Friday, 20 January 2023

20-01-2023 ಚಾಮರಾಜನಗರ ಪೈಲ್ -1



 


ರಾಷ್ಟ್ರೀಯ ಮತದಾರರ ದಿನ ಆಚರಣೆಗೆ ಸಿದ್ದತೆ ಕೈಗೊಳ್ಳಲು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಸೂಚನೆ 

       ಚಾಮರಾಜನಗರ, ಜನವರಿ 20 - ರಾಷ್ಟ್ರೀಯ ಮತದಾರರ ದಿನ ಆಚರಣೆ ಕಾರ್ಯಕ್ರಮವನ್ನು ಜನವರಿ 25ರಂದು ಜಿಲ್ಲಾಕೇಂದ್ರ ಸೇರಿದಂತೆ ಎಲ್ಲ ಮತಗಟ್ಟೆ ಮಟ್ಟಗಳಲ್ಲಿಯೂ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಸೂಚಿಸಿದರು. 

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಮತದಾರರ ದಿನ ಆಚರಣೆ ಸಂಬಂಧ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

     13ನೇ ರಾಷ್ಟ್ರೀಯ ಮತದಾರರ ದಿನ ಆಚರಿಸಲಾಗುತ್ತಿದ್ದು ಜಿಲ್ಲಾ ಕೇಂದ್ರ, ತಾಲ್ಲೂಕು, ಹೋಬಳಿ, ಮತಗಟ್ಟೆ ಕೇಂದ್ರಗಳ ಮಟ್ಟಗಳಲ್ಲಿಯೂ ಆಚರಿಸಲು ಮತದಾರರ ನೊಂದಣಾಧಿಕಾರಿ, ಸಹಾಯಕ ಮತದಾರರ ನೊಂದಣಾಧಿಕಾರಿಗಳು ಕ್ರಮವಹಿಸಬೇಕು. ಅಂದು ಮಧ್ಯಾಹ್ನ 1 ಗಂಟೆಗೆ ಚುನಾವಣಾ ಆಯೋಗವು ನಿಗದಿಪಡಿಸಿರುವ ಮತದಾರರ ಪ್ರತಿಜ್ಞಾ ವಿಧಿಯನ್ನುü ಇಲಾಖೆಯ ಅಧಿಕಾರಿ ಸಿಬ್ಬಂದಿ ಹಾಗೂ ಶಾಲಾ ಕಾಲೇಜುಗಳಲ್ಲಿ ಸ್ವೀಕರಿಸಲು ಅಗತ್ಯ ವ್ಯವಸ್ಥೆ ಮಾಡಲು ಸೂಚಿಸಿದರು. 
      ಶಾಲಾ ಕಾಲೇಜು ಮುಖ್ಯಸ್ಥರು, ಮತದಾರರ ಸಾಕ್ಷರತಾ ಸಂಘಗಳ ಸಂಚಾಲಕರು ಮತ್ತು ಮತಗಟ್ಟೆ ಮಟ್ಟದ ಅಧಿಕಾರಿಗಳು ಪ್ರತಿ ಶಾಲಾ, ಕಾಲೇಜು ಮತ್ತು ಮತಗಟ್ಟೆಗಳಲ್ಲಿ ಹೊಸದಾಗಿ ನೊಂದಾಯಿತ ಯುವ ಮತದಾರರಿಗೆ ಸಮಾರಂಭವನ್ನು “ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ” ಎಂಬ ದ್ಯೇಯ ವಾಕ್ಯಗಳೊಂದಿಗೆ ಹಮ್ಮಿಕೊಳ್ಳಬೇಕು. ನೂತನವಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಿರುವ ಯುವ ಮತದಾರರಿಗೆ ಎಪಿಕ್ ಕಾರ್ಡ್‍ಗಳನ್ನು ವಿತರಿಸಬೇಕು ಎಂದರು. 

ಜಿಲ್ಲೆಯಲ್ಲಿನ ವಿಧಾನಸಭಾ ಕ್ಷೇತ್ರಗಳ ಮತಗಟ್ಟೆ ವ್ಯಾಪ್ತಿಯಲ್ಲಿ ಹೊಸದಾಗಿ ನೊಂದಣಿಯಾಗಿರುವ ವಿಶೇಷ ಚೇತನ ಯುವಮತದಾರರಿಗೆ ಎಪಿಕ್ ಕಾರ್ಡ್‍ಗಳನ್ನು ಆಯಾ ಮತಗಟ್ಟೆಗಳ ಬಿ.ಎಲ್.ಒ ಗಳು ವಿತರಿಸಲು ಮತ್ತು ಮತದಾನ ದಿನ ಆಚರಣೆ ಮಾಡುತ್ತಿರುವ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿಗಳು ತಿಳಿಸಿದರು.
      ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪದವಿ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಯುವ ಮತದಾರರ ದಿನ ಆಯೋಜಿಸಿ ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ, ಚಿತ್ರಕಲೆ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲು ಪೂರ್ವಸಿದ್ಧತೆ ಕೈಗೊಳ್ಳಬೇಕು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಬೇಕು ಎಂದರು.  
 
2022-23ನೇ ಸಾಲಿನಲ್ಲಿ ಅತ್ಯುತ್ತಮವಾಗಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯನಿರ್ವಹಿಸಿದÀ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಬ್ಬರು ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ಗುರುತಿಸಿ ಗೌರವಿಸುವಂತೆ ಜಿಲ್ಲಾಧಿಕಾರಿಯವರು ಸೂಚಿಸಿದರು.  

      ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಧರಣೇಶ್, ಉಪವಿಭಾಗಾಧಿಕಾರಿ ಗೀತಾಹುಡೇದ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್ ಪ್ರಸನ್ನ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ,  ಜಿಲ್ಲಾ ನಗರಾಭಿವೃದ್ದಿ ಯೋಜನಾ ನಿರ್ದೆಶಕರಾದ ಸುಧಾ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಇದ್ದರು. 
------
ಘನತ್ಯಾಜ್ಯ ನಿರ್ವಹಣೆ ಕುರಿತು ಮಹಿಳಾ ಸ್ವ ಸಹಾಯ ಸಂಘಗಳಿಗೆ ತರಬೇತಿ ಕಾರ್ಯಗಾರ 

       ಚಾಮರಾಜನಗರ, ಜನವರಿ 20  ಘನತ್ಯಾಜ್ಯ ನಿರ್ವಹಣೆಗಾಗಿ ಗ್ರಾಮ ಪಂಚಾಯಿತಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಸಂಜೀವಿನಿ ಮಹಿಳಾ ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ಸಾಮಥ್ರ್ಯಾಭಿವೃದ್ದಿ ತರಬೇತಿ ಕಾರ್ಯಾಗಾರ ನಡೆಯಿತು. 

     ನಗರದ ಜಿಲ್ಲಾ ಆರೋಗ್ಯ ಇಲಾಖೆ ಸಭಾಂಗಣದಲ್ಲಿ ಗುರುವಾರ (ಜ.19) ಜಿಲ್ಲಾ ಪಂಚಾಯತ್, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಹಸಿರು ದಳ ಸಂಸ್ಥೆ, ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್.ಆರ್.ಎಲ್.ಎಂ) ವತಿಯಿಂದ ಆಯೋಜಿಸಿದ್ದ ಕಾರ್ಯಗಾರವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಗಿಡಕ್ಕೆ  ನೀರೆಯುವ ಮೂಲಕ ಉದ್ಘಾಟಿಸಿದರು. 

ಇದೇ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಗ್ರಾಮ ಪಂಚಾಯಿತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಘಟಕದ ಕೆಲಸವನ್ನು ನಿರ್ವಹಿಸುವುದರ ಕುರಿತು ಸಲಹೆಗಳನ್ನು ನೀಡಿದರು. 

ಜಿಲ್ಲೆಯ ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಹಸಿ ಮತ್ತು ಒಣ ತ್ಯಾಜ್ಯಗಳನ್ನು ಮನೆ ಮನೆಗಳಿಂದ ಸಂಗ್ರಹಿಸಿ, ವಿಂಗಡಿಸಿ ಹೇಗೆ ಸೂಕ್ತವಾಗಿ ವಿಲೇವಾರಿ ಮಾಡುವುದು ಎಂಬ ಬಗ್ಗೆ ಗ್ರಾಮ ಪಂಚಾಯಿತಿಗಳಲ್ಲಿನ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಒಕ್ಕೂಟಗಳ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ತಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯಗಳನ್ನು ಸಂಗ್ರಹಿಸುವ ಕುರಿತು ಮೈಸೂರಿನ ಹಸಿರುದಳ ಸಂಸ್ಥೆ, ಸ್ವಚ್ಛ ಭಾರತ್ ಮಿಷನ್ ವತಿಯಿಂದ ತರಬೇತಿ ನೀಡಲಾಯಿತು.

ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯಗಳನ್ನು ಸಂಗ್ರಹಿಸಲು, ವಿಂಗಡಿಸಲು ಈಗಾಗಲೇ ಗ್ರಾಮ ಪಂಚಾಯಿತಿಗಳೊಡನೆ ಒಕ್ಕೂಟದ ಸದಸ್ಯರು ಒಡಂಬಡಿಕೆ ಮಾಡಿಕೊಂಡಿದ್ದು, ಘನ ತ್ಯಾಜ್ಯ ನಿರ್ವಹಣೆಯಲ್ಲಿ ಉಂಟಾಗಬಹುದಾದ ಸಮಸ್ಯೆಗಳನ್ನು ತಮ್ಮ ಹಂತದಲ್ಲಿ ಹೇಗೆ ಬಗೆಹರಿಸಿಕೊಂಡು ಮುನ್ನಡೆಯಬೇಕು ಎಂಬುದರ ಬಗ್ಗೆ ಗ್ರಾಮದ ಅಭಿವೃದ್ದಿಗೆ ಸಹಕಾರ ನೀಡುವ ಬಗ್ಗೆ ಹಾಗೂ ತಮ್ಮ ವೈಯಕ್ತಿಕ ಆರ್ಥಿಕ ಅಭಿವೃದ್ದಿಗೆ ಸಕ್ರಿಯವಾಗಿ ಭಾಗವಹಿಸುವ ಕುರಿತು ಪ್ರಮುಖ ಅಂಶಗಳನ್ನು ವಿವರಿಸುವುದರ ಮೂಲಕ ಹಸಿರು ದಳದ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳು ಸಂರ್ಪೂಣವಾಗಿ ಅರಿವು ಮೂಡಿಸಿದರು.

ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರು ಹಾಗೂ ಸ್ವಚ್ಛ ಭಾರತ್ ಮಿಷನ್ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ಕೆ.ಬಿ. ಪ್ರಭುಸ್ವಾಮಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. 
 
ಜ. 22ರಂದು ಸಂತೇಮರಹಳ್ಳಿ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ 

       ಚಾಮರಾಜನಗರ, ಜೂನ್ 09:- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಸಂತೇಮರಹಳ್ಳಿ ಉಪವಿಭಾಗ ವ್ಯಾಪ್ತಿಯಲ್ಲಿ ನಾಲ್ಕನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ಜನವರಿ 22ರಂದು ಹಮ್ಮಿಕೊಂಡಿರುವುದರಿಂದ ಅಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

      ಹೊನ್ನೂರು, ಕುದೇರು, ಉಮ್ಮತ್ತೂರು, ಸಂತೇಮರಹಳ್ಳಿ, ಕೆಂಪನಪುರ, ನವಿಲೂರು, ದುಗ್ಗಟ್ಟಿ, ಆಲ್ದೂರು, ಅಂಬಳೆ, ಮಂಗಲ ವಾಟರ್ ಸಪ್ಲೈ, ಚುಂಗಡಿಪುರ, ಅವಿತ್ ಗ್ರೀನ್ ಸೋಲಾರ್, ಮೂಡಲ ಅಗ್ರಹಾರ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. 

      ಸಾರ್ವಜನಿಕರು ವಿದ್ಯುತ್ ಸಂಬಂಧಿತ ದೂರು ಸಹಾಯಕ್ಕಾಗಿ 1912ಗೆ ಕರೆ ಮಾಡುವಂತೆ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ. 21ರಂದು ಡೊಳ್ಳಿಪುರದಲ್ಲಿ ವಿದ್ಯುತ್ ಅದಾಲತ್ 

      ಚಾಮರಾಜನಗರ, ಜನವರಿ 20- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಹರದನಹಳ್ಳಿ ಉಪವಿಭಾಗದ ವತಿಯಿಂದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರವರ ಅಧ್ಯಕ್ಷತೆಯಲ್ಲಿ ತಾಲೂಕಿನ ಡೊಳ್ಳಿಪುರ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಸಭೆಯನ್ನು ಜನವರಿ 21ರಂದು ಬೆಳಿಗ್ಗೆ 11 ರಿಂದ 12 ಗಂಟೆಯವರೆಗೆ ಏರ್ಪಡಿಸಲಾಗಿದೆ.

      ಸಾರ್ವಜನಿಕರ ವಿದ್ಯುತ್ ಸಂಬಂಧಿತ ಕುಂದು ಕೊರತೆಗಳಿದ್ದಲ್ಲಿ ಸಭೆಗೆ ಹಾಜರಾಗಿ ತಿಳಿಸುವಂತೆ ನಿಗಮದ À ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಉತ್ತೇಜಿಸಿ  : ಜಿ.ಪಂ. ಸಿ.ಇ.ಒ ಕೆ.ಎಂ. ಗಾಯಿತ್ರಿ

ಚಾಮರಾಜನಗರ, ಜನವರಿ 20  ಜಿಲ್ಲಾ ಪಂಚಾಯತ್ ಮತ್ತು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿಯ ಗುಣಮಟ್ಟ ಹೆಚ್ಚಿಸುವ ಶೈಕ್ಷಣಿಕ ಕಾರ್ಯಾಗಾರ ಇಂದು ನಗರದಲ್ಲಿ ನಡೆಯಿತು.

      ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಗಾರವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಉದ್ಘಾಟಿಸಿದರು. 

       ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಶಿಕ್ಷಕರ ಪಾತ್ರ ಬಹುಮುಖ್ಯ. ವಿದ್ಯಾರ್ಥಿಗಳ ಗ್ರಹಿಕೆ, ಕಲಿಕೆ ಗುರುತಿಸಬೇಕು. ಯಾವ ವಿಷಯದಲ್ಲಿ ವಿದ್ಯಾರ್ಥಿಗಳು ಹಿಂದೆ ಇದ್ದಾರೆ? ಯಾವ ವಿಷಯ ಅವರಿಗೆ ಕಷ್ಟವಾಗುತಿದೆ ಎಂದು ಶಿಕ್ಷಕರು ಅರಿಯಬೇಕು. ಅಂತಹ ವಿಷಯಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದರು.

      ಜಿಲ್ಲೆಯಲ್ಲಿ ಈ ವರ್ಷ ಉತ್ತಮವಾದ ಫಲಿತಾಂಶ ಬರಬೇಕು. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ನಿಟ್ಟಿನಲ್ಲಿ ಶಿಕ್ಷಕರ ಉತ್ತೇಜನ ಇರಬೇಕು. ಪಂಚಾಯಿತಿ ಮಟ್ಟದ ಗ್ರಂಥಾಲಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿ.ಪಂ. ಸಿಇಒ ಕೆ.ಎಂ.ಗಾಯಿತ್ರಿ ಅವರು ತಿಳಿಸಿದರು.

     ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್ ಅವರು ಮಾತನಾಡಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಅಧ್ಯಯನ ಸಂಬಂಧ ಗುಂಪು ಚರ್ಚೆಗಳಲ್ಲಿ ಭಾಗಿಯಾಗಬೇಕು. ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಕರು ಶ್ರಮಿಸಬೇಕು. ಈ ಬಾರಿ ಉತ್ತಮ ಫಲಿತಾಂಶ ನಮ್ಮದಾಗಬೇಕು ಎಂದರು. 

 ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ್, ವಿಷಯ ಪರೀವೀಕ್ಷಕರಾದ ಚಾಣಾಕ್ಷರಾವ್, ಶಿಕ್ಷಕರ ಸಂಘಟನೆಯ ಪ್ರತಿನಿಧಿಗಳಾದ ಎಂ. ವೀರಭದ್ರಸ್ವಾಮಿ, ಎಂ. ಕಿರಣ್‍ರಾಜ್, ವೆಂಕಟೇಶ್, ರಾಜಮ್ಮ, ಮಲ್ಲೇಶ್, ಶಿವಣ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

-----

ಜ. 21ರಂದು ಕೊತ್ತಲವಾಡಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಗ್ರಾಮವಾಸ್ತವ್ಯ : ಇತರೆ ತಾಲೂಕುಗಳ ಗ್ರಾಮಗಳಲ್ಲಿ ತಹಶೀಲ್ದಾರ್ ವಾಸ್ತವ್ಯ

       ಚಾಮರಾಜನಗರ, ಜನವರಿ 20 - ಸಾರ್ವಜನಿಕರ ಅಹವಾಲು ಆಲಿಸಿ ಸರ್ಕಾರದ ವಿವಿಧ ಸವಲತ್ತುಗಳು ಮತ್ತು ಯೋಜನೆಗಳ ಅನುμÁ್ಠನ ಕುರಿತು ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರಮ ಸಂಬಂಧ ಜನವರಿ 21ರಂದು ಚಾಮರಾಜನಗರ ತಾಲೂಕಿನ ಹರವೆ ಹೋಬಳಿಯ ಕೊತ್ತಲವಾಡಿ ಗ್ರಾಮದ ಗಂಗಾಧರೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಜಿಲ್ಲಾಧಿಕಾರಿಯವರು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.
 
ಬೆಳಿಗ್ಗೆ 10 ಗಂಟೆಯಿಂದ ಜಿಲ್ಲಾಧಿಕಾರಿಯವರು ಸಾರ್ವಜನಿಕರಿಂದ ಅಹವಾಲುಗಳ ಸ್ವೀಕಾರ ಮಾಡಲಿದ್ದಾರೆ. ಜಿಲ್ಲೆಯ ಆಯಾ ತಾಲೂಕಿನ ತಹಶೀಲ್ದಾರರು ಆಯಾ ತಾಲೂಕಿನ ಗ್ರಾಮ ಒಂದರಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಯಳಂದೂರು ತಾಲೂಕಿನ ಅಗರ ಹೋಬಳಿಯ ಕಿನಕಹಳ್ಳಿ ಗ್ರಾಮ, ಹನೂರು ತಾಲೂಕಿನ ಹನೂರು ಹೋಬಳಿಯ ಶಿರಗೋಡು ಗ್ರಾಮ (ಮಹಾಲಿಂಗನಕಟ್ಟೆ), ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಹೋಬಳಿಯ ಗುರುವಿನಪುರ ಹಾಗೂ ಕೊಳ್ಳೇಗಾಲ ತಾಲೂಕಿನ ಕಸಬಾ ಹೋಬಳಿಯ ಮುಳ್ಳೂರು ಗ್ರಾಮದಲ್ಲಿ ತಹಶೀಲ್ದಾರರು ವಾಸ್ತವ್ಯ ಮಾಡಲಿದ್ದಾರೆ. ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಿ ಪರಿಹಾರ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮಾಜವಾದಿ ಚಿಂತಕರಾದ ಪ. ಮಲ್ಲೇಶ ಅವರ ನಿಧನಕ್ಕೆ ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸ ಪ್ರಸಾದ್ ಸಂತಾಪ

      ಚಾಮರಾಜನಗರ, ಜನವರಿ 20 :- ಸಮಾಜವಾದಿ ಚಿಂತಕರಾದ ಪ. ಮಲ್ಲೇಶ್ ಅವರ ನಿಧನಕ್ಕೆ ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸ ಪ್ರಸಾದ್ ಅವರು ಸಂತಾಪ ಸೂಚಿಸಿದ್ದಾರೆ. 

      ಪ್ರಗತಿಪರ ಹೋರಾಟದ ಕಾವು ದಿನೇ ದಿನೇ ಕಡಿಮೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಪ್ರಖರ ಸಮಾಜವಾದಿ ಚಿಂತಕರಾದ ಪ.ಮಲ್ಲೇಶ ಅವರ ನಿಧನದಿಂದ ಸಮಾಜವಾದಿ ಚಿಂತಕರ ಕೊನೆಯ ಕೊಂಡಿಗಳಲ್ಲೊಂದು ಕಳಚಿಕೊಂಡತಾಗಿದೆ. ಪ.ಮಲ್ಲೇಶ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಆನರ್ಸ್ ಹಾಗೂ ಕನ್ನಡದಲ್ಲಿ ಎಂ.ಎ. ಪದವಿ ಪಡೆದುಕೊಂಡಿದ್ದರು.

    ವಿದ್ಯಾರ್ಥಿ ದಿಸೆಯಿಂದಲೂ ಪ್ರಗತಿಪರ ಚಿಂತನೆ ಮತ್ತು ಹೋರಾಟದ ಮಾರ್ಗದತ್ತ ಪ. ಮಲ್ಲೇಶ ಆಕರ್ಷಿತರಾಗಿದ್ದರು. ಎಲ್ಲ ರಂಗಗಳಲ್ಲಿ, ಎಲ್ಲಾ ಹಂತಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನ ದೊರೆಯಬೇಕೆಂದು ಅವರು ಯಾವಾಗಲೂ ಆಗ್ರಹಿಸುತ್ತಿದ್ದರು. ಶಿಕ್ಷಣ, ಆಡಳಿತ, ನ್ಯಾಯಾಂಗದಲ್ಲಿ ಕನ್ನಡ ಮಾಧ್ಯಮ ಜಾರಿಗೆ ಬರಬೇಕು ಎಂದು ಯಾವಾಗಲೂ ಅವರು ಪ್ರತಿಪಾದಿಸುತ್ತಿದ್ದರು. ಕನ್ನಡ ಭಾμÉಯ ಬಗ್ಗೆ ಅವರು ಅಪಾರ ಅಭಿಮಾನ ಹೊಂದಿದ್ದರು. ಕನ್ನಡದ ಏಳಿಗೆಯ ಬಗ್ಗೆ ಅವರು ಹೊಂದಿದ್ದ ಕಾಳಜಿ ಮತ್ತು ಬದ್ಧತೆಯಿಂದಾಗಿ ಮೈಸೂರು ನಗರದಲ್ಲಿ ನೃಪತುಂಗ ಕನ್ನಡ ಮಾಧ್ಯಮ ಪ್ರೌಢಶಾಲೆ ಮತ್ತು ವಿಜ್ಞಾನವನ್ನು ಕನ್ನಡದಲ್ಲಿ ಬೋಧಿಸುವ ಪಿ.ಯು. ಕಾಲೇಜು ಪ್ರಾರಂಭವಾದವು.

      ಪ. ಮಲ್ಲೇಶ ಅವರು ಲೋಹಿಯಾ ಹಾಗೂ ಗಾಂಧೀಜಿ ಅವರ ತತ್ವ ಸಿದ್ಧಾಂತಗಳಲ್ಲಿ ಅಖಂಡವಾದ ಬದ್ಧತೆಯನ್ನು ಹೊಂದಿದ್ದರು. ಅವರು ಯಾವುದೇ ಪ್ರಗತಿಪರ ಚಳವಳಿಯಲ್ಲಿ ಭಾಗವಹಿಸಿದರೂ ಅಲ್ಲಿ ಅವರ ನೇರ ನಡೆನುಡಿ ನಿರ್ದಾಕ್ಷಿಣ್ಯ ವರ್ತನೆ ವ್ಯಕ್ತವಾಗುತ್ತಿತ್ತು. ತಾವು ನಂಬಿದ್ದ ಸೈದ್ಧಾಂತಿಕತೆಯನ್ನು ಬದಿಗಿರಿಸಿ ಎಂದೂ ಅವರು ಯಾವುದೇ ವ್ಯವಸ್ಥೆಯೊಂದಿಗೆ ರಾಜಿಯಾಗುತ್ತಿರಲಿಲ್ಲ.

      ಅವರು ಯಾವಾಗಲೂ ರೈತ, ದಲಿತ,ಮಹಿಳಾಪರ, ಕನ್ನಡ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಂತುಕೊಂಡು ಹೋರಾಟವನ್ನು ನಿಲ್ಲಿಸದೆ ಮುಂದುವರಿಯುತ್ತಿದ್ದರು. ಪ್ರಗತಿಪರ ಹೋರಾಟ ಸಣ್ಣ ಪ್ರಮಾಣದ್ದಿರಲಿ, ದೊಡ್ಡ ಪ್ರಮಾಣದಲ್ಲಿರಲಿ ಅವರ ಚಳವಳಿಯ ಕಿಚ್ಚು ಮಾತ್ರ ಏಕ ಪ್ರಕಾರವಾಗಿ ಪ್ರಖರವಾಗಿರುತ್ತಿತ್ತು.

     ಸದಾ ಸಮಾಜಮುಖಿ, ಪ್ರಗತಿಪರ ಸಂಘಟೆಗಳ ಜೊತೆಗೆ ತಮ್ಮನ್ನು ಗುರುತಿಸಿಕೊಂಡು, ಚಳವಳಿಯಲ್ಲಿ ನಿರತರಾಗಿರುತ್ತಿದ್ದರು. ಪ. ಮಲ್ಲೇಶ ಅವರದ್ದು ಸದಾ ಹೋರಾಟದ ಬದುಕಾಗಿತ್ತು ಮತ್ತು ಸಾರ್ಥಕವಾದ ಬದುಕಾಗಿತ್ತು. ಬದ್ಧತೆ ಅವರ ಹೋರಾಟದ ಮೂಲಮಂತ್ರವಾಗಿತ್ತು.

     ಅವರು ಮೈಸೂರು ನಗರದಲ್ಲಿ ಸಮಾಜವಾದಿ ಚಿಂತಕರಲ್ಲಿ ಪ್ರಮುಖರಾಗಿದ್ದರು. ಜಯಪ್ರಕಾಶ ನಾರಾಯಣ ಅವರ ಸಮಗ್ರ ಕ್ರಾಂತಿಯ ಚಳವಳಿಯನ್ನು ಕರ್ನಾಟಕದಲ್ಲಿ ಸುಭದ್ರವಾಗಿ ಕಟ್ಟಿದವರಲ್ಲಿ ಅವರೂ ಒಬ್ಬರು. ಮೈಸೂರಿನಿಂದ ಕೆಲವು ಹೋರಾಟಗಾರರನ್ನು ನಿಯೋಗದ ಮೂಲಕ ದೆಹಲಿಗೆ ಕರೆದುಕೊಂಡು ಹೋಗಿ ಜಯಪ್ರಕಾಶ ನಾರಾಯಣ ಅವರನ್ನು ಅಲ್ಲಿಂದ ಮೈಸೂರಿಗೆ ಕರೆತಂದು ಸಾರ್ವಜನಿಕ ಸಮಾರಂಭದಲ್ಲಿ ಜಯಪ್ರಕಾಶ್ ನಾರಾಯಣ ಅವರು ಭಾಗವಹಿಸುವಂತೆ ಮಾಡಿದ್ದರಲ್ಲಿ ಪ. ಮಲ್ಲೇಶ ಅವರ ಪಾತ್ರ ಪ್ರಧಾನವಾಗಿತ್ತು.

     ಪ್ರಖರ ಸಮಾಜವಾದಿ ಹೋರಾಟಗಾರ ಹಾಗೂ ಹಠವಾದಿ ಪ. ಮಲ್ಲೇಶ ಅವರ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಪ್ರಗತಿಪರ ಚಿಂತನೆಗಳನ್ನು ಮುಂದುವರಿಸಿಕೊಂಡು ಹೋಗುವುದೇ ಅವರಿಗೆ ನಾವು ಸಲ್ಲಿಸುವ ನಿಜವಾದ ಶ್ರದ್ಧಾಂಜಲಿಯಾಗಿದೆ ಎಂದು ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 



ಮೀನುಗಾರರ ಮಕ್ಕಳಿಗೆ ವಿದ್ಯಾರ್ಥಿವೇತನ : ಅರ್ಜಿ ಆಹ್ವಾನ

       ಚಾಮರಾಜನಗರ, ಜನವರಿ 20:- ಮೀನುಗಾರಿಕೆ ಇಲಾಖೆಯು 2022-23ನೇ ಸಾಲಿನಲ್ಲಿ ಮೀನುಗಾರರ ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸ ಮತ್ತು ಉನ್ನತ ಶಿಕ್ಷಣ ಪ್ರೋತ್ಸಾಹಿಸಲು ಹೊಸ ಶಿಷ್ಯ ವೇತನವನ್ನು ಮುಖ್ಯ ಮಂತ್ರಿಗಳು ಘೋಷಿಸಿದ್ದು ಯೋಜನೆಯ ಸೌಲಭ್ಯ ಪಡೆಯಲು ಇಲಾಖೆ ಮೀನುಗಾರರ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ. 

     8,9,10, ಪಿಯುಸಿ, ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಜಿಲ್ಲೆಯ ಮೀನುಗಾರರ ಸಹಕಾರಿ ಸಂಘದ ಸದಸ್ಯರು ಹಾಗೂ ಮೀನು ಕೃಷಿಕರ ಮಕ್ಕಳು ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರು ಅಥವಾ ಸಂಬಂಧಪಟ್ಟ ಮೀನುಗಾರರ ಸಹಕಾರಿ ಸಂಘಗಳಿಂದ ಮಾಹಿತಿ ಪಡೆದು ಶೀಘ್ರವಾಗಿ ಫ್ರೂಟ್ಸ್ ಐಡಿ ಸೃಜನೆ ಮಾಡಿಕೊಳ್ಳಬೇಕು. 

      8 ರಿಂದ 10ನೇ ತರಗತಿವರೆಗಿನ  ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಾವತಿ ಮಾಡಲಾಗುವುದು. ಅರ್ಹ ವಿದ್ಯಾರ್ಥಿಗಳು ಸಂಬಂಧಿಸಿದ ಶಾಲಾ ಮುಖ್ಯೋಪಾಧ್ಯಾಯರ ಮೂಲಕ ಹಾಗೂ ಪಿಯುಸಿ ಮತ್ತು ನಂತರದ ಕೋರ್ಸ್‍ಗಳಿಗೆ ವಿದ್ಯಾರ್ಥಿವೇತನ ಪಡೆಯಲು ಸ್ಟೇಟ್ ಸ್ಕಾಲರ್ ಶಿಪ್ ಪೋರ್ಟಲ್‍ನಲ್ಲಿ ನೋಂದಾಯಿಸಿ ಅರ್ಜಿ ಸಲ್ಲಿಸಬಹುದು. 

      ಹೆಚ್ಚಿನ  ಮಾಹಿತಿಗಾಗಿ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಸಂಪರ್ಕಿಸುವಂತೆ ಮೀನುಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ. 24ರಂದು ಚಾಮರಾಜನಗರ ನಗರಸಭೆಯ ಸಾಮಾನ್ಯ ಸಭೆ

      ಚಾಮರಾಜನಗರ, ಜನವರಿ 20 - ಚಾಮರಾಜನಗರ ನಗರಸಭೆಯ ಸಾಮಾನ್ಯ ಸಭೆಯು ಅಧ್ಯಕ್ಷರಾದ ಸಿ.ಎಂ. ಆಶಾ ಅವರ ಅಧ್ಯಕ್ಷತೆಯಲ್ಲಿ ಜನವರಿ 24ರಂದು ಬೆಳಿಗ್ಗೆ 11 ಗಂಟೆಗೆ  ಚಾಮರಾಜನಗರ ನಗರಸಭೆ ಕಚೇರಿಯ ಕೌನ್ಸಿಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.



No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು