Friday, 1 June 2018

29-05-2018 (ಜೂ. 1 ರಿಂದ ಕಾಲುಬಾಯಿ ಜ್ವರ ತಡೆಗೆ ಲಸಿಕೆ ಆಂದೋಲನ : ಪಶುಪಾಲನೆ ಇಲಾಖೆಯಿಂದ ಸರ್ವ ಸಿದ್ಧತೆ,ಈರುಳ್ಳಿ ಬೆಳೆಗೆ ನೇರಳೆ ಎಲೆ ಮಚ್ಚೆ ರೋಗ : ನಿಯಂತ್ರಣಕ್ಕೆ ಸಲಹೆ)


ಜೂ. 1 ರಿಂದ ಕಾಲುಬಾಯಿ ಜ್ವರ ತಡೆಗೆ ಲಸಿಕೆ ಆಂದೋಲನ :
ಪಶುಪಾಲನೆ ಇಲಾಖೆಯಿಂದ ಸರ್ವ ಸಿದ್ಧತೆ

ಚಾಮರಾಜನಗರ, ಮೇ. 29 : ಜಾನುವಾರುಗಳಿಗೆ ತಗಲುವ ಕಾಲುಬಾಯಿ ಜ್ವರವನ್ನು ಪರಿಣಾಮಕಾರಿಯಾಗಿ ತಡೆಯುವ ಉದ್ದೇಶದಿಂದ ಜಿಲ್ಲಾದ್ಯಂತ ಜೂನ್ 1 ರಿಂದ 25ರವರೆಗೆ 14ನೇ ಸುತ್ತಿನ ಲಸಿಕೆ ನೀಡುವ ಕಾರ್ಯ ಹಮ್ಮಿಕೊಳ್ಳಲಾಗಿದ್ದು ಇದಕ್ಕಾಗಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಜಿಲ್ಲೆಯಲ್ಲಿ ಜಾನುವಾರು ಗಣತಿ ಪ್ರಕಾರ ಒಟ್ಟು 250423 ಜಾನುವಾರುಗಳನ್ನು ಗುರುತಿಸಲಾಗಿದೆ. ಚಾಮರಾಜನಗರ ತಾಲೂಕಿನಲ್ಲಿ 74938, ಗುಂಡ್ಲುಪೇಟೆ ತಾಲೂಕಿನಲ್ಲಿ 70428, ಕೊಳ್ಳೇಗಾಲ ತಾಲೂಕಿನಲ್ಲಿ 92453 ಮತ್ತು ಯಳಂದೂರು ತಾಲೂಕಿನಲ್ಲಿ 12604 ಜಾನುವಾರುಗಳು ಇದ್ದು ಈ ಎಲ್ಲ ಜಾನುವಾರುಗಳಿಗೆ ಲಸಿಕೆ ನೀಡÀಲಾಗುತ್ತದೆ.
ಜಾನುವಾರುಗಳಿಗೆ ಲಸಿಕೆ ನೀಡುವ ಸಲುವಾಗಿ ಜಾನುವಾರು ಸಂಖ್ಯೆಗಳಿಗೆ ಅನುಗುಣವಾಗಿ ಒಟ್ಟು 27 ಲಸಿಕಾ ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದಲ್ಲಿ 5 ರಿಂದ 6 ಮಂದಿ ಅರೆತಾಂತ್ರಿಕ ಸಿಬ್ಬಂದಿ ಇದ್ದು ಪಶುವೈದ್ಯರೊಬ್ಬರು ತಂಡದ ಮುಖ್ಯಸ್ಥರಾಗಿ ಇರಲಿದ್ದಾರೆ. ಚಾಮರಾಜನಗರ ತಾಲೂಕಿಗೆ 9, ಗುಂಡ್ಲುಪೇಟೆ ತಾಲೂಕಿಗೆ 7, ಕೊಳ್ಳೇಗಾಲ ತಾಲ್ಲೂಕಿಗೆ 8 ಹಾಗೂ ಯಳಂದೂರು ತಾಲ್ಲೂಕಿಗೆ 3 ತಂಡಗಳನ್ನು ನಿಯೋಜಿಸಲಾಗಿದೆ.
ನಿಯೋಜಿತವಾಗಿರುವ ಪ್ರತೀ ತಂಡವು ಒಂದು ದಿನಕ್ಕೆ 750 ರಾಸುಗಳಿಗೆ ಲಸಿಕೆ ಹಾಕಲಿವೆ. ಒಟ್ಟು 27 ತಂಡಗಳಿಗೆ ಪ್ರತಿ ದಿನ 20250 ಜಾನುವಾರುಗಳಿಗೆ ಲಸಿಕೆ ನೀಡಲು ಗುರಿ ನೀಡಲಾಗಿದೆ. 15 ರಿಂದ 21 ದಿನಗಳೊಳಗೆ ಪ್ರಗತಿ ಸಾಧಿಸಲು ಗುರಿ ಹೊಂದಲಾಗಿದೆ.
ಲಸಿಕೆಯನ್ನು ಸ್ಥಳೀಯ ಹಾಗೂ ಮಿಶ್ರತಳಿ ದನಗಳು, ಎಮ್ಮೆಗಳು, ಹಂದಿಗಳಿಗೆ ಕೊಡಲಾಗುತ್ತದೆ. 3 ತಿಂಗಳಿಗಿಂತ ಕಡಿಮೆ ವಯಸ್ಸಿನ ಕರುಗಳು ಹಾಗೂ 6 ತಿಂಗಳು ತುಂಬಿರುವ ಗರ್ಭ ಧರಿಸಿದ ರಾಸುಗಳಿಗೆ ಲಸಿಕೆಯನ್ನು ಹಾಕಲಾಗುತ್ತದೆ. ಪ್ರತೀ ರಾಸುವಿಗೆ ಪ್ರತ್ಯೇಕ ಡಿಸ್ ಪೋಸಲ್ ಸಿರಿಂಜ್ ಹಾಗೂ ಸೂಜಿಗಳನ್ನು ಉಪಯೋಗಿಸಲಾಗುತ್ತದೆ. ಬೆಳಿಗ್ಗೆ 6 ರಿಂದ 11.30 ಗಂಟೆ ಹಾಗೂ ಸಂಜೆ 5 ರಿಂದ 7 ಗಂಟೆ ಅವಧಿಯೊಳಗೆ ಲಸಿಕೆ ನೀಡಲು ಸೂಚಿಸಲಾಗಿದೆ.
ಪಶುಪಾಲನೆ ಇಲಾಖೆಗೆ ಈಗಾಗಲೇ 2,60,000 ಡೋಸ್ ಲಸಿಕೆ ಸರಬರಾಜಾಗುತ್ತಿದೆ. ಚಾಮರಾಜನಗರ ತಾಲೂಕು ಪಶುವೈದ್ಯ ಆಸ್ಪತ್ರೆಯ ವಾಕ್-ಇನ್-ಕೂಲರ್‍ನಲ್ಲಿ 1 ಲಕ್ಷ ಹಾಗೂ ಉಳಿದ 1,60,000 ಡೋಸ್ ಲಸಿಕೆಯನ್ನು ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಯಳಂದೂರಿನ ಪಶುವೈದ್ಯ ಆಸ್ಪತ್ರೆಯ ಬಾಟಲ್ ಕೂಲರ್ಸ್ ಯಂತ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ಎಲ್ಲ ಹಂತದಲ್ಲೂ ಲಸಿಕೆಯ ಶೀತಲಿ ಸರಪಳಿ ನಿರ್ವಹಣೆ ಮಾಡಲಾಗಿದೆ. ಪ್ರತಿ ಗ್ರಾಮಕ್ಕೆ ಲಸಿಕೆಯನ್ನು ಕೊಂಡೊಯ್ಯಲು ವ್ಯಾಕ್ಸಿನ್ ಕ್ಯಾರಿಯರ್ ಸೌಲಭ್ಯ ಕಲ್ಪಿಸಲಾಗಿದೆ.
ಲಸಿಕಾ ತಂಡಗಳು ಗ್ರಾಮಗಳಿಗೆ ಸಕಾಲಕ್ಕೆ ತಲುಪಲು 27 ವಾಹನ ವ್ಯವಸ್ಥೆ ಮಾಡಲಾಗಿದೆ. ಚಾಮರಾಜನಗರ ತಾಲೂಕಿಗೆ 9, ಗುಂಡ್ಲುಪೇಟೆ ತಾಲೂಕಿಗೆ 7, ಕೊಳ್ಳೇಗಾಲ ತಾಲ್ಲೂಕಿಗೆ 8 ಹಾಗೂ ಯಳಂದೂರು ತಾಲ್ಲೂಕಿಗೆ 3 ವಾಹನ ನಿಯೋಜಿಸಲಾಗಿದೆ.
ರೈತರು, ಹೈನುಗಾರಿಕೆ ಅವಲಂಬಿತರಿಗೆ ಅರಿವು ಮೂಡಿಸುವ ಉದ್ದೇಶದಿಂದ ವ್ಯಾಪಕ ಪ್ರಚಾರ ಕೈಗೊಳ್ಳಲಾಗುತ್ತಿದೆ. ಪ್ರತಿ ಗ್ರಾಮದಲ್ಲೂ ಭಿತ್ತಿಪತ್ರ ಹಾಗೂ ಕರಪತ್ರಗಳ ಮೂಲಕ ಮಾಹಿತಿ ನೀಡುವ ಕೆಲಸ ಮಾಡಲಾಗುತ್ತಿದೆ. ದೊಡ್ಡ ಗ್ರಾಮಗಳಲ್ಲಿ ಬ್ಯಾನರ್‍ಗಳನ್ನು ಹಾಕಲಾಗುತ್ತಿದೆ. ಗ್ರಾಮ ಪಂಚಾಯತ್ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕವೂ ಸಹ ಪ್ರಚಾರಕ್ಕಾಗಿ ಕ್ರಮ ತೆಗೆದುಕೊಳ್ಳಲಾಗಿದೆ. ಪ್ರಚಾರಕ್ಕಾಗಿ 760 ಪೋಸ್ಟರ್ಸ್, 25 ಬ್ಯಾನರ್, 249 ಕರಪತ್ತಗಳನ್ನು ಮುದ್ರಿಸಲಾಗಿದೆ.
ಲಸಿಕೆಯನ್ನು ಪ್ರತಿ ದಿನ ಯಾವ ಗ್ರಾಮಕ್ಕೆ ಯಾವ ತಂಡ ಲಸಿಕೆ ನೀಡಲಿದೆ ಎಂಬ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಪ್ರತಿ ಗ್ರಾಮದಲ್ಲಿ ನೀಡಲಾಗುವ ಲಸಿಕೆ ಹಾಗೂ ಇದನ್ನು ನಿರ್ವಹಿಸುವ ಪಶುಪಾಲಕರ ಮಾಹಿತಿಯನ್ನು ಆಯಾ ದಿನವೇ ತಾಲೂಕು ಉಸ್ತುವಾರಿ ಅಧಿಕಾರಿಗೆ ಕಳುಹಿಸಲಾಗುತ್ತದೆ. ಲಸಿಕೆ ವಿವರವನ್ನು ಕಳೆದ ಸುತ್ತಿನಲ್ಲಿ ಪಶುಪಾಲಕರಿಗೆ ನೀಡಿರುವ ಜಾನುವಾರು ಮಾಹಿತಿ ಪಾಸ್ ಪುಸ್ತಕಗಳಲ್ಲಿ ದಾಖಲು ಮಾಡಲಾಗುತ್ತದೆ. ಗ್ರಾಮವಾರು ಲಸಿಕೆ ಮಾಹಿತಿ ವರದಿಯನ್ನು ತಾಲ್ಲೂಕು ಉಸ್ತುವಾರಿ ಅಧಿಕಾರಿಗಳು ಅದೇ ದಿನ ಮಧ್ಯಾಹ್ನ 3 ಗಂಟೆಯೊಳಗೆ ಆನ್ ಲೈನ್ ಮೂಲಕ ರವಾನಿಸಲಿದ್ದಾರೆ.
ಜಿಲ್ಲೆಯ ಎಲ್ಲ ತಾಲೂಕುಗಳ ಲಸಿಕೆ ಮಾಹಿತಿಯನ್ನು ಜಿಲ್ಲಾ ಕೇಂದ್ರಕ್ಕೆ ಪ್ರತಿ ದಿನ 4 ಗಂಟೆಯೊಳಗೆ ರವಾನಿಸಲಾಗುತ್ತದೆ. ಕ್ರೋಡೀಕರಿಸಿದ ಮಾಹಿತಿಯನ್ನು ರಾಜ್ಯ ಮಟ್ಟಕ್ಕೆ ಸಂಜೆ 5 ಗಂಟೆಯೊಳಗೆ ಸಲ್ಲಿಸಲಾಗುತ್ತದೆ. ಯಾವುದೇ ಗ್ರಾಮದ ಲಸಿಕೆ ಪ್ರಗತಿ  ಮಾಹಿತಿಯನ್ನು ನಾಗರಿಕರು ವೀಕ್ಷಿಸಲು ಅವಕಾಶವಿದೆ.
ಲಸಿಕೆ ಮಾಡುವ ಮೊದಲು ಜಾನುವಾರುಗಳಲ್ಲಿ ಜಂತು ನಿವಾರಣೆ ಮಾಡುವುದು ಸೂಕ್ತವೆಂದು ನಿರ್ಧರಿಸಲಾಗಿದೆ. ಇದರಿಂದ ಲಸಿಕೆಯಿಂದ ಉಂಟುಮಾಡುವ ರೋಗನಿರೋಧಕ ಶಕ್ತಿ ಹೆಚ್ಚಾಗಲಿದೆ. ಈ ಉದ್ದೇಶಕ್ಕಾಗಿಯೇ ಸಾಮೂಹಿಕ ಜಂತುನಿವಾರಣಾ ಕಾರ್ಯಕ್ರಮವನ್ನು  ನಡೆಸಲಾಗಿದೆ. ಲಸಿಕೆ ಮಾಡುವ ಮೊದಲು ಫೀಕಲ್  ಮಾದರಿಗಳನ್ನು ಶೇಖರಿಸಿ ಜಂತುನಾಶಕ ಸೇವನೆ ಮಾಡಿಸಿದ ಬಳಿಕ ಅದೇ ರಾಸುಗಳಲ್ಲಿ 28 ದಿನದ ನಂತರ ಪರೀಕ್ಷೆ ನಡೆಸಲಾಗುತ್ತದೆ.
ಲಸಿಕೆ ಉಪಯುಕ್ತತೆಯನ್ನು ಅಳೆಯಲು ಜಿಲ್ಲೆಯ ಆಯ್ದ 10 ಗ್ರಾಮಗಳಲ್ಲಿ 20 ಜಾನುವಾರುಗಳಿಂದ ಲಸಿಕೆ ನೀಡುವ ಮೊದಲು ಸೀರಂ ಶೇಖರಿಸಲಾಗುತ್ತದೆ. ಲಸಿಕೆ ಮಾಡಿದ 28ನೇ ದಿನ ಅದೇ ರಾಸುಗಳಿಂದ ಸೀರಂ ಶೇಖರಿಸಿ ರೋಗನಿರೋಧಕ ಶಕ್ತಿ ಪರೀಕ್ಷೆ ಮಾಡಲಾಗುತ್ತದೆ.
ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಲ ಹಾಗೂ ಅರಣ್ಯ ಇಲಾಖೆಯು ಬೃಹತ್ ಲಸಿಕಾ ಆಂದೋಲನಕ್ಕೆ ಕೈಜೋಡಿಸಿವÉ. ಇಲಾಖೆಯ ಲಸಿಕಾ ತಂಡವು ನಿಗದಿತ ದಿನಾಂಕಗಳಂದು ಭೇಟಿ ಕೊಡುವ ಸಂದರ್ಭದಲ್ಲಿ ಜಾನುವಾರು ಮಾಲೀಕರು, ರೈತರು ತಮ್ಮ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು. ಕಾಲುಬಾಯಿ ಜ್ವರ ತಡೆಗೆ ವಿಶೇಷ ಲಸಿಕೆ ನೀಡುವ ಕಾರ್ಯಕ್ರಮದ ಸದುಪಯೋಗ ಮಾಡಿಕೊಳ್ಳಬೇಕೆಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕರು ಮನವಿ ಮಾಡಿದ್ದಾರೆ.

ಈರುಳ್ಳಿ ಬೆಳೆಗೆ ನೇರಳೆ ಎಲೆ ಮಚ್ಚೆ ರೋಗ : ನಿಯಂತ್ರಣಕ್ಕೆ ಸಲಹೆ

ಚಾಮರಾಜನಗರ, ಮೇ. 29 - ತೋಟಗಾರಿಕೆ ಇಲಾಖೆಯು ಈರುಳ್ಳಿ ಎಲೆಯ ಮೇಲೆ ಮಚ್ಚೆರೋಗ ಲಕ್ಷಣಗಳು ಹಾಗೂ ಹತೋಟಿ ಕ್ರಮಗಳ ಕುರಿತು ಈರುಳ್ಳಿ ಬೆಳೆಗಾರರಿಗೆ ಮಾಹಿತಿ ನೀಡಿದೆ.
ಈರುಳ್ಳಿ ಎಲೆಯ ಮೇಲೆ ಮೊದಲಿಗೆ ಸಣ್ಣನೆಯ ತಗ್ಗಾದ ಬಿಳಿ ಮಚ್ಚೆಗಳು ಕಾಣಿಸಿಕೊಂಡು ನಂತರ ನೇರಳೆ ಬಣ್ಣಕ್ಕೆ ತಿರುಗುತ್ತದೆ. ಆಮೇಲೆ ದೊಡ್ಡದಾಗಿ ಎಲೆಗಳು ಒಳಗುತ್ತವೆ. ಮುಂಗಾರಿನಲ್ಲಿ ಈ ರೋಗದ ತೀವ್ರತೆ ಹೆಚ್ಚಾಗಿ ಹರಡುತ್ತದೆ. ಮಳೆ ಹಾಗೂ ಮೋಡ ಕವಿದ ವಾತಾವರಣ ರೋಗ ಹರಡಲು ಅನುಕೂಲವಾಗಿದ್ದು ಹೆಚ್ಚು ನೀರು ನಿಂತ ತಾಕಿನಲ್ಲೂ ಸಹ ರೋಗ ಕಂಡುಬರುತ್ತದೆ. ಏಪ್ರಿಲ್ ಮೇ ಮಾಹೆಯಲ್ಲಿ ನಾಟಿ ಮಾಡಿದ ಈರುಳ್ಳಿ ಬೆಳೆ ಹೆಚ್ಚಾಗಿ ಹಾನಿಗೊಳಗಾಗುತ್ತವೆ.
ರೋಗÀ ನಿವಾರಣೆಗೆ ತೋಟಗಾರಿಕೆ ಇಲಾಖೆ ಕೆಲವು ಸಲಹಾ ಕ್ರಮಗಳನ್ನು ಸೂಚಿಸಿದೆ. ರೋಗ ಮೊದಲ ಹಂತದಲ್ಲಿ ಕಂಡುಬಂದಾಗ 2 ಗ್ರಾಂ ಮೆಟಲಾಕ್ಸಿಲ್ ಅಥವಾ ಕ್ಲೋರೋಥಲಾನಿಲ್ 2 ಗ್ರಾಂ ಮತ್ತು ಮ್ಯಾಂಕೋಜೆಬ್ 2.5 ಗ್ರಾಂ.ನಷ್ಟು ಪ್ರತಿ ಲೀಟರ್ ನೀರಿಗೆ ಬೆರೆಸಿ 7 ರಿಂದ 10 ದಿನಗಳ ಅಂತರದಲ್ಲಿ ಸಿಂಪಡಿಸಬೇಕು. ರೋಗ ಹೆಚ್ಚಾದಲ್ಲಿ ಕಾಂಟಾಫ್ 2 ಗ್ರಾಂ ಅಥವಾ 2 ರಿಂದ 3 ಮಿ.ಲೀ. ಇಪ್ರೊಬೆನ್‍ಫಾಸ್ ಅಥವಾ 2.5 ಗ್ರಾಂ ಕುಫÀ್ರಸ್ ಆಕ್ಸೈಡ್ ಅನ್ನು 1 ಲೀ ನೀರಿನಲ್ಲಿ ಬೆರೆಸಿ 15 ದಿನಗಳ ಅಂತರದಲ್ಲಿ ಎರಡು ಬಾರಿ ಸಿಂಪಡಿಸಬೇಕು.
ಹೆಚ್ಚಿನ ಮಾಹಿತಿಗೆ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚÉೀರಿ ಸಂಪರ್ಕಿಸುವಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ದಿನಾಂಕ:29-05-2018ರಂದು ಬೆಳಿಗ್ಗೆ 7.00 ಗಂಟೆಗೆ ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ  ಪ್ರಾಧಿಕಾರದ ಕಾರ್ಯದರ್ಶಿಗಳಾದ ಶ್ರೀಮತಿ ಎಂ.ಜೆ.ರೂಪಾ,ಕೆ.ಎ.ಎಸ್.(ಹಿ.ಶ್ರೇ)ರವರ ಅಧ್ಯಕ್ಷತೆಯಲ್ಲಿ ಹಾಗೂ  ಶ್ರೀ ಸಾಲೂರು ಬೃಹನ್ಮಠದ ಶ್ರೀ ಶ್ರೀ ಪಟ್ಟದ ಗುರುಸ್ವಾಮಿಗಳವರ ಉಪಸ್ಥಿತಿಯಲ್ಲಿ ಹುಂಡಿಗಳನ್ನು ತೆರೆಯಲಾಗಿದ್ದು, ಸದರಿ ಹುಂಡಿಗಳ  ಪರ್ಕಾವಣೆಯಲ್ಲಿ ಪ್ರಾಧಿಕಾರದ  ಉಪ ಕಾರ್ಯದರ್ಶಿಗಳಾದ ಶ್ರೀ ರಾಜಶೇಖರ್ ಮೂರ್ತಿ ರವರು,  ಎಂ. ಬಸವರಾಜು ಅಧೀಕ್ಷಕರು,   ಲೆಕ್ಕಾಧೀಕ್ಷಕರಾದ ಮಹದೇವಸ್ವಾಮಿ,   ಶ್ರೀಬಿ.ಮದರಾಜು ಅಧೀಕ್ಷಕರು ಹಾಗೂ ದೇವಸ್ಥಾನದ ಎಲ್ಲಾ ನೌಕರರುಗಳು, ಚಾಮರಾಜನಗರ  ಜಿಲ್ಲಾಧಿಕಾರಿಯವರ ಕಛೇರಿಯ  ಪ್ರಥಮ ದರ್ಜೆ ಸಹಾಯಕರಾದ ಶ್ರೀ ಮೋಹನ್ ಕುಮಾರ್  ಮತ್ತು ಮಹದೇಶ್ವರಬೆಟ್ಟ  ಆರಕ್ಷಕ  ಸಿಬ್ಬಂದಿ ವರ್ಗ, ಎಸ್.ಬಿ.ಎಂ. ವ್ಯಯವಸ್ಥಾಪಕರಾದ ಸೆಂದಿಲ್ ನಾಥನ್  & ಸಿಬ್ಬಂದಿ ವರ್ಗದವರು ಹಾಜರಿದ್ದರು.ಇವರೆಲ್ಲರ ಸಹಕಾರದಿಂದ ಹುಂಡಿ ಪರ್ಕಾವಣೆ ಮತ್ತು ಎಣಿಕೆಯ ಕಾರ್ಯ ಸುಗಮವಾಗಿ ಜರುಗಿತು ಸದರಿ ದಿವಸದಂದು ಹುಂಡಿ ಪರ್ಕಾವಣೆಯಿಂದ ಒಟ್ಟು ರೂ.1,48,90,538  ( ಒಂದು ಕೋಟಿ ನಲವತ್ತೆಂಟು ಲಕ್ಷದ ತೊಂಭತ್ತು ಸಾವಿರದ ಐದುನೂರ ಮೂವತ್ತೆಂಟು  ರೂಗಳು) ಬಂದಿರುತ್ತದೆ. ಇದಲ್ಲದೇ  ಚಿನ್ನದ  ಪದಾರ್ಥಗಳು 90  ಗ್ರಾಂ ( ತೊಂಭತ್ತು ಗ್ರಾಂ) ಮತ್ತು ಬೆಳ್ಳಿ  ಪದಾರ್ಥಗಳು1.460   ( ಒಂದು ಕೆ.ಜಿ. ನಾನುರ ಅರವತ್ತು ಗ್ರಾಂ ) ದೊರೆತಿರುತ್ತದೆ. 



ಮೇ. 31ರಂದು ವಿಶ್ವ ತಂಬಾಕು ದಿನಾಚರಣೆ : ಜಾಥಾ, ಉಪನ್ಯಾಸ ಕಾರ್ಯಕ್ರಮ

ಚಾಮರಾಜನಗರ, ಮೇ. 29 - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ವಿಶ್ವ ತಂಬಾಕು ದಿನಾಚರಣೆ ಅಂಗವಾಗಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಮೇ 31ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜಿಲ್ಲಾ ಸತ್ರ ನ್ಯಾಯಾಲಯದ ಆವರಣದಲ್ಲಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದೆ.
ಜಾಥಾ ಕಾರ್ಯಕ್ರಮ ನ್ಯಾಯಾಲಯ ಆವರಣದಿಂದ ಹೊರಟು ಜಿಲ್ಲಾಡಳಿತ ಭವನದ ಮುಂಭಾಗ ಮುಕ್ತಾಯಗೊಳ್ಳಲಿದೆ. ನಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕಣ್ಗಾವಲು ಅಧಿಕಾರಿ ಡಾ. ಎಂ. ನಾಗರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇ. 31ರಂದು ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ : ಅರಿವು ಕಾರ್ಯಾಗಾರ

ಚಾಮರಾಜನಗರ, ಮೇ. 29 :- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ವತಿಯಿಂದ ಮೇ 31ರಂದು ಮಧ್ಯಾಹ್ನ 12.30 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಪ್ರಯುಕ್ತ ಡೆಂಗ್ಯೂ ನಿಯಂತ್ರಣ ಕುರಿತು ಅರಿವು ಮೂಡಿಸುವ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರಿಶಿಷ್ಟ ವರ್ಗ, ಪಂಗಡದ ರೈತರಿಗೆ ಹನಿ ನೀರಾವರಿಗೆ ಸಹಾಯಧನ : ಅರ್ಜಿ ಆಹ್ವಾನ

ಚಾಮರಾಜನಗರ, ಮೇ. 29 - ತೋಟಗಾರಿಕೆ ಇಲಾಖೆಯು ಸೂಕ್ಷ್ಮ ಹನಿ ನೀರಾವರಿ ಯೋಜನೆಯನ್ನು ಜಿಲ್ಲಾದ್ಯಂತ ಅನುಷ್ಠಾನಗೊಳಿಸುತ್ತಿದ್ದು ಜಿಲ್ಲೆಯ ಪರಿಶಿಷ್ಟ ವರ್ಗ, ಪರಿಶಿಷ್ಟ ಪಂಗಡದ ರೈತರಿಗೆ ಸಹಾಯಧನ ಲಭಿಸಲಿದೆ.
ರೈತರು ತರಕಾರಿ, ಹೂವು, ಹಣ್ಣು, ತೋಟದ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು ಶೇ.90ರ ಸಹಾಯಧನ ಸಿಗಲಿದೆ. ತರಕಾರಿ, ಹೂವು, ಅರಿಶಿನ ಇತ್ಯಾದಿ ಕಡಿಮೆ ಅಂತರದ (1.2*0.6 ಮೀ) ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿಕೊಂಡಲ್ಲಿ ಗರಿಷ್ಟ ಪ್ರತಿ ಹೆಕ್ಟೇರ್‍ಗೆ ಶೇ. 90ರಂತೆ ರೂ.109160 (ರೂ.101013+8147), ಬಾಳೆ, ಪಪ್ಪಾಯಿ ಬೆಳೆಗೆ (2*2 ಮೀ ಅಂತರದ) ರೂ.83802 (ರೂ.65824+17978)ರಷ್ಟು ಸಹಾಯಧನವನ್ನು ಎರಡು ಕಂತುಗಳಲ್ಲಿ ಪಡೆಯಲು ಅವಕಾಶವಿದೆ.
ಆಸಕ್ತ ರೈತರು ಆಯಾ ತಾಲೂಕಿನ ತೋಟಗಾರಿಕೆ ಕಚೇರಿಯಲ್ಲಿ ಹೆಸರನ್ನು ನೊಂದಾಯಿಸಿಕೊಂಡು ಯೋಜನೆಯ ಸದುಪಯೋಗ ಪಡೆಯುವಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು