Friday, 2 December 2022

02-12-2022 ವಿಕಲಚೇತನರು, ಹಿರಿಯ ನಾಗರಿಕರಿಗೆ ಸಾಧನ ಸಲಕರಣಾ ವಿತರಣೆ :



 ವಿಕಲಚೇತನರು, ಹಿರಿಯ ನಾಗರಿಕರಿಗೆ ಸಾಧನ ಸಲಕರಣಾ ವಿತರಣೆ : ಕಾರ್ಯಕ್ರಮ ಆಯೋಜನೆಗೆ ನೀಲನಕ್ಷೆ ತಯಾರಿಸಲು ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಸೂಚನೆ 


      ಚಾಮರಾಜನಗರ, ಡಿಸೆಂಬರ್ 02 :- ವಿಕಲಚೇತನರಿಗೆ ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಜುಲೈನಲ್ಲಿ ನಡೆದ ತಪಾಸಣಾ ಶಿಬಿರಗಳಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಉಚಿತವಾಗಿ ಅಗತ್ಯವಿರುವ ಸಾಧನ, ಸಲಕರಣೆಗಳನ್ನು ವಿತರಿಸುವ ಸಲುವಾಗಿ ಕಾರ್ಯಕ್ರಮ ಆಯೋಜನೆಗೆ ನೀಲನಕ್ಷೆ ತಯಾರಿಸುವಂತೆ ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಅವರು ಸೂಚಿಸಿದರು.


     ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲೆಯಲ್ಲಿ ವಿಕಲಚೇತನರಿಗೆ ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಅಗತ್ಯವಿರುವ ಸಾಧನ, ಸಲಕರಣೆಗಳನ್ನು ವಿತರಿಸುವ ಸಂಬಂಧ ಅಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 


     ವಿಕಲಚೇತನರಿಗೆ ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಅಗತ್ಯವಿರುವ ಸಾಧನ, ಸಲಕರಣೆ ವಿತರಿಸುವುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ, ಮಾನವೀಯ ಹಾಗೂ ಮೌಲ್ಯಯುತ ಕಾರ್ಯಕ್ರಮವಾಗಿದೆ. 36 ಬಗೆಯ ಆಧುನಿಕ ಸಾಧನ, ಸಲಕರಣೆಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಗುತ್ತಿದೆ. ಕರ್ನಾಟಕ ರಾಜ್ಯದ ಪೈಕಿ ಚಾಮರಾಜನಗರ ಲೋಕಸಭಾ ಕ್ಷೇತ್ರ ಆಯ್ಕೆಯಾಗಿರುವ ಏಕೈಕ ಕ್ಷೇತ್ರವಾಗಿದೆ. ಜಿಲ್ಲಾಮಟ್ಟದಲ್ಲಿ ಕಾರ್ಯಕ್ರಮವನ್ನು ಡಿಸೆಂಬರ್ 21ರಿಂದ 26ರೊಳಗೆ ಹಮ್ಮಿಕೊಳ್ಳಲು ದಿನಾಂಕ ನಿಗದಿ ಮಾಡಿಕೊಳ್ಳುವಂತೆ ತಿಳಿಸಿದರು. 


      ಕಾರ್ಯಕ್ರಮದ ಮೊದಲ ಭಾಗವಾಗಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ತಪಾಸಣಾ ಶಿಬಿರಗಳನ್ನು ಏರ್ಪಡಿಸಿ ವಿಕಲಚೇತನರ ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆದಿತ್ತು. ಜುಲೈ 19ರಂದು ಹನೂರು. 20ರಂದು ಕೊಳ್ಳೇಗಾಲ, 21ರಂದು ಗುಂಡ್ಲುಪೇಟೆ ಹಾಗೂ 22ರಂದು ಚಾಮರಾಜನಗರದಲ್ಲಿ ನಡೆದ ತಪಾಸಣಾ ಶಿಬಿರಗಳಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಸಾಧನ, ಸಲಕರಣೆ ವಿತರಿಸುವ ಕಾರ್ಯಕ್ರಮವನ್ನು ಯಾವುದೇ ಲೋಪಗಳಿಗೆ ಅವಕಾಶವಾಗದಂತೆ ಅಚ್ಚುಕಟ್ಟಾಗಿ ಆಯೋಜಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.   


     ವಿಕಲಚೇತನರು ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಸಂಕಷ್ಟವನ್ನು ಮನಗಂಡಿರುವ ಭಾರತ ಸರ್ಕಾರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ನೇತೃತ್ವದಲ್ಲಿ ವಿಶಿಷ್ಟ ಹಾಗೂ ವಿನೂತನ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಕೃತಕ ಅಂಗಾಂಗ ತಯಾರಿಕಾ (ಅಲಿಂಕೋ) ಕಾರ್ಪೋರೇಷನ್ ನೇತೃತ್ವದಲ್ಲಿ ಆಯೋಜಿಸಲಾಗುವ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಮತ್ತು ಆರೋಗ್ಯ ಇಲಾಖೆ ಅಗತ್ಯ ಸಹಕಾರ ನೀಡಲಿವೆ ಎಂದು ತಿಳಿಸಿದರು. 


      ಆಯಾ ತಾಲೂಕು ತಹಶೀಲ್ದಾರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃಧ್ಧಿ ಅಧಿಕಾರಿಗಳು ವೈಯಕ್ತಿಕ ಅಸಕ್ತಿ ವಹಿಸಿ ತಪಾಸಣಾ ಶಿಬಿರದಲ್ಲಿ ಆಯ್ಕೆಯಾಗಿರುವ ಆಯಾ ಭಾಗದ ಪ್ರತಿಯೊಬ್ಬ ವಿಕಲಚೇತನರನ್ನು ತಾಲೂಕುವಾರು, ಗ್ರಾಮ ಪಂಚಾಯಿತಿವಾರು ಗುರುತಿಸಿ ಯಾವುದೇ ತೊಂದರೆಯಾಗದಂತೆ ಪ್ರಯಾಣ, ಆತಿಥ್ಯ ಸೇರಿದಂತೆ ಎಲ್ಲಾ ಬಗೆಯ ವ್ಯವಸ್ಥೆ ಕಲ್ಪಿಸಿ ಕಾರ್ಯಕ್ರಮಕ್ಕೆ ಕರೆತರುವ ವ್ಯವಸ್ಥೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.  


      ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ನಡೆದ ತಪಾಸಣಾ ಶಿಬಿರಗಳಲ್ಲಿ ಒಟ್ಟು 1696 ವಿಕಲಚೇತನ ಫಲಾನುಭವಿಗಳು ಆಯ್ಕೆಯಾಗಿದ್ದು, ಫಲಾನುಭವಿಗಳು ಕಾರ್ಯಕ್ರಮದಲ್ಲಿ ಸುಸೂತ್ರವಾಗಿ ಪಾಲ್ಗೊಳ್ಳುವಂತೆ ಮಾಡಲು ಅವಶ್ಯವಾಗಿರುವ ಅಂದಾಜುಪಟ್ಟಿ ತಯಾರಿಸಿಕೊಳ್ಳುವಂತೆ ಲೋಕಸಭಾಸದಸ್ಯರಾದ ಶ್ರೀನಿವಾಸಪ್ರಸಾದ್ ಅವರು ತಿಳಿಸಿದರು.


      ಇದೇ ವೇಳೆ ಮಾತನಾಡಿದ ಶಾಸಕರಾದ ಆರ್. ನರೇಂದ್ರ ಅವರು ವಿಕಲಚೇತನರಿಗೆ ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಅಗತ್ಯವಿರುವ ಸಾಧನ, ಸಲಕರಣೆಗಳನ್ನು ವಿತರಿಸಲು ಜಿಲ್ಲೆಗೆ ಬರುವ 10 ಟ್ರಕ್ ಲೋಡ್ ಸಾಧನ, ಸಲಕರಣೆಗಳನ್ನು ಕ್ರಮಬದ್ಧವಾಗಿ ದಾಸ್ತಾನು ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು. 


      ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಮಾತನಾಡಿ ಜಿಲ್ಲೆಯಲ್ಲಿ ವಿಕಲಚೇತನರು, ಹಿರಿಯ ನಾಗರಿಕರಿಗೆ ಅಗತ್ಯವಿರುವ ಸಾಧನ, ಸಲಕರಣೆಗಳನ್ನು ವಿತರಿಸುವ ಸಂಬಂಧ ಮುಂದಿನ ವಾರದಲ್ಲಿ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳ ಸಭೆ ನಡೆಸಿ ಜವಾಬ್ದಾರಿಗಳನ್ನು ವಹಿಸಲು ಕ್ರಮ ವಹಿಸಲಾಗುವುದು ಎಂದರು.


      ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಿಜಗುಣರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರರಾಜು, ಡಿವೈಎಸ್‍ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಗೀತಾಲಕ್ಷ್ಮಿ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ದೀಪಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಸುಧಾ, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ  ಹಾಜರಿದ್ದರು.   


ಡಿ. 3, 4ರಂದು ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ (ಪರಿಷ್ಕøತ) 


     ಚಾಮರಾಜನಗರ, ಡಿಸೆಂಬರ್ 02 - ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಡಿಸೆಂಬರ್ 3 ಮತ್ತು 4ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ವಿವರ ಇಂತಿದೆ. 


     ಡಿಸೆಂಬರ್ 3ರಂದು ಬೆಳಿಗ್ಗೆ 9.30 ಗಂಟೆಗೆ ಕೊಳ್ಳೇಗಾಲಕ್ಕೆ ಆಗಮಿಸಿ ಕೊಳ್ಳೇಗಾಲದ ಶ್ರೀ ಮರುಳೇಶ್ವರ ದೇವಸ್ಥಾನದ ಜೀರ್ಣೋದ್ದಾರ, ಚಿಕ್ಕರಂಗನಾಥ ಕೆರೆ, ಕೊಂಗಳ ಕೆರೆ ಮತ್ತು ಮುಡಿಗುಂಡ ಕೆರೆ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಬೆಳಿಗ್ಗೆ 11 ಗಂಟೆಗೆ ಚಾಮರಾಜನಗರಕ್ಕೆ ಆಗಮಿಸಿ ಜಿಲ್ಲಾಡಳಿತ ಭವನದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿರುವ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬೆಳಿಗ್ಗೆ 11.30 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಸುವರು. ಮಧ್ಯಾಹ್ನ 12.30 ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸುವರು. ಮಧ್ಯಾಹ್ನ 1 ಗಂಟೆಗೆ ಚಾಮರಾಜನಗರ ಪಟ್ಟಣದ ವಿವಿಧ ಕೊಳಗೇರಿ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಕಾಮಗಾರಿಯ ಗುದ್ದಲಿ ಪೂಜೆ ಕಾÀರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 3.30 ಗಂಟೆಗೆ ಕೊಳ್ಳೇಗಾಲಕ್ಕೆ ಆಗಮಿಸಿ ಕೊಳ್ಳೇಗಾಲದಲ್ಲಿ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಯಲ್ಲಿ ಮುಖಂಡರೊಂದಿಗೆ ಸಭೆ ನಡೆಸುವರು. ಸಂಜೆ 5 ಗಂಟೆಗೆ ಹನೂರಿಗೆ ಆಗಮಿಸಿ ಮುಖ್ಯಮಂತ್ರಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಕಾರ್ಯಕ್ರಮದ ಸ್ಥಳ ಪರಿವೀಕ್ಷಣೆ ನಡೆಸುವರು. ಸಂಜೆ 6.30 ಗಂಟೆಗೆ ಮಲೈಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ಸಾಲೂರು ಶ್ರೀಮಠಕ್ಕೆ ಭೇಟಿ ನೀಡುವರು. ಬಳಿಕ ಬೆಟ್ಟದಲ್ಲಿಯೇ ವಾಸ್ತವ್ಯ ಹೂಡುವರು. 


ಡಿಸೆಂಬರ್ 4ರಂದು ಬೆಳಿಗ್ಗೆ 7.30 ಗಂಟೆಗೆ ಮಲೈ ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯಗಳ ಹಾಗೂ ಮಲೈ ಮಹದೇಶ್ವರ ಸ್ವಾಮಿ ಪುತ್ಥಳಿ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸುವರು. ಬೆಳಿಗ್ಗೆ 8.30 ಗಂಟೆಗೆ ಮಲೈ ಮಹದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸುವರು. ಬೆಳಿಗ್ಗೆ 9.30 ಗಂಟೆಗೆ ಶ್ರೀ ಕ್ಷೇತ್ರ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಮುಖ್ಯಮಂತ್ರಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪುರ್ವಭಾವಿ ಸಭೆ ನಡೆಸುವರು. ಬೆಳಿಗ್ಗೆ 11 ಗಂಟೆಗೆ ಕೊಳ್ಳೇಗಾಲಕ್ಕೆ ಆಗಮಿಸುವರು. ಬಳಿಕ ಕೊಳ್ಳೇಗಾಲ ತಾಲೂಕು ವ್ಯಾಪ್ತಿಯ ಸರಗೂರಿನಲ್ಲಿ ಪ್ರಗತಿಯಲ್ಲಿರುವ ಬಹುಗ್ರಮ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಜಾಕ್ ವೆಲ್ ಹಾಗೂ ಪಾಳ್ಯ ಗ್ರಾಮದ ಕುಡಿಯುವ ನೀರಿನ ಶುದ್ದೀಕರಣ ಘಟಕದ ಕಾಮಗಾರಿಯ ಪರಿಶೀಲನೆ ನಡೆಸುವರು. ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿಗೆ ತೆರಳುವರು ಎಂದು ಪ್ರಕಟಣೆ ತಿಳಿಸಿದೆ. 


ಹೊಸ ಪಡಿತರ ಚೀಟಿ, ಸೇರ್ಪಡೆ, ತಿದ್ದುಪಡಿಗೆ ಡಿಸೆಂಬರ್ 11 ರವರೆಗೆ ಅವಕಾಶ 


     ಚಾಮರಾಜನಗರ, ಡಿಸೆಂಬರ್ 02 :- ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವತಿಯಿಂದ ಹೊಸ ಪಡಿತರ ಚೀಟಿ ಪಡೆಯುವ ಸಲುವಾಗಿ ಅರ್ಜಿ ಸಲ್ಲಿಸಲು ಡಿಸೆಂಬರ್ 11ರವರೆಗೆ ಪ್ರತಿದಿನ ಮಧ್ಯಾಹ್ನ 1 ರಿಂದ ಸಂಜೆ 4 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. 


  ಪಡಿತರ ಚೀಟಿಯಲ್ಲಿ ಸೇರ್ಪಡೆ ಅಥವಾ ತಿದ್ದುಪಡಿ ಮಾಡಲು ಡಿಸೆಂಬರ್ 11ರವರೆಗೆ ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಕಾಲವಕಾಶ ನೀಡಲಾಗಿದೆ. ಜಿಲ್ಲೆಯ ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

---

ಕಸ ಸಂಗ್ರಹಣೆ ಕಾರ್ಯದಲ್ಲಿ ಕೀಳಿರಿಮೆ ಇರಬಾರದು : ಜಿ.ಪಂ ಸಿಇಒ ಕೆ.ಎಂ. ಗಾಯಿತ್ರಿ 


      ಚಾಮರಾಜನಗರ, ಡಿಸೆಂಬರ್ 02 :- ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ಸಂಬಂಧ ಕಸ ನಿರ್ವಹಣೆ ಕಾರ್ಯದಲ್ಲಿ ಕೀಳÀರಿಮೆ ಇರಬಾರದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ ಗ್ರಾಯಿತ್ರಿ ಅವರು ತಿಳಿಸಿದರು. 


      ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಸಂಪನ್ಮೂಲ ಕೇಂದ್ರದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ (ಎನ್.ಆರ್.ಎಲ್.ಎಂ) ಹಾಗೂ ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ಆಯೋಜಿಸಲಾಗಿದ್ದ ಘನತ್ಯಾಜ್ಯ ನಿರ್ವಹಣೆ ಕುರಿತು ಐದು ದಿನಗಳ ತರಬೇತಿಯ ಸಮಾರೋಪ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. 


  ಸ್ವ-ಸಹಾಯ ಗುಂಪಿನ ಮಹಿಳೆಯರು ಗ್ರಾಮಗಳಲ್ಲಿ ಕಸ ಸಂಗ್ರಹಣೆ ಮಾಡುವ ಸಂದರ್ಭದಲ್ಲಿ ಕಸ ನಿರ್ವಹಣೆ ಕೆಲಸವನ್ನು ಕೀಳÀರಿಮೆ ಎಂದು ಭಾವಿಸಬಾರದು. ಇದು ಸ್ವಾಭಿಮಾನಿ, ಸ್ವ್ವಾವಲಂಬಿಗಳಾಗಿ ಬದುಕಲು ಆಧಾರಸ್ತಂಭವಾಗಲಿದೆ. ಅಲ್ಲದೇ ಕಸ ಸಂಗ್ರಹಣೆ ಕಾರ್ಯದಿಂದ ವೈಯಕ್ತಿಕ ಆದಾಯಗಳಿಸಿ ಕುಟುಂಬವು ಆರ್ಥಿಕವಾಗಿ ಸಬಲೀಕರಣವಾಗಲು ನೆರವಾಗಲಿದೆ ಎಂದರು.


ಘನತ್ಯಾಜ್ಯ ನಿರ್ವಹಣೆಯಿಂದ ಪ್ರತಿಯೊಬ್ಬರು ಸಮಾಜದಲ್ಲಿ ಉತ್ತಮವಾಗಿ ಜೀವನ ನಡೆಸಲು ಸಹಾಯವಾಗುತ್ತದೆ. ಕಸ ಸಂಗ್ರಹಣೆ ಕೆಲಸ ಪ್ರಶಂಸನಾರ್ಹ ಹಾಗೂ ಗೌರವಯುತ ಸಮಾಜ ಸೇವೆಯಾಗಿದೆ. ಕಸ ಸಂಗ್ರಹಣೆಯಿಂದ ಗ್ರಾಮಗಳು ಶುಚಿಯಾಗಿಸುವುದಲ್ಲದೆ, ಯಾವುದೇ ಸಾಂಕ್ರಾಮಿಕ ರೋಗಗಳಿಂದ ಮುಕ್ತವಾಗಲು ಅನುಕೂಲವಾಗಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಪ್ರತಿ ಗ್ರಾಮ ಪಂಚಾಯಿತಿಗೆ ಇಬ್ಬರು ಸ್ವ-ಸಹಾಯ ಸಂಘದ ಮಹಿಳೆಯರನ್ನು ಆಯ್ಕೆ ಮಾಡಿ ಲಘು ವಾಹನ ಚಾಲನಾ ತರಬೇತಿಯನ್ನು ಜಿಲ್ಲಾ ಪಂಚಾಯಿತಿ ವತಿಯಿಂದ ಕಲ್ಪಿಸುವುದಾಗಿ ಇದೇ ವೇಳೆ ತಿಳಿಸಿದರು.


     ನಾವು ಕಸ ಸಂಗ್ರಹಿಸಲು ಮನೆ-ಮನೆಗೆ ಹೋಗುವ ಮೊದಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸದಸ್ಯರ ಜೊತೆ ಚರ್ಚಿಸಿ ಬಳಿಕ ಪ್ರತಿ ಮನೆಗೂ ಭೇಟಿ ನೀಡಿ ಕಸದಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿ ನಂತರ ಮನೆಮನೆಗೆ ತೆರಳಿ ಕಸ ಸಂಗ್ರಹಿಸಿದರೆ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಲಿದೆ. ನಾಚಿಕೆ, ಅಂಜಿಕೆ ಕೀಳರಿಮೆಯನ್ನು ಬಿಟ್ಟು ಕಸ ಸಂಗ್ರಹಿಸುವ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಾಗುವುದು ಎಂದು ತರಬೇತುದಾರರು ತಮ್ಮ ಅನುಭವವನ್ನು ಕಾರ್ಯಕ್ರಮದಲ್ಲಿ ಹಂಚಿಕೊಂಡರು. 


      ಇದೇ ಸಂದರ್ಭದಲ್ಲಿ ತರಬೇತಿ ಪಡೆದ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ ಗ್ರಾಯಿತ್ರಿ ಅವರು ಪ್ರಮಾಣ ಪತ್ರವನ್ನು ವಿತರಿಸಿದರು. 


      ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಮಂಜುನಾಥ್,  ವಿಕ್ರಂ, ಎನ್‍ಆರ್‍ಎಲ್‍ಎಂ ಯೋಜನೆ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಪಿ. ದೀಪಕ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 


ಡಿ. 3ರಂದು ನಗರದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ


     ಚಾಮರಾಜನಗರ, ಡಿಸೆಂಬರ್ 02 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ವಿವಿಧ ಇಲಾಖೆಗಳು, ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ದಿ ಸಮಿತಿ ಹಾಗೂ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಡಿಸೆಂಬರ್ 3ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜೆ.ಹೆಚ್ ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. 


      ವಸತಿ, ಮೂಲ ಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು.


ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಅವರು ಘನ ಉಪಸ್ಥಿತಿ ವಹಿಸುವರು. ಶಾಸಕರಾದ ಆರ್. ನರೇಂದ್ರ, ಎನ್. ಮಹೇಶ್, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ಶಾಸಕರಾದ ಸಿ.ಎಸ್. ನಿರಂಜನಕುಮಾರ್, ಮರಿತಿಬ್ಬೇಗೌಡ, ಡಾ. ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಮಧು ಜಿ. ಮಾದೇಗೌಡ, ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಜಿ. ನಿಜಗುಣರಾಜು, ನಗರಸಭೆ ಅಧ್ಯಕ್ಷರಾದ ಸಿ.ಎಂ. ಆಶಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.



No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು