Tuesday, 31 January 2017

28-01-2017 ನೇರ ಫೋನ್ ಇನ್ ಕಾರ್ಯಕ್ರಮ : 28 ದೂರು ದಾಖಲು

ನೇರ ಫೋನ್ ಇನ್ ಕಾರ್ಯಕ್ರಮ : 28 ದೂರು ದಾಖಲು ಚಾಮರಾಜನಗರ, ಜ. 28 (ಕರ್ನಾಟಕ ವಾರ್ತೆ):- ಜಿಲ್ಲೆಯ ಜನತೆಯ ಅಹವಾಲು ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಉದ್ದೇಶದಿಂದ ಜಿಲ್ಲಾಡಳಿತದ ವತಿಯಿಂದ ಇಂದು ನಡೆದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಕುಡಿಯುವ ನೀರು, ಅಕ್ರಮ ಮದ್ಯ ಮಾರಾಟ, ಕೆರೆ ಒತ್ತುವರಿ ಸೇರಿದಂತೆ ವಿವಿಧ ಸಮಸ್ಯೆಗಳÀು ಕೇಳಿ ಬಂದವು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಬಿ. ರಾಮು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್ ಜೈನ್ ಅವರ ಸಮ್ಮುಖದಲ್ಲಿ ನಡೆದ ಒಂದು ತಾಸಿನ ಅವಧಿಯ ಕಾರ್ಯಕ್ರಮದಲ್ಲಿ ಒಟ್ಟು 28 ದೂರುಗಳು ದಾಖಲಾದವು. ಲೊಕ್ಕನಹಳ್ಳಿ, ಹುತ್ತೂರು, ಚೌಡಳ್ಳಿ ಭಾಗದಿಂದ ಕರೆ ಮಾಡಿದ ಗ್ರಾಮಸ್ಥರು ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸ್ಥಳೀಯವಾಗಿ ಕೆಲಸ ನೀಡಲಾಗುತ್ತಿಲ್ಲ. ಜನರು ಉದ್ಯೋಗ ಅರಸಿ ಗುಳೆ ಹೋಗುತ್ತಿದ್ದಾರೆ. ಕೆಲವೆಡೆ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಯೋಜನೆಯಡಿ ಕೈಗೊಳ್ಳಲಾಗಿದೆ. ಆದರೂ ಕೆರೆ ಒತ್ತುವರಿ ತೆರವುಗೊಳಿಸಿಲ್ಲವೆಂದು ಗಮನ ಸೆಳೆದರು. ಅಂಕನಶೆಟ್ಟಿಮೋಳೆಯಿಂದ ಕರೆ ಮಾಡಿದ ಓರ್ವರು ಶವಸಂಸ್ಕಾರ ನೆರವು ಇನ್ನೂ ತಲುಪಿಲ್ಲ. ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆದು ಒಂದು ವರ್ಷವಾಗಿದೆ. ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲವೆಂದು ಅಳಲು ತೋಡಿಕೊಂಡರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಯವರು ಶವಸಂಸ್ಕಾರ ನೆರವುಧನ ನಿನ್ನೆ ಬಿಡುಗಡೆಯಾಗಿದೆ. ಶೀಘ್ರವೇ ತಲುಪಿಸಲಾಗುವುದು. ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ತ್ವರಿತವಾಗಿ ಕಾಮಗಾರಿ ಕೈಗೊಳ್ಳಲು ಸೂಚಿಸಲಾಗುವುದು ಎಂದರು. ಚಾಮರಾಜನಗರ ತಾಲೂಕಿನ ಉತ್ತುವಳ್ಳಿ, ಗುಂಡ್ಲುಪೇಟೆ ತಾಲೂಕಿನ ಚೌಡಳ್ಳಿ, ಚಾಮರಾಜನಗರ ಪಟ್ಟಣದ ಕೆಲ ವಾರ್ಡ್ ನಿವಾಸಿಗಳು ಕುಡಿಯುವ ನೀರು ವ್ಯವಸ್ಥೆಯನ್ನು ಸಮರ್ಪಕವಾಗಿ ಕಲ್ಪಿಸುವಂತೆ ಕೋರಿ ಕರೆ ಮಾಡಿದರು. ಚಾಮರಾಜನಗರ ತಾಲೂಕಿನ ಕೆಲ್ಲಂಬಳ್ಳಿ ಸಮೀಪ ಹೆದ್ದಾರಿಯಲ್ಲಿ ಅಕ್ರಮವಾಗಿ ಡಾಬಾ ಇತರೆ ಹೋಟೆಲ್‍ಗಳು ತಲೆ ಎತ್ತಿವೆ. ಇದಕ್ಕೆ ಯಾವುದೇ ಅನುಮತಿ ಪಡೆದಿಲ್ಲವೆಂದು ಸ್ಥಳೀಯರೊಬ್ಬರು ತಿಳಿಸಿದರು. ಕೊಳ್ಳೇಗಾಲ ಪಟ್ಟಣದ ಮುಖ್ಯ ರಸ್ತೆ, ಸರ್ಕಾರಿ ಜಮೀನಿನಲ್ಲಿ ಸಹ ಹೋಟೆಲ್, ಅಂಗಡಿ ಮುಂಗಟ್ಟುಗಳನ್ನು ಪರವಾನಗಿ ಪಡೆಯದೇ ನಡೆಸಲಾಗುತ್ತಿದೆ ಎಂದು ಅಲ್ಲಿನ ಸ್ಥಳೀಯರೊಬ್ಬರು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು ಸಭೆಯಲ್ಲಿಯೇ ಇದ್ದ ತಹಸೀಲ್ದಾರರಿಗೆ ಸ್ಥಳ ಪರಿಶೀಲನೆ ಮಾಡಿ ಅನುಮತಿ ಪಡೆಯದಿದ್ದಲ್ಲಿ ತೆರವುಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಆಲೂರು ಗ್ರಾಮದಿಂದ ಕರೆ ಮಾಡಿದ ಗ್ರಾಮಸ್ಥರೊಬ್ಬರು ಸ್ಥಳೀಯವಾಗಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಈಹಿಂದೆ ಅಬಕಾರಿ ಇಲಾಖೆಯವರು ಅಕ್ರಮ ಮದ್ಯ ಮಾರಾಟಕ್ಕೆ ಕ್ರಮ ತೆಗೆದುಕೊಂಡಿದ್ದರು. ಆದರೆ ಇತ್ತೀಚೆಗೆ ಮತ್ತೆ ಅಕ್ರಮವಾಗಿ ಮದ್ಯ ಮಾರಾಟ ಆರಂಭಗೊಂಡಿದೆ ಎಂದರು. ಈ ಕುರಿತು ಉತ್ತರಿಸಿದ ಜಿಲ್ಲಾಧಿಕಾರಿಯವರು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಕ್ರಮ ವಹಿಸುವುದಾಗಿ ತಿಳಿಸಿದರು. ರಸ್ತೆ ಡಾಂಬರೀಕರಣ, ಚರಂಡಿ ಸ್ಪಚ್ಚತೆ, ಖಾತೆ ಬದಲಾವಣೆ, ಅಂಗಡಿ ಮಳಿಗೆಗಳ ವಿತರಣೆ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಫೋನ್ ಇನ್ ಕಾರ್ಯಕ್ರಮದಲ್ಲಿ ದೂರುಗಳು ಕೇಳಿಬಂದವು. ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಜ. 31ರಂದು ನಗರದಲ್ಲಿ ಜಿಲ್ಲಾಮಟ್ಟದ ಯುವಜನ ಮೇಳಕ್ಕೆ ಚಾಲನೆ ಚಾಮರಾಜನಗರ, ಜ. 28 (ಕರ್ನಾಟಕ ವಾರ್ತೆ):- ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಜನವರಿ 31ರಂದು ಮಧ್ಯಾಹ್ನ 12 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳವನ್ನು ಆಯೋಜಿಸಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಉದ್ಘಾಟನೆ ನೆರವೇರಿಸುವರು. ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಎಸ್. ಜಯಣ್ಣ ಆರ್. ನರೇಂದ್ರ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕೆ.ಟಿ. ಶ್ರೀಕಂಠೇಗೌಡ, ನಗರಸಭೆ ಅಧÀ್ಯಕ್ಷರಾದ ಎಸ್.ಎನ್. ರೇಣುಕ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ನಗರಸಭೆ ಉಪಾಧ್ಯಕ್ಷರಾದ ಆರ್. ಎಂ. ರಾಜಪ್ಪ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ. ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ. ಜಿಲ್ಲಾಮಟ್ಟದ ಯುವಜನಮೇಳ : ವಿವಿಧ ಸ್ಪರ್ಧೆ ಚಾಮರಾಜನಗರ, ಜ. 28 (ಕರ್ನಾಟಕ ವಾರ್ತೆ):- 2016-17ನೇ ಸಾಲಿನ ಜಿಲ್ಲಾ ಮಟ್ಟದ ಯುವಜನ ಮೇಳವು ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜನವರಿ 31 ಹಾಗೂ ಫೆಬ್ರವರಿ 1ರಂದು ನಡೆಯಲಿದ್ದು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಯುವಕ ಯುವತಿಯರಿಗೆ ಭಾವಗೀತೆ, ಗೀಗೀಪದ, ಲಾವಣಿ, ಕೋಲಾಟ, ರಂಗಗೀತೆ, ಜಾನಪದ ನೃತ್ಯ, ಭಜನೆ, ಜಾನಪದ ಗೀತೆ (ಸಮೂಹ ಗೀತೆ) ಏಕಪಾತ್ರಾಭಿನಯ ಸ್ಪರ್ಧೆಗಳಿವೆ. ಯುವಕರಿಗೆ ಚರ್ಮವಾದ್ಯ ಮೇಳ ಸ್ಪರ್ಧೆ ಇದೆ. ತಾಲೂಕು ಮಟ್ಟದ ಯುವಜನ ಮೇಳದಲ್ಲಿ ವಿಜೇತರಾಗಿ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದವರು ಹಾಗೂ ಗುಂಪು ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದವರು ಜಿಲ್ಲಾಮಟ್ಟದ ಯುವಜನ ಮೇಳ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ಸ್ಪರ್ಧಿಗಳಿಗೆ ಪ್ರಯಾಣ ಭತ್ಯೆ, ದಿನಭತ್ಯೆ ನೀಡಲಾಗುತ್ತದೆ. ಸ್ಪರ್ಧಿಗಳು ಜನವರಿ 31ರಂದು ಬೆಳಿಗ್ಗೆ 10 ಗಂಟೆಗೆ ವರದಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ದೂ.ಸಂ. 08226-224932 ಅಥವಾ ಮೊಬೈಲ್ 9482718278 ಸಂಪರ್ಕಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರಾದ ಎಂ. ಚಲುವಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜ. 31ರಂದು ಚಾ.ನಗರ ಸಾಮಾನ್ಯ ಸಭೆ ಚಾಮರಾಜನಗರ, ಜ. 28 (ಕರ್ನಾಟಕ ವಾರ್ತೆ):- ಚಾಮರಾಜನಗರ ನಗರಸಭೆಯ ಸಾಮಾನ್ಯಸಭೆಯು ಅಧ್ಯಕ್ಷರಾದ ಎಸ್.ಎನ್. ರೇಣುಕ ಅವರ ಅಧ್ಯಕ್ಷತೆಯಲ್ಲಿ ಜನವರಿ 31ರಂದು ಬೆಳಿಗ್ಗೆ 11 ಗಂಟೆಗೆ ನಗರಸಭೆ ಕಚೇರಿಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಪೌರಾಯುಕ್ತರಾದ ರಾಜಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಚಾಮರಾಜನಗರ, ಜ. 28 (ಕರ್ನಾಟಕ ವಾರ್ತೆ):– ಜಿಲ್ಲಾ ನ್ಯಾಯಾಂಗ ಘಟಕದ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರು, ಬೆರಳಚ್ಚುಗಾರರು, ಬೆರಳಚ್ಚು ನಕಲುಗಾರರು, ಆದೇಶ ಜಾರಿಕಾರರು, ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಶೀಘ್ರಲಿಪಿಗಾರರ ಹುದ್ದೆಗೆ ಎಸ್‍ಎಸ್‍ಎಲ್‍ಸಿ ತೇರ್ಗಡೆಯಾಗಿರಬೇಕು. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ನಡೆಸುವ ಹಿರಿಯ ದರ್ಜೆ (ಸೀನಿಯರ್ ಗ್ರೇಡ್) ಕನ್ನಡ ಮತ್ತು ಆಂಗ್ಲ ಭಾಷೆಗಳ ಬೆರಳಚ್ಚು ಹಾಗೂ ಶೀಘ್ರಲಿಪಿ ವಿಷಯಗಳಲ್ಲಿ ತೇರ್ಗಡೆ ಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಬೆರಳಚ್ಚುಗಾರರ ಹುದ್ದೆಗೆ ಎಸ್‍ಎಸ್‍ಎಲ್‍ಸಿ ತೇರ್ಗಡೆಯಾಗಿರಬೇಕು. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ನಡೆಸುವ ಹಿರಿಯ ದರ್ಜೆ (ಸೀನಿಯರ್ ಗ್ರೇಡ್) ಕನ್ನಡ ಮತ್ತು ಆಂಗ್ಲ ಭಾಷೆಗಳ ಬೆರಳಚ್ಚು ವಿಷಯಗಳಲ್ಲಿ ತೇರ್ಗಡೆ ಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಬೆರಳಚ್ಚು ನಕಲುಗಾರರ ಹುದ್ದೆಗೆ ಎಸ್‍ಎಸ್‍ಎಲ್‍ಸಿ ತೇರ್ಗಡೆಯಾಗಿರಬೇಕು. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ನಡೆಸುವ ಕಿರಿಯ ದರ್ಜೆ (ಜೂನಿಯರ್ ಗ್ರೇಡ್) ಕನ್ನಡ ಮತ್ತು ಆಂಗ್ಲ ಭಾಷೆಗಳ ಬೆರಳಚ್ಚು ಹಾಗೂ ಶೀಘ್ರಲಿಪಿ ವಿಷಯಗಳಲ್ಲಿ ತೇರ್ಗಡೆ ಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಆದೇಶ ಜಾರಿಕಾರರ ಹುದ್ದೆಗೆ ಎಸ್‍ಎಸ್‍ಎಲ್‍ಸಿ ತೇರ್ಗಡೆಯಾಗಿರಬೇಕು. ಡ್ರೈವಿಂಗ್ ಲೈಸೆನ್ಸ್ ಹೊಂದಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಕನ್ನಡ ಓದಲು ಬರೆಯಲು ಬಲ್ಲವರಾಗಿರಬೇಕು. ಸೇವಕರ ಹುದ್ದೆಗೆ 7ನೇ ತರಗತಿ ತೇರ್ಗಡೆಯಾಗಿದ್ದು ಕನ್ನಡ ಓದಲು ಬರೆಯಲು ಬಲ್ಲವರಾಗಿರಬೇಕು. ಅಭ್ಯರ್ಥಿಯು ಕನಿಷ್ಟ 18 ವರ್ಷ ಪೂರೈಸಿರಬೇಕು. ಗರಿಷ್ಟ ವಯೋಮಿತಿ ಸಾಮಾನ್ಯ ವರ್ಗದವರಾಗಿದ್ದಲ್ಲಿ 35 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ ಗೆ ಸೇರಿದವರಾಗಿದ್ದಲ್ಲಿ 38 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಾಗಿದ್ದಲ್ಲಿ 40 ವರ್ಷ ಮೀರಿರಬಾರದು. ಸರ್ಕಾರಿ ಸೇವೆಯಲ್ಲಿರುವವರು, ಜೀತಕಾರ್ಮಿಕರು, ಮಾಜಿ ಸೈನಿಕರು, ಅಂಗವಿಕಲರು, ವಿಧವೆಯರಿಗೆ ವಯೋಮಿತಿಯಲ್ಲಿ ನಿಯಮಾನುಸಾರ ಸಡಿಲಿಕೆ ಇದೆ. ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನಿಗದಿಪಡಿಸಿರುವಂತೆ ಅರ್ಜಿ ನಮೂನೆಯಲ್ಲಿ ಬೆರಳಚ್ಚು ಮಾಡಿಸಿದ ಅಥವಾ ಗಣಕೀಕೃತ ಅರ್ಜಿಯನ್ನು ಕೈಬರವಣಿಗೆಯಲ್ಲಿ ಭರ್ತಿ ಮಾಡಿ ಅಗತ್ಯ ಸ್ವಯಂ ದೃಢೀಕೃತ ನಕಲು ಪ್ರತಿಗಳ ದಾಖಲೆಗಳೊಂದಿಗೆ ಫೆಬ್ರವರಿ 13ರೊಳಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಾಮರಾಜನಗರ ಇವರಿಗೆ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ನಗರದ ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದÉ. ಪಿಡಿಓ ಪರೀಕ್ಷೆ : ನಿಷೇದಾಜ್ಞೆ ಜಾರಿ ಚಾಮರಾಜನಗರ, ಜ. 28 (ಕರ್ನಾಟಕ ವಾರ್ತೆ):- ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್ 1 ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆ ಸಂಬಂಧ ಸ್ಪರ್ಧಾತ್ಕ ಪರೀಕ್ಷೆಯು ಜನವರಿ 29ರಂದು ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ನಡೆಯಲಿದ್ದು ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಬಿ. ರಾಮು ಆದೇಶ ಹೊರಡಿಸಿದ್ದಾರೆ. ಚಾಮರಾಜನಗರ ಪಟ್ಟಣದಲ್ಲಿ 7, ಗುಂಡ್ಲುಪೇಟೆ ಪಟ್ಟಣದಲ್ಲಿ 2, ಕೊಳ್ಳೇಗಾಲ ಪಟ್ಟಣದಲ್ಲಿ 3 ಪರೀಕ್ಷಾ ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಅಕ್ರಮ ತಡೆಗಟ್ಟಲು ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗದಂತೆ ಪರೀಕ್ಷಾ ಕೇಂದ್ರಗಳ ಸುತ್ತಲ 200 ಮೀ. ವ್ಯಾಪ್ತಿಯಲ್ಲಿ ಜನವರಿ 29ರಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ನಿಷೇದಾಜ್ಞೆ ಆದೇಶ ಜಾರಿಯಲ್ಲಿರುತ್ತದೆ. ಅಲ್ಲದೆ ಪರೀಕ್ಷಾ ಕೇಂದ್ರಗಳ 200 ಮೀ. ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿಗಳನ್ನು ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಮುಚ್ಚುವಂತೆಯೂ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಹಾಗೂ ಪರೀಕ್ಷಾ ಕೆಲಸಕ್ಕೆ ನಿಯೋಜಿತರಾದ ಅಧಿಕಾರಿ ಸಿಬ್ಬಂದಿಗೆ ನಿಷೇದಾಜ್ಞೆ ಆದೇಶ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದ್ದಾರೆ. ಜ. 30ರಂದು ಕುಷ್ಠ ಅರಿವು ಆಂದೋಲನ ಚಾಮರಾಜನಗರ, ಜ. 28 (ಕರ್ನಾಟಕ ವಾರ್ತೆ):- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕುಷ್ಟರೋಗದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಜನವರಿ 30ರಂದು ಜಾಗೃತಿ ಜಾಥಾ ಹಾಗೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಚಾಮರಾಜೇಶ್ವರ ದೇವಾಲಯದಿಂದ ಆಶಾ ಕಾರ್ಯಕರ್ತೆಯರು. ನರ್ಸಿಂಗ್ ವಿದ್ಯಾರ್ಥಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಬೃಹತ್ ಜಾಥಾವನ್ನು ನಡೆಸಲಿದ್ದಾರೆ. ಜಾಗೃತಿ ಕಾರ್ಯಕ್ರಮಗಳನ್ನು ಜಿಲ್ಲೆಯ ತಾಲೂಕು ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೂಡ ಹಮ್ಮಿಕೊಳ್ಳಲಾಗಿದೆ. ರೋಗಿಗಳಿಗೆ ಎಂಸಿಆರ್ ಪಾದರಕ್ಷೆ, ಸಲ್ಪ್ ಕೇರ್ ಕಿಟ್ ನೀಡಲಾಗುತ್ತದೆ ಎಂದು ಜಿಲ್ಲಾ ಕುಷ್ಟ ರೋಗ ನಿರ್ಮೂಲನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರ ಪ್ರವಾಸ ಚಾಮರಾಜನಗರ, ಜ. 28 (ಕರ್ನಾಟಕ ವಾರ್ತೆ):- ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಎಂ.ಆರ್. ವೆಂಕಟೇಶ್, ಸದಸ್ಯರಾದ ಮೀನಾಕ್ಷಮ್ಮ, ಗೋಕುಲ ನಾರಾಯಣಸ್ವಾಮಿ ಹಾಗೂ ಕಾರ್ಯದರ್ಶಿಯವರು ಜನವರಿ 30 ಹಾಗೂ 31ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಜನವರಿ 30ರಂದು ಬೆಳಿಗ್ಗೆ 11 ಗಂಟೆಗೆ ಕೊಳ್ಳೇಗಾಲಕ್ಕೆ ಆಗಮಿಸಿ ಅಲ್ಲಿನ ಪೌರಕಾರ್ಮಿಕರ ಕಾಲೋನಿಗೆ ಭೇಟಿ ನೀಡುವರು. ಕೊಳ್ಳೇಗಾಲ ನಗರಸಭೆ ಕಾರ್ಯಾಲಯದಲ್ಲಿ ಸಫಾಯಿ ಕರ್ಮಚಾರಿಗಳ ಕುಂದುಕೊರತೆಗಳ ಬಗ್ಗೆ ಸಭೆ ನಡೆಸುವರು. ರಾತ್ರಿ 7 ಗಂಟೆಗೆ ಮಹದೇಶ್ವರಬೆಟ್ಟಕ್ಕೆ ಆಗಮಿಸಿ ವಾಸ್ತವ್ಯ ಹೂಡುವರು. ಜನವರಿ 31ರಂದು ಬೆಳಿಗ್ಗೆ 10.30 ಗಂಟೆಗೆ ಮಹದೇಶ್ವರ ಬೆಟ್ಟ ಪ್ರಾಧಿಕಾರ ಕಚೇರಿಯಲ್ಲಿ ಸಫಾಯಿ ಕರ್ಮಚಾರಿಗಳ ಕುಂದುಕೊರತೆ ಸಭೆ ನಡೆಸುವರು. ಸಂಜೆ 4 ಗಂಟೆಗೆ ಮೈಸೂರಿಗೆ ತೆರಳುವರೆಂದು ಆಯೋಗದ ಕಾರ್ಯದರ್ಶಿ ತಿಳಿಸಿದ್ದಾರೆ.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು