*ಎಸ್.ಐ.ಆರ್ : ಅಂತಿಮ ಮತದಾರರ ಪಟ್ಟಿ ಪ್ರಕಟಣೆ ಬಳಿಕ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ವಿಶೇಷ ಆಂದೋಲನ*
ಚಾಮರಾಜನಗರ, ಅಕ್ಟೋಬರ್ 19 :- ಎಸ್.ಐ.ಆರ್ ಗೆ ಸಂಬಂಧಿಸಿದಂತೆ ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಪಟ್ಟಿಯಲ್ಲಿ ಕೈಬಿಟ್ಟು ಹೋಗಿರುವ ಮತದಾರರನ್ನು ಗುರುತಿಸಿ ಸೇರ್ಪಡೆಗೊಳಿಸಲು ವಿಶೇಷ ಆಂದೋಲನ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ನೋಟಿಸ್ ವಿಚಾರಣೆ ಮತ್ತು ಅವುಗಳನ್ನು ಇತ್ಯರ್ಥಪಡಿಸುವ ಸಂಬಂಧ ನೊಂದಾಯಿತ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 7,480 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಈವರೆಗೆ 7411 ಮಂದಿಯ ವಿಚಾರಣೆ ನಡೆಸಲಾಗಿದೆ. ಈ ಪೈಕಿ ಹನೂರು ವಿಧಾನಸಭಾ ಕ್ಷೇತ್ರದಲ್ಲಿ 10, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ 2, ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 7 ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 50 ಮಂದಿ ಮತದಾರರು ಸೇರಿದಂತೆ ಒಟ್ಟು 69 ಮಂದಿ ಮತದಾರರನ್ನು ಅನರ್ಹಗೊಳಿಸಲಾಗಿದೆ ಎಂದರು.
ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್.ಒ) ಪ್ರಕಟಿತ ಅಂತಿಮ ಮತದಾರರ ಪಟ್ಟಿಯನ್ನು ಸಮಗ್ರ ಪರಿಷ್ಕರಣೆ ಪೂರ್ವದಲ್ಲಿ ಮತದಾರರ ಪಟ್ಟಿಯೊಡನೆ ತಾಳೆಮಾಡಿ ಪ್ರಕಟಿತ ಅಂತಿಮ ಮತದಾರರ ಪಟ್ಟಿಯಲ್ಲಿ ಕೈಬಿಟ್ಟು ಹೋಗಿರುವ ಮತದಾರರನ್ನು ಗುರುತಿಸಿ, ಪಟ್ಟಿಗೆ ಸೇರ್ಪಡೆಗೊಳಿಸಲು ಅರ್ಹರಿದ್ದಲ್ಲಿ ಹೆಸರುಗಳನ್ನು ಸೇರ್ಪಡೆಗೊಳಿಸಲು ವಿಶೇಷ ಆಂದೋಲನ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.
ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಹೆಚ್.ಎಸ್. ತೋಂಟದಾರ್ಯಸ್ವಾಮಿ, ಭಾ.ಮ. ಕೃಷ್ಣಮೂರ್ತಿ, ಎಂ. ಮಹದೇವಸ್ವಾಮಿ, ಎಂ. ಚಿಕ್ಕಮಹದೇವು, ಎಸ್. ರಾಮಚಂದ್ರ, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.
*ಅಕ್ರಮ ಲಾಟರಿ ಮಾರಾಟ ವಿರುದ್ಧ ಕಠಿಣ ಕ್ರಮ ಜರುಗಿಸಿ : ಹೆಚ್ಚುವರಿ ಜಿಲ್ಲಾಧಿಕಾರಿ ವಿ. ಪ್ರಿಯದರ್ಶಿನಿ*
ಚಾಮರಾಜನಗರ, ಅಕ್ಟೋಬರ್ 19 - ಜಿಲ್ಲೆಯಲ್ಲಿ ಅನಧಿಕೃತ ಹಾಗೂ ಅಕ್ರಮ ಲಾಟರಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ವಿ. ಪ್ರಿಯದರ್ಶಿನಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ (ಅಕ್ಟೋಬರ್, 15) ನಡೆದ ಅನಧಿಕೃತ ಲಾಟರಿ ನಿಯಂತ್ರಣದ ಫ್ಲೈಯಿಂಗ್ ಸ್ಕ್ವಾಡ್ ಸಮಿತಿಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲಾಟರಿ ನಿಯಂತ್ರಣ ಕಾಯ್ದೆ-1998ರ ಪ್ರಕಾರ ಅನಧಿಕೃತ ಹಾಗೂ ಅಕ್ರಮ ಲಾಟರಿ ಮಾರಾಟ ಹಾಗೂ ಹಂಚಿಕೆ ಕಾನೂನು ಬಾಹಿರವಾಗಿದ್ದು, ಭಾರತೀಯ ದಂಡ ಸಂಹಿತೆ ನಿಯಮಗಳನ್ವಯ ಅಕ್ರಮ ಲಾಟರಿ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ವಹಿಸಬೇಕು. ಲಾಟರಿ ಮಾರಾಟ ಪುನರಾವರ್ತಿತಗೊಂಡರೇ ದಂಡ, ಜೈಲುಶಿಕ್ಷೆಯಂತಹ ಕಠಿಣ ಕ್ರಮ ಜರುಗಿಸಲು ಲಾಟರಿ ನಿಯಂತ್ರಣಕ್ಕೆ ರಚಿಸಲಾಗಿರುವ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಮುಂದಾಗಬೇಕು. ಪ್ರಕರಣ ದಾಖಲಿಸಬೇಕು. ತಪ್ಪಿದಲ್ಲಿ ಗಂಭೀರವಾಗಿ ಪರಿಗಣಿಸಲಾಗುವುದು ಎಂದರು.
ಕಳೆದ ಸಾಲಿನಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಪರಿಶೀಲಿಸಿದ ಹೆಚ್ಚುವರಿ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಇತ್ತೀಚೆಗೆ ಅಕ್ರಮ ಹಾಗೂ ಅನಧಿಕೃತ ಲಾಟರಿ ಮಾರಾಟ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ 2025ರ ಏಪ್ರಿಲ್ನಿಂದ ಮಾರ್ಚ್-2026ರವರೆಗೆ 33 ಪ್ರಕರಣಗಳು ದಾಖಲಾಗಿದ್ದು, 2026ರ ಏಪ್ರಿಲ್ನಿಂದ ಸೆಪ್ಟೆಂಬರ್ ಮಾಹೆವರೆಗೆ 56 ಪ್ರಕರಣಗಳು ದಾಖಲಾಗಿವೆ. ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಅಕ್ರಮ ಲಾಟರಿ ಮಾರಾಟ ತಡೆಯಲು ಪೊಲೀಸ್ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯೊಂದಿಗೆ ಜಂಟಿ ಪರಿಶೀಲನೆ ನಡೆಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿಯವರು ತಿಳಿಸಿದರು.
ಅಕ್ರಮ ಲಾಟರಿ ಮಾರಾಟ ಪತ್ತೆಯಾಗಿರುವ ಬಹುತೇಕ ಪ್ರಕರಣಗಳಲ್ಲಿ ಕೇರಳ ಹಾಗೂ ತಮಿಳುನಾಡು ಸೇರಿದಂತೆ ಹೊರರಾಜ್ಯಗಳಿಂದ ಲಾಟರಿ ತಂದು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ದಾಖಲಾದ ಪ್ರಕರಣಗಳಲ್ಲಿ ನ್ಯಾಯಾಲಯಗಳ ಮೂಲಕ 800 ರೂ. ನಿಂದ 10 ಸಾವಿರ ರೂ. ಗಳವರೆಗೆ ದಂಡ ವಿಧಿಸಿ ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ. ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ 7 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಅಕ್ರಮ ಲಾಟರಿ ಮಾರಾಟವನ್ನು ಪರಿಣಾಮಕಾರಿಯಾಗಿ ತಡೆಯಲು ಪೊಲೀಸ್, ವಾಣಿಜ್ಯ ತೆರಿಗೆ ಇಲಾಖೆಯೊಂದಿಗೆ ಫ್ಲೈಯಿಂಗ್ ಸ್ಕ್ವಾಡ್ ತ್ರೈಮಾಸಿಕ ಸಭೆ ನಡೆಸಬೇಕು ಎಂದು ತಿಳಿಸಿದರು.
ವಾರ್ಷಿಕವಾಗಿ ಪ್ರತಿ ತ್ರೈಮಾಸಿಕ ಅವಧಿಯಲ್ಲಿ ಪ್ರಕರಣಗಳನ್ನು ಗಣನೀಯವಾಗಿ ತಗ್ಗಿಸಲು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಸಮನ್ವಯ ಸಾಧಿಸಬೇಕು. ಲಾಟರಿ ಮಾರಾಟ, ಹಂಚಿಕೆ ವಿರುದ್ಧ ಕಠಿಣ ದಂಡನೆ ಹಾಗೂ ಜೈಲುಶಿಕ್ಷೆಗೆ ಗುರಿಯಾಗುವ ಬಗ್ಗೆ ಸಾರ್ವಜನಿಕರಿಗೆ ವ್ಯಾಪಕ ಜಾಗೃತಿ ಮೂಡಿಸಿ ಅಕ್ರಮ ಚಟುವಟಿಕೆಗಳಿಗೆ ಸಂಪೂರ್ಣವಾಗಿ ಕಡಿವಾಣ ಹಾಕಬೇಕು. ಅಕ್ರಮ ಚಟುವಟಿಕೆಗಳನ್ನು ತಡೆಯಲು ಜಿಲ್ಲಾಮಟ್ಟದ ಕಂಟ್ರೋಲ್ ರೂಂ ದೂ.ಸಂಖ್ಯೆ: 08226-223160, 223161, 223163 ಅಥವಾ ಪೊಲೀಸ್ ಕಂಟ್ರೋಲ್ ರೂಂ. ದೂ.ಸಂಖ್ಯೆ: 102, 02886-222398 ಅಥವಾ ವಾಟ್ಸಾಪ್ ಸಂಖ್ಯೆ: 9480804600 ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಿಯದರ್ಶಿನಿ ಅವರು ನಿರ್ದೇಶನ ನೀಡಿದರು.
ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣೆ ಇಲಾಖೆಯ ಸಹಾಯಕ ನಿರ್ದೇಶಕರಾದ ಪಿ. ಸಿಂಧು, ಅಭಿವೃದ್ಧಿ ಅಧಿಕಾರಿ ಎನ್. ದಯಾನಂದ್, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಅಣ್ಣೇಗೌಡ, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.


No comments:
Post a Comment