| * |
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ, ಅಕ್ಟೋಬರ್ 17 - ಚಾಮರಾಜನಗರ ದಸರಾ ಮಹೋತ್ಸವದ ಅಂಗವಾಗಿ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ನಗರದಲ್ಲಿಂದು ದಸರಾ ಉತ್ಸವಕ್ಕೆ ಸಾಂಪ್ರಾದಾಯಿಕ ಚಾಲನೆ ನೀಡಿದರು.
ಚಾಮರಾಜೇಶ್ವರ ದೇವಸ್ಥಾನದಲ್ಲಿಂದು ನಗರದ ಅದಿದೇವತೆಗಳಾದ ಚಾಮರಾಜೇಶ್ವರಸ್ವಾಮಿ, ಚಾಮುಂಡೇಶ್ವರಿ ದೇವಿ ಹಾಗೂ ಕೆಂಪನಂಜಾಂಬ ದೇವಿಗೆ ಸಾಂಪ್ರಾದಾಯಿಕ ವಿಧಿವಿಧಾನಗಳ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರು ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಮುಖ್ಯ ವೇದಿಕೆಯಲ್ಲಿ ನಗಾರಿ ಬಾರಿಸುವ ಮೂಲಕ ಮೂರು ದಿನಗಳ ಕಾಲ ನಡೆಯಲಿರುವ ಚಾಮರಾಜನಗರ ದಸರಾ ಮಹೋತ್ಸವವನ್ನು ಉದ್ಘಾಟಿಸಿದರು.
ನಂತರ ಚಾಮರಾಜೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಮೈಸೂರು ಅರಸರು ಜನಿಸಿದ ಐತಿಹಾಸಿಕ ಜನನ ಮಂಟಪಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಜನನ ಮಂಟಪದಲ್ಲಿ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಜನನ ಮಂಟಪದ ಮುಂಭಾಗದಲ್ಲಿ ನಂದಿಕಂಬಕ್ಕೆ ಪೂಜೆ ಮಾಡಿದರು.ಬಳಿಕ ಮಹಿಳಾ ದಸರಾ ಅಂಗವಾಗಿ ಜಿಲ್ಲಾಡಳಿತ ಭವನದ ಪ್ರವೇಶದ್ವಾರದ ಬಳಿ ಒಳಾವರಣದಲ್ಲಿ ಮಹಿಳೆಯರಿಗೆ ಆಯೋಜಿಸಲಾಗಿದ್ದ ರಂಗೋಲಿ ಸ್ಪರ್ಧೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟನೆ ಮಾಡಿದರು. ಮಹಿಳೆಯರು ಬಿಡಿಸಿದ್ದ ವಿವಿಧ ಬಣ್ಣಬಣ್ಣದ ಚಿತ್ತಾರಗಳಿಂದ ಕೂಡಿದ ರಂಗೋಲಿಗಳನ್ನು ಸಚಿವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ನಂತರ ವರನಟ ಡಾ. ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಏರ್ಪಡಿಸಲಾಗಿರುವ ದಸರಾ ಕವಿಗೋಷ್ಠಿ, ರಂಗಗೀತೆಗಳು, ಸಾಮಾಜಿಕ ಹಾಗೂ ಪೌರಾಣಿಕ ನಾಟಕ ಸೇರಿದಂತೆ ಇತರೆ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಜಿಲ್ಲಾ ರಂಗಮಂದಿರದ ಹೊರ ಆವರಣದಲ್ಲಿ ಮಹಿಳೆಯರಿಗಾಗಿ ಹಮ್ಮಿಕೊಳ್ಳಲಾಗಿದ್ದ ಮ್ಯೂಸಿಕಲ್ ಚೇರ್ ಸ್ಪರ್ಧೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಿದರು.
ಬಳಿಕ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಯುವದಸರಾ ಮಾದರಿಯಲ್ಲಿ ಜಿಲ್ಲೆಯ ವಿವಿಧ ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿರುವ ಯುವಸಂಭ್ರಮ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿದರು.
ತದನಂತರ ನಗರದ ಜಿಲ್ಲಾ ಕ್ರೀಡಾಂಗಣದ ಪಕ್ಕದಲ್ಲಿರುವ ಮೀಸಲು ಪೊಲೀಸ್ ಪಡೆಯ ಮೈದಾನದಲ್ಲಿ ಜಿಲ್ಲಾ ಗ್ರಾಮೀಣ ದಸರಾ ಕ್ರೀಡಾಕೂಟದ ಅಂಗವಾಗಿ ಆಯೋಜಿಸಲಾಗಿರುವ ಕ್ರಿಕೆಟ್, ಕಬಡ್ಡಿ, ಖೋ-ಖೋ, ಹಗ್ಗಜಗ್ಗಾಟ, ಸೈಕಲ್ ಪೋಲೋ, ಲೆಮನ್ ಆಂಡ್ ಸ್ಪೂನ್ ಕ್ರೀಡೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಿದರು. ಸ್ವತಹ ಸಚಿವರು ಸೈಕಲ್ ಮೇಲೆ ಕುಳಿತು ಪೋಲೋವನ್ನು ಯಶಸ್ವಿಯಾಗಿ ಹೊಡೆದರು. ಕ್ರೀಡಾಪಟುಗಳ ತಂಡಗಳನ್ನು ಪರಿಚಯ ಮಾಡಿಕೊಂಡರು. ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಇದೇ ವೇಳೆ ಮಾತನಾಡಿದ ಸಚಿವ ಪುಟ್ಟರಂಗಶೆಟ್ಟಿ ಅವರು ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಮುಂದುವರಿದ ಭಾಗವಾಗಿ ಚಾಮರಾಜನಗರ ಜಿಲ್ಲಾ ದಸರಾ ಉತ್ಸವವನ್ನು ನಗರದಲ್ಲಿ ಆಯೋಜಿಸಲಾಗಿದೆ. ತೀವ್ರ ಬರಪೀಡಿತ ಜಿಲ್ಲೆಯಾಗಿ ಚಾಮರಾಜನಗರ ಘೋಷಣೆಯಾಗಿದ್ದರಿಂದ ದಸರಾ ನಡೆಯುವುದೇ ಕಾಕತಾಳೀಯವಾಗಿತ್ತು. ಈಗ ತರಾತುರಿಯಲ್ಲಿ ಜಿಲ್ಲಾ ದಸರಾ ಆಯೋಜಿಸಲಾಗಿದೆ. ಪ್ರಸ್ತುತ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ಇದು ಸಮೃದ್ಧಿಯ ಸಂಕೇತವಾಗಿದ್ದು, ನಾಡಿನೆಲ್ಲೆಡೆ ಮಳೆ-ಬೆಳೆಯಾಗಿ ಜನರಲ್ಲಿ ಸುಖ-ಶಾಂತಿ ನೆಲೆಸಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಸಚಿವರೊಂದಿಗೆ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಎಚ್.ಎಂ. ಗಣೇಶ್ಪ್ರಸಾದ್, ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಎಚ್.ವಿ. ಚಂದ್ರು, ಚುಡಾ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ, ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ವಿ. ಪ್ರಿಯದರ್ಶಿನಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ವೇಂಕಟೇಶ್, ನಗರಸಭೆ ಪೌರಾಯುಕ್ತರಾದ ಪರಶುರಾಮ್ ಛಲವಾದಿ, ತಹಶೀಲ್ದಾರ್ ಗಿರಿಜಾ, ಇತರರು ಪಾಲ್ಗೊಂಡಿದ್ದರು.
ಚಾಮರಾಜನಗರ ದಸರಾ ಮಹೋತ್ಸವ-2026* :
*ಜನಮನ ಸೂರೆಗೊಂಡ ಅದ್ದೂರಿ ಕಲಾತಂಡಗಳು, ಸ್ತಬ್ದ ಚಿತ್ರಗಳ ಮೆರವಣಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಉದ್ಘಾಟನೆ*
ಚಾಮರಾಜನಗರ, ಅಕ್ಟೋಬರ್ 17 - ಚಾಮರಾಜನಗರ ದಸರಾ ಮಹೋತ್ಸವದ ಅಂಗವಾಗಿ ನಗರದ ಜಿಲ್ಲಾಡಳಿತ ಭವನದಿಂದ ಚಾಮರಾಜೇಶ್ವರ ದೇವಸ್ಥಾನದವರೆಗೆ ಆಯೋಜಿಸಿದ್ದ ಕಲಾವೈಭವಕ್ಕೆ ಮೆರುಗು ತುಂಬಿದ ಮೆರವಣಿಗೆಯು ವಿವಿಧ ಆಕರ್ಷಕ ಸಾಂಸ್ಕøತಿಕ ಕಲಾಪ್ರಕಾರದ ತಂಡಗಳೊಂದಿಗೆ ಜನಮನ ಸೂರೆಗೊಂಡಿತು.
ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿಂದು ಚಾಮರಾಜನಗರ ದಸರಾ ಮಹೋತ್ಸವ ಪ್ರಯುಕ್ತ ಮೊದಲು ನಂದಿಧ್ವಜ ಕಂಬಕ್ಕೆ ಪೂಜೆ ಸಲ್ಲಿಸಿ ಬಳಿಕ ಬೆಳ್ಳಿರಥದಲ್ಲಿ ಅಲಂಕೃತಗೊಂಡ ನಾಡದೇವಿ ಶ್ರೀ ಚಾಮುಂಡೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅದ್ದೂರಿ ಮೆರವಣಿಗೆಗೆ ಚಾಲನೆ ನೀಡಿದರು.
ನಾದಸ್ವರ, ಡೊಳ್ಳುಕುಣಿತ, ವೀರಗಾಸೆ, ಚಂಡೆವಾದ್ಯ, ಮರಗಾಲು ಕುಣಿತ, ಸತ್ತಿಗೆ, ಸೂರಪಾನಿ, ಮಂಟೇಸ್ವಾಮಿಯವರ ಕಂಡಾಯ, ಗೊಂಬೆ ಕುಣಿತ, ದೊಣ್ಣೆ ವರಸೆ, ಕರಡಿ ಕುಣಿತ, ಗೊರವರr ಕುಣಿತ, ಚಾಮುಂಡೇಶ್ವರಿ ದೇವಿ, ಗಣೇಶ, ಆಂಜನೇಯ, ಈಶ್ವರ, ಪಾರ್ವತಿ ವೇಷಧಾರಿಗಳು, ಯಕ್ಷಗಾನ, ಕೊಡವರ ನೃತ್ಯ ಸೇರಿದಂತೆ ವಿವಿಧ ಜಿಲ್ಲೆಗಳ ಸಾಂಪ್ರಾದಾಯಿಕ ನೃತ್ಯದೊಂದಿಗೆ ಸಾಗಿದ ಮೆರವಣಿಗೆಯು ಕಲಾವೈಭಕ್ಕೆ ಮೆರುಗು ತುಂಬಿ ಜನಾಕರ್ಷಣೆಗೆ ಸಾಕ್ಷಿಯಾಯಿತು. ದಾರಿಯುದ್ದಕ್ಕೂ ಮೆರವಣಿಗೆ ನೋಡಲು ಕಿಕ್ಕಿರಿದು ಸೇರಿದ್ದ ಜನರ ಸಂಭ್ರಮ ಇಮ್ಮಡಿಸಿತ್ತು.
ಮೆರವಣಿಗೆಯಲ್ಲಿ ಕಲಾತಂಡಗಳೊಂದಿಗೆ ಕೃಷಿ, ರೇಷ್ಮೆ, ಮೀನುಗಾರಿಕೆ, ಅರಣ್ಯ, ಆರೋಗ್ಯ, ಯುವ ಸಬಲೀಕರಣ ಮತ್ತು ಕ್ರೀಡೆ, ಶಕ್ತಿ ಯೋಜನೆ, ಪಂಚ ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಸರ್ಕಾರಿ ಅಭಿವೃದ್ಧಿ ಯೋಜನೆ, ಕಾರ್ಯಕ್ರಮ ಅನುಷ್ಟಾನಗೊಳಿಸುವ ಕುರಿತು ಜನಜಾಗೃತಿ ಮೂಡಿಸುವ ಆಕರ್ಷಕ ಸ್ತಬ್ದಚಿತ್ರಗಳು ಜನರ ಮನಸ್ಸನ್ನು ಸೂರೆಗೊಂಡು ಮೆರವಣಿಗೆ ಸಂಪನ್ನಗೊಂಡಿತು.
ಇದೇ ಸಂದರ್ಭದಲ್ಲಿ ಸಚಿವರೊಂದಿಗೆ ಚುಡಾ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ, ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ವಿ. ಪ್ರಿಯದರ್ಶಿನಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶೃತಿ. ಡಿ.ಸಿ, ತಹಶೀಲ್ದಾರ್ ಗಿರಿಜಾ, ಇತರರು ಇದ್ದರು.



No comments:
Post a Comment