Monday, 14 May 2018

ವಿಧಾನಸಭಾ ಸಾರ್ವತ್ರಿಕ ಚುನಾವಣೆ - 2018 ಮೇ 15ರಂದು ಮತ ಎಣಿಕೆ : ಸರ್ವಸಿದ್ಧತೆ – ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ (14-05-2018)

ವಿಧಾನಸಭಾ ಸಾರ್ವತ್ರಿಕ ಚುನಾವಣೆ - 2018
ಮೇ 15ರಂದು ಮತ ಎಣಿಕೆ : ಸರ್ವಸಿದ್ಧತೆ – ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ 

ಚಾಮರಾಜನಗರ, ಮೇ. 14 :– ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2018ಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಿಗೆ ಮೇ 12ರಂದು ನಡೆದ ಮತದಾನದ ಮತ ಎಣಿಕೆ ಕಾರ್ಯವು ಮೇ 15ರಂದು ಚಾಮರಾಜನಗರ ತಾಲೂಕಿನ ಬೇಡರಪುರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಕಟ್ಟಡದಲ್ಲಿ ಬೆಳಿಗ್ಗೆ 8 ಗಂಟೆಗೆ ಆರಂಭವಾಗುವ, ಇದಕ್ಕಾಗಿ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದ್ದಾರೆ.

ಹನೂರು, ಕೊಳ್ಳೇಗಾಲ, ಚಾಮರಾಜನಗರ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯಕ್ಕೆ ಪ್ರತೀ ಕ್ಷೇತ್ರಕ್ಕೆ ತಲಾ ಒಂದು ಹಾಲ್‍ಗಳನ್ನು ಬಳಕೆ ಮಾಡಲಾಗುತ್ತಿದೆ. ಪ್ರತೀ ವಿಧಾನಸಭಾ ಕ್ಷೇತ್ರದ ಮತ ಎಣಿಕೆಗೆ 14 ಟೇಬಲ್‍ಗಳನ್ನು ಬಳಸಲಾಗುತ್ತದೆ. ವಿದ್ಯುನ್ಮಾನ ಮತಯಂತ್ರಗಳನ್ನು ಒಟ್ಟು 7 ಭದ್ರತಾ ಕೊಠಡಿಗಳಲ್ಲಿ ಇಡಲಾಗಿದೆ. ನಾಲ್ಕೂ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ಒಟ್ಟು 56 ಟೇಬಲ್‍ಗಳಲ್ಲಿ ನಡೆಯಲಿದ್ದು, ಹನೂರು, ಕೊಳ್ಳೇಗಾಲ ಹಾಗೂ ಗುಂಡ್ಲುಪೇಟೆ ಮತ ಎಣಿಕೆಯು ತಲಾ 18 ಸುತ್ತುಗಳಲ್ಲಿ ನಡೆಯಲಿದ್ದು, ಚಾಮರಾಜನಗರ ಕ್ಷೇತ್ರದ ಮತ ಎಣಿಕೆಯು ಒಟ್ಟು 17 ಸುತ್ತುಗಳಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಮತ ಎಣಿಕೆ ಕಾರ್ಯಕ್ಕಾಗಿ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ 20 ಮೈಕ್ರೋ ಅಬ್ಸರ್‍ವರ್‍ಗಳು, 17 ಎಣಿಕೆ ಮೇಲ್ವಿಚಾರಕರು, 18 ಎಣಿಕೆ ಸಹಾಯಕರನ್ನು ನೇಮಕ ಮಾಡಲಾಗಿದೆ. ಒಟ್ಟಾರೆ ನಾಲ್ಕೂ ವಿಧಾನಸಭಾ ಕ್ಷೇತ್ರಗಳಿಗೆ 80 ಮೈಕ್ರೋ ಅಬ್ಸರ್‍ವರ್‍ಗಳು, 68 ಎಣಿಕೆ ಮೇಲ್ವಿಚಾರಕರು ಹಾಗೂ 72 ಎಣಿಕೆ ಸಹಾಯಕರು ಮತ ಎಣಿಕೆ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಮತ ಎಣಿಕೆ ಕಾರ್ಯಕ್ಕಾಗಿ ಚುನಾವಣಾ ಆಯೋಗವು ಬಿಇಎಲ್ ಸಂಸ್ಥೆಯಿಂದ ಇಬ್ಬರು ವಿದ್ಯುನ್ಮಾನ ಯಂತ್ರಗಳ ತಂತ್ರಜ್ಞರನ್ನು ನಿಯೋಜಿಸಿದೆ. ಮತ ಎಣಿಕೆ ಕೇಂದ್ರದಲ್ಲಿ ತುರ್ತು ಆರೋಗ್ಯ ಸೇವೆ ಹಾಗೂ ಅಗ್ನಿಶಾಮಕ ಸೇವೆಯನ್ನು ಸಹ ಸನ್ನದ್ಧವಾಗಿರಿಸಿದೆ.
ಮತ ಎಣಿಕೆ ಕೇಂದ್ರದ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಭದ್ರತಾ ಕೊಠಡಿಯ ಸುರಕ್ಷತೆಯನ್ನು ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತ್ತು ಏಜೆಂಟರು ಮತ ಎಣಿಕೆ ಕೇಂದ್ರದ ಹೊರಗಿನಿಂದ ಸಿಸಿ ಟಿವಿ ಮೂಲಕ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಮತ ಎಣಿಕೆ ಕೇಂದ್ರ ಹಾಗೂ ಆವರಣದ  ಸುತ್ತಲೂ 24*7 ಅವಧಿಯಲ್ಲೂ ಅತ್ಯಂತ ಬಿಗಿಯಾದ ಮೂರು ಸುತ್ತಿನ ಭದ್ರತಾ ವ್ಯವಸ್ಥೆಯನ್ನು ಸಿಎಪಿಎಫ್, ಕರ್ನಾಟಕ ರಾಜ್ಯ ಮೀಸಲು ಪಡೆ (ಕೆಎಸ್‍ಆರ್‍ಪಿ) ಮತ್ತು ರಾಜ್ಯ ಸಶಸ್ತ್ರ ಪೊಲೀಸ್ ಪಡೆಯ ಮೂಲಕ ಕಲ್ಪಿಸಲಾಗಿದೆ.
ಮತ ಎಣಿಕೆಯಂದು ಮುನ್ನೆಚ್ಚರಿಕೆ ಕ್ರಮವಾಗಿ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಎಣಿಕೆ ಸಮಯದಲ್ಲಿ ಹಾಗೂ ಎಣಿಕೆ ಕಾರ್ಯ ಮುಗಿದ ನಂತರ ಯಾವುದೇ ಅಹಿತಕರ ಘಟನೆಗಳು ನಡೆಯುವುದನ್ನು ತಪ್ಪಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮತ ಎಣಿಕೆ ಕೇಂದ್ರದ ಹೊರ ಆವರಣದ 200 ಮೀ. ದೂರದಲ್ಲಿ ವಾಹನಗಳ ನಿಲುಗಡೆಗೆ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ.
ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮ ಪ್ರತಿನಿಧಿಗಳಿಗಾಗಿ ಮಾಧ್ಯಮ ಕೇಂದ್ರ ತೆರೆಯಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಅಧಿಕೃತ ಗುರುತಿನ ಪ್ರವೇಶ ಪತ್ರವನ್ನು ನೀಡಲಾಗಿದೆ. ಈ ಪ್ರವೇಶಪತ್ರ ಇದ್ದವರಿಗೆ ಮಾತ್ರ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸಲು ಅವಕಾಶವಿರುತ್ತದೆ. ಮತ ಎಣಿಕೆ ಕೇಂದ್ರಕ್ಕೆ ಮೊಬೈಲ್, ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಂಡೊಯ್ಯಲು ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಮೇ 15ರ ಬೆಳಿಗ್ಗೆ 6 ರಿಂದ ಮೇ 16ರ ಮದ್ಯರಾತ್ರಿ 12 ಗಂಟೆಯವರೆಗೆ ಸಿಆರ್‍ಪಿಸಿ ಕಲಂ 144ರ ಕಲಂ ಅನ್ವಯ ನಿಷೇದಾಜ್ಞೆಯನ್ನು ಹೊರಡಿಸಲಾಗಿದೆ. (ಮತ ಎಣಿಕೆ ಕೇಂದ್ರದ ಸಮೀಪ ಮತ ಎಣಿಕೆ ಮುಕ್ತಾಯದವರೆಗೆ ಹೊರತುಪಡಿಸಿ)
ಮತ ಎಣಿಕೆ ಕಾರ್ಯದ ಹಿನ್ನೆಲೆಯಲ್ಲಿ ಮೇ 14ರ ಮಧÀ್ಯರಾತ್ರಿಯಿಂದ ಮೇ 15ರ ಮಧ್ಯರಾತ್ರಿಯವರೆಗೆ ಮದ್ಯ ಮಾರಾಟ, ಸಾಗಾಣೀಕೆ, ಶೇಖರಣೆ ಮತ್ತು ಹಂಚಿಕೆಯನ್ನು ನಿಷೇಧಿಸಿ ಈ ಅವಧಿಯನ್ನು ಒಣದಿನಗಳೆಂದು ಘೋಷಿಸಲಾಗಿದೆ.
ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 43 ಅಭ್ಯರ್ಥಿಗಳು ಇದ್ದಾರೆ. ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟಾರೆ 984 ಬಿಯು ಹಾಗೂ ಸಿಯು (ವಿದ್ಯುನ್ಮಾನ ಮತಯಂತ್ರ) ಹಾಗೂ 998 ವಿವಿ ಪ್ಯಾಟ್‍ಗಳನ್ನು ಒಳಸಲಾಗಿದೆ. ಮತ ಎಣಿಕೆ ಕಾರ್ಯ ಪೂರ್ಣಗೊಂಡ ನಂತರ ವಿದ್ಯುನ್ಮಾನ ಮತಯಂತ್ರಗಳನ್ನು ಜಿಲ್ಲಾ ಕೇಂದ್ರದ ಭದ್ರತಾ ಕೊಠಡಿಗೆ ಸ್ಥಳಾಂತರಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಆದರ್ಶ ವಿದ್ಯಾಲಯ : 6ನೇ ತರಗತಿ ಪ್ರವೇಶಕ್ಕೆ ಅವಕಾಶ

ಚಾಮರಾಜನಗರ, ಮೇ. 14  ಚಾಮರಾಜನಗರದ ಆದರ್ಶ ವಿದ್ಯಾಲಯದಲ್ಲಿ 6ನೇ ತರಗತಿ ಪ್ರವೇಶಕ್ಕೆ ಮೇ 16 ರಿಂದ 25ರ ಸಂಜೆ 5 ಗಂಟೆಯವರೆಗೆ ಪ್ರವೇಶಕ್ಕೆ ಅವಕಾಶವಿದೆ.
ಮೊದಲ ಹಂತದಲ್ಲಿ ಆಯ್ಕೆಗೊಂಡ ಪೋಷಕರಿಗೆ ಸಂದೇಶ ರವಾನಿಸಿದ್ದು ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯಲು ತಿಳಿಸಿದೆ ಎಂದು ಆದರ್ಶ  ವಿದ್ಯಾಲಯದ ಮುಖ್ಯ ಶಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

























































No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು