Thursday, 26 July 2018

ಆಗಸ್ಟ್ 18,19 ರಂದು ಭರಚುಕ್ಕಿ ಜಲಪಾತೋತ್ಸವ: ಪ್ರವಾಸೋದ್ಯಮ ಸಚಿವರಾದ ಸಾ.ರಾ.ಮಹೇಶ್ (25-07-2018)

ಆಗಸ್ಟ್ 18,19 ರಂದು ಭರಚುಕ್ಕಿ ಜಲಪಾತೋತ್ಸವ: ಪ್ರವಾಸೋದ್ಯಮ ಸಚಿವರಾದ ಸಾ.ರಾ.ಮಹೇಶ್   



ಚಾಮರಾಜನಗರ, ಜು. 25 ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಭರಚುಕ್ಕಿಯಲ್ಲಿ ಆಗಸ್ಟ್ 18 ಹಾಗೂ 19 ರಂದು ಜಲಪಾತೋತ್ಸವ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವರಾದ ಸಾ.ರಾ.ಮಹೇಶ್ ತಿಳಿಸಿದರು.
ಭರಚುಕ್ಕಿಯಲ್ಲಿರುವ ಮಯೂರ ಪ್ರವಾಸಿ ಮಂದಿರದಲ್ಲಿ ಇಂದು ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಸಚಿವರು ಈ ವಿಷಯ ತಿಳಿಸಿದರು.

















ಭರಚುಕ್ಕಿಯಲ್ಲಿ ಆಯೋಜಿಸಲಾಗುವ ಎರಡು ದಿನಗಳ ಜಲಪಾತೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯವರನ್ನು ಆಹ್ವಾನಿಸಲಾಗುವುದು. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯವರ ಲಭ್ಯತೆಯನ್ನು ಸಹ ನೋಡಿಕೊಳ್ಳಲಾಗುತ್ತದೆ. ಬಹುತೇಕ ಆಗಸ್ಟ್ 18, 19 ರಂದೇ ಕಾರ್ಯಕ್ರಮ ನಿಗದಿಯಾಗಲಿದೆ ಎಂದರು.
ಜಲಪಾತೋತ್ಸವಕ್ಕೆ ಅಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಳ್ಳಲಿದ್ದಾರೆ. ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಲಾಗಿದೆ. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಭರಚುಕ್ಕಿಯಲ್ಲಿ ಪ್ರವಾಸಿಗರಿಗೆ ಹೆಚ್ಚು ಸೌಲಬ್ಯಗಳನ್ನು ಕಲ್ಪಸಲು ನಿರ್ಧರಿಸಲಾಗಿದೆ. ಈಗಾಗಲೇ ಎರಡು 2.5 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಕ್ರಿಯಾಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಐತಿಹಾಸಿಕ ವೆಸ್ಲಿ ಸೇತುವೆ ಇತ್ತೀಚಿನ ನೀರಿನ ರಭಸಕ್ಕೆ ಒಂದು ಭಾಗ ಕೊಚ್ಚಿ ಹೋಗಿದೆ ಇದರ ದುರಸ್ತಿ ಹಾಗೂ ಸೇತುವೆಯ ಸಂಪೂರ್ಣ ಬಲವರ್ಧನೆ ಕಾಮಗಾರಿಯನ್ನು 1.5 ಕೋಟಿ ರೂ ವೆಚ್ಚದಲ್ಲಿ ಪರಾತತ್ವ ಇಲಾಖೆ ನಿರ್ವಹಿಸಲಿದೆ. ಪಾರಂಪಾರಿಕ ಈ ಸೇತುವೆಯನ್ನು ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಮಧ್ಯರಂಗ ದೇವಾಲಯದ ಜೀರ್ಣೊದ್ಧಾರವನ್ನು ಕೆಲಸವನ್ನು ನಿರ್ವಹಿಸಲು ನಿರ್ದೇಶನ ನೀಡಲಾಗಿದೆ. ದೇವಾಲಯವು ಪ್ರವಾಸಿ ತಾಣಗಳ ವ್ಯಾಪ್ತಿಯಲ್ಲೇ ಬರುವುದರಿಂದ ದೇವಾಲಯ ಕಟ್ಟಡ ಸೇರಿದಂತೆ ಅಗತ್ಯ ಕಾಮಗಾರಿ ಕೈಗೊಳ್ಳಲು ಕ್ರಿಯಾಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಸಚಿವರು ನುಡಿದರು.
ಸತ್ತೇಗಾಲ ಹ್ಯಾಂಡ್‍ಪೋಸ್ಟ್‍ನಿಂದ ಭರಚುಕ್ಕಿವರೆಗಿನ ರಸ್ತೆಯನ್ನು ಅಗಲೀಕರಣ ಮಾಡಲಾಗುತ್ತದೆ. ಮಾರ್ಗಮಧ್ಯದ ಸೇತುವೆ ಸೇರಿದಂತೆ ರಸ್ತೆ ಅಭಿವೃದ್ಧಿ ಕೈಗೊಂಡು ಡಾಂಬರೀಕರಣ ಮಾಡಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲಾಗುತ್ತದೆ ಎಂದರು.
ಭರಚುಕ್ಕಿ ಜಲಪಾತವನ್ನು ವೀಕ್ಷಿಸಲು ಬರುವ ಪ್ರವಾಸಿಗರು ಅದಷ್ಟೂ ಜಲಪಾತದ ಸನಿಹದಲ್ಲೇ ಜಲಪಾತ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಅನುಕೂಲವಾಗುವಂತೆ ಸುರಕ್ಷಿತವಾಗಿ ಹೋಗಿಬರಲು ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಹನೂರು ಕ್ಷೇತ್ರದ ಶಾಸಕರಾದ ಆರ್.ನರೇಂದ್ರ ಅವರು ಮಾತನಾಡಿ, ಭರಚುಕ್ಕಿಯಲ್ಲಿ ಆಂಪಿಥಿಯೇಟರ್‍ನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಾಣ ಮಾಡಲು ಈಗಾಗಲೇ ಲಭ್ಯವಿರುವ ಅನುದಾನ ಸಾಲುತ್ತಿರಲ್ಲಿಲ. ಹೀಗಾಗಿ ಪ್ರವಾಸೋದ್ಯಮ ಸಚಿವರು ಒಂದು ಕೋಟಿ ರೂ ಅನುದಾನವನ್ನು ಆಂಪಿಥಯೇಟರ್ ನಿರ್ಮಿಸಲು ನೀಡುವುದಾಗಿ ತಿಳಿಸಿದ್ದಾರೆ ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ ಕೃಷ್ಣ, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ರಾಜು, ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಾದ ಬಿ.ರಾಮು, ಹಿರಿಯ ಅಧಿಕಾರಿಗಳಾದ ಕುಮಾರ್ ಪುಷ್ಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ, ಉಪವಿಭಾಗಾಧಿಕಾರಿ ಬಿ.ಪೌಜಿಯಾ ತರುನ್ನಮ್ಮ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾದ ಜನಾರ್ಧನ್ ಇತರೆ ಅಧಿಕಾರಿಗಳು ಇದ್ದರು.
ಇದಕ್ಕೂ ಮೊದಲು ಪ್ರವಾಸೋದ್ಯಮ ಸಚಿವರು ಭರಚುಕ್ಕಿ ಜಲಪಾತ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿ ಕಲ್ಪಿಸಲಾಗಿರುವ ಸೌಲಭ್ಯಗಳನ್ನು ವೀಕ್ಷಿಸಿದರು.
ಜಲಪಾತ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ಮೆಟ್ಟಿಲುಗಳು, ವೀಕ್ಷಣಾ ಸ್ಥಳ, ಶೌಚಾಲಯ ಸೇರಿದಂತೆ ವಿವಿಧ ಸೌಕರ್ಯಗಳನ್ನು ಪರಿಶೀಲಿಸಿದರು. ಇದೇ ವೇಳೆ ಪ್ರವಾಸಿಗರು ಜಲಪಾತವನ್ನು ಹತ್ತಿರದಲ್ಲೇ ಸುರಕ್ಷಿತಾಗಿ ವೀಕ್ಷಿಸಲು ಅನುವಾಗುವಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಸಚಿವರು ಹೆಚ್ಚುವರಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದರು.
ಕೆಲ ಪ್ರವಾಸಿಗರು ಸ್ಥಳೀಯವಾಗಿ ಇನ್ನಷ್ಟೂ ಸೌಕರ್ಯಗಳನ್ನು ನೀಡುವಂತೆ ಮಾಡಿದ ಮನವಿಗೆ ಸಚಿವರು ಪೂರಕವಾಗಿ ಸ್ಪಂದಿಸಿ ಅಗತ್ಯ ಕ್ರಮ ವಹಿಸುವ ಭರವಸೆ ನೀಡಿದರು.

ಕೊಳ್ಳೇಗಾಲ ರೇಷ್ಮೆಗೂಡು ಮಾರುಕಟ್ಟೆಗೆ ರೇಷ್ಮೆ ಸಚಿವರ ಭೇಟಿ:  ವಹಿವಾಟು ಪರಿಶೀಲನೆ
ಚಾಮರಾಜನಗರ, ಜು. 25: ರೇಷ್ಮೆ ಬೆಳೆಗಾರರು, ರೈತರು ತರುವ ರೇಷ್ಮೆಗೂಡಿಗೆ ಮಧ್ಯವರ್ತಿಗಳ ಪ್ರವೇಶವಿಲ್ಲದೆ ನೇರವಾಗಿ ಬೆಳೆಗಾರರು ರೈತರಿಗೆ ಮಾರಾಟ ಹಣ ತಲುಪುವಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ರೇಷ್ಮೆ ಸಚಿವರಾದ ಸಾ.ರಾ.ಮಹೇಶ್ ಅವರು ತಿಳಿಸಿದರು.
ಕೊಳ್ಳೇಗಾಲ ಪಟ್ಟಣದ ರೇಷ್ಮೆಗೂಡು ಮಾರುಕಟ್ಟೆಗೆ ಇಂದು ಭೇಟಿ ನೀಡಿದ ಸಚಿವರು ಅಲ್ಲಿನ ಕಾರ್ಯವೈಖರಿಯನ್ನು ಖುದ್ದು ಪರಿಶೀಲಿಸಿದ ಬಳಿಕ ಈ ವಿಷಯ ತಿಳಿಸಿದರು.
ರೇಷ್ಮೆ ಮಾರುಕಟ್ಟೆಯಲ್ಲಿ ರೈತರಿಗೆ ಬೆಳೆಗಾರರಿಗೆ ಯಾವುದೇ ತೊಂದರೆಯಾಗಬಾರದು.  ಅವರು ಬೆಳೆದ ರೇಷ್ಮೆಗೆ ಸರಿಯಾದ ರೀತಿಯಲ್ಲಿ ಹಣ ಸಿಗುವ ಹಾಗೆ ನೋಡಕೊಳ್ಳಬೇಕು. ಪಾರದರ್ಶಕವಾಗಿ ಮಾರುಕಟ್ಟೆಯಲ್ಲಿ ಪ್ರಕ್ರಿಯೆ ನಡೆಯಬೇಕೆಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ರೇಷ್ಮೆ ಮಾರುಕಟ್ಟೆಯಲ್ಲಿ ಬೆಳೆಗಾರರಿಗೆ ಅನ್ಯಾಯವಾದರೆ ಸಹಿಸುವುದಿಲ್ಲ. ಯಾವುದೇ ದೂರುಗಳು ಬಾರದಂತೆ ನಿಯಮಾನುಸಾರ ವಹಿವಾಟು ನಡೆಯಬೇಕು ಎಂದು ಸಚಿವರು ತಾಕೀತುಮಾಡಿದರು.
ರೀಲರ್ಸ್ ಮತ್ತು ರೈತರು ಸಚಿವರಿಗೆ ತಮ್ಮ ವಿವಿಧ ಬೇಡಿಕೆಗಳನ್ನು ಮುಂದಿಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಮುಖ್ಯಮುಂತ್ರಿಗಳ ಜೊತೆ ಸಭೆ ಇದ್ದು ರೇಷ್ಮೆ ಮಾರುಕಟ್ಟೆಯಲ್ಲಿ ರೀಲರ್ಸ್ ಮತ್ತು ರೈತರ ಬೇಡಿಕೆಗಳ ಬಗ್ಗೆ  ಚರ್ಚಿಸಿ ರೈತರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ವ್ಯವಸ್ಧೆ ಮಾಡುವುದಾಗಿ ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಹನೂರು ಕ್ಷೇತ್ರದ ಶಾಸಕ ಆರ್.ನರೇಂದ್ರ, ಜಿ.ಪಂ. ಅಧ್ಯಕ್ಷರಾದ ಶಿವಮ್ಮಕೃಷ್ಣ, ತಾ.ಪಂ ಅಧ್ಯಕ್ಷ ರಾಜು, ಜಿ.ಪಂ. ಮುಖ್ಯಕಾರ್ಯನಿರ್ವಾಹಕಾಧಿಕಾರಿ ಡಾ.ಕೆ.ಹರೀಶ್‍ಕುಮಾರ್ ಹಾಗೂ ಇತರರು ಹಾಜರಿದ್ದರು.




x

No comments:

Post a Comment

ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*

  ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*    ಚಾಮರಾಜನಗರ, ಸೆಪ್ಟೆಂಬರ್ 28 :- ಈ ಬಾರಿಯ ರಾಷ್ಟ್ರೀಯ ಲೋ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು