Saturday, 19 May 2018

ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣಾ ವೇಳಾಪಟ್ಟಿ ಪ್ರಕಟ (18-05-2018)

ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣಾ ವೇಳಾಪಟ್ಟಿ ಪ್ರಕಟ

ಚಾಮರಾಜನಗರ, ಮೇ. 18 – ಕರ್ನಾಟಕ ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ, ಭಾರತ ಚುನಾವಣಾ ಆಯೋಗವು ಮೈಸೂರಿನ ಮಾನ್ಯ ಪ್ರಾದೇಶಿಕ ಆಯುಕ್ತರÀನ್ನು ದಕ್ಷಿಣ ಶಿಕ್ಷಕರ ಕ್ಷೇತ್ರ (ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ ) ಚುನಾವಣಾಧಿಕಾರಿಗಳಾಗಿ ನೇಮಿಸಿದೆ.
ಚಾಮರಾಜನಗರ ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಯವರನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಿಸಿದ್ದು, ಮೇ 12 ರಂದು ಚುನಾವಣಾ ವೇಳಾಪಟ್ಟಿಯನ್ನು ಹೊರಡಿಸಿದೆ. ಮೇ 15 ರಿಂದ ಜೂನ್ 15 ರವರೆಗೆ ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿರುತ್ತದೆ.
ಮೇ 15ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗಿದ್ದು, ನಾಮಪತ್ರ ಸ್ವೀಕರಿಸಲು ಮೇ 22 ಕಡೆಯ ದಿನವಾಗಿದೆ. 23ರಂದು ನಾಮಪತ್ರಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ನಾಮಪತ್ರಗಳನ್ನು ವಾಪಸ್ಸು ಪಡೆಯಲು 25 ಕೊನೆಯ ದಿನ. ಜೂನ್ 8ರಂದು ಬೆಳಿಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಜೂನ್ 12ರಂದು ಮತ ಎಣಿಕೆ ನಡೆಯಲಿದೆ. ಜೂನ್ 15 ಚುನಾವಣಾ ಕೆಲಸ ಕಾರ್ಯಗಳ ಅಂತಿಮ ದಿನವಾಗಿದೆ.
ಜಿಲ್ಲೆಯಲ್ಲಿ ಚಾಮರಾಜನಗರ. ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ ಮತ್ತು ಹನೂರು ಸೇರಿದಂತೆ 5 ತಾಲೂಕು ಕೇಂದ್ರಗಳಲ್ಲಿಯು ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿದೆ. 2018ರ ಜನವರಿ 19ರ ಅಂತ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು 1868 ಮಂದಿ ಮತದಾರರಿದ್ದಾರೆ.
ಗುಂಡ್ಲುಪೇಟೆ ತಾಲೂಕಿನಲ್ಲಿ 282 ಪುರುಷರು, 61 ಮಹಿಳೆಯರು ಸೇರಿದಂತೆ ಒಟ್ಟು 343 ಮತದಾರರಿದ್ದಾರೆ. ಚಾಮರಾಜನಗರ ತಾಲೂಕಿನಲ್ಲಿ 423 ಪುರುಷರು ಹಾಗೂ 227 ಮಹಿಳೆಯರು ಸೇರಿದಂರೆ ಒಟ್ಟು 650 ಮಂದಿ ಮತ ಚಲಾಯಿಸಲಿದ್ದಾರೆ. ಯಳಂದೂರು ತಾಲೂಕಿನಲ್ಲಿ 129 ಪುರುಷರು, 43 ಮಹಿಳೆಯರು ಸೇರಿದಂತೆ ಒಟ್ಟು 172, ಕೊಳ್ಳೇಗಾಲ ತಾಲೂಕಿನಲ್ಲಿ 338 ಪುರುಷರು, 189 ಮಹಿಳೆಯರು ಮತ್ತು ಹನೂರು ತಾಲೂಕಿನಲ್ಲಿ 153 ಪುರುಷರು ಹಾಗೂ 23 ಮಹಿಳೆಯರು ಸೇರಿದಂತೆ ಒಟ್ಟು 176 ಮತದಾರರು ಮತ ಚಲಾಯಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದ್ದಾರೆ.
 
************************************************************************

ಪ್ರಧಾನ ಮಂತ್ರಿ ಫಸಲು ವಿಮಾ ಯೋಜನೆ : ಹೆಸರು ನೊಂದಾಯಿಸಲು ಅವಕಾಶ

ಚಾಮರಾಜನಗರ, ಮೇ. 18 - ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯನ್ನು ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಹೋಬಳಿ, ಗ್ರಾಮ ಪಂಚಾಯಿತಿ, ಬೆಳೆಗಳ ಬಗ್ಗೆ  ಅನುಷ್ಠಾನಗೊಳಿಸಲಾಗುತ್ತಿದೆ.
 ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ನೀರಾವರಿ ಆಶ್ರಯದಲ್ಲಿ ಬೆಳೆಯಲಾಗುವ ಭತ್ತ, ಮುಸುಕಿನ ಜೋಳ, ರಾಗಿ, ಜೋಳ, ಸಜ್ಜೆ, ಸೂರ್ಯಕಾಂತಿ, ಈರುಳ್ಳಿ, ಟೊಮೆಟೊ, ಆಲೂಗೆಡ್ಡೆ, ಅರಿಶಿಣ ಹಾಗೂ ಮಳೆ ಆಶ್ರಯದಲ್ಲಿ ಬೆಳೆಯಲಾಗುವ ಜೋಳ, ಮುಸುಕಿನ ಜೋಳ, ರಾಗಿ, ಸಜ್ಜೆ, ಹೆಸರು, ಹುರುಳಿ, ತೊಗರಿ, ಉದ್ದು, ಅಲಸಂದೆ, ಸೂರ್ಯಕಾಂತಿ, ನೆಲಗಡಲೆ (ಶೇಂಗಾ), ಎಳ್ಳು, ಹತ್ತಿ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ವಿಮೆಗೆ ಒಳಪಡಿಸಲಾಗುತ್ತಿದೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಿಂಗಾರು ಹಂಗಾಮಿಗೆ ಚಾಮರಾಜನಗರ ತಾಲೂಕಿಗೆ ಮುಸುಕಿನ ಜೋಳ (ಮಳೆಯಾಶ್ರಿತ), ಗುಂಡ್ಲುಪೇಟೆ ತಾಲೂಕಿಗೆ ಜೋಳ ಮತ್ತು ಸೂರ್ಯಕಾಂತಿ (ಮಳೆಯಾಶ್ರಿತ) ಹಾಗೂ ಕೊಳ್ಳೇಗಾಲ ತಾಲೂಕಿಗೆ ರಾಗಿ ಮತ್ತು ಮುಸುಕಿನ ಜೋಳ (ಮಳೆಯಾಶ್ರಿತ) ಹಾಗೂ ಯಳಂದೂರು ತಾಲೂಕಿಗೆ ಭತ್ತ (ನೀರಾವರಿ) ಬೆಳೆಯನ್ನು ವಿಮೆಗೆ ಅಧಿಸೂಚಿಸಿದೆ.
ಮುಂಗಾರು ಹಂಗಾಮಿಗೆ ಮಳೆಯಾಶ್ರಿತ ಉದ್ದು, ಹೆಸರು, ಎಳ್ಳು ಬೆಳೆಗೆ ನೊಂದಾಯಿಸಲು ಜೂನ್ 30 ಕಡೆಯ ದಿನವಾಗಿದೆ. ನೀರಾವರಿ ಆಶ್ರಿತ ಮುಸುಕಿನ ಜೋಳ, ಜೋಳ, ಸಜ್ಜೆ, ಸೂರ್ಯಕಾಂತಿ, ಟೊಮೆಟೊ, ಆಲೂಗೆಡ್ಡೆ, ಈರುಳ್ಳಿ, ಮಳೆಯಾಶ್ರಿತ ಮುಸುಕಿನ ಜೋಳ, ಜೋಳ, ಸಜ್ಜೆ, ಅಲಸಂದೆ, ಸೂರ್ಯಕಾಂತಿ, ನೆಲಗಡಲೆ (ಶೇಂಗಾ) ಬೆಳೆಗೆ ನೊಂದಾಯಿಸಲು  ಜುಲೈ 16 ಕಡೆಯ ದಿನ. ಮಳೆಯಾಶ್ರಿತ ತೊಗರಿ, ಹುರುಳಿ ಮತ್ತು ಅರಿಶಿನ ಬೆಳೆಗೆ ನೊಂದಾಯಿಸಲು ಜುಲೈ 31ರಂದು ಕಡೆಯ ದಿನ. ನೀರಾವರಿ ಆಶ್ರಿತ ಭತ್ತ, ರಾಗಿ ಮತ್ತು ಹತ್ತಿ ಬೆಳೆಗಳಿಗೆ ನೊಂದಾಯಿಸಲು ಆಗಸ್ಟ್ 14ರಂದು ಅಂತಿಮ ದಿನವಾಗಿದೆ.
ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ಪಹಣಿ, ಖಾತೆ, ಪಾಸ್ ಪುಸ್ತಕ, ಕಂದಾಯ ರಸೀತಿಯಂತಹ ದಾಖಲೆಗಳನ್ನು ನೀಡಬೇಕು.
ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇ. 21ರಂದು ವಿದ್ಯುತ್ ಜನಸಂಪರ್ಕ ಸಭೆ

ಚಾಮರಾಜನಗರ, ಮೇ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಮೇ 21ರಂದು ಬೆಳಿಗ್ಗೆ 10 ಗಂಟೆಗೆ ನಿಗಮದ ಉಪವಿಭಾಗದ ಕಚೇರಿಯಲ್ಲಿ ಜನಸಂಪರ್ಕ ಸಭೆಯನ್ನು ಏರ್ಪಡಿಸಿದೆ.
ಸಾರ್ವಜನಿಕರು ಸಭೆಗೆ ಹಾಜರಾಗಿ ವಿದ್ಯುತ್ ಸಂಬಂಧಿಸಿದ ಯಾವುದೇ ಕುಂದುಕೊರತೆಗಳಿದ್ದಲ್ಲಿ ಸಭೆಗೆ ತಿಳಿಸಿ ಪರಿಹರಿಸಿಕೊಳ್ಳುವಂತೆ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರಿಶಿಷ್ಟ ವರ್ಗ, ಪಂಗಡದ ರೈತರಿಗೆ ಸಹಾಯಧನ : ಹೆಸರು ನೊಂದಾಯಿಸಿ
ಚಾಮರಾಜನಗರ, ಮೇ. 18  ತೋಟಗಾರಿಕೆ ಇಲಾಖೆಯು 2018-19ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಪರಿಶಿಷ್ಟ ವರ್ಗ ಪಂಗಡದ ರೈತರಿಗೆ ಬಾಳೆ ನಿಖರ ಬೇಸಾಯ ಕಾರ್ಯಕ್ರಮದಡಿ ಸಹಾಯಧನ ನೀಡಲು ಉದ್ದೇಶಿಸಿದೆ.
ಹೊಸದಾಗಿ ಅಂಗಾಂಶ ಕೃಷಿ ಬಾಳೆಯನ್ನು ಅಧಿಕ ಸಾಂದ್ರತೆ ಪದ್ಧತಿಯಲ್ಲಿ ಮುಖ್ಯ ಬೆಳೆಯಾಗಿ ನಾಟಿ ಮಾಡಿ ಹನಿ ನೀರಾವರಿ ಪದ್ದತಿ ಅಳವಡಿಸಿಕೊಂಡು ಬಾಳೆ ತಾಕು ಅಭಿವೃದ್ಧಿಪಡಿಸುವ ರೈತರಿಗೆ ಪ್ರತಿ ಎಕರೆಗೆ ಶೇ. 90ರಷ್ಟು ಸಹಾಯಧನ, ಗರಿಷ್ಟ 45 ಸಾವಿರ ರೂ.ಗಳನ್ನು ಪಡೆಯಲು ಅವಕಾಶ ಕಲ್ಪಿಸಿದೆ.
ಆಸಕ್ತ ರೈತರು ಅರ್ಜಿ, ಭಾವಚಿತ್ರ, ಪಹಣಿ, ಚೆಕ್ಕುಬಂದಿ, ನೀರಾವರಿ ಮೂಲ ದೃಢೀಕರಣ, ಎಲೆಕ್ಷನ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್, ಖಾಲಿ ಜಮೀನಿನ ಫೋಟೋ ಇತ್ಯಾದಿ ದಾಖಲಾತಿಗಳೊಂದಿಗೆ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಲ್ಲಿ ಹೆಸರು ನೊಂದಾಯಿಸಿಕೊಂಡು ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್‍ಎಂಎಸ್ ಮೂಲಕ ರೈತರಿಗೆ ಮಾಹಿತಿ

ಚಾಮರಾಜನಗರ, ಮೇ. 18 :– ತೋಟಗಾರಿಕೆ ಇಲಾಖೆಯ ವಿವಿಧ ಫಲಾನುಭವಿ ಆಧಾರಿತ ಯೋಜನೆಗಳಡಿ ದೊರೆಯುವ ಸವಲತ್ತು, ಸಹಾಯಧನ, ಬೆಳೆ ವಿಮೆ ಸೌಲಭ್ಯ, ಹವಾಮÁನ ಮಾಹಿತಿ, ತರಬೇತಿ, ತೋಟಗಾರಿಕೆ ಬೆಳೆ ಆಧಾರಿತ ತಾಂತ್ರಿಕ ಸಲಹೆ ಇತ್ಯಾದಿ ಮಾಹಿತಿಯನ್ನು ಜಿಲ್ಲೆಯ ರೈತರಿಗೆ ಮೊಬೈಲ್ ಎಸ್‍ಎಂಎಸ್ ಮುಖಾಂತರ ಕಳುಹಿಸಲು ಇಲಾಖೆಯಿಂದ ಅವಕಾಶ ಕಲ್ಪಿಸಿದೆ.
ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಬೆಳೆ ಬೆಳೆಯುತ್ತಿರುವ ಎಲ್ಲಾ ರೈತರು ತಮ್ಮ ಪೂರ್ಣ ವಿಳಾಸ (ಮೊಬೈಲ್ ಸಂಖ್ಯೆಯೊಂದಿಗೆ)  ಹಾಗೂ ತಾವು ಬೆಳೆಯುವ ಬೆಳೆಗಳ ಕುರಿತು ಮಾಹಿತಿಯನ್ನು ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಲ್ಲಿ ನೊಂದಾಯಿಸಿಕೊಂಡು ಸೌಲಭ್ಯ ಪಡೆದುಕೊಳ್ಳುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು