ಚಾಮರಾಜನಗರ, ಗುಂಡ್ಲುಪೇಟೆ, ಮೈಸೂರು ಬಸ್ ಮಾರ್ಗ : ಕೆಎಸ್‍ಆರ್‍ಟಿಸಿಯಿಂದ ಕೆಲ ಮಾರ್ಪಾಡು
ಚಾಮರಾಜನಗರ, ಜು. 31- ಚಾಮರಾಜನಗರ, ಮೈಸೂರು ಮತ್ತು ಗುಂಡ್ಲುಪೇಟೆಗೆ ಹೋಗುವ ಯಾವುದೇ ವೇಗದೂತ ಸಾರಿಗೆಗಳನ್ನು ನಂಜನಗೂಡು ಹಳೆಯ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ಮಾಡಲಾಗುವುದಿಲ್ಲ. ಅದೇ ರೀತಿ ಯಾವುದೇ ಸಾಮಾನ್ಯ (ಗ್ರಾಮೀಣ) ಸಾರಿಗೆಗಳನ್ನು ನಂಜನಗೂಡÀು ಹೊಸ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ಮಾಡಲಾಗುವುದಿಲ್ಲ ಎಂದು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಆರ್. ಅಶೋಕ್ ಕುಮಾರ್ ತಿಳಿಸಿದ್ದಾರೆ.ನಂಜನಗೂಡಿನ ನೂತನ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಓಡಾಟ ವಿರಳವಾಗಿದೆ. ನಿಗಮದ ಹಳೆಯ ಬಸ್ ನಿಲ್ದಾಣದ ಪ್ರಯಾಣಿಕರ ಒತ್ತಡವನ್ನು ತಗ್ಗಿಸುವ ಹಾಗೂ ಹೊಸ ಬಸ್ ನಿಲ್ದಾಣಕ್ಕೆ ಪ್ರಯಾಣಿಕರನ್ನು ಸೆಳೆಯುವ ಉದ್ದೇಶದಿಂದ ವಾಹನಗಳ ಕಾರ್ಯಾಚರಣೆ ಸಂಬಂಧ ಕೆಲ ಮಾರ್ಪಾಡುಗಳನ್ನು ಮಾಡಲಾಗಿದೆ.
ಎಲ್ಲ ವೇಗದೂತ ಮತ್ತು ಅಂತರರಾಜ್ಯ ಸಾರಿಗೆಗಳನ್ನು ಹೊಸ ಬಸ್ ನಿಲ್ದಾಣದ ಮೂಲಕವೇ ಕಾರ್ಯಾಚರಣೆ ಮಾಡಲಾಗುತ್ತದೆ.
ಚಾಮರಾಜನಗರ – ಮೈಸೂರು ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ವೇಗದೂತ ಸಾರಿಗೆಗಳನ್ನು ನಿಗಮದ ಹಳೆಯ ಬಸ್ ನಿಲ್ದಾಣಕ್ಕೆ ಹೋಗದೆ ನಂಜನಗೂಡು ದೇವಸ್ಥಾನ – ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ - ನಂಜನಗೂಡು ಹೊಸ ಬಸ್ ನಿಲ್ದಾಣ - ಬಿಡಿಓ ಕಚೇರಿ – ಮೈಸೂರು ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲಾಗುವುದು.
ಗುಂಡ್ಲುಪೇಟೆಯಿಂದ ದೂರದ ಮÁರ್ಗದಲ್ಲಿ ಅಂತರರಾಜ್ಯ ಒಳಗೊಂಡಂತೆ ಕಾರ್ಯಾಚರಣೆಯಾಗುವ ಸಾರಿಗೆಗಳನ್ನು ನಂಜನಗೂಡಿನ ಹುಲ್ಲಹಳ್ಳಿ ಸರ್ಕಲ್ - ಬಿಡಿಓ ಕಚೇರಿ – ಮೈಸೂರು ಮಾರ್ಗದಲ್ಲಿ ನೇರವಾಗಿ ಮುಖ್ಯ ರಸ್ತೆಯಲ್ಲಿಯೇ ಮಾಡಲಾಗುವುದು.
ಗುಂಡ್ಲುಪೇಟೆ – ಮೈಸೂರು ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ವೇಗದೂತ ಸಾರಿಗೆಗಳನ್ನು ಹುಲ್ಲಹಳ್ಳಿ ಸರ್ಕಲ್ - ನಿಗಮದ ಹಳೆಯ ಬಸ್ ನಿಲ್ದಾಣದ ಮುಂಭಾಗ – ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ - ಹೊಸ ಬಸ್ ನಿಲ್ದಾಣ - ಬಿಡಿಓ ಕಚೇರಿ – ಮೈಸೂರು ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲಾಗುವುದು.
ಮೈಸೂರು – ಗುಂಡ್ಲುಪೇಟೆ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ವೇಗದೂತ ಸಾರಿಗೆಗಳನ್ನು ಮೈಸೂರು - ಬಿಡಿಓ ಕಚೇರಿ - ಹೊಸ ಬಸ್ ನಿಲ್ದಾಣ – ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ - ನಂಜನಗೂಡು ಹಳೆಯ ಬಸ್ ನಿಲ್ದಾಣದ ಮುಂಭಾಗ - ಹುಲ್ಲಹಳ್ಳಿ ಸರ್ಕಲ್ – ಗುಂಡ್ಲುಪೇಟೆ ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲಾಗುವುದು.
ನಂಜನಗೂಡು – ಮೈಸೂರು ಮಾರ್ಗದಲ್ಲಿ ಕಾರ್ಯಾಚರಣೆ ಮಾಡುವ ಎಲ್ಲಾ ಸಾರಿಗೆಗಳನ್ನು ಅಂದರೆ ಚಾಮರಾಜನಗರ, ಮೈಸೂರು ನಗರ, ಗ್ರಾಮಾಂತರ ಹಾಗೂ ಇತರೆ ವಿಭಾಗದ ಸಾರಿಗೆಗಳನ್ನು ಒಳಗೊಂಡಂತೆ ನಂಜನಗೂಡು ಹೊಸ ಬಸ್ ನಿಲ್ದಾಣದಿಂದ ಬಿಡಿಓ ಕಚೇರಿ – ಮೈಸೂರು ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲಾಗುವುದು.
ಸಾರ್ವಜನಿಕ ಪ್ರಯಾಣೀಕರ ಅನುಕೂಲಕ್ಕಾಗಿ ಒಂದು ಸೇವೆಯನ್ನು ನಂಜನಗೂಡು ಹಳೆ ಬಸ್ ನಿಲ್ದಾಣ – ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ - ಹೊಸ ಬಸ್ ನಿಲ್ದಾಣ - ಬಿಡಿಓ ಕಚೇರಿ - ಹುಲ್ಲಹಳ್ಳಿ ಸರ್ಕಲ್ - ಹಳೆ ಬಸ್ ನಿಲ್ದಾಣಕ್ಕೂ ಮತ್ತೊಂದು ಸೇವೆಯನ್ನು ನಂಜನಗೂಡು ಹಳೆ ಬಸ್ ನಿಲ್ದಾಣ - ಹುಲ್ಲಹಳ್ಳಿ ಸರ್ಕಲ್ - ಬಿಡಿಓ ಕಚೇರಿ - ಹೊಸ ಬಸ್ ನಿಲ್ದಾಣ – ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ -ನನಂಜನಗೂಡು ಹಳೆ ನಿಲ್ದಾಣ ಎರಡು ಮಾರ್ಗದಲ್ಲಿ ಎರಡು ನಗರ ಸಾರಿಗೆ (ರಿಂಗ್ ಸರ್ವೀಸ್) ಗಳನ್ನು ಕಾರ್ಯಾಚರಣೆ ಮಾಡಲಾಗುವುದು.
ಎಲ್ಲಾ ವೇಗದೂತ ಮತ್ತು ಅಂತರರಾಜ್ಯ ಸಾರಿಗೆಗಳನ್ನು ಹೊಸ ಬಸ್ ನಿಲ್ದಾಣದಿಂದ ಮಾತ್ರ ಕಾರ್ಯಾಚರಣೆ ಮಾಡಲಾಗುವುದು ಹಾಗೂ ಎಲ್ಲಾ ಸಾಮಾನ್ಯ, ಗ್ರಾಮೀಣ ಸಾರಿಗೆಗಳನ್ನು ನಂಜನಗೂಡು ಹಳೆ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ಮಾಡಲಾಗುವುದು ಎಂದು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಆರ್. ಅಶೋಕ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹನಿ ನೀರಾವರಿ ಸಹಾಯಧನಕ್ಕೆ ಅರ್ಜಿ ನೊಂದಣಿ
ಚಾಮರಾಜನಗರ, ಜು. 31 - ತೋಟಗಾರಿಕೆ ಇಲಾಖೆಯು ಪ್ರಸಕ್ತ ಸಾಲಿನ ಸೂಕ್ಷ್ಮ ಹನಿ ನೀರಾವರಿ (ಡ್ರಿಪ್) ಯೋಜನೆಯನ್ನು ಜಿಲ್ಲೆಯಾದ್ಯಂತ ಅನುಷ್ಠಾನಗೊಳಿಸಲು ಆಸಕ್ತ ಎಲ್ಲಾ ವರ್ಗದ ಸಾಮಾನ್ಯ, ಪರಿಶಿಷ್ಟ ಜಾತಿ, ಪಂಗಡ ರೈತರಿಂದ ಅರ್ಜಿ ಆಹ್ವಾನಿಸಿದೆ.
ಮಾರ್ಗಸೂಚಿಯಂತೆ ರೈತರ ಪ್ರಾಥಮಿಕ ನೋಂದಣಿ ಪ್ರಕ್ರಿಯೆ ಮುಗಿದ ನಂತರವೇ ಕಾರ್ಯಾದೇಶ ವಿತರಿಸಬೇಕಾಗಿರುವುದರಿಂದ ಆಸಕ್ತ ರೈತರು ಕೂಡಲೇ ಭಾವಚಿತ್ರ, ಪಹಣಿ, ಚುನಾವಣಾ ಗುರುತಿನ ಚೀಟಿ, ಆಧಾರ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಇತ್ಯಾದಿ ಅಗತ್ಯ ದಾಖಲಾತಿಗಳೊಂದಿಗೆ ಆಯಾ ತಾಲೂಕಿನ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ ನೋಂದಣಿ ಮಾಡಿಸಿಕೊಂಡು ನೋಂದಣಿ ಸಂಖ್ಯೆಯನ್ನು ಪಡೆದುಕೊಂಡು ಹನಿ ನೀರಾವರಿ ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಮಾರಾಟಗಾರರ ವಿರುದ್ಧ ಕ್ರಮ : ನಗರಸಭೆ ಎಚ್ಚರಿಕೆ
ಚಾಮರಾಜನಗರ, ಜು. 31 - ಚಾಮರಾಜನಗರ ನಗರಸಭಾ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿರುವವರು ಕೂಡಲೇ ಮಾರಾಟ ವಹಿವಾಟು ನಿಲ್ಲಿಸಬೇಕು. ಇಲ್ಲವಾದಲ್ಲಿ ಉದ್ದಿಮೆ ಪರವಾನಗಿಯನ್ನು ರದ್ದುಪಡಿಸಿ ಕ್ರಮ ವಹಿಸಲಾಗುವುದೆಂದು ನಗರಸಭೆ ಎಚ್ಚರಿಕೆ ನೀಡಿದೆ.
ನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗುಗಳು ದೈನಂದಿನ ಬಳಕೆಯಲ್ಲಿರುವ ಪ್ಲಾಸ್ಟಿಕ್ ವಸ್ತುಗಳ ಬಳಕೆಯಿಂದ ಪರಿಸರ ಹಾಗೂ ಪ್ರಾಣಿಗಳ ಆರೋಗ್ಯಕ್ಕೆ ಅಪಾಯ ಉಂಟಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯಗಳು ಜರಂಡಿಗಳ ಸರಾಗ ಹರಿವಿಗೆ ತಡೆ ಉಂಟುಮಾಡಿದೆ.
ಪರಿಸರ ಸಂರಕ್ಷಣಾ ಕಾಯಿದೆ 1986ರ ಸೆಕ್ಷನ್ 5ರ ಅನ್ವಯ ಯಾವುದೇ ಅಂಗಡಿ ಮಾರಾಟಗಾರರು ಪ್ಲಾಸ್ಟಿಕ್‍ನಿಂದ ತಯಾರಿಸಿದ ಕ್ಯಾರಿಬ್ಯಾಗ್, ಭಿತ್ತಿಪತ್ರ, ತೋರಣ, ಫ್ಲೆಕ್ಸ್, ಪ್ಲಾಸ್ಟಿಕ್ ಬಾವುಟ, ತಟ್ಟೆ, ಲೋಟ, ಚಮಚ, ಕ್ಲಿಂಗ್ ಫಿಲ್ಕ್ಸ್, ಊಟದ ಮೇಜಿನ ಮೇಲಿನ ಹಾಳೆ, ಥರ್ಮಕೋಲ್, ಪ್ಲಾಸ್ಟಿಕ್ ಮೈಕ್ರೋ ಬೀಡ್ಸ್‍ನಿಂದ ತಯಾರಾದ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ.
ನಗರಸಭಾ ವ್ಯಾಪ್ತಿಯಲ್ಲಿ ಕೂಡ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡದಂತೆ ಈ ಹಿಂದೆಯೂ ತಿಳಿಸಲಾಗಿದೆ. ಗ್ರಾಹಕರಿಗೆ ಬಟ್ಟೆ ಚೀಲ ನೀಡಲು ಸೂಚಿಸಲಾಗಿದೆ. ಆದರೂ ಸಹ ಪ್ಲಾಸ್ಟಿಕ್ ಬಳಕೆ ಪ್ರಮಾಣ ಕಡಿಮೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿಯೊಂದಿಗೆ ನಗರಸಭೆ ವ್ಯಾಪ್ತಿಯಲ್ಲಿರುವ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಪ್ಲಾಸ್ಟಿಕ್ ಬಳಕೆ ಮಾರಾಟ ಮಾಡುತ್ತಿರುವು ಕಂಡುಬಂದಲ್ಲಿ ಉದ್ದಿಮೆ ಪರವಾನಗಿ ರದ್ದು ಪಡಿಸಿ ಕರ್ನಾಟಕ ಮುನಿಷಿಪಲ್ ಕಾಯಿದೆ 1964ರ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಪೌರಾಯುಕ್ತರಾದ ರಾಜಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆ. 4ರಂದು ವಿಶೇಷಚೇತನರ ಕುಂದುಕೊರತೆ ಸಭೆ
ಚಾಮರಾಜನಗರ, ಜು. 31 ಚಾಮರಾಜನಗರ ತಾಲೂಕು ಮಟ್ಟದ ವಿಶೇಷಚೇತನರ ಕುಂದುಕೊರತೆ ಸಭೆಯು ತಹಸೀಲ್ದಾರ್ ಅವರ ಸಮ್ಮುಖದಲ್ಲಿ ಆಗಸ್ಟ್ 4ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕು ಕಚೇರಿಯಲ್ಲಿ ನಡೆಯಲಿದೆ.
ಕುಂದುಕೊರತೆಗಳಿದ್ದಲ್ಲಿ ವಿಶೇಷಚೇತನರು ಅರ್ಜಿಗಳನ್ನು ನೇರವಾಗಿ ತಹಸೀಲ್ದಾರ್ ಸಮ್ಮುಖದಲ್ಲಿಯೇ ಸಲ್ಲಿಸಬಹುದಾಗಿದೆ. ಈ ಸಭೆಗೆ ತಾಲೂಕಿನ ಎಲ್ಲ ವಿಶೇಷಚೇತನರು ಭಾಗವಹಿಸಬೇಕು. ಹೆಚ್ಚಿನ ಮಾಹಿತಿಗೆ ರಾಜೇಶ್, ಮೊ. 8105720709 ಹಾಗೂ ನಗರದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ದೂ.ಸಂ. 08226-222603 ಮತ್ತು 2223688 ಸಂಪರ್ಕಿಸುವಂತೆ ಶಿಶು ಅಭಿವೃದ್ಧಿ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತೋಟಗಾರಿಕೆ ಇಲಾಖೆಯಿಂದ ಕೃಷಿ ಭಾಗ್ಯ ಯೋಜನೆ : ಅರ್ಜಿ ಆಹ್ವಾನ
ಚಾಮರಾಜನಗರ, ಜು. 31 (ಕರ್ನಾಟಕ ವಾರ್ತೆ):- ತೋಟಗಾರಿಕೆ ಇಲಾಖೆಯು ಚಾಮರಾಜನಗರ, ಕೊಳ್ಳೇಗಾಲ ಹಾಗೂ ಯಳಂದೂರು ತಾಲೂಕುಗಳಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಹಸಿರುಮನೆ ನೆರಳು ಪರದೆ ಮನೆ ಘಟಕಕ್ಕೆ ಸಹಾಯಧನ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಿದೆ.
ಯೋಜನೆಯಡಿ ಗರಿಷ್ಟ 1 ಎಕರೆ ಪ್ರದೇಶದಲ್ಲಿ ಹಸಿರುಮನೆ ನೆರಳು ಪರದೆ ಮನೆ ಘಟಕ ನಿರ್ಮಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ. ಒಟ್ಟು 38.47 ಲಕ್ಷ ರೂ. ವೆಚ್ಚದ ಘಟಕಕ್ಕೆ ಶೇ.50ರಷ್ಟು ಅಂದರೆ 19.235 ಲಕ್ಷ ರೂ. ಸಹಾಯಧನ ಲಭಿಸಲಿದೆ.
ಎಲ್ಲ ವರ್ಗದ ರೈತರು ಅರ್ಜಿ ಸಲ್ಲಿಸಬಹುದು. ಆಯಾ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ಅರ್ಜಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಆಗಸ್ಟ್ 24ರೊಳಗೆ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಸದರಿ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಹಿರಿಯ ನಾಗರಿಕರ ಸೇವಾಕ್ಷೇತ್ರದ ಪ್ರಶಸ್ತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಜು. 31 :- ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಶಿಕ್ಷಣ, ಸಾಹಿತ್ಯ, ಕಲೆ, ಕಾನೂನು, ಕ್ರೀಡೆ, ಪ್ರತಿಭೆ, ಸಮಾಜಸೇವೆ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯ ನಾಗರಿಕರಿಗೆ ನೀಡಲಾಗುವ ವೈಯಕ್ತಿಕ ಹಾಗೂ ಸಂಸ್ಥೆ ಪÀ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಕಚೇರಿಯಿಂದ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಆಗಸ್ಟ್ 6ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸದರಿ ಕಚೇರಿ ಅಥವಾ ದೂ.ಸಂ. 08226-223688 ಮತ್ತು 224688 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ವಿ.ವಿ, ಕಾಲೇಜುಗಳಲ್ಲಿ ಖಾಯಂ ಬೋಧಕ ಹುದ್ದೆಗಳ ಭರ್ತಿಗೆ ಆರ್. ಧ್ರುವನಾರಾಯಣ ಒತ್ತಾಯ
ಚಾಮರಾಜನಗರ, ಜು. 31 - ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ಖಾಯಂ ಆಧಾರದ ಮೇಲೆ ಭರ್ತಿ ಮಾಡುವ ಮೂಲಕ ಹೆಚ್ಚು ಅಂತರದಲ್ಲಿರುವ ವಿದ್ಯಾರ್ಥಿ-ಬೋಧಕ ರಾಷ್ಟ್ರೀಯ ಅನುಪಾತ ಪ್ರಮಾಣವನ್ನು ತಗ್ಗಿಸುವಂತೆ ಲೋಕಸಭಾ ಸದಸ್ಯರಾದ ಅರ್. ಧ್ರುವನಾರಾಯಣ ಅವರು ಸರ್ಕಾರವನ್ನು ಒತ್ತಾಯಿಸಿದರು. ಸಂಸತ್ತಿನ ಶೂನ್ಯವೇಳೆಯಲ್ಲಿಂದು ಧ್ರುವನಾರಾಯಣ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ.
ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಅಖಿಲ ಭಾರತ ಸಮೀಕ್ಷೆಯು ಉನ್ನತ ಶಿಕ್ಷಣದಲ್ಲಿ ತೊಡಗಿರುವ ಬೋಧಕರ ಸಂಖ್ಯೆ ಇಳಿಮುಖವಾಗಿರುವುದನ್ನು ಬೆಳಕಿಗೆ ತಂದಿದೆ. 2015-16ರಲ್ಲಿ ಇದ್ದ 15.2 ಲಕ್ಷ ಖಾಯಂ ಬೋಧಕರ ಸಂಖ್ಯೆ 13.7 ಲಕ್ಷಕ್ಕೆ ಇಳಿದಿದೆ. ಕೇಂದ್ರ ವಿಶ್ವವಿದ್ಯಾಲಯಗಳಲ್ಲಿ ಶೇ. 35ರಷ್ಟಕ್ಕಿಂತಲೂ ಹೆಚ್ಚು ಬೋಧಕ ಹುದ್ದೆಗಳು ಇನ್ನೂ ಖಾಲಿಯಿವೆ. ತಾತ್ಕಾಲಿಕ ಬೋಧಕರು ಹಾಗೂ ಅತಿಥಿ ಬೋಧಕರು ಸೇರಿದ್ದರೂ ಸಹ ಇನ್ನೂ ಶೇ. 19ರಷ್ಟು ಹುದ್ದೆಗಳು ಖಾಲಿ ಇವೆ ಎಂದು ಧ್ರುವನಾರಾಯಣ ಗಮನ ಸೆಳೆದರು.
ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿ ಹಾಗೂ ಬೋಧಕರ ಅನುಪಾತ ಪ್ರಮಾಣ ಹೆಚ್ಚು ಅಂತರದಲ್ಲಿದ್ದು, ಅತೀ ಹೆಚ್ಚು ಅಂದರೆ 30ರಷ್ಟು ಕಂಡುಬಂದಿದೆ. ವಿದ್ಯಾರ್ಥಿಗೆ ಬೋಧಕ ಅನುಪಾತ ಪ್ರಮಾಣವನ್ನು ವಿಶ್ವದ ಸರಾಸರಿಗೆ ನೋಡಿದಾಗ 2015ರಲ್ಲಿ 23.4:1ರಷ್ಟು ಇತ್ತು. ಅಮೇರಿಕಾದಲ್ಲಿ ಇದು 14:1, ಚೀನಾದಲ್ಲಿ 16.3:1, ಬ್ರೆಜಿಲ್ ನಲ್ಲಿ 20.9:1, ರಷ್ಯಾದಲ್ಲಿ 19.8:1 ಕ್ಕಿಂತಲೂ ಕಡಿಮೆ ಇದೆ.
ವಿದ್ಯಾರ್ಥಿಗೆ ಅನುಗುಣವಾಗಿ ಬೋಧಕ ಅನುಪಾತ ಪ್ರಮಾಣ ಹೆಚ್ಚು ಅಂತರವಿದ್ದಲ್ಲಿ ಬೋಧಕರು ವೈಯಕ್ತಿಕವಾಗಿ ವಿದ್ಯಾರ್ಥಿಗಳ ಮೇಲೆ ಕೇಂದ್ರಿಕರಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಶೈಕ್ಷಣಿಕ ಅಭಿವೃದ್ಧಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ದ್ರುವನಾರಾಯಣ ಹೇಳಿದ್ದಾರೆ.
ಸರ್ಕಾರಿ ನೌಕರರ ಸಂಘದ ಸದಸ್ಯರಿಂದ ನಿವೃತ್ತಿ ಹೊಂದಿದ ನೌಕರರಿಗೆ ಬಿಳ್ಕೊಡುಗೆ
ಚಾಮರಾಜನಗರ, ಜು. 31 :- ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯರು ಇಂದು ಸೇವೆಯಿಂದ ವಯೋನಿವೃತ್ತಿ ಹೊಂದಿದ ವಿವಿಧ ಇಲಾಖೆಯ ನೌಕರರನ್ನು ಸನ್ಮಾನಿಸಿ, ಬಿಳ್ಕೊಡುಗೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿರುವ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿಂದು ನಡೆದ ಸರಳ ಸಮಾರಂಭದಲ್ಲಿ ಸಹಾಯಕ ಆಡಳಿತಾಧಿಕಾರಿ ಅವರು ವಯೋನಿವೃತ್ತಿ ಹೊಂದಿದ ಜಿಲ್ಲಾ ಪಂಚಾಯಿತಿಯ ರಂಗಸ್ವಾಮಿ, ಆರೋಗ್ಯ ಇಲಾಖೆಯ ನಳಿನಿಭಟ್, ಚಂದ್ರಮ್ಮ ಮತ್ತು ಕೃಷಿ ಇಲಾಖೆಯ ರಾಮಸ್ವಾಮಿಶಾಸ್ತ್ರಿ ಅವರನ್ನು ಸನ್ಮಾನಿಸಿದರು
ಇದೇ ಸಂದರ್ಭದಲ್ಲಿ ಮಾತನಾಡಿದ ಎಸ್. ಗುರುಲಿಂಗಯ್ಯ ಅವರು ನಿವೃತ್ತ ನೌಕರರ ಮುಂದಿನ ವಿಶ್ರಾಂತ ಜೀವನ ಸುಖಕರವಾಗಿರಲಿ. ಆರೋಗ್ಯ, ಆಯುಷ್ಯ ವೃದ್ಧಿಸಲಿ ಎಂದು ಹಾರೈಸಿದರು.
ಸಂಘದ ಸದಸ್ಯರಾದ ಚಂದ್ರಶೇಖರ್, ಬಸವಣ್ಣ, ಎಂ. ಜಯಶಂಕರ್, ಎಸ್. ನಾಗರಾಜು, ಮಹದೇವ್, ನಾಗರಾಜು, ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.
x