ಹಾಸ್ಟೆಲ್‍ಗಳ ಸುಧಾರಣೆಗೆ ಆದ್ಯತೆ : ಸಚಿವರಾದ ಸಿ. ಪುಟ್ಟರಂಗಶೆಟ್ಟಿ ನುಡಿ
ಚಾಮರಾಜನಗರ, ಜೂ. 20 :- ರಾಜ್ಯದಲ್ಲಿ ಇರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿರ್ವಹಣೆಯ ಹಾಸ್ಟೆಲ್‍ಗಳನ್ನು ಸುಧಾರಿಸಲು ಆದ್ಯ ಗಮನ ನೀಡಲಾಗುವುದೆಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‍ಗಳಿಗೆ ಆಯ್ಕೆಯಾಗಿರುವ ಅಡುಗೆಯವರು ಹಾಗೂ ಸಹಾಯಕರ ಹುದ್ದೆಗಳ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿನಿಲಯಗಳಲ್ಲಿ ಬಡವರ್ಗದವರೇ ಹೆಚ್ಚಾಗಿ ಆಶ್ರಯಿಸುತ್ತಾರೆ. ಇಂತಹ ವಿದ್ಯಾರ್ಥಿಗಳಿಗೆ ಗುಣಮಟ್ಟದ ಊಟ. ಇನ್ನಿತರ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕಾಗುತ್ತದೆ. ಹೀಗಾಗಿ ಯಾವುದೇ ಕೊರತೆಯಾಗದಂತೆ ವಿದ್ಯಾರ್ಥಿನಿಲಯಗಳಿಗೆ ಸೌಕರ್ಯಗಳು ತಲುಪುತ್ತಿದೆಯೇ ಎಂಬ ಬಗ್ಗೆ ತಾವೇ ಖುದ್ದು ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ ಪರಿಶೀಲಿಸುವೆ ಎಂದು ಸಚಿವರು ತಿಳಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 1547 ಅಡುಗೆಯವರು, 2470 ಅಡುಗೆ ಸಹಾಯಕರ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಪ್ರಕ್ರಿಯೆ ನಡೆದಿದೆ. 3 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳಲ್ಲಿ ಪ್ರಕ್ರಿಯೆ ಪೂರ್ಣಗೊಂಡಿದೆ. ಚಾಮರಾಜನಗರ ಜಿಲ್ಲೆಯಲ್ಲಿ 19 ಅಡುಗೆಯವರು ಹಾಗೂ 67 ಅಡುಗೆ ಸಹಾಯಕರ ಹುದ್ದೆಗಳಿಗೆ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದರು.
ಹಾಸ್ಟೆಲ್ ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಇದೀಗ ಕಾಯಂ ಸಿಬ್ಬಂದಿಯನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಿಕೊಂಡಿರುವುದರಿಂದ ಹಾಸ್ಟೆಲ್‍ಗಳಲ್ಲಿನ ಸೌಲಭ್ಯಗಳು ಸುಧಾರಣೆಯಾಗಲಿವೆ ಎಂಬ ವಿಶ್ವಾಸ ಹೊಂದಿರುವುದಾಗಿ ಸಚಿವರು ನುಡಿದರು.
ಹಾಸ್ಟೆಲ್‍ಗಳಿಗೆ ನೇಮಕವಾಗುವ ಸಿಬ್ಬಂದಿ ಸೇವಾ ಮನೋಭಾವ ರೂಢಿಸಿಕೊಳ್ಳಬೇಕು. ಬಡ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾಗಿ ಅನುಕೂಲ ಕಲ್ಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರೆ ಶ್ರೇಯಸ್ಸು ಲಭಿಸಲಿದೆ. ಹೀಗಾಗಿ ಹೊಸದಾಗಿ ನೇಮಕವಾಗಿರುವ ಅಡುಗೆಯವರು, ಸಹಾಯಕರು ಅವರ ಹುದ್ದೆಯನ್ನು ಶ್ರದ್ಧೆ ಪ್ರೀತಿಯಿಂದ ನಿರ್ವಹಿಸಬೇಕು. ಗುಣಮಟ್ಟದ ಸೌಲಭ್ಯಗಳನ್ನು ತಲುಪಿಸುವಲ್ಲಿ ಶ್ರಮಿಸಬೇಕು ಎಂದು ಸಚಿವರು ಸಲಹೆ ಮಾಡಿದರು.
ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮಾತನಾಡಿ ಅಡುಗೆಯವರು ಹಾಗೂ ಅಡುಗೆ ಸಹಾಯಕರಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಿಂದಲೇ ನೇಮಕಾತಿ ಪತ್ರ ಸ್ವೀಕರಿಸುವ ಸೌಭಾಗ್ಯ ಬಂದಿದೆ. ಆಯ್ಕೆಯಾಗಿರುವ ಅಭ್ಯರ್ಥಿಗಳು ವಿದ್ಯಾರ್ಥಿನಿಲಯಗಳಲ್ಲಿರುವ ವಿದ್ಯಾರ್ಥಿಗಳಿಗೆ ಪೋಷಕರಂತೆ ಕರ್ತವ್ಯ ನಿರ್ವಹಿಸಬೇಕು. ಪೌಷ್ಠಿಕ ಅಂಶಗಳನ್ನು ಒಳಗೊಂಡ ಊಟ ಉಪಚಾರ ಕೆಲಸವನ್ನು ಉತ್ತಮವಾಗಿ ನಿರ್ವಹಿಸುವ ಜತೆಗೆ ಶೈಕ್ಷಣಿಕ ಫಲಿತಾಂಶ ಸುಧಾರಣೆಗೂ ಕಾರಣರಾಗಬೇಕು ಎಂದರು.
ತಾಲೂಕು ಪಂಚಾಯಿತಿ ಅಧ್ಯಕ್ಷರಾದ ದೊಡ್ಡಮ್ಮ, ಜಿಲ್ಲಾ ಪಂಚಾಯತ್ ಉಪಕಾಶರ್ಯದರ್ಶಿ ಮುನಿರಾಜಪ್ಪ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶ್ರೀನಿವಾಸ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸುವರ್ಣಾವತಿ ನಾಲೆ ಕಾಮಗಾರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಿಂದ ಚಾಲನೆ
ಚಾಮರಾಜನಗರ, ಜೂ. 20 :- ಚಾಮರಾಜನಗರ ತಾಲೂಕಿನ ಪ್ರಮುಖ ಸುವರ್ಣಾವತಿಯ ಎಡದಂಡೆ ಹಾಗೂ ಬಲದಂಡೆ ನಾಲೆಯನ್ನು 3.65 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಿರುವ ಕಾಮಗಾರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಇಂದು ಚಾಲನೆ ನೀಡಿದರು.ತಾಲೂಕಿನ ಅಟ್ಟುಗೂಳಿಪುರ ಗ್ರಾಮ ಪಂಚಾಯಿತಿ ಕಚೇರಿಯ ಬಳಿ ಹಾದುಹೋಗಲಿರುವ ಸುವರ್ಣಾವತಿ ಎಡದಂಡೆ ನಾಲೆ ಹಾಗೂ ಬಲದಂಡೆ ನಾಲೆ ಕಾಮಗಾರಿಗೆ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಇದೇ ವೇಳೆ ಮಾತನಾಡಿದ ಸಚಿವರು ಸುವರ್ಣಾವತಿ ಎಡದಂಡೆ ನಾಲೆ 0.0 ಕಿ.ಮೀ. ಯಿಂದ 4.855 ಕಿ.ಮೀ.ವರೆಗೆ ಮತ್ತು ಬಲದಂಡೆ ನಾಲೆ ಸರಪಳಿಯು 14.10 ಕಿ.ಮೀ. ನಿಂದ ಸರಪಳಿ 18.550 ಕಿ.ಮೀ. ವರೆಗೆ ನಿರ್ಮಾಣವಾಗಲಿದೆ. ಸೈಡ್ ಹಾಗೂ ಬೆಡ್‍ಗಳಿಗೆ ಸಿಸಿ ಲೈನಿಂಗ್ ತೂಬು, ಸೋಪಾನ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗುತ್ತದೆ ಎಂದರು.
ಕಾಮಗಾರಿಯನ್ನು 5 ತಿಂಗಳೊಳಗೆ ಪೂರ್ಣಗೊಳಿಸಲು ಗಡುವು ನಿಗದಿ ಮಾಡಲಾಗಿದೆ. ಈ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ನಡೆಸಬೇಕೆಂದು ಸೂಚಿಸಲಾಗಿದೆ. ಪ್ರಸ್ತುತ ಕಾಮಗಾರಿ ಪೂರ್ಣಗೊಂಡರೆ 17 ಗ್ರಾಮಗಳಿಗೆ ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದರು.
ಈಗಾಗಲೇ 20 ಕೋಟಿ ರೂ. ವೆಚ್ಚದಲ್ಲಿ ನಾಲೆ ಕಾಮಗಾರಿಗಳು ತಮ್ಮ ಕ್ಷೇತ್ರದಲ್ಲಿ ನಡೆದಿವೆ. ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳನ್ನು ಕೊರೆಯಿಸಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ನೆರವು ಕಲ್ಪಿಸಲಾಗಿದೆ. ನೀರು ಬಳಕೆದಾರರ ಸಹಕಾರ ಸಂಘಗಳು ನಾಲೆ ನಿರ್ಮಾಣದಿಂದ ಲಭಿಸುವ ನೀರಾವರಿ ಸೌಲಭ್ಯಗಳ ಬಳಕೆಗೆ ಸಹಕರಿಸಬೇಕೆಂದು ಸಚಿವರು ತಿಳಿಸಿದರು.
ಸುವರ್ಣಾವತಿ ಉದ್ಯಾನವನ ಅಭಿವೃದ್ಧಿಗೂ ಆದ್ಯತೆ ನೀಡಲಾಗುತ್ತದೆ. ಪ್ರವಾಸೋದ್ಯಮ ಸ್ಥಳಗಳನ್ನಾಗಿ ಆಕರ್ಷಿಸುವ ನಿಟ್ಟಿನಲ್ಲಿ ಇದರ ಪ್ರಗತಿಗೆ ಕಾರ್ಯೋನ್ಮುಖರಾಗಲು ಚಿಂತನೆ ನಡೆಸಲಾಗುವುದು. ಪ್ರವಾಸೋದ್ಯಮ ಇಲಾಖೆಯೊಂದಿಗೆ ಚರ್ಚಿಸಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಗಮನ ಕೊಡಲಾಗುವುದು ಎಂದು ಸಚಿವರು ನುಡಿದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಲಾ ಸೋಮಲಿಂಗಪ್ಪ, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಮರಿಸ್ವಾಮಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಜೇಂದ್ರ ಪ್ರಸಾದ್, ಸಹಾಯಕ ಎಂಜಿನಿಯರ್ ಮಂಜುನಾಥ್, ಮಹೇಶ್, ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.
ನಗರದಲ್ಲಿ ಯೋಗ ಜಾಗೃತಿಗೆ ನಡೆದ ಜಾಥಾ, ಉಪನ್ಯಾಸ
ಚಾಮರಾಜನಗರ, ಜೂ. 20 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಹಮ್ಮಿಕೊಂಡಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜನರಲ್ಲಿ ಜಾಗೃತಿ ಮೂಡಿಸುವ ದಿಸೆಯಲ್ಲಿ ಇಂದು ಜಾಥಾ ಹಾಗೂ ಉಪನ್ಯಾಸ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿಶಾಲಾಕ್ಷಿ ಅವರು ಯೋಗ ಜಾಗೃತಿ ಜಾಥಾಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಬಳಿಕ ನ್ಯಾಯಾಲಯ ಆವರಣದಿಂದ ಜಾಥಾ ಹೊರಟು ಜಿಲ್ಲಾಡಳಿತ ಭವನದ ಆವರಣದಲ್ಲಿ ಸಮಾವೇಶಗೊಂಡಿತು.
ತದನಂತರ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಯೋಗ ಕುರಿತು ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ಪ್ರಕೃತಿ ಚಿಕಿತ್ಸೆ ವಿದ್ಯಾಲಯದ ಡಾ. ಸುಶ್ಮಿತ ಯೋಗದ ಮಹತ್ವ ಕುರಿತು ತಿಳಿಸಿಕೊಟ್ಟರು.
ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದೇ ಯೋಗ. ಜೀವನ ಶೈಲಿಯನ್ನು ಬದಲಿಸಿಕೊಂಡು ದೀರ್ಘ ಕಾಲ ಆರೋಗ್ಯದಿಂದ ಇರಲು ಯೋಗ ಅಭ್ಯಾಸ ಮಾಡುವುದು ಒಳಿತು ಎಂದು ಸುಶ್ಮಿತ ಸಲಹೆ ಮಾಡಿದರು.
ಅಹಾರ ಸೇವನೆ ಉಸಿರಾಟ ಪ್ರಕ್ರಿಯೆ ಬಗ್ಗೆಯೂ ಕಾಳಜಿ ವಹಿಸಬೇಕು. ದಿನನಿತ್ಯದ ಊಟ ಉಪಾಹಾರವನ್ಜು ಚೆನ್ನಾಗಿ ಅಗಿದು ಸೇವಿಸಬೇಕು. ಇದರಿಂದ ಜೀರ್ಣಕ್ರಿಯೆ ಉತ್ತಮವಾಗಲಿದೆ. ಪ್ರತಿದಿನ ಕನಿಷ್ಟ 3 ಲೀ. ನೀರು ಸೇವಿಸಬೇಕು. ಪ್ರತಿವ್ಯಕ್ತಿ ದಿನವೊಂದಕ್ಕೆ 300 ಗ್ರಾಂಗಳಷ್ಟು ಹಣ್ಣನ್ನು ತಿನ್ನಬೇಕು. ಪೌಷ್ಠಿಕ ಆಹಾರ ಸೇವನೆ ನಿತ್ಯ ಯೋಗ ಉತ್ತಮ ಆರೊಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಜಿಲ್ಲಾ ಅಯುಷ್ ಅಧಿಕಾರಿ ಡಾ. ಬಿ. ಪುನೀತ್‍ಬಾಬು, ಡಾ. ಶ್ರೀನಿವಾಸ್, ತೋಟದ್ ಮಲ್ಲಣ್ಣ, ಶಿಕ್ಷಣ ಇಲಾಖೆ ಅಧಿಕಾರಿ ತಮ್ಮಯ್ಯ, ದೈಹಿಕ ಶಿಕ್ಷಣ ಅಧಿಕಾರಿ ಫಿಲಿಪ್, ಧರ್ಮಸ್ಥಳ ಮಂಜುನಾಥ ಪ್ರಕೃತಿ ಚಿಕಿತ್ಸೆ ವಿದ್ಯಾಲಯದ ವೈದ್ಯರಾದ ಡಾ. ಎಲ್. ಮಾನಸ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತಿರಿದ್ದರು.
ಮೃತ ಅಪರಿಚಿತ ವ್ಯಕ್ರಿಯ ಪತ್ತೆಗೆ ಮನವಿ
ಚಾಮರಾಜನಗರ, ಜೂ. 20- ನಗರದಲ್ಲಿ ಅಸ್ವಸ್ಥರಾಗಿ ಬಿದ್ದಿದ್ದ ವ್ಯಕ್ತಿಯೊಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು ಸದರಿ ವ್ಯಕ್ತಿ ಮೃತ ಪಟ್ಟಿದ್ದು ಈತರ ವಾರಸುದಾರರ ಪತ್ತೆಗೆ ಮಾಹಿತಿ ನೀಡುವಂತೆ ಕೋರಲಾಗಿ.40 ರಿಂದÀ 45 ವರ್ಷ ವಯಸ್ಸಿನ ಮೃತ ವ್ಯಕ್ತಿಯು ಕೋಲು ಮುಖ, ಎಣ್ಣೆಗೆಂಪು ಬಣ್ಣ, ಕೃಶ ಶರೀರ, ಮೀಸೆ ಗಡ್ಡ ಬಿಟ್ಟಿರುತ್ತಾನೆ, 5.6 ಅಡಿ ಎತ್ತರ, ಕಪ್ಪು ತಲೆಗೂದಲು ಇರುತ್ತದೆ. ಎಡ ಕಾಲು, ಕೈಗೆ ಗ್ರಾಂಗ್ರಿನ್ ಆಗಿ ಆಸ್ಪತ್ರೆಯ ಬ್ಯಾಂಡೇಜ್ ಸುತ್ತಿರುತ್ತದೆ.
ಮೃತನ ವಾರಸುದಾರರು ಇದ್ದಲ್ಲಿ ಚಾಮರಾಜನಗರದ ಪಟ್ಟಣ ಪೊಲೀಸ್ ಠಾಣೆ ದೂ.ಸಂ. 08226-222047ಗೆ ಮಾಹಿತಿ ನೀಡುವಂತೆ ಠಾಣೆಯ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂ. 21ರಂದು ನಗರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆÀ
ಚಾಮರಾಜನಗರ, ಜೂ. 20 - ಭಾರತ ಸರ್ಕಾರದ ಆಯುಷ್ ಮಂತ್ರಾಲಯ, ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆಯುಷ್ ಇಲಾಖೆಯ ಸಹಯೋಗದೊಂದಿಗೆ 4ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಜೂನ್ 21ರಂದು ಬೆಳಿಗ್ಗೆ 6.30 ರಿಂದ 9 ಗಂಟೆಯವರೆಗೆ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಲಾಗಿದೆ.ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಎನ್. ಮಹೇಶ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ ಕೃಷ್ಣ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಆರ್. ನರೇಂದ್ರ, ಸಿ.ಎಸ್. ನಿರಂಜನಕುಮಾರ್, ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೇಶ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ದೊಡ್ಡಮ್ಮ, ನಗರಸಭೆ ಅಧ್ಯಕ್ಷರಾದ ಶೋಭ, ಉಪಾಧ್ಯಕ್ಷರಾದ ಎಂ.ಆರ್. ರಾಜಪ್ಪ, ತಾ.ಪಂ. ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಅವರುಗಳು ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಜೂ. 21ರಂದು ನಗರದಲ್ಲಿ ಯೋಗ ಪ್ರಾತ್ಯಕ್ಷತೆ ಕೇಂದ್ರ ಪುರಸ್ಕøತ ಯೋಜನೆಗಳ ಕಾರ್ಯಕ್ರಮ
ಚಾಮರಾಜನಗರ, ಜೂ. 20 - ನೆಹರು ಯುವ ಕೇಂದ್ರವು ಜೆಎಸ್‍ಎಸ್ ಮಹಿಳಾ ಕಾಲೇಜು, ಭಾರತ್ ಸ್ವಾಭಿಮಾನ್ ಟ್ರಸ್ಟ್, ಪತಂಜಲಿ ಯೋಗ ಸಮಿತಿ ಇವರ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನೆರೆಹೊರೆ ಯುವ ಸಂಸತ್ ಕಾರ್ಯಕ್ರಮದಲ್ಲಿ ಯೋಗ ಪ್ರಾತ್ಯಕ್ಷತೆ ಮತ್ತು ಕೇಂದ್ರ ಪುರಸ್ಕøತ ಯೋಜನೆಗಳ ಕುರಿತು ಮಾಹಿತಿ ನೀಡುವ ಕಾರ್ಯಕ್ರಮವನ್ನು ಜೂನ್ 21ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜೆಎಸ್‍ಎಸ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಲಾಗಿದೆ.ಧ್ವನಿ ಮಹಿಳಾ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಲೀನಾ ಕುಮಾರಿ ಕಾರ್ಯಕ್ರಮ ಉದ್ಘಾಟಿಸುವರು. ಜೆಎಸ್‍ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಎ.ಜಿ. ಶಿವಕುಮಾರ್ ಅಧ್ಯಕ್ಷತೆ ವಹಿಸುವರು.
ಜೆಎಸ್‍ಎಸ್ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ. ಸ್ವಾಮಿ, ಪತಂಜಲಿ ಯೋಗ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ವೈ.ಆರ್, ಮಹೇಶ್, ಹರಿದ್ವಾರದ ರಾಜ್ಯ ಮಹಿಳಾ ಪತಂಜಲಿ ಯೋಗ ಸಮಿತಿಯ ಅಧ್ಯಕ್ಷರಾದ ಸುಜಾತಾ ಮಾರ್ಲ, ಉಪಾಧ್ಯಕ್ಷರಾದ ರೂಪ ಆರ್. ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಜೂ. 21ರಂದು ಕೆಂಪೇಗೌಡ ಜಯಂತಿ ಆಚರಣೆ ಪೂರ್ವಭಾವಿ ಸಭೆ
ಚಾಮರಾಜನಗರ, ಜೂ. 20 - ಜಿಲ್ಲಾಡಳಿತದ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸುವ ಸಂಬಂಧ ಚರ್ಚಿಸುವ ಸಲುವಾಗಿ ಹೆಚ್ಚುವರಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜೂನ್ 21ರಂದು ಮಧ್ಯಾಹ್ನ 3 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.ಜಿಲ್ಲೆಯ ಸಂಘಸಂಸ್ಥೆಯ ಪದಾಧಿಕಾರಿಗಳು, ಸಮಾಜದ ಮುಖಂಡರು, ನಾಗರಿಕರು ಸಭೆಗೆ ಹಾಜರಾಗಿ ಕಾರ್ಯಕ್ರಮ ಆಯೋಜನೆ ಸಂಬಂಧ ಸಲಹೆ ನೀಡುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಅಂಬಿಗರ ಚೌಡಯ್ಯ, ಉಪ್ಪಾರ ಅಭಿವೃದ್ಧಿ ನಿಗಮಗಳಿಂದ ಶೈಕ್ಷಣಿಕ ಸಾಲ : ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 20 - ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮವು ಸಿಇಟಿ ಮೂಲಕ ಪ್ರವೇಶ ಪಡೆದು ವೃತ್ತಿಪರ ಕೋರ್ಸುಗಳಲ್ಲಿ ವ್ಯಾಸಂಗ ಮಾಡುವ ಉಪ್ಪಾರ, ಇದರ ಉಪಜಾತಿ ಹಾಗೂ ಬೆಸ್ತ, ಕಬ್ಬಲಿಗ, ಕೋಲಿ, ಗಂಗಾಮತ, ಮೊಗವೀರ, ಇದರ ಉಪಜಾತಿಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಅರಿವು ಯೋಜನೆಯಡಿ ಶೈಕ್ಷಣಿಕ ಸಾಲ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಿದೆ.2018-19ನೇ ಸಾಲಿಗೆ ಉಪ್ಪಾರ ಮತ್ತು ಇದರ ಉಪಜಾತಿಗೆ ಸೇರಿದ (ಹಿಂದುಳಿದ ವರ್ಗಗಳ ಪಟ್ಟಿಯಲ್ಲಿನ ಪ್ರವರ್ಗ 1ರ ಕ್ರಮಸಂಖ್ಯೆ 53 ಎ ಯಿಂದ ವಿ ವರೆಗಿನ ಜಾತಿಗಳಿಗೆ) ವಿದ್ಯಾರ್ಥಿಗಳಿಗೆ ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮವು ಶೈಕ್ಷಣಿಕ ಸಾಲ ನೀಡಲಿದೆ.
ಬೆಸ್ತ, ಕಬ್ಬಲಿಗ, ಕೋಲಿ, ಗಂಗಾಮತ. ಮೊಗವೀರ ಮತ್ತು ಇದರ ಉಪಜಾತಿಗಳಿಗೆ (ಹಿಂದುಳಿದ ವರ್ಗಗಳ ಪಟ್ಟಿಯಲ್ಲಿನ ಪ್ರವರ್ಗ 1ರ ಕ್ರಮಸಂಖ್ಯೆ 6 ಎ ಯಿಂದ ಎಕೆ ವರೆಗಿನ ಜಾತಿಗಳಿಗೆ) ಸೇರಿದ ವಿದ್ಯಾರ್ಥಿಗಳಿಗೆ ನಿಜಶರಣ ಅಂಬಿಗರ ಚೌಡಯ್ಯ ನಿಗಮದ ವತಿಯಿಂದ ಶೈಕ್ಷಣಕ ಸಾಲ ಮಂಜೂರು ಮಾಡಲಾಗುತ್ತದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪ್ರವೇಶ ಪಡೆದು ವೃತ್ತಿಪರ ಕೋರ್ಸುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಕೋರ್ಸಿನ ವಾಸ್ತವಿಕ ವೆಚ್ಚ ಅಥವಾ ವಾರ್ಷಿಕ ಗರಿಷ್ಟ 1 ಲಕ್ಷ ರೂ.ಗಳಂತೆ ಶೇ.7ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ.
ವಿದ್ಯಾರ್ಥಿಗಳು ಸಿಇಟಿ ಅಥವಾ ಮೆರಿಟ್ ಆಧಾರದ ಮೇಲೆ ಸೀಟು ಪಡೆದಿರಬೇಕು. ಬಿಇ, ಎಂಬಿಬಿಎಸ್, ಬಿಯುಎಂಎಸ್, ಬಿಡಿಎಸ್, ಬಿಎಎಂಎಸ್, ಬಿಎಚ್‍ಎಂಎಸ್, ಎಂಬಿಎ, ಎಂಟೆಕ್, ಎಂಇ, ಎಂಡಿ, ಪಿಎಚ್‍ಡಿ, ಬಿಸಿಎ, ಎಂಸಿಎ, ಎಂಎಸ್ ಅಗ್ರಿಕಲ್ಚರ್, ಬಿಎಸ್ಸಿ ನರ್ಸಿಂಗ್, ಬಿಫಾರಂ, ಎಂ ಫಾರಂ, ಬಿಎಸ್ಸಿ ಪ್ಯಾರಾಮೆಡಿಕಲ್, ಬಿಎಸ್ಸಿ ಬಯೋಟೆಕ್ನಾಲಜಿ, ಬಿಟೆಕ್, ಬಿಪಿಟಿ, ಬಿಬಿಎಸ್ಸಿ, ಎಂಬಿಎಸ್ಸಿ, ಬಿಎನ್‍ಎಂ, ಬಿಎಚ್‍ಎಂ, ಎಂಡಿಎಸ್, ಎಂಎಸ್‍ಡಬ್ಲ್ಯೂ, ಎಲ್‍ಎಲ್‍ಎಂ, ಎಂಎಫ್‍ಎ, ಎಂಎಸ್ಸಿ ಬಯೋಟೆಕ್ನಾಲಜಿ, ಎಂಎಸ್‍ಸಿ ಎಜಿ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು.
ಕುಟುಂಬದ ವಾರ್ಷಿಕ ವರಮಾನ 3.5 ಲಕ್ಷ ರೂ. ಮಿತಿಯಲ್ಲಿರಬೇಕು. ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ (ಕೊಠಡಿ ಸಂ. 305) ಗೆ ಜುಲೈ 31ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ದೂ. ಸಂಖ್ಯೆ 08226-223587 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ವಿವಿಧ ಸಾಲಸೌಲಭ್ಯಕ್ಕೆ ವಿಶ್ವಕರ್ಮ ಸಮುದಾಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಜೂ. 20 - ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ವಿವಿಧ ಸಾಲಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.ರಾಜ್ಯ ಸರ್ಕಾರದ ಯೋಜನೆಯಡಿ ಪಂಚವೃತ್ತಿ ಅಭಿವೃದ್ಧಿಗೆ ಆರ್ಥಿಕ ನೆರವು ಸಿಗಲಿದೆ. ಸ್ವಯಂ ಉದ್ಯೋಗಕ್ಕಾಗಿ ನೇರ ಸಾಲ, ಬ್ಯಾಂಕುಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಾಲ, ಅರಿವು ಶೈಕ್ಷಣಿಕ ಸಾಲ, ಗಂಗಾ ಕಲ್ಯಾಣ ವೈಯಕ್ತಿಕ ನೀರಾವರಿ ಯೋಜನೆ, ಮಹಿಳೆಯರ ಮೈಕ್ರೋ ಕ್ರೆಡಿಟ್ ಸಾಲ, ಕಮ್ಮಾರಿಕೆ, ಅಕ್ಕಸಾಲಿ, ಬಡಗಿ ಉದ್ಯಮಿಗಳಿಗೆ ತರಬೇತಿ ಮತ್ತು ಸಾಲ ಯೋಜನೆಯಡಿ ಸಾಲಸೌಲಭ್ಯ ಲಭಿಸಲಿದೆ.
ಎನ್ ಬಿ ಸಿಎಫ್ ಡಿಸಿ ಯೋಜನೆಯಡಿ ಕೃಷಿ, ಸಣ್ಣ ವ್ಯಾಪಾರ, ಸೇವೆ, ಸಾರಿಗೆ, ಶೈಕ್ಷಣಿಕ ಸಾಲ, (ಭಾರತ ಹಾಗೂ ವಿದೇಶಗಳಲ್ಲಿ) ನ್ಯೂ ಸ್ವರ್ಣಿಮಾ (ಮಹಿಳಾ ಯೋಜನೆ), ಶಿಲ್ಪಸಂಪದ, ಸಕ್ಷಮ ಸಾಲ, ಮೈಕ್ರೋ ಫೈನಾನ್ಸ್, ಕೃಷಿ ಸಂಪದ, ಮಹಿಳಾ ಸಮೃದ್ಧಿ ಯೋಜನೆ (ಮಹಿಳಾ ಸ್ವಸಹಾಯ ಗುಂಪುಗಳಿಗೆ ಹಾಗೂ ವೈಯಕ್ತಿಕ ಸಾಲ) ಸಾಲಸೌಲಭ್ಯ ಪಡೆಯಬಹುದು.
ಅರ್ಜಿದಾರರು 18 ರಿಂದ 55ರ ವಯೋಮಿತಿಯೊಳಗಿರಬೇಕು. ಶೈಕ್ಷಣಿಕ ಸಾಲಕ್ಕೆ 18 ರಿಂದ 32ರ ವಯೋಮಿತಿಯೊಳಗಿರಬೇಕು. ರಾಜ್ಯ ಸರ್ಕಾರದ ಯೋಜನೆ ಸಾಲ ಪಡೆಯುವವರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಾಗಿದ್ದಲ್ಲಿ 40 ಸಾವಿರಕ್ಕಿಂತ ಹಾಗೂ ಪಟ್ಟಣ ಪ್ರದೇಶದವರಾಗಿದ್ದಲ್ಲಿ 55 ಸಾವಿರಕ್ಕಿಂತ ಕಡಿಮೆ ಇರಬೇಕು.
ಎನ್‍ಬಿಸಿ, ಎಫ್‍ಡಿಸಿ ಯೋಜನೆಯಡಿ ಸಾಲ ಪಡೆಯುವವರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಾಗಿದ್ದಲ್ಲಿ 98 ಸಾವಿರಕ್ಕಿಂತ ಹಾಗೂ ಪಟ್ಟಣ ಪ್ರದೇಶದವರಾಗಿದ್ದಲ್ಲಿ 3 ಲಕ್ಷ ರೂ.ಗಳಿಗಿತ ಕಡಿಮೆ ಇರಬೇಕು.
ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ (ಕೊ.ಸಂ. 305) ಯಿಂದ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿ ಜುಲೈ 28ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ದೂ.ಸಂಖ್ಯೆ 08226-223587 ಆಯಾ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕರ ಕಚೇರಿ, ಕೇಂದ್ರ ಕಚೇರಿ ಅಥವಾ ನಿಗಮದ ವೆಬ್ ಸೈಟ್ ತಿತಿತಿ.ಞಚಿಡಿಟಿಚಿಣಚಿಞಚಿ.gov.iಟಿ/ಞvಛಿಜಛಿಟಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆ : ನಿಷೇದಾಜ್ಞೆ
ಚಾಮರಾಜನಗರ, ಜೂ. 20 - ಜಿಲ್ಲೆಯ ಎಲ್ಲ ತಾಲೂಕುಗಳ 12 ಕೇಂದ್ರಗಳಲ್ಲಿ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯು ಜೂನ್ 21 ರಿಂದ 28ರವರೆಗೆ ನಡೆಯಲಿದ್ದು ಪರೀಕ್ಷಾ ಕೇಂದ್ರಗಳ 200 ಮೀ. ವ್ಯಾಪ್ತಿಯಲ್ಲಿ ನಿಷೇದಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ.ಚಾಮರಾಜನಗರ ತಾಲೂಕಿನ 6, ಗುಂಡ್ಲುಪೇಟೆ ತಾಲೂಕಿನ 3, ಯಳಂದೂರು, ಹನೂರು, ಕೊಳ್ಳೇಗಾಲ ತಾಲೂಕು ವ್ಯಾಪ್ತಿಯ ತಲಾ ಒಂದು ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕಾರ್ಯವು ಶಾಂತಿ ಸುವ್ಯವಸ್ಥೆಯಿಂದ ನಡೆಯಬೇಕೆಂಬ ಉದ್ದೇಶದಿಂದ ಪರೀಕ್ಷಾ ದಿನಗಳಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಪರೀಕ್ಷಾ ಕೇಂದ್ರಗಳ 200 ಮೀ. ವ್ಯಾಪ್ತಿಯಲ್ಲಿ ನಿಷೇದಾಜ್ಞೆ ವಿಧಿಸಲಾಗಿದೆ. ಅಲ್ಲದೆ ಪರೀಕ್ಷಾ ಕೇಂದ್ರಗಳ 200 ಮೀ. ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿಗಳನ್ನು ಬೆಳಿಗ್ಗೆ 7 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮುಚ್ಚುವಂತೆ ಆದೇಶಿಸಲಾಗಿದೆ.
ನಿಷೇದಾಜ್ಞೆ ಆದೇಶವು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕೆಲಸಕ್ಕೆ ನಿಯೋಜಿತರಾಗಿರುವ ಸಿಬ್ಬಂದಿ ವರ್ಗಕ್ಕೆ ಅನ್ವಯವಾಗುವುದಿಲ್ಲವೆಂದು ಜಿಲ್ಲಾಧಿಕಾರಿಯವರು ಆದೇಶದಲ್ಲಿ ತಿಳಿಸಿದ್ದಾರೆ.
ಕೆ ಓ ಎಸ್ ಪೂರಕ ಪರೀಕ್ಷೆ : ನಿಷೇದಾಜ್ಞೆ
ಚಾಮರಾಜನಗರ, ಜೂ. 20 ಕರ್ನಾಟಕ ಮುಕ್ತ ಶಾಲೆ (ಕೆಓಎಸ್) ಪೂರಕ ಪರೀಕ್ಷೆಗಳು ಚಾಮರಾಜನಗರ ಪಟ್ಟಣದ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಜೂನ್ 21 ರಿಂದ 30ರವರೆಗೆ ನಡೆಯಲಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದ 200 ಮೀ. ವ್ಯಾಪ್ತಿಯಲ್ಲಿ ನಿಷೇದಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಆದೇಶಿಸಿದ್ದಾರೆ.
ಪರೀಕ್ಷಾ ಕಾರ್ಯವು ನ್ಯಾಯೋಚಿತವಾಗಿ ನಡೆಯಬೇಕೆಂಬ ಉದ್ದೇಶದಿಂದ ಪರೀಕ್ಷಾ ದಿನಗಳಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಪರೀಕ್ಷಾ ಕೇಂದ್ರದÀ 200 ಮೀ. ವ್ಯಾಪ್ತಿಯಲ್ಲಿ ನಿಷೇದಾಜ್ಞೆ ವಿಧಿಸಲಾಗಿದೆ. ಅಲ್ಲದೆ ಪರೀಕ್ಷಾ ಕೇಂದ್ರದ 200 ಮೀ. ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿಗಳನ್ನು ಮಧ್ಯಾಹ್ನ 1 ರಿಂದ ಸಂಜೆ 5.30 ಗಂಟೆಯವರೆಗೆ ಮುಚ್ಚುವಂತೆಯೂ ಆದೇಶಿಸಲಾಗಿದೆ.ನಿಷೇದಾಜ್ಞೆ ಆದೇಶವು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕೆಲಸಕ್ಕೆ ನಿಯೋಜಿತರಾಗಿರುವ ಸಿಬ್ಬಂದಿ ವರ್ಗಕ್ಕೆ ಅನ್ವಯವಾಗುವುದಿಲ್ಲವೆಂದು ಜಿಲ್ಲಾಧಿಕಾರಿಯವರು ಆದೇಶದಲ್ಲಿ ತಿಳಿಸಿದ್ದಾರೆ.
No comments:
Post a Comment