Wednesday, 27 April 2016

26-04-2016 ಚಾಮರಾಜನಗರ, ಏ. ಜಗಜ್ಯೋತಿ ಬಸವೇಶ್ವರರ ಜಯಂತಿ ಅದ್ದೂರಿ ಆಚರಣೆಗೆ ನಿರ್ಧಾರ


ಜಗಜ್ಯೋತಿ ಬಸವೇಶ್ವರರ ಜಯಂತಿ ಅದ್ದೂರಿ ಆಚರಣೆಗೆ ನಿರ್ಧಾರ
      ಚಾಮರಾಜನಗರ, ಏ. 27- ಜಿಲ್ಲಾಡಳಿತ ಹಾಗೂ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಜಗಜ್ಯೋತಿ ಬಸವೇಶ್ವರ ಅವರ ಜನ್ಮ ದಿನಾಚರಣೆಯನ್ನು ಮೇ 9ರಂದು ನಗರದಲ್ಲಿ ಅದ್ದೂರಿಯಾಗಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.
     ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಬಸವೇಶ್ವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.
     ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ ಮಾತನಾಡಿ ಕಳೆದ ಬಾರಿಯೂ  ಬಸವ ಜಯಂತಿ ಆಚರಣೆ ಕಾರ್ಯಕ್ರಮವನ್ನು ಎಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು. ಈ ಬಾರಿಯೂ ಬಸವೇಶ್ವರರ ಜನ್ಮದಿನ ಆಚರಣೆ ಕಾರ್ಯಕ್ರಮಕ್ಕೆ  ಎಲ್ಲ ಸಮುದಾಯಗಳು, ಸಂಘಸಂಸ್ಥೆಗಳು ಪೂರಕವಾಗಿ ಕೈಜೋಡಿಸಬೇಕೆಂದರು.
     ಅಂದು ಬೆಳಿಗ್ಗೆ ನಗರದ ಪ್ರವಾಸಿ ಮಂದಿರದಿಂದ ಬಸವೇಶ್ವರರ ಅವರ ಭಾವಚಿತ್ರವನ್ನು ವಿವಿಧ ಜಾನಪದ  ಕಲಾ ತಂಡಗಳೊಂದಿಗೆ ಮೆರವಣಿಗೆ ಮಾಡಲಾಗುವುದು ವೇದಿಕೆ ಕಾರ್ಯಕ್ರಮವನ್ನು ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ನಡೆಸಲಾಗುವುದು. ನಿಗದಿತ ವೇಳೆಗೆ ಮೆರವಣಿಗೆ ಆರಂಭ ಮಾಡಲು ಜನತೆ ಸಕಾಲಕ್ಕೆ ಆಗಮಿಸಬೇಕು. ಇದರಿಂದ ಸಭಾ ಕಾರ್ಯಕ್ರಮವು ಸರಿಯಾದ ವೇಳೆಗೆ ಪೂರ್ಣಗೊಳ್ಳಲಿದೆ ಎಂದರು.
ಇದೇವೇಳೆ ಸಭೆಯಲ್ಲಿ ಹಾಜರಿದ್ದ ಮುಖಂಡರು ಮೆರವಣಿಗೆಗೆ ಮೆರಗು ತರಲು ಹೆಚ್ಚು ಕಲಾತಂಡಗಳನ್ನು ನಿಯೋಜಿಸಬೇಕು, ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ನಡೆಯುತ್ತಿರುವ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಮೆರವಣಿಗೆಯಂದು ಧೂಳು ಆವರಿಸದಂತೆ ನೀರು ಸಿಂಪಡಿಸಬೇಕು, ತಳಿರು ತೋರಣಗಳಿಂದ ಮೆರವಣಿಗೆ ಹಾದುಹೋಗುವ ಬೀದಿಗಳನ್ನು ಸಿಂಗರಿಸಬೇಕು ಎಂದು ಸಲಹೆ ನೀಡಿದರು.
ಮುಖಂಡರ ಸಲಹೆಗೆ ಸ್ಪಂದಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಭಾರತಿ ಅವರು 5 ಜಾನಪದ ಕಲಾತಂಡಗಳನ್ನು ಮೆರವಣಿಗೆಗೆ ನಿಯೋಜಿಸಲು ವ್ಯವಸ್ಥೆ ಮಾಡಲಾಗುವುದು.  ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಸ್ವಚ್ಚತೆ ಹಾಗೂ ಸಿಂಗಾರ ಮಾಡಲು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.
     ಕಾರ್ಯಕ್ರಮದಲ್ಲಿ ಬಸವಣ್ಣನವರ ವಿಚಾರಧಾರೆಗಳ ಕುರಿತು ಮಾತನಾಡಲು ವಿಶೇಷ ಅಧ್ಯಯನ ಮಾಡಿರುವ ವಿಚಾರವಂತರನ್ನು ಆಹ್ವಾನಿಸಲಾಗುತ್ತದೆ. ಈ ಕುರಿತು ಮುಖಂಡರು ನೀಡುವ ಸಲಹೆಗಳನ್ನು ಪರಿಗಣಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಅದಷ್ಟು ಶೀಘ್ರವೇ ಮುಖ್ಯ ಭಾಷಣಕಾರರ ಹೆಸರು ಸೂಚಿಸುವಂತೆಯು ಹೆಚ್ಚುವರಿ ಜಿಲ್ಲಾಧಿಕಾರಿ ಭಾರತಿ ತಿಳಿಸಿದರು.
     ಕಾರ್ಯಕ್ರಮ ಸಂಬಂಧ ಆಹ್ವಾನ ಪತ್ರಿಕೆ, ಕರಪತ್ರಗಳನ್ನು ಆದಷ್ಟು ಶೀಘ್ರ ಮುದ್ರಿಸಿ ವಿತರಿಸಬೇಕು. ಸಭಾ ಕಾರ್ಯಕ್ರಮದಂದು ವಚನಗಾಯನ ಏರ್ಪಡಿಸಬೇಕೆಂಬ ಸಲಹೆ ಕೇಳಿಬಂತು. ಇದಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ  ಸಕಾರಾತ್ಮಕವಾಗಿ ಉತ್ತರಿಸಿ ಎಲ್ಲ ವ್ಯವಸ್ಥೆಗಳನ್ನು ಸಮರ್ಪಕವಾಗಿ ನಿರ್ವಹಿಸಲಾಗುವುದು ಎಂದರು.
     ಮುಖಂಡರಾದ ಶಾ. ಮುರಳಿ, ಕೊಡಸೋಗೆ ಶಿವಬಸಪ್ಪ, ಕೆ.ಎಸ್. ನಾಗರಾಜಪ್ಪ, ಸಿ.ಎಂ. ಕೃಷ್ಣಮೂರ್ತಿ, ಬಿ.ಕೆ. ರವಿಕುಮಾರ್, ಮರಿಸ್ವಾಮಿ, ಚಾ.ಗು. ನಾಗರಾಜು, ಚಾ.ರಂ. ಶ್ರೀನಿವಾಸಗೌಡ, ತೋಟೇಶ್, ನಟೇಶ್, ಹೊಸೂರು ಜಗದೀಶ್, ಜಿ. ಬಂಗಾರು, ಆಲೂರು ನಾಗೇಂದ್ರ, ಇತರೆ ಮುಖಂಡರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ರೀಲಿಂಗ್ ಐಟಿ ಪಾರ್ಕ್ ಸ್ಥಾಪನೆ ಪ್ರಕ್ರಿಯೆ ಆರಂಭಿಸಲು ಪಶುಸಂಗೋಪನ ಸಚಿವರ ಸೂಚನೆ
ಚಾಮರಾಜನಗರ, ಏ. - ಜಿಲ್ಲೆಯಲ್ಲಿ ರೀಲಿಂಗ್ ಐಟಿ ಪಾರ್ಕ್ ಸ್ಥಾಪನೆಗೆ ಸ್ಥಳ ಗುರುತಿಸಿ ಅಗತ್ಯ ಪ್ರಕ್ರಿಯೆ ಆರಂಭಿಸಬೇಕೆಂದು ಪಶು ಸಂಗೋಪನೆ ಮತ್ತು ರೇಷ್ಮೆ ರಾಜ್ಯಸಚಿವರಾದ ಎ.ಮಂಜು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಇಂದು ನಡೆದ ರೇಷ್ಮೆ, ಕೆಎಂಎಫ್ ಹಾಗೂ ಪಶುಸಂಗೋಪನಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯಸರ್ಕಾರ ಜಿಲ್ಲೆಯಲ್ಲಿ ರೇಷ್ಮೆ ಬೆಳವಣಿಗೆಗೆ ಸಂಬಂಧಿಸಿದಂತೆ ರೀಲಿಂಗ್ ಐಟಿ ಪಾರ್ಕ್ ಸ್ಥಾಪಿಸಲು ಈಗಾಗಲೇ ಘೋಷಣೆ ಮಾಡಿದೆ. ಒಟ್ಟು 16 ಎಕರೆ ಜಾಗದಲ್ಲಿ 10 ಕೋಟಿ ರೂ. ವೆಚ್ಚದ ರೀಲಿಂಗ್ ಪಾರ್ಕ್ ಆರಂಭಕ್ಕೆ  ಭೂಮಿ ಗುರುತಿಸಿ ಅಗತ್ಯವಿರುವ ಪ್ರಸ್ತಾವನೆಯನ್ನು ಕಳುಹಿಸಬೇಕು ಎಂದು ನಿರ್ದೇಶನ ನೀಡಿದರು.
ಈ ಸಂಬಂಧ ಕೇಂದ್ರ ರೇಷ್ಮೆ ಮಂಡಳಿ ಜತೆ ಚರ್ಚೆ ನಡೆಯುತ್ತಿದ್ದು ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಪ್ರಸ್ತಾವನೆ ಇನ್ನಿತರ ಪ್ರಕ್ರಿಯೆಯನ್ನು ಆರಂಭಿಸಲು ಮುಂದಾಗುವುದಾಗಿ ರೇಷ್ಮೆ ಇಲಾಖೆ ಉಪನಿರ್ದೇಶಕರಾದ ಪೃಥ್ವಿರಾಜ್ ಸಭೆಯಲ್ಲಿ ಮಾಹಿತಿ ನೀಡಿದರು.
ರೇಷ್ಮೆ ಮತ್ತು ಪಶುಸಂಗೋಪನೆ ಚಟುವಟಿಕೆಗಳು ರೈತರ ನೆರವಿಗೆ ಬರಲಿದೆ. ಹೀಗಾಗಿ ಇಲಾಖೆಯ ಕಾರ್ಯಕ್ರಮಗಳಿಗೆ ಜನರನ್ನು ಉತ್ತೇಜಿಸಬೇಕು. ಸರ್ಕಾರ ಅನುಷ್ಠಾನ ಮಾಡಿರುವ ಯೋಜನೆಗಳನ್ನು ಎಲ್ಲರಿಗೂ ಸಮರ್ಪಕವಾಗಿ ತಲುಪಿಸಿದರೆ ಆರ್ಥಿಕವಾಗಿ ಮುಂದೆಬರಲು ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದರು.
ಪಶುಭಾಗ್ಯ, ವಿಶೇಷ ಘಟಕ ಯೋಜನೆಗಳ ಪ್ರಯೋಜನ ಸರಿಯಾಗಿ ಮುಟ್ಟುವಂತೆ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಕುರಿ, ಮೇಕೆ ವಿತರಣೆ ಮಾಡುವ ಮೊದಲು ಆರೋಗ್ಯಕರ, ಬಲಿಷ್ಠ ಹಾಗೂ ನಿಗಧಿತ ತೂಕವಿದೆಯೇ ಎಂದು ಪಶುವೈದ್ಯರು ಪರೀಕ್ಷಿಸಬೇಕು. ಇಲ್ಲವಾದಲ್ಲಿ ಫಲಾನುಭವಿಗಳಿಗೆ ಯಾವ ಲಾಭವೂ ಆಗುವುದಿಲ್ಲ ಎಂದರು. ಇದೇ ಸಂದರ್ಭದಲ್ಲಿ ಶಾಸಕರಾದ ಸಿ. ಪುಟ್ಟರಂಗಶೆಟ್ಟಿಯವರೂ ಸಹ ನಿಗಧಿತ ತೂಕವಿಲ್ಲದ ಕುರಿ, ಮೇಕೆಗಳನ್ನು ವಿತರಿಸಲಾಗುತ್ತಿದ್ದು ಇದು ಪ್ರಯೋಜನಕ್ಕೆ ಬರುತ್ತಿಲ್ಲ.  ಕಾರ್ಯಕ್ರಮದಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಬೇಕೆಂಬ ಸಲಹೆ ನೀಡಿದರು.
ಜಿಲ್ಲೆಯ ಮೇವು ಲಭ್ಯತೆ ಕುರಿತು ವಿವರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ ಜಾನುವಾರುಗಳ ಮೇವಿಗೆ ಅಭಾವ ಉಂಟಾಗದಂತೆ ನೋಡಿಕೊಳ್ಳಲು ನೆರೆ ಜಿಲ್ಲೆಯ ಟಿ. ನರಸೀಪುರ, ಮಳವಳ್ಳಿ ತಾಲೂಕಿನಿಂದ ಮೇವು ಖರೀದಿಸಲು ಇತ್ತೀಚೆಗೆ ನಡೆದ ಬರ ಅಧ್ಯಯನ ಸಂಬಂಧ ನಡೆದ ಸಚಿವ ಸಂಪುಟ ಉಪಸಮಿತಿ ಸದಸ್ಯರ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಗ್ರಾಮ ನೋಡಲ್ ಅಧಿಕಾರಿಗಳು ಮೇವು ದಾಸ್ತಾನು ಕುರಿತು ನಿಖರ ಅಂಕಿಅಂಶಗಳನ್ನು ದಾಖಲು ಸಂಗ್ರಹಿಸಿದ್ದಾರೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪಶು ಸಂಗೋಪಿಸಿದ ಸಚಿವರು ಆದಷ್ಟು ಶೀಘ್ರವೇ ಖರೀದಿ ಪ್ರಕ್ರಿಯೆ ನಡೆಸಿ ಬರಗಾಲ ಪೀಡಿತ ಪ್ರದೇಶದ ಜಾನುವಾರುಗಳಿಗೆ ಮೇವು ಪೂರೈಸುವ ವ್ಯವಸ್ಥೆ ಮಾಡಬೇಕು. ಎಲ್ಲಿಯೂ ಮೇವಿಗೆ ಅಭಾವ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಸರ್ಕಾರಿ ರೇಷ್ಮೆ ಕಾರ್ಖಾನೆಗಳ ಪುನಶ್ಚೇತನಗೊಳಿಸುವ ಸಂಬಂಧ ಚರ್ಚಿಸಲು ಒಂದು ವಾರದಲ್ಲಿ ಸಭೆ ಕರೆಯಲಾಗುತ್ತದೆ. ಜಿಲ್ಲೆಯಲ್ಲಿರುವ ರೇಷ್ಮೆ ಹಾಗೂ ಪಶುಸಂಗೋಪನೆ ಇಲಾಖೆಗೆ ಸೇರಿದ ಜಾಗ, ಕಟ್ಟಡ ಸೇರಿದಂತೆ ಎಲ್ಲ ಆಸ್ತಿಗಳನ್ನು ಸಂರಕ್ಷಣೆ ಮಾಡಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಹಾಲು ಒಕ್ಕೂಟ, ಡೇರಿ ಘಟಕ ಕಾಮಗಾರಿ  ಪ್ರಗತಿ ಕುರಿತು  ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಶಾಸಕರಾದ ಎಸ್. ಜಯಣ್ಣ, ಉಪವಿಭಾಗಾಧಿಕಾರಿ ಕವಿತಾ ರಾಜಾರಾಂ, ಪಶುಸಂಗೋಪನ ಇಲಾಖೆ ಉಪನಿರ್ದೇಶಕರಾದ ಡಾ. ಬಾಲಚಂದರ್, ಚಾಮರಾಜನಗರ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ನಿರ್ದೇಶಕರಾದ ಆನಂದರಾಜು, ತಾಲೂಕು ಪಶುಸಂಗೋಪನ, ರೇಷ್ಮೆ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಏ. 28ರಂದು ಮಹಿಳೆ ಮಕ್ಕಳ ಮೇಲಿನ ದೌರ್ಜನÀ್ಯ ನಿಯಂತ್ರಣ ಸಮಿತಿ ಅಧ್ಯಕ್ಷರಾದ ವಿ.ಎಸ್. ಉಗ್ರಪ್ಪ ಅಧ್ಯಕ್ಷತೆಯಲ್ಲಿ ಸಭೆ : ಪ್ರಕರಣಗಳ ಪರಿಶೀಲನೆ
ಚಾಮರಾಜನಗರ, ಏ. - ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಹಾಗೂ ವರದಿ ನೀಡುವ ವಿಧಾನ ಪರಿಷತ್ ಸದಸ್ಯರಾದ ವಿ.ಎಸ್. ಉಗ್ರಪ್ಪ ಅಧ್ಯಕ್ಷತೆಯ ಸಮಿತಿಯು ಏಪ್ರಿಲ್ 28ರಂದು ಬೆಳಿಗ್ಗೆ 11.30 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ನಡೆದಿರುವ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಕುರಿತು ಚರ್ಚಿಸಲಿದೆ.
ಕಳೆದ 10 ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆದ ಶೋಷಣೆ, ದೌರ್ಜನ್ಯ, ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮಗಳು ಹಾಗೂ ಒದಗಿಸಿದ ಪರಿಹಾರಗಳ ಕುರಿತು ವಿವರವಾಗಿ ಚರ್ಚೆ ನಡೆಯಲಿದೆ.
ಜಿಲ್ಲಾಧಿಕಾರಿ, ಸಿಆರ್‍ಇ ಸೆಲ್ ಪೋಲೀಸ್ ಅಧೀಕ್ಷಕರು, ಸರ್ಕಾರಿ ಅಭಿಯೋಜಕರು, ಸ್ತ್ರೀಶಕ್ತಿ ಮತ್ತು ಮಹಿಳಾ ಸಂಘಸಂಸ್ಥೆಗಳ ಪ್ರತಿನಿಧಿಗಳು, ಜಿಲ್ಲಾಮಟ್ಟದ ಇಲಾಖೆ ಅಧಿಕಾರಿಗಳೊಂದಿಗೆ ಅಧ್ಯಕ್ಷರಾದ ಉಗ್ರಪ್ಪ ಅವರು ಸಭೆ ನಡೆಸುವರೆಂದು ಪ್ರಕಟಣೆ ತಿಳಿಸಿದೆ.


ಏ. 29ರಂದು ಮಹದೇಶ್ವರಬೆಟ್ಟದಲ್ಲಿ ಗೋಲಕ ಹಣ ಎಣಿಕೆ
ಚಾಮರಾಜನಗರ, ಏ. - ಕೊಳ್ಳೇಗಾಲ ತಾಲೂಕಿನ ಮಹದೇಶ್ವರ ಬೆಟ್ಟದ ಮಲೆಮಹದೇಶ್ವರ ದೇವಸ್ಥಾನದಲ್ಲಿ ಇರುವ ಗೋಲಕಗಳ ಹಣ ಎಣಿಕೆ ಕಾರ್ಯವು ಏಪ್ರಿಲ್ 29ರಂದು ಬೆಳಿಗ್ಗೆ ನಡೆಯಲಿದೆ.
ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಮಹಡಿಯ ವಿಶ್ರಾಂತಿ ಗೃಹದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಿಬ್ಬಂದಿ ಸಹಯೋಗದೊಂದಿಗೆ ಎಣಿಕೆ ಕಾರ್ಯ ನಡೆಸಲಾಗುತ್ತದೆಂದು ಮಲೆಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಕಾರ್ಯದಶಿತಿಳಿಸಿದ್ದಾರೆ.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು