Thursday, 22 December 2022

22-12-2022 ಚಾಮರಾಜನಗರ ಸುಧ್ದಿಗಳು




 



ಚಿಕ್ಕಲ್ಲೂರಿನ ಜಾತ್ರಾ ಮಹೋತ್ಸವ ಸಿದ್ದತೆಗೆ ಕ್ರಮ : ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ 

  ಚಾಮರಾಜನಗರ, ಡಿಸೆಂಬರ್ 22 :- ಕೊಳ್ಳೇಗಾಲ ತಾಲೂಕಿನ ಶ್ರೀ ಕ್ಷೇತ್ರ ಚಿಕ್ಕಲ್ಲೂರಿನ ಜಾತ್ರಾ ಮಹೋತ್ಸವಕ್ಕೆ ಅಗತ್ಯವಿರುವ ಎಲ್ಲ ಸಿದ್ದತೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದೆಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಚಿಕ್ಕಲ್ಲೂರು ಜಾತ್ರಾ ಮಹೋತ್ಸವ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಜಾತ್ರೆ ಭಕ್ತರ ಭಾವನೆಗಳಿಗೆ ಸಂಬಂಧಿಸಿದ್ದು, ಎಂದಿನಂತೆ ಸಾಂಪ್ರದಾಯಿಕ ಪರಂಪರೆ ಅನುಸಾರವಾಗಿ ಜಾತ್ರೆ ನಡೆಸಿಕೊಂಡು ಹೋಗಬೇಕಿದೆ. ಈ ನಿಟ್ಟಿನಲ್ಲಿ ಎಲ್ಲ ಸಿದ್ದತೆಗಳನ್ನು ಮಾಡಲಾಗುತ್ತದೆ. ಮೂಲಸೌಕರ್ಯ, ಕುಡಿಯುವ ನೀರು, ಬಸ್, ಸುಗಮ ಸಂಚಾರ ಸೇರಿದಂತೆ ಭಕ್ತಾಧಿಗಳಿಗೆ ಅಗತ್ಯವಿರುವ ಇನ್ನಿತರ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಪರಂಪರೆ ಪ್ರಕಾರ ಜಾತ್ರಾ ಮಹೋತ್ಸವಕ್ಕೆ ಭಕ್ತಾಧಿಗಳು ಆಗಮಿಸಲಿದ್ದು, ಎಲ್ಲ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇಂದಿನ ಸಭೆಯಲ್ಲಿ ಮುಖಂಡರು, ಭಕ್ತಾಧಿಗಳು ಸೇರಿದಂತೆ ಸರ್ವರಿಂದ ಜಾತ್ರಾ ಸಂಬಂಧ ವ್ಯಕ್ತವಾಗಿರುವ ಅಭಿಪ್ರಾಯ ಸಲಹೆಗಳನ್ನು ಆಲಿಸಲಾಗಿದೆ. ಜಾತ್ರೆಗೆ ಬೇಕಿರುವ ಎಲ್ಲ ಸಿದ್ದತೆಗಳನ್ನು ಮಾಡಲಾಗುತ್ತದೆ. ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು. 

ಸಭೆಯಲ್ಲಿ ಭಾಗವಹಿಸಿದ್ದ ಸರ್ವ ಮುಖಂಡರು ಭಕ್ತಾಧಿಗಳು ಮಠಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಭಿನ್ನಾಬಿಪ್ರಾಯಗಳಿಂದ ಜಾತ್ರಾ ಪರಂಪರೆ ಆಚರಣೆಗೆ ಯಾವುದೇ ಅಡ್ಡಿಯಾಗಬಾರದೆಂದು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ಮಾತನಾಡಿ ಈ ಕುರಿತು ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಜಾತ್ರೆಗೆ ಯಾವುದೇ ತೊಂದರೆಯಾಗದಂತೆ ಎಲ್ಲ ಕ್ರಮ ವಹಿಸಲಾಗುತ್ತದೆ. ಎಂದಿನಂತೆ ಜಾತ್ರೆ ನಡೆಯಲು ಎಲ್ಲ ವ್ಯವಸ್ಥೆ ಕೈಗೊಳ್ಳಲಾಗುತ್ತದೆ ಎಂದರು. 

ಭಕ್ತರ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಜಾತ್ರೆ ನಡೆಸಿಕೊಂಡು ಹೋಗಬೇಕಿದೆ. ಹೆಚ್ಚಿನ ಜನರು ಜಾತ್ರೆಗೆ ಆಗಮಿಸುವ ಹಿನ್ನೆಲೆಯಲ್ಲಿ ಶಿಸ್ತುಬದ್ದವಾಗಿ ಹಲವು ವ್ಯವಸ್ಥೆಗಳನ್ನು ಮಾಡಬೇಕಿದೆ. ಇದಕ್ಕಾಗಿ ವಿವರವಾಗಿ ಚರ್ಚೆ ನಡೆಸಿ ಎಲ್ಲ ಸಿದ್ದತೆಗಳನ್ನು ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ತಿಳಿಸಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್‍ರಾಜ್, ಉಪವಿಭಾಗಾಧಿಕಾರಿ ಗೀತಾ ಹುಡೇದ, ಮಠದ ಜ್ಞಾನನಂದ ಚೆನ್ನರಾಜೇ ಅರಸ್, ಬಿ.ಪಿ. ಭರತರಾಜೇ ಅರಸ್, ಸಾಹಿತಿ, ಮುಖಂಡರಾದ ಮಹದೇವ ಶಂಕನಪುರ, ಉಗ್ರನರಸಿಂಹೇಗೌಡ, ಸೋಮಶೇಖರ್, ರಾಜೇಂದ್ರ, ವೆಂಕಟರಮಣಪಾಪು, ರಾಜಶೇಖರಮೂರ್ತಿ, ಕೆ.ಎಂ. ನಾಗರಾಜು, ಅಣಗಳ್ಳಿ ಬಸವರಾಜು, ಬ್ಯಾಡಮೂಡ್ಲು ಬಸವಣ್ಣ, ಕಂದಹಳ್ಳಿ ನಾರಾಯಣ, ಇತರರು, ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. 
----

ಕೌಟುಂಬಿಕ ಭದ್ರತೆ, ಜೀವನ ನಿರ್ವಹಣೆಗೆ ಉದ್ಯೋಗ ಅಗತ್ಯವಾಗಿದೆ : ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ 

         ಚಾಮರಾಜನಗರ, ಡಿಸೆಂಬರ್ 22 - ಕುಟುಂಬ ಭದ್ರತೆ, ಜೀವನ ನಿರ್ವಹಣೆಗೆ ಅತ್ಯಗತ್ಯವಾಗಿರುವುದರಿಂದ ಪ್ರತಿಯೊಬ್ಬರು ಉದ್ಯೋಗ ಮೇಳಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಅಭಿಪ್ರಾಯಪಟ್ಟರು. 

     ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಡೀ ಕುಟುಂಬ ನಿರ್ವಹಣೆಗೆ ಉದ್ಯೋಗ ಅವಶ್ಯವಾಗಿದೆ. ಇಂದಿನ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ ಜೀವನ ನಿರ್ವಹಣೆಗೆ ಸರ್ಕಾರಿ ಅಥವಾ ಖಾಸಗಿ ಕ್ಷೇತ್ರ ಯಾವುದಾದರೂ ಸರಿಯೇ ನಿರುದ್ಯೋಗಿಗಳು ಕೆಲಸ ನಿರ್ವಹಿಸಲು ಸಿದ್ದರಾಗಿರಬೇಕು. ವಿದ್ಯೆಯ ಜೊತೆಗೆ ತಮ್ಮಲ್ಲಿರುವ ಪ್ರತಿಭೆ, ನೈಪುಣ್ಯತೆ, ಕೌಶಲ್ಯವನ್ನು ಉದ್ಯೋಗದಾತ ಕಂಪನಿಗಳ ಸಮ್ಮುಖದಲ್ಲಿ ಪ್ರಸ್ತುತಪಡಿಸಬೇಕು. ಈ ನಿಟ್ಟಿನಲ್ಲಿ ನಿರುದ್ಯೋಗಿ ಯುವಕ, ಯುವತಿಯರು ಭೌತಿಕವಾಗಿ ಮಾತ್ರವಲ್ಲ ಮಾನಸಿಕವಾಗಿ ಸದೃಢರಾಗಿರಬೇಕು ಎಂದು ಜಿಲ್ಲಾಧಿಕಾರಿಯವರು ಕಿವಿಮಾತು ಹೇಳಿದರು.   

ಜಿಲ್ಲೆಯಲ್ಲಿ ಕಳೆದ ಬಾರಿ ನಡೆದ ಉದ್ಯೋಗ ಮೇಳದಲ್ಲಿ ನೊಂದಾಯಿತರಾಗಿದ್ದವರ ಪೈಕಿ 95 ಯುವಜನರಿಗೆ ಕೆಲಸ ದೊರೆತಿದೆ. ಈ ಬಾರಿಯೂ ಸಹ ಸಾಕಷ್ಟು ನಿರುದ್ಯೋಗಿಗಳು ಉದ್ಯೋಗ ಅರಸಿ ಮೇಳಕ್ಕೆ ಹಾಜರಾಗಿದ್ದಾರೆ. ಸಂಬಂಧಪಟ್ಟ ಇಲಾಖೆಗಳು ಸಂದರ್ಶನಕ್ಕೂ ಮೊದಲು ಕಾರ್ಯಾಗಾರಗಳನ್ನು ಆಯೋಜಿಸಿ ತರಬೇತಿ ನೀಡಿ ನಿರುದ್ಯೋಗಿಗಳು ಹೆಚ್ಚಿನ ಕೌಶಲ್ಯತೆ ಹೊಂದುವಂತೆ ಪರಿಪೂರ್ಣಗೊಳಿಸುವ ಕಾರ್ಯ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ತಿಳಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕರಾದ ರಾಜೇಂದ್ರಪ್ರಸಾದ್ ಅವರು ಮಾತನಾಡಿ ಈ ಹಿಂದೆ ಉದ್ಯೋಗಮೇಳಗಳಿಗೆ ಜಿಲ್ಲೆಯ ನಿರುದ್ಯೋಗಿಗಳನ್ನು ಮೈಸೂರು, ಬೆಂಗಳೂರು, ಇತರೆ ಸ್ಥಳಗಳಿಗೆ ಕಳುಹಿಸಲಾಗುತ್ತಿತ್ತು. ಪ್ರಸ್ತುತ ಜಿಲ್ಲೆಯಲ್ಲಿಯೇ ಉದ್ಯೋಗಮೇಳಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಕೈಗಾರಿಕೆಗಳ ಬೆಳವಣಿಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ನಿರುದ್ಯೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಮಹಮ್ಮದ್ ಅಕ್ಬರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಎಂ.ವಿ. ಸುಧಾ, ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ. ಮಹದೇವಸ್ವಾಮಿ, ಕೈಮಗ್ಗ, ಜವಳಿ ಇಲಾಖೆಯ ಸಹಾಯಕ ನಿರ್ದೇಶಕರಾದ ಯೋಗೀಶ್, ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು. 

ನಂಜನಗೂಡು, ಮೈಸೂರು ಹಾಗೂ ಬೆಂಗಳೂರಿನ ಖಾಸಗಿ ಕಂಪನಿಗಳಲ್ಲಿ ಮಾರುಕಟ್ಟೆ ಸೇವೆಗಳು, ಹಣಕಾಸು, ಇನ್ಸೂರೆನ್ಸ್, ಕೈಗಾರಿಕಾ, ಬ್ಯಾಂಕಿಂಗ್ ಮತ್ತು ಆಸ್ಪತ್ರೆ ಸೇವೆಗಳು ಹಾಗೂ ಇತರೆ ಎಲ್ಲಾ ರೀತಿಯ ಸೇವೆ ನೀಡುವ 32 ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು.  
     
         ಉದ್ಯೋಗಮೇಳದಲ್ಲಿ ನೊಂದಣಿಯಾದ ಒಟ್ಟು 556 ಯುವಕ, ಯುವತಿಯರ ಪೈಕಿ ಉದ್ಯೋಗಕ್ಕೆ ಆಯ್ಕೆಗೊಂಡ 107 ಮಂದಿಗೆ ಪ್ರಮಾಣಪತ್ರ ವಿತರಿಸಲಾಯಿತು. 120 ಮಂದಿಯನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಯಿತು.

ಗೃಹರಕ್ಷಕರ ಸೇವಾ ಮನೋಭಾವ ಶ್ಲಾಘನೀಯ : ಜಿಲ್ಲಾ ಪೊಲೀಓಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್  

         ಚಾಮರಾಜನಗರ, ಡಿಸೆಂಬರ್ 22 - ಜೀವದ ಹಂಗು ತೊರೆದು ಸ್ವಯಂಪ್ರೇರಿತರಾಗಿ ಪೊಲೀಸರೊಂದಿಗೆ ಕಾರ್ಯನಿರ್ವಹಿಸುವ ಗೃಹರಕ್ಷಕರ ಸೇವಾ ಮನೋಭಾವ ಶ್ಲಾಘನೀಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್ ಅವರು ತಿಳಿಸಿದರು

     ನಗರದ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿಂದು ಜಿಲ್ಲಾ ಗೃಹರಕ್ಷಕದಳದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

     ಗೃಹರಕ್ಷಕರು ಪೊಲೀಸರಂತೆ ವೃತ್ತಿ ಸಮಯದಲ್ಲಿ ಸಾಕಷ್ಟು ಕಠಿಣ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಯಾವುದೇ ಜೀವನ ಭದ್ರತೆಯಲ್ಲದೇ ಸಂಪೂರ್ಣವಾಗಿ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಗೃಹರಕ್ಷಕರ ಸೇವಾ ಮನೋಭಾವ ಇತರರಿಗೂ ಮಾದರಿಯಾಗಿದೆ. ಪೊಲೀಸ್ ಇಲಾಖೆಗೆ ನೀಡಿರುವ ಎಲ್ಲಾ ಸೌಲಭ್ಯಗಳನ್ನು ಗೃಹರಕ್ಷಕರು ಪಡೆಯಲು ಸಹಕಾರ ನೀಡಲಾಗುವುದು ಎಂದರು.   
     ಜಿಲ್ಲೆಯಲ್ಲಿ ನಡೆಯುವ ಧಾರ್ಮಿಕ ಜಾತ್ರಾ ಕಾರ್ಯಕ್ರಮಗಳು, ಗಣ್ಯರು ಆಗಮಿಸುವ ವೇಳೆ ಹೆಚ್ಚಿನ ಭದ್ರತೆಗಾಗಿ ಪೊಲೀಸರೊಂದಿಗೆ ಗೃಹರಕ್ಷಕರನ್ನು ನಿಯೋಜನೆಗೊಳಿಸಲಾಗುತ್ತದೆ. ಯಾವುದೇ ಗೃಹರಕ್ಷಕರು ಕೌಟುಂಬಿಕ ಸಮಸ್ಯೆಗಳನ್ನು ಲೆಕ್ಕಿಸದೇ ಸೇವಾ ಕಾರ್ಯದಲ್ಲಿ ಪೊಲೀಸರೊಂದಿಗೆ ಕೈಜೋಡಿಸಲಿದ್ದಾರೆ. ಅವರ ಸೇವಾ ಕಾರ್ಯ ಮೆಚ್ಚುವಂತದ್ದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್ ಅವರು ತಿಳಿಸಿದರು.

     ಇದೇ ವೇಳೆ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಕೆ.ಪಿ. ನವೀನ್ ಕುಮಾರ್, ಹಾಗೂ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕøತರಾದ ಬೆಂಗಳೂರಿನ ಐಟಿಐ ಲಿಮಿಟೆಡ್ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಡಾ. ಎಂ. ಪ್ರಸನ್ನ ಮತ್ತು ಸೇವೆಯಲ್ಲಿ ಉತ್ತಮ ಸಾಧನೆಗೈದ ಗೃಹರಕ್ಷಕರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

      ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೃಹರಕ್ಷಕದಳದ ಜಿಲ್ಲಾ ಕಮಾಂಡಂಟ್ ಬಿ.ಎಸ್. ಬಸವರಾಜು ವಹಿಸಿದ್ದರು.

      ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್‍ರಾಜ್, ಸಾರಿಗೆ ಇಲಾಖೆ ಮೋಟಾರು ವಾಹನ ನಿರೀಕ್ಷಕರಾದ ಯೋಗೀಶ್, ಕೆ.ವಿ. ನಾಗರಾಜು, ಇತರರು ಕಾರ್ಯಕ್ರಮದಲ್ಲಿ ಇದ್ದರು.
----

ಡಿ. 23ರಂದು ಡೇ-ನಲ್ಮ್ ಯೋಜನೆ ಕುರಿತ ಕಾರ್ಯಾಗಾರ

 ಚಾಮರಾಜನಗರ, ಡಿಸೆಂಬರ್ 22:- ಜಿಲ್ಲಾ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ (ಎಸ್.ಬಿ.ಐ) ಸಹಯೋಗದಲ್ಲಿ ಡೇ-ನಲ್ಮ್ ಅಭಿಯಾನದ ಸ್ವಯಂ ಉದ್ಯೋಗ ಕಾರ್ಯಕ್ರಮ ಉಪಘಟಕದಡಿ ಜಿಲ್ಲಾ ಮಟ್ಟದ ಬ್ಯಾಂಕ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಡಿಸೆಂಬರ್ 23ರಂದು ಬೆಳಿಗ್ಗೆ 9.30 ಗಂಟೆಗೆ ನಗರದ ತಾಲೂಕು ಪಂಚಾಯಿತಿ ಕೆಡಿಪಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. 

ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಎ. ಮಹಮದ್ ಅಕ್ಬರ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡುವರು. ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಎಂ.ವಿ. ಸುಧಾ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕರಾದ ಸುರೇಖಾ, ನಗರಸಭೆ ಪೌರಾಯುಕ್ತರಾದ ರಾಮ್‍ದಾಸ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಎನ್. ಪೂರ್ಣಿಮಾ, ಮೈಸೂರು ಕೆನರಾ ಬ್ಯಾಂಕ್ ನಿವೃತ್ತ ಮುಖ್ಯ ವ್ಯವಸ್ಥಾಪಕರಾದ ಕೃಷ್ಣಮೂರ್ತಿ, ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ. 


ಡಿ. 23ರಂದು ಸಂತೇಮರಹಳ್ಳಿ ಭಾಗದ ವಿವಿಧೆಡೆ ವಿದ್ಯುತ್ ವ್ಯತ್ಯಯ
 
      ಚಾಮರಾಜನಗರ, ಡಿಸೆಂಬರ್ 22 :- ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮವು ಸಂತೇಮರಹಳ್ಳಿ ಉಪವಿಭಾಗ ವ್ಯಾಪ್ತಿಗೆ ಬರುವ ಸಂತೇಮರಹಳ್ಳಿ ಉಪಕೇಂದ್ರದಲ್ಲಿ ತುರ್ತು ಕಾಮಗಾರಿಯನ್ನು ಡಿಸೆಂಬರ್ 23ರಂದು ಹಮ್ಮಿಕೊಂಡಿರುವುದರಿಂದ ಸಂತೇಮರಹಳ್ಳಿ ಭಾಗದ ವಿವಿಧ ಗ್ರಾಮಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. 

      ಯಡಿಯೂರು, ಸಂತೇಮರಹಳ್ಳಿ, ಸಂತೇಮರಹಳ್ಳಿ ಮೋಳೆ, ಹೊಸಮೋಳೆ, ಕೆಂಪನಪುರ, ಚುಂಗಡಿಪುರ, ಮಹಂತಾಳಪುರ, ಹುಲ್ಲೇಪುರ, ನಡಕಲಮೋಳೆ, ಬಸವಟ್ಟಿ, ತೆಳ್ಳನೂರು, ಕಾವುದವಾಡಿ, ಕಮರವಾಡಿ, ದೇಮಹಳ್ಳಿ, ಬಾಣಹಳ್ಳಿ, ಹೆಬ್ಬಳ್ಳಿ, ಕೊನ್ನುಂಡಿ, ಅಂಕನಶೆಟ್ಟಿಮೋಳೆ, ಹೆಗ್ಗವಾಡಿ, ಮೂಡಲಅಗ್ರಹಾರ, ವಿವೇಕಾನಂದ ಕಾಲೋನಿ, ಹೆಗ್ಗವಾಡಿಪುರ, ದೇಶವಳ್ಳಿ, ಕುದೇರು, ದೇಮಹಳ್ಳಿಮೋಳೆ, ಯಲಕ್ಕೂರು, ತೆಂಕಲಮೋಳೆ, ಬಡಗಲಮೋಳೆ, ಕರಡಿಮೋಳೆ ಗ್ರಾಮಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಸಂತೇಮರಹಳ್ಳಿ ಕಾರ್ಯ ಮತ್ತು ಪಾಲನ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ. 

ಡಿ. 23ರಂದು ನಗರದಲ್ಲಿ ರಾಷ್ಟ್ರೀಯ ರೈತರ ದಿನಾಚರಣೆ :  ಜಾಥಾ, ಕಾರ್ಯಗಾರ ಆಯೋಜನೆ 

 ಚಾಮರಾಜನಗರ, ಡಿಸೆಂಬರ್ 22 - ಕೃಷಿ ಇಲಾಖೆ ವತಿಯಿಂದ ಭಾರತದ ಐದನೇ ಪ್ರಧಾನಮಂತ್ರಿ ಚೌಧರಿ ಚರಣ್ ಸಿಂಗ್ ರವರ ಜನ್ಮದಿನದ ಅಂಗವಾಗಿ ಡಿಸೆಂಬರ್ 23ರಂದು ನಗರದಲ್ಲಿ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. 

ಬೆಳಿಗ್ಗೆ 9.45 ಗಂಟೆಗೆ ಜಿಲ್ಲಾಡಳಿತ ಭವನದ ಮುಂಭಾಗ ಗ್ರಾಹಕರಿಗೆ ಅರಿವು ಮೂಡಿಸುವ ಸಲುವಾಗಿ ರೈತರ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಸಿರಿಧಾನ್ಯ ಜಾಥಾಗೆ ಚಾಲನೆ ದೊರೆಯಲಿದೆ. ಬೆಳಿಗ್ಗೆ 11 ಗಂಟೆಗೆ ನಗರದ ವಾಲ್ಮೀಕಿ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಮೌಲ್ಯವರ್ಧನೆಯ ಮೂಲಕ ಕೃಷಿ ಅಭಿವೃದ್ದಿಯನ್ನು ವೇಗಗೊಳಿಸುವುದು, ಸಿರಿಧಾನ್ಯ ಮತ್ತು ನೈಸರ್ಗಿಕ ಕೃಷಿ ಕುರಿತ ಕಾರ್ಯಗಾರವನ್ನು ಆಯೋಜಿಸಲಾಗಿದೆ. 

ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗಪಡೆದುಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರಾದ ಮಧುಸೂಧನ್ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು