ಜಿಲ್ಲೆಯ 1693 ವಿಕಲಚೇತನ ಫಲಾನುಭವಿಗಳಿಗೆ ಉಚಿತ ಸಾಧನ, ಸಲಕರಣೆಗಳ ಸಮರ್ಪಣೆ
ಚಾಮರಾಜನಗರ, ಡಿಸೆಂಬರ್ 24 - ಕೇಂದ್ರಸರ್ಕಾರದ ವಿಶೇಷ ಆಡಿಪ್ ಯೋಜನೆಯಡಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿನ 1693 ವಿಶೇಷಚೇತನ ಫಲಾನುಭವಿಗಳಿಗೆ 1 ಕೋಟಿ 20 ಲಕ್ಷಕ್ಕೂ ಹೆಚ್ಚಿನ ಮೊತ್ತದ ಸಾಧನ, ಸಲಕರಣೆಗಳನ್ನು ನಗರದಲ್ಲಿಂದು ಉಚಿತವಾಗಿ ಸಮರ್ಪಣೆ ಮಾಡಲಾಯಿತು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿಂದು ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ವಿಕಲಾಂಗ ವ್ಯಕ್ತಿಗಳ ಸಬಲೀಕರಣ (ದಿವ್ಯಾಂಗಜನ್) ಇಲಾಖೆ, ಆರ್ಟಿಫಿಶಿಯಲ್ ಲಿಂಬ್ಸ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ (ಆಲಿಂಕೋ), ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಸಾಮಾಜಿಕ ಅಧಿಕಾರಿತಾ ಶಿಬಿರ’ದಲ್ಲಿ ವಿಕಲಚೇತನರಿಗೆ ಅಗತ್ಯವುಳ್ಳ ಸಾಧನ, ಸಲಕರಣೆಗಳನ್ನು ವಿತರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಸಚಿವರಾದ ಎ. ನಾರಾಯಣಸ್ವಾಮಿ ಅವರು ಮಾತನಾಡಿ ದಿವ್ಯಾಂಗರಿಗೆ ಉಚಿತವಾಗಿ ಸಾಧನ, ಸಲಕರಣೆ ವಿತರಣೆ ಕಾರ್ಯಕ್ರಮ ಕೇಂದ್ರಸರ್ಕಾರದ ವಿಶಿಷ್ಟ ಕಾರ್ಯಕ್ರಮವಾಗಿದೆ. ಕೇಂದ್ರಸರ್ಕಾರವು ವಿಶೇಷಚೇತನರ ಬಗ್ಗೆ ವಿಶೇಷ ಕಾಳಜಿ ಹೊಂದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆ, ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವುದು ಉತ್ತಮ ಸೇವಾಕಾರ್ಯವಾಗಿದೆ ಎಂದು ತಿಳಿಸಿದರು.
ವಿಕಲತೆ ಆಕಸ್ಮಿಕ, ವಿಕಲಚೇತನರನ್ನು ಸಲಹುವ ಯಾವುದೇ ತಂದೆ, ತಾಯಿ ಹಾಗೂ ಪೋಷಕರು ಎಂತಹುದೇ ಪರಿಸ್ಥಿತಿಯಲ್ಲಿ ಚೈತನ್ಯ ಕಳೆದುಕೊಳ್ಳಬಾರದು. ವಿಕಲಾಂಗರಿಗೆ ಸೂಕ್ತ ಮಾರ್ಗದರ್ಶನ ನೀಡಿ ಚಿಕಿತ್ಸೆ ಕೊಡಿಸಬೇಕು. ಅವರಲ್ಲಿ ಭರವಸೆ ತುಂಬಬೇಕು. ಸರ್ಕಾರಗಳು ನಿಮ್ಮ ಜತೆಯಲ್ಲಿವೆ. ಅಗತ್ಯ ಸೌಲಭ್ಯಗಳನ್ನು ನೀಡಲಿವೆ. ವಿಕಲಚೇತನರ ನೋವಿಗೆ ಸ್ಪಂದಿಸುವುದು ಕೇಂದ್ರ ಹಾಗೂ ರಾಜ್ಯಸರ್ಕಾರಗಳ ಆದ್ಯತೆಯಾಗಿದೆ ಎಂದರು.
ಕೇಂದ್ರಸರ್ಕಾರವು ದೇಶದಲ್ಲಿ ಈವರೆಗೆ 12756 ಶಿಬಿರಗಳನ್ನು ಏರ್ಪಡಿಸಿ, 1456 ಕೋಟಿ ವೆಚ್ಚದಲ್ಲಿ 20 ಲಕ್ಷಕ್ಕೂ ವಿಕಲಚೇತನರಿಗೆ ಸಾಧನ, ಸಲಕರಣೆಗಳನ್ನು ಉಚಿತವಾಗಿ ವಿತರಿಸಿದೆ. ವಿಕಲಚೇತನರ ಅಶಕ್ತ ಕುಟುಂಬಗಳಿಗೆ ನೆರವಾಗುವುದು ಸರ್ಕಾರ ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಎಲ್ಲಾ ವರ್ಗದ ಜನರಿಗೂ ವಿಶೇಷ ಕಲ್ಯಾಣ ಯೋಜನೆಗಳನ್ನು ರೂಪಿಸಿದೆ. ಕೇಂದ್ರಸರ್ಕಾರದ ಯೋಜನೆಗಳ ಬಗ್ಗೆ ಸಾಮಾನ್ಯ ಜನರಿಗೆ ಅರಿವು ಮೂಡಿಸಿ ಕಾರ್ಯಕ್ರಮಗಳನ್ನು ತಲುಪಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ನಾರಾಯಣಸ್ವಾಮಿ ಅವರು ತಿಳಿಸಿದರು.
ಘನ ಉಪಸ್ಥಿತಿ ವಹಿಸಿದ್ದ ಇಡೀ ಕಾರ್ಯಕ್ರಮದ ರೂವಾರಿ ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಅವರು ಮಾತನಾಡಿ ವಿಕಲಚೇತನರಿಗೆ ಉಚಿತವಾಗಿ ಸಾಧನ, ಸಲಕರಣೆ ವಿತರಣೆ ಮಾದರಿ, ಮಾನವೀಯತೆಗೆ ಸ್ಪಂದಿಸುವ ಹಾಗೂ ಹೃದಯ ತಟ್ಟುವಂತಹ ಕಾರ್ಯಕ್ರಮವಾಗಿದೆ. ಸಾಧನ, ಸಲಕರಣೆ ವಿತರಿಸಲು ದೇಶದ 36 ಲೋಕಸಭಾ ಕ್ಷೇತ್ರಗಳು ಆಯ್ಕೆಯಾಗಿವೆ. ಕರ್ನಾಟಕ ರಾಜ್ಯದಲ್ಲಿ ಚಾಮರಾಜನಗರ ಈ ಯೋಜನೆಗೆ ಆಯ್ಕೆಯಾಗಿರುವ ಏಕೈಕ ಲೋಕಸಭಾ ಕ್ಷೇತ್ರವಾಗಿದೆ ಎಂದರು.
ಜಿಲ್ಲೆಯ ಪ್ರತಿ ಹಳ್ಳಿ. ಗ್ರಾಮ ಪಂಚಾಯಿತಿ ಮಟ್ಟದಿಂದಲೂ ವಿಕಲಚೇತನರನ್ನು ಗುರುತಿಸಿ ಸಾಧನ, ಸಲಕರಣೆಗಳನ್ನು ವಿತರಿಸಲಾಗುತ್ತಿದ್ದು, ಇವುಗಳ ಸದ್ಭಳಕೆ ಗ್ರಾಮೀಣ ಜನತೆಗೆ ಪೂರ್ಣಪ್ರಮಾಣದಲ್ಲಿ ಆಗಬೇಕು. ದಕ್ಷಿಣ ಭಾರತದಲ್ಲಿಯೇ ಇದು ದೊಡ್ಡಮಟ್ಟದ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮದ ಯಶಸ್ವಿಗೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಶ್ರಮಿಸಿದ್ದಾರೆ. ಕಾರ್ಯಕ್ರಮ ಯಶಸ್ಸು ಆತ್ಮತೃಪ್ತಿ ತಂದಿದೆ ಎಂದು ಲೋಕಸಭಾ ಸದಸ್ಯರಾದ ಶ್ರೀನಿವಾಸಪ್ರಸಾದ್ ಅವರು ತಿಳಿಸಿದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಚಾಮರಾಜನಗರದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ದೊಡ್ಡಮಟ್ಟದ ವಿಶೇಷ ಕಾರ್ಯಕ್ರಮ ಇದಾಗಿದೆ. ಉಚಿತವಾಗಿ ಸಾಧನ, ಸಲಕರಣೆ ವಿತರಣೆಯಿಂದ ಜಿಲ್ಲೆಯ ವಿಕಲಚೇತನರಿಗೆ ಅನುಕೂಲವಾಗಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಕಲಚೇತನರಿಗೆ ನೀಡುತ್ತಿರುವ ಮಾಸಾಶನವನ್ನು ಹೆಚ್ಚಿಸಬೇಕು ಎಂದರು.
ಶಾಸಕರಾದ ಎನ್. ಮಹೇಶ್ ಹಾಗೂ ಸಿ.ಎಸ್. ನಿರಂಜನಕುಮಾರ್ ಅವರುಗಳು ಮಾತನಾಡಿ ವಿಕಲಚೇತನರಿಗೆ ಸಾಧನ, ಸಲಕರಣೆ ವಿತರಣೆಯು ಆಖಂಡ ಮಾನವೀಯತೆ ಕಾರ್ಯವಾಗಿದೆ. ವಿಕಲಚೇತನರನ್ನು ಅವರ ಮನೆಗಳಲ್ಲಿಯೇ ತಿರಸ್ಕಾರದಿಂದ ನೋಡುವುದು ಸಾಮಾನ್ಯ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಕಲಾಂಗರಲ್ಲಿ ಆತ್ಮವಿಶ್ವಾಸ ತುಂಬಿ ಸಮಾಜದಲ್ಲಿ ಇತರರಂತೆ ಸ್ವಾವಲಂಬಿಗಳಾಗಿ ಬದುಕಲು ಅವಕಾಶ ಮಾಡಿಕೊಟ್ಟಿವೆ ಎಂದರು.
ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶೇಷಚೇತನ ಮಕ್ಕಳಿಗೆ ಆಗತ್ಯ ಸಾಧನ ಸಲಕರಣೆಗಳನ್ನು ಗಣ್ಯರು ವಿತರಣೆ ಮಾಡಿದರು.
ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಜಿ. ನಿಜಗುಣರಾಜು, ನಗರಸಭಾ ಅಧ್ಯಕ್ಷರಾದ ಸಿ.ಎಂ. ಆಶಾ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರರಾಜು, ಉಪವಿಭಾಗಾಧಿಕಾರಿ ಗೀತಾಹುಡೇದ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಗೀತಾಲಕ್ಷ್ಮೀ, ಆಲಿಂಕೋ ಸಂಸ್ಥೆಯ ಹಿರಿಯ ವ್ಯವಸ್ಥಾಪಕರಾದ ಎ.ವಿ. ಆಶೋಕ್‍ಕುಮಾರ್, ಇತರರು ಕಾರ್ಯಕ್ರಮದಲ್ಲಿ ಇದ್ದರು.
No comments:
Post a Comment