ಕುಡಿಯುವ ನೀರಿನ ಕಾಮಗಾರಿ ತ್ವರಿತ ಪೂರ್ಣಗೊಳಿಸಿ : ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಸೂಚನೆ
ಚಾಮರಾಜನಗರ, ಸೆಪ್ಟೆಂಬರ್ 25 :- ಜಿಲ್ಲೆಯಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ವಿಳಂಬ ಮಾಡದೇ ಆದ್ಯತೆ ಮೇರೆಗೆ ತ್ವರಿತವಾಗಿ ಪೂರ್ಣಗೊಳಿಸಬೇಕು. ವಿಶೇಷವಾಗಿ ಅರಣ್ಯ ಭಾಗಗಳಲ್ಲಿ ವಾಸಿಸುತ್ತಿರುವ ಜನರಿಗಾಗಿ ಕೈಗೆತ್ತಿಕೊಂಡಿರುವ ಕುಡಿಯುವ ನೀರಿನ ಕಾಮಗಾರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿ ಮಾಡಬಾರದು ಎಂದು ಪಶುಸಂಗೋಪನೆ, ರೇμÉ್ಮ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಕೆಡಿಪಿ ಸಭಾಂಗಣದಲ್ಲಿಂದು ಜಿಲ್ಲಾಮಟ್ಟದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕುಡಿಯುವ ನೀರಿನ ಕಾಮಗಾರಿಗಳನ್ನು ವೇಗವಾಗಿ ಮುಗಿಸಿ ಜನರಿಗೆ ನೀರು ಒದಗಿಸುವುದು ಆದ್ಯತೆಯಾಗಿದೆ. ಅರಣ್ಯ ಭಾಗದ ಜನರಿಗೆ ಕುಡಿಯುವ ನೀರಿಗಾಗಿ ಈಗಾಗಲೇ ಜಾರಿಗೊಳಿಸಲಾಗುತ್ತಿರುವ ಯೋಜನೆಗಳಿಗೆ ಅಡಚಣೆ ಮಾಡಬಾರದು. ಪೋಡುಗಳಲ್ಲಿ ಕುಡಿಯುವ ನೀರು ಪೂರೈಸಲು ಅವಕಾಶ ಮಾಡಿಕೊಡಬೇಕು. ವಿಳಂಬ ಧೋರಣೆ ಅನುಸರಿಸಬಾರದು ಎಂದು ಸಚಿವರು ತಿಳಿಸಿದರು.
ಜಲಜೀವನ್ ಮಿಷನ್ ಯೋಜನೆಯಡಿ ಇನ್ನೂ ಎಷ್ಟು ಭಾಗಗಳಲ್ಲಿ ಕಾಮಗಾರಿ ಅಪೂರ್ಣವಾಗಿದೆ. ಇದುವರೆಗೆ ಎಷ್ಟು ಕಾಮಗಾರಿ ನಿರ್ವಹಿಸಿ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಪ್ರಶ್ನಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಈ ಕುರಿತು ಸಮಗ್ರ ವರದಿಯನ್ನು ಸಲ್ಲಿಸಬೇಕು ಎಂದರು. ಜಿಲ್ಲೆಯಲ್ಲಿ ಬರ ಇರುವುದರಿಂದ ಕುಡಿಯುವ ನೀರಿನ ಪೂರೈಕೆಯನ್ನು ಸಮರ್ಪಕವಾಗಿ ಕೈಗೊಳ್ಳಬೇಕು. ಸಮಸ್ಯಾತ್ಮಕ ಗ್ರಾಮಗಳಿಗೆ ನೀರು ಒದಗಿಸುವುದು ಅತ್ಯಂತ ತುರ್ತು ಕೆಲಸವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಇದೇ ವೇಳೆ ಮಾತನಾಡಿದ ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಪುರಾಣಿಪೋಡುವಿನಲ್ಲಿ ಕುಡಿಯುವ ನೀರಿಗೆ ತಕ್ಷಣವೇ ಕ್ರಮವಾಗಬೇಕು. ಆದಿವಾಸಿ ಕಾಲೋನಿಗಳ ಜನರು ಕಷ್ಟದಲ್ಲಿದ್ದಾರೆ. ಅವರ ಮೂಲ ಸೌಕರ್ಯಗಳಿಗೆ ಕೊರತೆಯಾಗಬಾರದು. ಮನೆಗಳ ಸೌಲಭ್ಯಕ್ಕೂ ಅವಕಾಶವಾಗಿದೆ. ಆದಷ್ಟು ಬೇಗನೆ ಜನರಿಗೆ ಸೌಕರ್ಯಗಳನ್ನು ಕಲ್ಪಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಶಾಸಕರಾದ ಎಂ.ಆರ್. ಮಂಜುನಾಥ್ ಅವರು ಮಾತನಾಡಿ ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ತೊಂದರೆ ನೀಗಿಸಲು ಹೆಚ್ಚಿನ ಅನುದಾನ ಅಗತ್ಯವಿದ್ದು, ಶೀಘ್ರ ಒದಗಿಸಬೇಕು. ಜೆ.ಜೆ.ಎಂ ಕಾಮಗಾರಿ ನಡೆದಿದೆ, ಆದರೆ ಪರಿಪೂರ್ಣವಾಗಿಲ್ಲ. ಈ ಬಗ್ಗೆ ಸಂಪೂರ್ಣವಾಗಿ ಪರಿಶೀಲನೆಯಾಗಬೇಕು ಎಂದರು.
ಶಾಸಕರಾದ ಹೆಚ್.ಎಂ. ಗಣೇಶ್ ಪ್ರಸಾದ್ ಅವರು ಸಹ ಮಾತನಾಡಿ ಸಮಸ್ಯಾತ್ಮಕ ಗ್ರಾಮಗಳಿಗೆ ನೀರು ಪೂರೈಸಲು ಅಗತ್ಯಕ್ಕನುಗುಣವಾಗಿ ಅನುದಾನವನ್ನು ಹಂಚಿಕೆ ಮಾಡಬೇಕು. ಗಂಭೀರವಾಗಿ ಕ್ರಮ ತೆಗೆದುಕೊಂಡರೆ ಸಮಸ್ಯೆಗಳು ಪರಿಹಾರವಾಗಲಿದೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಯೋಜನಾ ಬದ್ದವಾಗಿ ತೆಗೆದುಕೊಳ್ಳುವಂತೆ ತಿಳಿಸಿದರು.
ಮೇವು ಲಭ್ಯತೆ ಬಗ್ಗೆ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಈಗಾಗಲೇ ಮೇವು ಬೆಳೆಯಲು ಮೇವಿನ ಕಿಟ್ ಗಳನ್ನು ನೀಡಲಾಗುತ್ತಿದೆ. ನೀರು ಲಭ್ಯತೆ ಇರುವ ಕಡೆ ಮೇವಿನ ಕಿಟ್‍ಗಳನ್ನು ಹೆಚ್ಚು ನೀಡಿ ಮೇವು ಬೆಳೆಸಲು ಉತ್ತೇಜಿಸಬೇಕು. ಎಲ್ಲಿ ಮೇವಿಗೆ ಅಭಾವ ಇದೆಯೋ ಅಂತಹ ಕಡೆ ಮೇವಿನ ಕಿಟ್‍ಗಳನ್ನು ವಿತರಣೆಗೆ ಕೂಡಲೇ ಮುಂದಾಗಬೇಕು. ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿರುವ ಮೇವಿನ ಕಿಟ್‍ಗಳನ್ನು ಒದಗಿಸಲಾಗುವುದು ಎಂದರು.
ಕೃಷಿ, ತೋಟಗಾರಿಕೆ ಬೆಳೆಗಳ ಕುರಿತು ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವರು ನೀರಿಲ್ಲದೆ ಅರಿಶಿಣ, ಆಲೂಗಡ್ಡೆ, ಬೆಳ್ಳುಳ್ಳಿ ಸೇರಿದಂತೆ ಇನ್ನಿತರ ಬೆಳೆಗಳು ನಷ್ಟವಾಗಿವೆ. ಅಧಿಕಾರಿಗಳು ನೀಡುವ ವರದಿಯಲ್ಲಿ ನಷ್ಟವಾಗಿರುವ ಎಲ್ಲ ಬೆಳೆಗಳ ಮಾಹಿತಿ ನಿಖರವಾಗಿ ಇರುವಂತೆ ನಿಗಾ ವಹಿಸಬೇಕು. ಇಲಾಖೆ ಕಾರ್ಯಕ್ರಮಗಳು, ಯೋಜನೆಗಳನ್ನು ಅನುಷ್ಠಾನ ಮಾಡುವಾಗ ಜನರಿಗೆ ಮಾಹಿತಿ ನೀಡಬೇಕು ಎಂದು ಸಚಿವರು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಲವೆಡೆ ಅವೈಜ್ಞಾನಿಕವಾಗಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದ ಸಚಿವರು ಅಪಘಾತಗಳು ಸಂಭವಿಸದಂತೆ ಸೂಚನಾ ಫಲಕಗಳು, ವಿದ್ಯುತ್ ದೀಪ, ಸಂಚಾರಿ ನಿಯಮಗಳ ಮಾಹಿತಿಯನ್ನು ಅಳವಡಿಸಬೇಕು ಎಂದರು. ಇದೇ ವೇಳೆ ಶಾಸಕರಾದ ಎಂ.ಆರ್. ಮಂಜುನಾಥ್ ಅವರು ಸತ್ತೇಗಾಲ ಬೈಪಾಸ್ ಬಳಿ ಹೈಮಾಸ್ಟ್ ಲೈಟ್ ಹಾಕದಿರುವುದರಿಂದ ಈಗಾಗಲೇ ಗಂಭೀರ ಅಪಘಾತಗಳು ಸಂಭವಿಸುತ್ತಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳು ಶೀಘ್ರ ಈ ಬಗ್ಗೆ ಕ್ರಮ ವಹಿಸಬೇಕು ಎಂದರು. ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಸಹ ತಮ್ಮ ಕ್ಷೇತ್ರ ವ್ಯಾಪ್ತಿಯ ಹೆದ್ದಾರಿಗಳಲ್ಲೂ ಸಂಚಾರ ಫಲಕಗಳಿಲ್ಲ. ಹಲವೆಡೆ ಅವೈಜ್ಞಾನಿಕ ಕಾಮಗಾರಿಯಿಂದ ತೊಂದರೆಯಾಗಿದೆ ಎಂದರು. ಶಾಸಕರಾದ ಹೆಚ್.ಎಂ. ಗಣೇಶ್ ಪ್ರಸಾದ್ ಅವರು ಗುಂಡ್ಲುಪೇಟೆ ಭಾಗದ ಹೆದ್ದಾರಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ಅಡಚಣೆಯಾಗುತ್ತಿರುವ ಕಾರಣ ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆಯಾಗುತ್ತಿದೆ ಎಂದು ಗಮನಸೆಳೆದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ವಹಿಸುತ್ತಿರುವ ಅಂಗನವಾಡಿಗಳ ಕುರಿತು ಪರಾಮರ್ಶಿಸಿದ ಉಸ್ತುವಾರಿ ಸಚಿವರು ಎಷ್ಟು ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳು ಇವೆ.? ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಇನ್ನೂ ಎಷ್ಟು ನಿವೇಶನಗಳ ಅಗತ್ಯವಿದೆ ಎಂಬ ಬಗ್ಗೆ ವಿವರ ಪಡೆದುಕೊಂಡರು. ಜಿಲ್ಲಾಧಿಕಾರಿ ಶ್ರೀರೂಪ ಅವರು ಅಂಗನವಾಡಿಗಳಿಗೆ ಒದಗಿಸಲಾಗಿರುವ ನಿವೇಶನಗಳ ಬಗ್ಗೆ ಮಾಹಿತಿ ನೀಡಿದರು.
ಆರೋಗ್ಯ ಇಲಾಖೆಯ ಪರಿಶೀಲನೆ ವೇಳೆ ಔಷಧಗಳ ದಾಸ್ತಾನು ಸಮರ್ಪಕವಾಗಿ ಇಟ್ಟುಕೊಳ್ಳುವಂತೆ ಉಸ್ತುವಾರಿ ಸಚಿವರು ಸೂಚಿಸಿದರು. ಹಾವು, ನಾಯಿ ಕಡಿತದಂತಹ ಸಂದರ್ಭಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಔಷಧ ಇರಬೇಕು. ಆಸ್ಪತ್ರೆಗಳಲ್ಲಿ ತ್ವರಿತವಾಗಿ ವೈದ್ಯರ ಸೇವೆ ಔಷದೋಪಚಾರ ಲಭ್ಯವಾಗಬೇಕು. ಆಸ್ಪತ್ರೆಗೆ ಬರುವ ಜನರೊಂದಿಗೆ ಮಾನವೀಯತೆಯಿಂದ ನಡೆದುಕೊಳ್ಳಬೇಕು ಎಂದು ತಿಳಿಸಿದರು.
ಕೆರೆಗಳಿಗೆ ಸಮರ್ಪಕವಾಗಿ ನೀರು ತುಂಬಿಸುವುದು, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ, ಗ್ರಾಮೀಣ ವಸತಿ ಯೋಜನೆ, ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ರೇಷ್ಮೆ ಇಲಾಖೆ, ಮೀನುಗಾರಿಗೆ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಆಹಾರ ಇಲಾಖೆ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ, ಪ್ರಾದೇಶಿಕ ಸಾರಿಗೆ ಇಲಾಖೆ, ಸಣ್ಣ ನೀರಾವರಿ, ಶಾಲಾ ಶಿಕ್ಷಣ ಇಲಾಖೆ, ಅಬಕಾರಿ ಇಲಾಖೆ, ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಸುಧೀರ್ಘವಾಗಿ ಪರಿಶೀಲಿಸಿದರು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ವಿವರವಾಗಿ ಸಭೆಯಲ್ಲಿ ಪರಾಮರ್ಶಿಸಲಾಯಿತು.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಪುಷ್ಪ ಅಮರನಾಥ್, ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ, ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಿ.ಸಿ. ಶೃತಿ, ಕೆಡಿಪಿ ಸಮಿತಿ ಸದಸ್ಯರಾದ ಶಂಕರಪ್ಪ, ಭವ್ಯ ಮುನಿರಾಜು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.