Wednesday, 9 May 2018

(09-05-2018)ಮೈಕ್ರೋ ಅಬ್ಸರ್‍ವರ್‍ಗಳು ಹೊಣೆಗಾರಿಕೆಯಿಂದ ಕಾರ್ಯ ನಿರ್ವಹಿಸಿ : ಚುನಾವಣಾ ವೀಕ್ಷಕರ ಸೂಚನೆ

ಮೈಕ್ರೋ ಅಬ್ಸರ್‍ವರ್‍ಗಳು ಹೊಣೆಗಾರಿಕೆಯಿಂದ ಕಾರ್ಯ ನಿರ್ವಹಿಸಿ : ಚುನಾವಣಾ ವೀಕ್ಷಕರ ಸೂಚನೆ

ಚಾಮರಾಜನಗರ, ಮೇ. 9 :– ಚುನಾವಣಾ ಸಂಬಂಧ ನೇಮಕವಾಗಿರುವ ಮೈಕ್ರೋ ಅಬ್ಸರ್‍ವರ್‍ಗಳು ಮತದಾನದಂದು ನಡೆಯುವ ಸಂಪೂರ್ಣ ಪ್ರಕ್ರಿಯೆ ಬಗ್ಗೆ ನಿಗಾ ವಹಿಸಿ ವರದಿ ಸಲ್ಲಿಸುವಂತೆ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ  ಸಾಮಾನ್ಯ ಚುನಾವಣಾ ವೀಕ್ಷಕರಾದ ಲಕ್ಷ್ಮೀನಾರಾಯಣ ಸೋನಿ ಅವರು ಸೂಚನೆ ನೀಡಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಇಂದು ಚುನಾವಣಾ ಕಾರ್ಯಕ್ಕೆ ನಿಯೋಜಿತರಾಗಿರುವ ಮೈಕ್ರೋ ಅಬ್ಸರ್‍ವರ್‍ಗಳಿಗೆ ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಮತದಾನ ಪ್ರಕ್ರಿಯೆಯು ಸುಸೂತ್ರವಾಗಿ ಜರುಗುವ ನಿಟ್ಟಿನಲ್ಲಿ ಪ್ರತಿಯೊಂದು ಚಟುವಟಿಕೆಗಳ ಬಗ್ಗೆ ಮೈಕ್ರೋ ಅಬ್ಸರ್‍ವರ್‍ಗಳು ನಿಗಾ ವಹಿಸಬೇಕು. ನಿಷ್ಪಕ್ಷಪಾತವಾಗಿ ಮತದಾನ ಚಟುವಟಿಕೆಗಳು ನಡೆಯುತ್ತಿದೆಯೇ ಎಂಬ ಬಗ್ಗೆ ಗಮನಿಸಬೇಕು. ಯಾವುದೇ ಅನವಶ್ಯಕ ಪ್ರಕ್ರಿಯೆ ಬಗ್ಗೆ ಕಂಡುಬಂದಲ್ಲಿ ಸಾಮಾನ್ಯ ವೀಕ್ಷಕರಿಗೆ ವರದಿ ಮಾಡಬೇಕು ಎಂದು ಲಕ್ಷ್ಮೀನಾರಾಯಣ ಸೋನಿ ಅವರು ತಿಳಿಸಿದರು.
ಚಾಮರಾಜನಗರ ವಿಧಾನಸಭಾ ಕ್ಷೇತ್ರದ ವೀಕ್ಷಕರಾದ ಮನೋಜ್ ಕುಮಾರ್ ಅವರು ಮಾತನಾಡಿ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ವೇಳೆ ಹಾಜರಿದ್ದು ಮಾರ್ಗದರ್ಶನ ಪಡೆಯಬೇಕು. ಮತದಾನದಂದು ಬೆಳಿಗ್ಗೆ ಅಣುಕು ಮತದಾನ ಸಂದರ್ಭದಲ್ಲಿ ಹಾಜರಿದ್ದು ಎಲ್ಲ ಪ್ರಕ್ರಿಯೆಯನ್ನು ಅತ್ಯಂತ ಎಚ್ಚರಿಕೆಯಿಂದ ಗಮನಿಸಬೇಕು. ಅಣುಕು ಮತದಾನದ ಬಳಿಕ ದಾಖಲಾಗಿರುವ ಅಂಶಗಳನ್ನು ತೆಗೆದುಹಾಕಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ನಿಗಧಿತ ವೇಳೆಗೆ ಮತದಾನ ಆರಂಭವಾಗುವ ಮುನ್ನ ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ ಎಲ್ಲಾ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸಿರಬೇಕು ಎಂದು ತಿಳಿಸಿದರು.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವೀಕ್ಷಕರಾದ ಅನಿಲ್ ಕುಮಾರ್ ಅವರು ಮಾತನಾಡಿ ಚುನಾವಣಾ ಆಯೋಗದ ನಿರ್ದೇಶನದಂತೆ ಮೈಕ್ರೋ ಅಬ್ಸರ್‍ವರ್‍ಗಳು ಕಾರ್ಯ ನಿರ್ವಹಿಸಬೇಕಿದೆ. ಮೈಕ್ರೋ ಅಬ್ಸರ್‍ವರ್‍ಗಳು ಮತದಾನದಂದು ಆರಂಭದಿಂದ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಅತ್ಯಂತ ಹೊಣೆಗಾರಿಕೆಯಿಂದ ಕರ್ತವ್ಯ ಪೂರೈಸಬೇಕು. ವೀಕ್ಷಕರೊಂದಿಗೆ ಸಂಪರ್ಕದಲ್ಲಿದ್ದು ನಿಗದಿತ ವೇಳೆಗೆ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು ಮಾತನಾಡಿ ಮೈಕ್ರೋ ಅಬ್ಸರ್‍ವರ್‍ಗಳು ಕಾರ್ಯನಿರ್ವಹಿಸಬೇಕಾದ ಮತಗಟ್ಟೆಗಳಿಗೆ ತೆರಳಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಮತಗಟ್ಟೆಯಲ್ಲಿ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕಿದೆ. ವೀಕ್ಷಕರಿಗೆ ಮತದಾನದಂದು ನಡೆಯುವ ಪ್ರತಿ ಚಟುವಟಿಕೆಗಳ ಬಗ್ಗೆ ಗಮನಿಸಿ ವರದಿ ಸಲ್ಲಿಸುವ ಪ್ರಮುಖ ಕೆಲಸ ಮಾಡಬೇಕಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ಚುನಾವಣಾ ಅಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಫೌಜಿಯಾ ತರನ್ನುಮ್, ಚಾಮರಾಜನಗರ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಭೀಮಣ್ಣ ಕಲಘಟಗಿ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಕೆ.ಎಚ್. ಸತೀಶ್, ಹನೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಮರುಳೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಾಸ್ಟರ್ ಟ್ರೈನರ್ ಶ್ರೀನಿವಾಸ್ ಅವರು ಮ್ರೈಕ್ರೋ ಅಬ್ಸರ್‍ವರ್‍ಗಳ ಕಾರ್ಯನಿರ್ವಹಣೆ ಸಂಬಂಧ ಪವರ್ ಪಾಯಿಂಟ್ ಪ್ರದರ್ಶನದ ಮೂಲಕ ತರಬೇತಿ ನೀಡಿದರು..

ಮೇ 12ರಂದು ಕಾರ್ಮಿಕರಿಗೆ ವೇತನ ಸಹಿತ ರಜೆ ಘೋಷಣೆ

ಚಾಮರಾಜನಗರ, ಮೇ. 09 - ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಮೇ 12ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಅಂದು ವೇತನಸಹಿತ ರಜೆ ನೀಡಬೇಕೆಂದು ಕಾರ್ಮಿಕ ಇಲಾಖೆ ಸೂಚಿಸಿದೆ.
ಮೇ 12ರಂದು ಜಿಲ್ಲಾ ವ್ಯಾಪ್ತಿಯಲ್ಲಿರುವ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು, ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ 1951ರ ಪ್ರಜಾಪ್ರತಿನಿಧಿ ಕಾಯಿದೆ ಕಲಂ 135 (ಬಿ) ಅಡಿ ವೇತನಸಹಿತ ರಜೆ ಘೋಷಿಸಿ ಸಂವಿಧಾನಾತ್ಮಕ ಹಕ್ಕು ಆದ ಮತ ಚಲಾಯಿಸಲು ಅನುವು ಮಾಡಿಕೊಡಬೇಕಿದೆ. ಹೀಗಾಗಿ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಜಿಲ್ಲಾ ವ್ಯಾಪಾರಸ್ಥರು, ವಾಣಿಜ್ಯೋದ್ಯಮಿಗಳು ಮೇ 12ರಂದು ವೇತನಸಹಿತ ರಜೆ ನೀಡಬೇಕು. ತಪ್ಪಿದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಡಿ.ಎಂ. ವಿನುತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ 28ರಂದು ಕೆಲ್ಲಂಬಳ್ಳಿಯಲ್ಲಿ ಅಂಚೆ ಸಂತೆ
ಚಾಮರಾಜನಗರ, ಮೇ. 9  ಅಂಚೆ ಇಲಾಖೆಯು ಚಾಮರಾಜನಗರ ತಾಲೂಕಿನ ಕೆಲ್ಲಂಬಳ್ಳಿ ಗ್ರಾಮದಲ್ಲಿ ಮೇ 28ರಂದು ಅಂಚೆ ಸಂತೆ ಹಮ್ಮಿಕೊಂಡಿದೆ.
ಅಂಚೆ ಸಂತೆಯಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ, ಆವರ್ತಕ ಖಾತೆ, ಸುಕನ್ಯಾ ಸಮೃದ್ಧಿ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ ಖಾತೆ, ಪ್ರಧಾನಮಂತ್ರಿ ಜೀವನಜ್ಯೋತಿ ವಿಮಾ ಯೋಜನೆ, ಪ್ರಧಾನಮಂತ್ರಿ ಜೀವನ ಸುರಕ್ಷಾ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಗ್ರಾಮೀಣ ಅಂಚೆ ಜೀವ ವಿಮೆ, ಇತರೆ ಅಂಚೆ ಜೀವವಿಮೆ ಇನ್ನಿತರ ಅಂಚೆ ಯೋಜನೆಗಳನ್ನು ಸ್ವೀಕರಿಸಲಾಗುತ್ತದೆ.
ಕೆಲ್ಲಂಬಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಅಂಚೆಸಂತೆಯ ಸದುಪಯೋಗ ಮಾಡಿಕೊಳ್ಳಬೇಕೆಂದು ಅಂಚೆ ಅಧೀಕ್ಷಕರಾರಾದ ಜಿ.ಸಿ. ಶ್ರೀನಿವಾಸ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಮೇ 31ರಂದು ಮಸಣಾಪುರ ಗ್ರಾಮದಲ್ಲಿ ಅಂಚೆ ಸಂತೆ

ಚಾಮರಾಜನಗರ, ಮೇ. 9 – ಅಂಚೆ ಇಲಾಖೆ ವತಿಯಿಂದ ಚಾಮರಾಜನಗರ ತಾಲೂಕಿನ ಕಾಗಲವಾಡಿ ಹೋಬಳಿಯ ಮಸಣಾಪುರ ಗ್ರಾಮದಲ್ಲಿ ಮೇ 31ರಂದು ಅಂಚೆ ಸಂತೆ ಹಮ್ಮಿಕೊಳ್ಳಲಾಗಿದೆ.
ಅಂಚೆ ಸಂತೆಯಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ, ಆವರ್ತಕ ಖಾತೆ, ಸುಕನ್ಯಾ ಸಮೃದ್ಧಿ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ ಖಾತೆ, ಪ್ರಧಾನಮಂತ್ರಿ ಜೀವನಜ್ಯೋತಿ ವಿಮಾ ಯೋಜನೆ, ಪ್ರಧಾನಮಂತ್ರಿ ಜೀವನ ಸುರಕ್ಷಾ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಗ್ರಾಮೀಣ ಅಂಚೆ ಜೀವ ವಿಮೆ, ಇತರೆ ಅಂಚೆ ಜೀವವಿಮೆ ಇನ್ನಿತರ ಅಂಚೆ ಯೋಜನೆಗಳನ್ನು ಸ್ವೀಕರಿಸಲಾಗುವುದು.
ಮಸಣಾಪುರ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಅಂಚೆಸಂತೆಯ ಸದುಪಯೋಗ ಮಾಡಿಕೊಳ್ಳಬೇಕೆಂದು ಅಂಚೆ ಅಧೀಕ್ಷಕರಾರಾದ ಜಿ.ಸಿ. ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಆದರ್ಶ ವಿದ್ಯಾಲಯಕ್ಕೆ ಶೇ.94.20ರಷ್ಟು ಫಲಿತಾಂಶ
ಚಾಮರಾಜನಗರ, ಮೇ. 09 - ಚಾಮರಾಜನಗರದ ಆದರ್ಶ ವಿದ್ಯಾಲಯಕ್ಕೆ 2017-18ನೇ ಸಾಲಿನ ಎಸ್ ಎಸ್ ಎಲ್ ಸಿ. ಪರೀಕ್ಷೆಯಲ್ಲಿ ಶೇ. 94.20ರಷ್ಟು ಫಲಿತಾಂಶ ಬಂದಿದೆ.
ಒಟ್ಟು 69 ವಿದ್ಯಾರ್ಥಿಗಳ ಪೈಕಿ 65 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 7 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 23 ವಿದ್ಯಾರ್ಥಿಗಳು ಪ್ರಥಮ ಶ್ರೇಣೀಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ



ಚುನಾವಣಾ ಅಬಕಾರಿ ದಾಳಿಯಲ್ಲಿ ಈವರೆಗೆ 254 ಆರೋಪಿಗಳ ಬಂಧನ

ಚಾಮರಾಜನಗರ, ಮೇ. 08 (ಕರ್ನಾಟಕ ವಾರ್ತೆ):- ಅಬಕಾರಿ ಇಲಾಖೆಯ ವತಿಯಿಂದ ಚಾಮರಾಜನಗರ ಜಿಲ್ಲೆಯಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾದ ಮಾರ್ಚ್ 27 ರಿಂದ ಮೇ 7ರವರೆಗೆ ಚುನಾವಣಾ ಮತಕ್ಷೇತ್ರಗಳಾದ ಚಾಮರಾಜನಗರ, ಕೊಳ್ಳೇಗಾಲ, ಹನೂರು ಹಾಗೂ ಗುಂಡ್ಲುಪೇಟೆಯಲ್ಲಿ ನಡೆಸಿದ ಒಟ್ಟು 585 ದಾಳಿಯಲ್ಲಿ           300 ಪ್ರಕರಣಗಳನ್ನು ದಾಖಲಿಸಲಾಗಿದೆ. 254 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. 36 ವಾಹನ ಹಾಗೂ   1951.17 ಲೀ ಮದ್ಯ ವಶಪಡಿಸಿಕೊಳ್ಳಲÁಗಿದ್ದು ಅವುಗಳು ಅಂದಾಜು ಮೊತ್ತ ರೂ. 17,58,308ಗಳೆಂದು ಪರಿಗಣಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಬಿ.ಬಿ.ಕಾವೇರಿ ಅವರು ತಿಳಿಸಿದ್ದಾರೆ.
ಚಾಮರಾಜನಗರ ಮತಕ್ಷೇತ್ರದಲ್ಲಿ 156 ದಾಳಿ ನಡೆಸಿ 85 ಪ್ರಕರಣಗಳನ್ನು ದಾಖಲಿಸಲಾಗಿದ್ದು 75 ಆರೋಪಿಗಳನ್ನು ಬಂಧಿಸಲಾಗಿದೆ. 4 ವಾಹನಗಳು ಹಾಗೂ 1384.740 ಲೀಟರ್ ಮದ್ಯವನ್ನು ಜಪ್ತಿ ಮಾಡುವ ಮೂಲಕ ಅಂದಾಜು 711600 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೊಳ್ಳೇಗಾಲ ಮತಕ್ಷೇತ್ರದಲ್ಲಿ 149 ಬಾರಿ ದಾಳಿ ನಡೆಸಿ 73 ಪ್ರಕರಣಗಳನ್ನು ದಾಖಲಿಸಿದೆ. 65 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟು ಅಂದಾಜು 365000 ರೂ. ಬೆಲೆಯ 10 ವಾಹನ ಹಾಗೂ 162.420 ಲೀ. ಮದ್ಯವನ್ನು ವಶಪಡಿಸಲಾಗಿದೆ.
ಹನೂರು ಮತಕ್ಷೇತ್ರದಲ್ಲಿ 92 ದಾಳಿ ನಡೆಸುವ ಮೂಲಕ 65 ಪ್ರಕರಣ ದಾಖಲಿಸಿ 53 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ರೂ. 244708ಗಳ ಅಂದಾಜು ಮೊತ್ತದ 9 ವಾಹನಗಳು ಹಾಗೂ 116.18 ಲೀ ಮದ್ಯವನ್ನು ವಶಪಡಿಸಿಕೊಂಡಿದೆ.
ಗುಂಡ್ಲುಪೇಟೆ ಮತಕ್ಷೇತ್ರದಲ್ಲಿ 188 ದಾಳಿಯಲ್ಲಿ 77 ಪ್ರಕರಣ ದಾಖಲಿಸಿದ್ದು 61 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ರೂ. 437000ಗಳ ಮೊತ್ತದ 13 ವಾಹನ, 287.83 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ.
ಇದಲ್ಲದೆ ಏಪ್ರಿಲ್ 21ರಿಂದ ಸನ್ನದು ಷರತ್ತು ಉಲ್ಲಂಘನೆಗಳಿಗಾಗಿ ಜಿಲ್ಲೆಯಲ್ಲಿ ಒಟ್ಟು 10 ವಿವಿಧ ಬಗೆಯ ಸನ್ನದುಗಳನ್ನು ಚುನಾವಣೆ ಮುಕ್ತಾಯಗೊಳ್ಳುವವರೆಗೂ ಅಮಾನತ್ತಿನಲ್ಲಿಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.


ಮಸ್ಟರಿಂಗ್ ಕೇಂದ್ರ ತಲುಪಲು ಮತಗಟ್ಟೆ ಅಧಿಕಾರಿಗಳಿಗೆ ಬಸ್ ವ್ಯವಸ್ಥೆ

ಚಾಮರಾಜನಗರ, ಮೇ. 9 – ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ-2018ಕ್ಕೆ ಸಂಬಂಧಿಸಿದಂತೆ, ಚಾಮರಾಜನಗರ ಜಿಲ್ಲೆಯಾದ್ಯಂತ ಚುನಾವಣಾ ಕರ್ತವ್ಯಕ್ಕೆ ನೇಮಕವಾಗಿರುವ ಮತಗಟ್ಟೆ ಅಧಿಕಾರಿಗಳು ಆಯಾ ಮಸ್ಟರಿಂಗ್ ಕೇಂದ್ರಗಳಿಗೆ ತಲುಪಲು ಅನುಕೂಲವಾಗುವಂತೆ ಮೇ 11 ರಂದು ಕೆ.ಎಸ್.ಆರ್.ಟಿ.ಸಿ ಬಸ್ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಈ ಬಸ್‍ಗಳು ಜಿಲ್ಲೆಯ ನಾಲ್ಕು ತಾಲ್ಲೂಕು ಕೇಂದ್ರಗಳಲ್ಲಿರುವ ಕೆ.ಎಸ್.ಆರ್.ಟಿ. ಬಸ್ ನಿಲ್ದಾಣಗಳಿಂದ ಅಂದು ಬೆಳಿಗ್ಗೆ 5-30 ಗಂಟೆಗೆ ಹೊರಡಲಿವೆ.

ಬಸ್‍ಗಳು ಪ್ರತಿ 15 ನಿಮಿಷಕ್ಕೊಮ್ಮೆ ಹೊರಡಲಿವೆ, ಮೈಸೂರುನಗರದ ಕೆ.ಎಸ್.ಆರ್.ಟಿ.ಸಿ ಬಸ್‍ನಿಲ್ದಾಣದಿಂದಲೂ ಸಹ ಬಸ್‍ಗಳು ಅಂದು ಬೆಳಿಗ್ಗೆ 5-30 ಗಂಟೆಗೆ ಜಿಲ್ಲೆಯ ನಾಲ್ಕು ಮಸ್ಟರಿಂಗ್ ಕೇಂದ್ರಗಳಿಗೆ ಹೊರಡಲಿವೆ.

ಅಲ್ಲದೆ ಅಂದು ಬೆಳಿಗ್ಗೆ  5-00 ಗಂಟೆಗೆ ಮಲೈಮಹದೇಶ್ವರಬೆಟ್ಟ ಮತ್ತು ಮಾರ್ಟಳ್ಳಿಯಿಂದ ರಾಮಾಪುರ ಮಾರ್ಗವಾಗಿಯೂ ಸಹ ಮತಗಟ್ಟೆ ಅಧಿಕಾರಿಗಳು ಕೊಳ್ಳೇಗಾಲ ಪಟ್ಟಣಕ್ಕೆ ತಲುಪಲು ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ

ಈ ಸೌಲಭ್ಯವನ್ನು ಉಪಯೋಗಿಸಿಕೊಂಡು ಚುನಾವಣಾ ಕರ್ತವ್ಯಕ್ಕೆ ನೇಮಕವಾಗಿರುವ ಮತಗಟ್ಟೆ ಅಧಿಕಾರಿಗಳು ಆಯಾ ಮಸ್ಟರಿಂಗ್ ಕೇಂದ್ರಗಳಿಗೆ ಬೆಳಿಗ್ಗೆ 8-00 ಗಂಟೆಯೊಳಗೆ ತಲುಪಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಬಿ.ಬಿ ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018

ಬಹಿರಂಗ ಪ್ರಚಾರ ನಿರ್ಬಂಧ: 10 ಜನಕ್ಕಿಂತ ಹೆಚ್ಚು ಸೇರದಂತೆ ಮನೆ ಮನೆಗೆ ತೆರಳಿ ಮತಯಾಚಿಸಲು ಅವಕಾಶ
ಚಾಮರಾಜನಗರ, ಮೇ. 9–  ಚುನಾವಣೆ ಬಹಿರಂಗ ಪ್ರಚಾರದ ಅವಧಿ ಮೇ 10ರಂದು ಸಂಜೆ 6 ಗಂಟೆಗೆ ಮುಕ್ತಾಯವಾಗಲಿದ್ದು, ಇದರ ನಂತರ ಅವಧಿಯಲ್ಲಿ ಯಾವುದೇ ರಾಜಕೀಯ ಪಕ್ಷಗಳು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಅವರ ಬೆಂಬಲಿಗರು ಬಹಿರಂಗ ಪ್ರಚಾರ ನಡೆಸುವುದನ್ನು ನಿರ್ಬಂಧಿಸಲಾಗಿದೆ. 
10 ಜನಕ್ಕಿಂತ ಹೆಚ್ಚಿಗೆ ಸೇರದಂತೆ ಮನೆ ಮನೆಗೆ ತೆರಳಿ ಮತಯಾಚಿಸಲು ಮತ್ತು ಕರಪತ್ರ ವಿತರಿಸಲು ಮಾತ್ರ ಅವಕಾಶ ನೀಡಲಾಗಿದೆ.
ಪ್ರಜಾಪ್ರತಿನಿಧಿ ಕಾಯ್ದೆ 1951ರ ಕಲಂ 126ರ ಪ್ರಕಾರ ಮತದಾನ ಮುಕ್ತಾಯವಾಗುವ ಸಮಯದ 48 ಗಂಟೆಗಳ ಮುಂಚಿತವಾಗಿ ಯಾವುದೇ ವ್ಯಕ್ತಿ, ರಾಜಕೀಯ ಪಕ್ಷಗಳು ಅಭ್ಯರ್ಥಿಗಳು ಉಮೇದುವಾರರು ಅಥವಾ ಅವರ ಪರ ಬೆಂಬಲಿಗರು ಚುನಾವಣಾ ಸಂಬಂಧ ಯಾವುದೇ ಸಭೆ ಸಮಾರಂಭ ಮೆರವಣಿಗೆ ನಡೆಸುವಂತಿಲ್ಲ.  ಚುನಾವಣೆ ಸಭೆ ಉದ್ದೇಶಿಸಿ ಮಾತನಾಡುವಂತಿಲ್ಲ.  ಸಾರ್ವಜನಿಕರಿಗೆ ಮತದಾರರಿಗೆ ಸುದ್ಧಿ ಮಾಧ್ಯಮಗಳಾದ ಎಫ್.ಎಂ., ರೇಡಿಯೋ, ದೂರದರ್ಶನ, ಸಿನಿಮಾ ಇತ್ಯಾದಿಗಳ ಮೂಲಕ ಚುನಾವಣಾ ಪ್ರಚಾರ ಮಾಡುವಂತಿಲ್ಲ.  ಮೊಬೈಲ್ ಮೂಲಕ ಎಸ್.ಎಂ.ಎಸ್, ವಾಟ್ಸ್‍ಆಪ್, ಫೇಸ್‍ಬುಕ್, ಟ್ವಿಟರ್, ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ಸಂಬಂಧ ಪ್ರಚಾರ ಸಂದೇಶಗಳನ್ನು  ಕಳುಹಿಸುವಂತಿಲ್ಲ. 
ಮತದಾರರಿಗೆ ವಿಡಿಯೋ ಕ್ಲಿಪ್ಪಿಂಗ್ ಪ್ರದರ್ಶಿಸುವಂತಿಲ್ಲ.  ಯಾವುದೇ ಮತಗಟ್ಟೆಯ ಮುಂದೆ ಜನರನ್ನು ಆಕರ್ಷಿಸಲು ಸಂಗೀತ, ನಾಟಕ, ರಂಗ ಕಲಾಪ ನಡೆಸುವಂತಿಲ್ಲ.  ದಿನಪತ್ರಿಕೆಗಳಲ್ಲಿ ಅನುಮತಿ ಇಲ್ಲದೆ ಜಾಹಿರಾತು ಹೊರಡಿಸುವಂತಿಲ್ಲ. 
ಪ್ರಜಾಪ್ರತಿನಿಧಿ ಕಾಯ್ದೆ 1951ರ ಕಲಂ 126ರನ್ನು ಉಲ್ಲಂಘಿಸಿದರೆ ಕಾಯ್ದೆ ಅನುಸಾರ ಶಿಕ್ಷೆಗೆ ಗುರಿ ಪಡಿಸಲಾಗುವುದು ಎಂದು  ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ.ಬಿ ಕಾವೇರಿ ಅವರು ತಿಳಿಸಿದ್ದಾರೆ.
 

ಮತಗಟ್ಟೆಯ ಬಳಿ ಪ್ರಚಾರ ನಿಷೇದÀ

ಚಾಮರಾಜನಗರ, ಮೇ. 9 :–  ವಿಧಾನಸಭಾ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಜಿಲ್ಲೆಯ ಹನೂರು, ಕೊಳ್ಳೇಗಾಲ, ಚಾಮರಾಜನಗರ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮತಗಟ್ಟೆ ಒಳಗೆ ಹಾಗೂ ಮತಗಟ್ಟೆಯ 100 ಮೀ.ಅಂತರದ ಪ್ರದೇಶದಲ್ಲಿರುವ ಸಾರ್ವಜನಿಕ ಮತ್ತು ಖಾಸಗಿ ಸ್ಥಳದಲ್ಲಿ ಪ್ರಚಾರ ನಡೆಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ. 
ಮತಗಟ್ಟೆಯ ಒಳಗೆ ಹಾಗೂ ಮತಗಟ್ಟೆಯ 100 ಮೀ.ಗಳ ಅಂತರದೊಳಗಿರುವ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಸ್ಥಳದಲ್ಲಿ ಪ್ರಚಾರ ನಡೆಸಬಾರದು.  ಯಾವುದೇ ಅಭ್ಯರ್ಥಿಗೆ ಮತ ನೀಡುವಂತೆ ಕೇಳುವುದು, ಮತ ಹಾಕದಂತೆ ಪ್ರೆರೇಪಿಸುವುದು, ಯಾವುದೇ ಪಕ್ಷದ ಚಿಹ್ನೆಯನ್ನು ಪ್ರದರ್ಶಿಸುವುದು, ಇತ್ಯಾದಿಗಳನ್ನು ನಿರ್ಬಂಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಕಲಂ 130ನ್ನು ಉಲ್ಲಂಘಿಸಿದರೆ ಕಾಯ್ದೆಗೆ ಅನುಸಾರವಾಗಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಬಿ.ಬಿ.ಕಾವೇರಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಬಾಲಮಂದಿರದ ಮಕ್ಕಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣ
ಚಾಮರಾಜನಗರ, ಮೇ. 9 – ಅನಾಥ, ನಿರ್ಗತಿಕ, ಏಕಪೋಷಕ, ಭಿಕ್ಷಾಟನೆ, ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹಕ್ಕೆ ಒಳಗಾದ ಹಾಗೂ ಇತರೆ ರಕ್ಷಣೆ ಮತ್ತು ಪೋಷಣೆ ಅಗತ್ಯವಿರುವ ಮಕ್ಕಳಿಗಾಗಿ ಪುರ್ನವಸತಿ ಕಲ್ಪಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಡಿ  ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಬಾಲಕಿಯರ ಸರ್ಕಾರಿ ಬಾಲಮಂದಿರದ ನಿವಾಸಿ ಮಕ್ಕಳು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಸಂಗೀತಾ(75.36%), ಶೋಭ (72.96%), ಮೀನಾ (69.60%), ಸತ್ಯ (61.60%), ನೇತ್ರಾವತಿ  (56%), ಪಡೆದು ಇಲಾಖೆಗೆ ಕೀರ್ತಿ ತಂದಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ಬಾಲಮಂದಿರದ ಮಕ್ಕಳಿಗೆ ವ್ಯಕ್ತಿತ್ವ ವಿಕಸನ ಶಿಬಿರ
ಚಾಮರಾಜನಗರ, ಮೇ. 9 –   ಚಾಮರಾಜನಗರ ಜಿಲ್ಲೆಯ ಬಾಲಕರ ಹಾಗೂ ಬಾಲಕಿಯರ ಸರ್ಕಾರಿ ಬಾಲಮಂದಿರದ ಮಕ್ಕಳಿಗೆ ಮೇ14 ರವರೆಗೆ ವಿಶ್ವ ಹಿಂದೂ ಪರೀಷತ್ ಶಾಲೆಯಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ ಆಯೋಜಿಸಿದ್ದು,  ವ್ಯಕ್ತಿತ್ವ ವಿಕಸನ ಶಿಬಿರದ ಉಧ್ಘಾಟಣೆಯನ್ನು ಶ್ರೀ ಸಂದೇಶ್.ವಿ.ಭಂಡಾರಿ, ಗೌರವಾನ್ವಿತ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ನ್ಯಾಯಾಲಯ, ಚಾಮರಾಜನಗರರವರು ನೆರವೇರಿಸಿದರು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಅರುಣ್ ಎಂ ರೇ, ಸದ್ಯಸರು, ಮಕ್ಕಳ ಕಲ್ಯಾಣ ಸಮಿತಿರವರು ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ವಾಸುದೇವರಾವ್ ಟ್ರಸ್ಟಿಗಳು, ವಿಶ್ವ ಹಿಂದೂ ಪರಿಷತ್, ಚಾಮರಾಜನಗರ.  ಶ್ರೀ ಎ.ಎಸ್.ಮಂಜುನಾಥಸ್ವಾಮಿ, ಹಾಗೂ ಶ್ರೀಮತಿ ಚಂದ್ರಮ್ಮ ಸದಸ್ಯರು, ಮಕ್ಕಳ ಕಲ್ಯಾಣ ಸಮಿತಿ, ಚಾಮರಾಜನಗರ, ಶ್ರೀ ಟಿ.ಜೆ.ಸುರೇಶ್, ಸದ್ಯಸರು, ಬಾಲನ್ಯಾಯ ಮಂಡಳಿ, ಚಾಮರಾಜನಗರ. ಶ್ರೀ ಅರುಣ್ ಕುಮಾರ್, ಐ-ಸೆಟ್ ಸಂಸ್ಥೆ, ಚಾಮರಾಜನಗರ, ಶ್ರೀಮತಿ ಶಿವಲೀಲಾ ಬೆಟಗೇರಿ, ಅಧೀಕ್ಷರು, ಬಾಲಕಿಯರ ಸರ್ಕಾರಿ ಬಾಲಮಂದಿರ, ಚಾಮರಾಜನಗರ. ಹಾಗೂ ಬಾಲಮಂದಿರದ ಮಕ್ಕಳು, ಸಿಬ್ಬಂದಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು/ಸಿಬ್ಬಂದಿಗಳು ಹಾಜರಿದ್ದರು.
ಪಂಜಿನ ಮೆರವಣಿಗೆ ಮೂಲಕ ಮತದಾನ ಜಾಗೃತಿ
ಚಾಮರಾಜನಗರ, ಮೇ. 9    ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಇಂದು ಚಾಮರಾಜೇಶ್ವರ ದೇವಾಲಯದ ಆವರಣದಿಂದ ಮತದಾನದ ಜಾಗೃತಿ ಮೂಡಿಸುವ ಪಂಚಜಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾ ಪಂಚಾಯತ್‍ನ ಮುಖ್ಯ ಯೋಜನಾ ಅಧಿಕಾರಿ ಧನುಷ್ ಅವರು ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯೂ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಬಳಿಕ ಜಿಲ್ಲಾಡಳಿತ ಭವನದ ಆವರಣದಲ್ಲಿ ಸಮಾವೇಶಗೊಂಡಿತು.  ಈ ವೇಳೆ ಮತದಾನ ಮಹತ್ವದ ಕುರಿತು ಪ್ರತಿಜ್ಞಾ ವಿಧಿ ಭೋದಿಸಲಾಯಿತು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮುನಿರಾಜಪ್ಪ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ರಮೇಶ್ ಇನ್ನಿತರ ಅಧಿಕಾರಿಗಳು ಹಾಜರಿದ್ದರು. 
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸ್ವಸಹಾಯ ಸಂಘದ ಸುಮಾರು 200 ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. 

























No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು