ಜಿ.ಪಂ. ಅಧ್ಯಕ್ಷರಾಗಿ ಎಂ. ರಾಮಚಂದ್ರ, ಉಪಾಧ್ಯಕ್ಷರಾಗಿ ಎಸ್. ಬಸವರಾಜು ಆಯ್ಕೆ
ಚಾಮರಾಜನಗರ, :- ಚಾಮರಾಜನಗರ ಜಿಲ್ಲಾ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಎಂ. ರಾಮಚಂದ್ರ, ಉಪಾಧ್ಯಕ್ಷರಾಗಿ ಎಸ್. ಬಸವರಾಜು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಎ.ಎಂ. ಕುಂಜಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಚುನಾವಣೆ ಸಂಬಂಧ ಸಭೆಯಲ್ಲಿ ಕುಂಜಪ್ಪ ಅವರು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆಯನ್ನು ಘೋಷಿಸಿದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನದ ಅವಧಿಯು 5 ವರ್ಷಗಳ ಅವಧಿಗೆ ಇರುತ್ತದೆ. 2016ರ ಏಪ್ರಿಲ್ 30ರಿಂದ 2021ರ ಏಪ್ರಿಲ್ 29ರವರೆಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಕಾರ್ಯ ಅವಧಿ ಇರಲಿದೆ ಎಂದು ಕುಂಜಪ್ಪ ಅವರು ತಿಳಿಸಿದರು.
ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಎಂ. ರಾಮಚಂದ್ರ, ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಎಸ್. ಬಸವರಾಜು ಅವರು ಮಾತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಇವರಿಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಕುಂಜಪ್ಪ ಅವರು ಪ್ರಕಟಿಸಿದರು.
ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ರಾಮಚಂದ್ರ ಅವರು ಜಿಲ್ಲೆಯಲ್ಲಿ ಬರಗಾಲ ಪರಿಸ್ಥಿತಿ ಇದೆ. ಕುಡಿಯುವ ನೀರಿನ ಸಮಸ್ಯೆಯು ಕಾಡುತ್ತಿದೆ. ಈ ಎಲ್ಲಾ ಸಮಸ್ಯೆ ಪರಿಹಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಲೋಕಸಭಾ ಸದಸ್ಯರು ಹಾಗೂ ಶಾಸಕರೊಂದಿಗೆ ಒಡಗೂಡಿ ಮುಂದಾಗುವುದು ನನ್ನ ಪ್ರಸ್ತುತ ಆದ್ಯತೆಯಾಗಿದೆ ಎಂದರು.
ಉಪಾಧ್ಯಕ್ಷರಾಗಿ ಆಯ್ಕೆಯಾದ ಎಸ್. ಬಸವರಾಜು ಮಾತನಾಡಿ ಜಿಲ್ಲೆಯಲ್ಲಿ ಆರೋಗ್ಯ, ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಒತ್ತು ನೀಡಿ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ. ಜಿಲ್ಲೆಯಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ ನೀಗಿಸುವುದೂ ಸಹ ಮುಖ್ಯ ಕೆಲಸವಾಗಿದೆ. ಎಲ್ಲರ ಸಹಕಾರದೊಂದಿಗೆ ಜಿಲ್ಲೆಯ ಬೆಳವಣಿಗೆಗೆ ದುಡಿಯುತ್ತೇನೆ ಎಂದರು.
ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಪ್ರಾದೇಶಿಕ ಆಯುಕ್ತರಾದ ಎ.ಎಂ. ಕುಂಜಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಎಚ್. ನರಸಿಂಹಮೂರ್ತಿ ಹೂಗುಚ್ಚ ನೀಡಿ ಅಭಿನಂದಿಸಿದರು. ಸಭೆಯಲ್ಲಿ ಸಹಾಯಕ ಪ್ರಾದೇಶಿಕ ಆಯುಕ್ತರಾದ ಕೆ.ಎಂ. ಗಾಯತ್ರಿ, ಜಿಲ್ಲಾ ಪಂಚಾಯತ್ ಸದಸ್ಯರು ಹಾಜರಿದ್ದರು.
ತಾಪಮಾನ ಏರಿಕೆ : ಆರೋಗ್ಯ ಮುನ್ನೆಚ್ಚರಿಕೆ ವಹಿಸಲು ಸಲಹೆ
ಚಾಮರಾಜನಗರ, :- ಜಿಲ್ಲೆಯಲ್ಲಿ ಉಷ್ಣಾಂಶ ಏರಿಕೆಯು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ನಾಗರಿಕರು ಆರೋಗ್ಯಕರವಾದ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಲಹೆ ಮಾಡಿದೆ.
ಪ್ರಸ್ತುತ ತಾಪಮಾನ ಹೆಚ್ಚಳವಾಗಿರುವ ಸಂದರ್ಭದಲ್ಲಿ ತೆಳು ಬಣ್ಣದ ಸಡಿಲವಾದ ಹತ್ತಿಯ ಬಟ್ಟೆ ಧರಿಸಬೇಕು. ಕೈಗೆಟಕುವಂತೆ ಕುಡಿಯುವ ನೀರನ್ನು ಇಟ್ಟುಕೊಳ್ಳಬೇಕು. ಆಗಾಗ್ಗೆ ಧಾರಾಳವಾಗಿ ಉಪ್ಪು, ಸಕ್ಕರೆ ಮಿಶ್ರಿತ ನೀರು, ಹಣ್ಣಿನ ರಸ ಪಾನಕ ಸೇವಿಸಬೇಕು. ಕಾಫಿ ಟೀ ಸೇವನೆ ಕಡಿಮೆ ಮಾಡಬೇಕು. ಕಾರ್ಬೋನೇಟೆಡ್ ಪಾನೀಯಗಳನ್ನು ತ್ಯಜಿಸಬೇಕು. ನೀರು, ಮಜ್ಜಿಗೆ, ಎಳನೀರು ಕುಡಿಯಬೇಕು. ಬೆಚ್ಚಗಿನ ಮಸಾಲೆರಹಿತ ಶುದ್ದ ಆಹಾರ ಸೇವಿಸಬೇಕು. ಗಾಳಿಯಾಡುವಂತಹ ಪಾದರಕ್ಷೆ ಧರಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚು ಉಷ್ಣಾಂಶ ಇರುವ ಬೇಸಿಗೆ ಸಂದರ್ಭದಲ್ಲಿ ವ್ಯಕ್ತಿ ತೊದಲು ಮಾತು ಅಥವಾ ಅರ್ಥರಹಿತವಾಗಿ ಬಡಬಡಿಸಿದಲ್ಲಿ ಕೂಡಲೇ ನೆರಳಿನ ಪ್ರದೇಶಕ್ಕೆ ಸ್ಥಳಾಂತರಿಸಬೇಕು. ಕೆಳಗೆ ಮಲಗಿಸಿ ಕಾಲುಗಳನ್ನು ಮೇಲಕ್ಕೆ ಎತ್ತಬೇಕು. ಹಣೆ, ಕತ್ತು, ಪಾದ, ತೊಡೆಗಳನ್ನು ಒದ್ದೆ ಬಟ್ಟೆಯಿಂದ ಒರೆಸಬೇಕು. ತಂಪಾದ ಅಥವಾ ಐಸ್ ನೀರನ್ನು ಒರೆಸಲು ಬಳಸಬಾರದು. ಉಪ್ಪು, ಸಕ್ಕರೆ ಬೆರೆತ ನೀರನ್ನು ಕುಡಿಸಬೇಕು. ಹತ್ತಿರದ ವೈದ್ಯರನ್ನು ಕರೆಸಬೇಕು ಅಥವಾ 108ಕ್ಕೆ ಕರೆ ಮಾಡಿ ಚಿಕಿತ್ಸೆಗೆ ಮುಂದಾಗಬೇಕು.
ಆಘಾತಕ್ಕೆ ಒಳಗಾದ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಬೇಕು. ಮೊದಲಿಗೆ ಬಟ್ಟೆ, ಪಾದರಕ್ಷೆ ಸಡಿಲಿಸಿ ತೆಗೆಯಬೇಕು. ತಣ್ಣಗಿನ ನೀರನ್ನು ವ್ಯಕ್ತಿಯ ಮೇಲೆ ಸಿಂಪಡಿಸಬೇಕು. ತಂಪಾದ ನೆರಳಿನ ಜಾಗಕ್ಕೆ ಸ್ಥಳಾಂತರಿಸಿ ಗಾಳಿ ಬೀಸಬೇಕು. ದೇಹವನ್ನು ಅತಿಯಾಗಿ ತಕ್ಷಣವೇ ತಂಪು ಮಾಡಬಾರದು. ಯಾವುದೇ ಔಷಧ ನೀಡಬಾರದು. ಪ್ರಜ್ಞೆ ಬಂದ ನಂತರ ನಿಧಾನವಾಗಿ ಶುದ್ಧವಾದ ನೀರನ್ನು ಸ್ಪಲ್ಪ ಸ್ವಲ್ಪವಾಗಿ ನೀಡಬೇಕು.
ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾ ಕಣ್ಗಾವಲು ಘಟಕ (ದೂ.ಸಂ. 08226-226561) ಸಂಪರ್ಕಿಸುವಂತೆ ಜಿಲ್ಲಾ ಕಣ್ಗಾವಲು ಘಟಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಇಟಿ, ಮೀನುಗಾರಿಕೆ ಇಲಾಖೆ ಫೀಲ್ಡ್ ಅಸಿಸ್ಟೆಂಟ್ ಸ್ಪರ್ಧಾತ್ಮಕ ಪರೀಕ್ಷೆ : ನಿಷೇಧಾಜ್ಞೆ
ಚಾಮರಾಜನಗರ,- ಜಿಲ್ಲೆಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯು ಮೇ 4 ಹಾಗೂ 5ರಂದು ಮತ್ತು ಮೀನುಗಾರಿಕೆ ಇಲಾಖೆಯ ಫೀಲ್ಡ್ ಅಸಿಸ್ಟೆಂಟ್ ಹುದ್ದೆಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯ ಮೆ 6ರಂದು ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಪರೀಕ್ಷಾ ದಿನಗಳಂದು ನಿಷೇದಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಬಿ. ರಾಮು ಆದೇಶ ಹೊರಡಿಸಿದ್ದಾರೆ.
ನಗರದ ಜೆಎಸ್‍ಎಸ್ ಮಹಿಳಾ ಕಾಲೇಜು, ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜು, ಕೊಳ್ಳೇಗಾಲ ಪಟ್ಟಣದ ಎಸ್‍ವಿಕೆ ಮಹಿಳಾ ಪದವಿಪೂರ್ವ ಕಾಲೇಜು, ನಿಸರ್ಗ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯು ನಡೆಯಲಿದೆ.
ಮೀನುಗಾರಿಕೆ ಇಲಾಖೆಯ ಫೀಲ್ಡ್ ಅಸಿಸ್ಟೆಂಟ್ ಹುದ್ದೆಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯು ನಗರದ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನಲ್ಲಿ ನಡೆಯಲಿದೆ. ಪರೀಕ್ಷಾ ಕಾರ್ಯವು ಶಾಂತಿ ಮತ್ತು ಸುವ್ಯವಸ್ಥೆಯಿಂದ ನಡೆಯಲೆಂಬ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ 200 ಮೀ. ವ್ಯಾಪ್ತಿಯಲ್ಲಿ ಪರೀಕ್ಷಾ ದಿನದಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ವಿಧಿಸಲಾಗಿದೆ. ಅಲ್ಲದೆ ಪರೀಕ್ಷಾ ಕೇಂದ್ರಗಳ 200 ಮೀ. ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿಗಳನ್ನು ಸಹ ಪರೀಕ್ಷಾ ದಿನಗಳಂದು ಬೆಳಿಗ್ಗೆ 7 ರಿಂದ ಸಂಜೆ 4.30 ಗಂಟೆಯವರೆಗೆ ಮುಚ್ಚಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ನಿಷೇಧಾಜ್ಞೆ ಆದೇಶವು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಹಾಗೂ ಪರೀಕ್ಷಾ ಕೆಲಸಕ್ಕೆ ನಿಯೋಜಿತರಾದ ಸಿಬ್ಬಂದಿಗೆ ಅನ್ವಯವಾಗುವುದಿಲ್ಲವೆಂದು ಆದೇಶದಲ್ಲಿ ತಿಳಿಸಲಾಗಿದೆ.
ಶಾಲಾ ಶಿಕ್ಷಕರ ಆಯ್ಕೆ ಪಟ್ಟಿ ಪ್ರಕಟ
ಚಾಮರಾಜನಗರ,- ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಆಯ್ಕೆಯಾಗಿರುವ ಹೆಚ್ಚುವರಿ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಪ್ರಕಟಿಸಲಾಗಿದೆ
ಆಧಾರ್ ಸಂಖ್ಯೆ ಸಲ್ಲಿಸಲು ಪಡಿತರ ಚೀಟಿದಾರರಿಗೆ ಸೂಚನೆ
ಚಾಮರಾಜನಗರ, - ಜಿಲ್ಲೆಯ ಪಡಿತರ ಚೀಟಿದಾರರು ಪಡಿತರ ಚೀಟಿಯಲ್ಲಿರುವ ಪ್ರತಿಯೊಬ್ಬರ ಆಧಾರ್ ಸಂಖ್ಯೆಯನ್ನು ಮೇ 15ರೊಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಕೇಂದ್ರ ಸರ್ಕಾರವು ಆಧಾರ್ ಕಾಯ್ದೆಯನ್ನು ಜಾರಿಗೊಳಿಸಿದೆ. ಕಾಯಿದೆಯನ್ವಯ ಸಾರ್ವಜನಿಕ ವಿತರಣಾ ಪದ್ಧತಿಯಡಿ ನೀಡಲಾಗುವ ಸಹಾಯಧನಯುಕ್ತ ಆಹಾರಧಾನ್ಯ ಹಂಚಿಕೆ ಮತ್ತು ಸೇವೆ ಪಡೆದುಕೊಳ್ಳಲು ಆಧಾರ್ ಸಂಖ್ಯೆ ಅಗತ್ಯವಾಗಿದೆ. ಹೀಗಾಗಿ ಪಡಿತರ ಚೀಟಿಯಲ್ಲಿನ ಪ್ರತಿಯೊಬ್ಬ ಸದಸ್ಯರು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಸಲ್ಲಿಸಬೇಕಿದೆ.
ಈ ಹಿಂದೆ ತಿಳಿಸಿದಂತೆ ಮೊದಲು ಪಡಿತರ ಚೀಟಿಗೆ ಕುಟುಂಬದ ಮುಖ್ಯಸ್ಥರ ಅಥವಾ ಒಬ್ಬ ಸದಸ್ಯರ ಮೊಬೈಲ್ ಸಂಖ್ಯೆ ನೊಂದಾಯಿಸಿಕೊಂಡ ನಂತರ ಕುಟುಂಬದ ಎಲ್ಲಾ ಸದಸ್ಯರ ಸಂಖ್ಯೆಗಳನ್ನು ಒಂದೊಂದಾಗಿ ಟೈಪ್ ಮಾಡಿ ಮೊಬೈಲ್ ಸಂಖ್ಯೆ 9731979899ಗೆ ಎಸ್‍ಎಂಎಸ್ ಮುಖಾಂತರ ಕಳುಹಿಸಬೇಕು. ಮೊಬೈಲ್ ಸಂಖ್ಯೆ ನೊಂದಣಿಗಾಗಿ ಖಅಒಔಃ<sಠಿಚಿಛಿe>ಖಅ ಟಿumbeಡಿ ಹಾಕಬೇಕು. ಮೊಬೈಲ್ ಸಂಖ್ಯೆಯನ್ನು ನಿಮ್ಮ ಪಡಿತರ ಚೀಟಿ ಸಂಖ್ಯೆಗೆ ನೊಂದಾಯಿಸಲಾಗಿದೆ ಎಂಬ ಉತ್ತರ ಸ್ಕ್ರೀನ್ ಮೇಲೆ ಬಂದ ನಂತರ ಎಲ್ಲ ಸದಸ್ಯರ 12 ಅಂಕಿಯ ಆಧಾರ್ ಸಂಖ್ಯೆಗಳನ್ನು ಒಂದೊಂದಾಗಿ ಟೈಪ್ ಮಾಡಿ ಕಳುಹಿಸಬೇಕು.
ಆಧಾರ್ ಸಂಖ್ಯೆ ಕಳುಹಿಸಲು ಖಅUIಆ<sಠಿಚಿಛಿe>UIಆ ಟಿumbeಡಿ ಹಾಕಬೇಕು. ಎಸ್‍ಎಂಎಸ್ ಮುಖಾಂತರವಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಮಪಂಚಾಯಿತಿ ಕಚೇರಿ, ಹೋಬಳಿ ಮಟ್ಟದಲ್ಲಿ ಅಟಲ್ ಜನಸ್ನೇಹಿ ಕೇಂದ್ರ, ತಾಲೂಕು ಕೇಂದ್ರದ ನಗರ ಪ್ರದೇಶದಲ್ಲಿ ಖಾಸಗಿ ಸೇವಾ ಕೇಂದ್ರಗಳು ಮತ್ತು ಜಿಲ್ಲಾ ಕೇಂದ್ರದ ನಗರ ಪ್ರದೇಶಗಳಲ್ಲಿಯೂ ಆಧಾರ್ ಸಂಖ್ಯೆ ಮಾಹಿತಿಯನ್ನು ಆನ್ ಲೈನ್ ತತ್ರಾಂಶದಲ್ಲಿ ನೀಡಬಹುದು.
ಆಧಾರ್ ಪಡೆಯಲು ಈಗಾಗಲೇ ಅರ್ಜಿ ಸಲ್ಲಿಸಿದವರು ಆಧಾರ್ ಸಂಖ್ಯೆ ದೊರೆತಿಲ್ಲವಾದಲ್ಲಿ 21 ಅಂಕಿಯ ಇಐಡಿ (ಆಧಾರ್ ಎನ್‍ರೋಲ್‍ಮೆಂಟ್ ನಂಬರ್) ಸಂಖ್ಯೆಯನ್ನು ನೀಡಬಹುದು. ನಿಮ್ಮ ಇಐಡಿ ಸಂಖ್ಯೆ ಆಧಾರ್ ಅಂಖ್ಯೆ ಸಿಕ್ಕಕೂಡಲೇ ಇಲಾಖೆ ವತಿಯಿಂದಲೇ ಅದನ್ನು ಪಡಿತರ ಚೀಟಿಗೆ ಜೋಡಿಸಲಾಗುವುದು. ಆಧಾರ್ ಪಡೆದುಕೊಳ್ಳಲು ಆಧಾರ್ ನೋಂದಣಿ ಕೇಂದ್ರವಾದ ಅಟಲ್ ಜೀ ಜನಸ್ನೇಹಿ ಕೇಂದ್ರ ಹಾಗೂ ಪಟ್ಟಣದಲ್ಲಿ ಇರುವ ಇನ್ನಿತರ ನೋಂದಣಿ ಕೇಂದ್ರಗಳನ್ನು ಸಂಪರ್ಕಿಸಬೇಕು. ಆಧಾರ್ ಸಹಾಯವಾಣಿ 1947 ಸಂಖ್ಯೆ ಸಂಪರ್ಕಿಸಿಯೂ ಮಾಹಿತಿ ಪಡೆಯಬಹುದು.
ದೂರುಗಳೇನಾದರೂ ಇದ್ದಲ್ಲಿ ಆಹಾರ ಇಲಾಖೆಯ ಸಹಾಯವಾಣಿ ಸಂಖ್ಯೆ 1967 ಸಂಪರ್ಕಿಸಬಹುದು. ಅಲ್ಲದೆ ತಾಲೂಕಿನ ಎಲ್ಲಾ ಆಹಾರ ಶಾಖೆಯ ಶಿಸ್ತೇದಾರರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಬಿ.ರಾಮು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ. 7, 8ರಂದು ವಸತಿಶಾಲೆ ಪ್ರವೇಶಕ್ಕೆ ಕೌನ್ಸೆಲಿಂಗ್
ಚಾಮರಾಜನಗರ,:- ಜಿಲ್ಲೆಯ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಏಕಲವ್ಯ ವಸತಿ ಶಾಲೆಯ 6ನೇ ತರಗತಿಗೆ ಪ್ರವೇಶ ನೀಡುವ ಸಂಬಂಧ ಕೌನ್ಸೆಲಿಂಗ್ ಅನ್ನು ಮೇ 7 ಹಾಗೂ 8ರಂದು ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ ಎಚ್ ಪಟೇಲ್ ಸಭಾಂಗಣದಲ್ಲಿ ನಡೆಸಲಾಗುವುದು.
ಪ್ರವೇಶ ಪರೀಕ್ಷೆ ಫಲಿತಾಂಶವನ್ನು ಈಗಾಗಲೇ ಪ್ರಕಟಿಸಲಾಗಿದೆ. ಮೇ 7ರಂದು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ವಿಶೇಷ ವರ್ಗದ ವಿದ್ಯಾರ್ಥಿಗಳಿಗೆ ಹಾಗೂ ಮೇ 8ರಂದು ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ನಡೆಸಲಾಗುತ್ತದೆ. ವಿದ್ಯಾರ್ಥಿಗಳು ಅಗತ್ಯ ಮೂಲ ದಾಖಲಾತಿಗಳೊಂದಿಗೆ ಕಡ್ಡಾಯವಾಗಿ ಕೌನ್ಸೆಲಿಂಗ್‍ಗೆ ಹಾಜರಾಗಬೇಕೆಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರÉ.
**************