Tuesday, 8 August 2017

ಆ. 9 ರಿಂದ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತವನ್ನಾಗಿಸಲು ವಿವಿಧ ಕಾರ್ಯಕ್ರಮ

 ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ, ಆ. 08  ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಜಿಎನ್‍ಎಂ, ಬಿಎಸ್ಸಿ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ತರಬೇತಿ ಪಡೆಯುತ್ತಿರುವ ಮತೀಯ ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದೆ.
ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ, ಪಾರ್ಸಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿಂiÀiನ್ನು ನಗರದ ಜಿಲ್ಲಾಡಳಿತ ಭವನದ ಮಲ್ಟಿಪರ್ಪಸ್ ಹಾಲ್‍ನಲ್ಲಿರುವ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಪಡೆದು ಭರ್ತಿ ಮಾಡಿ ಆಗಸ್ಟ್ 31ರ ಒಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08226-224370 ಸಂಪರ್ಕಿಸುವಂತೆ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅತಿಥಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

ಚಾಮರಾಜನಗರ, ಆ. 08 - ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಹಿಂದುಳಿದ ವರ್ಗ)ಯಲ್ಲಿ ಗಣಿತ ಶಿಕ್ಷಕರು ಹಾಗೂ ವಿಜ್ಞಾನ ಶಿಕ್ಷಕರುಗಳ ಹುದ್ದೆ ಖಾಲಿ ಇದ್ದು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳ¯ು ಅರ್ಜಿ ಆಹ್ವಾನಿಸಿದೆ.
ಬಿಎಸ್ಸಿ, ಬಿಇಡಿ (ಪಿಸಿಎಂ, ಪಿಎಂಸಿ) ವಿದ್ಯಾರ್ಹತೆಯ ಗಣಿತ ಶಿಕ್ಷಕರ ಹುದ್ದೆಗೆ ಹಾಗೂ ಬಿಎಸ್ಸಿ ಬಿಇಡಿ (ಸಿಬಿಜಡ್) ವಿದ್ಯಾರ್ಹತೆಯುಳ್ಳವರು ವಿಜ್ಞಾನ ಶೀಕ್ಷಕರ ಹುದ್ದೆಗೆ ಅರ್ಹರು.
ಅರ್ಜಿ ಸಲ್ಲಿಸಲು ಆಗಸ್ಟ್ 16 ಕಡೆಯ ದಿನ. ಹೆಚ್ಚಿನ ಮಾಹಿತಿಗೆ ವಸತಿ ಶಾಲಾ ಪ್ರಾಂಶುಪಾಲರನ್ನು (ದೂ.ಸಂ. 08229-232228, ಮೊಬೈಲ್ 9164373076) ಸಂಪರ್ಕಿಸುವಂತೆ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಚಾಮರಾಜನಗರ, ಆ. 08 - ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ, ವಿದ್ಯಾಸಿರಿ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಸೌಲಭ್ಯಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಅವಧಿಯನ್ನು ಸೆಪ್ಟೆಂಬರ್ 10ರವರೆಗೆ ವಿಸ್ತರಿಸಲಾಗಿದೆ.
ಅರ್ಜಿ ಹಾಗೂ ವಿವರಗಳಿಗೆ ಇಲಾಖೆಯ ವೆಬ್ ಸೈಟ್ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ನ್ನು ನೋಡಬಹುದು. ಹಾಗೂ ಸಹಾಯವಾಣಿ ಸಂಖ್ಯೆ 080-65970005, 080-6597006 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಆ. 9 ರಿಂದ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತವನ್ನಾಗಿಸಲು ವಿವಿಧ ಕಾರ್ಯಕ್ರಮ

ಚಾಮರಾಜನಗರ, ಆ. 08 - ಜಿಲ್ಲಾ ಪಂಚಾಯತ್ ವತಿಯಿಂದ ಸ್ವಚ್ಚ ಭಾರತ್ ಮಿಷನ್ ಕಾರ್ಯಕ್ರಮದಡಿ ಜಿಲ್ಲೆಯನ್ನು ಬಯಲು ಬಹಿರ್ದೆಸೆಯಿಂದ ಮುಕ್ತ ಗ್ರಾಮಗಳನ್ನಾಗಿ ಮಾಡಲು 71ನೇ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಸ್ವಾತಂತ್ರ್ಯ ಸಪ್ತಾಹವನ್ನು ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಚರಿಸಲಾಗುತ್ತಿದ್ದು ಆಗಸ್ಟ್ 9ರಿಂದ 15ರವರೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಆಗಸ್ಟ್ 9ರಂದು ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಳೀಯ ಜನಪ್ರತಿನಿಧಿಗಳಿಂದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಆಗಸ್ಟ್ 10ರಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಶೇಷ ಗ್ರಾಮಸಭೆ ಕರೆದು ಶೇ.100ರಷ್ಟು ನೈರ್ಮಲ್ಯ ಸಾಧನೆ ಮಾಡುವಂತೆ ಗ್ರಾಮ ಪಂಚಾಯಿತಿಗಳನ್ನು ಬಯಲು ಬಹಿರ್ದೆಸೆ ಮುಕ್ರವಾಗಿರುವ ಕುರಿತು ವಾರ್ಡ್ ಸಭೆ, ಗ್ರಾಮ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗುತ್ತದೆ.
ಆಗಸ್ಟ್ 11 ರಿಂದ 13ರವರೆಗೆ ಸ್ವಾತಂತ್ರ್ಯ ಸಪ್ತಾಹ ಅಂಗವಾಗಿ ಗುಂಡಿ ತೆಗೆಯುವ ಅಭಿಯಾನದಲ್ಲಿ ಒಂದು ದಿನಕ್ಕೆ 150 ಶೌಚಾಲಯ ನಿರ್ಮಿಸಲು ಗುಂಡಿಗಳನ್ನು ತೆಗೆಸಲಾಗುತ್ತದೆ.
ಆಗಸ್ಟ್ 14ರಂದು ಶಾಲಾ ಕಾಲೇಜುಗಳಲ್ಲಿ ನೈರ್ಮಲ್ಯ ಕುರಿತು ಜಾಥಾ, ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಆಯೋಜನೆ,  ನೈರ್ಮಲ್ಯ ರ್ಯಾಲಿ, ಸ್ಥಬ್ದಚಿತ್ರಗಳನ್ನು ಪ್ರದರ್ಶನ ನಡೆಯಲಿದೆ.
ಆಗಸ್ಟ್ 15ರಂದು ನೈರ್ಮಲ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಗುರುತಿಸಿ ಅಭಿನಂದಿಸಲಾಗುತ್ತದೆ. ಬಯಲು ಬಹಿರ್ದೆಸೆಯಿಂದ ಮುಕ್ತ ಸ್ವಾತಂತ್ರ್ಯ ಸಪ್ತಾಹದ ಸಮಾರಂಭ ಕಾರ್ಯಕ್ರಮ ಏರ್ಪಡಿಸಲಾಗುವುದು. ಅಕ್ಟೋಬರ್ 2ರೊಳಗೆ ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳನ್ನಾಗಿ ಮಾಡಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ತಿಳಿಸಿದ್ದಾರೆ.





Monday, 7 August 2017

ರಸ್ತೆ ಸುರಕ್ಷತಾ ಕ್ರಮಗಳ ಪಾಲನೆ ಬಗ್ಗೆ ಅರಿವು ಮೂಡಿಸಿ : ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾರ್ (07-08-2017)

ರಸ್ತೆ ಸುರಕ್ಷತಾ ಕ್ರಮಗಳ ಪಾಲನೆ ಬಗ್ಗೆ ಅರಿವು ಮೂಡಿಸಿ : ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾರ್

ಚಾಮರಾಜನಗರ, ಆ. 07 - ಜಿಲ್ಲೆಯಲ್ಲಿ ಅಪಘಾತ ಪ್ರಕರಣಗಳನ್ನು ತಗ್ಗಿಸುವ ಸಲುವಾಗಿ ರಸ್ತೆ ಸುರಕ್ಷತಾ ಕ್ರಮಗಳ ಪಾಲನೆ ಬಗ್ಗೆ ವ್ಯಾಪಕವಾಗಿ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ರಸ್ತೆ ಸುರಕ್ಷತಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಅಪಘಾತ ಪ್ರಕರಣಗಳ ಸಂಖ್ಯೆ ಸಾಕಷ್ಟು ದಾಖಲಾಗುತ್ತಿವೆ. ಅಪಘಾತಗಳಿಗೆ ನಾನಾ ಕಾರಣಗಳು ಇರಬಹುದು. ಆದರೆ ನಿರ್ಧಿಷ್ಟವಾಗಿ ಅಪಘಾತ ಸಂಭವಿಸಲು ಇರುವ ಕಾರಣಗಳ ಬಗ್ಗೆ ಹುಡುಕಬೇಕಿದೆ. ರಸ್ತೆ ಸುರಕ್ಷತಾ ನಿಯಮಗಳು ಪಾಲನೆಯಾಗದೇ ಇರುವುದರಿಂದ ಅಪಘಾತಗಳು ನಡೆಯುತ್ತಿವೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಬೇಕಿದೆ ಎಂದರು.
ರಸ್ತೆ ಅಪಘಾತ ಪ್ರಕರಣಗಳನ್ನು ವರ್ಗೀಕರಿಸಿ ಸಲ್ಲಿಸಲಾಗುವ ಮಾಹಿತಿ ವರದಿ ತಯಾರಿಕೆಯಲ್ಲಿಯೂ ಪ್ರಸ್ತುತ ಸಂದರ್ಭಗಳಿಗೆ ಅನುಗುಣವಾಗಿ ಬದಲಾವಣೆ ಮಾಡಿಕೊಳ್ಳಬೇಕಿದೆ. ಈ ಹಿಂದಿನ ನಮೂನೆಯಲ್ಲಿ ಕೆಲವು ಮಾರ್ಪಾಡುಗಳ ಅಗತ್ಯವಿದೆ. ಇದರಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಎಷ್ಟು ಪ್ರಮಾಣದಲ್ಲಿ ಅಪಘಾತ ಪ್ರಕರಣಗಳು ನಡೆದಿವೆ ಎಂಬ ಬಗ್ಗೆ ನಿಖರ ಮಾಹಿತಿ ತಿಳಿಯಬಹುದಾಗಿದೆ. ಹೀಗಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ವರದಿ ನೀಡುವ ನಮೂನೆಗಳನ್ನು ಅಗತ್ಯಕ್ಕೆ ಅನುಗುಣವಾಗಿ ಮಾರ್ಪಾಡು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡುವ ವಿಷಯದಲ್ಲಿ ನಾಗರಿಕರಿಗೆ ಪರಿಪೂರ್ಣವಾದ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಏರ್ಪಾಡು ಮಾಡಬೇಕು. ಜನರಿಗೆ ರಸ್ತೆ ಸುರಕ್ಷತಾ ನಿಯಮಗಳು ಮನದಟ್ಟು ಮಾಡಿಕೊಡುವ ಕೆಲಸಕ್ಕೆ ಪ್ರಾದೇಶಿಕ ಸಾರಿಗೆ ಇಲಾಖೆ ಮುಂದಾಗಬೇಕು. ಶಾಲಾಕಾಲೇಜು ವ್ಯಾಪ್ತಿಯಲ್ಲಿ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಸುರಕ್ಷತೆ ನಿಯಮಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಂತೆ ತಿಳಿವಳಿಕೆ ನೀಡಬೇಕು ಎಂದು ಹರೀಶ್ ಕುಮಾರ್ ತಿಳಿಸಿದರು.
ರಸ್ತೆ ಸುರಕ್ಷತಾ ಪ್ರಾಧಿಕಾರ ಸಮಿತಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕಿದ್ದರೆ ಪ್ರತಿ ತಿಂಗಳು ಸಭೆ ನಡೆಯಬೇಕು. ಜಿಲ್ಲಾ ವ್ಯಾಪ್ತಿಯಲ್ಲಿ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗಿವೆ. ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಲಾಖೆ ನಿರ್ವಹಣೆಯ ರಸ್ತೆಗಳು ಇವೆ. ಈ ಹಿನ್ನೆಲೆಯಲ್ಲಿ ಸಮಿತಿಯ ಸದಸ್ಯರಲ್ಲಿ ರಸ್ತೆಗೆ ಸಂಬಂಧಿಸಿದ ಎಲ್ಲ ಇಲಾಖೆ ಅಧಿಕಾರಿಗಳು ಸದಸ್ಯರಾಗಬೇಕಿದೆ. ಮುಂದಿನ ಸಭೆಯ ವೇಳೆಗೆ ಸಮಿತಿಯಲ್ಲಿ ಕೈಬಿಟ್ಟುಹೋಗಿರುವ ಅಧಿಕಾರಿಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಇನ್ನು ಮುಂದೆ ಜಿಲ್ಲಾ ವ್ಯಾಪ್ತಿಯಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಕೆಲಸದೊಂದಿಗೆ ರಸ್ತೆಗೆ ಸಂಬಂಧಿಸಿದ ಇಲಾಖೆಗಳು ಸಹ ಒಟ್ಟಾಗಿ ಸೇರಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಅಪಘಾತ ಪ್ರಕರಣಗಳು ಇಳಿಮುಖವಾಗಲು ಅಳವಡಿಸಬೇಕಿರುವ ಸಂಚಾರಿ ಸುರಕ್ಷತಾ ಫಲಕಗಳು, ಇತರೆ ಮಾಹಿತಿ ನೀಡುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೆಚ್ಚು ಗಮನ ನೀಡಬೇಕೆಂದು ಜಿಲ್ಲಾಧಿಕಾರಿ ಹರೀಶ್ ಕುಮಾರ್ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಮಾತನಾಡಿ ಅಪಘಾತ ನಡೆದ ಸ್ಥಳಕ್ಕೆ ಪೊಲೀಸರಷ್ಟೇ ಭೇಟಿ ಕೊಡುವ ಪರಿಪಾಠವಿದೆ. ಆದರೆ ಯಾವ ಕಾರಣದಿಂದ ರಸ್ತೆ ಅಪಘಾತ ಸಂಭವಿಸಿದೆ? ವಾಹನ ಸವಾರರಿಗೆ ರಸ್ತೆ ಸುರಕ್ಷತೆ ನಿಯಮ ಸೂಚನೆಗಳು ನೀಡದೇ ಇದ್ದರಿಂದ ಅಪಘಾತ ನಡೆದಿದೆಯೇ ಇಲ್ಲವೇ? ರಸ್ತೆ ಕಾಮಗಾರಿ ಸರಿಯಿಲ್ಲದೇ ಪ್ರಕರಣ ಸಂಭವಿಸಿದೆಯೇ ಎಂಬ ಬಗ್ಗೆ ಎಂಜಿನಿಯರ್‍ಗಳು ಸ್ಥಳಕ್ಕೆ ಭೇಟಿ ನೀಡಬೇಕು. ಇದರಿಂದ ನಿರ್ಧಿಷ್ಟ ಕಾರಣಗಳು ತಿಳಿದುಬಂದು ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದಾಗಿದೆ ಎಂದರು.
ರಸ್ತೆ ನಿರ್ವಹಣೆ ಹಾಗೂ ನಿರ್ಮಾಣ ಮಾಡುವ ಇಲಾಖೆಗಳು ಕ್ರಿಯಾ ಯೋಜನೆಯಲ್ಲಿ ರಸ್ತೆ ಸುರಕ್ಷತಾ ಪಾಲನೆಗೆ ಬೇಕಿರುವ ಅನುದಾನವನ್ನು ಸಹ ನಿಗದಿಮಾಡಿಕೊಳ್ಳಬೇಕು. ಇದರಿಂದ ರಾಜ್ಯ, ರಾಷ್ಟ್ರೀಯ ಹಾಗೂ ಇತರೆ ರಸ್ತೆಗಳಲ್ಲಿ ರಸ್ತೆ ಸುರಕ್ಷತೆಗೆ ಬೇಕಿರುವ ಕೆಲಸಗಳಿಗೆ ಅನುದಾನ ಬಳಸಿಕೊಂಡು ಪರಿಣಾಮಕಾರಿಯಾಗಿ ವಾಹನ ಸವಾರರಿಗೆ ಸಂಚಾರಕ್ಕೆ ಸುಗಮ ನಿರ್ವಹಣೆಗೆ ಅಗತ್ಯ ಕ್ರಮ ವಹಿಸಬಹುದಾಗಿದೆ. ಈ ನಿಟ್ಟಿನಲ್ಲಿ ಇನ್ನುಮುಂದೆ ಇಲಾಖೆಗಳು ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ರಸ್ತೆ ಸುರಕ್ಷತೆ ನಿರ್ವಹಣೆಗೆ ಆದಷ್ಟು ಮೊದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಧಮೇಂದ್ರ ಕುಮಾರ್ ಮೀನಾ ತಿಳಿಸಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಎಂ. ಪ್ರಭುಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್. ಪ್ರಸಾದ್, ಆರ್‍ಸಿಎಚ್ ಅಧಿಕಾರಿ ಡಾ. ವಿಶ್ವೇಶ್ವರಯ್ಯ, ಶಿಕ್ಷಣ ಇಲಾಖೆ ಅಧಿಕಾರಿ ಸೋಮಶೇಖರ್, ಲೋಕೋಪಯೋಗಿ ಸೇರಿದಂತೆ ಇತರೆ ಇಲಾಖೆ  ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಆ.10ರಂದು ಮಾಜಿ ರಾಜ್ಯಪಾಲರಾದ ಬಿ.ರಾಚಯ್ಯ ಅವರ ಸ್ಮಾರಕ ನಿರ್ಮಾಣ, ಜೋಡಿರಸ್ತೆ ಅಭಿವೃದ್ಧಿ ಕಾರ್ಯಕ್ರಮಕ್ಕೆ ಸಿಎಂ ಶಿಲಾನ್ಯಾಸ

ಚಾಮರಾಜನಗರ, ಆ. 07 :- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಲೋಕೋಪಯೋಗಿ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 10ರಂದು ಬೆಳಿಗ್ಗೆ 11 ಗಂಟೆಗೆ ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದ ಚಿರಶಾಂತಿ ಧಾಮದಲ್ಲಿ ಮಾಜಿ ರಾಜ್ಯಪಾಲರಾದ ದಿವಂಗತ ಬಿ. ರಾಚಯ್ಯನವರ 95ನೇ ಜನ್ಮ ವರ್ಷಾಚರಣೆ ಸ್ಮರಣಾರ್ಥ ಸ್ಮಾರಕ ನಿರ್ಮಾಣಕ್ಕೆ ಶಿಲಾನ್ಯಾಸ ಹಾಗೂ ನಗರದ ಬಿ. ರಾಚಯ್ಯ ಜೋಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಶಿಲಾನ್ಯಾಸ ಹಾಗೂ ಸಾರ್ವಜನಿಕ ಸಮಾರಂಭವು ಪಟ್ಟಣದಲ್ಲಿರುವ ತಹಸೀಲ್ದಾರ್ ಕಚೇರಿಯ ಹತ್ತಿರ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.
ಮುಖ್ಯಮಂತ್ರಿಯವರಾದ ಸಿದ್ಧರಾಮಯ್ಯ ಅವರು ಶಿಲಾನ್ಯಾಸ ನೆರವೇರಿಸುವರು. ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಜ್ಯೋತಿ ಬೆಳಗಿಸುವರು. ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಅವರು ಬಿ.ರಾಚಯ್ಯ ಜೋಡಿ ರಸ್ತೆ ಅಭಿವೃದ್ಧಿ ಕಾಮಗಾರಿ ನೀಲಿ ನಕ್ಷೆ ಅನಾವರಣ ಮಾಡುವರು. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಹೆಚ್. ಆಂಜನೇಯ ಅವರು ದಿವಂಗತ ಬಿ. ರಾಚಯ್ಯ ಅವರ ಸ್ಮಾರಕದ ನೀಲಿ ನಕ್ಷೆ ಅನಾವರಣ ಮಾಡುವರು.
ಕಾರ್ಯಕ್ರಮದಲ್ಲಿ ದಿವಂಗತ ಬಿ. ರಾಚಯ್ಯ ಅವರ ಧರ್ಮಪತ್ನಿ ಶ್ರೀಮತಿ ಗೌರಮ್ಮ ಬಿ. ರಾಚಯ್ಯ ಅವರಿಗೆ ಸನ್ಮಾನ ಮಾಡಿ ಗೌರವಿಸಲಾಗುತ್ತದೆ.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಸಂಸದರಾದ ಆರ್. ಧ್ರುವನಾರಾಯಣ, ಶಾಸಕರಾದ ಆರ್. ನರೇಂದ್ರ, ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ, ವಿಧಾನ ಪರಿಷತ್ ಶಾಸಕರಾದ ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕರ್ನಾಟಕ ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಕಾಡಾ ಅಧ್ಯಕ್ಷರಾದ ಹÉಚ್. ಎಸ್. ನಂಜಪ್ಪ ಆಗಮಿಸುವರು.
ನಗರಸಭೆ ಅಧ್ಯಕ್ಷರಾದ ಆರ್.ಎಂ. ರಾಜಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸದಾಶಿವಮೂರ್ತಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ಆಲೂರು ತಾಲೂಕು ಪಂಚಾಯತ್ ಸದಸ್ಯರಾದ ಶೈಲಜ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಮಂಗಲಿ, ಉಪಾಧ್ಯಕ್ಷರಾದ ಪರಿಮಳ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ಜೀವ ರಕ್ಷಕ ಪ್ರಶಸ್ತಿಗೆ ಅರ್ಜಿ ಆಹ್ವಾನ

ಚಾಮರಾಜನಗರ, ಆ. 07 : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಸ್ತೆ ಅಪಘಾತದ ಸಂಕಷ್ಟ ಪರಿಸ್ಥಿತಿಯಲ್ಲಿ ಗಾಯಾಳುಗಳಿಗೆ ಕೂಡಲೇ ಚಿಕಿತ್ಸೆ ಕೊಡಿಸಲು ನೆರವಾದವರಿಗೆ ನೀಡಲಾಗುವ ಜೀವ ರಕ್ಷಕ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.
ಅಪಘಾತ ಸಂದರ್ಭ ವ್ಯಕ್ತಿಗಳು ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲು ನೆರವಾಗಲೆಂದು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರಶಸ್ತಿ ನೀಡಲಾಗುತ್ತದೆ. ಅಪಘಾತದ ಗಾಯಾಳುಗಳಿಗೆ ಸಹಾಯ ಮಾಡಲು ಶ್ರಮಿಸಿರುವ ಯಾವುದೇ ವಯಸ್ಸಿನ ವ್ಯಕ್ತಿ ಪ್ರಶಸ್ತಿಗಾಗಿ ಸ್ವಯಂ ಅಥವಾ ಸಾಕ್ಷಿಯಾದ ವ್ಯಕ್ತಿಯಿಂದ ನಾಮಕರಣಗೊಳ್ಳಬಹುದಾಗಿದೆ. ಪ್ರಶಸ್ತಿಗೆ ಆಯ್ಕೆಯಾದವರನ್ನು ಆಗಸ್ಟ್ 15ರ ಸ್ವಾತಂತ್ರೋತ್ಸವ ದಿನದಂದು ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಅರ್ಜಿ ಸಲ್ಲಿಕೆಗೆ ಆಗಸ್ಟ್ 10 ಕಡೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ನÀಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಜಿಲ್ಲಾ ಸಂಯೋಜಕರು ಅಥವಾ ಆಯಾ ತಾಲೂಕು ಆರೋಗ್ಯ ಮಿತ್ರರನ್ನು ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ 7259003402 ಅಥವಾ 7259003426 (ಪುಟ್ಟೇಗೌಡ) ಸಂಪರ್ಕಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಎಚ್. ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸಿಇಟಿ ತರಬೇತಿ

ಚಾಮರಾಜನಗರ, ಆ. 07 - ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವತಿಯಿಂದ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಸಿಇಟಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಮತ್ತು ಪಾರ್ಸಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದ ಮಲ್ಟಿ ಪರ್ಪಸ್ ಹಾಲ್‍ನ ಒಂದನೇ ಮಹಡಿಯಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ವಿವರಗಳಿಗೆ ಇಲಾಖಾ ಕಚೇರಿ ಅಥವಾ ದೂರವಾಣಿ ಸಂಖ್ಯೆ 08226-224370 ಸಂಪರ್ಕಿಸುವಂತೆ  ಪ್ರಕಟಣೆ ತಿಳಿಸಿದೆ.


Saturday, 5 August 2017

ಮಾನಭಂಗ ಮಾಡಲೆತ್ನಿಸಿದ ವ್ಯಕ್ತಿಗೆ ಸಜೆ ( 05-08-2017)

  ಮಾನಭಂಗ ಮಾಡಲೆತ್ನಿಸಿದ ವ್ಯಕ್ತಿಗೆ ಸಜೆ


ಚಾಮರಾಜನಗರ, ಆ. 05 - ಬಾಲಕಿಯೊಬ್ಬಳ ಮಾನಭಂಗ ಮಾಡಲು ಯತ್ನಿಸಿದ ವ್ಯಕ್ತಿಗೆ ನಗರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 2 ವರ್ಷ ಸಜೆ ಹಾಗೂ 500 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಗುಂಡ್ಲುಪೇಟೆ ತಾಲೂಕು ತೆರಕಣಾಂಬಿ ಗ್ರಾಮದಲ್ಲಿ ಬಾಲಕಿಯು ಒಬ್ಬಳೇ ಇದ್ದಾಗ ತೆರಕಣಾಂಬಿ ಗ್ರಾಮದ ಅಬ್ದುಲ್ ರೆಹಮಾನ್ ಅಲಿಯಾಸ್ ಅಜ್ಮಲ್ ಅಲಿಯಾಸ್ ಅಜ್ಜು ನಿಮ್ಮ ಅಪ್ಪ ನಿಮ್ಮನ್ನು ತೋಟಕ್ಕೆ ಕರೆದುಕೊಂಡು ಬರಲು ಹೇಳಿದ್ದಾನೆ ಎಂದು ಸುಳ್ಳು ಹೇಳಿ ಸುಬ್ಬಪ್ಪ ಎಂಬುವರ ಜಮೀನಿನ ಬಳಿ ಮಾನಭಂಗ ಮಾಡಲು ಯತ್ನಿಸಿದ್ದ ಎಂದು ಪ್ರಕರಣ ದಾಖಲಾಗಿತ್ತು. ಈ ಸಂಬಂಧ ವಿಚಾರಣೆ ನಡೆದು ಅಬ್ದುಲ್ ರೆಹಮಾನ್‍ಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಅವರು 2 ವರ್ಷ ಸಜೆ ಹಾಗೂ 500 ರೂ. ದಂಡ ವಿಧಿಸಿ ಆಗಸ್ಟ್ 3ರಂದು ತೀರ್ಪು ನೀಡಿದ್ದಾರೆ.

ಆ.10ರಂದು ಜಿಲ್ಲೆಯಲ್ಲಿ ಮುಖ್ಯಮಂತ್ರಿಯವರ ಪ್ರವಾಸ

ಚಾಮರಾಜನಗರ, ಆ. 05:- ಮುಖ್ಯಮಂತ್ರಿಯವರಾದ ಸಿದ್ಧರಾಮಯ್ಯ ಅವರು ಆಗಸ್ಟ್ 10ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಅಂದು ಬೆಳಿಗ್ಗೆ 10.30 ಗಂಟೆಗೆ ಹೆಲಿಕ್ಯಾಪ್ಟರ್ ಮೂಲಕ ನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದ ಹೆಲಿಪ್ಯಾಡ್‍ಗೆ ಆಗಮಿಸುವರು. 10.40 ಗಂಟೆಗೆ ಚಾಮರಾಜನಗರ ತಾಲೂಕಿನ ಆಲೂರಿಗೆ ತೆರಳುವರು. 11 ಗಂಟೆಗೆ ಆಲೂರಿನಲ್ಲಿ ಮಾಜಿ ರಾಜ್ಯಪಾಲರಾದ ದಿವಂಗತ ಬಿ. ರಾಚಯ್ಯನವರ 95ನೇ ಜನ್ಮ ವರ್ಷಾಚರಣೆ ಸ್ಮರಣಾರ್ಥ ಸ್ವಾರಕ ನಿರ್ಮಾಣಕ್ಕೆ ನಡೆಯುವ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 12 ಗಂಟೆಗೆ ನಗರಕ್ಕೆ ಆಗಮಿಸಿ ಪಚ್ಚಪ್ಪ ವೃತ್ತದಿಂದ ರಾಮಸಮುದ್ರವರೆಗಿನ ಬಿ.ರಾಚಯ್ಯ ಕಾಂಕ್ರೀಟ್ ಜೋಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವರು ಮತ್ತು ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 2.30 ಗಂಟೆಗೆ ಮೈಸೂರಿಗೆ ತೆರಳುವರೆಂದು ಪ್ರಕಟಣೆ ತಿಳಿಸಿದೆ.

ಫ್ಲೆಕ್ಸ್, ಬ್ಯಾನರ್ ಅಳವಡಿಕೆಗೆ ಅನುಮತಿ ಕಡ್ಡಾಯ

ಚಾಮರಾಜನಗರ, ಆ. 05 : ಚಾಮರಾಜನಗರ ನಗರಸಭಾ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಬ್ಯಾನರ್‍ಗಳನ್ನು ಅಳವಡಿಸಲು ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಇಲ್ಲವಾದಲ್ಲಿ ನಗರಸಭೆ ವತಿಯಿಂದ ತೆರವುಗೊಳಿಸಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ನಗರಸಭೆ ವ್ಯಾಪ್ತಿಯಲ್ಲಿ ರಾಜಕೀಯ ಕಾರ್ಯಕ್ರಮ, ಹಬ್ಬ, ಜಾತ್ರೆ, ಸಮಾರಂಭ, ಸಂಘಸಂಸ್ಥೆ ಕಾರ್ಯಕ್ರಮಗಳು, ಪ್ರಮುಖರ ಆಗಮನ, ಹುಟ್ಟುಹಬ್ಬದ ಶುಭಕೋರುವ ಸಲುವಾಗಿ ಅನಧಿಕೃತವಾಗಿ ಫ್ಲೆಕ್ಸ್ ಬ್ಯಾನರ್‍ಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರು ತೊಂದರೆಗೆ ಒಳಗಾಗಿದ್ದು ಕಳೆದ 2015ರ ಮೇ 7ರಂದು ಮತ್ತು 2017ರ ಜುಲೈ 10ರಂದು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಪಟ್ಟಣ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ಹಾಗೂ ಸರ್ಕಾರಿ ಸ್ಥಳಗಳಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್‍ಗಳನ್ನು ಅಳವಡಿಸಬಾರದೆಂದು ಕಟ್ಟುನಿಟ್ಟಾಗಿ ಆದೇಶಿಸಿದೆ. ಅವಶ್ಯಕವಾಗಿ ಅಳವಡಿಸಲೇಬೇಕಿದ್ದಲ್ಲಿ ಖಾಸಗಿ ಕಟ್ಟಡ ಮಾಲೀಕರಿಂದ ಅನುಮತಿ ಪಡೆದು ಪೊಲೀಸ್ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ ಪಡೆದು ನಗರಸಭೆಗೆ ಸಲ್ಲಿಸಿದ ನಂತರ ನಿಯಮಾನುಸಾರ ಅನುಮತಿ ನೀಡಲು ಕ್ರಮ ವಹಿಸಲಾಗುವುದು. ಅನುಮತಿ ಪಡೆಯದೇ ಅನಧಿಕೃತವಾಗಿ ಫ್ಲೆಕ್ಸ್ ಬ್ಯಾನರ್ ಅಳವಡಿಸುವುದು ಕಂಡುಬಂದರೆ ತೆರವುಗೊಳಿಸಿ ಕಾನೂನು ಕ್ರಮ ಜರುಗಿಸಿ ದಂಡ ವಿಧಿಸಲಾಗುತ್ತದೆ ಎಂದು ನಗರಸಭೆ ಪೌರಾಯುಕ್ತರಾದ ರಾಜಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆ. 8ರಂದು ಉದ್ಯೋಗ ಯೋಜನೆಯಡಿ ಸಾಲಸೌಲಭ್ಯಕ್ಕೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಸಂದರ್ಶನ

ಚಾಮರಾಜನಗರ, ಆ. 05 - ಮುಖ್ಯಮಂತ್ರಿಗಳ ಉದ್ಯೋಗ ಯೋಜನೆಯಡಿ 2017-18ನೇ ಸಾಲಿಗೆ ಸಾಲಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಆಗಸ್ಟ್ 8ರಂದು ಬೆಳಿಗ್ಗೆ 10.30 ಗಂಟೆಗೆ ಚಾಮರಾಜನಗರ ತಾಲೂಕಿನ ಮರಿಯಾಲದ ರುಡ್ ಸೆಟ್ ಸಂಸ್ಥೆಯಲ್ಲಿ ಸಂದರ್ಶನ ಏರ್ಪಡಿಸಲಾಗಿದೆ.
ಅಭ್ಯರ್ಥಿಗಳಿಗೆ ಈಗಾಗಲೇ ಸಂದರ್ಶನ ಕರಪತ್ರಗಳನ್ನು ಅಂಚೆ ಮೂಲಕ ರವಾನಿಸಲಾಗಿದೆ. ತಲುಪದೇ ಇದ್ದವರು ಸಂದರ್ಶನಕ್ಕೆ ಹಾಜರಾಗಬೇಕು. ಸಂದರ್ಶನ ಸಮಯದಲ್ಲಿ ಆನ್ ಲೈನ್‍ನಲ್ಲಿ ಸಲ್ಲಿಸಿದ ಅರ್ಜಿಯೊಂದಿಗಿನ ಭಾವಚಿತ್ರ, ವಿದ್ಯಾರ್ಹತೆ, ಜನ್ಮ ದಿನಾಂಕ, ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಅಂಗವಿಕಲರಾಗಿದ್ದಲ್ಲಿ ವೈದ್ಯಕೀಯ ದೃಢೀಕರಣ ಪತ್ರ, ಘಟಕ ಪ್ರಾರಂಭಿಸಲು ಉದ್ದೇಶಿಸಿರುವ ಅಭ್ಯರ್ಥಿಗಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿಯಿಂದ ಪಡೆದ ಜನಸಂಖ್ಯೆ ದೃಢೀಕರಣ ಪತ್ರ, ಯೋಜನಾ ವರದಿ, ಅನುಭವವಿದ್ದÀಲ್ಲಿ ಅದರ ಪತ್ರ, ಸಾಧ್ಯವಾದರೆ ಬ್ಯಾಂಕ್ ಅಧಿಕಾರಿಗಳನ್ನು ಭೇಟಿ ಮಾಡಿ ಸಾಲ ನೀಡುವ ಬಗ್ಗೆ ಒಪ್ಪಿಗೆ ಪತ್ರ, ಇನ್ನಿತರ ಸಂಬಂಧಪಟ್ಟ ದಾಖಲೆಗಳನ್ನು ದ್ವಿಪ್ರತಿಯಲ್ಲಿ ಹಾಜರುಪಡಿಸಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆ. 6ರಿಂದ ಪಿಯು ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆ ವ್ಯಾಕರಣ, ಸ್ಪೋಕನ್ ವಿಶೇಷ ತರಬೇತಿ

ಚಾಮರಾಜನಗರ, ಆ. 05 :- ಪದವಿಪೂರ್ವ ಶಿಕ್ಷಣ ಇಲಾಖೆಯು ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಭಾನುವಾರದ ರಜಾದಿನಗಳಂದು ಆಂಗ್ಲಭಾಷೆ ವಿಷಯದ ವ್ಯಾಕರಣ ಹಾಗೂ ಮಾತನಾಡುವ ಕೌಶಲ ಉತ್ತಮಗೊಳಿಸುವ ವಿಶೇಷ ತರಗತಿಯನ್ನು ಆಗಸ್ಟ್ 6ರಿಂದ ಪ್ರಾರಂಭಿಸುತ್ತಿದೆ.
ಚಾಮರಾಜನಗರ, ಗುಂಡ್ಲುಪೇಟೆಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು, ಯಳಂದೂರಿನ ಸರ್ಕಾರಿ ಪದವಿಪೂರ್ವ ಕಾಲೇಜು, ಕೊಳ್ಳೇಗಾಲದ ಎಸ್‍ವಿಕೆ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತರಬೇತಿ ನಡೆಯಲಿದೆ. ಪ್ರತಿ ಕೇಂದ್ರಕ್ಕೆ ಮೂವರು ಆಂಗ್ಲ ಉಪನ್ಯಾಸಕರನ್ನು ಸಂಯೋಜಕರನ್ನಾಗಿ ನೇಮಕ ಮಾಡಲಾಗಿದೆ. ಕುದೇರು ಹಾಗೂ ಸಂತೆಮರಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಯಳಂದೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯುವ ವಿಶೇಷ ತರಗತಿಗೆ ಹಾಜರಾಗಬೇಕಿದೆ. ವಿದ್ಯಾರ್ಥಿಗಳು ವಿಶೇಷ ತರಗತಿಯ ಪ್ರಯೋಜನ ಪಡೆಯುವಂತೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರೆಜಿನಾ ಮೆಲಾಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ. ದೇವರಾಜ ಅರಸು ಜನ್ಮದಿನ ಅದ್ದೂರಿ ಆಚರಣೆಗೆ ತೀರ್ಮಾನ (04-08-2017)

ಡಿ. ದೇವರಾಜ ಅರಸು ಜನ್ಮದಿನ ಅದ್ದೂರಿ ಆಚರಣೆಗೆ ತೀರ್ಮಾನ  


ಚಾಮರಾಜನಗರ, ಆ. 04 - ಹಿಂದುಳಿದ ವರ್ಗಗಳ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಡಳಿತ ಹಾಗೂ ವಿವಿಧ ಸಂಘಟನೆ, ಸಮುದಾಯಗಳ ಸಹಕಾರದೊಂದಿಗೆ ಆಗಸ್ಟ್ 20ರಂದು ನಗರದಲ್ಲಿ ಅದ್ದೂರಿಯಾಗಿ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಅರಸು ಜನ್ಮ ದಿನಾಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಏರ್ಪಡಿಸಲು ನಿರ್ಧಾರ ಕೈಗೊಳ್ಳಲಾಯಿತು.
ಸಭೆಯ ಪ್ರಾರಂಭದಲ್ಲೇ ಮುಖಂಡರು ಮಾತನಾಡಿ ಡಿ.ದೇವರಾಜ ಅರಸು ಅವರ ಭಾವಚಿತ್ರ ಮೆರವಣಿಗೆ ಏರ್ಪಡಿಸಬೇಕು. ಎಸ್.ಎಸ್.ಎಲ್.ಸಿ, ಪಿ.ಯು.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಜಿಲ್ಲೆಯ ಹಿಂದುಳಿದ ವರ್ಗಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಕಾರ್ಯಕ್ರಮದಂದು ಗೌರವಿಸಬೇಕು. ಹಿಂದುಳಿದ ವರ್ಗದ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ಅಂದು ವಿತರಿಸಬೇಕು ಎಂಬ ವಿಷಯವು ಸೇರಿದಂತೆ ಇನ್ನಿತರ ಸಲಹೆಗಳನ್ನು ನೀಡಿದರು.
ಜಿಲ್ಲಾಧಿಕಾರಿ ಕೆ ಹರೀಶ್ ಕುಮಾರ್ ಅವರು ಮಾತನಾಡಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲು ಎಲ್ಲರ ಸಹಕಾರ ಅಗತ್ಯವಿದೆ. ಅರಸು ಅವರ ಬಗ್ಗೆ ಹೆಚ್ಚು ಬಲ್ಲವರಿಂದ ಉಪನ್ಯಾಸ ಕಾರ್ಯಕ್ರಮ ಸಹ ಆಯೋಜಿಸಬೇಕಿದೆ. ಉಪನ್ಯಾಸಕರನ್ನು ಆಯ್ಕೆ ಮಾಡುವ ಸಂಬಂಧ ನೀಡುವ ಸಲಹೆಗಳನ್ನು ಪರಿಗಣಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಕಾರ್ಯಕ್ರಮ ಪ್ರತಿಯೊಂದು ಹಂತದ ಸಿದ್ದತೆಗೂ ಈ ಹಿಂದೆ ಕಾರ್ಯನಿರ್ವಹಿಸಿರುವಂತೆ ಈ ಬಾರಿಯು ಯಾವುದೇ ಲೋಪಕ್ಕೆ ಅವಕಾಶವಾಗದಂತೆ ಎಲ್ಲಾ ರೂಪುರೇಷೆಗಳನ್ನು ತಯಾರಿಸಿಕೊಂಡು ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಜನ್ಮದಿನ ಸಮಾರಂಭವು ಭಾನುವಾರ ನಡೆಯುವುದರಿಂದ ಯಾರು ಸಹ ಗೈರುಹಾಜರಾಗುವಂತಿಲ್ಲ. ಅಧಿಕಾರಿಗಳು, ಸಿಬ್ಬಂದಿ ಕಡ್ಡಾಯವಾಗಿ ಕಾರ್ಯಕ್ರಮದಂದು ಪಾಲ್ಗೊಳ್ಳಲೆಬೇಕು. ಈ ಹಿನ್ನಲೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಆಯಾ ಇಲಾಖೆಯ ಸಿಬ್ಬಂದಿಗೆ ಸೂಚನೆ ನೀಡಬೇಕೆÉಂದು ಜಿಲ್ಲಾಧಿಕಾರಿ ಹರೀಶ್‍ಕುಮಾರ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿದೇಶಕರಾದ ಕೆ.ಎಚ್. ಸತೀಶ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರೇಣುಕಾಂಬ, ಮುಖಂಡರಾದ ಸಿ.ಎಂ. ಕೃಷ್ಣಮೂರ್ತಿ, ಚಾ.ಗು. ನಾಗರಾಜು, ನಿಜದ್ವನಿ ಗೋವಿಂದರಾಜು, ಚಾ.ಸಿ. ಗೋವಿಂದರಾಜು, ಬ್ಯಾಡಮೂಡ್ಲು ಬಸವಣ್ಣ, ಆಲೂರು ನಾಗೇಂದ್ರ, ಗೂ. ಪುರುಷೋತ್ತಮ್, ಕೃಷ್ಣಯ್ಯ, ಇತರೆ ಮುಖಂಡರು ಸಭೆಯಲ್ಲಿ ಹಾಜರಿದ್ದರು.
 

Thursday, 3 August 2017

ತಾಲೂಕುಗಳಿಗೆ ಭ್ರಷ್ಟಾಚಾರ ನಿಗ್ರಹದಳ ಅಧಿಕಾರಿಗಳ ಭೇಟಿ : ನಾಗರಿಕರಿಂದ ದೂರು ಸ್ವೀಕಾರ (03-08-2017)

ತಾಲೂಕುಗಳಿಗೆ ಭ್ರಷ್ಟಾಚಾರ ನಿಗ್ರಹದಳ ಅಧಿಕಾರಿಗಳ ಭೇಟಿ : ನಾಗರಿಕರಿಂದ ದೂರು ಸ್ವೀಕಾರ

ಚಾಮರಾಜನಗರ, ಆ. 03 - ಜಿಲ್ಲೆಯ ನಾಲ್ಕೂ ತಾಲೂಕುಗಳಿಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಆಗಸ್ಟ್ 4 ರಿಂದ 31ರವರೆಗೆ ತಾಲೂಕಿನ ಸರ್ಕಾರಿ ಅತಿಥಿಗೃಹಕ್ಕೆ ಭೇಟಿ ನೀಡಿ ಸಾರ್ವಜನಿಕರಿಂದ ದÀೂರುಗಳನ್ನು ಸ್ವೀಕರಿಸುವರು.
ಆಗಸ್ಟ್ 4ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಗುಂಡ್ಲುಪೇಟೆ ತಾಲೂಕಿನ ಸಾರ್ವಜನಿಕರಿಂದ, ಆಗಸ್ಟ್ 10ರಂದು ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಚಾಮರಾಜನಗರ ತಾಲೂಕಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ  ದೂರುಗಳನ್ನು ಸ್ವೀಕರಿಸುವರು.
ಆಗಸ್ಟ್ 16ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಯಳಂದೂರು, 22ರಂದು ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಕೊಳ್ಳೇಗಾಲ ಹಾಗೂ 30ರಂದು ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಹನೂರಿನಲ್ಲಿ  ದೂರುಗಳನ್ನು ಸ್ವೀಕರಿಸುವರು.   ಸರ್ಕಾರಿ ಕಚೇರಿಗಳಲ್ಲಿ ವಿಳಂಬ, ಲಂಚದ ಹಣಕ್ಕೆ ಒತ್ತಾಯ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದ್ದು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.

ಮೊಸರು ಮಡಿಕೆ ಒಡೆಯುವ ಉತ್ಸವ

ಚಾಮರಾಜನಗರ, ಆ.03:- ಶ್ರೀ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಆಗಸ್ಟ್ 19 ರಂದು ನಡೆಯಲಿರುವ ಮೊಸರು ಮಡಿಕೆ ಒಡೆಯುವ ಉತ್ಸವದ ಪೂರ್ವದಲ್ಲಿ ಮಡಿಕೆ ತಯಾರಿಕೆಗಾಗಿ (ಮಣ್ಣಿನ ಪೂಜೆ) ಮೃತ್ತಿಕಾ ಪೂಜೆಯನ್ನು ಆಗಸ್ಟ್ 4 ರಂದು ಶುಕ್ರವಾರ ಸಂಜೆ 5 ಗಂಟೆಗೆ ಹೆಗ್ಗೋಠಾರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಳೆದ 7 ವರ್ಷಗಳಿಂದ ಚಾಮರಾಜನಗರದಲ್ಲಿ ನಡೆಯುತ್ತಿರುವ ಮೊಸರು ಮಡಿಕೆ ಒಡೆಯುವ ಉತ್ಸವ ಜನರಲ್ಲಿ ಉತ್ಸಾಹ ಮತ್ತು ಭಕ್ತಿ ಹೆಚ್ಚಿಸುತ್ತಿದೆ. ಮೃತ್ತಿಕಾ ಪೂಜೆ ವಿಶೇಷವಾಗಿದ್ದು, ಹೆಗ್ಗೋಠಾರ ಗ್ರಾಮದ ನಂಜಪ್ಪನವರ ಗುಡಿ ಕೈಗಾರಿಕಾ ಕೇಂದ್ರದಲ್ಲಿ ಮೃತ್ತಿಕಾ ಪೂಜೆಯ ನಂತರ ತಯಾರಿಸಲ್ಪಡುತ್ತದೆ ಎಂದು ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್.ಎನ್.ಋಗ್ವೇದಿ ತಿಳಿಸಿದ್ದಾರೆ. 


ಅಡುಗೆಯವರ ಹಾಗೂ ಅಡುಗೆ ಸಹಾಯಕರ ತಾತ್ಕಾಲಿಕ ಆಯ್ಕೆ ಪಟ್ಟಿ

ಚಾಮರಾಜನಗರ, ಆ. 03 : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಅಡುಗೆಯವರ ಹಾಗೂ ಅಡುಗೆ ಸಹಾಯಕರ ಹುದ್ದೆಗಳ ನೇರ ನೇಮಕಾತಿ ಕುರಿತ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಜುಲೈ 7ರಂದು ಹೊರಡಿಸಲಾಗಿದೆ.
ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ರಿಟ್ ಪಿಟಿಷನ್ ಸಂಖ್ಯೆ 31601-31653/2017ರನ್ವಯ ವಿಚಾರಣೆ ಬಾಕಿ ಇರುವುದರಿಂದ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲು ನ್ಯಾಯಾಲಯದಲ್ಲಿ ಪ್ರಕರಣ ವಿಲೇ ಆದ ನಂತರ ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಆಹ್ವಾನ

ಚಾಮರಾಜನಗರ, ಆ. 03 - ಕೃಷಿ ಇಲಾಖೆಯು 2016-17ನೇ ಸಾಲಿನ ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.
ಕೃಷಿ ಕ್ಷೇತ್ರದಲ್ಲಿ ವಿನೂತನ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ಗಮನಾರ್ಹ ಸಾಧನೆ ಮಾಡಿರುವ, ರೈತ ಸಮುದಾಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿರುವವರು ಅರ್ಜಿ ಸಲ್ಲಿಸಬಹುದು. ಸಂಶೋಧನೆ, ಸಾಧನೆಗಳು ಬೇರೆಯವರ ಸಾಧನೆಗಿಂತ ವಿಭಿನ್ನವಾಗಿರಬೇಕು. ಕೃಷಿ ಕ್ಷೇತ್ರದ ಏಳಿಗೆಗೆ ಕಾರಣವಾಗಿರಬೇಕು.
ಪ್ರಥಮ ಪ್ರಶಸ್ತಿಯು 1 ಲಕ್ಷ ರೂ. ನಗದು, ದ್ವಿತೀಯ ಪ್ರಶಸ್ತಿಯು 75 ಸಾವಿರ ರೂ., ತೃತೀಯ ಪ್ರಶಸ್ತಿಯು 50 ಸಾವಿರ ರೂ. ಒಳಗೊಂಡಿದೆ. ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿಗೆ ತಲಾ 25 ಸಾವಿರ ರೂ ನೀಡಲಾಗುತ್ತದೆ.
ಎಲ್ಲಾ ಕೃಷಿಕರಿಗೂ ಮುಕ್ತ ಅವಕಾಶವಿದೆ. ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಜಲಾನಯನ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ ನಿವೃತ್ತರಾದ ಕುಟುಂಬದವರನ್ನು ಹೊರತುಪಡಿಸಿ ಉಳಿದ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರನ್ನೂ ಸಹ  ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಅರ್ಜಿದಾರರ ಹೆಸರಿನಲ್ಲಿ ಪಹಣಿ ಪತ್ರ (ಭೂ ದಾಖಲೆ, ಆರ್‍ಟಿಸಿ) ಕಡ್ಡಾಯ. ಈ ಹಿಂದೆ ಕೃಷಿ ಪಂಡಿತ ಪ್ರಶಸ್ತಿ ಅಥವಾ ಸಾಧನೆಗಾಗಿ ಕೇಂದ್ರ, ರಾಜ್ಯ ಸರ್ಕಾರದಿಂದ ಸಮಾನಾಂತರ ಪ್ರಶಸ್ತಿ ಪಡೆದಿರುವವರು ಮತ್ತೆ ಸ್ಪರ್ಧಿಸುವಂತಿಲ್ಲ.
ಅರ್ಜಿ ನಮೂನೆಯನ್ನು ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ಪಡೆದು, ಭರ್ತಿ ಮಾಡಿ ಆಗಸ್ಟ್ 10ರ ಒಳಗೆ ಸಲ್ಲಿಸುವಂತೆ ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳೆ ಸ್ಪರ್ಧೆಗೆ ಅರ್ಜಿ ಆಹ್ವಾನ

ಚಾಮರಾಜನಗರ, ಆ. 03 :- ಕೃಷಿ ಉತ್ಪಾದನೆ ಹೆಚ್ಚಳವಾಗಲು ಕಾರಣವಾಗಿರುವ ರೈತರ ಶ್ರಮ ಸಕ್ರಿಯ ಪಾಲ್ಗೊಳ್ಳುವಿಕೆ ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಬೆಳೆ ಸ್ಪರ್ಧೆಯನ್ನು ರಾಜ್ಯ ಜಿಲ್ಲಾ ಹಾಗೂ ತಾಲೂಕು ಮಟ್ಟಗಳಲ್ಲಿ ಏರ್ಪಡಿಸಿ ಬಹುಮಾನ ನೀಡುವ ಸಲುವಾಗಿ ಕೃಷಿ ಇಲಾಖೆ ಅರ್ಜಿ ಆಹ್ವಾನಿಸಿದೆ.
ತಾಲೂಕು ಮಟ್ಟದ ಸ್ಪರ್ಧೆಗೆ ಪ್ರಥಮ ಬಹುಮಾನವಾಗಿ 15 ಸಾವಿರ ರೂ., ದ್ವಿತೀಯ ಬಹುಮಾನವಾಗಿ 10 ಸಾವಿರ ರೂ, ತೃತೀಯ ಬಹುಮಾನವಾಗಿ 5 ಸಾವಿರ ರೂ. ನೀಡಲಾಗುತ್ತದೆ. ಜಿಲ್ಲಾ ಮಟ್ಟದ ಸ್ಪರ್ಧೆಗೆ ಪ್ರಥಮ ಬಹುಮಾನವಾಗಿ 25 ಸಾವಿರ ರೂ., ದ್ವಿತೀಯ ಬಹುಮಾನವಾಗಿ 15 ಸಾವಿರ ರೂ., ತೃತೀಯ ಬಹುಮಾನವಾಗಿ 10 ಸಾವಿರ ರೂ. ನೀಡಲಾಗುತ್ತದೆ. ರಾಜ್ಯ ಮಟ್ಟದ ಸ್ಪರ್ಧೆಗೆ ಪ್ರಥಮ ಬಹುಮಾನವಾಗಿ 50 ಸಾವಿರ ರೂ., ದ್ವಿತೀಯ ಬಹುಮಾನವಾಗಿ 25 ಸಾವಿರ ರೂ., ತೃತೀಯ ಬಹುಮಾನವಾಗಿ 15 ಸಾವಿರ ರೂ. ನೀಡಲಾಗುತ್ತದೆ.
ಸ್ಪರ್ಧೆಗೆ ಭಾಗವಹಿಸಲು ಸಾಮಾನ್ಯ ವರ್ಗದ ರೈತರು 100 ರೂ., ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ರೈತರಾಗಿದ್ದಲ್ಲಿ 25 ರೂ. ಪ್ರವೇಶ ಶುಲ್ಕ ಸಂದಾಯ ಮಾಡಬೇಕಿದೆ. ಮುಂಗಾರು ಹಂಗಾಮಿಗೆ ಆಗಸ್ಟ್ 31, ಹಿಂಗಾರು ಹಂಗಾಮಿಗೆ ನವೆಂಬರ್ 30 ಸ್ಪರ್ಧೆಗೆ ನೊಂದಾಯಿಸಿಕೊಳ್ಳಲು ಕಡೆಯ ದಿನವಾಗಿದೆ.
ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಜಿಲ್ಲಾ ಮಟ್ಟದ ಸಮಿತಿ ನಿಗದಿಪಡಿಸುವ ಒಂದು ಬೆಳೆಯಲ್ಲಿ ಮಾತ್ರ ಸ್ಫರ್ಧೆ ನಡೆಸಲು ಅವಕಾಶವಿರುತ್ತದೆ. ವಿವರಗಳಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಭೇಟಿ ಮಾಡುವಂತೆ ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಆ. 5ರಂದು ವಿದ್ಯುತ್ ಜನಸಂಪರ್ಕ ಸಭೆ

ಚಾಮರಾಜನಗರ, ಆ. 03 - ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ನಗರ ಉಪವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದುಕೊರತೆಗಳನ್ನು ನಿವಾರಿಸಲು ಆಗಸ್ಟ್ 5ರಂದು ಬೆಳಿಗ್ಗೆ 11 ರಿಂದ 1 ಗಂಟೆವರೆಗೆ ಕೊಡಗು ಮತ್ತು ಚಾಮರಾಜನಗರ ವೃತ್ತದ ಅಧೀಕ್ಷಕÀ ಎಂಜಿನಿಯರ್ ಅವರ ಅಧ್ಯಕ್ಷತೆಯಲ್ಲಿ ನಗರದ ಉಪವಿಭಾಗ ಕಚೇರಿಯಲ್ಲಿ ನಡೆಲಾಗುವುದು.
ನಗರ ವ್ಯಾಪ್ತಿಯ ಸಾರ್ವಜನಿಕರು ವಿದ್ಯುತ್ ಗ್ರಾಹಕರು ವಿದ್ಯುತ್ ಸಂಬಂಧ ಸಮಸ್ಯೆ ಅಥವಾ ದೂರುಗಳಿದ್ದಲ್ಲಿ ಸಭೆಗೆ ಹಾಜರಾಗಿ ಲಿಖಿತ ದೂರುಗಳನ್ನು ಸಲ್ಲಿಸಬಹುದಾಗಿದೆ ಎಂದು ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಯೋಜನಾ ಸಮಿತಿ ಚುನಾವಣೆ : ವೇಳಾಪಟ್ಟಿ ಪ್ರಕಟ

ಚಾಮರಾಜನಗರ, ಆ. 03 - ಜಿಲ್ಲಾ ಯೋಜನಾ ಸಮಿತಿಗೆ ಚುನಾವಣೆ ನಡೆಸುವ ಸಂಬಂಧ ವೇಳಾಪಟ್ಟಿಯನ್ನು ಜಿಲ್ಲಾ ಯೋಜನಾ ಸಮಿತಿಯ ಚುನಾವಣೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಪ್ರಕಟಿಸಿದ್ದಾರೆ.
ಜಿಲ್ಲಾ ಯೋಜನಾ ಸಮಿತಿಗೆ ಸದಸ್ಯರ ಸ್ಥಾನಗಳನ್ನು ಭರ್ತಿ ಮಾಡಲು ಜಿಲ್ಲಾ, ತಾಲೂಕು ಪಂಚಾಯಿತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಕ್ಷೇತ್ರದಿಂದ ಚುನಾಯಿತರಾದ ಸದಸ್ಯರನ್ನು ಚುನಾವಣೆ ಮೂಲಕ ಆಯ್ಕೆ ಮಾಡಬೇಕಿದೆ. ಗ್ರಾಮೀಣ ಸಂಸ್ಥೆಗಳಿಂದ 33 ಸದಸ್ಯರನ್ನು ನಗರಸಭೆ ಸಂಸ್ಥೆಗಳಿಂದ 7 ಸದಸ್ಯರನ್ನು ಆಯ್ಕೆ ಮಾಡಬೇಕಿದೆ. ಈಗಾಗಲೇ ನಗರ ಸ್ಥಳೀಯ ಸಂಸ್ಥೆಗಳಿಂದ 2015-16ನೇ ಸಾಲಿನಲ್ಲಿ ಇಬ್ಬರು ಸದಸ್ಯರು ಆಯ್ಕೆಯಾಗಿದ್ದಾರೆ. ಉಳಿದ 5 ಸದಸ್ಯರನ್ನು ನಗರ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆ ಮಾಡಬೇಕಿದೆ.
ನಾಮನಿರ್ದೇಶನಗಳನ್ನು ಸಲ್ಲಿಸುವ ಅವಧಿಯು ಆಗಸ್ಟ್ 4ರಂದು ಬೆಳಿಗ್ಗೆ 11 ಗಂಟೆಯಿಂದ ಆಗಸ್ಟ್ 11ರ ಶುಕ್ರವಾರ ಮಧ್ಯಾಹ್ನ 3 ಗಂಟೆವರೆಗೆ (ದಿನಾಂಕ 6.8.2017ರ ಭಾನುವಾರ ಹೊರತುಪಡಿಸಿ) ಇರಲಿದೆ. ಆಗಸ್ಟ್ 14ರಂದು ಬೆಳಿಗ್ಗೆ 11 ಗಂಟೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮನಿರ್ದೇಶನ ಹಿಂತೆಗೆದುಕೊಳ್ಳಲು ಆಗಸ್ಟ್ 17ರ ಮದ್ಯಾಹ್ನ 3 ಗಂಟೆಯವರೆಗೆ ಕಾಲಾವಕಾಶವಿದೆ. ಆಗಸ್ಟ್ 29ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಆಗಸ್ಟ್ 29ರಂದು ಸಂಜೆ 4.15 ಗಂಟೆಗೆ ಮತಗಳ ಎಣಿಕೆ ನಡೆಯಲಿದೆ. ಆಗಸ್ಟ್ 30ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ಚುನಾವಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಾ.ನಗರಸಭೆಯ 9 ವಾಡ್ ್ಗಳು ಬಯಲು ಶೌಚಮುಕ್ತ : ಆಕ್ಷೇಪಣೆ ಪ್ರತಿಕ್ರಿಯೆಗೆ ಅವಕಾಶ

ಚಾಮರಾಜನಗರ, ಆ. 03 - ಚಾಮರಾಜನಗರ ನಗರಸಭೆಯ ಒಟ್ಟು 9 ವಾರ್ಡುಗಳನ್ನು ಬಯಲು ಶೌಚಮುಕ್ತ ಎಂದು ಘೋಷಿಸಿ ಅನುಮೋದನೆ ಪಡೆಯಲಾಗಿದ್ದು ಈ ಸಂಬಂಧ ಆಕ್ಷೇಪಣೆ ಹಾಗೂ ಪ್ರತಿಕ್ರಿಯೆ ಇದ್ದಲ್ಲಿ ಆಗಸ್ಟ್ 18ರೊಳಗೆ ಸಲ್ಲಿಸುವಂತೆ ನಗರಸಭೆ ಕೋರಿದೆ.

ಸ್ಪಚ್ಚ ಭಾರತ್ ಯೋಜನೆಯ ಉದ್ದೇಶ ಬಯಲುಶೌಚ ಮುಕ್ತ ನಗರವನ್ನಾಗಿ ಸೃಜಿಸುವುದೇ ಆಗಿದೆ. ಈ ನಿಟ್ಟಿನಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಬಯಲುಶೌಚ ಮುಕ್ತ ವಾರ್ಡುಗಳನ್ನಾಗಿ ಘೋಷಿಸಬೇಕಿದೆ. ಪ್ರತಿ ವಾರ್ಡಿನಲ್ಲಿ ಬಯಲು ಶೌಚಮುಕ್ತ  ವಾರ್ಡ್ ಪ್ರದೇಶ ಎಂದು ಘೋಷಿಸಲು ಆಯಾ ವಾರ್ಡಿನ ಶಾಲೆಗಳಲ್ಲಿ, ಮನೆಗಳಲ್ಲಿ ವಿದ್ಯಾರ್ಥಿಗಳು ಶೌಚಾಲಯ ಉಪಯೋಗಿಸುತ್ತಿರುವ ಬಗ್ಗೆ ಸ್ವಸಹಾಯ ಸಂಘಗಳು ತಮ್ಮ ವಾರ್ಡ್‍ನ  ಎಲ್ಲಾ ನಿವಾಸಿಗಳ ಮನೆಯಲ್ಲಿ ಶೌಚಾಲಯ ವ್ಯವಸ್ಥೆಯಿದ್ದು ಹಾಗೂ ಉಪಯೋಗಿಸುತ್ತಿರುವ ಬಗ್ಗೆ ಉಪಘೋಷಣೆ ಪಡೆದು ಕಳೆದ ಜುಲೈ 10ರಂದು ನಡೆದ ನಗರಸಭೆ ಕೌನ್ಸಿಲ್ ಸಭೆಯಲ್ಲಿ ಮಂಡಿಸಲಾಯಿತು. ನಗರಸಭೆಯ 31 ವಾರ್ಡ್‍ಗಳ ಪೈಕಿ ದೇವಾಂಗ ಬಡಾವಣೆ (ವಾರ್ಡ್ 11), ಕೆಪಿ ಮೊಹಲ್ಲ (ವಾರ್ಡ್ 12), ಅಂಬೇಡ್ಕರ್ ಬಡಾವಣೆ (ವಾರ್ಡ್ 13), ಅಂಬೇಡ್ಕರ್ ಬಡಾವಣೆ (ವಾರ್ಡ್ 14), ಭುಜಂಗೇಶ್ವರ ಬಡಾವಣೆ (ವಾರ್ಡ್ 20), ಬಣಜಿಗರ ಬೀದಿ (ವಾರ್ಡ್ 21), ಭ್ರಮರಾಂಭ ಬಡಾವಣೆ (ವಾರ್ಡ್ 22), ಶಂಕರಪುರ ಬಡಾವಣೆ (ವಾರ್ಡ್ 23), ಹೌಸಿಂಗ್ ಬೋರ್ಡ್ ಕಾಲೋನಿ (ವಾರ್ಡ್ 26)ಗಳನ್ನು ಬಯಲುಶೌಚಮುಕ್ತ ವಾರ್ಡ್‍ಗಳೆಂದು ಘೋಷಿಸಿ ಅನುಮೋದನೆ ಪಡೆಯಲಾಗಿದೆ.
ಬಯಲುಶೌಚಮುಕ್ತ ವಾರ್ಡ್‍ಗಳೆಂದು ಘೋಷಿಸಿರುವ ಬಗ್ಗೆ ಆಕ್ಷೇಪಣೆ ಪ್ರತಿಕ್ರಿಯೆ ಇದ್ದಲ್ಲಿ ನಾಗರಿಕರು ಆಗಸ್ಟ್ 18ರೊಳಗೆ ನಗರಸಭೆ ಪೌರಾಯುಕ್ತರಿಗೆ ಸಲ್ಲಿಸುವಂತೆ ಪೌರಾಯುಕ್ತರಾದ ರಾಜಣ್ಣ ಪ್ರಕಟಣೆಯಲ್ಲಿ ಕೋರಿದ್ದಾರೆ.

ಆ. 4 ರಂದು ಡಿ.ದೇವರಾಜ ಅರಸು ಜನ್ಮದಿನಾಚರಣೆ ಪೂರ್ವಭಾವಿ ಸಭೆ

ಚಾಮರಾಜನಗರ, ಆ. 03: ಜಿಲ್ಲಾಡಳಿತದ ವತಿಯಿಂದ ಡಿ.ದೇವರಾಜ ಅರಸು ಅವರ ಜನ್ಮದಿನಾಚರಣೆ ಹಮ್ಮಿಕೊಳ್ಳುವ ಸಂಬಂಧ ಚರ್ಚಿಸುವ ಸಲುವಾಗಿ ಆಗಸ್ಟ್ 4ರಂದು ಬೆಳಗ್ಗೆ 11 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ  ಪೂರ್ವಭಾವಿ ಸಭೆ ಕರೆಯಲಾಗಿದೆ.
ಸಂಘಸಂಸ್ಥೆಗಳ ಪ್ರತಿನಿಧಿಗಳು, ನಾಗರಿಕರು, ಎಲ್ಲ ವರ್ಗಗಳ ಮುಖಂಡರು ಪ್ರತಿನಿಧಿಗಳು ಸಭೆಗೆ ಅಗಮಿಸಿ ಸಲಹೆ ಅಭಿಪ್ರಾಯ ನೀಡುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.






ಬೆಳೆಹಾನಿ ಸಮೀಕ್ಷೆ ತ್ವರಿತ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಸೂಚನೆ (02-08-2017)

ಬೆಳೆಹಾನಿ ಸಮೀಕ್ಷೆ ತ್ವರಿತ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಸೂಚನೆ

ಚಾಮರಾಜನಗರ, ಆ. 02  ಜಿಲ್ಲೆಯಲ್ಲಿ ಮಳೆ ಅಭಾವದಿಂದ ಹಾನಿಯಾಗಿರುವ ಬೆಳೆ ಸಮೀಕ್ಷೆ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ಕೆ.ಹರೀಶ್‍ಕುಮಾರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಡಳಿತ ಭವದಲ್ಲಿರುವ ಕೆ.ಡಿ.ಪಿ. ಸಭಾಂಗಣದಲ್ಲಿ ಇಂದು ಕೃಷಿ, ಕಂದಾಯ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿ, ಸಿಬ್ಬಂದಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಆರಂಭದಲ್ಲಿ ಮಳೆ ಪ್ರಮಾಣ ಉತ್ತಮವಾಗಿತ್ತು. ಅದರೆ ಜೂನ್ ಮತ್ತು ಜುಲೈ ತಿಂಗಳಲ್ಲಿ ಮಳೆ ಪರಿಸ್ಥಿತಿ ನಿರಾಶದಾಯಕವಾಗಿದೆ. ಇದರಿಂದ ಅಭಾವ ಪರಿಸ್ಥಿತಿ ಛಾಯೆ ಕಾಣತೊಡಗಿದೆ. ಈ ಹಿನ್ನಲೆಯಲ್ಲಿ ಈ ಹಿಂದೆಯೆ ಬೆಳೆಹಾನಿ ಬಗ್ಗೆ ಗಮನಹರಿಸುವಂತೆ ಸೂಚಿಸಲಾಗಿತ್ತು. ಪರಿಸ್ಥಿತಿ ಮತ್ತಷ್ಟು ಪೂರಕವಾಗದೆ ಇರುವ ಕಾರಣ ಬೆಳೆ ನಷ್ಟವನ್ನು ತುರ್ತಾಗಿ ಪೂರ್ಣ ಗೊಳಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಬೆಳೆಹಾನಿ ವೀಕ್ಷಣೆಗೆ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿ, ಸಿಬ್ಬಂದಿ ಒಟ್ಟಾಗಿ ಜಮೀನುಗಳಿಗೆ ತೆರಳಿ ಸಮೀಕ್ಷೆ ಕಾರ್ಯ ನಡೆಸಬೇಕು. ಮಳೆ ಕೊರತೆಯಿಂದ  ಉಂಟಾಗಿರುವ ಬೆಳೆ ನಷ್ಟ ಬಗ್ಗೆ ವಾಸ್ತವಿಕ ಮತ್ತು ವಿಶ್ವಾಸರ್ಹ ವರದಿ ನೀಡಬೇಕು. ಜಿಲ್ಲೆಯ ಎಲ್ಲ ಭಾಗಗಳಿಗೆ ವ್ಯಾಪಕವಾಗಿ ಭೇಟಿ ನೀಡಿ ಸಮೀಕ್ಷೆ ಮಾಡಬೇಕು ಎಂದರು.
ಬೆಳೆ ಸಮೀಕ್ಷೆ ಕೈಗೊಳ್ಳುವ ಸಂದರ್ಭದಲ್ಲಿ ಕೃಷಿ ಇಲಾಖೆಯ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೇಕು. ಅಭಾವ ಘೋಷಣೆಗೆ ಸಂಬಂಧಿಸಿದಂತೆ ಮಾನದಂಡಗಳು ಇತ್ತೀಚೆಗೆ ಬದಲಾವಣೆಯಾಗಿದೆ. ಹೀಗಾಗಿ ಬೆಳೆಹಾನಿ ಸಮೀಕ್ಷೆ ಕಾರ್ಯವನ್ನು ಅತ್ಯಂತ ಮುತುವರ್ಜಿಯಿಂದ ಅಧಿಕಾರಿಗಳು ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಬೆಳೆ ವಿಮೆ ಪರಿಹಾರ ಸಂಬಂಧ ಬೆಳೆ ಕಟಾವು ಪ್ರಯೋಗ ಕಾರ್ಯವು ಸಹ ವೇಗಗತಿಯಲ್ಲಿ ನಡೆಯಬೇಕು. ಕಾಲಮಿತಿಯೊಳಗೆ ಕೆಲಸ ಪೂರ್ಣವಾಗಬೇಕು. ಇದರಿಂದ ಬೆಳೆಗಾರರಿಗೆ ಸಕಾಲಕ್ಕೆ ಪರಿಹಾರ ಲಭಿಸಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಹರೀಶ್‍ಕುಮಾರ್ ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್ ಮಾತನಾಡಿ ಬೆಳೆಹಾನಿ ಸಮೀಕ್ಷೆಯು ಅತ್ಯಂತ ನಿಖರವಾಗಿ ಕೈಗೊಳ್ಳಬೇಕಿದೆ. ಇಲಾಖೆ ಸೂಚನೆ, ಮಾರ್ಗಸೂಚಿ ಅನುಸಾರವಾಗಿಯೆ ಪ್ರತಿಯೊಂದು ಪ್ರಕ್ರಿಯೆ ನಡೆಯಬೇಕಿದೆ. ಅತ್ಯಂತ ಆದ್ಯತೆ ಮೇರೆಗೆ ಬೆಳೆಹಾನಿ ಕೆಲಸವನ್ನು ಸಮನ್ವಯದಿಂದ ನಡೆಸಿ ನಷ್ಟವನ್ನು ಗುರುತಿಸಬೇಕಿದೆ. ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಇತರೆ ಇಲಾಖೆ ಅಧಿಕಾರಿಗಳಿಗೆ ಅಗತ್ಯವಿರುವ ಸಹಕಾರ ಮಾರ್ಗದರ್ಶನ ಮಾಡಲಿದ್ದಾರೆ ಎಂದರು.
ಉಪವಿಭಾಗಧಿಕಾರಿ ಎ.ಜೆ. ರೂಪ, ಜಿಲ್ಲೆಯ ತಹಸೀಲ್ದಾರರು ಸಭೆಯಲ್ಲಿ ಹಾಜರಿದ್ದರು.

ಆಗಸ್ಟ್ 4 ರಂದು ಡಿ.ದೇವರಾಜ ಅರಸು ಜನ್ಮದಿನಾಚರಣೆ ಪೂರ್ವಭಾವಿ ಸಭೆ

ಚಾಮರಾಜನಗರ, ಆ. 02 : ಜಿಲ್ಲಾಡಳಿತದ ವತಿಯಿಂದ ಡಿ.ದೇವರಾಜ ಅರಸು ಅವರ ಜನ್ಮದಿನಾಚರಣೆ ಹಮ್ಮಿಕೊಳ್ಳುವ ಸಂಬಂಧ ಚರ್ಚಿಸುವ ಸಲುವಾಗಿ ಆಗಸ್ಟ್ 4ರಂದು ಬೆಳಗ್ಗೆ 11 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ  ಪೂರ್ವಭಾವಿ ಸಭೆ ಕರೆಯಲಾಗಿದೆ.
ಸಂಘಸಂಸ್ಥೆಗಳ ಪ್ರತಿನಿಧಿಗಳು, ನಾಗರಿಕರು, ಎಲ್ಲ ವರ್ಗಗಳ ಮುಖಂಡರು ಪ್ರತಿನಿಧಿಗಳು ಸಭೆಗೆ ಅಗಮಿಸಿ ಸಲಹೆ ಅಭಿಪ್ರಾಯ ನೀಡುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.




Tuesday, 1 August 2017

ತಿಂಗಳ ಅಂತ್ಯದೊಳಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಲೋಕಾರ್ಪಣೆ : ಎಂ.ಸಿ. ಮೋಹನಕುಮಾರಿ (01-08-2017)

ಈ ತಿಂಗಳ ಅಂತ್ಯದೊಳಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಲೋಕಾರ್ಪಣೆ : ಎಂ.ಸಿ. ಮೋಹನಕುಮಾರಿ

ಚಾಮರಾಜನಗರ, ಆ. 01 - ಗುಂಡ್ಲುಪೇಟೆ ತಾಲೂಕಿನ 131 ಹಳ್ಳಿಗಳಿಗೆ ಕಬಿನಿ ನದಿಯಿಂದ ಶಾಶ್ವತವಾಗಿ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಈ ತಿಂಗಳ ಅಂತ್ಯದೊಳಗೆ ಲೋಕಾರ್ಪಣೆಗೊಳಿಸುವ ಉದ್ದೇಶವಿದೆ ಎಂದು ಶಾಸಕರಾದ ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಅವರು ತಿಳಿಸಿದರು.
ನಂಜನಗೂಡು ತಾಲೂಕಿನ ಹುಲ್ಲಳ್ಳಿ ಬಳಿ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಶುದ್ಧೀಕರಣ ಘಟಕ, ಜಾಕ್ ವೆಲ್ ಸ್ಥಳ ಮತ್ತು ಗುಂಡ್ಲುಪೇಟೆ ತಾಲೂಕಿನ ಕುರುಬರ ಹುಂಡಿಯಲ್ಲಿ ಜಲಸಂಗ್ರಹಾಗಾರಗಳಿಗೆ ಇಂದು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.
ಗುಂಡ್ಲುಪೇಟೆ ತಾಲೂಕಿನ ಗ್ರಾಮೀಣ ಭಾಗಗಳಿಗೆ ಕುಡಿಯುವ ನೀರು ಪೂರೈಸುವ 205 ಕೋಟಿ ರೂ ವೆಚ್ಚದ ಯೋಜನೆ ಕೆಲಸವು ಶೇ. 98ರಷ್ಟು ಪೂರ್ಣಗೊಂಡಿದೆ. ಉಳಿದ ಕೆಲಸಗಳು ತ್ವರಿತವಾಗಿ ನಡೆಯುತ್ತಿದೆ. ಒಟ್ಟು 403 ಕಿ.ಮೀ.ನಷ್ಟು ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡಿದೆ. ಕಚ್ಚಾನೀರನ್ನು ಗ್ರಾಮಗಳಿಗೆ ಪೂರೈಸಲಾಗುತ್ತಿದೆ. ಇನ್ನು 15 ರಿಂದ 20 ದಿನಗಳಲ್ಲಿ ಶುದ್ಧ ಕುಡಿಯುವ ನೀರನ್ನು ಎಲ್ಲ ಗ್ರಾಮಗಳಿಗೆ ಪೂರೈಸಲಾಗುತ್ತದೆ ಎಂದರು.
ಉಸ್ತುವಾರಿ ಸಚಿವರಾಗಿದ್ದ ಎಚ್.ಎಚ್. ಮಹದೇವಪ್ರಸಾದ್ ಅವರ ಕನಸಿನ ಯೋಜನೆ ಬಹುಗ್ರಾಮ ಕುಡಿಯುವ ನೀರು ಯೋಜನೆಯು ಕಾಲಮಿತಿಯೊಳಗೆ ಪೂರ್ಣವಾಗಲು ತಡವಾಯಿತು. ಮರಳಿನ ಅಭಾವ, ನೋಟು ಅಮಾನ್ಯ ಕಾರಣ ಸೇರಿದಂತೆ ಕೆಲವು ತಾಂತ್ರಿಕ ತೊಂದರೆಗಳಿಂದ ಯೋಜನೆ ವಿಳಂಬವಾಯಿತು. ಆದರೂ ಗುಣಮಟ್ಟದ ಕೆಲಸ ನಡೆದಿದ್ದು ಯೋಜನೆ ಸಾಕಾರವಾಗುವ ಹಂತಕ್ಕೆ ಬಂದಿರುವುದು ಸಂತಸ ತಂದಿದೆ. ಆಗಸ್ಟ್ ಕೊನೆಯ ವಾರದಲ್ಲಿ ಮುಖ್ಯಮಂತ್ರಿಯವರಿಂದ ಕುಡಿಯುವ ನೀರಿನ ಯೋಜನೆಯನ್ನು ಜನತೆಯ ಸೇವೆಗೆ ಸಮರ್ಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತನೆ ನಡೆಸಿದ್ದೇವೆ ಎಂದು ಶಾಸಕರು ತಿಳಿಸಿದರು.
ಕುಡಿಯುವ ನೀರು ಯೋಜನೆ ಕಾಮಗಾರಿ ನಿರ್ವಹಣೆಯಲ್ಲಿ ಸಾಕಷ್ಟು ಮಂದಿ ಪರಿಶ್ರಮವಿದೆ. ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನಕ್ಕಾಗಿ ಹೆಚ್ಚಿನ ಸಂಖ್ಯೆ ಕಾರ್ಮಿಕರು ಅಧಿಕಾರಿಗಳು ದುಡಿದಿದ್ದಾರೆ. ಯೋಜನೆಯಡಿ ನೀರು ಪೂರೈಸುವ ವ್ಯವಸ್ಥೆಯು ಅತ್ಯಾಧುನಿಕವಾಗಿದ್ದು ಇನ್ನುಮುಂದೆ ಕೇವಲ ಎಂಟು ಮಂದಿ ಮಾತ್ರ ಕಾರ್ಯನಿರ್ವಹಿಸಲಿದ್ದಾರೆ. ಉಳಿದೆಲ್ಲವು ಸ್ವಯಂಚಾಲಿತವಾಗಿ ನಿರ್ವಹಣೆಯಾಗಲಿರುವುದು ವಿಶೇಷವಾಗಿದೆ ಎಂದರು.
ಪ್ರತಿನಿತ್ಯ ಶುದ್ದೀಕರಣ ಘಟಕದಲ್ಲಿರುವ ಪ್ರಯೋಗಾಲಯದಲ್ಲಿ ನೀರಿನ ಮಾದರಿಯನ್ನು ಎರಡು ಬಾರಿ ಪರೀಕ್ಷೆ ಮಾಡಲಾಗುತ್ತದೆ. ಶುದ್ಧ ನೀರನ್ನು ಖಾತರಿಪಡಿಸಿಕೊಂಡೇ ಜನರಿಗೆ ಪೂರೈಸಲಾಗುತ್ತದೆ. ನೀರು ಪೂರೈಸಲು ಬಳಸುವ ಬಹುಮುಖ್ಯ ಯಂತ್ರಗಳು, ವಿದ್ಯುತ್ ವ್ಯವಸ್ಥೆಯನ್ನು ಎರಡು ಬಗೆಯಲ್ಲಿ ಸಿದ್ಧಮಾಡಿಕೊಳ್ಳಲಾಗಿದೆ. ಒಂದು ತಾಂತ್ರಿಕವಾಗಿ ತೊಂದರೆ ಕಂಡುಬಂದರೆ ಮತ್ತೊಂದು ವ್ಯವಸ್ಥೆ, ಯಂತ್ರಗಳ ಮೂಲಕ ನೀರು ಸರಬರಾಜು ಮಾಡುವ ಕೆಲಸ ಮುಂದುವರೆಯಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಕುಡಿಯುವ ನೀರು ಪೂರೈಕೆಯಲ್ಲಿ ತೊಂದರೆ ಬರುವುದಿಲ್ಲ ಎಂದು ಶಾಸಕರು ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್ ದೇವರಾಜು ಮಾತನಾಡಿ ಗುಂಡ್ಲುಪೇಟೆ ತಾಲೂಕಿನ ಒಟ್ಟು 156 ಜನವಸತಿ ಪ್ರದೇಶಗಳಿಗೆ ಯೋಜನೆಯಡಿ ಕುಡಿಯುವ ನೀರು ಪೂರೈಕೆಯಾಗಲಿದೆ. ವಿದ್ಯುತ್ ಪೂರೈಕೆಗಾಗಿ ಎಕ್ಸ್ ಪ್ರೆಸ್ ಲೈನ್ ಮೂಲಕವೇ ಸಂಪರ್ಕ ಪಡೆಯಲಾಗಿದೆ. ಹೀಗಾಗಿ ವಿದ್ಯುತ್ ಅಡಚಣೆಗೆ ಅವಕಾಶವಾಗುವುದಿಲ್ಲ. ಈಗಾಗಲೇ ಅಳವಡಿಸಿರುವ ಪೈಪ್ ಲೈನ್ ಅನ್ನು ಕಚ್ಚಾನೀರು ಪೂರೈಸುವ ಮೂಲಕ ಪರೀಕ್ಷಿಸಲಾಗಿದೆ. ತೊಂದರೆ ಕಂಡುಬಂದಿರುವ ಕಡೆ ಸರಿಪಡಿಸುವ ಕೆಲಸವೂ ನಡೆಯುತ್ತಿದೆ ಎಂದರು.
ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ಎನ್. ನಟೇಶ್, ಮುಖಂಡರಾದ ಬಿ.ಎಂ. ಮುನಿರಾಜು, ಡಿ. ಮಾದಪ್ಪ, ಕೊಡಸೋಗೆ ಶಿವಬಸಪ್ಪ, ಮಹದೇವಪ್ಪ, ಮಂಚಳ್ಳಿ ಲೋಕೇಶ್, ನೀಲಕಂಠಪ್ಪ, ಬಿ.ಎಸ್. ಸಿದ್ದಪ್ಪ, ನಂಜನಾಯ್ಕ, ಉಮೇಶ್, ಶಿವಸ್ವಾಮಿ, ಇತರ ಮುಖಂಡರು, ಅಧಿಕಾರಿಗಳು ಹಾಜರಿದ್ದರು.

ಗುಂಡ್ಲುಪೇಟೆ : ಆ. 11 ರಂದು ಪ.ಜಾ. ಪ.ವರ್ಗಗಳ ಹಿತರಕ್ಷಣಾ ಸಮಿತಿ ಸಭೆ 

ಚಾಮರಾಜನಗರ, ಆ. 01 - ಗುಂಡ್ಲುಪೇಟೆ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯು ತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್ 11ರಂದು ಬೆಳಿಗ್ಗೆ 11 ಗಂಟೆಗೆ ಗುಂಡ್ಲುಪೇಟೆ ತಾಲೂಕು ಕಚೇರಿ ಸಭಾ ಭವನದಲ್ಲಿ ನಡೆಯಲಿದೆ.
ಪರಿಶಿಷ್ಟ ಜಾತಿ, ವರ್ಗದವರು ತಮ್ಮ ಸಮಸ್ಯೆ, ಕುಂದುಕೊರತೆಗಳ ಬಗ್ಗೆ ಆಗಸ್ಟ್ 5ರೊಳಗೆ ಸ್ಪಷ್ಟ ಲಿಖಿತವಾಗಿ ಸಮಿತಿಯ ಸದಸ್ಯರಾದ ಸುಭಾಷ್ ಮಾಡ್ರಹಳ್ಳಿ (ಮೊಬೈಲ್ 9743699073), ಮಹದೇವಚಾರಿ ಮೂಖಹಳ್ಳಿ (ಮೊ.8762342103), ಶ್ರೀಧರ್ ಕಾರೇಮಾಳ (ಮೊ. 8762342103) ಅವರುಗಳಿಗೆ ಅಥವಾ ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಗುಂಡ್ಲುಪೇಟೆ ಇವರಿಗೆ ಸಲ್ಲಿಸಲು ಕೋರಿದೆ ಎಂದು ಪ್ರಕಟಣೆ ತಿಳಿಸಿದೆ.


ಆಧಾರ್ ಯೋಜನೆಯಡಿ ಸಾಲಸೌಲಭ್ಯಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ, ಆ. 01 - ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ವಿಕಲಚೇತನರಿಗಾಗಿ ಸ್ವಯಂ ಉದ್ಯೋಗಕ್ಕೆ ಆಧಾರ್ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
18 ರಿಂದ 45ರ ವರ್ಷದೊಳಗಿನ ನಿರುದ್ಯೋಗಿ ವಿಕಲಚೇತನರು ಅರ್ಹರು. ಕರ್ನಾಟಕ ರಾಜ್ಯದಲ್ಲಿ 10 ವರ್ಷ ವಾಸವಾಗಿರಬೇಕು. ಸರ್ಕಾರಕ್ಕೆ ಸುಸ್ತಿದಾರರಾಗಿರಬಾರದು. ಸ್ವಯಂ ಉದ್ಯೋಗ ಕೈಗೊಳ್ಳಲು ಸ್ಥಳಾವಕಾಶ ಹೊಂದಿರಬೇಕು.
ಅರ್ಜಿಯೊಂದಿಗೆ ವಿಕಲತೆ ದೃಢೀಕರಿಸುವ ಗುರುತಿಸುವ ಗುರುತಿನ ಚೀಟಿ, ವಯಸ್ಸಿನ ದೃಢೀಕರಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಪ್ರತಿ, ಬ್ಯಾಂಕ್ ಖಾತೆ ವಿವರ ಪ್ರತಿ, ವಿಕಲತೆ ದೃಢೀಕರಿಸುವ ಇತ್ತೀಚಿನ ಎರಡು ಭಾವಚಿತ್ರ, ಈ ಹಿಂದೆ ಯೋಜನೆಯಡಿ ಸೌಲಭ್ಯ ಪಡೆದಿಲ್ಲವೆಂಬ ಬಗ್ಗೆ ತಾಲೂಕು ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರು (ಎಂಆರ್‍ಡಬ್ಲ್ಯು) ಅವರಿಂದ ದೃಢೀಕರಣ ಪತ್ರ, ವ್ಯಾಪಾರ ಮಾಡಲು ಉದ್ದೇಶಿಸಿದ ಯೋಜನಾ ವರದಿಗಳೊಂದಿಗೆ ಸೆಪ್ಟೆಂಬರ್ 15ರೊಳಗೆ ಸಂಬಂಧಪಟ್ಟ ತಾಲೂಕಿನ ವಿವಿದೋದ್ದೇಶÀ ಪುನರ್ವಸತಿ ಕಾರ್ಯಕರ್ತರು, ತಾಲೂಕು ಪಂಚಾಯಿತಿ ಇವರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಕರಿಕರ ಕಲ್ಯಾಣಾಧಿಕಾರಿಗಳ ಕಚೇರಿ (ದೂ.ಸಂ.08226-223688, 224688) ಸಂಪರ್ಕಿಸುವಂತೆ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆ. 8ರಂದು ಗುಂಡ್ಲುಪೇಟೆಯಲ್ಲಿ ನಿವೇಶನ ಹಂಚಿಕೆ ಮೇಳ

ಚಾಮರಾಜನಗರ, ಆ. 01 :- ಕರ್ನಾಟಕ ಗೃಹಮಂಡಳಿಯು ಗುಂಡ್ಲುಪೇಟೆ ಪಟ್ಟಣದ ಪಂಜನಹಳ್ಳಿ ಬಡಾವಣೆಯಲ್ಲಿ ಖಾಲಿ ಉಳಿದಿರುವ ನಿವೇಶನಗಳನ್ನು ಸ್ಥಳದಲ್ಲಿಯೇ ಹಂಚಿಕೆ ಮಾಡುವ ಸಲುವಾಗಿ ಆಗಸ್ಟ್ 8ರಂದು ಬೆಳಿಗ್ಗೆ 11 ಗಂಟೆಯಿಂದ ಹಂಚಿಕೆ ಮೇಳ ನಡೆಸಲಿದೆ.
ಕರ್ನಾಟಕ ಗೃಹಮಂಡಳಿಯು ಪಂಜನಹಳ್ಳಿ ಬಡಾವಣೆಯಲ್ಲಿ ವಿವಿಧ ವರ್ಗದ ನಿವೇಶನಗಳನ್ನು ಎಲ್ಲಾ ಮೂಲಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಿ ಈಗಾಗಲೇ ಹಂಚಿಕೆ ಮಾಡಿದೆ. ಕೆಲ ಖಾಲಿ ಉಳಿದಿರುವ ನಿವೇಶನಗಳನ್ನು ಆಗಸ್ಟ್ 8ರಂದು ಹಂಚಿಕೆ ಮೇಳದಲ್ಲಿ ಹಂಚಲಿದೆ. ಆಸಕ್ತರು ನಿಗಧಿತ ಹಣ ಪಾವತಿಸಿ ಸ್ಥಳದಲ್ಲಿಯೇ ನಿವೇಶನ ಹಂಚಿಕೆ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಕರ್ನಾಟಕ ಗೃಹಮಂಡಳಿಯ ಕಾರ್ಯಪಾಲಕ ಎಂಜಿನಿಯರ್ ದೂ.ಸಂ. 0821-2343094 ಹಾಗೂ ಚಾಮರಾಜನಗರದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮೊಬೈಲ್ ಸಂಖ್ಯೆ 9448470311 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸರ್ವೇಶ್ ಅವರಿಗೆ ಆತ್ಮೀಯ ಬೀಳ್ಕೊಡುಗೆ 

ಚಾಮರಾಜನಗರ, ಆ. 01 :- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ ಕಾರ್ಯನಿರ್ವಹಿಸಿ ವಯೋನಿವೃತ್ತರಾದ ಸರ್ವೇಶ್ ಅವರನ್ನು ಸೋಮವಾರ ಜಿಲ್ಲಾಡಳಿತದ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಕಳೆದ ಹಲವು ತಿಂಗಳುಗಳಿಂದ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸರ್ವೇಶ್ ಅವರಿಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸರಳ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ಶಾಲು ಹೊದಿಸಿ ಫಲಪುಷ್ಪ ನೀಡುವ ಮೂಲಕ ಗೌರವಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ. ಹರೀಶ್ ಕುಮಾರ್ ಅವರು ಸರ್ಕಾರಿ ವೃತ್ತಿ ಜೀವನದಲ್ಲಿ ನಿವೃತ್ತಿ ಎಂಬುದು ಎಲ್ಲರಿಗೂ ಒಂದಲ್ಲ ಒಂದು ದಿನ ಬರಲಿದೆ. ಕರ್ತವ್ಯದಲ್ಲಿ ಇರುವಷ್ಟು ಸಮಯವು ಸೇವೆಯನ್ನು ಸಮರ್ಪಕವಾಗಿ ಸಲ್ಲಿಸಬೇಕಿದೆ. ತಾಳ್ಮೆ, ಸಹನೆ ಮನೋಭಾವನೆಯನ್ನು ಮೈಗೂಡಿಸಿಕೊಂಡು ಸಮಚಿತ್ತದಿಂದ ಕರ್ತವ್ಯ ಅವಧಿಯನ್ನು ಪೂರೈಸಬೇಕಿರುವುದು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಸರ್ವೇಶ್ ಅವರು ಈ ಹಿಂದೆ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬಹುಕಾಲ ಕಾರ್ಯನಿರ್ವಹಿಸಿದ್ದಾರೆ. ನಾನೂ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಮೈಸೂರು ಆಡಳಿತ ತರಬೇತಿ ಸಂಸ್ಥೆಯಲ್ಲಿ ಸರ್ವೇಶ್ ಅವರ ವಿದ್ಯಾರ್ಥಿಗಳಾಗಿ ತರಬೇತಿ ಪಡೆದಿದ್ದೇವೆ. ಹೀಗಾಗಿ ಸರ್ವೇಶ್ ಅವರು ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಅಪಾರ ಅಧಿಕಾರಿ ಶಿಷ್ಯವೃಂದವನ್ನು ಹೊಂದಿದ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಹರೀಶ್ ಕುಮಾರ್ ತಿಳಿಸಿದರು.
ಸರ್ವೇಶ್ ಅವರು ಸೇವಾ ಅವಧಿಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಹಸನ್ಮುಖಿಯಾಗಿಯೇ ಎಲ್ಲ ಕೆಲಸವನ್ನು ನಿಭಾಯಿಸಿಕೊಂಡು ಸೇವಾ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಇನ್ನೂ ಉತ್ಸಾಹದ ಚಿಲುಮೆಯಾಗಿರುವ ಸರ್ವೇಶ್ ಅವರು ನಿವೃತ್ತಿ ನಂತರವೂ ಸಂಪನ್ಮೂಲ ವ್ಯಕ್ತಿಯಾಗಿ ಮತ್ತಷ್ಟು ಮಂದಿಗೆ ತರಬೇತಿ ಉಪನ್ಯಾಸ ನೀಡಲಿ. ಅವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಜಿಲ್ಲಾಧಿಕಾರಿ ಹರೀಶ್ ಕುಮಾರ್ ಹಾರೈಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಮಾತನಾಡಿ ತಾವೂ ಸಹ ಮೈಸೂರು ಆಡಳಿತ ತರಬೇತಿ ಸಂಸ್ಥೆಯಲ್ಲಿ ಸರ್ವೇಶ್ ಅವರ ವಿದ್ಯಾರ್ಥಿಯಾಗಿದ್ದನ್ನು ಸ್ಮರಿಸುತ್ತೇನೆ. ಸದಾ ಕಾಲ ಲವಲವಿಕೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಸರ್ವೇಶ್ ಅವರ ವೃತ್ತಿಜೀವನ ಎಲ್ಲರಿಗೂ ಮಾದರಿಯಾಗಿದೆ ಎಂದು ಅಭಿಮಾನದಿಂದ ನುಡಿದರು.
ಗೌರವ ಸ್ವೀಕರಿಸಿ ಮಾತನಾಡಿದ ಸರ್ವೇಶ್ ಅವರು ತಮ್ಮ ಸೇವಾ ಅವಧಿ ಉದ್ದಕ್ಕೂ ನನಗೆ ಅತ್ಯುತ್ತಮ ಸಹಕಾರ ಲಭಿಸಿದೆ. ತಮ್ಮ ವೃತ್ತಿ ಜೀವನದ ಕೊನೆಯ ಅವಧಿಯನ್ನು ಚಾಮರಾಜನಗರ ಜಿಲ್ಲೆಯಲ್ಲಿ ಸಲ್ಲಿಸಿದ ಬಗ್ಗೆ ಅತೀವ ಹೆಮ್ಮೆಯಿದೆ. ಈ ಸಂದರ್ಭದಲ್ಲಿ ಎಲ್ಲ ಹಿರಿಯ ಕಿರಿಯ ಅಧಿಕಾರಿಗಳ ಬೆಂಬಲ ಪ್ರೋತ್ಸಾಹವನ್ನು ಎಂದಿಗೂ ಮರೆಯುವಂತಿಲ್ಲ ಎಂದರು.
ಆಹಾರ ಇಲಾಖೆ ಉಪನಿರ್ದೇಶಕರಾದ ಆರ್. ರಾಚಪ್ಪ, ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್, ಭೂದಾಖಲೆಗಳ ಇಲಾಖೆಯ ಉಪನಿರ್ದೇಶಕರಾದ ಸೋಮಸುಂದರ್, ಸಹಕಾರ ಇಲಾಖೆಯ ಜಿಲ್ಲಾ ಅಧಿಕಾರಿ ಶಶಿಧರ್, ಕೊಳ್ಳೇಗಾಲ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಸರ್ವೇಶ್ ಅವರ ಸೇವೆ, ಸ್ನೇಹ ಮನೋಭಾವನೆ ಕುರಿತು ಗುಣಗಾನ ಮಾಡಿದರು.

ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*

  ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 1,22,552 ಪ್ರಕರಣ ಇತ್ಯರ್ಥ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ*    ಚಾಮರಾಜನಗರ, ಸೆಪ್ಟೆಂಬರ್ 28 :- ಈ ಬಾರಿಯ ರಾಷ್ಟ್ರೀಯ ಲೋ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು