ಡಿ. 24ರಂದು ವಿಕಲಚೇತನರಿಗೆ ಸಾಧನ ಸಲಕರಣೆ ವಿತರಣೆ ಕಾರ್ಯಕ್ರಮ : ಸಿದ್ದತೆಗೆ ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಸೂಚನೆ
ಚಾಮರಾಜನಗರ, ಡಿಸೆಂಬರ್ 14 :- ಜಿಲ್ಲೆಯಲ್ಲಿ ಕಳೆದ ಜುಲೈ ತಿಂಗಳಿನಲ್ಲಿ ನಡೆಸಲಾದ ವಿಕಲಚೇತನರ ತಪಾಸಣಾ ಶಿಬಿರದಲ್ಲಿ ಸಾಧನ, ಸಲಕರಣೆಗಳನ್ನು ವಿತರಿಸಲು ಗುರುತಿಸಲಾಗಿರುವ 1693 ವಿಕಲಚೇತನರಿಗೆ ಇದೇ ಡಿಸೆಂಬರ್ 24ರಂದು ಸಾಧನ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಇದಕ್ಕಾಗಿ ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳುವಂತೆ ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಅವರು ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ವಿಕಲಚೇತನರಿಗೆ ಸಾಧನ, ಸಲಕರಣೆ ವಿತರಿಸುವ ಕಾರ್ಯಕ್ರಮ ಆಯೋಜನೆ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಅಲಿಮ್ಕೊ ಸಂಸ್ಥೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದೊಂದಿಗೆ ವಿಕಲಚೇತನರಿಗೆ ಅಗತ್ಯವಿರುವ ವಿವಿಧ ಸಾಧನ, ಸಲಕರಣೆಗಳನ್ನು ವಿತರಿಸುವ ಸಲುವಾಗಿ ಜಿಲ್ಲೆಯ ವಿವಿಧೆಡೆ ಜುಲೈ ತಿಂಗಳಿನಲ್ಲಿ ತಪಾಸಣಾ ಶಿಬಿರ ಏರ್ಪಡಿಸಿತ್ತು. ಈ ಸಂದರ್ಭದಲ್ಲಿ 1693 ವಿಕಲಚೇತನರಿಗೆ ಸಾಧನ ಸಲಕರಣೆ ಅಗತ್ಯ ಇರುವ ಬಗ್ಗೆ ಗುರುತಿಸಲಾಗಿತ್ತು. ಈ ಎಲ್ಲರಿಗೂ ಡಿಸೆಂಬರ್ 24ರಂದು ಸಾಧನ ಸಲಕರಣೆ ವಿತರಿಸಲು ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲು ಎಲ್ಲಾ ಏರ್ಪಾಡುಗಳನ್ನು ಮಾಡಬೇಕೆಂದು ಲೋಕಸಭಾ ಸದಸ್ಯರು ತಿಳಿಸಿದರು.
ಕಾರ್ಯಕ್ರಮದ ಸ್ಥಳದಲ್ಲಿ ವಿಕಲಚೇತನರು ಸಾಧನ ಸಲಕರಣೆಗಳನ್ನು ಪಡೆಯಲು ಪ್ರತ್ಯೇಕ ಕೌಂಟರ್‍ಗಳನ್ನು ತೆರೆಯಬೇಕು. ಸೌಲಭ್ಯಕ್ಕಾಗಿ ಆಯ್ಕೆಯಾಗಿರುವವರಿಗೆ ಮಾಹಿತಿ ನೀಡಬೇಕು. ಆಯಾ ಗ್ರಾಮ ಪಂಚಾಯಿತಿ, ನಗರ ಪಟ್ಟಣ ವ್ಯಾಪ್ತಿಯಲ್ಲಿ ಇರುವ ಫಲಾನುಭವಿಗಳು ಸಾಧನ ಸಲಕರಣೆ ಪಡೆಯಲು ಅವಶ್ಯವಿರುವ ಎಲ್ಲಾ ಕ್ರಮಗಳಿಗೆ ತ್ವರಿತವಾಗಿ ಮುಂದಾಗುವಂತೆ ನಿರ್ದೇಶನ ನೀಡಿದರು.
ವ್ಹೀಲ್ ಚೇರ್, ತ್ರಿಚಕ್ರ ವಾಹನ ಅಗತ್ಯವಿರುವವರಿಗೆ ವಿಶೇಷ ಕೌಂಟರ್‍ಗಳು ಬೇಕಿದೆ. ಫಲಾನುಭವಿಗಳ ಸಂಖ್ಯೆಗೆ ಅನುಗುಣವಾಗಿ ವಿಸ್ತಾರವಾದ ಸ್ಥಳವಕಾಶ ಮಾಡಬೇಕಾಗುತ್ತದೆ. ಸಲಕರಣೆಗಳನ್ನು ನೀಡಲು ಮೊದಲೇ ರೂಪು ರೇಷೆ ತಯಾರಿಸಿಕೊಂಡು ಯಾವುದೇ ಗೊಂದಲಗಳಾಗದಂತೆ ವಿತರಿಸಬೇಕು ಎಂದು ಲೋಕಸಭಾ ಸದಸ್ಯರು ತಿಳಿಸಿದರು.
ವಿಕಲಚೇತನರನ್ನು ಕರೆತರಲು ಬಸ್‍ಗಳ ವ್ಯವಸ್ಥೆ ಮಾಡಬೇಕಿದೆ. ಅಂಗವೈಕಲ್ಯ ಪ್ರಮಾಣ ತೀರ ಹೆಚ್ಚಿರುವ ಹಾಗೂ ಬಸ್ ನಲ್ಲಿ ಬರಲು ಸಾಧ್ಯವಾಗದ ಫಲಾನುಭವಿಗಳಿಗೆ ವಿಶೇಷ ವಾಹನ ನಿಯೋಜಿಸಬೇಕಾಗುತ್ತದೆ. ಹಲವರಿಗೆ ಅವಲಂಬಿತರು ಜೊತೆಯಲ್ಲಿ ಬರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ವಾಹನಗಳ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಬೇಕು. ವಿವಿಧ ಇಲಾಖೆಗಳ ಅಧಿಕಾರಿಗಳು ಸಾಧನ ಸಲಕರಣೆ ಕಾರ್ಯಕ್ರಮದ ಅಚ್ಚುಕಟ್ಟು ನಿರ್ವಹಣೆಗೆ ಯೋಜನಾ ಬದ್ದವಾಗಿ ಕಾರ್ಯೋನ್ಮುಖರಾಗಬೇಕೆಂದು ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಮಾತನಾಡಿ ಸಾಧನ ಸಲಕರಣೆ ವಿತರಣೆಗೆ ಪೂರ್ವಭಾವಿಯಾಗಿ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ವಿಕಲಚೇತನರಿಗೆ ನೆರವಾಗುವ ವಿವಿದೋದ್ದೇಶ ಕಾರ್ಯಕರ್ತರ ಸಭೆ ನಡೆಸಿ ಸೂಕ್ತ ಮಾಗದರ್ಶನ ನೀಡಬೇಕು. ಕಾರ್ಯಕ್ರಮದ ಸ್ಥಳದಲ್ಲಿ ಎನ್.ಸಿ.ಸಿ, ಎನ್.ಎಸ್.ಎಸ್. ಸ್ವಯಂ ಸೇವಕ ವಿದ್ಯಾರ್ಥಿಗಳ ನೆರವು ಪಡೆದುಕೊಳ್ಳಬೇಕು. ವೈದ್ಯಕೀಯ ಸಿಬ್ಬಂದಿ ಸಹ ಇರಬೇಕು. ಕಾರ್ಯಕ್ರಮದ ಜವಾಬ್ದಾರಿ ನಿರ್ವಹಣೆಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್, ಅಲಿಮ್ಕೊ ಸಂಸ್ಥೆಯ ಬೆಂಗಳೂರಿನ ಉಪ ವ್ಯವಸ್ಥಾಪಕರಾದ ಶಿವಕುಮಾರ್, ಯೂನಿಟ್ ಮುಖ್ಯಸ್ಥರು ಹಾಗೂ ಹಿರಿಯ ವ್ಯವಸ್ಥಾಪಕರಾದ ಎ.ವಿ. ಅಶೋಕ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಗೀತಾಲಕ್ಷ್ಮಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ದೀಪಾ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್ ಪ್ರಸನ್ನ, ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ ಮಂಜುನಾಥ್, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಸುಧಾ, ನಗರಸಭೆ ಆಯುಕ್ತರಾದ ರಾಮದಾಸ್, ಇನ್ನಿತರ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ನಮ್ಮ ಕ್ಲಿನಿಕ್‍ಗೆ ವರ್ಚುವಲ್ ಮೂಲಕ ಮುಖ್ಯಮಂತ್ರಿಯವರಿಂದ ಚಾಲನೆ
ಚಾಮರಾಜನಗರ, ಡಿಸೆಂಬರ್ 14 - ಚಾಮರಾಜನಗರ ಜಿಲ್ಲೆಯಲ್ಲೂ ಆರಂಭವಾಗುತ್ತಿರುವ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಕಾರ್ಯಕ್ರಮಗಳಲ್ಲಿ ಒಂದಾದ ನಮ್ಮ ಕ್ಲಿನಿಕ್‍ಗಳಿಗೆ ಮುಖ್ಯಮಂತ್ರಿಯವರಾದ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯಿಂದ ವರ್ಚುವಲ್ ಮೂಲಕ ಇಂದು ಚಾಲನೆ ನೀಡಿದರು.
ರಾಜ್ಯದ ವಿವಿಧ ಜಿಲ್ಲೆಗಳ 114 ನಮ್ಮ ಕ್ಲಿನಿಕ್‍ಗಳಿಗೆ ಮುಖ್ಯಮಂತ್ರಿಯವರು ಹುಬ್ಬಳ್ಳಿಯಿಂದ ವರ್ಚುವಲ್ ಮೂಲಕ ಚಾಲನೆ ನೀಡಿದರು. ಚಾಮರಾಜನಗರದ ಕರಿನಂಜನಪುರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಬಡಾವಣೆ ಸೇರಿದಂತೆ ಜಿಲ್ಲೆಯ ಒಟ್ಟು ಮೂರು ಕಡೆ ನಮ್ಮ ಕ್ಲಿನಿಕ್‍ಗಳು ಆರಂಭವಾಗುತ್ತಿದೆ. ಇದರ ಉದ್ಘಾಟನೆ ನಗರದ ಕರಿನಂಜನಪುರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಬಡಾವಣೆಯ ನಮ್ಮ ಕ್ಲಿನಿಕ್ ನಲ್ಲಿ ಏರ್ಪಾಡಾಗಿತ್ತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸ್ಥಳೀಯವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಹುಬ್ಬಳ್ಳಿಯಿಂದ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಮುಖ್ಯಮಂತ್ರಿಯವರಾದ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರೊಂದಿಗೆ ಸಂವಾದ ನಡೆಸಿ ಚಾಮರಾಜನಗರ ಜಿಲ್ಲೆಯಲ್ಲಿ ಎಲ್ಲೆಲ್ಲಿ ನಮ್ಮ ಕ್ಲಿನಿಕ್‍ಗಳು ಪ್ರಾರಂಭವಾಗುತ್ತಿದೆ. ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆಯೆ ಎಂದು ಪ್ರಶ್ನಿಸಿದರು. ಇದಕ್ಕೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಉತ್ತರಿಸಿ, ಚಾಮರಾಜನಗರದ ಕರಿನಂಜನಪುರ ಬಡಾವಣೆ ಹಾಗೂ ಗುಂಡ್ಲುಪೇಟೆಯಲ್ಲಿ ನಮ್ಮ ಕ್ಲಿನಿಕ್ ಪ್ರಾರಂಭಿಸಲಾಗಿದೆ. ಕೊಳ್ಳೇಗಾಲದಲ್ಲಿ ಕಟ್ಟದ ಸಿದ್ದವಿದ್ದು ಇನ್ನೆರಡು ದಿನಗಳಲ್ಲಿ ಕಾರ್ಯಾರಂಭವಾಗಲಿದೆ. ನಮ್ಮ ಕ್ಲಿನಿಕ್‍ಗೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ನಮ್ಮ ಕ್ಲಿನಿಕ್‍ನಲ್ಲಿ ವೈದ್ಯರು, ಲ್ಯಾಬ್ ಟೆಕ್ನಿಷಿಯನ್, ನಸಿರ್ಂಗ್ ಸಿಬ್ಬಂದಿ ಇದ್ದಾರೆ. ಔಷಧ ವಿತರಣೆಗೂ ವ್ಯವಸ್ಥೆ ಮಾಡಲಾಗಿದೆ. ನಮ್ಮ ಕ್ಲಿನಿಕ್ ಸಂಬಂಧ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಿಕೊಂಡಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಬಳಿಕ ಮುಖ್ಯಮಂತ್ರಿಗಳು ಸ್ಥಳೀಯ ನಿವಾಸಿ ಸುಧಾ ಅವರೊಂದಿಗೆ ಮಾತನಾಡಿದರು. ನೀವು ಕ್ಲಿನಿಕ್ ಹತ್ತಿರ ಇದ್ದೀರಾ? ಯಾವ ಬಡಾವಣೆ ನಿಮ್ಮದು? ಈ ಮೊದಲು ಈ ರೀತಿಯ ಕ್ಲಿನಿಕ್ ನಿಮ್ಮ ಬಡಾವಣೆಯಲ್ಲಿ ಇತ್ತೆ? ಕ್ಲಿನಿಕ್ ಬಂದಿರುವುದರಿಂದ ಅನುಕೂಲ ಆಗಲಿದೆಯಾ ಎಂದು ಮುಖ್ಯಮಂತ್ರಿಯವರಾದ ಬಸವರಾಜ ಬೊಮ್ಮಾಯಿ ಅವರು ಪ್ರಶ್ನಿಸಿದರು. ಇದಕ್ಕೆ ಸುಧಾ ಅವರು ಆಸ್ಪತ್ರೆಗಾಗಿ ನಾವು ಪಟ್ಟಣಕ್ಕೆ ಹೋಗಬೇಕಿತ್ತು. ಈಗ ನಮ್ಮ ಬಡಾವಣೆಯಲ್ಲಿಯೇ ಕ್ಲಿನಿಕ್ ಮಾಡಿರುವುದರಿಂದ ತುಂಬಾ ಅನುಕೂಲವಾಗಿದೆ. ಇದಕ್ಕಾಗಿ ತಮಗೆ ಕೃತಜ್ಞತೆಗಳು ಎಂದರು.
ಸಣ್ಣ ಪುಟ್ಟ ಜ್ವರವಿರಲಿ, ಇನ್ನಿತರ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ಕ್ಲಿನಿಕ್‍ನಲ್ಲಿ ಉಚಿತವಾಗಿ ಚಿಕಿತ್ಸೆ, ಔಷಧ ನೀಡಲಾಗುತ್ತದೆ. ಟೆಸ್ಟ್ ಲ್ಯಾಬ್ ಸೌಲಭ್ಯವು ಇರುತ್ತದೆ. ಈ ಎಲ್ಲಾ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಿ ಬೇರೆಯವರಿಗೂ ನಮ್ಮ ಕ್ಲಿನಿಕ್ ಬಗ್ಗೆ ತಿಳಿಸಿಕೊಡಿ ಎಂದು ಮುಖ್ಯಮಂತ್ರಿಯವರು ಸಲಹೆ ಮಾಡಿದರು.
ಸ್ಥಳೀಯವಾಗಿ ನಡೆದ ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಆಶಾ ನಟರಾಜು ಅವರು ನಮ್ಮ ಕ್ಲಿನಿಕ್ ಉದ್ಘಾಟಿಸಿದರು. ಸದಸ್ಯರಾದ ಮನೋಜ್ ಪಟೇಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ತಾಲೂಕು ವೈದ್ಯಾಧಿಕಾರಿ ಡಾ. ಶ್ರೀನಿವಾಸ್, ವೈದ್ಯಾಧಿಕಾರಿ ಡಾ. ಮಮತಾ ಸೇರಿದಂತೆ ಇತರರು ಇದ್ದರು
----
ಕೊಳ್ಳೇಗಾಲ : ಡಿ. 16ರಂದು ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ
ಚಾಮರಾಜನಗರ, ಡಿಸೆಂಬರ್ 14 - ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2022-23ನೇ ಸಾಲಿನ ಕೊಳ್ಳೇಗಾಲ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟವನ್ನು ಡಿಸೆಂಬರ್ 16ರಂದು ಬೆಳಿಗ್ಗೆ 9 ಗಂಟೆಗೆ ಕೊಳ್ಳೇಗಾಲದ ಮಹದೇಶ್ವರ ಪ್ರಥಮ ದರ್ಜೆ ಕಾಲೇಜು ಹತ್ತಿರದ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಖೋ-ಖೋ, ಕಬ್ಬಡ್ಡಿ, ವಾಲಿಬಾಲ್, ಕುಸ್ತಿ, ಯೋಗ ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳು ಮಾತ್ರ ಸಂಘಟಕರಲ್ಲಿ ವರದಿ ಮಾಡಿಕೊಳ್ಳಬೇಕು. ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಮಧ್ಯಾಹ್ನದ ಉಪಹಾರ ಹಾಗೂ ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ಟ್ರೋಫಿಗಳನ್ನು ನೀಡಲಾಗುವುದು. ಕ್ರೀಡಾಪಟುಗಳಿಗೆ ಯಾವುದೇ ಪ್ರಯಾಣ ಭತ್ಯೆ ನೀಡಲಾಗುವುದಿಲ್ಲ.
ಗ್ರಾಮೀಣ ಕ್ರೀಡಾಕೂಟದಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು ಜಿಲ್ಲಾ ಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಜಿಲ್ಲಾ ಮಟ್ಟದ ಗ್ರಾಮೀಣ ಕ್ರೀಡಾಕೂಟ ನಡೆಯುವ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ.
ಕ್ರೀಡಾಕೂಟದಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಬ್ಯಾಂಕ್ ಪಾಸ್‍ಬುಕ್ ಪುಸ್ತಕದ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಜೇತರಾದ ಕ್ರೀಡಾಪಟುಗಳು ಬೇರೆ ಗ್ರಾಮ ಪಂಚಾಯಿತಿಯ ಕ್ರೀಡಾಪಟುಗಳ ತಂಡಗಳಿಗೆ ಸೇರಲು ಮತ್ತು ಸೇರಿಸಿಕೊಳ್ಳಲು ಅವಕಾಶವಿರುವುದಿಲ್ಲ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಜೇತರಾಗಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ನೀಡಿರುವ ಫಲಿತಾಂಶ ಪಟ್ಟಿಯಂತೆ ಕ್ರೀಡೆಗಳನ್ನು ನಡೆಸಲಾಗುವುದು. ಹೊಸದಾಗಿ ಭಾಗವಹಿಸುವ ತಂಡಗಳಿಗೆ ಅವಕಾಶವಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ದೂ.ಸಂ 08226-224932 ಅಥವಾ 9916466659, 9877160841, 99645615695, 9880211027 ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಕ್ಷಕರ ಮರು ಹೊಂದಾಣಿಕೆ : ದಾಖಲೆಗಳನ್ನು ಅಪ್ ಲೋಡ್ ಮಾಡಲು ಸೂಚನೆ
ಚಾಮರಾಜನಗರ, ಡಿಸೆಂಬರ್ 14:- ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷÀಕರನ್ನು ಮಂಜೂರಾದ ಹುದ್ದೆಗಳಿಗೆ ಎದುರಾಗಿ ಮ್ಯಾಪಿಂಗ್ ಮಾಡಲಾಗಿದೆ. ಇದರಲ್ಲಿ ಹೆಚ್ಚುವರಿ ಎಂದು ಗುರುತಿಸಿರುವ ಶಿಕ್ಷಕರು ಹಾಗೂ ಶೂನ್ಯ ದಾಖಲಾತಿ ಇರುವ ಶಾಲೆಗಳಲ್ಲಿನ ಶಿಕ್ಷಕರಿಗೆ ಹೆಚ್ಚುವರಿ ತಾತ್ಕಾಲಿಕ ಪಟ್ಟಿಯನ್ನು ವರ್ಗಾವಣೆ ತಂತ್ರಾಂಶದಲ್ಲಿ ಪ್ರಕಟಿಸಲಾಗಿದೆ.
ಸದರಿ ಶಿಕ್ಷಕರನ್ನು ಜಿಲ್ಲೆಯೊಳಗೆ ಅವಶ್ಯ ಶಾಲೆಗಳಿಗೆ ಮರುಹೊಂದಾಣಿಕೆ ಮಾಡುವ ಸಂಬಂಧ ತಾತ್ಕಾಲಿಕ ಹೆಚ್ಚುವರಿ ಶಿಕ್ಷಕರು ಆದ್ಯತೆ, ವಿನಾಯಿತಿ ಕೋರಲು ಅವಶ್ಯವೆನಿಸಿರುವ ದಾಖಲೆಗಳನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದು ಇ.ಇ.ಡಿ.ಎಸ್ ಎಂಪ್ಲಾಯಿ ಲಾಗಿನ್‍ನಲ್ಲಿ ಪ್ರವೇಶಿಸಿ ದಾಖಲೆಗಳನ್ನು ಅಪ್‍ಲೋಡ್ ಮಾಡಲು ಡಿಸೆಂಬರ್ 17 ಕೊನೆಯ ದಿನವಾಗಿದೆ. ನಿಗದಿತ ಅವಧಿಯೊಳಗೆ ಅಗತ್ಯ ದಾಖಲೆಗಳನ್ನು ಶಿಕ್ಷಕರು ಇ.ಇ.ಡಿ.ಎಸ್ ತಂತ್ರಾಂಶದಲ್ಲಿ ಇಂದೀಕರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹನಿ ನೀರಾವರಿ ಉಪಕರಣ ಅಳವಡಿಕೆಗೆ ಸಹಾಯಧನ : ಸದುಪಯೋಗಕ್ಕೆ ಮನವಿ
ಚಾಮರಾಜನಗರ, ಡಿಸೆಂಬರ್ 14 - ತೋಟಗಾರಿಕೆ ಇಲಾಖೆ ವತಿಯಿಂದ 2022-23ನೇ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಸೂಕ್ಷ್ಮ ಹನಿ ನೀರಾವರಿ (ಪಿಎಂಕೆಎಸ್‍ವೈ) ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಉಪಕರಣ ಅಳವಡಿಕೆಗೆ ಪರಿಶಿಷ್ಟ ವರ್ಗ, ಪರಿಶಿಷ್ಟ ಪಂಗಡದ ರೈತರಿಗೆ ಶೇ. 90ರಷ್ಟು ಸಹಾಯಧನವನ್ನು ನಿಗದಿಪಡಿಸಲಾಗಿದೆ. ಈಗಾಗಲೇ ಈ ಯೋಜನೆಯಡಿ ಸಹಾಯಧನ ಪಡೆದು 7 ವರ್ಷ ಪೂರ್ಣಗೊಂಡಿದ್ದಲ್ಲಿ ಎರಡನೇ ಬಾರಿ ಅದೇ ಫಲಾನುಭವಿಗಳು ಹನಿ ನೀರಾವರಿ ಪದ್ದತಿ ಅಳವಡಿಸಿಕೊಂಡಲ್ಲಿ ಸಹಾಯಧನ ನೀಡಲಾಗುತ್ತದೆ.
ಆಸಕ್ತ ರೈತರು ಅಗತ್ಯ ದಾಖಲೆಗಳನ್ನು ತಾಲೂಕಿನ ತೋಟಗಾರಿಕೆ ಇಲಾಖೆಗೆ ಸಲ್ಲಿಸಿ ಕಾರ್ಯದೇಶ ಪಡೆದು ತೋಟಗಾರಿಕೆ ಇಲಾಖೆ ಅನುಮೋದಿತ ಡ್ರಿಪ್ ಕಂಪನಿ, ಸಂಸ್ಥೆಗಳಿಂದ ಐಎಸ್‍ಐ ಗುಣಮಟ್ಟದ ಹನಿ ನೀರಾವರಿ ಉಪಕರಣ ಅಳವಡಿಸಿಕೊಂಡು ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೀರಿನಲ್ಲಿ ಕರಗುವ ರಸಗೊಬ್ಬರಗಳಿಗೆ ಸಹಾಯಧನ
ಚಾಮರಾಜನಗರ, ಡಿಸೆಂಬರ್ 14 - ನೀರಿನಲ್ಲಿ ಕರಗುವ ರಸಗೊಬ್ಬರಗಳು ವಿಶೇಷ ವರ್ಗದ ರಸಗೊಬ್ಬರಗಳಾಗಿದ್ದು, ಗಿಡಗಳ ಬೆಳವಣಿಗೆಯ ನಿರ್ಣಾಯಕ ಹಂತಗಳಲ್ಲಿ ಪೋಷಕಾಂಶಗಳನ್ನು ಒದಗಿಸುವುದರಿಂದ ಉತ್ತಮ ಇಳುವರಿ ಲಭಿಸುತ್ತದೆ.
ರಸಾವರಿ ತಾಂತ್ರಿಕತೆ ಯೋಜನೆಯಡಿ ಸಾಮಾನ್ಯ ವರ್ಗದ ರೈತರಿಗೆ ಪ್ರತಿ ಎಕರೆಗೆ ಶೇ. 40ರಂತೆ 8 ಸಾವಿರ ರೂ. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಶೇ. 50ರಂತೆ 10 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ. ತೋಟಗಾರಿಕೆ ಇಲಾಖೆ ಅನುಮೋದಿತ ಸಂಸ್ಥೆ, ಕಂಪನಿಯಿಂದ ಮಾತ್ರ ಪರಿಕರಗಳನ್ನು ಖರೀದಿಸಬೇಕು. ಗರಿಷ್ಠ 1.00 ಹೆಕ್ಟೇರ್ ಪ್ರದೇಶಕ್ಕೆ ಮೀರದಂತೆ ಪ್ರತಿ ಫಲಾನುಭವಿಗೆ ಸಹಾಯಧನ ನೀಡಲಾಗುವುದು.
ರೈತರು ತಮ್ಮ ವಂತಿಕೆಯನ್ನು ಅನುಮೋದಿತ ಸಂಸ್ಥೆ, ಕಂಪನಿಗೆ ಪಾವತಿಸಿ ಇಲಾಖೆಗೆ ನಿರಾಪೇಕ್ಷಣಾ ಪತ್ರ ನೀಡಿದ್ದಲಿ, ಸಹಾಯಧನವನ್ನು ಕಂಪನಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ತೋಟಗಾರಿಕೆ ಇಲಾಖೆಗೆ ಭಾವಚಿತ್ರ, ಪಹಣಿ, ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್ ಜೆರಾಕ್ಸ್, ಗಣಕೀಕೃತ ಬೆಳ ದೃಢೀಕರಣ, ತಾಕಿನ ಫೋಟೊ ಸೇರಿದಂತೆ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ. 15ರಿಂದ ಅಂಗನವಾಡಿ ಕೇಂದ್ರಗಳಿಗೆ ಆಹಾರ ಪದಾರ್ಥಗಳ ವಿತರಣೆ
ಚಾಮರಾಜನಗರ, ಡಿಸೆಂಬರ್ 14 - ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಕೊಳ್ಳೇಗಾಲ ಹಾಗೂ ಹನೂರು ತಾಲೂಕು ವ್ಯಾಪ್ತಿಯ 472 ಅಂಗನವಾಡಿ ಕೇಂದ್ರಗಳಿಗೆ ಡಿಸೆಂಬರ್ 15ರಿಂದ 28ರವರೆಗೆ ಆಹಾರ ಪದಾರ್ಥಗಳನ್ನು ವಿತರಿಸಲಾಗುತ್ತದೆ.
ಡಿಸೆಂಬರ್ 15ರಂದು ಹನೂರು, ಸತ್ತೇಗಾಲ, 16ರಂದು ಬಂಡಳ್ಳಿ, ಕಸಬಾ-1, 17ರಂದು ಅಜ್ಜೀಪುರ, ಕಸಬಾ-2, 19ರಂದು ರಾಮಾಪುರ, ತೆಳ್ಳನೂರು, 20ರಂದು ಪಿ.ಜಿ.ಪಾಳ್ಯ, ಮಧುವನಹಳ್ಳಿ-1, 21ರಂದು ಲೊಕ್ಕನಹಳ್ಳಿ, ಮಧುವನಹಳ್ಳಿ-2, 22ರಂದು ಮಾರ್ಟಳ್ಳಿ, ಕಾಮಗೆರೆ, 23ರಂದು ಕೂಡ್ಲೂರು, ಚಿಲಕವಾಡಿ, 26ರಂದು ಮಲೆ ಮಹದೇಶ್ವರ ಬೆಟ್ಟ, 27ರಂದು ಕೌದಳ್ಳಿ, 28ರಂದು ದಂಟಳ್ಳಿ ವ್ಯಾಪ್ತಿಗೆ ಆಹಾರ ಪದಾರ್ಥಗಳನ್ನು ವಿತರಿಸಲಾಗುತ್ತದೆ ಎಂದು ಕೊಳ್ಳೇಗಾಲ ತಾಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಾಮರಾಜನಗರ ನಗರಸಭೆ : ಬಯಲು ಶೌಚ ಮುಕ್ತ ವಾರ್ಡ್ ಘೋಷಣೆ-ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
ಚಾಮರಾಜನಗರ, ಡಿಸೆಂಬರ್ 14:- ಚಾಮರಾಜನಗರ ನಗರಸಭೆಯ ಒಟ್ಟು 31 ವಾರ್ಡ್‍ಗಳನ್ನು ಬಯಲು ಶೌಚ ಮುಕ್ತ ವಾರ್ಡ್‍ಗಳೆಂದು ಘೋಷಿಸುವ ಸಂಬಂಧ ಸಾರ್ವಜನಿಕರಿಂದ ಆಕ್ಷೇಪಣೆ ಮತ್ತು ಪ್ರತಿಕ್ರಿಯೆಗಳಿದ್ದಲ್ಲಿ, ಡಿಸೆಂಬರ್ 26ರೊಳಗೆ ಲಿಖಿತವಾಗಿ ನಗರಸಭೆ ಕಚೇರಿಗೆ ಸಲ್ಲಿಸಬಹುದಾಗಿದೆ.
ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಮಂತ್ರಾಲಯವು ಸ್ವಚ್ಛ ಭಾರತ್ ಮಿಷನ್ ಯೋಜನೆಯನ್ನು 2ನೇ ಅಕ್ಟೋಬರ್ 2014 ರಿಂದ ಪ್ರಾರಂಭಿಸಿದ್ದು, ಸದರಿ ಯೋಜನೆಯ ಪ್ರಮುಖ ಉದ್ದೇಶ ಬಯಲು ಶೌಚ ಮುಕ್ತ ನಗರಗಳನ್ನಾಗಿ ಸೃಜಿಸುವುದು ಆಗಿರುತ್ತದೆ. ಸ್ವಚ್ಛ ಭಾರತ ಮಿಷನ್ ಯೋಜನೆಯ ಅಂಗವಾಗಿ ಚಾಮರಾಜನಗರ ನಗರಸಭೆಯ ವ್ಯಾಪ್ತಿಯಲ್ಲಿ ಬಯಲು ಶೌಚ ಮುಕ್ತ ವಾರ್ಡ್‍ಗಳನ್ನಾಗಿ ಘೋಷಿಸಲು ಇದುವರೆವಿಗೆ 2048 ವೈಯಕ್ತಿಕ ಶೌಚಾಲಯಗಳನ್ನು ಸಾರ್ವಜನಿಕರು ನಿರ್ಮಿಸಿಕೊಂಡಿರುತ್ತಾರೆ. ಬಯಲಿನಲ್ಲಿ ಶೌಚ ಮಾಡುವ ಪ್ರದೇಶಗಳನ್ನು ಗುರುತಿಸಿ ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿರುತ್ತದೆ. ಬಯಲು ಶೌಚ ಮಾಡದಂತೆ ಆಟೋ ಮೂಲಕ ಪ್ರಚಾರ ಮಾಡಲಾಗಿದ್ದು, ಸ್ವ-ಸಹಾಯ ಸಂಘದವರುಗಳಿಗೆ ಅರಿವು ಮೂಡಿಸಲಾಗಿರುತ್ತದೆ. ಶಾಲಾ ಕಾಲೇಜುಗಳಿಗೆ ಸ್ವಯಂ ಸೇವಕರುಗಳ ಮೂಲಕ ಶೌಚಾಲಯಗಳ ಸಮರ್ಪಕ ಬಳಕೆ ಮಾಡಲು ತಿಳಿಸಲಾಗಿದೆ.
ಈ ಎಲ್ಲಾ ಮಾಹಿತಿಗಳ ಅನುಸಾರ ಚಾಮರಾಜನಗರ ನಗರಸಭೆಯ ಒಟ್ಟು 31 ವಾರ್ಡ್‍ಗಳನ್ನು ಬಯಲು ಶೌಚ ಮುಕ್ತ ವಾರ್ಡ್‍ಗಳೆಂದು ಘೋಷಿಸಲು ಹಾಗೂ ಇದರ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆ ಮತ್ತು ಪ್ರತಿಕ್ರಿಯೆಗಳಿದ್ದಲ್ಲಿ, ಡಿಸೆಂಬರ್ 26ರ ಒಳಗೆ ಲಿಖಿತವಾಗಿ ನಗರಸಭೆ ಕಚೇರಿಗೆ ಸಲ್ಲಿಸುವಂತೆ ನಗರಸಭೆ ಅಧ್ಯಕ್ಷರಾದ ಸಿ.ಎಂ. ಆಶಾ, ಉಪಾಧ್ಯಕ್ಷರಾದ ಪಿ. ಸುಧಾ, ಪೌರಾಯುಕ್ತರಾದ ಎಸ್.ವಿ. ರಾಮದಾಸ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ ಯೋಜನೆ : ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಚಾಮರಾಜನಗರ, ಡಿಸೆಂಬರ್ 14 :- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2022-23ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿಎಡ್ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ ಯೋಜನೆಯಡಿ ಅರ್ಜಿ ಸಲ್ಲಿಸುವ ಅವಧಿಯನ್ನು ಡಿಸೆಂಬರ್ 31ರÀವರೆಗೆ ವಿಸ್ತರಿಸಲಾಗಿದೆ.
ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಅರ್ಜಿಗಳನ್ನು ಸೇವಾಸಿಂಧು ಪೋರ್ಟಲ್ hಣಣಠಿs://sevಚಿshiಟಿಜhu.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಡಿಸೆಂಬರ್ 31ರೊಳಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾಡಳಿತ ಭವನದ ಮಲ್ಟಿ ಪರ್ಪಸ್ ಹಾಲ್‍ನಲ್ಲಿರುವ ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಮೊ.ಸಂ 7019952093, 9980800076, ಕೊಳ್ಳೇಗಾಲದ ಅಂಜುಮಾನ್-ಇಸ್ಲಾಮಿಯ ಕಾಂಪ್ಲೆಕ್ಸ್‍ನಲ್ಲಿರುವ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಮೊ.ಸಂ 7829587596, 9901625872, ಗುಂಡ್ಲುಪೇಟೆ ತಾಲೂಕು ಕಚೇರಿಯಲ್ಲಿರುವ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಮೊ.ಸಂ 8217593163, 9901625872 ಯಳಂದೂರು ತಾಲೂಕು ಕಚೇರಿಯಲ್ಲಿರುವ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಮೊ.ಸಂ 9845254995, 9901625872 ಸಂಪರ್ಕಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ. 16ರಂದು ಕೊಳ್ಳೇಗಾಲದಲ್ಲಿ ತಾಲೂಕು ಮಟ್ಟದ ಗ್ರಾಮೀಣ ಕೂಟ
ಚಾಮರಾಜನಗರ, ಡಿಸೆಂಬರ್ 14 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಕೊಳ್ಳೇಗಾಲ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟವನ್ನು ಡಿಸೆಂಬರ್ 16ರಂದು ಬೆಳಿಗ್ಗೆ 10.30 ಗಂಟೆಗೆ ಕೊಳ್ಳೇಗಾಲದ ಮಹದೇಶ್ವರ ಕಾಲೇಜು ಬಳಿಯಿರುವ ತಾಲೂಕು ಕ್ರಿಡಾಂಗಣದಲ್ಲಿ ಆಯೋಜಿಸಲಾಗಿದೆ.
ಶಾಸಕರಾದ ಎನ್. ಮಹೇಶ್ ಅಧ್ಯಕ್ಷತೆ ಮತ್ತು ಉದ್ಘಾಟನೆ ನೆರವೇರಿಸುವರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು. ನಗರಸಭೆ ಅಧ್ಯಕ್ಷರಾದ ಸಿ.ಎನ್. ರೇಖಾ, ಉಪಾಧ್ಯಕ್ಷರಾದ ಆರ್. ಸುಶೀಲ, ಸದಸ್ಯರಾದ ಆರ್. ಸುಮಾ ಸುಬ್ಬಣ್ಣ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಮಹೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪಾಟಿಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
No comments:
Post a Comment