ನಿಫಾ ಸೋಂಕು : ಜಿಲ್ಲೆಯಲ್ಲೂ ಕಟ್ಟೆಚ್ಚರ ವಹಿಸಲು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಸೂಚನೆ
ಚಾಮರಾಜನಗರ, ಮೇ. 22 – ಕೇರಳ ರಾಜ್ಯದಲ್ಲಿ ನಿಫಾ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ಗಡಿ ಭಾಗವು ಸೇರಿದಂತೆ ಜಿಲ್ಲೆಯ ಎಲ್ಲೆಡೆ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳಲು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಿಫಾ ವೈರಸ್ ಸೋಂಕಿನ ನಿಯಂತ್ರಣ ಸಂಬಂಧ ಜಿಲ್ಲಾ ಸಮಗ್ರ ರೋಗಗಳ ಕಣ್ಗಾವಲು ಸಮನ್ವಯ ಸಮಿತಿಯ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೇರಳ ರಾಜ್ಯಕ್ಕೆ ಹೊಂದಿಕೊಂಡಂತೆ ಗುಂಡ್ಲುಪೇಟೆ ತಾಲ್ಲೂಕು ಇದೆ. ಈ ಭಾಗದ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಸೋಂಕಿನ ಬಗ್ಗೆ ತಿಳಿವಳಿಕೆ ನೀಡಬೇಕು. ಜನರು ಯಾವುದೇ ಆತಂಕಕ್ಕೆ ಒಳಗಾಗದಂತೆ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮುಂದಾಗಬೇಕು. ವೈದ್ಯಕೀಯ ಸಿಬ್ಬಂದಿಗೆ ರೋಗದ ಬಗ್ಗೆ ಒಂದು ದಿನದ ತರಬೇತಿ ನೀಡಬೇಕು. ರೋಗದ ಕುರಿತು ಮಾಹಿತಿ ನೀಡುವ ಕರಪತ್ರ ಮುದ್ರಿಸಿ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪುರಸಭೆ, ನಗರಸಭೆ, ಗ್ರಾಮ ಪಂಚಾಯತಿ ಸಹಕಾರದೊಂದಿಗೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿರುವ ಹೋಟೆಲ್, ಹಣ್ಣು, ತಂಪು ಪಾನೀಯ ಇನ್ನೀತರ ತಿಂಡಿ ತಿನಿಸುಗಳ ಅಂಗಡಿಗಳಲ್ಲಿ ಶುಚಿತ್ವ ಕಾಪಾಡಲು ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಆಹಾರ ವಿತರಿಸಲು ಹಾಗೂ ತಯಾರಿಸಲು ಬಳಸಲಾಗುವ ಪರಿಕರಗಳನ್ನು ಸ್ವಚ್ಚವಾಗಿಡಬೇಕು, ಹೋಟೆಲ್, ಅಂಗಡಿ ಸಿಬ್ಬಂದಿ ಸಹ ವೈಯಕ್ತಿಕ ಸ್ವಚ್ಚತೆಗೆ ಗಮನ ನೀಡಲು ಸೂಚಿಸಬೇಕು ಎಂದು ಕಾವೇರಿ ಅವರು ನಿರ್ದೇಶನ ನೀಡಿದರು.
ಹಣ್ಣಿನ ಅಂಗಡಿಗಳಲ್ಲಿ ವಿಶೇಷವಾಗಿ ನೈರ್ಮಲ್ಯಕ್ಕೆ ಒತ್ತು ನೀಡಬೇಕು. ಕೊಳೆತ, ಕೆಟ್ಟುಹೋದ ಹಾಗೂ ಸೋಂಕಿರುವ ಬಾವಲಿ ಕಚ್ಚಿದ ಹಣ್ಣುಗಳನ್ನು ತಿನ್ನದೇ, ಮುಟ್ಟದೇ ವಿಲೇವಾರಿ ಮಾಡಬೇಕು. ಜ್ಯೂಸ್ ಸೆಂಟರ್‍ಗಳಲ್ಲಿ ವಿಲೇವಾರಿ ಮಾಡಬಹುದಾದ ಕಾಗದದ ಲೋಟಗಳನ್ನು ಮಾತ್ರ ಬಳಸಬೇಕು. ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ, ಗ್ರಾಮ ಪಂಚಾಯತಿ ಅಧಿಕಾರಿಗಳು ಈ ಬಗ್ಗೆ ಮಾರ್ಗದರ್ಶನ ಮಾಡಿ ಅಗತ್ಯ ಕ್ರಮ ವಹಿಸಲಾಗಿದೆಯೇ ಎಂಬ ಬಗ್ಗೆ ಖುದ್ದು ಪರಿಶೀಲಿಸಬೇಕು ಎಂದರು.
ಹಂದಿಗಳ ಸಾಕಣೆ ಕೇಂದ್ರಗಳಲ್ಲಿ ಸ್ವಚ್ಚತೆ ಹಾಗೂ ರಕ್ಷಣಾ ಕ್ರಮಗಳ ಪಾಲನೆಗೆ ಗಮನ ನೀಡಬೇಕು. ಹಂದಿಗಳಲ್ಲಿ ಸಂಶಯಾಸ್ಪದ ಸೋಂಕು ಅಥವಾ ಸಾವು ಸಂಭವಿಸಿದಲ್ಲಿ ಸೂಕ್ತ ಕ್ರಮವಹಿಸಲು ಹಂದಿ ಸಾಕು ಮಾಲೀಕರಿಗೆ ಖಾಯಿಲೆ ಕುರಿತು ಮೊದಲೇ ಅರಿವು ಮೂಡಿಸಬೇಕು. ಹಂದಿಗಳ ಸಾಕಣೆ ಕೇಂದ್ರಗಳ ವ್ಯಾಪ್ತಿಯಲ್ಲಿ ಬಾವಲಿಗಳು ಹಂದಿಗಳ ಸಂಪರ್ಕಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಹೊರ ರಾಜ್ಯಗಳಿಂದ ಹಂದಿಗಳ ಆಮದು, ರಪ್ತು ಚಟುವಟಿಕೆಗಳನ್ನು ನಿಷೇಧಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ಹಂದಿಗಳನ್ನು ನಿಯಂತ್ರಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಗಡಿ ಭಾಗಗಳಲ್ಲಿ ಪಶುಪಾಲನೆ ಇಲಾಖೆ ಅಧಿಕಾರಿಗಳು ವಿಶೇಷ ಗಮನವಿಡಬೇಕು. ಹೋಟೆಲ್ ಇನ್ನೀತರ ತಿಂಡಿ ತಿನಿಸು ಅಂಗಡಿಗಳಲ್ಲಿ ಉಳಿಕೆಯಾದ ಆಹಾರ ಪದಾರ್ಥಗಳನ್ನು ಹಂದಿ ಸಾಕಾಣೆ ಕೇಂದ್ರಗಳಿಗೆ ರವಾನಿಸುವುದನ್ನು ಸ್ಥಗಿತಗೊಳಿಸಬೇಕು. ಒಟ್ಟಾರೆ ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಸೋಂಕು ತಡೆ ಕುರಿತು ವಹಿಸಬೇಕಿರುವ ಮುನ್ನೆಚರಿಕೆ ಕ್ರಮಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕಾವೇರಿಯವರು ಕಟ್ಟುನಿಟ್ಟಾಗಿ ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್ ಪ್ರಸಾದ್ ಮಾತನಾಡಿ ನಿಫಾ ಸೋಂಕು ಬಾವಲಿ, ಹಂದಿಗಳಿಂದ ನೇರವಾಗಿ ಮನುಷ್ಯರಿಗೆ ಹರಡುತ್ತದೆ. ಸೋಂಕಿರುವ ಬಾವಲಿ ಕಚ್ಚಿದ ಹಣ್ಣನ್ನು ತಿನ್ನುವುದರಿಂದ ಅಥವಾ ಮುಟ್ಟುವುದರಿಂದ, ಸೋಂಕಿತ ಹಂದಿಗಳ ಸಂಪರ್ಕದಿಂದ ರೋಗ ಹರಡುತ್ತದೆ. ಜ್ವರ, ತಲೆನೋವು, ವಾಂತಿ, ತಲೆ ಸುತ್ತುವಿಕೆ ರೋಗದ ಲಕ್ಷಣವಾಗಿದೆ. ಕೆಲವರಲ್ಲಿ ಅಪಸ್ಮಾರದ ಲಕ್ಷಣ ಹಾಗೂ ಪ್ರಜ್ಞಾಹೀನತೆ ಕಂಡುಬರುತ್ತದೆ ಎಂದರು.
ಯಾವುದೇ ರೋಗ ಲಕ್ಷಣಗಳು ಕಂಡು ಬಂದಲ್ಲಿ ಸಮೀಪದ ಆರೋಗ್ಯ ಕೇಂದ್ರಗಳಿಗೆ ಹೋಗಿ ವೈದ್ಯರ ಸಲಹೆ ಪಡೆಯಬೇಕು, ಗುಂಡ್ಲುಪೇಟೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂಶಯಾಸ್ಪದ ರೋಗಿಗಳಿಗೆ ವಿಶೇಷ ಕೊಠಡಿಯನ್ನು ಕಾಯ್ದಿರಿಸಲಾಗಿದೆ ಎಂದು ಡಾ. ಕೆ.ಎಚ್ ಪ್ರಸಾದ್ ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ಜಿಲ್ಲಾ ಸರ್ವಲೆನ್ಸ್ ಅಧಿಕಾರಿ ಡಾ. ನಾಗರಾಜು, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಅನಿಲ್‍ಕುಮಾರ್, ಜಿಲ್ಲಾ ಹಾಗೂ ತಾಲ್ಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ, ತಾಲ್ಲೂಕು ಪಂಚಾಯತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ : ನೀತಿ ಸಂಹಿತೆ ಜಾರಿ
ಚಾಮರಾಜನಗರ, ಮೇ. 22 – ಕರ್ನಾಟಕ ವಿಧಾನ ಪರಿಷತ್ತಿನ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬಂಧ ಜಿಲ್ಲೆಯಲ್ಲೆ ಮೇ 15ರಿಂದಲೇ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಯಾವುದೇ ಗುರುಭವನ, ಶಿಕ್ಷಕರ ಭವನ, ಸರ್ಕಾರಿ ಕಟ್ಟಡದಲ್ಲಿ ಯಾವುದೇ ರಾಜಕೀಯ ಸಭೆ ಸಮಾರಂಭಗಳನ್ನು ನಡೆಸದಂತೆ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಕಚೇರಿಗೆ ಮಾಹಿತಿ ಸಲ್ಲಿಸುವಂತೆÉ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳಾದ ಬಿ.ಬಿ. ಕಾವೇರಿ ಅವರು ತಿಳಿಸಿದ್ದಾರೆ.
ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ 1951ರ ರೀತ್ಯ ಕ್ರಮ ವಹಿಸಲಾಗುವುದು ಎಂದು ಪ್ರಕಟಣೆಯಲ್ಲಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಮೇ 23ರಂದು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಶುಲ್ಕ ಪಾವತಿಸಲು ಅಂತಿಮ ದಿನ
ಚಾಮರಾಜನಗರ, ಮೇ. 22 – ಜೂನ್ 2018ರಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಪುನರಾವರ್ತಿತ ಅಭ್ಯರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಲು ಮೇ 23ರವರೆಗೆ ಕಾಲವಕಾಶ ವಿಸ್ತರಿಸಲಾಗಿದೆ. ಅಭ್ಯರ್ಥಿಗಳು ಪರೀಕ್ಷಾ ಶುಲ್ಕ ಸಲ್ಲಿಸಲು ಕೊನೆಯ ಅವಕಾಶವಾಗಿದ್ದು ನಂತರ ಕಾಲೇಜಿನ ಪ್ರಾಂಶುಪಾಲರು ಯಾವುದೇ ಪುನರಾವರ್ತಿತ ಅಭ್ಯರ್ಥಿಗಳ ಅರ್ಜಿಯನ್ನು ಸ್ವೀಕರಿಸಬÁರದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿವಿಧ ವಸತಿಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಕೌನ್ಸೆಲಿಂಗ್
ಚಾಮರಾಜನಗರ, ಮೇ. 22 – ಪ್ರಸಕ್ತ ಸಾಲಿನಲ್ಲಿ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ, ಡಾ. ಬಿ.ಅರ್. ಅಂಬೇಡ್ಕರ್, ಇಂದಿರಾಗಾಂಧಿ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯಲಿದೆ.ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಕಟ್ ಆಫ್ ಅಂಕಗಳೊಂದಿಗೆ ಆಯಾಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಹಾಗೂ ಪರೀಕ್ಷೆಗೆ ಹಾಜರಾಗಿದ್ದ ಎಲ್ಲ ಅಭ್ಯರ್ಥಿಗಳು ಪಡೆದಿರುವ ಅಂಕಗಳನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಂತರ್ಜಾಲ ಞಡಿeis.ಞಚಿಡಿ.ಟಿiಛಿ.iಟಿ ನಲ್ಲಿ ಪ್ರಕಟಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ಪತ್ರವನ್ನು ಅಂಚೆ ಮೂಲಕ ರವಾನಿಸಲಾಗಿದೆ.
ಕೌನ್ಸೆಲಿಂಗ್ ಪ್ರಕ್ರಿಯೆ ಮೇ 26 ರಿಂದ 28ರವರೆಗೆ 3 ದಿನಗಳ ಕಾಲ ಬೆಳಿಗ್ಗೆ 10 ಗಂಟೆಗೆ ಚಾಮರಾಜನಗರದ ನಂಜನಗೂಡು ರಸ್ತೆಯಲ್ಲಿರುವ ವಾಲ್ಮೀಕಿ ಭವನದಲ್ಲಿ ನಡೆಯಲಿದೆ. ವಿಕಲಚೇತನ ವಿಶೇಷ ವರ್ಗ 2ಎ, 2ಬಿ.ಗೆ ಮೇ 26ರಂದು, ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಮೇ 27ರಂದು ಹಾಗೂ ಎಸ್ ಟಿ, ಸಿ1, 3ಎ, 3ಬಿ.ಗೆ ಮೇ 28ರಂದು ನಡೆಯಲಿದೆ.
ಹಾಜರಾತಿ ಪತ್ರ ತಲುಪದಿದ್ದಲ್ಲಿ ನಿಗಧಿತ ದಿನಾಂಕದಂದು ತಮ್ಮ ಪ್ರವೇಶ ಪತ್ರ, ಜಾತಿ ಆದಾಯ ಪ್ರಮಾಣ ಪತ್ರ, ವಿಕಲಚೇತನ, ಪೌರಕಾರ್ಮಿಕ, ಅಲೆಮಾರಿ, ವಿಶೇಷ ದುರ್ಬಲ ವರ್ಗದ ಗುಂಪುಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಆಯಾಯ ಮೀಸಲಾತಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳೊಂದಿಗೆ ಹಾಜರಾಗಲು ತಿಳಿಸಿದೆ.
ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಆಯಾ ಪ್ರವರ್ಗವಾರು ಮೆರಿಟ್ ಆಧಾರದ ಮೇಲೆ ಪ್ರವೇಶ ನಡೆಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment