Monday, 12 October 2026

ಚಾಮರಾಜನಗರ ದಸರಾ ಮಹೋತ್ಸವ : ವೇದಿಕೆ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ ನಿರ್ಗಮಿತ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಆತ್ಮೀಯ ಬಿಳ್ಕೋಡುಗೆ*

 



ಚಾಮರಾಜನಗರ ದಸರಾ ಮಹೋತ್ಸವ : ವೇದಿಕೆ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ   ಚಾಮರಾಜನಗರ, ಅಕ್ಟೋಬರ್ 12 - ನಗರದಲ್ಲಿ ಅಕ್ಟೋಬರ್ 17, 18 ಮತ್ತು 19ರಂದು ನಡೆಯಲಿರುವ ದಸರಾ ಮಹೋತ್ಸವದ ಅಂಗವಾಗಿ ವೇದಿಕೆ ನಿರ್ಮಾಣ ಕಾರ್ಯಕ್ಕೆ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಇಂದು ಭೂಮಿ ಪೂಜೆ ನೆರವೇರಿಸಿದರು.  ನಗರದ ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ದಸರಾ ಕಾರ್ಯಕ್ರಮಗಳು ನಡೆಯಲಿರುವ ಬೃಹತ್ ವೇದಿಕೆ ಹಾಗೂ ವಿಶಾಲವಾದ ಶಾಮಿಯಾನ, ಇನ್ನಿತರ ಕಾರ್ಯಗಳ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಿದರು.  ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಚಾಮರಾಜನಗರ ದಸರಾ ಮಹೋತ್ಸವಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಮೂರು ದಿನಗಳ ಕಾಲ ನಡೆಯಲಿರುವ ಉತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.  ನಗರಸಭೆ ಪೌರಾಯುಕ್ತರಾದ ಪರಶುರಾಮ್ ಛಲವಾದಿ, ನಗರಸಭೆ ಮಾಜಿ ಅಧ್ಯಕ್ಷರಾದ ಸುರೇಶ್ ನಾಯಕ, , ಅರ್ಚಕರಾದ ರಾಮಕೃಷ್ಣ ಭಾರದ್ವಾಜ್, ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರಾದ ಮಂಜುನಾಥ್ ಸೇರಿದಂತೆ ಇತರರು ಸಂದರ್ಭದಲ್ಲಿ ಉಪಸ್ಥಿತರಿದ್ದರು.


*


         ಚಾಮರಾಜನಗರ, ಅಕ್ಟೋಬರ್ 12 :- ನಗರದ ಯಡಬೆಟ್ಟದ ಸಮೀಪ ಬುಡಕಟ್ಟು ಆದಿವಾಸಿ ಸಮುದಾಯದ ಅನುಕೂಲಕ್ಕಾಗಿ 3.90 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಿರುವ ಸಮುದಾಯ ಭವನದ ಕಾಮಗಾರಿಗೆ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಇಂದು ಭೂಮಿ ಪೂಜೆ ನೆರವೇರಿಸಿದರು.

       ಈ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಬುಡಕಟ್ಟು ಆದಿವಾಸಿ ಸಮುದಾಯದ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಜಿಲ್ಲಾ ಕೇಂದ್ರದಲ್ಲಿ ಸಮುದಾಯ ಭವನ ನಿರ್ಮಿಸಲಾಗುತ್ತಿದೆ. ಈ ಭವನವು ಸಮುದಾಯದ ವಿವಿಧ ಕಾರ್ಯಕ್ರಮಗಳು ಹಾಗೂ ಸಭೆ-ಸಮಾರಂಭಗಳನ್ನು ಆಯೋಜಿಸಲು ಸಹಕಾರಿಯಾಗಲಿದೆ. ಸಮುದಾಯ ಭವನವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

      ಸಮುದಾಯ ಭವನದ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವುದರ ಜೊತೆಗೆ ಗುಣಮಟ್ಟವನ್ನು ಕಾಯ್ದುಕೊಂಡು ನಿರ್ಮಾಣ ಕಾರ್ಯ ಕೈಗೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
  
       ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕೇತಮ್ಮ, ಮುಖಂಡರಾದ ಜಡೆಯಪ್ಪ, ಡಾ. ಸಿ. ಮಾದೇಗೌಡ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸುಬ್ಬರಾಯ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಕಚೇರಿ ಅಧೀಕ್ಷಕರಾದ ಶ್ರೀನಿವಾಸಮೂರ್ತಿ, ತಾಲೂಕು ಕಚೇರಿಯ ವ್ಯವಸ್ಥಾಪಕರಾದ ಸುರೇಶ್, ಮನೋಹರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.


ನಿರ್ಗಮಿತ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಆತ್ಮೀಯ ಬಿಳ್ಕೋಡುಗೆ*  

ಚಾಮರಾಜನಗರ, ಅಕ್ಟೋಬರ್ 12 - ಚಾಮರಾಜನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯಿಂದ ವರ್ಗಾವಣೆಗೊಂಡು ನಿರ್ಗಮಿಸಿದ ಮೋನಾ ರೋತ್ ಅವರಿಗೆ ಆತ್ಮೀಯ ಹಾಗೂ ಹೃದಯಸ್ಪರ್ಶಿ ಬಿಳ್ಕೋಡುಗೆ ನೀಡಲಾಯಿತು.

      ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ವತಿಯಿಂದ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ದಾರಿಯುದ್ದಕ್ಕೂ ಹೂಮಳೆ ಸುರಿಸುವ ಮೂಲಕ ನಿರ್ಗಮಿತರನ್ನು ಸಮಾರಂಭಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು.

      ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಎಚ್.ವಿ. ಚಂದ್ರು ಅವರು ನಿರ್ಗಮಿತ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಜಿಲ್ಲೆಯ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಾರೆ. ಕುಡಿಯುವ ನೀರಿನ ಯೋಜನೆ ಹಾಗೂ ಕಾಮಗಾರಿಗಳ ಪ್ರಗತಿಗೆ ಮೋನಾ ರೋತ್ ಅವರ ಕೊಡುಗೆ ಅನನ್ಯವಾಗಿದೆ. ಅವರ ಸೇವೆ ಚಾಮರಾಜನಗರ ಜಿಲ್ಲೆಗೆ ಇನ್ನೂ ಅಗತ್ಯವಾಗಿತ್ತು ಎಂದರು.

      ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಜಿಲ್ಲೆ ಮುಂಚೂಣಿ ಸ್ಥಾನ ಕಾಯ್ದುಕೊಳ್ಳಲು ಮೋನಾ ರೋತ್ ಅವರ ಪರಿಶ್ರಮವಿದೆ. ಯೋಜನೆಗಳ ಪ್ರಗತಿಗಾಗಿ ಜಿಲ್ಲಾ ಗ್ಯಾರಂಟಿ ಸಮಿತಿಗೆ ಉತ್ತಮ ಸಹಕಾರ ನೀಡಿದ್ದರು. ಗ್ಯಾರಂಟಿ ಯೋಜನೆಗಳ ರಾಜ್ಯಮಟ್ಟದ ಸಭೆಗಳಲ್ಲಿಯೂ ಅವರು ಜಿಲ್ಲೆಯ ಪರವಾಗಿ ಉತ್ತಮ ಕೆಲಸ ಮಾಡಿದ್ದಾರೆ. ಮುಂದಿನ ವೃತ್ತಿಜೀವನದಲ್ಲಿ ಇನ್ನೂ ಹೆಚ್ಚಿನ ಯಶಸ್ಸು ದೊರೆಯಲಿ ಎಂದು ಎಚ್.ವಿ. ಚಂದ್ರು ಅವರು ಹಾರೈಸಿದರು.

      ಸನ್ಮಾನ ಸ್ವೀಕರಿಸಿದ ನಿರ್ಗಮಿತ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಮಾತನಾಡಿ ಜಿಲ್ಲಾ ಪಂಚಾಯತ್ ವತಿಯಿಂದ ಸಾಕಷ್ಟು ಯೋಜನೆ ಅನುಷ್ಟಾನ ಮಾಡುವ ಮೂಲಕ ಜಿಲ್ಲೆಯ ಅಭಿವೃದ್ಧಿಯಲ್ಲಿ ನಾನು ಭಾಗಿಯಾಗಿರುವುದು ಹೆಮ್ಮೆಯ ವಿಚಾರ. ಕಾರ್ಯಕ್ರಮಗಳ ಪ್ರಗತಿಯನ್ನು ಮುಂಚೂಣಿಗೆ ತರಲು ಶಿಕ್ಷಣ, ಆರೋಗ್ಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ ಎಂದರು.

      ಜಿಲ್ಲೆ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಅಭಿವೃದ್ಧಿಗಾಗಿ ಸ್ವಯಂ ಪ್ರೇರಣೆಯಿಂದ ಕರ್ತವ್ಯದಲ್ಲಿ ತೊಡಗಿಸಿಕೊಳ್ಳಲು ಅಧಿಕಾರಿಗಳಿಗೆ ಸಲಹೆ ನೀಡಿದ್ದೇನೆ. ಯಾವುದೇ ವಿಭಾಗಗಳ ಪ್ರಗತಿಯಲ್ಲಿ ಜಿಲ್ಲೆ ಅಗ್ರ 10 ರೊಳಗಿರಬೇಕು ಎಂಬುದು ನನ್ನ ಅಭಿಲಾಷೆಯಾಗಿತ್ತು. ಒಟ್ಟಾರೆ ಜಿಲ್ಲೆಯಲ್ಲಿ ಕೆಲಸ ಮಾಡಿದ ತೃಪ್ತಿ ನನಗಿದೆ ಎಂದ ಮೋನಾ ರೋತ್ ಅವರು ಎಲ್ಲರ ಸಹಕಾರಕ್ಕೆ ಧನ್ಯವಾದಗಳನ್ನು ತಿಳಿಸಿದರು.    
  
      ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಿ.ಸಿ. ಶೃತಿ, ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಅಧಿಕಾರಿಗಳು, ವಿವಿಧ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಎನ್.ಆರ್.ಎಲ್.ಎಂ ಸದಸ್ಯರು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

No comments:

Post a Comment

ಚಾಮರಾಜನಗರ ದಸರಾ ಮಹೋತ್ಸವ-2026* *ಜಿಲ್ಲಾ ದಸರಾ ಲಾಂಛನ ಬಿಡುಗಡೆಗೊಳಿಸಿದ ಜಿಲ್ಲಾ ಉಸ್ತುವಾರಿ ಸಚಿವರು* -

 ಚಾಮರಾಜನಗರ ದಸರಾ ಮಹೋತ್ಸವ-2026* *ಜಿಲ್ಲಾ ದಸರಾ ಲಾಂಛನ ಬಿಡುಗಡೆಗೊಳಿಸಿದ ಜಿಲ್ಲಾ ಉಸ್ತುವಾರಿ ಸಚಿವರು* - *ಅ. 17ರಂದು ಖ್ಯಾತ ಚಲನಚಿತ್ರ ನಟ ವಿ. ರವಿಚಂದ್ರನ್ ಅವರಿಂ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು