ಇಂದ್ರ ಧನುಷ್ ಅಭಿಯಾನಕ್ಕೆ ಚಾಲನೆ
ಚಾಮರಾಜನಗರ, ಮೇ. 23 - ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ರೋಗನಿರೋಧಕ ಲಸಿಕೆ ನೀಡುವ ಮಿಷನ್ ಇಂದ್ರಧನುಷ್ ಅಭಿಯಾನಕ್ಕೆ ಚಾಮರಾಜನಗರ ತಾಲ್ಲೂಕಿನ ವೆಂಕಟಯ್ಯನ ಛತ್ರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕೋಡಿಉಗನೆ ಉಪಕೇಂದ್ರದಲ್ಲಿ ಇಂದು ಚಾಲನೆ ನೀಡಲಾಯಿತು.ಬಿಸಲವಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ರತ್ನಮ್ಮ ಹಾಗೂ ಜಿಲ್ಲಾ ಲಸಿಕಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಡಾ. ಕೆ.ಎಂ. ವಿಶ್ವೇಶ್ವರಯ್ಯ ಅವರು ಮಿಷನ್ ಇಂದ್ರಧನುಷ್ ಅಭಿಯಾನದಡಿ 24 ಗ್ರಾಮಗಳನ್ನು ಆಯ್ಕೆಮಾಡಿ ಇದರಲ್ಲಿ ಮುಖ್ಯವಾಗಿ ಅಲೆಮಾರಿ, ಗುಡ್ಡಗಾಡು, ಅರಣ್ಯದಂಚಿನ ಸೂಕ್ಷ್ಮ ಪ್ರದೇಶದ ಮಕ್ಕಳಿಗೆ ಹಾಗೂ ಲಸಿಕೆಯಿಂದ ವಂಚಿತರಾದ ಮಕ್ಕಳು ಇರುವ ಪ್ರದೇಶಗಳಿಗೆ ಕ್ರಿಯಾ ಯೋಜನೆ ತಯಾರಿಸಿ ನಿಗದಿತ ದಿನಾಂಕದಂದು ಎಲ್ಲಾ ಮಕ್ಕಳಿಗೂ ಹಾಗೂ ಗರ್ಭಿಣಿಯರಿಗೆ ಲಸಿಕೆ ಹಾಕಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಇಂದು ಕಾರ್ಯಕ್ರಮ ನಡೆದಿದೆ. ಮೇ 25 ಮತ್ತು 26ರಂದು ಸಹ ಲಸಿಕಾ ಅಭಿಯಾನ ಮುಂದುವರಿಯಲಿದೆ. ಜೂನ್ 20, 22, 23 ಹಾಗೂ ಜುಲೈ 18, 20 ಮತ್ತು 21ರಂದು ಮೂರು ಸುತ್ತುಗಳಲ್ಲಿ ಅಭಿಯಾನ ನಡೆಯಲಿದೆ. ಕ್ರಿಯಾ ಯೋಜನೆ ಪ್ರಕಾರ ಅಂದಾಜು 86 ಗರ್ಭಿಣಿಯರು, 2 ವರ್ಷದವರೆಗಿನ 200 ಮಕ್ಕಳು ಹಾಗೂ 5 ರಿಂದ 6 ವರ್ಷದ 275 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಶೇ. 100ರಷ್ಟು ಯಶಸ್ವಿಯಾಗಿ ಕಾರ್ಯಕ್ರಮ ನಡೆಯಲಿದೆ. ನಾಗರಿಕರು ಸಹ ಅಭಿಯಾನಕ್ಕೆ ಕೈಜೋಡಿಸಬೇಕೆಂದು ವಿಶ್ವೇಶ್ವರಯ್ಯ ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್, ವೈದ್ಯಾಧಿಕಾರಿ ಡಾ.ಗೋಂವಿದರಾಜು, ಡಿ.ಎನ್.ಓ ಎಂ.ಶಾಂತಮ್ಮ, ಆರೋಗ್ಯ ಮೇಲ್ವಿಚಾರಕ ಸುರೇಶಚಾರ್, ಡಿ.ವೈ.ಹೆಚ್. ಇ.ಓ ನಾರಾಯಣಸ್ವಾಮಿ (ಪ್ರಭಾರ) ಎಂ&ಇ ರಶ್ಮಿ, ಐಎಫ್‍ವಿ ಮಂಜು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.
ಮೇ. 29ರಂದು ಮಹದೇಶ್ವರ ದೇವಾಲಯದ ಗೋಲಕ ಹಣ ಎಣಿಕೆ
ಚಾಮರಾಜನಗರ, ಮೇ. 23 :- ಕೊಳ್ಳೇಗಾಲ ತಾಲೂಕಿನ ಮಹದೇಶ್ವರ ಬೆಟ್ಟದ ಮಲೆಮಹದೇಶ್ವರ ಸ್ವಾಮಿ ದೇವಾಲಯದ ಗೋಲಕಗಳ ಹಣ ಎಣಿಕೆ ಕಾರ್ಯವು ಮೇ 29ರಂದು ಬೆಳಿಗ್ಗೆ ನಡೆಯಲಿದೆ.
ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಮಹಡಿಯ ವಿಶ್ರಾಂತಿ ಗೃಹದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿ ಸಹಯೋಗದೊಂದಿಗೆ ಎಣಿಕೆ ಕಾರ್ಯವನ್ನು ನಡೆಸಲಾಗುವುದೆಂದು ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ಮಂಗಳವಾರ ಜಿ.ಪಂ. ಸಿಇಓ ಅಧ್ಯಕ್ಷತೆಯಲ್ಲಿ ಜನಸ್ಪಂದನ
ಚಾಮರಾಜನಗರ, ಮೇ. 23 - ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹನಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರತಿ ಮಂಗಳವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಗರದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಯಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗುತ್ತದೆ.ಜಿಲ್ಲಾ ಪಂಚಾಯತ್‍ನ ಹಿರಿಯ ಅಧಿಕಾರಿಗಳು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ. ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಬರುವ ಇಲಾಖೆಗಳಿಗೆ ಸಂಬಂಧಿಸಿದ ದೂರು ಅರ್ಜಿಗಳನ್ನು ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಲಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment