Tuesday, 8 May 2018

(03-05-2018)ವಿಧಾನಸಭಾ ಸಾರ್ವತ್ರಕ ಚುನಾವಣೆ ಮತದಾನಕ್ಕೆ ಅವಶ್ಯ ದಾಖಲೆ


ವಿಧಾನಸಭಾ ಸಾರ್ವತ್ರಕ ಚುನಾವಣೆ
ಮತದಾನಕ್ಕೆ ಅವಶ್ಯ ದಾಖಲೆ 

ಚಾಮರಾಜನಗರ, ಮೇ. 3 -  ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಮೇ 12ರಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು ಮತದಾರರು ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ ನೀಡಿ ಮತಚಲಾಯಿಸಬೇಕಾಗಿರುತ್ತದೆ.  ಒಂದುವೇಳೆ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ ಹಾಜರು ಪಡಿಸಲು ಸಾಧ್ಯವಾಗದಿದ್ದಲ್ಲಿ ಪಾಸ್‍ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಕೇಂದ್ರ/ರಾಜ್ಯ ಸರ್ಕಾರದ ಸಾರ್ವಜನಿಕ ಸೇವಾ ವಲಯ, ಸಾರ್ವಜನಿಕ ಕಂಪನಿಗಳು ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ, ಬ್ಯಾಂಕ್, ಅಂಚೆ ಕಚೇರಿಗಳು ವಿತರಿಸಿರುವ ಭಾವಚಿತ್ರವಿರುವ ಪಾಸ್ ಪುಸ್ತಕ, ಪಾನ್ ಕಾರ್ಡ್, ನರೇಗಾ ಉದ್ಯೋಗ ಪತ್ರ, ನೋಂದಾಯಿತ ಗ್ಯಾಸ್ ಏಜೆನ್ಸಿಗಳು ರಾಷ್ಟ್ರೀಯ ಜನಸಂಖ್ಯಾ ದಾಖಲಾತಿ (ಎನ್‍ಪಿಆರ್) ಅಡಿಯಲ್ಲಿ ವಿತರಿಸುವ ಗುರುತಿನ ಚೀಟಿ, ಕಾರ್ಮಿಕ ಇಲಾಖೆಯ ವತಿಯಿಂದ ವಿತರಿಸಲಾಗುವ ಆರೋಗ್ಯ ವಿಮಾ ಗುರುತಿನ ಚೀಟಿ, ಭಾವಚಿತ್ರವಿರುವ ಪಿಂಚಣಿ ದಾಖಲಾತಿ, ಚುನಾವಣಾ ಆಯೋಗವು ವಿತರಿಸಿರುವ ಭಾವಚಿತ್ರವಿರುವ ದೃಡೀಕೃತ ಮತದಾರರ ಚೀಟಿ, ಲೋಕಸಭಾ/ವಿಧಾನಸಭಾ/ವಿಧಾನಪರಿಷತ್ ಸದಸ್ಯರು ವಿತರಿಸಿರುವ ಅಧಿಕೃತ ಗುರುತಿನ ಪತ್ರ, ಆಧಾರ್ ಕಾರ್ಡ್ ಈ ಪೈಕಿ ಯಾವುದಾದರೂ ಒಂದು ದಾಖಲಾತಿಯನ್ನು ಹಾಜರು ಪಡಿಸಿ ಮತಚಲಾಯಿಸಬಹುದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಬಿ.ಬಿ.ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಅಭ್ಯರ್ಥಿಗಳ ಸರ್ಕಾರಿ ಬಾಕಿ ವಿವರ ಕುರಿತ ಅಫಿಡವಿಟ್ ಮಾಹಿತಿ ಪ್ರಕಟ

ಚಾಮರಾಜನಗರ, ಮೇ. 2 - ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಜಿಲ್ಲೆಯ ಹನೂರು, ಕೊಳ್ಳೇಗಾಲ, ಚಾಮರಾಜನಗರ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ಸ್ಪರ್ಧಿಸಿರುವ ಒಟ್ಟು 43 ಅಭ್ಯರ್ಥಿಗಳು ಸರ್ಕಾರಕ್ಕೆ ಕೊಡಬೇಕಾದ ಬಾಕಿ ಬಗ್ಗೆ ಸಲ್ಲಿಸುವ ಅಫಿಡವಿಟ್‍ನಲ್ಲಿರುವ ಮಾಹಿತಿಯನ್ನು ಮತದಾರರ ಮಾಹಿತಿಗೆ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದ್ದಾರೆ.
ಸರ್ಕಾರಿ ವಸತಿ, ನೀರು ಸರಬರಾಜು, ವಿದ್ಯುತ್ ಸರಬರಾಜು, ಟೆಲಿಫೋನ್, ಸರ್ಕಾರಿ ಸಾರಿಗೆ (ಏರ್ ಕ್ರಾಫ್ಟ್ ಮತ್ತು ಹೆಲಿಕ್ಯಾಪ್ಟರ್ ಸೇರಿದಂತೆ) ಇತರೆ ಯಾವುದೇ ಸರ್ಕಾರಿ ಬಾಕಿ ಇರುವುದಿಲ್ಲವೆಂದು ಅಭ್ಯರ್ಥಿಗಳು ಅಫಿಡವಿಟ್‍ನಲ್ಲಿ ಘೋಷಿಸಿಕೊಂಡಿರುತ್ತಾರೆ.

ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

ಚಾಮರಾಜನಗರ, ಮೇ. 2 - ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಪ್ರಥಮ ಎಂಎ ವಿದ್ಯಾರ್ಥಿಗಳಿಂದ ದ್ವಿತೀಯ ಎಂಎ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ, ಕನ್ನಡ ಪದಕ ವಿಜೇತರಿಗೆ ಸನ್ಮಾನ ಹಾಗೂ ಸುವರ್ಣ ಕನ್ನಡ ಬಹುಮಾನ ವಿತರಣಾ ಸಮಾರಂಭ ಮೇ 3ರಂದು ಬೆಳಿಗ್ಗೆ 10.30 ಗಂಟೆಗೆ ಏರ್ಪಡಿಸಲಾಗಿದೆ.
ನಗರದ ಸುವರ್ಣ ಗಂಗೋತ್ರಿಯ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ನಡೆಯಲಿರುವ ಸಮಾರಂಭವು ಅತಿಥಿ ಗಣ್ಯರಿಂದ ಉದ್ಘಾಟನೆಗೊಳ್ಳಲಿದೆ. ಕೇಂದ್ರದ ನಿರ್ದೇಶಕರಾದ ಪ್ರೊ. ಶಿವಬಸವಯ್ಯ ಅಧ್ಯಕ್ಷತೆ ವಹಿಸುವರು.
ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಹಾಗೂ ಪ್ರಾಧ್ಯಾಪಕರಾದ ಪ್ರೊ. ನೀಲಗಿರಿ ಎಂ ತಳವಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ನಗರದ ಡಾ.ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕರಾದ ಪ್ರೊ/ ಕೃಷ್ಣಮೂರ್ತಿ ಹನೂರು, ಅತಿಥಿಒ ಉಪನ್ಯಾಸಕರಾದ ಯು.ಪಿ. ತಮ್ಮೇಗೌಡ, ಎಂ.ಎಸ್. ಬಸವಣ್ಣ, ಡಾ. ಎಂ. ಭೈರಪ್ಪ, ಪಿ. ಮಹೇಶ್ ಬಾಬು ಹಾಗೂ ಪಿ. ರಾಣಿ ಅವರುಗಳು ಉಪಸ್ಥಿತರಿರುವರು.
2015-17ನೇ ಸಾಲಿನ ಕನ್ನಡ ಎಂಎ ವಿದ್ತಾರ್ಥಿಗಳಾದ ವನಜ ಕೆ.ಜಿ, ಶೈಲಶ್ರೀ ಎನ್, ಭವಾನಿ ಎಸ್ ಚಿನ್ನದ ಪದಕ ವಿಜೇತರಾಗಿದ್ದಾರೆ ಹಾಗೂ 2016-17ನೇ ಸಾಲಿನ ದ್ವಿತೀಯ ಕನ್ನಡ ಎಂಎ ವಿದ್ಯಾರ್ಥಿಗಳಾದ ಪವನ್ ಕುಮಾರ್ ಎಸ್, ಭಾಗ್ಯಮ್ಮ ಕೆ.ಎಸ್. ಪ್ರೇಮ್ ಕುಮಾರ್ ಎಂ ಸುವರ್ಣ ಕನ್ನಡ ಬಹುಮಾನಿತರು ಕಾರ್ಯಕ್ರಮದಲ್ಲಿ ಹಾಜರಿರುವರು ಎಂದು ಪ್ರಕಟಣೆ ತಿಳಿಸಿದೆ.
ತಾಲೂಕುಗಳಿಗೆ ಭ್ರಷ್ಟಾಚಾರ ನಿಗ್ರಹದಳ ಅಧಿಕಾರಿಗಳ ಭೇಟಿ : ನಾಗರಿಕರಿಂದ ದೂರು ಸ್ವೀಕಾರ
ಚಾಮರಾಜನಗರ, ಮೇ. 02 - ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮೇ 7 ರಿಂದ 29ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಭೇಟಿ ನೀಡಿ ಸಾರ್ವಜನಿಕರಿಂದ ದÀೂರುಗಳನ್ನು ಸ್ವೀಕರಿಸುವರು.
ಮೇ 7ರಂದು ಗುಂಡ್ಲುಪೇಟೆ ತಾಲೂಕಿನ ಸಾರ್ವಜನಿಕರಿಂದ ಗುಂಡ್ಲುಪೇಟೆಯ ಸರ್ಕಾರಿ ಅತಿಥಿಗೃಹದಲ್ಲಿ,  15ರಂದು ಚಾಮರಾಜನಗರ ತಾಲೂಕಿಗೆ ಸಂಬಂಧಿಸಿದಂತೆ ನಗರದ ಎಸಿಬಿ ಪೊಲೀಸ್ ಠಾಣೆಯಲ್ಲಿ ದೂರುಗಳನ್ನು ಸ್ವೀಕರಿಸುವರು. 21ರಂದು ಯಳಂದೂರು, 25ರಂದು ಕೊಳ್ಳೇಗಾಲ ಹಾಗೂ 29ರಂದು ಹನೂರಿನಲ್ಲಿ ದೂರುಗಳನ್ನು ಅಲ್ಲಿನ ಸರ್ಕಾರಿ ಅತಿಥಿಗೃಹದಲ್ಲಿ ಸ್ವೀಕರಿಸುವರು.
ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಕ್ಕೆ ವಿಳಂಬ, ಲಂಚದ ಹಣಕ್ಕೆ ಒತ್ತಾಯ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದ್ದು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಎಸ್‍ಆರ್‍ಟಿಸಿ : ದಂಡ ವಸೂಲಿ

 ಚಾಮರಾಜನಗರ, ಮೇ. 2 - ಚಾಮರಾಜನಗರ ವಿಭಾಗದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು 2018ರ ಮಾರ್ಚ್ ಮಾಹೆಯಲ್ಲಿ 2542 ಬಸ್ಸುಗಳನ್ನು ಮಾರ್ಗ ತನಿಖೆಗೆ ಒಳಪಡಿಸಿ 235 ಪ್ರಕರಣಗಳನ್ನು ಪತ್ತೆ ಹಚ್ಚಿದೆ.
 ಅಧಿಕೃತ ಟಿಕೆಟ್ ಪಡೆಯದೆ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದ 353 ಪ್ರಯಾಣಿಕರಿಂದ ರೂ. 45330ಗಳ  ದಂಡ ವಸೂಲಿ ಮಾಡಲÁಗಿದೆ ಎಂದು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಆರ್. ಅಶೋಕ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ತರಗತಿ ಆರಂಭ

 ಚಾಮರಾಜನಗರ, ಮೇ. 2 :- ದ್ವಿತೀಯ ಪಿಯುಸಿ ತರಗತಿಗಳು ಮೇ 2ರಿಂದ ಪ್ರಾರಂಭವಾಗಿದ್ದು ಪ್ರಥಮ ಪಿಯುಸಿ ತರಗತಿಗಳು ಮೇ 24ರಿಂದ ಆರಂಭವಾಗಲಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಮೇ 2ರಿಂದ ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭವಾಗಿರುವುದರಿಂದ ಸಂಬಂಧಪಟ್ಟ ಕಾಲೇಜು ಪ್ರಾಂಶುಪಾಲರು ಪ್ರಥಮ ಪಿಯುಸಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳಿಗೆ ತರಗತಿಗೆ ಹಾಜರಾಗುವಂತೆ ತಿಳಿಸಬೇಕು. ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಈಹಿಂದೆ ಮೇ 14ರಿಂದ ತರಗತಿಗಳು ಆರಂಭವಾಗಲಿವೆ ಎಂದು ತಿಳಿಸಲಾಗಿತ್ತು. ಆದರೆ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರ ಸೂಚನೆ ಮೇರೆಗೆ  ಮೇ 24ರಿಂದ ಪ್ರಥಮ ಪಿಯುಸಿ ತರಗತಿಗಳು ಪ್ರಾರಂಭವಾಗಲಿದೆ.
ಕಾಲೇಜು ಪ್ರಾಂಶುಪಾಲರು ದಾಖಲಾತಿ ಆಂದÉೂೀಲನಕ್ಕಾಗಿ ಅಗತ್ಯಕ್ರಮ ತೆಗೆದುಕೊಳ್ಳಬೇಕು. ಹೆಚ್ಚು ಸಂಖ್ಯೆಯಲ್ಲಿ ಪ್ರಥಮ ಪಿಯುಸಿಗೆ ದಾಖಲಾತಿ ಮಾಡಿಕೊಳ್ಳಲು ಕ್ರಮ ತೆಗೆದುಕೊಳ್ಳಬೇಕೆಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ವಿ.ಆರ್. ಶ್ಯಾಮಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಧಿಕಾರ ಸ್ವೀಕಾರ

 ಚಾಮರಾಜನಗರ, ಮೇ. 2 -  ಚಾಮರಾಜನಗರ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಹಿರಿಯ ಸಹಾಯಕ ನಿರ್ದೇಶಕರಾಗಿ ಪಲ್ಲವಿ ಹೊನ್ನಾಪುರ ಅವರು ಅಧಿಕಾರ ವಹಿಸಿಕೊಂಡಿದ್ದಾರೆಂದು ಪ್ರಕಟಣೆ ತಿಳಿಸಿದೆ.
.
ಮೇ 5ರಂದು ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆ
 ಚಾಮರಾಜನಗರ, ಮೇ. 2 - ಜಿಲ್ಲಾಡಳಿತದ ವತಿಯಿಂದ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಚುನಾವಣೆ ನೀತಿ ಸಂಹಿತಿ ಜಾರಿ ಹಿನ್ನಲೆಯಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸುವ ಕುರಿತು ಹೆಚ್ಚುವರಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮೇ 5ರಂದು ಮಧ್ಯಾಹ್ನ 3.30 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ಈ ಸಭೆಗೆ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಎಲ್ಲಾ ಸಮುದಾಯ ಮುಖಂಡರು ಆಗಮಿಸಿ ಆಚರಣೆ ಸಂಬಂಧ ಸಲಹೆ ಸಹಕಾರ ನೀಡುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

ನೈತಿಕ ಮತದಾನಕ್ಕೆ ಪ್ರೆರೇಪಿಸಿ: ಜಿ.ಪಂ ಸಿಇಓ ಡಾ.ಕೆ.ಹರೀಶ್ ಕುಮಾರ್ 

 ಚಾಮರಾಜನಗರ, ಮೇ. 2 :- ಪ್ರಜಾಪಭುತ್ವದ ಯಶಸ್ವಿಗೆ ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು.  ನೈತಿಕ ಮತದಾನಕ್ಕೆ ಜನರನ್ನು ಉತ್ತೇಜಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರೂ ಆದ ಡಾ.ಕೆ.ಹರೀಶ್ ಕುಮಾರ್ ತಿಳಿಸಿದರು.  


ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಇಂದು ನಗರಸಭೆ, ರೆಡ್ ಕ್ರಾಸ್ ಹಾಗೂ ಮಹಿಳಾ ಸ್ವಸಹಾಯ ಗುಂಪುಗಳ ಪ್ರತಿನಿದಿಗಳು ಮತದಾನ ಜಾಗೃತಿಗಾಗಿ ನಡೆಸಿದ ಜಾಥಾ ಬಳಿಕ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನತಂತ್ರ ವ್ಯವಸ್ಥೆ ಸಂಪೂರ್ಣವಾಗಿ ಫಲಪ್ರದವಾಗಬೇಕಾದರೆ ಎಲ್ಲರೂ ಮತದಾನದಂತಹ ಮಹತ್ವದ ಹಕ್ಕನ್ನು ಚಲಾಯಿಸಬೇಕು.  ಯಾವುದೇ ಆಮಿಷಕ್ಕೆ ಒಳಗಾಗದೆ ನೈತಿಕ ಮತದಾನ ಮಾಡಬೇಕು.  ಈ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕೆಂದು ತಿಳಿಸಿದರು.
ಮತದಾನದ ಪ್ರಮಾಣ ಹೆಚ್ಚಳವಾಗಬೇಕು.  ಯಾರೂ ಸಹ ಮತದಾನದಿಂದ ದೂರ ಉಳಿಯಬಾರದು.  ವಿಶೇಷ ಚೇತನರು ಸೇರಿದಂತೆ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ವಿಶೇಷ ಚೇತನರಿಗೆ ಅಗತ್ಯವಿರುವ ತ್ರಿಚಕ್ರ ವಾಹನ ಇನ್ನಿತರ ಅವಶ್ಯಕ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹರೀಶ್ ಕುಮಾರ್ ಅವರು ತಿಳಿಸಿದರು.
ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜನರು ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸುವ ಬಗ್ಗೆ ವಿಶೇಷ ಗಮನ ವಹಿಸಬೇಕು.  ಮುಕ್ತವಾಗಿ ಮತದಾನ ಮಾಡಲು ಉತ್ತೇಜಿಸಬೇಕೆಂದು ಹರೀಶ್ ಕುಮಾರ್ ಅವರು ತಿಳಿಸಿದರು.
ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಡಾ.ಮಹೇಶ್ ಮಾತನಾಡಿ ಮತದಾನ ಜಾಗೃತಿಗಾಗಿ ರೆಡ್ ಕ್ರಾಸ್ ಸಂಸ್ಥೆಯು ಕೈ ಜೋಡಿಸಿದೆ.  ಮತದಾನ ಮಹತ್ವ ಕುರಿತು ಅರಿವು ಮೂಡಿಸುವ ಸ್ಟಿಕ್ಕರ್‍ಗಳನ್ನು ಮನೆಗಳಿಗೆ ಅಳವಡಿಸಲಾಗುತ್ತಿದೆ ಎಂದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ಚಾಮರಾಜೇಶ್ವರ ದೇವಾಲಯ ಬಳಿ ಜಾಥಾಗೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಅವರು ಚಾಲನೆ ನೀಡಿದರು.
ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ವೆಂಕಟನಾಯಕ ಇತರೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. 




ಪ್ರತಿಷ್ಠಿತ ಶಾಲೆಗಳ ಪ್ರವೇಶಕ್ಕೆ ಅಲೆಮಾರಿ, ಅರೆ ಅಲೆಮಾರಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಚಾಮರಾಜನಗರ, ಮೇ. 3 - ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಎಸ್‍ಡಿಎ ಇಂಗ್ಲೀಷ್ ಹೈಸ್ಕೂಲ್ (ಸವೆಂತ್ ಡೇ ಇಂಗ್ಲೀಷ್ ಹೈಸ್ಕೂಲ್),  ಮತ್ತು ಹನೂರಿನ ವಿವೇಕಾಂದ ಹೆಚ್‍ಪಿಎಸ್ ಶಾಲೆಯಲ್ಲಿ ಪ್ರಸಕ್ತ ಸಾಲಿಗೆ 6ನೇ ತರಗತಿ ಪ್ರವೇಶಕ್ಕೆ ಅಲೆಮಾರಿ, ಅರೆ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
5ನೇ ತರಗತಿ ಉತ್ತೀರ್ಣರಾಗಿದ್ದು, ವಾರ್ಷಿಕ ವರಮಾನ 2 ಲಕ್ಷ ರೂ.ಗಳ ಒಳಗಿರುವ ಗೊಲ್ಲ, ಹೆಳವ, ಬುಡಬುಡಿಕೆ, ಬುಂಡೆ ಬೆಸ್ತ, ದರ್ವೇಶ್, ಬಾಜಿಗರ್, ದೊಂಬಿದಾಸ, ಜೋಗಿ, ಬೈರಾಗಿ, ಗೋಂದಳಿ ಇತ್ಯಾದಿ ಜನಾಂಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪಡೆದು ಭರ್ತಿ ಮಾಡಿ ಮೇ 31ರೊಳಗೆ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಕಚೇರಿ ಹಾಗೂ ದೂರವಾಣಿ ಸಂಖ್ಯೆ 08226-222180 ಸಂಪರ್ಕಿಸುವಂತೆ ಇಲಾಖೆ ಪ್ರಕಟಣೆ ತಿಳಿಸಿದೆ.







No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು