ನಗರದಲ್ಲಿ ಅರ್ಥಪೂರ್ಣವಾಗಿ ನಡೆದ ಬಾಬೂಜೀ ಪುಣ್ಯಸ್ಮರಣೆ
ಚಾಮರಾಜನಗರ, ಜು. 06 - ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬೂ ಜಗಜೀವನರಾಮ್ ಅವರ 30ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ನಗರದಲ್ಲಿಂದು ಅರ್ಥಪೂರ್ಣವಾಗಿ ನಡೆಸಲಾಯಿತು.
ನಗರದ ಜೆ.ಎಚ್. ಪಟೇಲ್ ಸಬಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಂಸದೀಯ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು ಸೇರಿದಂತೆ ಇತರೆ ಗಣ್ಯರು ಬಾಬೂಜೀಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಸಿ. ಪುಟ್ಟರಂಗಶೆಟ್ಟಿಯವರು ಬಾಬೂ ಜಗಜೀವನರಾಮ್ ಅವರು ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದರು. ಅನೇಕ ಮಹತ್ವದ ಖಾತೆಗಳನ್ನು ನಿರ್ವಹಿಸುವ ಮೂಲಕ ದೇಶದ ಮುನ್ನಡೆಗೆ ಕಾರಣರಾದರು. ಅವರ ಪರಿಶ್ರಮದಿಂದ ಪ್ರಗತಿಪರ ಯೋಜನೆಗಳು ಜಾರಿಯಾದವೆಂದು ತಿಳಿಸಿದರು.
ಬಾಬೂ ಜಗಜೀವನರಾಮ್ ಅವರು ಕೃಷಿ ಮಂತ್ರಿಯಾಗಿದ್ದ ವೇಳೆ ದೇಶದಲ್ಲಿ ಆಹಾರ ಅಭಾವ ಎದುರಿಸಬೇಕಾದ ಪರಿಸ್ಥಿತಿ ಬಂದೊದಗಿತ್ತು. ಅ ಸಂದರ್ಭದಲ್ಲಿ ಹಸಿರು ಕ್ರಾಂತಿಯನ್ನು ಬಾಬೂಜೀಯವರು ಅನುಷ್ಠಾನ ಮಾಡಿದ ಫಲವಾಗಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಯಿತು. ಇಂತಹ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಬಾಬೂ ಜಗಜೀವನರಾಮ್ ಅವರ ಸೇವಾ ಸಾಧನೆಯನ್ನು ಸ್ಮರಿಸುವುದು ಅವಶ್ಯವಾಗಿದೆ ಎಂದು ಪುಟ್ಟರಂಗಶೆಟ್ಟಿ ತಿಳಿಸಿದರು.
ಜಿಲ್ಲಾಧಿಕಾರಿ ಬಿ. ರಾಮು ಮಾತನಾಡಿ ಬಾಬೂಜೀಯವರ ಹಸಿರು ಕ್ರಾಂತಿಯು ದೇಶದ ಆಹಾರ ಉತ್ಪಾದನೆಗೆ ಭದ್ರ ಬುನಾದಿಯಾಗಿದೆ. ಅವರು ಹಾಕಿಕೊಟ್ಟ ಮಾರ್ಗಗಳು ಇಂದಿಗೂ ಹಸಿರಾಗಿವೆ. ಹೀಗಾಗಿಯೆ ಆಹಾರ ರಫ್ತು ವಿಷಯದಲ್ಲಿ ಭಾರತ ದಾಪುಗಾಲು ಇಟ್ಟಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕೇಂದ್ರದಲ್ಲಿ ಬಾಬೂ ಜಗಜೀವನರಾಮ್ ಭವನ ನಿಮಾಣಕ್ಕೆ ನಿವೇಶನ ಲಭ್ಯವಾಗಿದೆ. ಈ ಹಿನ್ನಲೆಯಲ್ಲಿ ಶೀಘ್ರವೇ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳ ಸಹಕಾರದೊಂದಿಗೆ ಭವನ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ಹಾಕಲಾಗುವುದು. ಭವನ ನಿಮಾಣವು ಪೂರ್ಣಗೊಂಡು ಭಾಬೂಜೀ ಅವರ ಚಿಂತನೆ, ಆದರ್ಶ, ಮೌಲ್ಯಯುತ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಕೇಂದ್ರವಾಗಲಿ ಎಂದು ರಾಮು ಆಶಿಸಿದರು.
ನಗರಸಭಾ ಸದಸ್ಯರಾದ ಮಹದೇವಯ್ಯ, ಸಿ.ಕೆ. ಮಂಜುನಾಥ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಾಪಾಟಿ, ಉಪಕಾರ್ಯದರ್ಶಿ ಮುನಿರಾಜಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ರಾಜೇಶ್ ಜಿ, ಗೌಡ, ಮುಖಂಡರಾದ ಆರ್.ಎಂ. ಕಾಂತರಾಜು, ಚಾ.ಗು. ನಾಗರಾಜು, ಕೆ.ಎಂ. ನಾಗರಾಜು, ಬಸವನಪುರ ರಾಜಶೇಖರ್, ಆಲೂರು ನಾಗೇಂದ್ರ, ಶಿವಮೂರ್ತಿ, ತಹಶೀಲ್ದಾರ್ ಮಹದೇವು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರೇವಣ್ಣ, ವಿವಿಧ ಸಂಘಟನೆ, ಸಮುದಾಯಗಳ ಮುಖಂಡರು, ಅಧಿಕಾರಿಗಳು ಬಾಬೂಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಜು. 19ರಂದು ಚಾಮರಾಜೇಶ್ವರ ಸ್ವಾಮಿ ರಥೋತ್ಸವ
ಚಾಮರಾಜನಗರ, ಜು. 06- ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಚಾಮರಾಜೇಶ್ವರಸ್ವಾಮಿ ರಥೋತ್ಸವವು ಜುಲೈ 19ರಂದು ನೆರವೇರಲಿದೆ. ಪೂರ್ವಾಷಾಡ ನಕ್ಷತ್ರದಲ್ಲಿ ಬೆಳಿಗ್ಗೆ 10.05 ರಿಂದ 11.35ರ ಕನ್ಯಾ ಲಗ್ನದಲ್ಲಿ ಶ್ರೀ ಮನ್ಮಹಾರಥಾರೋಹಣ ಆನಂತರ ಹಂಸಾರೋಹಣ ನಂತರ ನಟೇಶೋತ್ಸವ ನಡೆಯಲಿದೆ.
ರಥೋತ್ಸವದ ಅಂಗವಾಗಿ ವಿವಿಧ ಉತ್ಸವಾದಿ ವಿಶೇಷ ಪÀೂಜಾ ಕೈಂಕರ್ಯಗಳು ನೆರವೇರಲಿದೆ.
ಜುಲೈ 12ರಂದು ಅಂಕುರಾರ್ಪಣ ಪೂರ್ವಕ ವೃಷಭಾಧಿವಾಸ, 13ರಂದು ಬೆಳಿಗ್ಗೆ 11.15 ರಿಂದ 12ಕ್ಕೆ ಕನ್ಯಾ ಲಗ್ನದಲ್ಲಿ ಮಹೂರ್ತದಲ್ಲಿ ಧ್ವಜಾರೋಹಣ ಪೂರ್ವಕ ಭೇರಿತಾಡನಾ ನಂತರ ಶಿಭಿಕಾರೋಹಣೋತ್ಸವ, 14ರಂದು ಚಂದ್ರ ಮಂಡಲಾರೋಹಣೋತ್ಸವ, 15ರಂದು ಅನಂತ ಪೀಠಾರೋಹಣೋತ್ಸವ, 16ರಂದು ಪುಷ್ಪ ಮಂಟಪಾರೋಹಣೋತ್ಸವ, 17ರಂದು ವೃಷಭಾರೋಹಣೋತ್ಸವ, 18ರಂದು ವಸಂತೋತ್ಸವಪೂರ್ವಕ, 20ರಂದು ಮೃಗಾಯಾತ್ರಾ ಪೂರ್ವಕ ಅಶ್ವಾರೋಹಣಾ ನಂತರ ಮಹಾಭೂತಾರೋಹಣ, ದೇವಿ ಪ್ರಣಯ ಕಲಹ ಸಂಧಾನೋತ್ಸವ, 21ರಂದು ಹಗಲು ಚೂರ್ಣೋತ್ಸವ ಪೂರ್ವಕ ಅವಭೃತ ತೀರ್ಥಸ್ನಾನ, ರಾತ್ರಿ ಧ್ವಜಾರೋಹಣ, ಮೌನಬಲಿ, 22ರಂದು ಪುಷ್ಪಯಾಗ ಪೂರ್ವಕ ಕೈಲಾಸಯಾನಾ ರೋಹಣೋತ್ಸವ, 23ರÀಂದು ಮಹಾಸಂಪ್ರೋಕ್ಷಣ ಪೂರ್ವಕ ನಂದಿವಾಹನೋತ್ಸವ ನಡೆಯಲಿದೆ
ವಾಹನ ಬಹಿರಂಗ ಹರಾಜು
ಚಾಮರಾಜನಗರ, ಜು. - ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯು ವಿವಿಧ ಪ್ರಕರಣಗಳಲ್ಲಿ ಅಮಾನತುಪಡಿಸಿಕೊಂಡಿರುವ ವಾಹನಗಳನ್ನು ನ್ಯಾಯಾಲಯ ಅನುಮತಿ ಮೇರೆಗೆ ಜುಲೈ 11ರಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣ ಪೊಲೀಸ್ ಠಾಣೆ ಆವರಣದಲ್ಲಿ ಸಾರ್ವಜನಿಕವಾಗಿ ಬಹಿರಂಗ ಹರಾಜು ಮಾಡಲಿದೆ.
ಆಸಕ್ತರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಹರಾಜು ಮಾಡಲಿರುವ ವಾಹನಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಹರಾಜು ಪ್ರಕ್ರಿಯೆ ಸಕ್ಷಮ ಪ್ರಾಧಿಕಾರಿಯಾಗಿರುವ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಪುಸ್ತಕ ಬಹುಮಾನಕ್ಕಾಗಿ ಕೃತಿಗಳ ಆಹ್ವಾನ
ಚಾಮರಾಜನಗರ, ಜು. - ಕರ್ನಾಟಕ ಸಾಹಿತ್ಯ ಅಕಾಡೆಮಿಯು 2015ನೇ ವರ್ಷದ ಪುಸ್ತಕ ಬಹುಮನ ಯೋಜನೆಗಾಗಿ ವಿವಿಧ ಪ್ರಕಾರಗಳ ಕನ್ನಡ ಪುಸ್ತಕಗಳನ್ನು ಆಹ್ವಾನಿಸಿದೆ.
ಕಾವ್ಯ(ವಚನಗಳು ಮತ್ತು ಹನಿಗವನಗಳು ಸೇರಿ), ಕಾದಂಬರಿ, ಸಣ್ಣ ಕತೆ, ನಾಟಕ, ಲಲಿತ ಪ್ರಬಂಧ (ಹರಟೆ ಮತ್ತು ವಿನೋದ ಸಾಹಿತ್ಯ ಸೇರಿ), ಪ್ರವಾಸ ಸಾಹಿತ್ಯ, ಜೀವನ ಚರಿತ್ರೆ / ಆತ್ಮಕತೆ, ಸಾಹಿತ್ಯ ವಿಮರ್ಶೆ (ಸಾಹಿತ್ಯ ಚರಿತ್ರೆ, ಸಾಹಿತ್ಯ ತತ್ವ ಮತ್ತು ಸೌಂದರ್ಯ ಮೀಮಾಂಸೆ ಸೇರಿ), ಗ್ರಂಥ ಸಂಪಾದನೆ (ಪ್ರಾಚೀನ ಕೃತಿಗಳ ಸಂಪಾದನೆ), ಮಕ್ಕಳ ಸಾಹಿತ್ಯ, ವಿಜ್ಞಾನ ಸಾಹಿತ್ಯ (ಭೌತ, ರಸಾಯನ, ಗಣಿತ, ಪ್ರಾಣಿ, ಸಸ್ಯ, ಎಂಜಿನಿಯರಿಂಗ್, ವೈದ್ಯ, ಭೂ, ಖಗೋಳ, ಗೃಹವಿಜ್ಞಾನ, ಪರಿಸರ ಇತ್ಯಾದಿ), ಮಾನವಿಕಗಳು (ಇತಿಹಾಸ, ರಾಜಕೀಯ ಶಾಸ್ತ್ರ, ಸಮಾಜಶಾಸ್ತ್ರ, ಮಾನವ ಶಾಸ್ತ್ರ, ಮನಶಾಸ್ತ್ರ, ಭಾಷಾಶಾಸ್ತ್ರ, ಶಿಕ್ಷಣ, ವಾಣಿಜ್ಯ, ಕಾನೂನು, ಗ್ರಂಥಭಂಡಾರ ವಿಜ್ಞಾನ, ಸಮೂಹ ಸಂವಹನ, ಧಾರ್ಮಿಕ, ದಾರ್ಶನಿಕ), ಸಂಶೋಧನೆ (ಕನ್ನಡ ಭಾಷೆ ಮತ್ತು ಸಂಸ್ಕøತಿಗಳಿಗೆ ಸಂಬಂಧಿಸಿದ ಸಂಶೋಧನೆ), ಅನುವಾದ 1 (ಕಾದಂಬರಿ, ಕಾವ್ಯ, ಸಣ್ಣಕತೆ, ನಾಟಕ, ಲಲಿತ ಪ್ರಬಂಧ, ಪ್ರವಾಸ ಸಾಹಿತ್ಯ, ಜೀವನ ಚರಿತ್ರೆ ಇನ್ನಿತರ ಸೃಜನಶೀಲ ಕೃತಿಗಳು), ಅನುವಾದ-2 (ಶಾಸ್ತ್ರ ಸಾಹಿತ್ಯ, ಸಾಹಿತ್ಯ ವಿಮರ್ಶೆ ಇನ್ನಿತರ ಸೃಜನೇತರ ಕೃತಿಗಳು), ಸಂಕೀರ್ಣ (ಯಾವುದೇ ಪ್ರಕಾರಕ್ಕೆ ಹೊಂದಿಕೊಳ್ಳದ ವಿಶಿಷ್ಟ ಕೃತಿಗಳು), ಲೇಖಕರ ಮೊದಲ ಸ್ವತಂತ್ರ ಕೃತಿ, ಕನ್ನಡದಿಂದ ಇಂಗ್ಲೀಷಿಗೆ ಅನುವಾದಗೊಂಡ 100 ಪುಟಗಳಿಗೆ ಕಡಿಮೆ ಇಲ್ಲದ ಸೃಜನಾತ್ಮಕ ಕೃತಿಗೆ ಬಹುಮಾನ ನೀಡಲಾಗುತ್ತದೆ.
ಬಹುಮಾನಕ್ಕೆ ಸಲ್ಲಿಸುವ ಕೃತಿಗಳು 2015ರ ಜನವರಿಯಿಂದ ಡಿಸೆಂಬರ್ 31ರೊಳಗೆ ಪ್ರಥಮ ಆವೃತ್ತಿಯಾಗಿ ಪ್ರಕಟವಾಗಿರಬೇಕು. ಕೃತಿಯ ತಾಂತ್ರಿಕ ಪುಟದಲ್ಲಿ ಪ್ರಥಮ ಮುದ್ರಣ 2015 ಎಂದು ಮುದ್ರಿತವಾಗಿರಬೇಕು.
ಮರು ಮುದ್ರಣವಾದ ಪುಸ್ತಕಗಳಾಗಿರಬಾರದು. ಜಾನಪದ, ಪಠ್ಯಪುಸ್ತಕ, ಪಿಹೆಚ್‍ಡಿ ಪದವಿಗಾಗಿ ಸಿದ್ಧಪಡಿಸಿದ ಸಂಶೋಧನ ಗ್ರಂಥಗಳಾಗಿರಬಾರದು. ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕøತ ಸಾಹಿತಿಗಳ ಕೃತಿಗಳಾಗಿರಬಾರದು. ಈಗಾಗಲೇ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಒಟ್ಟಾರೆ 3 ಬಾರಿ ಪುಸ್ತಕ ಬಹುಮಾನ ಪಡೆದವರ ಕೃತಿಗಳಾಗಿರಬಾರದು. ಒಂದೇ ಪ್ರಕಾರದಲ್ಲಿ 2 ಬಾರಿ ಪುಸ್ತಕ ಬಹುಮಾನ ಪಡೆದವರ ಕೃತಿಗಳನ್ನು ಅದೇ ಪ್ರಕಾರದಲ್ಲಿ ಮತ್ತೆ ಪರಿಗಣಿಸಲಾಗುವುದಿಲ್ಲ.
ಆಸಕ್ತರು ಪುಸ್ತಕಗಳ ಪ್ರತಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆಸಿ ರಸ್ತೆ, ಬೆಂಗಳೂರು – 560002 ಇವರಿಗೆ ನೋಂದಣಿ ಅಂಚೆ, ಕೊರಿಯರ್ ಅಥವಾ ಖುದ್ದಾಗಿ ಜುಲೈ 10ರೊಳಗೆ ತಲುಪಿಸಬೇಕೆಂದು ಪ್ರಕಟಣೆ ತಿಳಿಸಿದೆ.
ಜು. 8ರಂದು ಕೊಳ್ಳೇಗಾಲದಲಿ ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಯೋಜನೆ ಕುರಿತು ತಿಳಿವಳಿಕೆ ಕಾರ್ಯಕ್ರಮ
ಚಾಮರಾಜನಗರ, ಜು. - ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ದಿ ಕೇಂದ್ರ ಆಶ್ರಯದಲ್ಲಿ ಕೊಳ್ಳೇಗಾಲ ತಾಲೂಕಿನ ಭಾವಿ ಉದ್ಯಮಿಗಳಿಗೆ ಹಾಗೂ ವಿದ್ಯಾವಂತ ನಿರುದ್ಯೋಗಿ ಯುವಜನರಿಗಾಗಿ ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಯೋಜನೆ ಕುರಿತು ತಿಳಿವಳಿಕೆ ಕಾರ್ಯಕ್ರಮವನ್ನು ಜುಲೈ 8 ರಂದು ಬೆಳಿಗೆ 10.30 ಗಂಟೆಗೆ ಕೊಳ್ಳೇಗಾಲ ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ ಸಾÀ್ಥಪಿಸಬಹುದಾದ ಉದ್ಯಮ ವಿವಿಧ ಇಲಾಖೆ ಬ್ಯಾಂಕುಗಳಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗುತ್ತದೆ.
ಆಸಕ್ತರು ಅಂದು ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಸ್ಥಳದಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರ ಅಥವಾ ದೂರವಾಣಿ ಸಂಖ್ಯೆ 08226-226346, ಮೊಬೈಲ್ ಸಂಖ್ಯೆ 7760145784 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಜು. 8ರಂದು ಕೊಳ್ಳೇಗಾಲದಲ್ಲಿ ಉದ್ಯಮಶೀಲತಾ ತಿಳಿವಳಿಕೆ ಉದ್ಘಾಟನಾ ಸಮಾರಂಭ
ಚಾಮರಾಜನಗರ, ಜು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ದಿ ಕೇಂದ್ರ ಆಶ್ರಯದಲ್ಲಿ ಕೊಳ್ಳೇಗಾಲ ತಾಲೂಕಿನ ಭಾವಿ ಉದ್ಯಮಿಗಳಿಗೆ ಹಾಗೂ ವಿದ್ಯಾವಂತ ನಿರುದ್ಯೋಗಿ ಯುವಜನರಿಗಾಗಿ ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಯೋಜನೆ ಕುರಿತು ತಿಳಿವಳಿಕೆ ಕಾರ್ಯಕ್ರಮವನ್ನು ಜುಲೈ 8 ರಂದು ಬೆಳಿಗೆ 10.30 ಗಂಟೆಗೆ ಕೊಳ್ಳೇಗಾಲ ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಶಾಸಕರಾದ ಆರ್ ನರೇಂದ್ರ ಕಾರ್ಯಕ್ರಮ ಉದ್ಘಾಟಿಸಲಿದ್ದು ಶಾಸಕರಾದ ಎಸ್. ಜಯಣ್ಣ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಆರ್. ರಾಜು, ಉಪಾಧ್ಯಕ್ಷರಾದ ಲತಾ ರಾಜಣ್ಣ, ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಾದ ಎಚ್. ಶಿವರಾಮಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರೆಂದು ಪ್ರಕಟಣೆ ತಿಳಿಸಿದೆ.
ಹವಾಮಾನ ಆಧಾರಿತ ಬೆಳೆ ವಿಮೆ, ಪ್ರಧಾನಮಂತ್ರಿ ಫಸಲು ಬಿಮಾ ಬೆಳೆ ವಿಮೆ ಮಾಹಿತಿಗೆ ಸಹಾಯವಾಣಿ
ಚಾಮರಾಜನಗರ, ಜು. - ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ನೆರವಾಗುವ ಹವಾಮಾನ ಆಧಾರಿತ ಬೆಳೆ ವಿಮೆ ಹಾಗೂ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲು ಬಿಮಾ ಯೋಜನೆ ಕುರಿತು ರೈತರಿಗೆ, ಬೆಳೆಗಾರರಿಗೆ ಹೆಚ್ಚಿನ ಮಾಹಿತಿ ಪಡೆಯಲು ಜಿಲ್ಲೆಯಲ್ಲಿ ಸಹಾಯವಾಣಿ ಆರಂಭಿಸಲಾಗಿದೆ.
ತೆಂಗು ಮತ್ತು ಬಾಳೆ ಬೆಳೆಯು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ಒಳಪಡಲಿದ್ದು ವಿಮಾ ಕಂತು ಪಾವತಿಸಲು ಇದೇ ತಿಂಗಳ ಜುಲೈ 10 ಕಡೆಯ ದಿನವಾಗಿದೆ.
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲು ಬಿಮಾ ಯೋಜನೆಡಿ ವಿವಿಧ ಬೆಳೆಗಳಿಗೆ ವಿಮಾ ಕಂತು ಪಾವತಿಸಲು ಜುಲೈ 30 ಕಡೆಯ ದಿನವಾಗಿದೆ. ರೈತರು, ಬೆಳೆಗಾರರು ಸಂಬಂಧಪಟ್ಟ ಬ್ಯಾಂಕುಗಳಲ್ಲಿ ಅಂತಿಮ ದಿನಾಂಕದ ಒಳಗೆ ವಿಮಾ ಕಂತುಗಳನ್ನು ಪಾವತಿಸಬೇಕು. ವಿಮೆ ಕಂತು ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಲಭ್ಯವಿದೆ.
ಯೂನಿವರ್ಸಲ್ ಸೊಂಪೊ ಜನರಲ್ ಇನ್ಯೂರೆನ್ಸ್ ಕಂಪನಿ ಅಧಿಕಾರಿ ನವೀನ್ ಮೊಬೈಲ್ 9964101797, ಜೋಸೆಫ್ ಮೊ. 9986144000, ಲೀಡ್ ಬ್ಯಾಂಕ್ ದೂ.ಸಂ. 08226-223686, ಎಂಡಿಸಿಸಿ ಬ್ಯಾಂಕ್ ದೂ.ಸಂ. 08226-222019, ನಬಾರ್ಡ್ ಬ್ಯಾಂಕ್ 08226-225292, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ಚಾಮರಾಜನಗರ ದೂ.ಸಂ. 08226-223049, ಗುಂಡ್ಲುಪೇಟೆ ದೂ.ಸಂ. 08229-222851, ಕೊಳ್ಳೇಗಾಲ ದೂ.ಸಂ. 08224-253449, ಯಳಂದೂರು ದೂ.ಸಂ. 08226-240600, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಚಾಮರಾಜನಗರ ದೂ.ಸಂ. 08226-222271, ಗುಂಡ್ಲುಪೇಟೆ ದೂ.ಸಂ. 08229-222270, ಕೊಳ್ಳೇಗಾಲ ದೂ.ಸಂ. 08224-253130, ಯಳಂದೂರು ದೂ.ಸಂ. 08226-240013 ಸಂಪರ್ಕಿಸಬಹುದೆಂದು ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್ ಹಾಗೂ ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ನಾಗರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜು. 13ರಂದು ಗುಂಡ್ಲುಪೇಟೆ ತಾಲೂಕು ಪ.ಜಾ. ವರ್ಗಗಳ ಹಿತರಕ್ಷಣಾ ಸಮಿತಿ ಸಭೆ
ಚಾಮರಾಜನಗರ, ಜು. ಗುಂಡ್ಲುಪೇಟೆ ತಾಲೂಕಿನ ಪರಿಶಿಷ್ಟ ಜಾತಿ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯು ತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಜುಲೈ 13ರಂದು ಬೆಳಿಗ್ಗೆ 11 ಗಂಟೆಗೆ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.
ಈ ಸಭೆಗೆ ತಾಲೂಕಿನ ಎಲ್ಲ ಪರಿಶಿಷ್ಟ ಜಾತಿ ವರ್ಗದ ಮುಖಂಡರು, ಸಂಘಸಂಸ್ಥೆಗಳ ಪದಾಧಿಕಾರಿಗಳು ಆಗಮಿಸಿ ಸಲಹೆ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಆದರ್ಶ ವಿದ್ಯಾಲಯಕ್ಕೆ ದಾಖಲಾಗಲು ಸೂಚನೆ
ಚಾಮರಾಜನಗರ, ಜು. - ನಗರದ ಆದರ್ಶ ವಿದ್ಯಾಲಯ (ಆರ್ ಎಂಎಸ್ ಎ) ದಲ್ಲಿ 2016-17ನೇ ಸಾಲಿನಲ್ಲಿ 6ನೇ ತರಗತಿ ಪ್ರವೇಶಕ್ಕೆ 2ನೇ ಪಟ್ಟಿಯಲ್ಲಿ ಆಯ್ಕೆಗೊಂಡಿರುವ ವಿದ್ಯಾರ್ಥಿಗಳು ದಾಖಲಾಗುವಂತೆ ಸೂಚಿಸಲಾಗಿದೆ.
ಆಯ್ಕೆಯಾಗಿರುವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ತಕ್ಷಣವೇ ಕಚೇರಿ ವೇಳೆಯಲ್ಲಿ ಮುಖ್ಯ ಶಿಕ್ಷಕರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಜು. 8ರಂದು ಚಾ.ನಗರ ಸಭೆಯ ಸಾಮಾನ್ಯ ಸಭೆ
ಚಾಮರಾಜನಗರ, ಜು. :- ಚಾಮರಾಜನಗರ ನಗರಸಭೆಯ ಸಾಮಾನ್ಯ ಸಭೆಯು ಅದ್ಯಕ್ಷರಾದ ಎಸ್.ಎನ್. ರೇಣುಕ ಅವರ ಅಧ್ಯಕ್ಷತೆಯಲ್ಲಿ ಜುಲೈ 8ರಂದು ಬೆಳಿಗ್ಗೆ 11 ಗಂಟೆಗೆ ನಗರದ ನಗರದ ನಗರಸಭೆ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಪೌರಾಯುಕ್ತರು ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಅವಾಸ್ ಯೋಜನೆ-ಹೌಸಿಂಗ್ ಫಾರ್ ಆಲ್ ಅನುಷ್ಟಾನ
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ, ಜು. 06 ಕೇಂದ್ರ ವಸತಿ ಮತ್ತು ಬಡತನ ನಿರ್ಮೂಲನಾ ಮಂತ್ರಾಲಯವು ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಎಲ್ಲ ಬಡ ಕುಟುಂಬಗಳಿಗೂ ಸೂರು ಒದಗಿಸುವ ಧ್ಯೇಯೋದ್ದೇಶದೊಂದಿಗೆ ಜಾರಿಗೆ ತಂದಿರುವ ಪ್ರಧಾನಮಂತ್ರಿ ಅವಾಸ್ ಯೋಜನೆ-ಹೌಸಿಂಗ್ ಫಾರ್ ಆಲ್ ನೂತನ ಅಭಿಯಾನವನ್ನು ಜಿಲ್ಲೆಯಲ್ಲೂ ಅನುಷ್ಠಾನಗೊಳಿಸಲಾಗುತ್ತಿದೆ.
ಅಭಿಯಾನವನ್ನು ನಾಲ್ಕು ವಿಭಾಗಗಳ ಮೂಲಕ ವಿಂಗಡಿಸಿ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ರಾಜ್ಯ ಸರ್ಕಾರದ ಆಯ್ಕೆ ಮೇರೆಗೆ ಅನುಷ್ಟಾನಗೊಳಿಸಲಾಗುತ್ತದೆ.
ಮೊದಲ ವಿಭಾಗದಲ್ಲಿ ಭೂಮಿಯನ್ನು ಸಂಪನ್ಮೂಲವನ್ನಾಗಿಸಿಕೊಂಡು ಇನ್‍ಸೈಟ್ ಮಾದರಿಯಲ್ಲಿ ಕೊಳಚೆ ಪ್ರದೇಶಗಳನ್ನು ಪುನರ್ ಅಭಿವೃದ್ಧಿಪಡಿಸಲಾಗುತ್ತದೆ. ಕೇಂದ್ರ, ರಾಜ್ಯ, ನಗರ ಸ್ಥಳಿಯ ಸಂಸ್ಥೆ, ಖಾಸಗಿಯವರ ಅಸ್ತಿತ್ವದಲ್ಲಿರುವ ಜಮೀನಿನಲ್ಲಿ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಖಾಸಗಿ ಸಹಭಾಗಿತ್ವದಲ್ಲಿ ಇನ್‍ಸೈಟ್ ಮಾದರಿಯಲ್ಲಿ ಮನೆಗಳನ್ನು ಒದಗಿಸಲಾಗುತ್ತದೆ. ಈ ಯೋಜನೆಯಡಿ ಪ್ರತಿ ಮನೆಗೆ 1 ಲಕ್ಷ ರೂ. ಸಹಾಯಧನವನ್ನು ಕೇಂದ್ರಸರ್ಕಾರ ನೀಡಲಿದೆ.
ಎರಡನೇ ವಿಭಾಗವಾದ ಕ್ರೆಡಿಟ್ ಲಿಂಕಡ್ ಸಬ್ಸಿಡಿ ಯೋಜನೆಯಡಿ ಅರ್ಥಿಕವಾಗಿ ದುರ್ಬಲ ವರ್ಗಕ್ಕೆ (ಇ.ಡಬ್ಲ್ಯೂ.ಎಸ್) ಸೇರಿದವರು, ಕಡಿಮೆ ಆದಾಯ ಹೊಂದಿದ ವರ್ಗ(ಎಲ್.ಐ.ಜಿ)ಕ್ಕೆ ಸೇರಿದ ಅರ್ಹ ಬಡವರಿಗೆ ಮನೆ ಖರೀದಿ, ಹೊಸದಾಗಿ ಮನೆ ನಿರ್ಮಾಣ, ಪ್ರಸ್ತುತ ಇರುವ ಮನೆ ವಿಸ್ತರಣೆ(ಅಡುಗೆ ಮನೆ, ಶೌಚಾಲಯ ನಿರ್ಮಾಣ) ಮಾಡಲು ಬ್ಯಾಂಕುಗಳು ವಿಧಿಸುವ ಬಡ್ಡಿದರದ ಪೈಕಿ ಶೇ. 6.5ರ ದರದಲ್ಲಿ ಬಡ್ಡಿ ಸಹಾಯಧನವನ್ನು 15 ವರ್ಷಗಳ ಅವಧಿಗೆ ಅಥವಾ ಸಾಲದ ಅವಧಿ ಪೈಕಿ ಯಾವುದು ಕಡಿಮೆ ಇರಲಿದೆಯೋ ಅ ಅವಧಿಗೆ 6 ಲಕ್ಷ ರೂ. ಮೊತ್ತದ ಸಾಲ ಸೌಲಭ್ಯವನ್ನು ಬ್ಯಾಂಕುಗಳಿಂದ ನೀಡಲಾಗುತ್ತದೆ. ಬಡ್ಡಿ ಸಹಾಯಧನವನ್ನು ಕೇಂದ್ರ ಸರ್ಕಾರ ನೇರವಾಗಿ ಸಾಲ ನೀಡಿರುವ ಬ್ಯಾಂಕುಗಳಿಗೆ ಬಿಡುಗಡೆ ಮಾಡಲಿದೆ. 6 ಲಕ್ಷ ರೂ. ಗಿಂತ ಹೆಚ್ಚಿನ ಮೊತ್ತವನ್ನು ಸಾಲವಾಗಿ ಪಡೆದಲ್ಲಿ ಹೆಚ್ಚುವರಿ ಮೊತ್ತವನ್ನು ಸಬ್ಸಿಡಿ ರಹಿತವಾಗಿ ಮಂಜೂರು ಮಾಡಲಾಗುತ್ತದೆ.
ಮೂರನೇ ವಿಭಾಗವಾದ ಅಫ್ರೆಡಬಲ್ ಹೌಸಿಂಗ್ ಇನ್ ಪಾರ್ಟ್‍ನರ್‍ಶಿಪ್ ಅಡಿ ಅರ್ಥಿಕ ದುರ್ಬಲ ವರ್ಗಕ್ಕೆ ಸೇರಿದವರಿಗೆ ಕ್ಯಗೆಟುಕುವ ದರದಲ್ಲಿ ಮನೆಗಳನ್ನು ನಿರ್ಮಿಸಲು ವಿವಿಧ ಇಲಾಖೆಗಳ ಮೂಲಕ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಗಳನ್ನು ರೂಪಿಸಲು ಅವಕಾಶವಿದೆ. ಈ ಯೋಜನೆಯಲ್ಲಿ ಪ್ರತಿ ಇ.ಡಬ್ಲೂ.ಎಸ್ ಮನೆಗೆ 1.5 ಲಕ್ಷ ರೂ. ಅರ್ಥಿಕ ನೆರವು ಲಭಿಸಲಿದೆ.
ನಾಲ್ಕನೇ ವಿಭಾಗವಾದ ಫಲಾನುಭವಿ ನೇತೃತ್ವದ ಮನೆ ನಿರ್ಮಾಣ ಯೋಜನೆಯಡಿ ಇ.ಡಬ್ಲೂ.ಎಸ್ ಫಲಾನುಭವಿಗಳಿಗೆ ಹೊಸ ಮನೆ ನಿರ್ಮಿಸಲು ಮತ್ತು ಈಗಾಗಲೇ ಇರುವ ವಸತಿಗೆ ಹೆಚ್ಚುವರಿ ಕೊಠಡಿಗಳನ್ನು ನಿರ್ಮಾಣ ಮಾಡಿಕೊಳ್ಳಲು ಅರ್ಥಿಕ ನೆರವು ಲಭಿಸಲಿದೆ. ಇದಕ್ಕೂ ಸಹ 1.5 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ. ಈ ಪ್ರಯೋಜನ ಪಡೆಯಲು ಫಲಾನುಭವಿಗಳು ಜಾಗದ ಒಡೆತನ ಹೊಂದಿರುವ ಬಗ್ಗೆ ಮಾಹಿತಿ ಸಲ್ಲಿಸಬೇಕಿದೆ.
ರಾಜ್ಯ ಸರ್ಕಾರವು ಎರಡನೇ ವಿಭಾಗದ ಯೋಜನೆ ಹೊರತುಪಡಿಸಿ ಉಳಿದ ಮೂರು ವಿಭಾಗಗಳ ಯೋಜನೆಯನ್ನು ಅನುಷ್ಟಾನ ಮಾಡಲಿದೆ. ಎರಡನೇ ವಿಭಾಗದ ಯೋಜನೆಯನ್ನು ಕೇಂದ್ರ ಸರ್ಕಾರ ಬ್ಯಾಂಕುಗಳ ಮೂಲಕ ನೇರವಾಗಿ ಅನುಷ್ಠಾನಗೊಳಿಸಲಿದೆ. ಪ್ರಧಾನಮಂತ್ರಿ ಅವಾಸ್ ಯೋಜನೆಯು ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದೆ.
ಈ ಸೌಲಭ್ಯವನ್ನು ಪಡೆಯಲು ಬಿ.ಪಿ.ಎಲ್. ಕುಟುಂಬದವರ ವಾರ್ಷಿಕ ಆದಾಯ 87 ಸಾವಿರ ರೂ. ಗೆ ಮಿತಿಗೊಳಿಸಲಾಗಿದೆ. ಇ.ಡಬ್ಲೂ.ಎಸ್. ಕುಟುಂಬದ ವಾರ್ಷಿಕ ಆದಾಯವನ್ನು 87 ಸಾವಿರ ರೂ. ಗಳಿಂದ 3 ಲಕ್ಷ ರೂ. ಗಳಿಗೆ ಮತ್ತು ಎಲ್.ಐ.ಜಿ ಕುಟುಂಬದ ವಾರ್ಷಿಕ ಆದಾಯವನ್ನು 3 ಲಕ್ಷ ರೂ. ನಿಂದ 6 ಲಕ್ಷ ರೂ. ವರೆಗೆ ಮಿತಿ ನಿಗದಿ ಮಾಡಲಾಗಿದೆ.
ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ ನಗರಸಭೆ, ಗುಂಡ್ಲುಪೇಟೆ ಪುರಸಭೆ, ಯಳಂದೂರು, ಹನೂರು ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರೂಪುರೇಷೆ ತಯಾರಿಸಲಾಗಿದೆ.
ವಸತಿ ರಹಿತರನ್ನು ಪಟ್ಟಿ ಮಾಡಲು ಮನೆ ಮನೆ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಸಮೀಕ್ಷೆ ಸಮಯದಲ್ಲಿ ಫಲಾನುಭವಿಗಳು ಮಾಹಿತಿ ನೀಡಲು ವಿಫಲರಾದಲ್ಲಿ ವಸತಿ ಸೌಲಭ್ಯ ಪಡೆಯಲು ವಂಚಿತರಾಗಲಿದ್ದಾರೆ. ಹೀಗಾಗಿ ಎಲ್ಲ ಅರ್ಹ ಫಲಾನುಭವಿಗಳು ಯೋಜನೆ ಸೌಲಭ್ಯ ಪಡೆಯಲು ಸಮೀಕ್ಷೆದಾರರಿಗೆ ಸೂಕ್ತ ಮಾಹಿತಿ ನೀಡಬೇಕು. ವಸತಿ ರಹಿತರು ಸ್ಥಳಿಯ ಸಂಸ್ಥೆಗಳಿಂದ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಸಲ್ಲಿಸುವ ಮೂಲಕ ವಸತಿ ಸೌಲಭ್ಯ ಪ್ರಯೋಜನ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದ್ದಾರೆ.
No comments:
Post a Comment