತಿಶಾಲೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಂದ ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 30- ಕಲೆ, ಸಾಂಸ್ಕøತಿಕ ಯಾವುದೇ ಕ್ಷೇತ್ರದಲ್ಲಿ ನಾವೀನ್ಯತೆ, ರಾಷ್ಟ್ರೀಯ ಮಟ್ಟದಲ್ಲಿ ತಾರ್ಕಿಕ ಸಾಧನೆ, ಕ್ರೀಡೆ, ಸಮÁಜಸೇವೆ, ಸಂಗೀತ ಮತ್ತು ಕೇಂದ್ರ ಆಯ್ಕೆ ಸಮಿತಿಯ ಮಾನ್ಯತೆಗೆ ಯೋಗ್ಯವಾದ ಯಾವುದೇ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮಕ್ಕಳಿಗೆ ರಾಷ್ಟ್ರ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.5 ರಿಂದ 18ರ ವಯೋಮಿತಿಯೊಳಗಿನ ಅಂದರೆ ದಿನಾಂಕ 1.8.2000 ಹಾಗೂ ನಂತರ ಜನಿಸಿದ ಮಕ್ಕಳನ್ನು 2018ರ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ರಾಷ್ಟ್ರ ಮಟ್ಟದ ಪ್ರಶಸ್ತಿಯು ಒಂದು ಚಿನ್ನದ ಪದಕ, 20 ಸಾವಿರ ರೂ. ನಗದು, 10 ಸಾವಿರ ರೂ. ಮೌಲ್ಯದ ಪುಸ್ತಕ ಓಚರ್ ಪ್ರಶಸ್ತಿ ಪತ್ರ, ಹಾಗೂ 35 ಬೆಳ್ಳಿ ಪದಕ (ಪ್ರತೀ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಒಂದು ಬೆಳ್ಳಿ ಪದಕ), 10 ಸಾವಿರ ರೂ. ನಗದು, 3 ಸಾವಿರ ರೂ. ಮೌಲ್ಯದ ಪುಸ್ತಕ ಓಚರ್ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ.
ಪ್ರಶಸ್ತಿಗೆ ಆಯ್ಕೆಯಾಗಲು ಮಕ್ಕಳು ಅಪ್ರತಿಮ ಪ್ರತಿಭೆಯುಳ್ಳವರಾಗಿರಬೇಕು. ಅಸಾಧಾರಣ ಸಾಧನೆಯನ್ನು ಸಮರ್ಥಿಸಲು ಪೂರಕ ದಾಖಲಾತಿಗಳನ್ನು ಒದಗಿಸಬೇಕು. ವಯಸ್ಸಿನ ಪ್ರಮಾಣ ಪತ್ರವನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು.
ನಿಗದಿತ ನಮೂನೆಯ ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಮಹಿಳೆಯರ ಮತ್ತು ಮಕ್ಕಳÀ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿ ಜೂನ್ 30ರ ಒಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಯನ್ನು ಕಚೇರಿಯಿಂದ ಪಡೆದುಕೊಳ್ಳುವಂತೆ ಮಹಿಳೆಯರ ಮತ್ತು ಮಕ್ಕಳÀ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಕ್ಕಳ ಕಲ್ಯಾಣ ಕ್ಷೇತ್ರ ಸೇವಾ ಪ್ರಶಸ್ತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 30- ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ವ್ಯಕ್ತಿಗೆ ಕೊಡಮಾಡುವ 2018ನೇ ಸಾಲಿನ ರಾಜೀವ್ ಗಾಂಧಿ ಮಾನವ ಸೇವಾ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.ಮಕ್ಕಳ ಅಭಿವೃದ್ಧಿ ರಕ್ಷಣೆ ಮತ್ತು ಕಲ್ಯಾಣ ಕ್ಷೇತ್ರದಲ್ಲಿ 10 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ ರಾಜೀವ್ ಗಾಂಧಿ ಮಾನವ ಸೇವಾ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯು 1 ಲಕ್ಷ ರೂ ನಗದು, ಬೆಳ್ಳಿ ಫಲಕ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ.
ಆಸಕ್ತರು ನಗರದ ಜಿಲ್ಲಾಡಳಿತ ಭವನದಲ್ಲಿರುವ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಜೂನ್ 8ರೊಳಗೆ ಸಲ್ಲಿಸಬೇಕು. ವಿವರಗಳಿಗೆ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಕೊಳ್ಳೇಗಾಲ : ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 30 - ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ವಹಣೆಯಾಗುತ್ತಿರುವ ಕೊಳ್ಳೇಗಾಲ ತಾಲೂಕಿನ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ ಹಾಗೂ ಇತರೆ ವರ್ಗದ ಮಕ್ಕಳÀ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಕೊಳ್ಳೇಗಾಲ, ಪಾಳ್ಯ, ಕಾಮಗೆರೆ, ಹನೂರು, ದಿನ್ನಳ್ಳಿ, ರಾಮಾಪುರ, ಕೂಡ್ಲೂರು, ಮಣಗಳ್ಳಿ, ಕುರಟ್ಟಿ ಹೊಸೂರಿನ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ, ಮಾರ್ಟಳ್ಳಿ, ಕೊಳ್ಳೇಗಾಲ ಹಾಗೂ ಹನೂರಿನ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಪ್ರವೇಶ ಲಭ್ಯವಿದೆ.
ಕೊಳ್ಳೇಗಾಲ, ಹನೂರಿನ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ, ಕೊಳ್ಳೇಗಾಲದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ, ಸರ್ಕಾರಿ ವರ್ಗೀಕೃತ ಬಾಲಕರ ವಿದ್ಯಾರ್ಥಿ ನಿಲಯ ಹಾಗೂ ಹನೂರಿನ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲೂ ಪ್ರವೇಶಾತಿ ದೊರೆಯಲಿದೆ.
5 ರಿಂದ 10ನೇ ತರಗತಿವರೆಗೆ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದು.
ಅರ್ಜಿ ನಮೂನೆಯನ್ನು ವೆಬ್ ಸೈಟ್ ತಿತಿತಿ.sತಿ.ಞಚಿಡಿ.ಟಿiಛಿ.iಟಿ ನಿಂದ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಲು ಜೂನ್ 10 ಕಡೆಯ ದಿನ.
ಹೆಚ್ಚಿನ ವಿವರಗಳಿಗೆ ಕೊಳ್ಳೇಗಾಲ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
No comments:
Post a Comment