Thursday, 12 July 2018

ಆರೋಗ್ಯ ಕಾಳಜಿಗೆ ಜಿಲ್ಲಾ ನ್ಯಾಯಾಧೀಶರ ಸಲಹೆ ,ನಗರದಲ್ಲಿ ಗಮನಸೆಳೆದ ಡೆಂಗಿ ಜಾಗೃತಿ ಜಾಥಾ (12-07-2018)

ಆರೋಗ್ಯ ಕಾಳಜಿಗೆ ಜಿಲ್ಲಾ ನ್ಯಾಯಾಧೀಶರ ಸಲಹೆ 
ಚಾಮರಾಜನಗರ, ಜು. 12 - ಜೀವನದಲ್ಲಿ ಆರೋಗ್ಯವೇ ಸಂಪತ್ತಾಗಿದ್ದು ಇದನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಕಾಳಜಿ ವಹಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜಿ. ಬಸವರಾಜ ಅವರು ಸಲಹೆ ಮಾಡಿದರು. 
ನಗರದ ಜಿಲ್ಲಾ ಕಾರಾಗೃಹದಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ವೈದ್ಯಕೀಯ ವಿಜ್ಞಾನ ಸಂಸ್ಥೆ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸಂಯುಕ್ತಾಶ್ರಯದಲ್ಲಿ ವಿಚಾರಣಾಧೀನ ಕೈದಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. 
ಮನುಷ್ಯನಿಗೆ ಆರೋಗ್ಯಕ್ಕೆ ಮಿಗಿಲಾದ ಭಾಗ್ಯವಿಲ್ಲ. ಉತ್ತಮ ಆರೋಗ್ಯ ಹೊಂದಿದ್ದರೆ ನೆಮ್ಮದಿ ಜೀವನ ಸಾಗಿಸಬಹುದು. ಪ್ರತಿಯೊಬ್ಬರೂ ಕನಿಷ್ಟ 6 ತಿಂಗಳಿಗೊಮ್ಮೆಯಾದರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕೆಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.
ಎಲ್ಲ ನಾಗರಿಕರಂತೆ ವಿಚಾರಣಾಧೀನ ಕೈದಿಗಳು ಸಹ ಆರೋಗ್ಯ ಸೌಲಭ್ಯ ಪಡೆಯಬೇಕಿದೆ. ಅವರ ಆರೋಗ್ಯದ ಬಗ್ಗೆಯೂ ಮುತುವರ್ಜಿ ವಹಿಸಬೇಕಿದೆ. ಈ ನಿಟ್ಟಿನಲ್ಲಿ ವಿಚಾರಣಾಧೀನ ಕೈದಿಗಳಿಗಾಗಿಯೇ ಕಾರಾಗೃಹ ಆವರಣದಲ್ಲಿಯೇ ಆರೋಗ್ಯ ತಪಾಸಣಾಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಕೈಜೋಡಿಸಿರುವ ವೈದ್ಯಕೀಯ ವಿಜ್ಞಾನ ಸಂಸ್ಥೆ, ವಕೀಲರ ಸಂಘ, ರೆಡ್ ಕ್ರಾಸ್ ಸೊಸೈಟಿಯನ್ನು ಅಭಿನಂದಿಸುವುದಾಗಿ ನ್ಯಾಯಾಧೀಶರು ನುಡಿದರು.
ಆರೋಗ್ಯ ತಪಾಸಣಾ ಶಿಬಿರದಲ್ಲಿ ಎಲ್ಲರನ್ನು ಪರೀಕ್ಷಿಸಲಾಗುತ್ತದೆ. ಹೃದ್ರೋಗ, ರಕ್ತದೊತ್ತಡ, ಮಧುಮೇಹದಿಂದ ಬಳಲುವವರಿಗೆ ಚಿಕಿತ್ಸೆಯನ್ನು ನೀಡುವ ವ್ಯವಸ್ಥೆ ಮಾಡಲಾಗುತ್ತದೆ. ಮಾನಸಿಕ ಖಿನ್ನತೆಯಿಂದ ನರಳುವವರಿಗೆ ಸಹ ಮಾನಸಿಕ ತಜ್ಞರಿಂದ ಸಮಾಲೋಚನೆ, ಸಲಹೆಯಂತಹ ಚಿಕಿತ್ಸೆ ಸೌಲಭ್ಯ ಸಿಗಲಿದೆ. ಈ ಎಲ್ಲಾ ಆರೋಗ್ಯಪೂರಕ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.
ಚಾಮರಾಜನಗರದ ವೈದ್ಯಕೀಯ ಸಂಸ್ಥೆಯ ಮನೋವೈದ್ಯರಾದ ಡಾ. ಸುಷ್ಮಾ ಮಾತನಾಡಿ ಮಾನಸಿಕ ಒತ್ತಡ, ಖಿನ್ನತೆ, ಆತಂಕ, ಭಯಭೀತಿಗೊಳಗಾಗುವವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ವಿಶೇಷವಾಗಿ ಚಿಕಿತ್ಸೆ ನೀಡಲಾಗುತ್ತದೆ. ಹೀಗಾಗಿ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರು ಕಾರಾಗೃಹದ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಚಿಕಿತ್ಸೆ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು. 
ಉತ್ತಮ ಆಲೋಚನೆ, ಚಿಂತನೆಯತ್ತ ಮನಸ್ಸನ್ನು ಹರಿಬಿಡಬೇಕು. ಸಮಾಜದಲ್ಲಿ ಭವಿಷ್ಯದಲ್ಲಿ ನಿಮ್ಮ ನಡವಳಿಕೆಯನ್ನು ಸಕಾರಾತ್ಮವಾಗಿ ಬದಲಾಯಿಸಿಕೊಂಡರೆ ಎಲ್ಲರೂ ನಿಮ್ಮನ್ನು ಒಪ್ಪಿಕೊಳ್ಳುತ್ತಾರೆ. ಒಳ್ಳೆಯತನ ತೋರಿ ಎಲ್ಲರ ಮನಸ್ಸನ್ನು ಗೆದ್ದು ಹೊಸ ಜೀವನ ರೂಪಿಸಿಕೊಳ್ಳುವತ್ತ ನಿಮ್ಮ ಯೋಚನಾ ಲಹರಿ ಇರಲಿ ಎಂದು ಸುಷ್ಮಾ ಅವರು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಶಾಂತಶ್ರೀ ಅವರು ಆರೋಗ್ಯವು ಮನುಷ್ಯನಿಗೆ ಅತಿಮುಖ್ಯ ಎಂಬುದನ್ನು ಅರಿತು ಕಾರಾಗೃಹದಲ್ಲಿ ಕೈದಿಗಳಿಗೆ ಆಗಿಂದಾಗ್ಗೆ ಆರೋಗ್ಯಪೂರಕ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಕಾರಾಗೃಹ ಅಧಿಕಾರಿ ಸಿಬ್ಬಂದಿಯವರಿಗೂ ಸಂಪೂರ್ಣ ಆರೋಗ್ಯ ತಪಾಸಣೆ ಮಾಡುವ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಪ್ರತಿಯೊಬ್ಬರೂ ಶುಚಿತ್ವಕ್ಕೆ ಮಹತ್ವ ನೀಡಬೇಕು. ಆರೋಗ್ಯಪಾಲನೆಗೆ ಗಮನವಹಿಸಬೇಕು ಎಂದರು.  
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಸಿ.ಜಿ. ವಿಶಾಲಾಕ್ಷಿಮ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್, ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಡಿವೈಎಸ್‍ಪಿ ಟಿ. ಜಯಕುಮಾರ್,  ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಕಾರ್ಯದರ್ಶಿ ಡಾ. ಸುಷ್ಮಾ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನಗರದಲ್ಲಿ ಗಮನಸೆಳೆದ ಡೆಂಗಿ ಜಾಗೃತಿ ಜಾಥಾ

ಚಾಮರಾಜನಗರ, ಜು. 12 - ಜನರನ್ನು ಕಾಡುವ ಡೆಂಗಿ ಜ್ವರ ಹಾಗೂ ಇದರ ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಮುಂಜಾಗರೂಕತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ನಗರದಲ್ಲಿ ನಡೆಸಿದ ಜಾಥಾ ಜನರ ಗಮನಸೆಳೆಯಿತು.

ನಗರದ ಜಿಲ್ಲಾಡಳಿತ ಭವನದ ಆವರಣÀದಲ್ಲಿ ಮೊದಲಿಗೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಡೆಂಗಿ ವಿರೋಧಿ ಮಾಸಾಚರಣೆ ಹಿನ್ನೆಲೆಯಲ್ಲಿ ನಡೆದ ಜನಜಾಗೃತಿ ಜಾಥಾಗೆ ಹಸಿರು ನಿಶಾನೆ ತೋರಿ ಚಾಲನೆ ಕೊಟ್ಟರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ಉಪವಿಭಾಗಾಧಿಕಾರಿ ಫೌಜಿಯಾ ತರನುಮ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್. ಪ್ರಸಾದ್ ಜಾಗೃತಿ ಜಾಥಾಗೆ ಶುಭ ಹಾರೈಸಿದರು.
ಜಿಲ್ಲಾಡಳಿತ ಭವನದ ಆವರಣದಿಂದ ಹೊರಟ ಜಾಥಾದಲ್ಲಿ ಸರ್ಕಾರಿ ನರ್ಸಿಂಗ್ ಶಾಲೆ, ಮನೋನಿಧಿ ಹಾಗೂ ಜೆಎಸ್‍ಎಸ್ ನರ್ಸಿಂಗ್ ಶಾಲೆಗಳ ಶುಶ್ರೂಷಕ ವಿದ್ಯಾರ್ಥಿಗಳು, ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು, ಸಿಬ್ಬಂದಿ ಸಹ ಪಾಲ್ಗೊಂಡರು.
ಬಿ.ರಾಚಯ್ಯ ಜೋಡಿ ರಸ್ತೆ, ಜಗಜೀವನರಾಮ್ ನಗರ ಬಡಾವಣೆ, ನ್ಯಾಯಾಲಯ ರಸ್ತೆ, ಹೌಸಿಂಗ್ ಬೋರ್ಡ್ ಕಾಲೋನಿಗಳಲ್ಲಿ ಸಂಚರಿಸಿದ ಜಾಥಾದಲ್ಲಿ ‘ಸ್ವಚ್ಚತೆ ಕಾಪಾಡಿ ಡೆಂಗಿ ಹೋಗಲಾಡಿಸಿ’, ಶೇಖರಿಸಿದ ನೀರನ್ನು ಮುಚ್ಚಿಡಿ, ವಾರಕ್ಕೆ ಎರಡು ಬಾರಿ ನೀರು ಸಂಗ್ರಹಣಾ ತಾಣಗಳನ್ನು ಸ್ಚಚ್ಚಗೊಳಿಸಿ, ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಲು ಮುಂಜಾಗರೂಕತಾ ಕ್ರಮ ವಹಿಸಿ ಎಂಬಸಸ ಆರೋಗ್ಯ ಜಾಗೃತಿಯ ಭಿತ್ತಿ ಫಲಕಗಳನ್ನು ಪ್ರದರ್ಶಿಸಲಾಯಿತು.
ಅಂತಿಮವಾಗಿ ಡಾ. ಬಿ.ಆರ್. ಅಂಬೇಡ್ಕರ್ ಉದ್ಯಾನವನದಲ್ಲಿ ಡೆಂಗ್ಯೂ ವಿರೋಧಿ ಅರಿವು ಜಾಥಾ ಸಮಾವೇಶಗೊಂಡಿತು.
ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಅನಿಲ್ ಕುಮಾರ್, ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ರಾಜು, ಡಾ. ನಾಗರಾಜು, ಡಾ. ವಿಶ್ವೇಶ್ವರಯ್ಯ ಇತರರು ಭಾಗವಹಿಸಿದ್ದರು.


ಕಬ್ಬಿಣ ಪೈಪುಗಳ ಬಹಿರಂಗ ಹರಾಜು

ಚಾಮರಾಜನಗರ, ಜು. 12  ಯಳಂದೂರು ಪಟ್ಟಣ ಪಂಚಾಯಿತಿಯು ಬಳೆ ಪೇಟೆಯ ಸೇತುವೆ ಮೇಲೆ ಅಳವಡಿಸಿದ್ದ ಕುಡಿಯುವ ನೀರಿನ ಕಬ್ಬಿಣದ (ಕಾಸ್ಟ್ ಐರನ್) ಪೈಪುಗಳನ್ನು ತುರ್ತಾಗಿ ತೆರವುಗೊಳಿಸಬೇಕಿರುವ ಹಿನ್ನೆಲೆಯಲ್ಲಿ ಪೈಪುಗಳನ್ನು ಸೇತುವೆ ಮೇಲೆ ಹೇಗೆ ಅಳವಡಿಸಲಾಗಿದೆಯೋ ಹಾಗೆಯೇ ಸದರಿ ಸ್ಥಳದಲ್ಲಿಯೇ ಜುಲೈ 16ರಂದು ಬೆಳಿಗ್ಗೆ 11 ಗಂಟೆಗೆ ಬಹಿರಂಗ ಹರಾಜು ಮಾಡಲಿದೆ.
ಹರಾಜು ಪ್ರಕ್ರಿಯೆ ಸಂಬಂಧ ಮಾಹಿತಿಗಾಗಿ ಪಟ್ಟಣ ಪಂಚಾಯಿತಿ ಕಾರ್ಯಾಲಯ ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
ಕಬಿನಿ ನದಿಯಿಂದ ನೀರು : ಮುನ್ನೆಚ್ಚರಿಕೆ ವಹಿಸಲು ಸೂಚನೆ
ಚಾಮರಾಜನಗರ, ಜು. 12 - ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿದ್ದು ಜಲಾಶಯವು ಗರಿಷ್ಟ ಮಟ್ಟ ತಲುಪುತ್ತಿರುವುದರಿಂದ ಯಾವುದೇ ಸಂದರ್ಭದಲ್ಲಿ ನದಿಗೆ ಹೆಚ್ಚು ನೀರು ಬಿಡುವ ಸಂಭವವಿರುವ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯ ನದಿ ತಗ್ಗು ಪ್ರದೇಶದಲ್ಲಿರುವ ಹಾಗೂ ದಂಡೆಗಳಲ್ಲಿ ವಾಸಿಸುವ ಜನರು ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಸೂಚಿಸಿದ್ದಾರೆ.
ಯಾವುದೇ ಸಂದರ್ಭದಲ್ಲಿ ನದಿಗೆ ಹೆಚ್ಚು ನೀರು ಬಿಡುವ ಸಂಭವವಿರುವುದಾಗಿ ಹೆಚ್.ಡಿ. ಕೋಟೆಯ ಕಬಿನಿ ಜಲಾಶಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಮಾಹಿತಿ ನೀಡಿದ್ದಾರೆ. ಹೀಗಾಗಿ ಜಿಲ್ಲಾ ವ್ಯಾಪ್ತಿಯ ಕಬಿನಿ ನದಿಯ ತಗ್ಗು ಪ್ರದೇಶದಲ್ಲಿರುವ ಮತ್ತು ದಂಡೆಗಳಲ್ಲಿ ವಾಸಿಸುತ್ತಿರುವ ಜನರು ಅವರ ಆಸ್ತಿಪಾಸ್ತಿ, ಜಾನುವಾರು ರಕ್ಷಣೆಗೆ ಮುನ್ನೆಚ್ಚರಿಕೆ ವಹಿಸಬೇಕು. ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮನೆ ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ಚಾಮರಾಜನಗರ, ಜು. 12 - ಗ್ರಾಮೀಣ ಮತ್ತು ನಗರ ಪ್ರದೇಶಗಳ ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ವಾಸದ ಮನೆಗಳನ್ನು ಸಕ್ರಮಗೊಳಿಸಲು ಅರ್ಜಿ ಸ್ವೀಕರಿಸುವ ಅವಧಿಯನ್ನು ಸೆಪ್ಟೆಂಬರ್ 16ರವರೆಗೆ ವಿಸ್ತರಿಸಲಾಗಿದೆ.
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿರುವ ವಾಸದ ಮನೆಗಳನ್ನು ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 94ಸಿ ಮತ್ತು 94ಸಿಸಿ ಅಡಿಯಲ್ಲಿ ಸಕ್ರಮಗೊಳಿಸಲು ತಿದ್ದುಪಡಿ ತಂದು ಅರ್ಜಿ ಸ್ವೀಕಾರಕ್ಕೆ ಕಾಲಾವಕಾಶ ನೀಡಲಾಗಿದೆ. ನಾಗರಿಕರು ಸಕ್ರಮಗೊಳಿಸಿಕೊಳ್ಳಲು ಅರ್ಜಿ ಸಲ್ಲಿಸಬಹುದೆಂದು ಗುಂಡ್ಲುಪೇಟೆ ತಾಲೂಕು ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಸ್ತಿ, ಇತರೆ ಕ್ರೀಡಾಪಟುಗಳಿಗೆ ಮಾಸಾಶನ ಸೌಲಭ್ಯ
ಚಾಮರಾಜನಗರ, ಜು. 12 - ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಆರ್ಥಿಕವಾಗಿ ಸÀಂಕಷ್ಟದಲ್ಲಿರುವ ಕುಸ್ತಿ ಹಾಗೂ ಇತರೆ ಕ್ರೀಡಾಪಟುಗಳಿಗೆ ಮಾಸಾಶನ ನೀಡಲಿದೆ.
ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ವಿಜೇತರಾದದವರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಅಥವಾ ದೂ.ಸಂ. 08226-224932 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.



ಹೈಬ್ರಿಡ್ ತರಕಾರಿ ಬೆಳೆಗೆ ಸಹಾಯಧನ

ಚಾಮರಾಜನಗರ, ಜು. 12 - ತೋಟಗಾರಿಕೆ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಹೈಬ್ರೀಡ್ ತರಕಾರಿ ಪ್ರದೇಶ ವಿಸ್ತರಣೆ (ಟೊಮೆಟೊ, ಮೆಣಸಿನಕಾಯಿ, ಬದನೆ, ಕ್ಯಾರೆಟ್, ಹೂಕೋಸು, ಎಲೆಕೋಸು ಇತ್ಯಾದಿ ಹೈಬ್ರೀಡ್ ತರಕಾರಿಗಳು) ಕಾರ್ಯಕ್ರಮದಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಗರಿಷ್ಟ 1 ಹೆಕ್ಟೇರ್ ಪ್ರದೇಶಕ್ಕೆ 20 ಸಾವಿರ ರೂ.ನಷ್ಟು ಸಹಾಯಧನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಹೈಬ್ರೀಡ್ ಬೆಳೆ ನಾಟಿ ಮಾಡಿರುವ ರೈತರು ಅರ್ಜಿ ನಮೂನೆ, ಭಾವಚಿತ್ರ, ಪಹಣಿ, ಚೆಕ್‍ಬಂದಿ, ಕಂದಾಯ ಇಲಾಖೆಯ ಗಣಕೀಕೃತ ಬೆಳೆ ದೃಢೀಕರಣ, ಎಲೆಕ್ಷನ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್, ತರಕಾರಿ ಸಸಿ, ಬೀಜ ಖರೀದಿಸುವ ಬಿಲ್ಲು, ಫಲಾನುಭವಿಯೊಂದಿಗೆ ತಾಕಿನ ಫೋಟೋ ಇತ್ಯಾದಿ ಅಗತ್ಯ ದಾಖಲಾತಿಗಳೊಂದಿಗೆ ಆಯÁ ತಾಲೂಕಿನ ತೋಟಗಾರಿಕೆ ಕಚೇರಿಗೆ ಜುಲೈ 25ರೊಳಗೆ ಸಲ್ಲಿಸಿ ಹೆಸರು ನೊಂದಾಯಿಸಿಕೊಂಡು ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಜಿ ಸೈನಿಕರ ಮಕ್ಕಳಿಗೆ ನಗದು ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಚಾಮರಾಜನಗರ, ಜು. 12- 2017-18ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ.60 ಮೇಲ್ಪಟ್ಟು ಅಂಕಗಳನ್ನು ಪಡೆದ ಚಾಮರಾಜನಗರ ಜಿಲ್ಲಾ ವ್ಯಾಪ್ತಿಗೆ ಒಳಪಟ್ಟ ಕರ್ನಾಟಕದ ಮೂಲ ನಿವಾಸಿ ಮಾಜಿ ಸೈನಿಕರ ಮಕ್ಕಳಿಗೆ ಜನರಲ್ ಕೆ.ಎಸ್. ತಿಮ್ಮಯ್ಯ ನಗದು ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಮೈಸೂರಿನ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯದಲ್ಲಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 31 ಆಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಪರಿಶಿಷ್ಟ ಜಾತಿ ಸಾಹಿತಿಗಳ ಕೃತಿ ಪ್ರಕಟಣೆಗಾಗಿ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

ಚಾಮರಾಜನಗರ, ಜು. 12- ಕನ್ನಡ ಪುಸ್ತಕ ಪ್ರಾಧಿಕಾರವು ಪರಿಶಿಷ್ಟ ಜಾತಿ ಸಾಹಿತಿಗಳ ಕೃತಿ ಪ್ರಕಟಣೆಗೆ ತಲಾ 35 ಸಾವಿರ ರೂ. ಪ್ರೋತ್ಸಾಹಧನ ನೀಡುವ ಯೋಜನೆ ರೂಪಿಸಿದ್ದು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿದಾರರು ಕಡ್ಡಾಯವಾಗಿ ತಮ್ಮ ಆರ್ ಡಿ ನಂಬರ್ ಇರುವ ಜಾತಿ ಪ್ರಮಾಣ ಪತ್ರದೊಂದಿಗೆ ಎ4 ಸೈಜ್ ಹಾಳೆಯಲ್ಲಿ ಡಿಟಿಪಿ ಮಾಡಿದ ಕನಿಷ್ಟ 200 ಪುಟಗಳಿರುವ ಕೃತಿಯನ್ನು ಸಲ್ಲಿಸಬಹುದಾಗಿದೆ.
ಈಗಾಗಲೇ ಸಾಹಿತ್ಯ ಕೃತಿಗಳು ಪ್ರಕಟವಾಗಿರುವ ಲೇಖಕರೂ ಕೂಡ ಅರ್ಜಿ ಸಲ್ಲಿಸಲು ಅವಕಾಶವಿದೆ. 18 ವರ್ಷ ಮೇಲ್ಪಟ್ಟ ಯಾವುದೇ ಲೇಖಕರೂ ಕೂಡ ಅರ್ಜಿಗಳನ್ನು ಸಲ್ಲಿಸಬಹುದು. ಆಯ್ಕೆಗಾಗಿ ಸಲ್ಲಿಸುವ ಹಸ್ತ ಪ್ರತಿಯು ಸೃಜನಶೀಲ, ಸೃಜನೇತರ ಸಾಹಿತ್ಯವಾಗಿರಬೇಕು. ಅನುವಾದಗಳನ್ನು, ಪಠ್ಯಪುಸ್ತಕಗಳನ್ನು ಹಾಗೂ ಬೇರಾವುದೇ ಪದವಿಗಾಗಿ ಸಿದ್ಧಪಡಿಸಿರುವ ಪ್ರಬಂಧಗಳನ್ನು ಪರಿಗಣಿಸಲಾಗುವುದಿಲ್ಲ.
ಪ್ರಾಧಿಕಾರಕ್ಕೆ ಸಲ್ಲಿಸಲ್ಪಡುವ ಅರ್ಜಿಗಳನ್ನು, ಹಸ್ತ ಪ್ರತಿಗಳನ್ನು ಹಿಂದಿರುತಿಸಲಾಗುವುದಿಲ್ಲ. ಆಡಳಿತಾಧಿಕಾರಿಗಳೂ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆಸಿ ರಸ್ತೆ, ಬೆಂಗಳೂರು-560002 ಈ ವಿಳಾಸಕ್ಕೆ ಜುಲೈ 21ರ ಒಳಗಾಗಿ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಮೊದಲನೇ ಮಹಡಿ, ಜೆಸಿ ರಸ್ತೆ, ಬೆಂಗಳೂರು, ವೆಬ್ ಸೈಟ್ ತಿತಿತಿ.ಞಚಿಟಿಟಿಚಿಜಚಿಠಿushಚಿಞಚಿಠಿಡಿಚಿಜhiಞಚಿಡಿಚಿ@gmಚಿiಟ.ಛಿom ದೂರವಾಣಿ ಸಂಖ್ಯೆ 080-22484516, 22017704 ಇಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.



No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು