ಮುಖ್ಯಮಂತ್ರಿಯವರ ಕಾರ್ಯಕ್ರಮ ಹಿನ್ನೆಲೆ : ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಸೂಚನೆ
ಚಾಮರಾಜನಗರ, ಡಿಸೆಂಬರ್ 07 - ಜಿಲ್ಲೆಯಲ್ಲಿ ಇದೇ ಡಿಸೆಂಬರ್ 12ರಂದು ನಿಗದಿಯಾಗಿರುವ ಮುಖ್ಯಮಂತ್ರಿಯವರ ಕಾರ್ಯಕ್ರಮಗಳಿಗೆ ಅಧಿಕಾರಿಗಳು ಜವಾಬ್ದಾರಿಯುತವಾಗಿ ಎಲ್ಲಾ ಅಗತ್ಯ ವ್ಯವಸ್ಥೆಗಳೊಂದಿಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸುವಂತೆ ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಸೂಚಿಸಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಮುಖ್ಯಮಂತ್ರಿಗಳ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಡೆದ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳನ್ನೊಳಗೊಂಡ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿಯವರು ಡಿಸೆಂಬರ್ 12ರಂದು ಬೆಳಿಗ್ಗೆ 10.30 ಗಂಟೆಗೆ ನಗರದಲ್ಲಿ, ಮಧ್ಯಾಹ್ನ 12.30ಕ್ಕೆ ಹನೂರಿನಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಮಲೈ ಮಹದೇಶ್ವರ ಬೆಟ್ಟದಲ್ಲಿ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಸಭೆ ನಡೆಸಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನೆರವೇರಲು ಕ್ರಮವಹಿಸುವಂತೆ ಉಸ್ತುವಾರಿ ಸಚಿವರು ಸೂಚಿಸಿದರು.
ಸರ್ಕಾರದ ಸವಲತ್ತುಗಳನ್ನು ಫಲಾನುಭವಿಗಳಿಗೆ ನೀಡುತ್ತಿರುವ ಹಿನ್ನೆಲೆಯಲ್ಲಿ ಫಲಾನುಭವಿಗಳನ್ನು ಆಯಾ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರೆತರಬೇಕು. ಹೀಗಾಗಿ ಮೊದಲೇ ಫಲಾನುಭವಿಗಳ ಪಟ್ಟಿ ಮಾಡಿಕೊಂಡು ನಿಯೋಜಿತ ಅಧಿಕಾರಿ ಸಿಬ್ಬಂದಿ ಜೊತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಗತ್ಯ ಎಲ್ಲಾ ವ್ಯವಸ್ಥೆಗಳನ್ನು ಮುಂಚಿತವಾಗಿಯೇ ಕೈಗೊಳ್ಳಬೇಕೆಂದು ಸಚಿವರು ತಿಳಿಸಿದರು.
ಜಿಲ್ಲೆಯ ಅಭಿವೃದ್ದಿ ಸಂಬಂಧ ಶಕ್ತಿ ತುಂಬುವ ಕೆಲಸ ನಡೆಯುತ್ತಿದೆ. ಮುಖ್ಯಮಂತ್ರಿಗಳ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಧಿಕಾರಿ ಸಿಬ್ಬಂದಿಗೆ ವಹಿಸಲಾಗಿರುವ ಕಾರ್ಯವನ್ನು ಆಸಕ್ತಿಯಿಂದ ನಿರ್ವಹಿಸಬೇಕು. ಮಹತ್ತರ ಕಾರ್ಯಕ್ರಮದಲ್ಲಿ ಎಲ್ಲರೂ ತೊಡಗಿಕೊಳ್ಳಬೇಕು. ಯಾವುದೇ ಲೋಪಕ್ಕೆ ಅವಕಾಶ ನೀಡಬಾರದು ಎಂದರು.
ನೂರಾರು ಕೋಟಿ ರೂ.ಗಳ ಅಭಿವೃದ್ದಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಲಿದ್ದು, ಜಿಲ್ಲೆ ಪ್ರಗತಿಯ ದೃಷ್ಠಿಯಿಂದ ಬದಲಾವಣೆ ಕಾಣಲಿದೆ. 1500 ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಯ ಕೆರೆಗಳ ಸಮಗ್ರ ಅಭಿವೃದ್ದಿಗೆ ವಿಸೃತ ಯೋಜನಾ ವರದಿ ತಯಾರಿಸಲಾಗಿದೆ. ಯೋಜನೆಯಿಂದ ಪರಿಸರದ ಸಂರಕ್ಷಣೆ ಸಹ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಮಾತನಾಡಿ ಪ್ರತೀ ತಾಲೂಕಿನ ವಿವಿಧ ಹಂತದ ಅಧಿಕಾರಿಗಳಿಗೆ ಕಾರ್ಯಕ್ರಮ ಸಂಬಂಧ ಗುರುತರ ಜವಾಬ್ದಾರಿ ವಹಿಸಲಾಗಿದೆ. ಇದನ್ನು ಚಾಚೂ ತಪ್ಪದೇ ನಿರ್ವಹಿಸಬೇಕು. ಯಾವುದೇ ಮಾಹಿತಿಗಳು ಅಗತ್ಯವಿದ್ದಲ್ಲಿ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಆರ್. ನರೇಂದ್ರ, ಎನ್. ಮಹೇಶ್, ಸಿ.ಎಸ್. ನಿರಂಜನ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಕುಮಾರ್ ಸಭೆಯಲ್ಲಿ ಉಪಸ್ಥಿತರಿದ್ದರು.
ಡಿ. 12ರಂದು ನಗರಕ್ಕೆ ಸಿ.ಎಂ. ಭೇಟಿ : ಜಿಲ್ಲಾ ಉಸ್ತುವಾರಿ ಸಚಿವರಿಂದ ಸಿದ್ದತೆ ಪರಿಶೀಲನೆ
ಚಾಮರಾಜನಗರ, ಡಿಸೆಂಬರ್ 07 :- ಮುಖ್ಯಮಂತ್ರಿಯವರಾದ ಬಸವರಾಜಬೊಮ್ಮಯಿ ಅವರು ಡಿಸೆಂಬರ್ 12ರಂದು ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿಸಲಿರುವ ಹಿನ್ನೆಲೆಯಲ್ಲಿ ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಇಂದು ಕ್ರೀಡಾಂಗಣಕ್ಕೆ ಭೇಟಿ ನೀಡಿ ಸಿದ್ದತೆ ಪರಿಶೀಲಿಸಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಾಕಲಾಗುತ್ತಿರುವ ವಿಶಾಲವಾದ ಶಾಮಿಯಾನ, ಆಸನಗಳು, ವೇದಿಕೆ, ಇನ್ನಿತರ ವ್ಯವಸ್ಥೆಗಳನ್ನು ವೀಕ್ಷಿಸಿದರು.
ಎತ್ತರದ ಹಾಗೂ ವಿಶಾಲವಾದ ವೇದಿಕೆ, ಹೆಚ್ಚು ಸಂಖ್ಯೆಯಲ್ಲಿ ಸಾರ್ವಜನಿಕರು ಕುಳಿತು ಕಾರ್ಯಕ್ರಮ ವೀಕ್ಷಣೆ ಮಾಡುವ ಉದ್ದೇಶದಿಂದ ನೆರಳಿಗೆ ಅನುಕೂಲವಾಗುವಂತೆ ಶಾಮಿಯಾನ ಹಾಕಬೇಕು. ಕುರ್ಚಿಗಳ ಸಂಖ್ಯೆಯು ಹೆಚ್ಚಾಗಿರಬೇಕು. ಕುಡಿಯುವ ನೀರು, ಸಾರ್ವಜನಿಕರಿಗೆ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಸಮರ್ಪಕವಾಗಿ ಇರಬೇಕು ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಬಳಿಕ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿಯವರು ಇದೇ ಡಿಸೆಂಬರ್ 12ರಂದು ಬೆಳಿಗ್ಗೆ 10.30 ಗಂಟೆಗೆ ಚಾಮರಾಜನಗರಕ್ಕೆ, 12.30 ಗಂಟೆಗೆ ಹನೂರು ಪಟ್ಟಣಕ್ಕೆ ಆಗಮಿಸಿ ವಿವಿಧ ಅಭಿವೃದ್ದಿ ಕಾಮಗಾರಿ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಮಲೈಮಹದೇಶ್ವರ ಬೆಟ್ಟದಲ್ಲಿ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಸಭೆ ನಡೆಸಲಿದ್ದಾರೆ ಎಂದರು.
ಮುಖ್ಯಮಂತ್ರಿಯವರು ಹಲವಾರು ಪ್ರಮುಖ ಮಹತ್ವದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಹನೂರು ವಿಧಾನಸಭಾ ಕ್ಷೇತ್ರದ 98 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಮೊದಲನೇ ಹಂತದ 192 ಕೋಟಿ ರೂ. ವೆಚ್ಚದ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಲೋಕಾರ್ಪಣೆ ಸೇರಿದಂತೆ ಇತರೆ ಅಭಿವೃದ್ದಿ ಕಾರ್ಯ ಉದ್ಘಾಟಿಸುವರು. ಮಲೈ ಮಹದೇಶ್ವರ ಬೆಟ್ಟದಲ್ಲಿ ಪ್ರಾಥಮಿಕ ಆರೋಗ್ಯವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವುದು, ಮಲೈ ಮಹದೇಶ್ವರ ಬೆಟ್ಟದಲ್ಲಿ 66/11 ಕೆÀ.ವಿ ವಿದ್ಯುತ್ ಉಪಕೇಂದ್ರದ ಕಾಮಗಾರಿ ಸೇರಿದಂತೆ ನಾನಾ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಸಚಿವರು ವಿವರಿಸಿದರು.
ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ವಿತರಿಸಲಾಗುತ್ತದೆ. ಜಿಲ್ಲೆಯ ಅಭಿವೃಧ್ದಿಗೆ ಪೂರಕವಾಗಿರುವ ಮೂಲ ಸೌಕರ್ಯ, ಇನ್ನಿತರ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಯೋಜನಾ ವಿಸೃತ ವರದಿ ತಯಾರಿಸಲಾಗಿದೆ. ಪ್ರಕೃತಿ ವಿಕೋಪಗಳ ಪ್ರಕರಣಗಳಿಗೆ ಈಗಾಗಲೇ ಪರಿಹಾರ ವಿತರಿಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದಂತೆ ಪ್ರಸ್ತಾಪಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಯಾವುದೇ ವಿದ್ಯಾರ್ಥಿವೇತನವನ್ನು ನಿಲ್ಲಿಸಿಲ್ಲ. ಈ ವಿಷಯದಲ್ಲಿ ಅನಾವಶ್ಯಕವಾಗಿ ಯಾವುದೇ ಗೊಂದಲಗಳಾಗುವುದು ಬೇಡ ಎಂದರು.
ಶಾಸಕರಾದ ಎನ್. ಮಹೇಶ್, ಸಿ.ಎಸ್. ನಿರಂಜನ್‍ಕುಮಾರ್, ನಗರಸಭೆ ಅಧ್ಯಕ್ಷರಾದ ಸಿ.ಎಂ. ಆಶಾ, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್, ಇತರೆ ಅಧಿಕಾರಿಗಳು ಇದ್ದರು.
ಡಿ. 8ರಂದು ಮುಳ್ಳೂರಿನಲ್ಲಿ ಚಿಗುರು ಕಾರ್ಯಕ್ರಮ
ಚಾಮರಾಜನಗರ, ಡಿಸೆಂಬರ್ 07 :- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಕ್ಕಳಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮಕ್ಕಳ ಹಬ್ಬ ಚಿಗುರು ಕಾರ್ಯಕ್ರಮವನ್ನು ಡಿಸೆಂಬರ್ 8ರಂದು ಬೆಳಿಗ್ಗೆ 11 ಗಂಟೆಗೆ ಕೊಳ್ಳೇಗಾಲ ತಾಲೂಕು ಮುಳ್ಳೂರಿನ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರಾದ ಎನ್. ಮಹೇಶ್ ಅವರು ಅಧ್ಯಕ್ಷತೆ ವಹಿಸುವರು.
ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಆರ್. ನರೇಂದ್ರ, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ಶಾಸಕರಾದ ಸಿ.ಎಸ್. ನಿರಂಜನಕುಮಾರ್, ಮರಿತಿಬ್ಬೇಗೌಡ, ಡಾ. ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಮಧು ಜಿ. ಮಾದೇಗೌಡ, ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಜಿ. ನಿಜಗುಣರಾಜು, ಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಂ. ಚಂದ್ರಕಲಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಮೈಸೂರು ವಿಭಾಗದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಅವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
-----------
ಯುವಜನೋತ್ಸವ ವೇದಿಕೆ ಪ್ರತಿಭೆ ಅನಾವರಣಕ್ಕೆ ಪೂರಕ : ಶಾಸಕರಾದ ಸಿ. ಪುಟ್ಟರಂಗಶೆಟ್ಟಿ
ಚಾಮರಾಜನಗರ, ಡಿಸೆಂಬರ್ 07 ಯುವ ಜನೋತ್ಸವದಂತಹ ವೇದಿಕೆಗಳು ಯುವಜನರ ಪ್ರತಿಭೆ ಅನಾವರಣಕ್ಕೆ ಪೂರಕವಾಗಿದ್ದು ಇಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಸಲಹೆ ಮಾಡಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಜನರ ಸಾಧನೆ ಪ್ರತಿಭೆ ಅನಾವರಣಕ್ಕೆ ಯುವಜನೋತ್ಸವ ಉತ್ತಮ ಅವಕಾಶವಾಗಿದೆ. ಯುವಜನರು ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವ ಕಾರ್ಯಕ್ರಮಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲೆ ಜಾನಪದ ಕಲೆಗಳಿಗೆ ಹೆಸರಾಗಿದ್ದು, ಅನೇಕ ಪ್ರತಿಭಾವಂತ ಕಲಾವಿದರು ಇದ್ದಾರೆ. ಇಂತಹ ಜಾನಪದ ಕಲೆಗಳ ತವರೂರಿನಲ್ಲಿ ಯುವಜನರು ಹೆಚ್ಚಿನ ಸಾಧನೆ ಮಾಡಬೇಕೆಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಸಲಹೆ ಮಾಡಿದರು.
ಕಾವೇರಿ ಅಚ್ಚುಕಟ್ಟು ಪ್ರಾದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಜಿ. ನಿಜಗುಣರಾಜು ಅವರು ಮಾತನಾಡಿ ಯುವಕರು ರಾಷ್ಟ್ರದ ಸಂಪತ್ತು. ಸ್ವಾಮಿ ವಿವೇಕಾನಂದರು ಯುವ ಶಕ್ತಿಯ ಬಗ್ಗೆ ಹೆಚ್ಚು ಹೇಳಿದ್ದಾರೆ. ಭಾರತೀಯ ಸಾಹಿತ್ಯ, ಸಂಸ್ಕøತಿ ಕಲೆಯ ಮಹತ್ವದ ಬಗ್ಗೆ ಯುವಜನರು ಹೆಚ್ಚು ಪ್ರಚುರಪಡಿಸಬೇಕು. ಗ್ರಾಮೀಣ ಕಲೆಗಳ ಬಗ್ಗೆ ಆಸಕ್ತಿ ಹೊಂದಬೇಕು. ಅಲ್ಲದೇ ಪ್ರೋತ್ಸಾಹ ನೀಡಬೇಕು ಎಂದರು.
ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಮಾತನಾಡಿ ಯುವಜನರು ದೇಶದ ಶಕ್ತಿ. ಸ್ವಾಮಿ ವಿವೇಕಾನಂದರು ಯುವಶಕ್ತಿಯ ಬಗ್ಗೆ ಸಾಕಷ್ಟು ಮಾರ್ಗದರ್ಶನ ಮಾಡಿದ್ದಾರೆ. ಯುವ ಪೀಳಿಗೆ ದೈಹಿಕ, ಮಾನಸಿಕ ಆರೋಗ್ಯಕ್ಕೆ ಒತ್ತು ನೀಡಿದರೆ ದೇಶದ ಪ್ರಗತಿ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ನಗರಸಭೆ ಅಧ್ಯಕ್ಷರಾದ ಆಶಾ ನಟರಾಜು ಅವರು ಮಾತನಾಡಿ ಜಿಲ್ಲೆಯ ಯುವ ಪ್ರತಿಭೆಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿಯೂ ತಮ್ಮ ಕಲೆ ಸಂಸ್ಕøತಿ ಪ್ರದರ್ಶನದ ಮೂಲಕ ಜಿಲ್ಲೆಗೆ ಕೀರ್ತಿ ತರಬೇಕೆಂದು ಆಶಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ, ರಂಗಕರ್ಮಿ ವೆಂಕಟರಾಜು, ಸಿ.ಎಂ. ನರಸಿಂಹಮೂರ್ತಿ, ಸುರೇಶ್ ಋಗ್ವೇದಿ, ಮುದ್ದಪ್ಪ, ರಜೂಲ್, ಕ್ರೀಡಾಂಗಣ ಸಮಿತಿ ಸದಸ್ಯರಾದ ಶ್ರೀನಿವಾಸಪ್ರಸಾದ್, ಬಸವರಾಜು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
No comments:
Post a Comment