ಪ್ರಕೃತಿ ವಿಕೋಪ ಪರಿಹಾರ ಸಮರ್ಪಕ ನಿರ್ವಹಣೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ
ಚಾಮರಾಜನಗರ, ಜು. 29 - ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಅಧಿಕಾರಿಗಳು ಅತ್ಯಂತ ಜವಾಬ್ದಾರಿಯುತವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕರ್ತವ್ಯ ನಿರ್ವಹಿಸುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವರಿ ಕಾರ್ಯದರ್ಶಿಯವರಾದ ರಾಜೇಂದರ್‍ಕುಮಾರ್ ಕಠಾರಿಯಾ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯಿಂದ ಮಳೆಯಿಂದ ಅಗಿರುವ ಹಾನಿ, ಪರಿಹಾರೋಪಾಯಗಳು ಮತ್ತು ಇತರೆ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಳೆ, ಪ್ರವಾಹದಂತಹ ಸಂದರ್ಭಗಳಲ್ಲಿ ಅಧಿಕಾರಿಗಳು ಮುತುವರ್ಜಿಯಿಂದ ಕೆಲಸ ನಿರ್ವಹಿಸಬೇಕು. ಆದಷ್ಟು ಮುಂಜಾಗರುಕತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಯಾವುದೇ ತೊಂದರೆಗೆ ಅವಕಾಶವಾಗದಂತೆ ಪೂರ್ವಭಾವಿಯಾಗಿ ಅಗತ್ಯ ಸಿದ್ದತೆ ಕೆಲಸಗಳನ್ನು ನಿರ್ವಹಿಸಿರಬೇಕು ಎಂದರು.
ಜಿಲ್ಲೆಯ ಬೆಳೆ, ಜಾನುವಾರುಳಿಗೆ ಲಭ್ಯವಿರುವ ಮೇವು ಕುರಿತು ಮಾಹಿತಿ ನೀಡುವ ವೇಳೆ ಉತ್ತರಿಸಿದ ಅಧಿಕಾರಿಗಳು ಮೇವು ದಾಸ್ತಾನು ಸಾಕಷ್ಟು ಇದೆ. ರಸಗೊಬ್ಬರ, ಬಿತ್ತನೆಬೀಜ ಕೊರತೆಯು ಇಲ್ಲ. ಬೇಡಿಕೆಗೆ ಅನುಸಾರವಾಗಿ ನೀಡಲು ಕ್ರಮ ವಹಿಸಲಾಗುತ್ತಿದೆ ಎಂದರು.
ಪ್ರತಿ ಇಲಾಖೆಗಳು ಆಯಾ ಯೋಜನೆ ಕಾರ್ಯಕ್ರಮಗಳನ್ನು ವಿಳಂಬ ಮಾಡದೆ ಅನುಷ್ಠಾನ ಮಾಡಬೇಕು. ನಿಗಧಿತ ಗುರಿಯನ್ನು ಕಾಲಮಿತಿಯೊಳಗೆ ತಲುಪಬೇಕು. ಕಾರ್ಯಕ್ರಮ ಅನುಷ್ಟಾನದಲ್ಲಿ ಸೂಚಿಸಲಾಗುವ ಪ್ರಗತಿಯನ್ನು ಸಾಧಿಸಬೇಕು ಎಂದು ಉಸ್ತುವಾರಿ ಕಾರ್ಯದಶಿಯವರು ತಿಳಿಸಿದರು.
ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಹಾನಿ ಹಾಗೂ ಕೈಗೊಂಡಿರುವ ಪರಿಹಾರ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ವಿವರವಾಗಿ ಮಾಹಿತಿ ನೀಡಿದರು. ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿಯವರು ಉಸ್ತುವಾರಿ ಕಾರ್ಯದರ್ಶಿಯವರು ಸೂಚಿಸಿರುವ ಕೆಲಸಗಳನ್ನು ಚಾಚು ತಪ್ಪದೇ ನಿರ್ವಹಿಸಬೇಕು. ಇಲಾಖೆಯ ಅಧಿಕಾರಿಗಳು ವಿಪತ್ತು ಸಂದರ್ಭದಲ್ಲಿ ತುರ್ತಾಗಿ ತೊಡಗಿಸಿಕೊಳ್ಳಬೇಕು. ಪರಿಹಾರ ಕ್ರಮಗಳಿಗೆ ಆದ್ಯತೆ ನೀಡಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಉಪವಿಭಾಗಾಧಿಕಾರಿ ಫೌಜಿಯಾ ತರನ್ನುಂ, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಬಂಡೀಪುರದಲ್ಲಿ ವಿಶೇಷ ಅಂಚೆ ಲಕೋಟೆ ಬಿಡುಗಡೆ: ಅಂತರಾಷ್ಟ್ರೀಯ ಹುಲಿ ದಿನ ಆಚರಣೆ
ಬಂಡೀಪುರ ಕ್ಯಾಂಪಸ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಅಂಚೆ ಲಕೋಟೆಯನ್ನು ಶಾಸಕರಾದ ಸಿ.ಎಸ್. ನಿರಂಜನ್‍ಕುಮಾರ್ ಬಿಡುಗಡೆ ಮಾಡಿದರು. ಅಂತರಾಷ್ಟ್ರೀಯ ಹುಲಿ ದಿನಾಚರಣೆಯಂದು ಅಂಚೆ ಇಲಾಖೆಯು ಹುಲಿ ಹೆಜ್ಜೆಯನ್ನು ಒಳಗೊಂಡ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಿರುವುದು ವಿಶೇಷವಾಗಿದೆ. ಈ ಅಪರೂಪದ ಅವಕಾಶವನ್ನು ಜಿಲ್ಲೆಯ ಬಂಡೀಪುರ ಪಡೆದುಕೊಂಡು ಹೆಗ್ಗಳಿಕೆಗೆ ಪಾತ್ರವಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರಾದ ಸಿ.ಎಸ್. ನಿರಂಜನ್‍ಕುಮಾರ್ ಅರಣ್ಯ ಕಾಪಾಡುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಅರಣ್ಯ ಸಂರಕ್ಷಣೆಯಿಂದ ಮಳೆ, ಬೆಳೆ ಸಾಧ್ಯವಾಗುತ್ತದೆ. ಈ ಹಿಂದಿಗಿಂತಲೂ ಅರಣ್ಯ ಪೋಷಣೆಗೆ ಇಲಾಖೆ ಇತ್ತೀಚೆಗೆ ಹೆಚ್ಚು ಕಾಳಜಿ ವಹಿಸಿದೆ ಎಂದರು.
ದೇಶದಲ್ಲೆ ಕರ್ನಾಟಕ ರಾಜ್ಯವು ಹುಲಿ ಸಂರಕ್ಷಣೆಗೆ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿಯೇ 139 ಹುಲಿಗಳು ಇರುವುದಾಗಿ ಗುರುತಿಸಲಾಗಿದೆ. ಇದು ಅತ್ಯಂತ ಹೆಮ್ಮೆ ಪಡುವ ವಿಷಯ ಎಂದರು.
ಬಂಡೀಪುರ ವೀಕ್ಷಣೆಗಾಗಿ ಸಾಕಷ್ಟು ಪ್ರವಾಸಿಗರು ಬರುತ್ತಿದ್ದಾರೆ. ಮತ್ತಷ್ಟು ಅಭಿವೃದ್ಧಿ ಯೋಜನೆಯೊಂದಿಗೆ ಪ್ರÀವಾಸೋದ್ಯಮಕ್ಕೆ ಒತ್ತು ಕೊಡಬೇಕು. ಅತ್ಯಂತ ವ್ಯವಸ್ಥಿತವಾಗಿ ಪ್ರವಾಸಿ ಯೋಜನೆಯನ್ನು ಅನುಷ್ಠಾನ ಮಾಡಿದರೆ ಪ್ರವಾಸಿಗರಿಗೂ ಮತ್ತಷ್ಟು ಅನುಕೂಲವಾಗುತ್ತದೆ ಎಂದು ನಿರಂಜನ್‍ಕುಮಾರ್ ಅವರು ತಿಳಿಸಿದರು.
ಭಾರತೀಯ ಅಂಚೆ ಇಲಾಖೆ ವಿಶೇಷ ಅಂಚೆ ಲಕೋಟೆ ಬಿಡುಗಡೆ ಕಾರ್ಯಕ್ರಮಕ್ಕೆ ಬಂಡೀಪುರವನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಧನ್ಯವಾದ ಅರ್ಪಿಸುವುದಾಗಿಯು ನಿರಂಜನ್ ಅವರು ಇದೇ ಸಂದರ್ಭದಲ್ಲಿ ನುಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯರಾದ ಬಿ.ಕೆ. ಬೊಮ್ಮಯ್ಯ ಅವರು ಅರಣ್ಯ ಇಲಾಖೆಯು ಅರಣ್ಯ ಸಂರಕ್ಷಣೆಗೆ ವಹಿಸಿರುವ ಕಾಳಜಿ ಪ್ರಶಂಸನೀಯವಾಗಿದೆ. ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದಲೂ ವನ್ಯ ಪೋಷಣೆಗೆ ಮುಂದಾಗಿದೆ. ವಿದ್ಯಾರ್ಥಿಗಳಿಗೆ, ಪ್ರವಾಸಿಗರು ಸೇರಿದಂತೆ ಎಲ್ಲರಲ್ಲೂ ಅರಣ್ಯದ ಮಹತ್ವ ಕುರಿತು ಜಾಗೃತಿ ಮೂಡಿಸುತ್ತಿದೆ ಎಂದು ತಿಳಿಸಿದರು.
ದಕ್ಷಿಣ ವಲಯದ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರಕುಮಾರ್ ಮಾತನಾಡಿ ನೈಸರ್ಗಿಕ ಸಂಪನ್ಮೂಲ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶದೊಂದಿಗೆ ಅಂಚೆ ಇಲಾಖೆಯು ಅರಣ್ಯ ಇಲಾಖೆಯೊಂದಿಗೆ ಜತೆಗೂಡಿ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಿದೆ. ನಿಸರ್ಗದಿಂದ ನೆರವು ಪಡೆಯುವ ಎಲ್ಲರೂ ಪ್ರಕೃತಿಯನ್ನು ಪ್ರೀತಿಸಬೇಕು ಎಂಬ ಸಂದೇಶ ಸಾರುವ ದಿಸೆಯಲ್ಲಿ ಅಂಚೆ ಲಕೋಟೆ ಹೊರತರಲಾಗಿದೆ ಎಂದರು.
ಪ್ರÀಧಾನ ಮುಖ್ಯ ಅರಣ್ಯ ಸಂರಕ್ಷÀಣಾಧಿಕಾರಿ ಸುಭಾಷ್ ಮಾಲ್ಖೆಡೆ ಮಾತನಾಡಿ ರಷ್ಯಾದ ಸೆಂಟ್ ಪೀಟರ್‍ಬಗ್ರ್ಸ್‍ನಲ್ಲಿ 2010ರಲ್ಲಿ ನಡೆದ ಸಮಾವೇಶದಲ್ಲಿ ಹುಲಿ ಸಂತತಿಯನ್ನು ಹೊಂದಿರುವ ರಾಷ್ಟ್ರಗಳು ಹುಲಿ ಪೋಷಣೆಗೆ ವಿಶೇಷ ಯೋಜನೆ ಹಾಕಿಕೊಂಡು 2020ರ ವೇಳೆಗೆ ಹುಲಿ ಸಂಖ್ಯೆಯನ್ನು ದ್ವಿಗುಣಗೊಳಿಸುವ ತೀರ್ಮಾನವನ್ನು ತೆಗೆದುಕೊಂಡಿದ್ದವು. ಅದರ ಅಂಗವಾಗಿ ಜುಲೈ 29ರಂದು ಅಂತರಾಷ್ಟ್ರೀಯ ಹುಲಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಬಂಡೀಪುರದಲ್ಲಿ ಹುಲಿಗಳ ಸಂತತಿ ಗರಿಷ್ಠ ಪ್ರಮಾಣದಲ್ಲಿ ಹೆಚ್ಚುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಂಚೆ ಕಚೇರಿಗಳ ಹಿರಿಯ ಅಧೀಕ್ಷಕರಾದ ಸಂದೇಶ್ ಮಹದೇವಪ್ಪ ಮಾತನಾಡಿ ಭಾರತೀಯ ಅಂಚೆ ಇಲಾಖೆಯ ಚೀಟಿಗಳು ದೇಶ ಹಾಗೂ ಗಡಿಯಾಚೆಗೂ ಪಸರಿಸುತ್ತಿವೆ. ಇಂತಹ ಅಂಚೆ ಚೀಟಿಯಲ್ಲಿ ಈ ಹಿಂದೆಯೂ ಹುಲಿ ಸಂರಕ್ಷಣೆ ಆಶಯದೊಂದಿಗೆ ಹುಲಿ ಚಿತ್ರವನ್ನು ಮುದ್ರಿಸಿ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ ಸಂರಕ್ಷಣೆಯ ಮುಖ್ಯ ಸಂದೇಶ ಗುರಿ ಇಟ್ಟುಕೊಂಡು ಹುಲಿ ದಿನಾಚರಣೆಯಂದೇ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಗಿದೆ. ಇದೊಂದು ಮಹತ್ವದ ಸನ್ನಿವೇಶವೆಂದೆ ಭಾವಿಸಲಾಗಿದೆ ಎಂದರು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕರಾದ ಅಂಬಾಡಿ ಮಾಧವ್ ಮಾತನಾಡಿ ಬಂಡೀಪುರ ಅರಣ್ಯದಲ್ಲಿ ಹುಲಿಗಳ ಸಂತತಿ ವೃದ್ದಿಸಿ ಪೋಷಿಸುವ ಯೋಜನೆಗೆ ಸ್ಥಳೀಯ ಜನರು, ಜನಪ್ರತಿನಿಧಿಗಳು, ಸರ್ಕಾರೇತರ ಸ್ವಯಂ ಸೇವಾಸಂಸ್ಥೆಗಳು, ಮಾಧ್ಯಮಗಳು ಉತ್ತೇಜನ, ಸಹಕಾರ ನೀಡುತ್ತಿವೆ. ಬಂಡೀಪುರದಲ್ಲಿ ಜೀವಸಂಕುಲ ಆಹಾರ ಸರಪಳಿ ಅನುಸಾರ ಗಮನಿಸಿದಾಗ ಹುಲಿಗಳ ಸಂತತಿ ಹೆಚ್ಚಳಕ್ಕೆ ಅನುಗುಣವಾಗಿ ಇತರೆ ವನ್ಯಜೀವಿಗಳು ಸಹ ಹೆಚ್ಚಾಗಿವೆ. ಇದರಿಂದ ಬಂಡೀಪುರ ಅರಣ್ಯವನ್ನು ಸಮೃದ್ಧಿಯೆಂದೇ ತಿಳಿಯಬೇಕಾಗುತ್ತದೆ ಎಂದು ವಿವರಿಸಿದರು.
ಇದೇ ವೇಳೆ ಹುಲಿ ವಿಷಯ ಕುರಿತು ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಕಾಲೇಜು ವಿದ್ಯಾರ್ಥಿಗಳಿಗೆ ಸ್ಮರಣಿಕೆ ಹಾಗೂ ಪ್ರಶಂಸೆ ಪತ್ರ ನೀಡಿ ಗೌರವಿಸಲಾಯಿತು.
ಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ. ಲಿಂಗರಾಜು, ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಜಗತ್‍ರಾಮ್, ಭಾರತೀಯ ಹುಲಿ ಸಂರಕ್ಷಣೆ ಪ್ರಾಧಿಕಾರದ ಹಿರಿಯ ಅಧಿಕಾರಿ ರಾಜೇಂದ್ರ ಗಾರವಾಡ, ಗೌರವ ವನ್ಯಜೀವಿ ಪರಿಪಾಲಕರಾದ ಕೆ.ಬಿ. ಚೋಳರಾಜ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಗಣಕಯಂತ್ರ ಪರೀಕ್ಷೆ ನಿಷೇಧಾಜ್ಞೆ
ಚಾಮರಾಜನಗರ, ಜು. 29 - ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಜುಲೈ 30ರಂದು ಹಾಗೂ ಡಯಟ್ ಸಂಸ್ಥೆಯಲ್ಲಿ ಜುಲೈ 31ರಿಂದ ಆಗಸ್ಟ್ 4ರವರೆಗೆ ಗಣಕಯಂತ್ರ ಪರೀಕ್ಷೆಯು ನಡೆಯಲಿರುವ ಹಿನ್ನಲೆಯಲ್ಲಿ ಪರೀಕ್ಷಾ ಕೇಂದ್ರದ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ.ಬೆಳಿಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಪರೀಕ್ಷಾ ಕೇಂದ್ರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಅಲ್ಲದೆ ಪರೀಕ್ಷಾ ಕೇಂದ್ರಗಳ 200 ಮೀ. ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿಗಳನ್ನು ಬೆಳಿಗ್ಗೆ 9ರಿಂದ ಸಂಜೆ 5.30 ಗಂಟೆಯವರೆಗೆ ಮುಚ್ಚಲು ಅದೇಶಿಸಲಾಗಿದೆ. ನಿಷೇಧಾಜ್ಞೆ ಆದೇಶವು ಪರೀಕ್ಷಾ ಕೆಲಸಕ್ಕೆ ನಿಯೋಜಿತರಾದ ಸಿಬ್ಬಂದಿ ಹಾಗೂ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಅನ್ವಯವಾಗುವುದಿಲ್ಲವೆಂದು ಆದೇಶದಲ್ಲಿ ತಿಳಿಸಲಾಗಿದೆ.
No comments:
Post a Comment