ವೈದ್ಯಕೀಯ ಕಾಲೇಜು ಕಟ್ಟಡ ಪೂರಕ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ : ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ
ಚಾಮರಾಜನಗರ, ಜೂ. 17 - ಜಿಲ್ಲಾ ಕೇಂದ್ರದ ಯಡಬೆಟ್ಟದ ಬಳಿ ನಿರ್ಮಾಣವಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ಪೂರಕವಾಗಿ ಒದಗಿಸಬೇಕಿರುವ ಬಾಕಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಹಕಾರ, ಸಕ್ಕರೆ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ವೈದ್ಯಕೀಯ ಕಾಲೇಜು ಕಟ್ಟಡ, ಬದನಗುಪ್ಪೆ ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರಿ ವೈದ್ಯಕೀಯ ಕಾಲೇಜನ್ನು ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಆರಂಭಿಸಲು ಅನುಮತಿ ಸಿಕ್ಕಿದೆ. ಈ ಸಾಲಿನಲ್ಲಿ 150 ವಿದ್ಯಾರ್ಥಿಗಳಿಗೆ ಪ್ರವೇಶ ದೊರೆಯಲಿದ್ದು ಕಾಲೇಜು ತರಗತಿಗಳು ಆರಂಭಿಸಬೇಕಿದೆ. ಹೀಗಾಗಿ ಬಾಕಿ ಉಳಿದಿರುವ ಕೆಲಸವನ್ನು ಶೀಘ್ರ ಗತಿಯಲ್ಲಿ ಪೂರ್ಣ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕೆಂದು ಉಸ್ತುವಾರಿ ಸಚಿವರು ತಿಳಿಸಿದರು.
ಕಾಲೇಜು ಕ್ಯಾಂಪಸ್‍ನಲ್ಲಿ ನಿರ್ಮಾಣವಾಗಿರುವ ಕಟ್ಟಡ ವಿಭಾಗಗಳು, ವಿದ್ಯಾರ್ಥಿನಿಲಯ ಇತರೆ ಸೌಲಭ್ಯಗಳ ಕುರಿತು ಮಾಹಿತಿ ಪಡೆದ ಉಸ್ತುವಾರಿ ಸಚಿವರು ಯಾವುದೇ ಕೆಲಸ ಅಪೂರ್ಣವಾಗದಂತೆ ನೋಡಿಕೊಳ್ಳಬೇಕು. ಎಲ್ಲಾ ವ್ಯವಸ್ಥೆಗಳು ಪೂರಕವಾಗಿ ಒದಗಿಸಲು ನಿಗಾ ವಹಿಸಬೇಕು. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಎಲ್ಲ ಕಾಮಗಾರಿ ಶೈಕ್ಷಣಿಕ ಸಾಲು ಆರಂಭವಾಗುವ ಮೊದಲೇ ಪೂರ್ಣವಾಗಿರಬೇಕು ಎಂದರು.
ಕಾಲೇಜು, ವಿದ್ಯಾರ್ಥಿನಿಲಯ, ಬೋಧಕ, ಬೋಧಕೇತರ ವಸತಿಗೃಹಗಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಪೂರ್ಣ ಪ್ರಮಾಣದಲ್ಲಿ ಒದಗಿಸಬೇಕು. ಈ ಪ್ರಕ್ರಿಯೆಗೆ ಅಗತ್ಯವಿರುವ ಆಡಳಿತಾತ್ಮಕ ಅನುಮೋದನೆ ಪಡೆದುಕೊಂಡು ಹೆಚ್ಚಿನ ಪ್ರಮಾಣದಲ್ಲಿ ನೀರು ಸರಬರಾಜು ವ್ಯವಸ್ಥೆ ಮಾಡಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.
ಕಾಲೇಜು ಸಂಪರ್ಕಿಸುವ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಬೇಕು. ಕಾಲೇಜು ಆರಂಭವಾದ ನಂತರ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಣಿಜ್ಯ ಕಟ್ಟಡಗಳು ಬರಲಿವೆ. ಅಲ್ಲದೆ ಬಡಾವಣೆಗಳು ಸಹ ನಿರ್ಮಾಣವಾಗಲಿದೆ. ಹೀಗಾಗಿ ಭವಿಷ್ಯದ ಉದ್ದೇಶವನ್ನು ಮನಗಂಡು ಅದಕ್ಕೆ ಪೂರಕವಾಗಿ ರಸ್ತೆಯನ್ನು ಕಲ್ಪಿಸಬೇಕಿದೆ. ಲೋಕೋಪಯೋಗಿ ಇಲಾಖೆ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಸಚಿವರು ತಿಳಿಸಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪ್ರಗತಿ ಪರಿಶೀಲಿಸಿದ ಸಚಿವರು ಯೋಜನೆ ಪೂರ್ಣಗೊಂಡರೆ ಚಾಮರಾಜನಗರ ತಾಲೂಕಿನ 166 ಹಾಗೂ ಗುಂಡ್ಲುಪೇಟೆ ತಾಲೂಕಿನ 131 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಸೌಲಭ್ಯ ಲಭ್ಯವಾಗಲಿದೆ. ಯೋಜನೆಯನ್ನು ದಸರಾ ಹಬ್ಬಕ್ಕೂ ಮುನ್ನವೇ ಪೂರ್ಣಗೊಳಿಸಿ ಜನತೆಗೆ ಅನುಕೂಲ ಕಲ್ಪಿಸಬೇಕು. ಹೀಗಾಗಿ ಕಾಮಗಾರಿಯನ್ನು ಚುರುಕುಗೊಳಿಸುವಂತೆ ತಿಳಿಸಿದರು.
ಬದನಗುಪ್ಪೆ ಕೆಲ್ಲಂಬಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಕೈಗಾರಿಕಾ ಪ್ರದೇಶ ಕೆಲಸಗಳ ಕುರಿತು ಪರಿಶೀಲಿಸಿದ ಸಚಿವರು ವಿದ್ಯುತ್ ಸೌಲಭ್ಯ ಕಲ್ಪಿಸುವ ಪ್ರಕ್ರಿಯೆಯನ್ನು ವಿಳಂಬ ಮಾಡಬಾರದು. ಕುಡಿಯುವ ನೀರು ಪೂರೈಕೆಗೂ ಅಗತ್ಯವಿರುವ ಕಾಮಗಾರಿ ಕೈಗೊಳ್ಳಲು ಬೇಕಿರುವ ಕ್ರಮಗಳ ಬಗ್ಗೆ ತುರ್ತಾಗಿ ಕಾರ್ಯೋನ್ಮುಖರಾಗಬೇಕು. ಬಾಕಿ ಉಳಿದಿರುವ ರಸ್ತೆ ನಿರ್ಮಾಣಕ್ಕೆ ಉಂಟಾಗಿರುವ ತೊಡಕುಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಸಚಿವರು ಸೂಚಿಸಿದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ, ವೈದ್ಯಕೀಯ ಕಾಲೇಜು ಡೀನ್ ಡಾ. ಚಂದ್ರಶೇಖರ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಇನಾಯತ್ ಉಲ್ಲಾ ಷರೀಫ್, ತಹಸೀಲ್ದಾರ್ ಮಹದೇವು, ಕೆಐಡಿಬಿಯ ಹಿರಿಯ ಅಧಿಕಾರಿಗಳು, ಇತರರು ಸಭೆಯಲ್ಲಿ ಹಾಜರಿದ್ದರು.
ಸಭೆಯ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಜಿಲ್ಲಾ ಪಂಚಾಯತ್ ಸದಸ್ಯರಾದ ಸದಾಶಿವಮೂರ್ತಿ, ಕೆರೆಹಳ್ಳಿ ನವೀನ್, ನಗರಸಭೆಯ ಅಧ್ಯಕ್ಷರಾದ ರೇಣುಕಾ, ಚೂಡಾ ಅಧ್ಯಕ್ಷರಾದ ರಫಿ, ಇತರೆ ಅಧಿಕಾರಿಗಳೊಂದಿಗೆ ಯಡಪುರಕ್ಕೆ ತೆರಳಿ ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿದರು. ಅಗತ್ಯವಿರುವ ಸೂಚನೆಗಳನ್ನು ನೀಡಿ ಅದರಂತೆ ಕ್ರಮ ವಹಿಸಲು ನಿರ್ದೇಶನ ನೀಡಿದರು.
ಜೂ. 18ರಂದು ನಂಜುಂಡಪ್ಪ ವರದಿ ಶಿಫಾರಸು ಅನುಷ್ಠಾನ ಉನ್ನತ ಅಧಿಕಾರಿ ಸಮಿತಿ ಸಭೆ
ಚಾಮರಾಜನಗರ, ಜೂ. 17 :- ಡಾ. ಡಿ.ಎಂ. ನಂಜುಂಡಪ್ಪ ವರದಿ ಶಿಫಾರಸುಗಳ ಅನುಷ್ಠಾನ ಉನ್ನತ ಅಧಿಕಾರಿ ಸಮಿತಿಯ ಅಧ್ಯಕ್ಷರಾದ ವೆಂಕಟರಾವ್ ಘÉೂೀರ್ಪಡೆ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯು ಜೂನ್ 18ರಂದು ಬೆಳಿಗ್ಗೆ 10.30 ಗಂಟೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತೋಟಗಾರಿಕೆ ಬೆಳೆಗಳಿಗೆ ಪ್ರದಾನಮಂತ್ರಿ ಫಸಲು ವಿಮೆ, ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ
ಚಾಮರಾಜನಗರ, ಜೂ. 17 :- ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ಚಟುವಟಿಕೆಗಳಿಗೆ ನೆರವಾಗಲು ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲು ಬೀಮಾ (ವಿಮಾ) ಯೋಜನೆ ಹಾಗೂ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅನುಷ್ಠಾನವಾಗುತ್ತಿದೆ.
ಪ್ರಧಾನಮಂತ್ರಿ ಫಸಲು ಬಿಮಾ ಯೋಜನೆಯನ್ನು ತಾಲೂಕಿನಲ್ಲಿ ಬೆಳೆಯುವ ಮುಖ್ಯ ಬೆಳೆಗಳಿಗೆ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಚಾಮರಾಜನಗರ ತಾಲೂಕಿನ ಕಸಬಾ, ಸಂತೆಮರಹಳ್ಳಿ, ಹರವೆ ಹೋಬಳಿಯಲ್ಲಿ ನೀರಾವರಿ ಆಶ್ರಿತ ಟೊಮೆಟೋ, ಅರಿಶಿನ, ಚಂದಕವಾಡಿ ಹೋಬಳಿಯಲ್ಲಿ ನೀರಾವರಿ ಆಶ್ರಿತ ಟೊಮೆಟೋ, ಬದನೆ ಅರಿಶಿನ, ಹರದನಹಳ್ಳಿ ಹೋಬಳಿಯಲ್ಲಿ ನೀರಾವರಿ ಆಶ್ರಿತ ಆಲೂಗೆಡ್ಡೆ, ಟೊಮೊಟೋ, ಅರಿಶಿನ ಬೆಳೆಗಳು ವಿಮೆಗೆ ಒಳಪಡಲಿವೆ.
ಗುಂಡ್ಲುಪೇಟೆ ತಾಲೂಕಿನ ಬೇಗೂರು, ಹಂಗಳ, ತೆರಕಣಾಂಬಿ ಹೋಬಳಿಯಲ್ಲಿ ನೀರಾವರಿ ಆಶ್ರಿತ ಈರುಳ್ಳಿ, ಟೊಮೆಟೋ ಹಾಗೂ ಅರಿಶಿನ, ಕಸಬಾ ಹೋಬಳಿಯಲ್ಲಿ ನೀರಾವರಿ ಆಶ್ರಿತ ಟೊಮೆಟೋ, ಈರುಳ್ಳಿ, ಬೀನ್ಸ್, ಬದನೆ, ಅರಿಶಿನ ವಿಮೆ ವ್ಯಾಪ್ತಿಗೆ ಸೇರಲಿವೆ.
ಕೊಳ್ಳೇಗಾಲ ತಾಲೂಕಿನ ರಾಮಾಪುರ, ಪಾಳ್ಯ, ಕಸಬಾ ಹೋಬಳಿಯಲ್ಲಿ ನೀರಾವರಿ ಆಶ್ರಿತ ಈರುಳ್ಳಿ ಹಾಗೂ ಅರಿಶಿನ, ಹನೂರು ಹೋಬಳಿಯಲ್ಲಿ ನೀರಾವರಿ ಆಶ್ರಿತ ಟೊಮೊಟೋ, ಈರುಳ್ಳಿ, ಅರಿಶಿನ, ಲೊಕ್ಕನಹಳ್ಳಿ ಹೋಬಳಿಯಲ್ಲಿ ನೀರಾವರಿ ಆಶ್ರಿತ ಟೊಮೊಟೋ, ಈರುಳ್ಳಿ, ಆಲೂಗೆಡ್ಡೆ, ಅರಿಶಿನ ಬೆಳೆಯು ವಿಮೆ ವ್ಯಾಪ್ತಿಗೆ ಒಳಪಡಲಿವೆ.
ಸೂಚಿಸಿರುವ ಈ ಎಲ್ಲಾ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲು ವಿಮಾ ಯೋಜನೆಯಡಿ ಪ್ರಯೋಜನ ಪಡೆಯಬಹುದಾಗಿದೆ. 2016ರ ಮುಂಗಾರು ಹಂಗಾಮಿನಲ್ಲಿ ಆಲಿಕಲ್ಲು ಮಳೆ, ಭೂಕುಸಿತ, ಬೆಳೆ ಮುಳುಗಡೆ ಹೀಗೆ ಪ್ರಕೃತಿ ವಿಕೋಪಗಳಿಂದ ಉಂಟಾಗುವ ನಷ್ಟವನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮೆ ಪರಿಹಾರ ನೀಡಲಾಗುತ್ತದೆ. ವಿಮೆ ಮಾಡಿಸಿರುವ ರೈತರು ಬೆಳೆ ಹಾನಿಯ ವಿವರಗಳನ್ನು ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ವಿಮಾ ಸಂಸ್ಥೆ ಕಚೇರಿಗೆ 48 ಗಂಟೆಯೊಳಗೆ ತಿಳಿಸಬೇಕು.
ಶೇ. 75ರಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಟ ಶೇ. 25ರಷ್ಟು ನಷ್ಟ ಪರಿಹಾರವನ್ನು ವಿಮಾ ಸಂಸ್ಥೆಯು ವಿಮೆ ಮಾಡಿಸಿದ ರೈತರಿಗೆ ಇತ್ಯರ್ಥಪಡಿಸಲಿದೆ. ಯೋಜನೆಯಡಿ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟಂಥಹ ಸಂದರ್ಭದಲ್ಲಿ 2 ವಾರದೊಳಗೆ (14 ದಿನಗಳು) ಚಂಡಮಾರುತ, ಅಕಾಲಿಕ ಮಳೆಯಿಂದ ಬೆಳೆ ನಾಶವಾದರೆ ವಿಮಾ ಸಂಸ್ಥೆಯು ನಷ್ಟ ನಿರ್ಧಾರ ಮಾಡಿ ಬೆಳೆ ಪರಿಹಾರವನ್ನು ನೀಡಲಿದೆ.
ಸೂಚಿಸಿರುವ ನಿಗದಿತ ಬೆಳೆಗಳಿಗೆ ಸಂಬಂಧಿಸಿದಂತೆ ಬೆಳೆ ವಿಮೆ ಯೋಜನೆಯಡಿ ಸೇರ್ಪಡೆಯಾಗಲು ಇಚ್ಚಿಸುವ ಸಾಲ ಪಡೆಯದ ರೈತರು ನಿಗದಿತ ಅರ್ಜಿಯೊಂದಿಗೆ ಪಹಣಿ, ಬ್ಯಾಂಕ್ ಪಾಸ್ ಪುಸ್ತಕ, ಆಧಾರ ಸಂಖ್ಯೆ ಮತ್ತು ಸ್ವಯಂ ಘೋಷಿತ ಬೆಳೆ ವಿವರಗಳನ್ನು ಹತ್ತಿರದ ಬ್ಯಾಂಕುಗಳಿಗೆ ಸಲ್ಲಿಸಬಹುದು. ಬೆಳೆ ಸಾಲ ಪಡೆದ ರೈತರನ್ನು ಕಡ್ಡಾಯವಾಗಿ ಯೋಜನೆಯಡಿ ಸೇರಿಸಲಾಗುತ್ತದೆ.
ಬೆಳೆ ಸಾಲ ಪಡೆದ ರೈತರು ಅಂದಾಜು ಬೆಳೆ ಬಿತ್ತನೆ ಆಧಾರದ ಮೇಲೆ ಬಿತ್ತನೆ ಪೂರ್ವದಲ್ಲಿ ಯೋಜನೆಗೆ ಸೇರ್ಪಡೆಯಾಗಬಹುದು. ಬೆಳೆ ವಿಮೆಗೆ ನೊಂದಾಯಿಸಿದ ನಂತರ ಬೇರೆ ಬೆಳೆ ಬಿತ್ತನೆ ಮಾಡಿದಲ್ಲಿ ಯೋಜನೆಯಲ್ಲಿ ಭಾಗವಹಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕಿಂತ 30 ದಿವಸಗಳು ಮುಂಚಿತವಾಗಿ ನೊಂದಾಯಿಸಿದ ಆರ್ಥಿಕ ಸಂಸ್ಥೆಗಳಲ್ಲಿ (ಬ್ಯಾಂಕು) ಬಿತ್ತನೆ ದೃಢೀಕರಣ ಪತ್ರ ನೀಡಿ ವಿಮೆ ಮಾಡಿಸಿದ ಬೆಳೆಯನ್ನು ಬದಲಾಯಿಸಿ ಕೊಳ್ಳಬಹುದಾಗಿದೆ. ಇಂತಹ ಸಂದರ್ಭದಲ್ಲಿ ಹೆಚ್ಚುವರಿ ವಿಮಾ ಕಂತಿನ ವ್ಯತ್ಯಾಸವನ್ನು ರೈತರು ಭರಿಸಬೇಕಿದೆ. ಅಲ್ಲದೆ ಹೆಚ್ಚುವರಿ ವಿಮಾ ಕಂತನ್ನು ರೈತರಿಗೆ ಮರು ಪಾವತಿಸಲಾಗುತ್ತದೆ.
ಪ್ರಧಾನಮಂತ್ರಿ ಫಸಲು ವಿಮಾ ಯೋಜನೆಯಡಿ ರೈತರು ವಿಮಾ ಮೊತ್ತ ಪಾವತಿಸಲು ಜುಲೈ 30 ಕಡೆಯ ದಿನವಾಗಿದೆ. ರೈತರು ವಿಮೆ ಮೊತ್ತದ ಶೇ. 5ರಷ್ಟನ್ನು ವಿಮಾ ಕಂತಾಗಿ ಪಾವತಿಸಬೇಕಿದೆ.
ತೋಟಗಾರಿಕೆ ಬೆಳೆಗಳಿಗೆ ಮತ್ತೊಂದು ವಿಮಾ ಯೋಜನೆಯಾದ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಸಹ ಲಭ್ಯವಿದೆ. 2016-17ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಾದ ಅಂಗಾಂಶ ಕೃಷಿ ಬಾಳೆ, ಕಂದು ಬಾಳೆ ಹಾಗೂ ತೆಂಗು ಬೆಳೆಗಳಿಗೆ ಯೋಜನೆಯಡಿ ವಿಮೆ ನೆರವು ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ತಾಪಮಾನ, ಗಾಳಿಯ ವೇಗ, ಮಳೆಯ ಪ್ರಮಾಣ, ಇನ್ನಿತರ ಮಾಹಿತಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಟೆಲಿ ಮೆಟ್ರಿಕ್ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗುವ ಅಂಶಗಳ ಆಧಾರದ ಮೇಲೆ ಬೆಳೆ ವಿಮೆ ನಷ್ಟವನ್ನು ತೀರ್ಮಾನಿಸಲಾಗುತ್ತದೆ.
ನಾಲ್ಕೂ ತಾಲೂಕುಗಳ 16 ಹೋಬಳಿ ವ್ಯಾಪ್ತಿಯ 130 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ವಿಮೆ ಯೋಜನೆಗೆ ತೆಂಗು, ಅಂಗಾಂಶ ಕೃಷಿ ಮತ್ತು ಕಂದು ಬಾಳೆ ಬರಲಿವೆ.
ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ವಿಮಾ ಕಂತು ಪಾವತಿಸಲು ಜೂನ್ 30 ಕಡೆಯ ದಿನವಾಗಿದೆ. ಬೆಳೆ ಸಾಲ ಪಡೆದ ರೈತರಿಗೆ ಜೂನ್ 30ರೊಳಗೆ ಸಾಲ ಮಂಜೂರಾಗಿದ್ದರೆ ಅಂತಹ ರೈತರನ್ನು ಕಡ್ಡಾಯವಾಗಿ ವಿಮೆ ಯೋಜನೆಗೆ ಒಳಪಡಿಸಲಾಗುತ್ತದೆ. ಬೆಳೆ ಸಾಲ ಪಡೆಯದ ರೈತರು ಬೆಳೆ ವಿಮೆ ಯೋಜನೆಗೆ ಒಳಪಡಲು ಐಚ್ಚಿಕವಾಗಿರುತ್ತದೆ.
ರೈತರು ಶೇ. 5ರಷ್ಟನ್ನು ವಿಮಾ ಕಂತಾಗಿ ಪಾವತಿಸಬೇಕಿದೆ. ಅಂಗಾಂಶ ಕೃಷಿ ಬಾಳೆಗೆ ಪ್ರತಿ ಹೆಕ್ಟೇರ್‍ಗೆ ವಿಮಾ ಕಂತಾಗಿ 10518 ರೂ. ನಿಗದಿಯಾಗಿದೆ. ರೈತರು 4375 ರೂ.ಗಳನ್ನು ಪಾವತಿಸಬೇಕಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿಮಾ ಕಂತಿನಲ್ಲಿ ತಲಾ 3071 ರೂ.ಗಳನ್ನು ರಿಯಾಯಿತಿಯಾಗಿ ನೀಡಲಿದೆ. ಕಂದು ಬಾಳೆಗೆ ಪ್ರತಿ ಹೆಕ್ಟೇರ್‍ಗೆ 9015 ರೂ. ವಿಮಾ ಕಂತು ನಿಗದಿಯಾಗಿದೆ. ರೈತರು 3750 ರೂ ಪಾವತಿಸಬೇಕಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿಮಾ ಕಂತಿನಲ್ಲಿ ತಲಾ 2633 ರೂ.ಗಳನ್ನು ರಿಯಾಯಿತಿಯಾಗಿ ನೀಡಲಿದೆ. ತೆಂಗು ಬಾಳೆಗೆ ಪ್ರತಿ ಹೆಕ್ಟೇರ್‍ಗೆ ವಿಮಾ ಕಂತಾಗಿ 4010 ರೂ. ನಿಗದಿಯಾಗಿದೆ. ರೈತರು 2500 ರೂ. ಪಾವತಿಸಬೇಕಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿಮಾ ಕಂತಿನಲ್ಲಿ ತಲಾ 755 ರೂ.ಗಳನ್ನು ರಿಯಾಯಿತಿಯಾಗಿ ನೀಡಲಿದೆ.
ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ವಿಮಾ ಸಂಸ್ಥೆಯಾಗಿ ಯೂನಿವರ್ಸಲ್ ಸೋಂಪೋ ಇನ್ಷೂರೆನ್ಸ್ ಕಂಪನಿ ಲಿಮಿಟೆಡ್ ನಿಯೋಜಿತವಾಗಿದೆ.
ತೋಟಗಾರಿಕೆ ಬೆಳೆಗಳಿಗೆ ನೆರವು ನೀಡುವ ಸಲುವಾಗಿ ಅನುಷ್ಠಾನವಾಗಿರುವ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲು ವಿಮಾ ಯೋಜನೆ ಹಾಗೂ ಮರುವಿನ್ಯಾಸ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ಸಂಬಂಧಿಸಿದ ಮಾಹಿತಿ ಪಡೆಯಲು ತೋಟಗಾರಿಕೆ, ಕೃಷಿ ಇಲಾಖೆ, ಕಂದಾಯ ಇಲಾಖೆ ಮತ್ತು ಆಯ್ಕೆಯಾಗಿರುವ ವಿಮಾ ಸಂಸ್ಥೆ ಮತ್ತು ಸ್ಥಳೀಯ ಬ್ಯಾಂಕಿನ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರಾದ ನಾಗರಾಜು ತಿಳಿಸಿದ್ದಾರೆ.
No comments:
Post a Comment