Thursday, 1 December 2022

01-12-2022 ಚಾಮರಾಜನಗರದಲ್ಲಿ ಅರ್ಥಪೂರ್ಣ ಏಡ್ಸ್ ದಿನ ಆಚರಣೆ




 ನಗರದಲ್ಲಿ ಅರ್ಥಪೂರ್ಣ ಏಡ್ಸ್ ದಿನ ಆಚರಣೆ 


      ಚಾಮರಾಜನಗರ, ಡಿಸೆಂಬರ್ 01 - ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ವತಿಯಿಂದ ಜಿಲ್ಲಾಮಟ್ಟದ ವಿಶ್ವ ಏಡ್ಸ್ ದಿನ ಆಚರಣೆ ಕಾರ್ಯಕ್ರಮವನ್ನು ನಗರದಲ್ಲಿಂದು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗಿತ್ತು.


     ನಗರದ ಚಾಮರಾಜೇಶ್ವರ ದೇವಾಲಯದ ಬಳಿ ಏಡ್ಸ್ ಜಾಗೃತಿ ಜಾಥಾಗೆ ಜಿಲ್ಲಾ ಪ್ರಧಾನ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ಚಾಲನೆ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. 


     ಇದೇ ವೇಳೆ ಬೀದಿನಾಟಕದ ಮೂಲಕ ಏಡ್ಸ್ ವಿರುದ್ಧ ಜಾಗೃತಿ ಮೂಡಿಸಲಾಯಿತು. ಬಳಿಕ ಜಾಥಾವು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಜನರಲ್ಲಿ ಅರಿವು ಮೂಡಿಸಿತು. ಕಾಲೇಜು ವಿದ್ಯಾರ್ಥಿಗಳು, ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು. 


     ಬಳಿಕ ನಗರದ ವರನಟ ಡಾ. ರಾಜ್ ಕುಮಾರ್ ರಂಗಮಂದಿರದಲ್ಲಿ ಆಯೋಜಿಸಿದ್ದ ವೇದಿಕೆ ಸಮಾರಂಭವನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಎಂ. ಶ್ರೀಧರ ಅವರು ಉದ್ಘಾಟಿಸಿದರು.  


      ಇದೇ ವೇಳೆ ಮಾತನಾಡಿದ ಅವರು 2030ರ ವೇಳೆಗೆ ಜಿಲ್ಲೆಯನ್ನು ಏಡ್ಸ್ ಮುಕ್ತ ಮಾಡಲು ಆರೋಗ್ಯ ಇಲಾಖೆ ಮುಂದಾಗಿದ್ದು ಇದಕ್ಕೆ ಎಲ್ಲರ ಸಹಕಾರ ಅಗತ್ಯ. ಜಿಲ್ಲೆಯಲ್ಲಿ 4306 ಎಚ್‍ಐವಿ ಸೋಂಕಿತರಿದ್ದಾರೆ. ಇದನ್ನು ಕಡಿಮೆ ಮಾಡುವ ಮೂಲಕ 2030ರ ವೇಳೆಗೆ ಜಿಲ್ಲೆಯನ್ನು ಏಡ್ಸ್ ಮುಕ್ತ ಮಾಡಲು ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡುತ್ತಿದೆ. ಏಡ್ಸ್ ಬಗ್ಗೆ ಜನರಲ್ಲಿ ಅರಿವು ಅಗತ್ಯವಾಗಿದೆ. ಏಡ್ಸ್ ಸೋಂಕಿತರನ್ನು ಯಾವುದೇ ಬೇಧಭಾವವಿಲ್ಲದೇ ಗೌರವಯುತವಾಗಿ ಸಮಾನತೆಯಿಂದ ನೋಡಿಕೊಳ್ಳಬೇಕು ಎಂದರು.


      ಎಚ್‍ಐವಿ ಸೋಂಕಿತರನ್ನು ಕಾಳಜಿಯಿಂದ ನೋಡಿಕೊಳ್ಳುವ ಜೊತೆಗೆ ಅವರಲ್ಲಿ ಜಾಗೃತಿ ಮೂಡಿಸಿ ಮುಖ್ಯವಾಹಿನಿಗೆ ತರಬೇಕು. ಮುಂಜಾಗ್ರತೆ ಅರಿವು ಮೂಡಿಸಿದಾಗ ರೋಗ ತಡೆಯಲು ಸಾಧ್ಯ. ರಾಜ್ಯದಲ್ಲಿ ಎಚ್‍ಐವಿ ತಡೆಯಲು 2017 ರಲ್ಲಿ ಕಾಯ್ದೆ ತರಲಾಗಿದೆ. ಈ ಕಾಯ್ದೆಯ ಪ್ರಕಾರ ಸೋಂಕಿತರನ್ನು ತಾರತಮ್ಯ ಮಾಡುವಂತಿಲ್ಲ. ತಾರತಮ್ಯ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ತಿಳಿಸಿದರು.


      ಸೋಂಕಿತರನ್ನು ತಾರತಮ್ಯ ಮಾಡುವುದು ಕಂಡುಬಂದರೆ 3 ತಿಂಗಳಿಂದ 1 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ಒಂದು ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ. ಸರ್ಕಾರವು ಕೋಟ್ಯಾಂತರ ಹಣ ಖರ್ಚು ಮಾಡಿ ಎಆರ್‍ಟಿ ಕೇಂದ್ರಗಳ ಮೂಲಕ ಚಿಕಿತ್ಸೆ ನೀಡುತ್ತಿದೆ ಎಂದು ಹೇಳಿದರು.


      ಸಮಾಜದಲ್ಲಿ ಸಾಕಷ್ಟು ಜನ ಎಚ್‍ಐವಿ ಸೋಂಕಿತರು ವಾಸ ಮಾಡುತ್ತಿದ್ದಾರೆ. ಅವರಿಗೂ ಬದುಕುವ ಹಕ್ಕಿದೆ. ಅಲ್ಲದೇ ಇಚ್ಛೆ ಬಂದ ಉದ್ಯೋಗ ಮಾಡಲು ಅವಕಾಶವಿದೆ. ಕಾಯಿಲೆ ನೆಪದಲ್ಲಿ ಸೋಂಕಿತರನ್ನು ಹೊರಗಿಡುವುದು ಸರಿಯಲ್ಲ ಎಂದು ಶ್ರೀಧರ ಅವರು ತಿಳಿಸಿದರು. 


       ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವಿಶ್ವೇಶ್ವರಯ್ಯ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ರವಿಕುಮಾರ್, ಜೆಎಸ್‍ಎಸ್ ಆಸ್ಪತ್ರೆಯ ಅಧೀಕ್ಷಕ ಡಾ. ಗೋವಿಂದಶೆಟ್ಟಿ, ರಕ್ತ ನಿಧಿ ಕೇಂದ್ರದ ಡಾ. ಮಹೇಶ್, ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಮುರುಗೇಂದ್ರ, ಸರ್ಕಾರಿ ನಸಿರ್ಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೇಮ, ಶಿವಮಲ್ಲಪ್ಪ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಇದ್ದರು.





      


01-12-2022 ವಿಶ್ವ ಏಡ್ಸ್ ದಿನಾಚರಣೆ


 


ಸಮಾನತೆಗೊಳಿಸು : ನಮ್ಮೆಲ್ಲರ ಪ್ರಾಮಾಣಿಕ ಪ್ರಯತ್ನದಿಂದ ಅಸಮಾನತೆಯನ್ನು ಪರಿಹರಿಸೋಣ ಮತ್ತು ಏಡ್ಸ್ ಅನ್ನು ಕೊನೆಗಾಣಿಸೋಣ.

ರಾಮಸಮುದ್ರ ಎಸ್.ವೀರಭದ್ರಸ್ವಾಮಿ

     ಚಾಮರಾಜನಗರ, ನವೆಂಬರ್ 30 - ದೇಶದ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಒಂದಾದ ಹೆಚ್.ಐ.ವಿ./ಏಡ್ಸ್ ಒಬ್ಬ ವ್ಯಕ್ತಿಯ ಸಮಸ್ಯೆಯಾಗಿರುವುದಲ್ಲದೇ ಇದು ಸಮಾಜದ ಅಭಿವೃಧ್ದಿಗೆ ಸವಾಲಾಗಿದೆ. ಜನ ಸಾಮಾನ್ಯರಲ್ಲಿ ಹೆಚ್.ಐ.ವಿ. ಸೋಂಕು ಮತ್ತು ಸೋಂಕಿನೊಂದಿಗೆ ಬದುಕುತ್ತಿರುವವರ ಬಗ್ಗೆ ಇರುವ ಕಳಂಕ ಮತ್ತು ತಾರತಮ್ಯದ ಭಾವನೆಗಳು ಸೋಂಕಿತರ ಬದುಕಿಗೆ ಗ್ರಹಣ ಹಿಡಿದಂತಾಗಿದೆ.  ಈ ಹೆಚ್.ಐ.ವಿ./ಏಡ್ಸ್ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಡಿಸೆಂಬರ್-01 ರಂದು “ವಿಶ್ವ ಏಡ್ಸ್ ದಿನ”ವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.


ವಿಶ್ವ ಏಡ್ಸ್ ದಿನಾಚರಣೆ ಇತಿಹಾಸ:- 

1981ರಲ್ಲಿ ಮೊದಲ ಹೆಚ್.ಐ.ವಿ. ಸೋಂಕು ಯು.ಎಸ್.ಎ.ನಲ್ಲಿ ಕಂಡು ಬಂತು ಮತ್ತು 1982ರಲ್ಲಿ ಮೊದಲ ಏಡ್ಸ್ ಪ್ರಕರಣ ಪತ್ತೆಯಾಯಿತು. ಏಡ್ಸ್ ಒಂದು ಮಾರಣಾಂತಿಕ ರೋಗ, ಇಂತಹ ರೋಗದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯು ದಿನಾಂಕ 26-10-1988ರಲ್ಲಿ ಡಿಸೆಂಬರ್-01ರಂದು “ವಿಶ್ವ ಏಡ್ಸ್ ದಿನ”ವೆಂದು ಅಧಿಕೃತವಾಗಿ ಘೋಷಿಸಿತು.  ಅದರಂತೆ ಪ್ರತಿ ವರ್ಷ ಡಿಸೆಂಬರ್-01 ರಂದು ವಿಶ್ವ ಏಡ್ಸ್ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. 


ರೆಡ್ ರಿಬ್ಬನ್ ಸಂಕೇತ:-

ರೆಡ್ ರಿಬ್ಬನ್ ಅಥವಾ ಕೆಂಪು ಪಟ್ಟಿ ಎಂಬುದು ಹೆಚ್.ಐ.ವಿ./ಏಡ್ಸ್ ತಡೆಗಟ್ಟುವ ಒಂದು ಜಾಗತಿಕ ಸಂಕೇತ. ಇದರ ಅರ್ಥ ಹೆಚ್.ಐ.ವಿ./ಏಡ್ಸ್ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಹೆಚ್.ಐ.ವಿ ಸೋಂಕಿತರಿಗೆ ಕಳಂಕ ತಾರತಮ್ಯ ಮಾಡದಿರುವುದು.


ಹೆಚ್.ಐ.ವಿ/ಏಡ್ಸ್‍ನ ಇತಿಹಾಸ:-

1983ರಲ್ಲಿ ಹೆಚ್.ಐ.ವಿ. ಒಂದು ವೈರಸ್ ಎಂದು ಲ್ಯುಕ್‍ಮೊಂಟಗ್ನೈಯರ್ ಮತ್ತು ರಾಬರ್ಟ್‍ಗ್ಯಾಲ್ಲೊರವರು      

      ಕಂಡುಹಿಡಿದರು.

1986ರಲ್ಲಿ ಭಾರತದಲ್ಲಿ ಮೊದಲ ಹೆಚ್.ಐ.ವಿ. ಸೋಂಕು ಚೆನ್ನೈನ ವೆಲ್ಲೂರಿನಲ್ಲಿ ಕಂಡುಬಂದಿತು.

1986ರಲ್ಲಿ ಮುಂಬೈನಲ್ಲಿ ಮೊದಲ ಏಡ್ಸ್ ಪ್ರಕರಣ ಪತ್ತೆಯಾಯಿತು.

1987ರಲ್ಲಿ ಕರ್ನಾಟಕದಲ್ಲಿ ಮೊದಲ ಹೆಚ್.ಐ.ವಿ. ಸೋಂಕು ಮತ್ತು ಏಡ್ಸ್ ಪ್ರಕರಣ ಬೆಳಗಾವಿಯಲ್ಲಿ ಕಂಡುಬಂತು.


ಹೆಚ್.ಐ.ವಿ. ಸೋಂಕು 4 ವಿಧಾನಗಳಲ್ಲಿ ಮಾತ್ರ ಹರಡುತ್ತದೆ.

ಹೆಚ್.ಐ.ವಿ. ಸೋಂಕಿತ ವ್ಯಕ್ತಿಯ ಜೊತೆ ಅಸುರಕ್ಷಿತ ಲೈಂಗಿಕ ಸಂಪರ್ಕ ಹೊಂದಿದಾಗ ಹೆಚ್.ಐ.ವಿ. ಹರಡುತ್ತದೆ.

ಪರೀಕ್ಷೆ ಮಾಡದ ರಕ್ತ ಪಡೆಯುವುದರಿಂದ ಹರಡುವ ಸಾಧ್ಯತೆ ಇರುತ್ತದೆ.

ಹೆಚ್.ಐ.ವಿ. ಸೋಂಕಿತ ತಾಯಿಯಿಂದ ಹುಟ್ಟುವ ಮಗುವಿಗೆ ಗರ್ಭಾವಸ್ಥೆಯಲ್ಲಿ, ಹೆರಿಗೆ ಸಮಯದಲ್ಲಿ ಅಥವಾ ಎದೆ  

      ಹಾಲಿನ ಮುಖಾಂತರ ಹರಡುವ ಸಾಧ್ಯತೆ ಇರುತ್ತದೆ.

ಹೆಚ್.ಐ.ವಿ. ಸೋಂಕಿತ ಸೂಜಿ ಸಿರಂಜ್‍ಗಳನ್ನು ಸಂಸ್ಕರಿಸದೆ ಬಳಸುವುದರಿಂದ ಹರಡುವ ಸಾಧ್ಯತೆ ಇರುತ್ತದೆ.


ಹೆಚ್.ಐ.ವಿ. ಸೋಂಕು ಹರಡುವುದನ್ನು ತಡೆಯುವುದು. 

ಹೆಚ್.ಐ.ವಿ. ಸೋಂಕಿನ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳುವುದು.

ಅಪಾಯಕಾರಿ ನಡವಳಿಕೆಯಿಂದ ದೂರ ಇರುವುದು.

ಮದುವೆಗೆ ಮುಂಚೆ ಬ್ರಹ್ಮಚರ್ಯೆ ಪಾಲನೆ ಹಾಗೂ ನಂತರದಲ್ಲಿ ಏಕ ಸಂಗಾತಿಯೊಂದಿಗೆ ನಿಷ್ಠೆಯ ಜೀವನ  

      ನಡೆಸುವುದು.

ಒಮ್ಮೆ ಹೆಚ್.ಐ.ವಿ. ಸೋಂಕಿತರೆಂದು ತಿಳಿದ ಕೂಡಲೇ ಕಡ್ಡಾಯವಾಗಿ ಎ.ಆರ್.ಟಿ. ಕೇಂದ್ರದಲ್ಲಿ ಉಚಿತ ಚಿಕಿತ್ಸೆ 

      ಪಡೆದುಕೊಳ್ಳುವುದು.


ಹೆಚ್.ಐ.ವಿ./ಏಡ್ಸ್‍ನ ಸ್ಥಿತಿಗತಿ:-


ಕರ್ನಾಟಕದಲ್ಲಿ ಅತಿ ಹೆಚ್ಚು ಹೆಚ್.ಐ.ವಿ. ಪ್ರಿವೆಲೆನ್ಸ್ ಹೊಂದಿರುವ ಜಿಲ್ಲೆಗಳು (2018ರ ಹೆಚ್.ಎಸ್.ಎಸ್. ಪ್ರಕಾರ) 

    ಬಾಗಲಕೋಟೆ – 1.17, ಚಿತ್ರದುರ್ಗ – 1.13, ರಾಯಚೂರು 0.88, ಗುಲ್ಬರ್ಗಾ 0.75, ಕೊಪ್ಪಳ & ಮೈಸೂರು– 0.63.


ಹೆಚ್.ಐ.ವಿ./ಏಡ್ಸ್ ನಿರ್ವಹಣೆಗಾಗಿ ಇರುವ ಮುಖ್ಯ ಚಿಕಿತ್ಸೆ ಎ.ಆರ್.ಟಿ:- 

ಹೆಚ್.ಐ.ವಿ/ಏಡ್ಸ್ ಅನ್ನು ವಾಸಿ ಮಾಡಲು ಯಾವುದೇ ಲಸಿಕೆ ಅಥವಾ ಚಿಕಿತ್ಸೆ ಇರುವುದಿಲ್ಲ. ಆದರೆ ಹೆಚ್.ಐ.ವಿ. ಸೋಂಕಿತರು ಜೀವನ ಶೈಲಿಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೆಚ್ಚಿನ ವರ್ಷ ಬದುಕಲು ಎ.ಆರ್.ಟಿ. ಚಿಕಿತ್ಸೆ ಇದೆ.  ಎ.ಆರ್.ಟಿ ಚಿಕಿತ್ಸೆ ಹೆಚ್.ಐ.ವಿ. ವೈರಸ್‍ನ ಬೆಳವಣಿಗೆಯನ್ನು ಕುಂಠಿತಗೊಳಿಸಿ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸಿ ವ್ಯಕ್ತಿಯ ಜೀವನದ ಗುಣ ಮಟ್ಟವನ್ನು ಹೆಚ್ಚಿಸುತ್ತದೆ. ಮತ್ತು ಸೋಂಕಿತರು ಹೆಚ್ಚು ಕಾಲ ಬದುಕುವಂತೆ ಮಾಡುತ್ತದೆ. ಹೆಚ್.ಐ.ವಿ/ಏಡ್ಸ್ ಸೋಂಕಿದೆ ಎಂದ ಕೂಡಲೇ ಧೃತಿಗೆಡದೆ ಸವಾಲಾಗಿ ಸ್ವೀಕರಿಸಿ. ತಪ್ಪದೇ ಎ.ಆರ್.ಟಿ. ಚಿಕಿತ್ಸೆಯನ್ನು ಪಡೆದು ಅತ್ಯತ್ತಮ ಜೀವನವನ್ನು ಅಳವಡಿಸಿಕೊಂಡರೆ ಆರೋಗ್ಯಕರ ಜೀವನವನ್ನು ನಡೆಸಬಹುದು.


ಜಿಲ್ಲೆಯಲ್ಲಿ ಹೆಚ್.ಐ.ವಿ. ತಡೆಗಟ್ಟುವಲ್ಲಿ ಇರುವ ಸೌಲಭ್ಯಗಳು:-

ಇಂಟಿಗ್ರೇಟೇಡ್ ಕೌನ್ಸಿಲಿಂಗ್ & ಟೆಸ್ಟಿಂಗ್ ಸೆಂಟರ್ (ಐ.ಸಿ.ಟಿ.ಸಿ ಕೇಂದ್ರಗಳು) – ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆ/ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳಲ್ಲಿ ಆಪ್ತ ಸಮಾಲೋಚನೆ ಮತ್ತು ಉಚಿತವಾಗಿ ಹೆಚ್.ಐ.ವಿ. ಪರೀಕ್ಷೆ ಮಾಡಲಾಗುವುದು.


ಎಫ್-ಐ.ಸಿ.ಟಿ.ಸಿ. ಮತ್ತು ಪಿ.ಪಿ.ಪಿ. ಎಫ್-ಐ.ಸಿ.ಟಿ.ಸಿ. ಕೇಂದ್ರಗಳು:- ಜಿಲ್ಲೆಯಲ್ಲಿ ಒಟ್ಟು 64 ಸರ್ಕಾರಿ ಪ್ರಾ.ಆ. ಕೇಂದ್ರ, ಮತ್ತು 6 ಪಿ.ಪಿ.ಪಿ. ಎಫ್-ಐ.ಸಿ.ಟಿ.ಸಿ. (ಖಾಸಗೀ ಆಸ್ಪತ್ರೆಗಳಲ್ಲಿ) ಕೇಂದ್ರಗಳಲ್ಲಿ ಉಚಿತವಾಗಿ ಹೆಚ್.ಐ.ವಿ. ಪರೀಕ್ಷೆ ಮಾಡಲಾಗುವುದು.


ಎ.ಆರ್.ಟಿ. ಕೇಂದ್ರ (ಆಂಟಿ ರೆಟ್ರೋವೈರಲ್ ಥೆರಫಿ) – ಜಿಲ್ಲೆಯ ಜಿಲ್ಲಾ ಆಸ್ಪತ್ರೆ, ಚಾಮರಾಜನಗರ ಹಾಗೂ ಉಪವಿಭಾಗೀಯ ಆಸ್ಪತ್ರೆ, ಕೊಳ್ಳೇಗಾಲ ಇಲ್ಲಿ ಎಲ್ಲಾ ಹೆಚ್.ಐ.ವಿ. ಸೋಂಕಿತರಿಗೆ ಜೀವನ ಪರ್ಯಂತ ಉಚಿತವಾಗಿ ಎ.ಆರ್.ಟಿ. ಚಿಕಿತ್ಸೆ ನೀಡಲಾಗುವುದು.


ಲಿಂಕ್ ಎ.ಆರ್.ಟಿ. ಕೇಂದ್ರಗಳು – ಜಿಲ್ಲೆಯ ಸಾ.ಆ. ಗುಂಡ್ಲುಪೇಟೆ ಮತ್ತು ಯಳಂದೂರು ಗಳಲ್ಲಿ ಲಿಂಕ್ ಎ.ಆರ್.ಟಿ. ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಎ.ಆರ್.ಟಿ. ಕೇಂದ್ರದಲ್ಲಿ ವರದಿಯಾಗಿ 6 ತಿಂಗಳು ಮಾತ್ರೆಗಳನ್ನು ಪಡೆದ ನಂತರ ಅಭ್ಯರ್ಥಿಗಳಿಗೆ (ಅವರ ವಾಸಸ್ಥಳಕ್ಕೆ ಹತ್ತಿರ) ಹತ್ತಿರದ ಲಿಂಕ್ ಎ.ಆರ್.ಟಿ. ಕೇಂದ್ರಗಳಲ್ಲಿ ಜೀವನ ಪರ್ಯಂತ ಉಚಿತವಾಗಿ ಎ.ಆರ್.ಟಿ. ಮಾತ್ರೆಗಳನ್ನು ನೀಡಲಾಗುವುದು.

ಡೆಸಿಗ್ನೇಟೆಡ್ ಎಸ್.ಟಿ.ಐ. & ಆರ್.ಟಿ.ಐ. ಕೇಂದ್ರ:- (ಡಿ.ಎಸ್.ಆರ್.ಸಿ.) – ಜಿಲ್ಲಾ ಆಸ್ಪತ್ರೆ, ಚಾಮರಾಜನಗರ ಮತ್ತು ಸಾ.ಆ ಕೊಳ್ಳೇಗಾಲ ಇಲ್ಲಿ ಡಿ.ಎಸ್.ಆರ್.ಸಿ. ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಎಸ್.ಟಿ.ಐ / ಆರ್.ಟಿ.ಐ. ಖಾಯಿಲೆ ಇರುವವರಿಗೆ (ಲೈಂಗಿಕ ಸಂಪರ್ಕದ ಸೋಂಕು) ಉಚಿತ ಚಿಕಿತ್ಸೆ ಮತ್ತು ಆಪ್ತ ಸಮಾಲೋಚನೆ ನೀಡಲಾಗುವುದು. 


ಸಮುದಾಯ ಆಧಾರಿತÀ ಆರೈಕೆ ಮತ್ತು ಬೆಂಬಲ ಕೇಂದ್ರಗಳು - ಜಿಲ್ಲೆಯಲ್ಲಿ ಒಟ್ಟು ನಾಲ್ಕು ಎನ್‍ಜಿಓ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಸದರಿ ಸಂಸ್ಥೆಗಳಾದ ಸ್ನೇಹಜ್ಯೋತಿ ಮಹಿಳಾ ಸಂಘ, ಸಮತಾ ಸೊಸೈಟಿ, ಕೂರ್ ಸಂಸ್ಥೆ ಮತ್ತು ಚೈತನ್ಯ ನೆಟ್‍ವರ್ಕ್ ಸಂಸ್ಥೆಗಳು ಕ್ರಮವಾಗಿ ಲೈಂಗಿಕ ಕಾರ್ಯಕರ್ತೆಯರು/ದಮನಿತ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು, ಆಯ್ದ 100 ಹಳ್ಳಿಗಳಲ್ಲಿನ ಹೈ-ರಿಸ್ಕ್ ಜನರಿಗೆ ಮತ್ತು ಐಇಸಿ ಕಾರ್ಯಚಟುವಟಿಕೆ, ಸ್ಕ್ರೀನಿಂಗ್ ಪರೀಕ್ಷೆ ಹಾಗೂ ಹೆಚ್‍ಐವಿ/ಏಡ್ಸ್ ಸೋಂಕಿತ ಮತ್ತು ಬಾಧಿತರಿಗೆ ಅಗತ್ಯ ಸಾಮಾಜಿಕ ಸವಲತ್ತುಗಳನ್ನು ನೀಡುವಲ್ಲಿ ಹಾಗೂ ಕಾಂಡೋಮ್ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ ಹಾಗೂ ಹೆಚ್.ಐ.ವಿ. ಸೋಂಕಿತರಿಗೆ ಮಾನಸಿಕ ಬೆಂಬಲ ಮತ್ತು ಸಾಮಾಜಿಕ ಸೌಲಭ್ಯ ಕೊಡಿಸುವುದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತೆಯೇ ಚೈತನ್ಯ ನೆಟ್‍ವರ್ಕ್ ಸಂಸ್ಥೆಯವರಿಂದ ಎಆರ್‍ಟಿ ಅಭ್ಯರ್ಥಿಗಳ ನೊಂದಣಿ ಮತ್ತು ಐಈU, ಒIS ಕೇಸ್‍ಗಳ ಅನುಸರಣೆಯನ್ನು ನಿರ್ವಹಿಸಿ, ಮರಳಿ ಎಆರ್‍ಟಿ ಚಿಕಿತ್ಸೆ ಪಡೆಯಲು ಅರ್ಥಿಗಳಿಗೆ ನೆರವು ನೀಡುತ್ತಿದ್ದಾರೆ.


ಹದಿಹರೆಯದ ಶಿಕ್ಷಣ ಕಾರ್ಯಕ್ರಮ – ಕಳೆದ ನಾಲ್ಕೈದು ವರ್ಷಗಳಿಂದ ಪ್ರತಿ ವರ್ಷ ಜಿಲ್ಲೆಯ ಒಟ್ಟು 163 (9 ಮತ್ತು 10ನೇ ತರಗತಿ) ಸರ್ಕಾರಿ ಹಾಗೂ ಅನುದಾನಿತ ಫ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಆರೋಗ್ಯ ಶಿಕ್ಷಣದ ಜೊತೆಗೆ ಹೆಚ್.ಐ.ವಿ. ಏಡ್ಸ್ ತಡೆಗಟ್ಟುವ ಬಗ್ಗೆ ಮಾಹಿತಿ ನೀಡಲಾಗುವುದು. (ಂಜoಟesಛಿeಟಿಣ ಇಜuಛಿಚಿಣioಟಿ Pಡಿogಡಿಚಿm) 


ರೆಡ್ ರಿಬ್ಬನ್ ಕಾರ್ಯಕ್ರಮ – ಜಿಲ್ಲೆಯ ಒಟ್ಟು-26 ಪದವಿ ಕಾಲೇಜುಗಳಲ್ಲಿ ವಿಧ್ಯಾರ್ಥಿಗಳಿಗೆ ಹೆಚ್.ಐ.ವಿ / ಏಡ್ಸ್ ತಡೆಗಟ್ಟುವ ಮತ್ತು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವಂತೆ ಅರಿವು ಮತ್ತು ಕಾಲೇಜುಗಳಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡುವ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.


ಫೋಕ್ ಕ್ಯಾಂಪಿಯನ್: ಪ್ರತಿ ವರ್ಷ ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಲ್ಲಿ (ವರ್ಷಕ್ಕೆ 25 ಶೋ) ಜಾನಪದ ಕಲಾ ತಂಡಗಳಿಂದ ಆಯ್ದ ಪ್ರಮುಖ ಜನನಿಬಿಡ ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ಹೆಚ್.ಐ.ವಿ / ಏಡ್ಸ್ ತಡೆಗಟ್ಟುವ ಕುರಿತು ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮ.


ಐ.ಇ.ಸಿ. – ಕರಪತ್ರ, ಪೋಸ್ಟರ್, ಬ್ಯಾನರ್, ಜಾಥಾ, ಗೋಡೆ ಬರಹ, ಕಾಲೇಜುಗಳಲ್ಲಿ ಸನ್‍ಬೋರ್ಡ್, ಪ್ಲೆಕ್ಸ್ ಇತ್ಯಾದಿ. ಕಾರ್ಯಕ್ರಮಗಳನ್ನು ಮಾಡಲಾಗುವುದು.


ಸಮುದಾಯ ಆಧಾರಿತ ತಪಾಸಣಾ ಶಿಬಿರ :- ಜಿಲ್ಲೆಯಲ್ಲಿನ ಐದು ತಾಲ್ಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಟು ಐಸಿಟಿಸಿ ಕೇಂದ್ರಗಳ ಮೂಲಕ ಆಯ್ದ ಜನನಿಬಿಡ ಪ್ರದೇಶಗಳಾದ ಸಂತೆ, ಜಾತ್ರೆ ಮತ್ತು ಬಸ್ ನಿಲ್ದಾಣಗಳಲ್ಲಿನ ಜನಸಾಮಾನ್ಯರಿಗೆ ಹೆಚ್‍ಐವಿ ಪರೀಕ್ಷೆ, ಐಇಸಿ ಬಗ್ಗೆ ಅರಿವು ಮತ್ತು ಇತರೆ ಕಾರ್ಯಕ್ರಮಗಳಾದ ಎನ್‍ಸಿಡಿ ಯೋಜನೆ, ಂಃಊಂ ಅಚಿಡಿಜ ನೊಂದಣಿ ಮತ್ತು ವಿತರಣೆಯ ಕಾರ್ಯಕ್ರಮವನ್ನು ನಿರ್ವಹಿಸಲಾಗಿತ್ತು. ಸದರಿ ಎಂಟು ಶಿಬಿರಗಳಿಂದ ಒಟ್ಟು 1102 ಜನರಿಗೆ ಹೆಚ್‍ಐವಿ/ಏಡ್ಸ್ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಿ, ಪರೀಕ್ಷೆಯನ್ನು ನಡೆಸಿ, ಇವರಲ್ಲಿ 4 ಮಂದಿಗೆ ಹೆಚ್‍ಐವಿ ಸ್ಕ್ರೀನಿಂಗ್ ಪಾಸಿಟೀವ್ ಬಂದಿದ್ದು, ಐಸಿಟಿಸಿ ರೆಫರ್ ಮಾಡಿ 4 ರಲ್ಲಿ ಒಂದು ಅoಟಿಜಿiಡಿmಚಿಣoಡಿಥಿ ಪಾಸಿಟೀವ್ ಕಂಡುಬಂದಿರುತ್ತದೆ. ಅಂತೆಯೇ ಎನ್‍ಸಿಡಿ ಕಾರ್ಯಕ್ರಮದ ವತಿಯಿಂದ ಎಲ್ಲರಿಗೂ ಬಿಪಿ, ಶುಗರ್ ಪರೀಕ್ಷೆಗಳ ಜೊತೆ, ಮಾತ್ರೆಗಳನ್ನು ಸಹ ವಿತರಿಸಲಾಯಿತು. 


ಹೆಚ್.ಐ.ವಿ. ಸೋಂಕಿನ ಸಾಧ್ಯತೆ:-

ಹೆಚ್.ಐ.ವಿ. ಬಗ್ಗೆ ಸರಿಯಾದ ಮಾಹಿತಿಯ ಕೊರತೆ.

ಲೈಂಗಿಕ ವಿಚಾರಗಳ ಬಗ್ಗೆ ಅತ್ಯಂತ ಗೋಪ್ಯತಾ ಮನೋಭಾವ ಹೊಂದಿರುವುದು. 

ಸಹವರ್ತಿಗಳ ಒತ್ತಡ / ಅಪಾಯಕಾರಿ ನಡವಳಿಕೆ.

ಬದಲಾಗುತ್ತಿರುವ ಸಾಮಾಜಿಕ ಮತ್ತು ಕೌಟುಂಬಿಕ ವಾತಾವರಣ.

ಬದಲಾಗುತ್ತಿರುವ ಮೌಲ್ಯಗಳು ಮತ್ತು ನೀತಿಗಳು.

ಇತರರಿಂದ ಲೈಂಗಿಕ ಶೋಷಣೆ.


      ಜಿಲ್ಲೆಯಲ್ಲಿ 2008-09 ರಿಂದ ಇಲ್ಲಿಯವರೆಗೆ ಒಟ್ಟು 642630 ಜನರಿಗೆ ಹೆಚ್.ಐ.ವಿ. ಪರೀಕ್ಷೆ ಮಾಡಿದ್ದು, 4306 ಜನರಿಗೆ ಹೆಚ್.ಐ.ವಿ. ಸೋಂಕಿರುವುದು ದೃಢಪಟ್ಟಿದ್ದು, ಕಳೆದ 5 ವರ್ಷಗಳಿಂದ ಹೆಚ್.ಐ.ವಿ. ಸೋಂಕಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಈ ವರ್ಷದಲ್ಲಿ ಅಕ್ಟೋಬರ್-2022 ರವರೆಗೆ ಒಟ್ಟು 112 ಜನರಿಗೆ ಹೆಚ್.ಐ.ವಿ. ಸೋಂಕಿರುವುದು ದೃಡಪಟ್ಟಿರುತ್ತದೆ.


ಹೆಚ್.ಐ.ವಿ. ಸೋಂಕಿತರಿಗೆ ಉಚಿತ ಕಾನೂನು ಸೇವೆಗಳು:-

        ಪ್ರತಿ ಎ.ಆರ್.ಟಿ. ಕೇಂದ್ರದಲ್ಲಿ ಒಬ್ಬ ವಕೀಲರು ವಾರದಲ್ಲಿ ಒಂದು ದಿನ (ಶನಿವಾರ) ಎ.ಆರ್.ಟಿ. ಕೇಂದ್ರಕ್ಕೆ ಭೇಟಿ ನೀಡುವುದು. ಹೆಚ್.ಐ.ವಿ. ಸೋಂಕಿತ / ಭಾಧಿತರ ಹಕ್ಕುಗಳಿಗೆ ಚ್ಯುತಿ ಬಂದರೆ ವಕೀಲರು ಮಧ್ಯ ಪ್ರವೇಶಿಸಿ ಮೌಖಿಕವಾಗಿ ರಾಜಿ / ಸಂಧಾನದ ಮೂಲಕ ಸಮಸ್ಯೆಯನ್ನು ಬಗೆಹರಿಸುತ್ತಾರೆ. ರಾಜಿ ಸಂಧಾನ ಇತ್ಯರ್ಥ ಆಗದಿದ್ದ ಪಕ್ಷದಲ್ಲಿ ನ್ಯಾಯಾಲಯದ ಮೂಲಕ ಅವರಿಗೆ ಉಚಿತವಾಗಿ ನ್ಯಾಯವನ್ನು ಒದಗಿಸಿ, ಗೌಪ್ಯತೆಯನ್ನು ಕಾಪಾಡುತ್ತಾರೆ.


ಹೆಚ್.ಐ.ವಿ. ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವುದು.

ಹೆಚ್.ಐ.ವಿ. ಸೋಂಕಿನ ವ್ಯಕಿಗಳು ಎಲ್ಲರಂತೆ ಜೀವನ ನಡೆಸಬಹುದು. ಹೆಚ್.ಐ.ವಿ./ಏಡ್ಸ್ ಬಗ್ಗೆ ಇರುವ ತಪ್ಪು ಕಲ್ಪನೆಗಳು ರೋಗಕ್ಕಿಂತ ರೋಗದ ಭಯವೇ ರೋಗಿಯ ಮಾನಸಿಕ ಸ್ಥೈರ್ಯವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.  ಇನ್ನು ಕೆಲವು ದಿನಗಳಲ್ಲಿ ಸಾವು ಎಂಬ ಭಯದಲ್ಲಿ ಊಟ, ನಿದ್ರೆ ಬಿಟ್ಟು ಚಿಂತೆಗೆ ಶರಣಾಗಿ ಈ ಚಿಂತೆಯಿಂದಲೇ 20-30 ವರ್ಷ ಬದುಕಬಹುದಾದ ವ್ಯಕ್ತಿಯು 1-2 ವರ್ಷದಲ್ಲಿಯೇ ಕೊರಗಿ ಚಿಂತೆಗೀಡಾಗುತ್ತಾರೆ. ಈ ರೀತಿ ಮಾನಸಿಕ ಚಿಂತೆ, ಒತ್ತಡ, ಅವಮಾನ, ಆತಂಕ ಮತ್ತು ಸಮಾಜದ ಪ್ರಶ್ನೆಗೆ ಹೆದರಿ ತನ್ನದಲ್ಲದ ತಪ್ಪಿಗೆ ಜೀವ ತೆರಬೇಕಾಗುತ್ತದೆ. ಇಂತಹ ಹೆಚ್.ಐ.ವಿ. ಸೋಂಕಿತರನ್ನು ಸಮಾಧಾನ ಮಾಡಿ ಸಾಂತ್ವನ/ಸಮಾಲೋಚನೆ ಮಾಡಿ ಎ.ಆರ್.ಟಿ. ಚಿಕಿತ್ಸೆ ನೀಡಬೇಕಾಗುತ್ತದೆ. ಈ ರೀತಿಯಲ್ಲಿ ಇವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಜವಾಬ್ದಾರಿ ನಮ್ಮೆಲರದು.

Wednesday, 30 November 2022

30-11-2022 ಚಾಮರಾಜನಗರ ಸುದ್ದಿ...ಐವರು ಅಮಾನತು


ಪೋಲೀಸ್ ವಶದಲ್ಲಿನ ವ್ಯಕ್ತಿ ಸಾವು: ಐವರು ಅಮಾನತು

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ: ಪೊಲೀಸರಿಂದ ಪರಾರಿಯಾಗಲು ಯತ್ನಿಸಿ ಯುವಕ ಪ್ರಾಣವನ್ನೇ ಕಳೆದುಕೊಂಡ ಪ್ರಕರಣಕ್ಕೆ ಸಂಬಂದಿಸಿದಂತೆ ಇಲಾಖಾ ಐವರು ಸಿಬ್ಬಂದಿಗಳನ್ನ ಅಮಾನತು ಮಾಡಿದ್ದಾರೆ.

ಯಳಂದೂರು ಠಾಣೆಯ ವೃತ್ತ ಆರಕ್ಷಕ ಶಿವಮಾದಯ್ಯ.ಮಾಂಬಳ್ಳಿ ಸಬ್ ಇನ್ಸ್ ಪೆಕ್ಟರ್ ಮಾದೇಗೌಡ,ಎಎಸ್ಐ ಚಲುವರಾಜು ಮಹಿಳಾ ಮುಖ್ಯ  ಪೇದೆ ಭದ್ರಮ್ಮ, ಪೇದೆ ಸೋಮಣ್ಣ ಅಮಾನತ್ತಾದ ಸಿಬ್ಬಂದಿಗಳಾಗಿದ್ದಾರೆ.

ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಕಳೆದ 23 ರಂದು ಪ್ರಕರಣ ದಾಖಲಾಗಿತ್ತು..೨೯ ರಂದು  ಯಳಂದೂರು ತಾಲೂಕಿನ ಕುಂತೂರುಮೋಳೆ ಗ್ರಾಮದ ಲಿಂಗರಾಜು ಎಂಬಾತ ಕರೆತರುವಾಗ ಯರಿಯೂರು ಸಮೀಪ  ಜೀಪಿನಿಂದ ಹಾರಲು ಯತ್ನಿಸಿ  ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಎನ್ನಲಾಗಿದೆ‌.ಈ ಸಂಬಂದ ಯಳಂದೂರು ಠಾಣೆ ಮುಂಭಾಗ ಮೃತರ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಮೃತನ ಕಡೆಯವರು ನೀಡಿದ ದೂರಿನ ಮೇರೆಗೆ ಹಿರಿಯ ಅದಿಕಾರಿಗಳ ಸೂಚನೆ ಮೇರೆಗೆ ಯಳಂದೂರು ಠಾಣೆಯ ವೃತ್ತ ಆಕರ್ಷಕ ಶಿವಮಾದಯ್ಯ ,ಮಾಂಬಳ್ಳಿ ಸಬ್ ಇನ್ಸ್ ಪೆಕ್ಟರ್, ಸೋಮಣ್ಣ ಎಂಬುವವರ ಮೇಲೆ ಎಪ್ ಐ ಆರ್ ದಾಖಲಿಸಲಾಗಿದೆ.  ಈಗಾಗಲೇ ಪೊಲೀಸ್ ವಶದಲ್ಲಿದ್ದ ಆರೋಪಿ ಸಾವನ್ನಪ್ಪಿದ ಹಿನ್ನಲೆಯಲ್ಲಿ ಐವರು ಸಿಬ್ಬಂದಿಗಳನ್ನ ಅಮಾನತು ಮಾಡಲಾಗಿದೆ ಎಂದು ದಕ್ಷಿಣ ವಲಯ ಪೊಲೀಸ್ ಮಹಾನಿರ್ದೆಶಕ ಮಧುಕರ್ ಪವಾರ್ ತಿಳಿಸಿದ್ದಾರೆ.

 

30-11-2022 ಚಾಮರಾಜನಗರ ಸುದ್ದಿ


 ನಿರ್ಗಮಿತ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಆತ್ಮೀಯ ಬೀಳ್ಕೊಡುಗೆ, ನೂತನ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರಿಗೆ ಸ್ವಾಗತ ಸಮಾರಂಭ 


      ಚಾಮರಾಜನಗರ, ನವೆಂಬರ್ 30  ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡಿರುವ ನಿರ್ಗಮಿತ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಆತ್ಮೀಯ ಬೀಳ್ಕೊಡುಗೆ ಹಾಗೂ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿ.ಎಸ್. ರಮೇಶ್ ಅವರಿಗೆ ಸ್ವಾಗತ ಸಮಾರಂಭ ಇಂದು ನಡೆಯಿತು.


ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನವದೆಹಲಿಯ ಕರ್ನಾಟಕ ಭವನದಲ್ಲಿ ಸಹಾಯಕ ರೆಸಿಡೆಂಟ್ ಕಮಿಷನರ್ ಆಗಿ ವರ್ಗಾವಣೆಯಾಗಿರುವ ಚಾರುಲತಾ ಸೋಮಲ್ ಹಾಗೂ ನೂತನ ಜಿಲ್ಲಾಧಿಕಾರಿಯಾಗಿರುವ ಡಿ.ಎಸ್. ರಮೇಶ್ ಅವರನ್ನು ಅಧಿಕಾರಿಗಳು, ಸಿಬ್ಬಂದಿ, ಸಂಘ ಸಂಸ್ಥೆಗಳ, ರೈತ ಸಂಘದ ಮುಖಂಡರು, ಕಲಾವಿದರು, ಸೇರಿದಂತೆ ಹಲವಾರು ಸಂಘಟನೆಗಳ ಪ್ರತಿನಿಧಿಗಳು ಗೌರವಿಸಿದರು. 


ಎಲ್ಲರ ಸನ್ಮಾನ ಗೌರವ ಸ್ವೀಕರಿಸಿ ಮಾತನಾಡಿದ ಚಾರುಲತಾ ಸೋಮಲ್ ಅವರು ಚಾಮರಾಜನಗರ ಜಿಲ್ಲೆಯಲ್ಲಿ 11 ತಿಂಗಳ ಅವಧಿಯಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು ನನಗೆ ದೊರೆತ ಅದೃಷ್ಟ ಅವಕಾಶವೆಂದೆ ಭಾವಿಸಿದ್ದೇನೆ. ನನ್ನ ಇಲ್ಲಿಯ ಸೇವಾ ಅವಧಿಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು, ಸಿಬ್ಬಂದಿ, ಸಂಘ ಸಂಸ್ಥೆಗಳ ಮುಖಂಡರು, ರೈತರ ಸಂಘಟನೆಯ ಪ್ರತಿನಿಧಿಗಳು ಸೇರಿದಂತೆ ಎಲ್ಲರಿಂದಲೂ ಸಹಕಾರ ಸಿಕ್ಕಿದೆ. ನನಗೆ ತೋರಿದ ಪ್ರೀತಿ ಬೆಂಬಲಕ್ಕೆ ಚಿರಋಣಿಯಾಗಿದ್ದೇನೆ ಎಂದರು. 


ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಮಾತನಾಡಿ ಚಾರುಲತಾ ಸೋಮಲ್ ಅವರ ಬಗ್ಗೆ ಅಪಾರವಾದ ಪ್ರೀತಿ ಸಹಕಾರ ವ್ಯಕ್ತವಾಗಿರುವುದನ್ನು ನೋಡಿದ್ದೇನೆ. ಜಿಲ್ಲೆಯ ಸಾರ್ವಜನಿಕರ ಹಿತದೃಷ್ಟಿ ಹಾಗೂ ಅಭಿವೃದ್ದಿಗೆ ತಾವೂ ಸಹ ಬದ್ದರಾಗಿದ್ದು ಎಲ್ಲರ ಸಹಕಾರ ಬೆಂಬಲ ಮುಂದುವರೆಯಲಿ ಎಂದರು.  


ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಮಾತನಾಡಿ ಚಾರುಲತಾ ಸೋಮಲ್ ಅವರು ಅಧಿಕಾರಾವಧಿಯಲ್ಲಿ ಜಿಲ್ಲಾ ಪಂಚಾಯತ್ ಅಭಿವೃದ್ದಿ ಕಾರ್ಯಗಳಿಗೆ ಸಹಕಾರ ನೀಡಿದ್ದಾರೆ. ಇದರಿಂದ ಹಲವು ಪ್ರಗತಿಪರ ಕೆಲಸಗಳು ಸಾಧ್ಯವಾಗಿವೆ. ಪ್ರಸ್ತುತ ಜಿಲ್ಲಾಧಿಕಾರಿಯಾಗಿರುವ ಡಿ.ಎಸ್. ರಮೇಶ್ ಅವರು ಸಹ ದಾವಣಗೆರೆ ಜಿಲ್ಲಾಧಿಕಾರಿಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರ ಅವಧಿಯಲ್ಲಿಯೂ ಜಿಲ್ಲೆಯ ಅಭಿವೃದ್ದಿಗೆ ಸಹಕಾರ ಮುಂದುವರೆಯಲಿದೆ ಎಂದರು. 


ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಮಾತನಾಡಿ ಚಾರುಲತಾ ಸೋಮಲ್ ಅವರು ಆಡಳಿತ ವಿಷಯದಲ್ಲಿ ಸ್ಪಷ್ಟ  ನಿರ್ಧಾರವನ್ನು ಕೈಗೊಳ್ಳುತ್ತಿದ್ದರು. ನೂತನ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರಿಗೂ ಸಹ ಆಡಳಿತ ವಿಚಾರದಲ್ಲಿ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದೇವೆ ಎಂದರು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್ ಅವರು ಮಾತನಾಡಿ ಪೊಲೀಸ್ ಇಲಾಖೆಗೆ ಚಾರುಲತಾ ಸೋಮಲ್ ಅವರು ಸಾಕಷ್ಟು ಬೆಂಬಲ ನೀಡಿದ್ದಾರೆ. ಜನಪರವಾಗಿ ಕೆಲಸ ಮಾಡಿದ್ದಾರೆ. ಈಗಿನ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಸಹ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ. ಎಲ್ಲರಿಗೂ ಅಭಿನಂದನೆಗಳು ಎಂದರು. 


  ರೈತ ಮುಖಂಡರಾದ ಭಾಗ್ಯರಾಜ್ ಮಾತನಾಡಿ ಚಾರುಲತಾ ಸೋಮಲ್ ಅವರು ಭ್ರಷ್ಟಾಚಾರ ರಹಿತ ಪ್ರಾಮಾಣಿಕವಾಗಿ ಆಡಳಿತ ನಡೆಸಿದ್ದಾರೆ. ರೈತರ ಸಮಸ್ಯೆಗಳಿಗೆ ಗಮನಹರಿಸಿದ್ದರು. ಈಗಿನ ಜಿಲ್ಲಾಧಿಕಾರಿಯವರು ಸಹ ರೈತರಿಗೆ ಸ್ಪಂದಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 


ಕಂದಾಯ ಇಲಾಖೆ ನೌಕರರ ಸಂಘದ ಉಲ್ಲಾಸ್ ಅವರು ಮಾತನಾಡಿ ಕಂದಾಯ ಇಲಾಖೆ ದಿನ ಆಚರಣೆಯಂದು ಚಾರುಲತಾ ಸೋಮಲ್ ಅವರು ಸ್ವತಹ ರಕ್ತದಾನ ಮಾಡುವ ಮೂಲಕ ಅರ್ಥಪೂರ್ಣ ಕಾರ್ಯಕ್ರಮ ನಡೆಸಿಕೊಟ್ಟರು. ಮಾತೃ ಹೃದಯಿಯಾಗಿದ್ದ ಅವರ ಸೇವಾ ಅವಧಿ ಸ್ಮರಣೀಯವಾಗಿದೆ. ಪ್ರಸ್ತುತ ಜಿಲ್ಲಾಧಿಕಾರಿಯವರ ಮಾರ್ಗದರ್ಶನದಲ್ಲಿ ನಾವೆಲ್ಲಾ ಕರ್ತವ್ಯ ನಿರ್ವಹಿಸುತ್ತೇವೆ ಎಂದರು. 


ಜಿಲ್ಲೆಯ ರೈತ ಮುಖಂಡರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ವಿಶೇಷ ಚೇತನರು, ಪೌರಕಾರ್ಮಿಕ ಸಂಘಟನೆಯ ಪ್ರತಿನಿಧಿಗಳು, ಜಿಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು, ಹಿರಿಯ ಅರಣ್ಯ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿ, ಕಲಾವಿದರು, ಸಾರ್ವಜನಿಕರು ಭಾಗವಹಿಸಿದ್ದರು. 


 



Tuesday, 29 November 2022

29-11-2022 ಚಾಮರಾಜನಗರ ಸುದ್ದಿ



 ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಸಮರ್ಪಕ ನಿರ್ವಹಣೆಗೆ ಮತದಾರರ ಪಟ್ಟಿ ವೀಕ್ಷಕರಾದ ಬಿ.ಬಿ. ಕಾವೇರಿ ಸೂಚನೆ 


ಚಾಮರಾಜನಗರ, ನವೆಂಬರ್ 29 - ಜಿಲ್ಲಾ ವ್ಯಾಪ್ತಿಯಲ್ಲಿ ನಡೆಸಲಾಗುತ್ತಿರುವ ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಮತದಾರರ ಪಟ್ಟಿ ವೀಕ್ಷಕರು ಹಾಗೂ ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರಾದ ಬಿ.ಬಿ. ಕಾವೇರಿ ಅವರು ಸೂಚನೆ ನೀಡಿದರು. 


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕೈಗೊಂಡಿರುವ ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ  ಅವರು ಮಾತನಾಡಿದರು. 


ದಿನಾಂಕ 1-01-2023ಕ್ಕೆ ಅರ್ಹತಾ ದಿನಾಂಕ ನಿಗದಿಪಡಿಸಿ ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಇದೇ ನವೆಂಬರ್ 9ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಹಕ್ಕು ಆಕ್ಷೇಪಣೆಗಳನ್ನು ಆಯಾ ತಾಲೂಕಿನ ಮತಗಟ್ಟೆಗಳಲ್ಲಿ ಹಾಗೂ ತಾಲೂಕು ಕಚೇರಿಯಲ್ಲಿ ಡಿಸೆಂಬರ್ 8 ರವರೆಗೂ ಸ್ವೀಕರಿಸಲಾಗುತ್ತಿದೆ. ಈ ಕಾರ್ಯವನ್ನು ಅಚ್ಚುಕಟ್ಟಾಗಿ ನಡೆಸುವಂತೆ ಬಿ.ಬಿ. ಕಾವೇರಿ ಅವರು ತಿಳಿಸಿದರು. 


ಹಕ್ಕು ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ಅತ್ಯಂತ ಜಾಗರೂಕತೆಯಿಂದ ದಾಖಲೆಗಳನ್ನು ಸ್ವೀಕರಿಸಿ ಪರಿಶೀಲಿಸಬೇಕು. ಎಲ್ಲಿಯೂ ಯಾವುದೇ ಲೋಪಕ್ಕೆ ಅವಕಾಶವಾಗದ ಹಾಗೇ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಅರ್ಹ ಮತದಾರರು ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ಎಲ್ಲಾ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕು ಎಂದರು. 


18ರಿಂದ 19 ವರ್ಷ ವಯಸ್ಸಿನವರು, ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವ ಸಂಬಂಧ ಹೆಚ್ಚು ಕೇಂದ್ರೀಕರಿಸಬೇಕು. ನೊಂದಣಿಗೆ ವಿಶೇಷ ಗಮನ ಹರಿಸಬೇಕು. ಈ ಬಗ್ಗೆ ಹೆಚ್ಚು ಪ್ರಚುರ ಪಡಿಸಬೇಕು. ಅರ್ಹರೆಲ್ಲರೂ ಮತದಾರರ ಪಟ್ಟಿಗೆ ಸೇರ್ಪಡೆಯಾಗುವ ನಿಟ್ಟಿನಲ್ಲಿ ವಹಿಸಬೇಕಿರುವ ಕ್ರಮಗಳ ಬಗ್ಗೆ ನಿಯಮ ಅನುಸಾರ ಎಲ್ಲವನ್ನೂ ಪಾಲನೆ ಮಾಡಬೇಕು ಎಂದು ಮತದಾರರ ಪಟ್ಟಿ ವೀಕ್ಷಕರು ತಿಳಿಸಿದರು.


ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣಾ ಕಾರ್ಯ ಅತ್ಯಂತ ಮಹತ್ತರ ಜವಾಬ್ದಾರಿಯಾಗಿದೆ. ಈ ಕಾರ್ಯಕ್ಕೆ ಇತರೆ ಇಲಾಖೆಗಳೂ ಸಹ ಅಗತ್ಯ ಸಹಕಾರ ನೀಡಬೇಕು. ಸಾಂವಿಧಾನಿಕ ಹೊಣೆಗಾರಿಕೆಯನ್ನು ಅಧಿಕಾರಿಗಳು ಎಚ್ಚರಿಕೆಯಿಂದ ನಿರ್ವಹಿಸಬೇಕು. ಮತದಾರ ಮಟ್ಟದ ಅಧಿಕಾರಿಗಳು ಸಹ ಪರಿಷ್ಕರಣಾ ಕರ್ತವ್ಯವನ್ನು ಗಂಭೀರವಾಗಿ ಪರಿಗಣಿಸಿ ದೋಷರಹಿತ ಮತದಾರರ ಪಟ್ಟಿ ತಯಾರಿಕೆಗೆ ಪೂರಕವಾಗಿ ಕ್ರಮ ವಹಿಸಬೇಕು ಎಂದು ಮತದಾರರ ಪಟ್ಟಿ ವೀಕ್ಷಕರು ಹಾಗೂ ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರಾದ ಬಿ.ಬಿ. ಕಾವೇರಿ ಅವರು ನಿರ್ದೇಶನ ನೀಡಿದರು.


 ಇದೇ ವೇಳೆ ಮತಗಟ್ಟೆಯ ಮಟ್ಟದ ಅಧಿಕಾರಿ (ಬಿಎಲ್‍ಒ) ಗಳೊಂದಿಗೆ ಸಂವಾದ ನಡೆಸಿದ ಬಿ.ಬಿ. ಕಾವೇರಿ ಅವರು ಕಾರ್ಯನಿರ್ವಹಣೆ ಸಂಬಂಧ ವಿವರ ಪಡೆದುಕೊಂಡರು. ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪೋಸ್ಟರ್ ರಚನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಬಿ.ಬಿ. ಕಾವೇರಿ ಅವರು ಅಭಿನಂದಿಸಿದರು.  


ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಜಿಲ್ಲೆಯಲ್ಲಿ ಕೈಗೊಂಡಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯದ ಕುರಿತು ವಿವರ ಒದಗಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಮತದಾರರ ಜಾಗೃತಿ ಸಂಬಂಧ ಕೈಗೊಂಡಿರುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.


ಉಪವಿಭಾಗಾಧಿಕಾರಿ ಗೀತಾ ಹುಡೇದ, ತಹಶೀಲ್ದಾರರಾದ ಬಸವರಾಜು, ರವಿಶಂಕರ್, ಮಂಜುಳಾ, ಆನಂದಯ್ಯ, ಗ್ರೇಡ್-2 ತಹಶೀಲ್ದಾರ್ ಶಿವರಾಜು, ಚುನಾವಣಾ ತಹಶೀಲ್ದಾರ್ ಜಯಪ್ರಕಾಶ್, ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. 



ಇಲಾಖಾ ಯೋಜನೆ ಕಾರ್ಯಕ್ರಮಗಳ ತ್ವರಿತ ಪ್ರಗತಿಗೆ ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಬಿ.ಬಿ. ಕಾವೇರಿ ತಾಕೀತು


ಚಾಮರಾಜನಗರ, ನವೆಂಬರ್ 29 -- ವಿವಿಧ ಇಲಾಖೆಗಳು ತಮ್ಮ ವ್ಯಾಪ್ತಿಯ ಯೋಜನೆ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯವಹಿಸದೇ ತ್ವರಿತವಾಗಿ ಪ್ರಗತಿ ಸಾಧಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿಯು ಆಗಿರುವ ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರಾದ ಬಿ.ಬಿ.ಕಾವೇರಿ ಅವರು ತಾಕೀತು ಮಾಡಿದರು. 


ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಕುಡಿಯುವ ನೀರು, ಮೂಲಸೌಕರ್ಯ, ಕಟ್ಟಡ ನಿರ್ಮಾಣ ಸೇರಿದಂತೆ ಯಾವುದೇ ಅಭಿವೃದ್ದಿ ಕಾಮಗಾರಿಗಳಿರಲಿ ಆ ಸಂಬಂಧ ಅಂದಾಜು ಪಟ್ಟಿ ಅಂತಿಮಗೊಳಿಸಿ, ಟೆಂಡರ್ ಪ್ರಕ್ರಿಯೆಯನ್ನು ಕೈಗೊಳ್ಳಬೇಕು. ಕಾರ್ಯಾದೇಶ ನೀಡಲು ವಿಳಂಬ ಮಾಡಬಾರದು. ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕು. ಗುಣಮಟ್ಟದ ಕೆಲಸ ಆಗುತ್ತಿದೆಯೇ ಎಂಬ ಬಗ್ಗೆ ಇಲಾಖೆ ಮುಖ್ಯಸ್ಥರೇ ಖುದ್ದಾಗಿ ಪರಿಶೀಲಿಸಬೇಕು ಎಂದು ಜಿಲ್ಲಾ ಪಂಚಾಯತ್ ಆಡಳಿತ ಅಧಿಕಾರಿ ಕಾವೇರಿ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. 


ಅಮೃತ ಮಹೋತ್ಸವದ ಅಂಗವಾಗಿ ಅನುಷ್ಠಾನವಾಗಬೇಕಿರುವ ಯೋಜನೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಅಮೃತ ಸರೋವರ ಇತರೆ ಕಾಮಗಾರಿಗಳಿಗೆ ವಿಶೇಷ ಗಮನ ನೀಡಿ ನಿಗದಿತ ಅವಧಿಯೊಳಗೆ ಪೂರ್ಣವಾಗುವಂತೆ ನೋಡಿಕೊಳ್ಳಬೇಕು. ಇಲಾಖೆ ಅಧಿಕಾರಿಗಳು ಕಾಲಕಾಲಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು ಎಂದರು. 


ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೆಚ್ಚಿನ ಪ್ರಗತಿಯಾಗಬೇಕು. ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿಯೂ ಸಹ ಉದ್ಯೋಗ ಖಾತರಿ ಯೋಜನೆಯಡಿ ಹೆಚ್ಚು ಕೆಲಸಗಳನ್ನು ನಿರ್ವಹಿಸಬೇಕು. ಕೆಲವೇ ಗ್ರಾಮ ಪಂಚಾಯಿತಿಗಳಲ್ಲಿ ಮಾತ್ರ ಕೇಂದ್ರೀಕೃತಗೊಳಿಸಬಾರದು. ಕಡಿಮೆ ಸಾಧನೆ ಇರುವ ಇಲಾಖೆಗಳು ಚುರುಕಾಗಿ ತೊಡಗಿಕೊಂಡು ಪರಿಣಾಮಕಾರಿಯಾಗಿ ಯೋಜನೆ ಅನುಷ್ಠಾನಗೊಳಿಸಬೇಕೆಂದು ಕಾವೇರಿ ಅವರು ತಿಳಿಸಿದರು. 


ವಸತಿ ಯೋಜನೆಯು ಅತ್ಯಂತ ಮಹತ್ವದಾಗಿದೆ. ಮನೆ ಸೌಲಭ್ಯ ತಲುಪಿಸುವ ಯೋಜನೆಯಲ್ಲಿ ಬಾಕಿ ಇರುವ ಕೆಲಸಗಳನ್ನು ವಿಳಂಬ ಮಾಡದೇ ಆಸಕ್ತಿಯಿಂದ ಮಾಡಿ. ಹೊಸದಾಗಿ 2457 ಮನೆಗಳಿಗೆ ಮಂಜೂರಾತಿ ನೀಡಿದ್ದು ಇದಕ್ಕಾಗಿ ಗ್ರಾಮ ಸಭೆ ನಡಾವಳಿ, ಫಲಾನುಭವಿಗಳ ಆದ್ಯತಾ ಪಟ್ಟಿ ಇನ್ನಿತರ ದಾಖಲೆಗಳನ್ನು ಸೂಚಿತ ಅವಧಿಯೊಳಗೆ ಕಳುಹಿಸಿ. ಈ ಕಾರ್ಯದಲ್ಲಿ ನೋಡಲ್ ಅಧಿಕಾರಿಗಳ ಸಹಕಾರ ಪಡೆದು ಎಲ್ಲಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಫಲಾನುಭವಿಗಳಿಗೆ ಸವಲತ್ತು ತಲುಪಿಸಿ ಎಂದರು.


ಹಾಸ್ಟೆಲ್‍ಗಳ ನಿರ್ವಹಣೆ ಉತ್ತಮವಾಗಿರಲಿ. ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾರ್ಯ, ದುರಸ್ತಿ ನಿಧಾನಗತಿಯಲ್ಲಿ ಆಗುವುದ ಬೇಡ. ಕಟ್ಟಡಕ್ಕಾಗಿ ನಿಗದಿಯಾಗಿರುವ ಅನುದಾನ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಲಿ. ಶಾಲೆಗಳಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ, ಎಲ್ಲಿಯೂ ಶಿಕ್ಷಣ ಮೊಟಕುಗೊಳಿಸದಂತೆ ಮಕ್ಕಳನ್ನು ನೋಡಿಕೊಳ್ಳಿ. ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಹೆಚ್ಚಿನ ಮುತುವರ್ಜಿ ವಹಿಸಿ ಎಂದು ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದರು.


ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಮಾತನಾಡಿ ಘನತ್ಯಾಜ್ಯ ಘಟಕ ನಿರ್ವಹಣೆ, ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿ, ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಆಗುತ್ತಿರುವ ಗಿಡಗಳ ನೆಡುವಿಕೆ ಕಾರ್ಯ ಸಮರ್ಪಕವಾಗಿ ಆಗಬೇಕೆಂದು ತಿಳಿಸಿದರು.


ಕೃಷಿ, ಆರೋಗ್ಯ, ತೋಟಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೀನುಗಾರಿಕೆ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ, ಅಲ್ಪಸಂಖ್ಯಾತರ ಕಲ್ಯಾಣ, ರೇಷ್ಮೆ, ವಿವಿಧ ನಿಗಮಗಳು ಸೇರಿದಂತೆ ಇತರೆ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು.  


ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಗುಡೂರು ಭೀಮಸೇನ, ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. 


ಡಿ. 1ರಂದು ನಗರದಲ್ಲಿ ವಿಶ್ವ ಏಡ್ಸ್ ದಿನ ಆಚರಣೆ : ಜಾಥಾ, ವೇದಿಕೆ ಕಾರ್ಯಕ್ರಮ ಆಯೋಜನೆ


ಚಾಮರಾಜನಗರ, ನವೆಂಬರ್ 29 - ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ವತಿಯಿಂದ ಜಿಲ್ಲಾ ಮಟ್ಟದ ವಿಶ್ವ ಏಡ್ಸ್ ದಿನ ಆಚರಣೆ ಕಾರ್ಯಕ್ರಮವನ್ನು ಡಿಸೆಂಬರ್ 1 ರಂದು ನಗರದಲ್ಲಿ ಏರ್ಪಡಿಸಲಾಗಿದೆ.


ವಿಶ್ವ ಏಡ್ಸ್ ದಿನ ಅಂಗವಾಗಿ ಡಿಸೆಂಬರ್ 1 ರಂದು ಬೆಳಿಗ್ಗೆ 9.30 ಗಂಟೆಗೆ ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಜಿಲ್ಲಾಡಳಿತ ಭವನದವರೆಗೆ ಜಾಥಾ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿಯವರು ಜಾಥಾ ಉದ್ಘಾಟಿಸುವರು. ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸಮಾರಂಭ ನಡೆಯಲಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ರವಿಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  


ಹಿಂಗಾರು ಹಂಗಾಮಿಗೆ ಫಸಲ್ ಬಿಮಾ ಯೋಜನೆ : ವಿಮಾ ಕಂತು ಪಾವತಿಗೆ ನವೆಂಬರ್ 30 ಕಡೆಯ ದಿನ 


ಚಾಮರಾಜನಗರ, ನವೆಂಬರ್ 29 - ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು 2022-23ರ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ಅನುಷ್ಟಾನಗೊಳಿಸಲಾಗುತ್ತಿದೆ.  


ಯೋಜನೆಯಡಿ ಹಿಂಗಾರು ಹಂಗಾಮಿನಲ್ಲಿ ಮಳೆ ಆಶ್ರಿತ ಹುರುಳಿ ಬೆಳೆಯನ್ನು ವಿಮೆಗೆ ಒಳಪಡಿಸಿ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹಾಗೂ ಇತರೇ ಬೆಳೆಗಳಾದ ಮುಸುಕಿನ ಜೋಳ, ಈರುಳ್ಳಿ, ಟೊಮೆಟೊ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ ಅಧಿಸೂಚಿಸಲಾಗಿದೆ. 


     ನೀರಾವರಿ ಆಶ್ರಿತ ಮುಸುಕಿನ ಜೋಳಕ್ಕೆ ಪ್ರತಿ ಎಕರೆಗೆ 358 ರೂ., ಮಳೆ ಆಶ್ರಿತ ಮುಸುಕಿನಜೋಳ ಬೆಳೆಗೆ ಪ್ರತಿ ಎಕರೆಗೆ 304 ರೂ., ನೀರಾವರಿ ಆಶ್ರಿತ ಈರುಳ್ಳಿ ಬೆಳೆಗೆ ಪ್ರತಿ ಎಕರೆಗೆ 1518 ರೂ., ಮಳೆ ಆಶ್ರಿತ ಹುರುಳಿ ಬೆಳೆಗೆ ಪ್ರತಿ ಎಕರೆಗೆ 109 ರೂ., ಟೊಮೆಟೊ ಬೆಳೆಗೆ ಪ್ರತಿ ಎಕರೆಗೆ 2388 ರೂ., ವಿಮಾ ಕಂತು ಪಾವತಿಸಬೇಕಿದೆ. ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಈ ಬೆಳೆಗಳಿಗೆ ಬೆಳೆ ವಿಮೆ ಪಾವತಿಸಲು ನವೆಂಬರ್ 30 ಅಂತಿಮ ದಿನವಾಗಿರುತ್ತದೆ.


ರೈತರು ವಿಮಾ ಕಂತನ್ನು ಪಾವತಿಸಿ ನೋಂದಾಯಿಸಿಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರಾದ ಮಧುಸೂದನ್ ಅವರು  ಪ್ರಕಟಣೆಯಲ್ಲಿ ಕೋರಿದ್ದಾರೆ. 




 


Thursday, 24 November 2022

24-11-2022 ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಕೆ. ನಾಗಣ್ಣಗೌಡ ಅವರ ಸೂಚನೆ



 

ಮಕ್ಕಳ ರಕ್ಷಣೆ, ಆರೋಗ್ಯ, ಶಿಕ್ಷಣ ಪ್ರಗತಿಗೆ ವಿಶೇಷ ಕಾಳಜಿ ವಹಿಸಿ : ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಕೆ. ನಾಗಣ್ಣಗೌಡ ಅವರ ಸೂಚನೆ 


     ಚಾಮರಾಜನಗರ, ನವೆಂಬರ್ 24 (ಕರ್ನಾಟಕ ವಾರ್ತೆ):- ಮಕ್ಕಳ ರಕ್ಷಣೆ, ಆರೋಗ್ಯ, ಶಿಕ್ಷಣ, ಸುರಕ್ಷತೆ ಸೇರಿದಂತೆ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿರುವ ಎಲ್ಲಾ ಕ್ರಮಗಳಿಗೆ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಬೇಕೆಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಕೆ. ನಾಗಣ್ಣಗೌಡ ಅವರು ಸೂಚನೆ ನೀಡಿದರು.


     ನಗರದ ಜಿಲ್ಲಾಡಳಿತÀ ಭವನದಲ್ಲಿರುವ ಹಳೇ ಕೆಡಿಪಿ ಸಭಾಂಗಣದಲ್ಲಿಂದು ಮಕ್ಕಳ ರಕ್ಷಣೆ, ಪೋಷಣೆ, ಆರೋಗ್ಯ, ಶೈಕ್ಷಣಿಕ, ಪೋಕ್ಸೋ ಕಾಯ್ದೆ, ಬಾಲನ್ಯಾಯ ತಿದ್ದುಪಡಿ ಕಾಯ್ದೆ ಅನುಷ್ಠಾನ ಸೇರಿದಂತೆ ಮಕ್ಕಳ ವಿಷಯಗಳ ಸಂಬಂಧ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಹಭಾಗಿದಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


     ಮಕ್ಕಳ ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆಯಾಗಬೇಕು. ಮಕ್ಕಳ ಬೆಳವಣಿಗೆ, ವಿಕಾಸ, ಭಾವನೆಗಳ ಹಂಚಿಕೊಳ್ಳುವ ಹಕ್ಕುಗಳನ್ನು ಸಂರಕ್ಷಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಮಕ್ಕಳ ಮೇಲೆ ಶೋಷಣೆ, ದೌರ್ಜನ್ಯ ನಡೆಯದಂತೆ ಅವರ ಸುರಕ್ಷತೆಗೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕೆಂದು ಅಧ್ಯಕ್ಷರು ತಿಳಿಸಿದರು.


     ಅಂಗನವಾಡಿ, ಶಾಲೆ, ಕಾಲೇಜು, ವಿದ್ಯಾರ್ಥಿನಿಲಯಗಳು ಎಲ್ಲೇ ಇರಲಿ ಮಕ್ಕಳ ರಕ್ಷಣೆ ಮುಖ್ಯವಾಗಿದೆ. ಅಧಿಕಾರಿಗಳು ವ್ಯಾಪಕವಾಗಿ ಭೇಟಿ ನೀಡಿ ಮಕ್ಕಳ ಆರೋಗ್ಯ, ಆಹಾರ, ಸುರಕ್ಷತೆ ಮತ್ತಿತ್ತರ ಅಂಶಗಳ ಬಗ್ಗೆ ಪರಿಶೀಲಿಸಬೇಕು.  ಶಾಲೆಗಳಲ್ಲಿ ಶಿಕ್ಷಕರು ಆಪ್ತ ಸಮಾಲೋಚನೆ ಮೂಲಕ ಮಕ್ಕಳ ಮನಸ್ಸನ್ನು ತಿಳಿಯುವ ಕೆಲಸ ಮಾಡಬೇಕು. ಎಲ್ಲಿಯೂ ದೌರ್ಜನ್ಯಗಳು ಆಗದಂತೆ ಮುಂಜಾಗ್ರತೆ ವಹಿಸಬೇಕು ಎಂದರು. 


     ಹಾಸ್ಟೆಲ್‍ಗಳಲ್ಲಿಯೂ ಸಹ ಮಕ್ಕಳ ಬೆಳವಣಿಗೆ ಮೇಲೆ ನಿಗಾ ಇರಬೇಕು. ವಿದ್ಯಾರ್ಥಿನಿಯರು ಇರುವ ಹಾಸ್ಟೆಲ್‍ಗಳಲ್ಲಿ ಮಹಿಳಾ ವಾರ್ಡನ್‍ಗಳು ಇರಬೇಕು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಆಯೋಜನೆ ಮಾಡಬೇಕು. ಕಾರ್ಯಕ್ರಮಗಳು ವಾಸ್ತವವಾಗಿ ವಿದ್ಯಾರ್ಥಿಗಳಲ್ಲಿ ಬದಲಾವಣೆ ತರುವಂತಾದರೆ ಮಾತ್ರ ಉದ್ದೇಶ ಸಫಲವಾಗುತ್ತದೆ ಎಂದು ಅಧ್ಯಕ್ಷರು ತಿಳಿಸಿದರು. 

   

      ಮಕ್ಕಳ ಗ್ರಾಮಸಭೆಗಳನ್ನು ಆಯೋಜನೆ ಮಾಡಿ ಮಕ್ಕಳು ಹೇಳಿಕೊಳ್ಳುವ ಸಮಸ್ಯೆಗಳು ವಿಷಯಗಳನ್ನು ದಾಖಲಿಸಿ ನಡಾವಳಿ ಮಾಡಬೇಕು. ಬಳಿಕ ಇದರ ಅನುಷ್ಠಾನ ಮಾಡುವುದರಿಂದ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಮಕ್ಕಳಿಗೆ ಶಾಲೆಗಳಲ್ಲಿ ಪೌಷ್ಠಿಕ ಆಹಾರದ ಮಹತ್ವ, ಗಿಡಮೂಲಿಕೆಗಳ ಪರಿಚಯ ಮಾಡಿಕೊಡಬೇಕು. ಪಠ್ಯ ಬೋಧನೆ ಜೊತೆಗೆ ಕ್ರೀಡೆ ಇತರೆ ಉತ್ತಮ ಹವ್ಯಾಸಗಳಿಗೆ ಉತ್ತೇಜಿಸಬೇಕು ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಕೆ. ನಾಗಣ್ಣಗೌಡ ಅವರು ತಿಳಿಸಿದರು.


     ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ ಗಾಯಿತ್ರಿ ಅವರು ಮಾತನಾಡಿ ಶಾಲೆಗಳಲ್ಲಿ ಕೊಠಡಿಗಳು, ಶೌಚಾಲಯಗಳ ಅಗತ್ಯತೆ ಬಗ್ಗೆ ಅಧಿಕಾರಿಗಳು ವರದಿ ಮಾಡಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಆಯಾ ಭಾಗದ ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಹೊಣೆಗಾರರಾಗುತ್ತಾರೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಿರುವ ಎಲ್ಲಾ ಕ್ರಮಗಳಿಗೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕೆಂದರು. 


     ಇದೇ ವೇಳೆ ದತ್ತು ಕಾರ್ಯಕ್ರಮ ಹಾಗೂ ಪೋಕ್ಸೊ ಕಾಯ್ದೆಯ ಜಾಗೃತಿ ಕುರಿತ ಪೋಸ್ಟರ್ ಗಳನ್ನು ಬಿಡುಗಡೆ ಮಾಡಲಾಯಿತು. 


      ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಶ್ರೀಧರ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್, ಡಿವೈಎಸ್‍ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಗೀತಾಲಕ್ಷ್ಮಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಸರಸ್ವತಿ, ಮಕ್ಕಳ ರಕ್ಷಣಾಧಿಕಾರಿ ಗೋವಿಂದ, ಬಾಲನ್ಯಾಯ ಮಂಡಳಿಯ ಸದಸ್ಯರಾದ ಟಿ.ಜೆ. ಸುರೇಶ್, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಮಕ್ಕಳ ಕ್ಷೇತ್ರದ  ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Monday, 21 November 2022

21-11-2022 ಚಾಮರಾಜನಗರ ಸುದ್ದಿ


 ನಗರದಲ್ಲಿ ಸ್ವಚ್ಚತಾ ಓಟ, ಮತದಾರರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ


      ಚಾಮರಾಜನಗರ, ನವೆಂಬರ್ 21 - ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಸ್ವಚ್ಚತಾ ಓಟ ಹಾಗೂ ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ ಕುರಿತ ಜಾಗೃತಿ ಕಾರ್ಯಕ್ರಮಗಳಿಗೆ ನಗರದಲ್ಲಿ ಇಂದು ಚಾಲನೆ ದೊರೆಯಿತು. 

     ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಸ್ವಚ್ಚತಾ ಓಟ ಹಾಗೂ ಮತದಾರರ ಜಾಗೃತಿ ಕಾರ್ಯಕ್ರಮಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್ ಅವರು ಹಸಿರು ನಿಶಾನೆ ತೋರಿದರು.

     ಗ್ರಾಮೀಣ ಜನರಲ್ಲಿ ನೈರ್ಮಲ್ಯ ಕುರಿತು ಹೆಚ್ಚಿನ ಅರಿವು ಮೂಡಿಸಲು ಸ್ವಚ್ಚತಾ ಓಟ ಹಾಗೂ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಆರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಪ್ರವಾಸಿ ಮಂದಿರದಲ್ಲಿ ಅಂತ್ಯಗೊಂಡಿತು. ಸ್ವಚ್ಚತಾ ಓಟದಲ್ಲಿ ಅಧಿಕಾರಿಗಳು, ವಿವಿಧ ಶಾಲಾ ಮಕ್ಕಳು, ಸ್ಕೌಟ್ಸ್ ಮತ್ತು ಗೈಡ್ ವಿದ್ಯಾರ್ಥಿಗಳು, ಸಾರ್ವಜನಿಕರು, ಇನ್ನಿತರರು ಪಾಲ್ಗೊಂಡಿದ್ದರು.

     ಇದೇ ವೇಳೆ ಸ್ವಚ್ಚತಾ ಓಟ ಹಾಗೂ ಮತದಾರರ ಜಾಗೃತಿ ಕಾರ್ಯಕ್ರಮದ ಕುರಿತು ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಅವರು ಜಿಲ್ಲೆಯ ಎಲ್ಲಾ ಗ್ರಾಮೀಣ ಭಾಗದಲ್ಲಿ ಸ್ವಚ್ಚತೆ, ಶೌಚಾಲಯಗಳ ಸದ್ಭಳಕೆ, ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತ ಪರಿಕಲ್ಪನೆಯಡಿ ಸಾಂಕೇತಿಕವಾಗಿ ಇಂದು ಸ್ವಚ್ಚತಾ ಓಟ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರು ಮುಕ್ತ ಮತದಾನ ಮಾಡಲು ಅನುಕೂಲವಾಗುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಕುರಿತು ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

     ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್‍ರಾಜು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಲ್ಲಿಕಾರ್ಜುನ್, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಗಂಗಾಧರ್, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣೇಗೌಡ, ಇನ್ನಿತರರು ಸ್ವಚ್ಚತಾ ಓಟದಲ್ಲಿ ಪಾಲ್ಗೊಂಡಿದ್ದರು.  

18 ವರ್ಷ ತುಂಬಿದ ಪ್ರತಿಯೊಬ್ಬರನ್ನು ಮತದಾರರ ಪಟ್ಟಿ ಸೇರ್ಪಡೆಗೆ ಅಗತ್ಯ ಕ್ರಮ : ಜಿ.ಪಂ. ಸಿಇಒ ಕೆ.ಎಂ. ಗಾಯಿತ್ರಿ

       ಚಾಮರಾಜನಗರ, ನವೆಂಬರ್ 21 - ಮುಂಬರುವ ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆಗಾಗಿ ಶೇ. 100ರಷ್ಟು ಮತದಾರರನ್ನು ನೊಂದಣಿ ಮಾಡುವ ಸಂಬಂಧ ಜಿಲ್ಲೆಯಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಸೂಚನೆ ನೀಡಿದರು. 

      ನಗರದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ರಾಷ್ಟ್ರೀಯ ಮತದಾರರ ಪಟ್ಟಿ ನೋಂದಣಿ ಮತ್ತು ಪರಿಷ್ಕರಣೆ-2023 ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಡೆದ ಜಿಲ್ಲಾ ಸ್ವೀಪ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮುಂಬರುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆಗಾಗಿ ಶೇ.100ರಷ್ಟು ಮತದಾರರನ್ನು ನೊಂದಣಿ ಮಾಡುವ ಸಂಬಂಧ ಈಗಾಗಲೇ ಆಯೋಗವು ಕರಡು ಮತದಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ಸಮನ್ವಯತೆ ಸಾಧಿಸಿ 18 ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಯಲ್ಲಿ ನೊಂದಣಿಯಾಗಿರುವ ಬಗ್ಗೆ ಪರಿಶೀಲಿಸಬೇಕು ಎಂದರು. 

ನೊಂದಣಿಯಾಗದೆ ಇರುವ ಮತದಾರರನ್ನು ಮತದಾರರ ಪಟ್ಟಿಗೆ ನೊಂದಣಿ ಮಾಡಿಸಲು ಹಾಗೂ ತಿದ್ದುಪಡಿ, ಬದಲಾವಣೆಗಳಿದ್ದಲ್ಲಿ ಪರಿಷ್ಕರಣೆ ಮಾಡಿಕೊಳ್ಳುವ ಸಂಬಂಧ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಮಟ್ಟಗಳಲ್ಲಿ ವಿವಿಧ ಸ್ವೀಪ್ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿ ಇರುವ ವಿದ್ಯಾರ್ಥಿನಿಲಯಗಳು, ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ, 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಮತದಾರರÀ ಪಟ್ಟಿಯಲ್ಲಿ ನೊಂದಣಿಯಾಗಿರುವ ಬಗ್ಗೆ ಪರಿಶೀಲಿಸಬೇಕು. ನೊಂದಣಿಯಾಗಿಲ್ಲದಿದ್ದಲ್ಲಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಸಮನ್ವಯದಿಂದ ನೊಂದಣಿಗೆ ಕ್ರಮವಹಿಸಬೇಕು. ಮತದಾನದ ಬಗ್ಗೆ ಅರಿವು ಮೂಡಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ತಿಳಿಸಿದರು. 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ವಿಕಲಚೇತನರು, ಸಾಂತ್ವನ ಮತ್ತು ಸ್ವಾಧಾರ ಕೇಂದ್ರ ಹಾಗೂ ವೃದ್ಧಾಶ್ರಮಗಳಲ್ಲಿರುವ 18 ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಯಲ್ಲಿ ನೊಂದಣಿಯಾಗಿರುವ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಟದ ಎಂಬಿಕೆಗಳಿಂದ ಪರಿಶೀಲಿಸಬೇಕು. ಮತದಾನದಲ್ಲಿ ಸಕ್ರಿಯವಾಗಿ ಭಾಗವಹಿಸಲು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 

ಲಿಂಗತ್ವ ಅಲ್ಪಸಂಖ್ಯಾತರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಂಬಂಧ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸ್ವೀಪ್ ಕಾರ್ಯಕ್ರಮವನ್ನು ಆಯೋಜಿಸಿ ಮತದಾರರ ಪಟ್ಟಿಯಲ್ಲಿ ನೊಂದಣಿ ಮತ್ತು ಪರಿಷ್ಕರಣೆ ಮಾಡುವ ಬಗ್ಗೆ ಹಾಗೂ ಮತದಾನದ ಪ್ರಾಮುಖ್ಯತೆ ಕುರಿತು ಅರಿವು ಮೂಡಿಸಬೇಕು. ಜಿಲ್ಲೆಯಲ್ಲಿ ಸೋಲಿಗ, ಬುಡಕಟ್ಟು ಜನಾಂಗದವರು ವಾಸಿಸುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬರನ್ನು ಮತದಾರರ ಪಟ್ಟಿಯಲ್ಲಿ ನೊಂದಣಿ ಮಾಡಲು ಹಾಗೂ ಮತದಾದನದ ಬಗ್ಗೆ ಅರಿವು ಮೂಡಿಸಲು ಸಮುದಾಯದ ಮುಖಂಡರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಸ್ವೀಪ್ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಆಯೋಜಿಸುವಂತೆ ಸೂಚನೆ ನೀಡಿದರು. 

ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ಬರುವ ಕಾಲೇಜು, ವಿದ್ಯಾರ್ಥಿನಿಲಯಗಳು, ಸ್ವ ಸಹಾಯ ಸಂಘಗಳು ಮತ್ತು ಸಂಘಟನೆಗಳ ಮೂಲಕ ಮತದಾರರ ಪಟ್ಟಿಯಲ್ಲಿ 18 ವರ್ಷ ಮೇಲ್ಪಟ್ಟವರ ಹೆಸರುಗಳನ್ನು ನೊಂದಣಿ ಮತ್ತು ಪರಿಷ್ಕರಣೆ ಮಾಡುವ ಬಗ್ಗೆ ಹಾಗೂ ಮತದಾನದ ಕುರಿತು ಅರಿವು, ಜಾಗೃತಿ ಮೂಡಿಸುವ ಸಂಬಂಧ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸ್ವೀಪ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಸೂಚಿಸಿದರು. 
      ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಗೀತಾಲಕ್ಷ್ಮಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. 

ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳಿಗಾಗಿ ವಿಕಲಚೇತನರಿಂದ ಅರ್ಜಿ ಆಹ್ವಾನ

      ಚಾಮರಾಜನಗರ, ನವೆಂಬರ್ 21- ತಾಲೂಕಿನ ನವಿಲೂರು, ಚಂದಕವಾಡಿ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳಿಗಾಗಿ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ. 

      ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಸ್ಥಳೀಯರಾಗಿದ್ದು, ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ ಸೇರಿದವರಾಗಿರಬೇಕು ಹಾಗೂ ಅದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ಯಾರೂ ಅರ್ಜಿ ಸಲ್ಲಿಸದಿದ್ದಲ್ಲಿ ಬೇರೆ ಗ್ರಾಮ ಪಂಚಾಯಿತಿಯ ವಿಕಲಚೇತನರಿಗೆ ಅವಕಾಶ ಕಲ್ಪಿಸಲಾಗುವುದು. ಅರ್ಜಿದಾರರು 18ರಿಂದ 45ರ ವಯೋಮಿತಿಯ ಆರೋಗ್ಯವಂತರಾಗಿರಬೇಕು. ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು. ಅಂಗವಿಕಲರಾಗಿರಬೇಕು, ಅಂಧರಿಗೆ ಭಾಗಶಃ ಶ್ರವಣದೋಷವುಳ್ಳವರಿಗೆ (ಮೈಲ್ ಮತ್ತು ಮಾಡರೇಟ್) ಮತ್ತು ದೈಹಿಕ ಅಂಗವಿಕಲರಿಗೆ ಅವಕಾಶ ಕಲ್ಪಿಸಲಾಗುವುದು.

      ಮೂರು ರೀತಿಯ ಅಂಗವಿಕಲರಿಗೆ ಸಮನಾಗಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ಆಯ್ಕೆ ಮಾಡಬೇಕು. ಒಂದು ವರ್ಗದ ಅಂಗವಿಕಲರು ಆಯ್ಕೆಗೆ ಲಭ್ಯವಿಲ್ಲದಿದ್ದಲ್ಲಿ ಇನ್ನೊಂದು ವರ್ಗದಲ್ಲಿರುವ ಅಂಗವಿಕಲ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಅಂಗವಿಕಲತೆಯು ಶೇ.40 ಕ್ಕಿಂತ ಹೆಚ್ಚು ಹಾಗೂ ಶೇ. 75 ಕ್ಕಿಂತ ಕಡಿಮೆ ಇದ್ದು, ವೈದ್ಯಕೀಯ ಪ್ರಮಾಣ ಪತ್ರ, ಗುರುತಿನ ಚೀಟಿಯ ದಾಖಲೆ ಹೊಂದಿರಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಿ ಮಾಹಿತಿ ಅಥವಾ ಸೌಲಭ್ಯ ಕಲ್ಪಿಸಲು ಸಮರ್ಥರಾಗಿರಬೇಕು. 

      ಗೌರವಧನ ನೇಮಕಾತಿಯು ಒಂದು ವರ್ಷದ ನಂತರ ಪುನರ್ ಪರಿಶೀಲನೆಗೆ ಒಳಪಟ್ಟಿರುತ್ತದೆ. ಪುನರ್ ಪರಿಶೀಲನೆಯಲ್ಲಿ ಕೆಲಸ ಕಾರ್ಯಗಳ ನಿರ್ವಹಣೆ, ಪ್ರಗತಿ, ವಿಕಲಚೇತನರೊಂದಿಗೆ ಸಂಬಂಧ, ವಿವಿಧ ಇಲಾಖೆಗಳೊಂದಿಗೆ, ಸ್ವಯಂ ಸೇವಾ ಸಂಸ್ಥೆ ಸಮುದಾಯದೊಂದಿಗೆ ಇಟ್ಟುಕೊಂಡಿರುವ ಸಂಬಂಧಗಳನ್ನು ಪರಿಶೀಲಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಸರ್ಕಾರ ನಿಗದಿಪಡಿಸಿರುವ ಕರ್ತವ್ಯಗಳನ್ನು ನಿರ್ವಹಿಸಲು ಸಮರ್ಥರೆಂಬ ಬಗ್ಗೆ ಪರಿಶೀಲಿಸಿ ಆಯ್ಕೆ ಮಾಡಲಾಗುವುದು. ಹುದ್ದೆಯು ಗೌರವಧನದ ಆಧಾರದ ಮೇಲೆ ಇರುವುದರಿಂದ ಸೇವೆ ಅಗತ್ಯವಿಲ್ಲವೆಂದು ಕಂಡು ಬಂದಲ್ಲಿ ಕರ್ತವ್ಯದಿಂದ ಬಿಡುಗಡೆ ಮಾಡಬಹುದಾಗಿದೆ. ಗೌರವಧನದ ಆಧಾರದ ಮೇಲೆ ಕೆಲಸ ನಿರ್ವಹಿಸುವುದನ್ನು ಖಾಯಂಗೊಳಿಸುವಂತೆ ಕೋರಲು ಅವಕಾಶವಿರುವುದಿಲ್ಲ.

    ಕಚೇರಿಯಿಂದ ನಿಗದಿತ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಡಿಸೆಂಬರ್ 5ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಗರದ ತಾ.ಪಂ ಕಾರ್ಯಾಲಯದ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನು ಸಂಪರ್ಕಿಸುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ನ. 29ರಂದು ಯಳಂದೂರು ತಾಲೂಕು ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಹಿತರಕ್ಷಣಾ ಸಮಿತಿ ಸಭೆ

       ಚಾಮರಾಜನಗರ, ನವೆಂಬರ್ 21 - ಯಳಂದೂರು ತಾಲೂಕು ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಹಿತರಕ್ಷಣಾ ಸಮಿತಿ ಸಭೆಯು ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 29ರಂದು ಬೆಳಿಗ್ಗೆ 11 ಗಂಟೆಗೆ ಯಳಂದೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. 

     ತಾಲೂಕಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಭೆಗೆ ಆಗಮಿಸಿ ಸೂಕ್ತ ಸಲಹೆಗಳನ್ನು ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಯಳಂದೂರಿನ ಕುಂಬಾರಗುಂಡಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು (ಗ್ರೇಡ್-2), ಕಚೇರಿ ದೂ.ಸಂ 08226-240309 ಸಂಪರ್ಕಿಸುವಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಹಿತರಕ್ಷಣಾ ಸಮಿತಿಯ ಅಧ್ಯಕ್ಷರು ಹಾಗೂ ತಹಶೀಲ್ದಾರ್ ಪ್ರಕಟಣೆಯಲ್ಲಿ ಕೊರಿದ್ದಾರೆ. 

ನ. 22ರಂದು ನಗರದಲ್ಲಿ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ 

     ಚಾಮರಾಜನಗರ, ನವೆಂಬರ್ 21 - ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವತಿಯಿಂದ 2022-23ನೇ ಸಾಲಿನ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನವನ್ನು ನವೆಂಬರ್ 22ರಂದು ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ. 

     ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ವಿಜ್ಞಾನ ವಸ್ತು ಪ್ರದರ್ಶನದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕರು (ಅಭಿವೃದ್ದಿ) ಹಾಗೂ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ನ. 24ರಂದು ಗುಂಡ್ಲುಪೇಟೆ, ಬೇಗೂರು ವ್ಯಾಪ್ತಿಯ ವಿವಿಧೆಡೆ ವಿದ್ಯುತ್ ವ್ಯತ್ಯಯ 

       ಚಾಮರಾಜನಗರ, ನವೆಂಬರ್ 21 :- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಗುಂಡ್ಲುಪೇಟೆ ಮತ್ತು ಬೇಗೂರು ಉಪವಿಭಾಗ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ನವೆಂಬರ್ 24 ರಂದು ಹಮ್ಮಿಕೊಂಡಿರುವುದರಿಂದ ಅಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

     ಗುಂಡ್ಲುಪೇಟೆ, ಭರಗಿ, ಕೋಡಿಹಳ್ಳಿ, ಬೇರಂಬಾಡಿ, ನೆನೆಕಟ್ಟೆ, ವೀರನಪುರ ಮತ್ತು ಬೊಮ್ಮಲಾಪುರ, ಬೆಳವಾಡಿ, ಬಾಚಳ್ಳಿ, ದಾರಿಬೇಗೂರು, ಕೊಡಸೋಗೆ, ಹೆಗ್ಗವಾಡಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. 

      ಹಂಗಳ, ಶಿವಪುರ, ಕಲ್ಲಿಗೌಡನಹಳ್ಳಿ ಎನ್.ಜೆ.ವೈ, ಎಲಚಟ್ಟಿ, ಗೋಪಾಲ್‍ಪುರ ಎನ್.ಜೆ.ವೈ, ದೇವರಹಳ್ಳಿ, ಹೊನ್ನೇಗೌಡನಹಳ್ಳಿ, ಮಲ್ಲಯ್ಯನಪುರ ಮತ್ತು ಬರಗಿ, ಹೊಂಗಹಳ್ಳಿ ಐಪಿ, ಮುಂಟಿಪುರ ಐಪಿ, ಹೆಚ್.ಎಸ್.ಹುಂಡಿ ಎನ್.ಜೆ.ವೈ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. 
      
      ಸಾರ್ವಜನಿಕರು ನಿಗಮದ ಜೊತೆ ಸಹಕರಿಸಬೇಕು. ವಿದ್ಯುತ್ ಸಂಬಂಧಿತ ದೂರು ಮತ್ತು ಸಹಾಯಕ್ಕಾಗಿ ಗ್ರಾಹಕರು ಉಚಿತ ದೂ.ಸಂ 1912 ಸಂಪರ್ಕಿಸುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಪ್ಲಾಸ್ಟಿಕ್ ಕ್ರೇಟ್ಸ್‍ಗೆ ಸಹಾಯಧನ

     ಚಾಮರಾಜನಗರ, ನವೆಂಬರ್ 21 - ತೋಟಗಾರಿಕೆ ಇಲಾಖೆಯಿಂದ 2022-23ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್‍ಕೆವಿವೈ) ಯಡಿ ಪ್ಲಾಸ್ಟಿಕ್ ಕ್ರೇಟ್ಸ್‍ಗೆ ಸಹಾಯಧನ ನೀಡುವ ಕಾರ್ಯಕ್ರಮವನ್ನು ಅನುμÁ್ಠನಗೊಳಿಸಲಾಗುತ್ತಿದೆ. 

     ಯೋಜನೆಯಡಿ ತೋಟಗಾರಿಕೆ ಬೆಳೆಗಳ ಫಸಲಿನಲ್ಲಿ ಹಣ್ಣು, ತರಕಾರಿ ಬೆಳೆ ಕೊಯ್ಲೂತ್ತರ ನಷ್ಟವನ್ನು ತಡೆಗಟ್ಟಲು ಹಾಗೂ ಸಮರ್ಪಕ ಕೊಯ್ಲೂತ್ತರ ನಿರ್ವಹಣೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಪ್ಲಾಸ್ಟಿಕ್ ಕ್ರೇಟ್ಸ್ ಬಳಕೆ ಪ್ರಮುಖ ಪಾತ್ರವಹಿಸುತ್ತದೆ. ಇಲಾಖೆ ಅನುಮೋದಿತ ಕಂಪನಿ, ಸಂಸ್ಥೆಗಳಿಂದ ಮಾತ್ರ ಖರೀದಿಸುವ ಪ್ಲಾಸ್ಟಿಕ್ ಕ್ರೇಟ್ಸ್‍ಗಳಿಗೆ ಎಲ್ಲಾ ವರ್ಗದ ರೈತರಿಗೆ ಶೇ. 50ರ ಸಹಾಯಧನ (ಆರ್‍ಕೆವಿವೈ ಯೋಜನೆಯಡಿ- ಶೇ. 25, ಹೊಂದಾಣಿಕೆ ವೆಚ್ಚ ಸಿಎಚ್‍ಡಿ ಯೋಜನೆಯಡಿ- ಶೇ.25)  ರಂತೆ ಎರಡು ಕಂತುಗಳಲ್ಲಿ ಒಟ್ಟು 7500 ರೂ. ಗಳನ್ನು ಪ್ರತಿ ಹೆಕ್ಟೇರ್ ಗೆ (ಗರಿಷ್ಟ ಎರಡು ಹೆಕ್ಟೇರ್ ಮೀರದಂತೆ) ಸಹಾಯಧನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

     ಸೌಲಭ್ಯಕ್ಕಾಗಿ ಭಾವಚಿತ್ರ, ಪ್ರಸಕ್ತ ಸಾಲಿನ ಪಹಣಿ, ಗಣಕಿಕೃತ ಬೆಳೆ ದೃಡೀಕರಣ, ತೋಟಗಾರಿಕೆ ಬೆಳೆಯಿರುವ ತಾಕಿನ ಪೋಟೊ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಾದಲ್ಲಿ ಜಾತಿ ಪ್ರಮಾಣ ಪತ್ರದೊಂದಿಗೆ ಅಗತ್ಯ ದಾಖಲೆಗಳನ್ನು ತಾಲೂಕಿನ ತೋಟಗಾರಿಕೆ ಇಲಾಖೆಗೆ ಸಲ್ಲಿಸಿ ಅನುಮೋದಿತ ಕಂಪನಿ, ಸಂಸ್ಥೆ ವಿವರವನ್ನು ಪಡೆದು ಪ್ಲಾಸ್ಟಿಕ್ ಕ್ರೇಟ್ಸ್‍ಗಳನ್ನು ಖರೀದಿಸಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ತೋಟಗಾರಿಕೆ ಇಲಾಖೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ವಾಣಿಜ್ಯ ಹಣ್ಣಿನ ಬೆಳೆಗಳ ನಿರ್ವಹಣೆಗೆ ತೋಟಗಾರಿಕೆ ಇಲಾಖೆಯಿಂದ ಸಲಹೆ

      ಚಾಮರಾಜನಗರ, ನವೆಂಬರ್ 21 :- ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್‍ಕೆವಿವೈ) ಯಡಿ 2022-23ನೇ ಸಾಲಿನಲ್ಲಿ ಜಿಲ್ಲೆಯ ವಾಣಿಜ್ಯ ಹಣ್ಣಿನ ಬೆಳೆಗಳಾದ ಮಾವು, ಸೀತಾಫಲ, ಸೀಬೆ, ಸಪೋಟ, ದಾಳಿಂಬೆ, ನಿಂಬೆ, ಗೋಡಂಬಿ ಇತ್ಯಾದಿ ಬೆಳೆಗಳ ಮೇಲಾವರಣ ನಿರ್ವಹಣೆಗೆ ತೋಟಗಾರಿಕೆ ಇಲಾಖೆ ಸಲಹೆ ಮಾಡಿದೆ. 
     ಮಾವು, ಸೀತಾಫಲ, ಸೀಬೆ, ಸಪೋಟ, ದಾಳಿಂಬೆ, ನಿಂಬೆ, ಗೋಡಂಬಿ ಇತ್ಯಾದಿ ಬೆಳೆಗಳನ್ನು ಅಧಿಕ ಸಾಂದ್ರತೆ ನಾಟಿ ಪದ್ದತಿಯಲ್ಲಿ ಬೆಳೆಯಾಲಾಗುತ್ತಿದ್ದು, ಸದರಿ ಪದ್ದತಿಯಲ್ಲಿ ಗಿಡಗಳ ಅಂತರ ಅತಿ ಕಡಿಮೆ ಇರುವುದರಿಂದ ಗಿಡಗಳ ಮೇಲಾವರಣ ನಿರ್ವಹಣೆ ಅತ್ಯಾವಶ್ಯಕವಾಗಿರುತ್ತದೆ. ಇದರಿಂದ ಗುಣಮಟ್ಟದ ಹಣ್ಣುಗಳನ್ನು ಪಡೆಯುವುದಲ್ಲದೆ ತೋಟದ ನಿರ್ವಹಣೆ ಸುಲಭವಾಗಿರುತ್ತದೆ.

     ಮೇಲಾವರಣ ನಿರ್ವಹಣೆಗಳಾದ ಕೀಟರೋಗ ಬಾದಿತ, ನೆಲಕ್ಕೆ ತಾಗುವ ಅನಗತ್ಯ ರೆಂಬೆ, ಕೊಂಬೆಗಳನ್ನು ಕತ್ತರಿಸಬೇಕು, ಸೂರ್ಯನ ಕಿರಣ ಎಲ್ಲಾ ಭಾಗಗಳಿಗೂ ಬೀಳುವಂತೆ ಮಾಡಬೇಕು, ಗಿಡ ಬೆಳೆಯಲು ಆಕಾರ ಕೊಡುವುದು ಪುನಶ್ಚೇತನ ಕೈಗೊಳ್ಳಲು ಇತ್ಯಾದಿ ಚಟುವಟಿಕೆಯನ್ನು ಕೈಗೊಳ್ಳಲು ಸದರಿ ಯೋಜನೆಯಡಿ ಪ್ರತಿ ಫಲಾನುಭವಿಗಳಿಗೆ ಶೇ. 25 ರಂತೆ 10000 ರೂ. ಗಳನ್ನು ಪ್ರತಿ ಹೆಕ್ಟೇರ್ ಗೆ (ಗರಿಷ್ಟ 2 ಹೆಕ್ಟೇರ್ ಗೆ ಮೀರದಂತೆ) ಸಹಾಯಧನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. 

     ಅಧಿಕ ಸಾಂದ್ರತೆ ಪದ್ದತಿಯಲ್ಲಿ ಹಣ್ಣಿನ ಬೆಳೆ ನಾಟಿಮಾಡಿರುವ ಆಸಕ್ತ ರೈತರು ಭಾವಚಿತ್ರ, ಪ್ರಸಕ್ತ ಸಾಲಿನ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್, ತಾಕಿನಲ್ಲಿ ಹಣ್ಣಿನ ಬೆಳೆಯೊಂದಿಗೆ ಛಾಯಚಿತ್ರ, ಗಣಕೀಕೃತ ಬೆಳೆ ದೃಡೀಕರಣ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಾದಲ್ಲಿ ಜಾತಿ ಪ್ರಮಾಣ ಪತ್ರ ಇತ್ಯಾದಿ ದಾಖಲೆಗಳನ್ನು ತಾಲೂಕಿನ ತೋಟಗಾರಿಕೆ ಇಲಾಖೆಗೆ ಸಲ್ಲಿಸಿ ಮಾಹಿತಿ ಪಡೆದು ಯೋಜನೆಯ ಸದುಪಯೋಗಪಡಿಸಿಕೊಳ್ಳುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*

  ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*    ಚಾಮರಾಜನಗರ, ಸೆಪ್ಟೆಂಬರ್ 28 :- ಈ ಬಾರಿಯ ರಾಷ್ಟ್ರೀಯ ಲೋ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು