ಐತಿಹಾಸಿಕ ನರಸಮಂಗಲ ದೇವಾಲಯ ನಿರ್ವಹಣೆಗೆ ತುರ್ತು ಗಮನಸೆಳೆಯಲು ಜಿಲ್ಲಾಧಿಕಾರಿಯವರಿಂದ ಪತ್ರ
ಚಾಮರಾಜನಗರ, ಸೆಪ್ಟೆಂಬರ್ 14 (ಕರ್ನಾಟಕ ವಾರ್ತೆ):- ಚಾಮರಾಜನಗರ ತಾಲ್ಲೂಕಿನ ನರಸಮಂಗಲ ಗ್ರಾಮದಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವ್ಯಾಪ್ತಿಯ ಐತಿಹಾಸಿಕ ರಾಮೇಶ್ವರ ದೇವಾಲಯ ನಿರ್ವಹಣೆ ಹಾಗೂ ಅಲ್ಲಿ ಕೈಗೊಳ್ಳಬೇಕಿರುವ ಕಾರ್ಯಗಳ ಕುರಿತು ತುರ್ತು ಗಮನಹರಿಸುವ ಅಗತ್ಯತೆ ಕುರಿತು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞರಿಗೆ ಪತ್ರ ಬರೆದು ಗಮನಸೆಳೆದಿದ್ದಾರೆ.
ಕಳೆದ ಸೆಪ್ಟೆಂಬರ್ 3 ರಂದು ತಾವು ನರಸಮಂಗಲದ ರಾಮೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ದೇವಾಲಯಕ್ಕೆ ಆಗಬೇಕಿರುವ ತುರ್ತು ಅಗತ್ಯ ಕೆಲಸಗಳನ್ನು ಗಮನಿಸಿದ್ದೇನೆ. ಈ ಪ್ರಕಾರ ಐತಿಹಾಸಿಕ ಸ್ಮಾರಕದ ಬೇಲಿ ಅಳವಡಿಕೆ ಕಾರ್ಯ ಅಪೂರ್ಣವಾಗಿದೆ. ಮುಖ್ಯ ಪ್ರವೇಶ ಗೇಟನ್ನು ಇನ್ನೂ ಅಳವಡಿಸದ ಕಾರಣ ಹಲವು ಅನಾನುಕೂಲಗಳು ಕಂಡು ಬಂದಿದೆ. ಆವರಣವು ಕಟ್ಟಡ ನಿರ್ಮಾಣದ ವಸ್ತುಗಳಿಂದ ಆವರಿಸಲ್ಪಟ್ಟಿದೆ. ಸ್ಮಾರಕದ ಸುತ್ತುಗೋಡೆಯು ಸಂಪೂರ್ಣವಾಗಿ ಪೊದೆ ಹಾಗೂ ಅನುಪಯುಕ್ತ ಗಿಡ ಗಂಟಿÉಗಳಿಂದ ಸುತ್ತುವರೆಯಲ್ಪಟ್ಟಿದೆ. ಇದು ಪಾರಂಪರಿಕ ಸ್ಮಾರಕ ರಕ್ಷಣೆಯ ಉದ್ದೇಶಗಳಿಗೆ ವಿರುದ್ದವಾಗಿದ್ದು ನಿರ್ವಹಣೆಯ ಕೊರತೆಯನ್ನು ತೋರಿಸುತ್ತಿದೆ ಎಂದು ಜಿಲ್ಲಾಧಿಕಾರಿಯವರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ಸೋಲಾರ್ ಆಧಾರಿತ ಯುಪಿಎಸ್ ಬಹು ವರ್ಷಗಳಿಂದ ಕೆಟ್ಟಿರುವುದರಿಂದ ರಾಮೇಶ್ವರ ದೇವಾಲಯವು ಕತ್ತಲಿನಿಂದ ಆವೃತವಾಗಿದೆ. ಹೊರ ಭಾಗದಲ್ಲೂ ಬೆಳಕಿನ ವ್ಯವಸ್ಥೆಯ ಕೊರತೆ ಇದೆ. ಐತಿಹಾಸಿಕ ಸ್ಮಾರಕದ ಮಹತ್ವದ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡುವ ಯಾವುದೇ ಫಲಕಗಳು ಅಳವಡಿಕೆಯಾಗಿಲ್ಲ. ಅಲ್ಲದೇ ಐತಿಹಾಸಿಕ ತಾಣಕ್ಕೆ ಸಂಪರ್ಕ ಕಲ್ಪಿಸುವ ಹರದನಹಳ್ಳಿ ಮತ್ತು ತೆರಕಣಾಂಬಿ ಅಥವಾ ಮುಖ್ಯ ರಸ್ತೆಯ ಯಾವುದೇ ಮಾರ್ಗದಲ್ಲಿಯೂ ಕೂಡ ಮಾಹಿತಿ ಫಲಕಗಳು ಹಾಕಲಾಗಿಲ್ಲ ಎಂಬ ವಿಷಯದ ಬಗ್ಗೆಯೂ ಪತ್ರದಲ್ಲಿ ಗಮನ ಸೆಳೆಯಲಾಗಿದೆ.
ತಾವು ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ಜನರೊಂದಿಗೆ ಮಾತನಾಡಿದ ವೇಳೆ ರಾಮೇಶ್ವರ ದೇವಾಲಯವನ್ನು ಇತಿಹಾಸದ ದಾಖಲೆಗಳ ಪ್ರಕಾರ ರಾಮಲಿಂಗೇಶ್ವರ ದೇವಾಲಯವೆಂದು ಬದಲಾವಣೆ ಮಾಡಬೇಕಿದೆ ಎಂದು ಸ್ಥಳೀಯ ಜನತೆ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಐತಿಹಾಸಿಕ ದಾಖಲೆಗಳ ಪ್ರಕಾರ ಸೂಕ್ತ ತಿದ್ದುಪಡಿ ಸಂಬಂಧ ಪರಿಶೀಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಯವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಜಿಲ್ಲಾಡಳಿತ ಐತಿಹಾಸಿಕ ಸ್ಮಾರಕ ಸಂರಕ್ಷಣೆ ಹಾಗೂ ಪರಂಪರೆಯ ಉತ್ತೇಜನಕ್ಕಾಗಿ ಭಾರತೀಯ ಪುರಾತತ್ವ ಸರ್ವೆಕ್ಷಣಾ ಇಲಾಖೆಯ ರೂಢಿ ಹಾಗೂ ನಿಯಮಗಳಿಗೆ ಅನುಸಾರವಾಗಿ ಎಲ್ಲಾ ಬಗೆಯ ಸಹಕಾರ ನೀಡಲು ಉತ್ಸುಕವಾಗಿದೆ. ಸ್ಮಾರಕದ ಕೊರತೆಗಳನ್ನು ನಿವಾರಿಸಿ ಉತ್ತಮ ನಿರ್ವಹಣೆಗೆ ಎಲ್ಲಾ ಅಗತ್ಯಗಳನ್ನು ಪೂರೈಸಲು ತಕ್ಷಣವೇ ಗಮನಹರಿಸಬೇಕಾದ ತುರ್ತು ಇದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ಪತ್ರದಲ್ಲಿ ಗಮನಸೆಳೆದಿದ್ದಾರೆ.
ಕನ್ನಡ ವಿವಿ ಹಂಪಿ, ಬಾದಾಮಿ ಕೇಂದ್ರ : ಚಿತ್ರಕಲೆ, ಶಿಲ್ಪಕಲೆ ಪದವಿ ಕೋರ್ಸ್ಗೆ ಅರ್ಜಿ ಆಹ್ವಾನ
ಚಾಮರಾಜನಗರ, ಸೆಪ್ಟೆಂಬರ್ 14 (ಕರ್ನಾಟಕ ವಾರ್ತೆ):- ಕನ್ನಡ ವಿಶ್ವವಿದ್ಯಾಲಯ ಹಂಪಿ ಬಾದಾಮಿ ಕೇಂದ್ರದಲ್ಲಿ ನಡೆಸಲಾಗುತ್ತಿರುವ ಚಿತ್ರಕಲೆ ಹಾಗೂ ಶಿಲ್ಪಕಲೆಯ 4 ವರ್ಷದ ಪದವಿ ಕೋರ್ಸ್ಗಳ ವ್ಯಾಸಂಗಕ್ಕೆ 2020-21ನೇ ಸಾಲಿಗೆ ಪ್ರವೇಶಾತಿ ಪ್ರಾರಂಭವಾಗಿದ್ದು, ಪಿ.ಯು.ಸಿ, ಐ.ಟಿ.ಐ, ಜೆ.ಓ.ಡಿ.ಸಿ ಹಾಗೂ ತತ್ಸಮಾನ (10+2) ಪರೀಕ್ಷೆಯಲ್ಲಿ ಉತ್ತೀರ್ಣ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.
ಕನ್ನಡ ವಿಶ್ವವಿದ್ಯಾಲಯ ಹಂಪಿಯ ವಿಸ್ತರಣಾ ಕೇಂದ್ರವಾದ ಬಾದಾಮಿ ಬನಶಂಕರಿಯಲ್ಲಿ ನಡೆಸಲಾಗುತ್ತಿರುವ ಕೇಂದ್ರ ಚಿತ್ರಕಲೆ ಹಾಗೂ ಶಿಲ್ಪಕಲೆಯ 4 ವರ್ಷದ ಪದವಿ ತರಗತಿಗಳು ಇನ್ನಿತರ ಸಾಮಾನ್ಯ ಪದವಿಗಳಾದ ಬಿ.ಎ, ಬಿ.ಕಾಂ. ಬಿ.ಎಸ್.ಸಿ ಮತ್ತು ಇನ್ನಿತರ ತತ್ಸಮಾನ ಪದವಿಗಳಂತೆ ಪದವಿ ಹಂತದ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳು, ಬ್ಯಾಂಕಿಂಗ್, ಕೆ.ಎ.ಎಸ್, ಐ.ಎ.ಸ್, ರೈಲ್ವೆ ಇಲಾಖೆ, ಎಫ್.ಡಿ.ಎ ಮುಂತಾದವುಗಳನ್ನು ಬರೆಯಲು ಅವಕಾಶವಿದೆ.
ಉನ್ನತ ಶಿಕ್ಷಣ ವ್ಯಾಸಂಗ ಮಾಡಬಯಸುವವರಿಗೆ ಎಂ.ವಿ.ಎ, ಎಂ.ಎಫ್.ಎ, ಎಂ.ಫಿಲ್, ಪಿ.ಎಚ್.ಡಿ ಮತ್ತು ಬೇರೆ ಕ್ಷೇತ್ರಗಳಾದ ಪತ್ರಿಕೋದ್ಯಮ, ಬಿ.ಪಿ.ಎಡ್ ಮುಂತಾದವುಗಳನ್ನು ಕಲಿಯಲು ಅವಕಾಶಗಳಿವೆ.
ಬಾದಾಮಿ ಕೇಂದ್ರದಲ್ಲಿ ನಿರಂತರವಾಗಿ ಪ್ರಖ್ಯಾತ ಕಲಾವಿದರು ಮತ್ತು ಸೃಜನಶೀಲಾ ಯುವ ಕಲಾವಿದರರಿಂದ ಕಲಾಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತದೆ. ರಾಷ್ಟ್ರ, ರಾಜ್ಯ ಮಟ್ಟದ ಕಲಾ ಶಿಬಿರ, ಕಾರ್ಯಗಾರ, ಕಲಾ ಪ್ರದರ್ಶನಗಳು ನಿರಂತರವಾಗಿ ನಡೆಯುತ್ತದೆ. ಕೇಂದ್ರವು ನಾಡೋಜ ಡಾ. ಆರ್.ಎಂ ಹಡಪದ ಅವರ ಹೆಸರಿನಲ್ಲಿ ಚಿತ್ರಕಲೆ ಹಾಗೂ ಶಿಲ್ಪಕಲೆಯ ಸುಸಜ್ಜಿತ ಆರ್ಟ್ ಗ್ಯಾಲರಿ ( ಕಲಾ ಸಂಗ್ರಹಾಲಯ) ಹೊಂದಿದೆ. ಸಂಪ್ರದಾಯ ಶಿಲ್ಪ ಮತ್ತು ಚಿತ್ರಗಳನ್ನು ಸಂಗ್ರಹಿಸಿದ್ದು, ಪ್ರದರ್ಶನ ಹಾಗೂ ಅಧ್ಯಯನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ 94492, 56814, 80056, 9886664967 ಅನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ತೋಟಗಾರಿಕೆ ಇಲಾಖೆಯ ಯಾಂತ್ರಿಕರಣ ಸಹಾಯ ಧನಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಸೆಪ್ಟೆಂಬರ್ 14 (ಕರ್ನಾಟಕ ವಾರ್ತೆ):- ತೋಟಗಾರಿಕೆ ಇಲಾಖೆಯು 2020-21 ನೇ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ರೈತ ಫಲಾನುಭವಿಗಳಿಗೆ ಮಿನಿ ಟ್ರ್ಯಾಕ್ಟರ್ ಹಾಗೂ ಪವರ್ ಟಿಲ್ಲರ್ಗಳಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಿದೆ.
20 ಪಿ.ಟಿ.ಓ ಅಥವಾ 20 ಪಿ.ಟಿ.ಓ ಗಿಂತ ಕಡಿಮೆ ಸಾಮಥ್ರ್ಯವುಳ್ಳ ಟ್ರ್ಯಾಕ್ಟರ್ ಖರೀದಿಸಲು ಸಾಮಾನ್ಯ ವರ್ಗದ ರೈತರಿಗೆ ಶೇ.25 ರಂತೆ 75 ಸಾವಿರ ರೂ ಸಹಾಯಧನ ಹಾಗೂ ಪರಿಶಿಷ್ಟ ಜಾತಿ, ಪಂಗಡದ ರೈತರಿಗೆ ಶೇ.35 ರಂತೆ 1 ಲಕ್ಷ ರೂಗಳ ಸಹಾಯಧನ ನೀಡಲಾಗುತ್ತದೆ.
ಪವರ್ ಟಿಲ್ಲರ್ ಖರೀದಿಸಲು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪರಿಶಿಷ್ಟ ಜಾತಿ, ಪಂಗಡ ರೈತರಿಗೆ ಶೇ. 50 ರಂತೆ ಹಾಗೂ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಯಡಿ ಶೇ. 90 ರಂತೆ ಸಹಾಯಧನ ನೀಡಲಾಗುವುದು.
ಆಸಕ್ತ ರೈತರು ಅಗತ್ಯ ದಾಖಲಾತಿಗಳನ್ನು ನಿಗದಿತ ಅರ್ಜಿ ನಮೂನೆಯೊಂದಿಗೆ ಭಾವಚಿತ್ರ, ಪ್ರಸಕ್ತ ಸಾಲಿನ ಪಹಣಿ, ಕಂದಾಯ ಇಲಾಖೆಯಿಂದ ಗಣಕೀಕೃತ ಬೆಳೆ ದೃಢೀಕರಣ, ತೋಟಗಾರಿಕೆ ಬೆಳೆ ಇರುವ ತಾಕಿನ ಪೋಟೊ, ಮತದಾರರ ಗುರುತಿನ ಚೀಟಿ, ಮತ್ತು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್, ಕೃಷಿ ಇಲಾಖೆಯಿಂದ ಎನ್.ಓ.ಸಿ ಪತ್ರ, ಮುಚ್ಚಳಿಕೆ ಪತ್ರ ಇತ್ಯಾದಿಗಳನ್ನು ಆಯಾ ತಾಲ್ಲೂಕಿನ ತೋಟಗಾರಿಕೆ ಕಚೇರಿಗೆ ಸೆಪ್ಟೆಂಬರ್ 22 ರೊಳಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆಯ ಕಚೇರಿ ಸಂಪರ್ಕಿಸುವಂತೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ರೈತರಿಗೆ ಸಮರ್ಪಕವಾಗಿ ರಸಗೊಬ್ಬರ, ಸಹಾಯಧನ ತಲುಪಿಸಿ : ಅಧ್ಯಕ್ಷರಾದ ಎಂ. ಅಶ್ವಿನಿ ಸೂಚನೆ
ಚಾಮರಾಜನಗರ, ಸೆಪ್ಟೆಂಬರ್ 15 (ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿ ರೈತರಿಗೆ ಸರಿಯಾದ ಸಮಯಕ್ಕೆ ಸಮರ್ಪಕವಾಗಿ ರಸಗೊಬ್ಬರ ಸಿಗುವಂತಾಗಬೇಕು. ಹೂ, ಹಣ್ಣು, ತರಕಾರಿ ಬೆಳೆದ ಫಲಾನುಭವಿಗಳಿಗೆ ಪರಿಹಾರಧನ ಶೀಘ್ರವಾಗಿ ತಲುಪಿಸುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ಅಶ್ವಿನಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಳೆಯ ಪ್ರಮಾಣ ಉತ್ತಮ ರೀತಿಯಲ್ಲಿ ಆಗಿದ್ದು, ರೈತರಿಗೆ ರಸಗೊಬ್ಬರವನ್ನು ತಲುಪಿಸಬೇಕು. ಹನೂರು ತಾಲೂಕಿನಲ್ಲಿ ಯೂರಿಯಾ ಕೊರತೆ ಕಂಡು ಬಂದಿದ್ದು, ಆ ಸಮಸ್ಯೆಯನ್ನು ಬೇಗ ನಿವಾರಿಸಬೇಕು. ಹಲವು ರೈತರಿಗೆ ಕೃಷಿ ಹೊಂಡದ ಸಹಾಯ ಧನವು ಬಿಡುಗಡೆಯಾಗಿಲ್ಲ. ಹೀಗಾಗಿ ಕೃಷಿ ಇಲಾಖೆಯ ಅಧಿಕಾರಿಗಳು ಫಲಾನುಭವಿಗಳಿಗೆ ಶೀಘ್ರ ಸೌಲಭ್ಯ ತಲುಪಿಸುವಂತೆ ಮಾಡಬೇಕು ಎಂದು ತಿಳಿದರು.
ಸಭೆಯ ಆರಂಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಸವರಾಜು, ಚೆನ್ನಪ್ಪ, ಕೆ.ಎಸ್.ಮಹೇಶ್, ಸಿ.ಎನ್. ಬಾಲರಾಜ್, ಮರಗದ ಮಣಿ ಸೇರಿದಂತೆ ಹಲವು ಸದಸ್ಯರು ರಸಗೊಬ್ಬರ ಅಗತ್ಯಕ್ಕೆ ತಕ್ಕಂತೆ ರೈತರಿಗೆ ದೊರೆಯಲು ಏರ್ಪಾಡು ಮಾಡಬೇಕು. ರಸಗೊಬ್ಬರ ದಾಸ್ತಾನು ಕುರಿತು ತಾಲ್ಲೂಕುವಾರು ಮಾಹಿತಿ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ಸ್ಪಂಧಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಭೋಯರ್ ಹರ್ಷಲ್ ನಾರಾಯಾಣ್ ರಾವ್ ಅವರು ತಾಲ್ಲೂಕು ವಾರು ಮಾಹಿತಿ ಪ್ರತಿಯನ್ನು ಒದಗಿಸುವಂತೆ ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದರು.
ಆರೋಗ್ಯ ಇಲಾಖೆ ವಿಷಯ ಕಲುರಿತ ಚರ್ಚೆ ವೇಳೆ ಎಂ. ಅಶ್ವಿನಿ ಅವರು ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಯ ಕೊರತೆ ಕಾಡದಂತೆ ಕ್ರಮವಹಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಟ್ಟಡ ನಿರ್ವಹಣೆ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಆರೋಗ್ಯ ರಕ್ಷಾ ಸೇವಾ ಯೋಜನೆಯನ್ನು ಸಮರ್ಪಕವಾಗಿ ಜನರಿಗೆ ತಲುಪಿಸಬೇಕು ಎಂದು ನಿರ್ದೇಶನ ನೀಡಿದರು.
ಆರೋಗ್ಯ ಇಲಾಖೆ ವಿಷಯ ಪ್ರಸ್ತಾಪ ವೇಳೆ ಕೋವಿಡ್-19 ನಿಯಂತ್ರಣಾ ಕ್ರಮಗಳಿಗೆ ಸಂಬಂಧಿಸಿದಂತೆ ಸಮರ್ಪಕ ಕ್ರಮಗಳನ್ನು ಅನುಷ್ಠಾನ ಮಾಡಬೇಕು. ಸ್ಯಾನಿಟೇಜಷನ್, ಸೂಕ್ತ ಸ್ಪಂದನೆ ಯಂತಹ ಕ್ರಮಗಳಿಗೆ ಮುಂದಾಗಬೇಕು, ಕೊರೊನಾ ವಾರಿಯರ್ಸ್ಗಳಾಗಿ ಕೆಲಸ ನಿರ್ವಹಿಸುವವರಿಗೆ ಸಹಾಯ ಧನವನ್ನು ಹೆಚ್ಚಿಸಬೇಕು ಎಂದು ಸದಸ್ಯರು ತಿಳಿಸಿದರು.
ಸದಸ್ಯರಾದ ಸಿ.ಎನ್. ಬಾಲರಾಜ್, ಕೆ.ಎಸ್. ಮಹೇಶ್, ಕೆರೆಹಳ್ಳಿ ನವೀನ್, ಬಿ.ಕೆ. ಬೊಮ್ಮಯ್ಯ, ಗುಂಡ್ಲುಪೇಟೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಜಿ.ಮಧುಶಂಕರ್ ಸೇರಿದಂತೆ ಹಲವು ಸದಸ್ಯರು ವೈದ್ಯಕೀಯ ಸೇವೆ ರಾತ್ರಿ ವೇಳೆಯು ಜನರಿಗೆ ಸಿಗಬೇಕಿದೆ ಎಂದರು. ಸದಸ್ಯರಾದ ಕಮಲ್ ನಾಗರಾಜ್ ಅವರು ಮಾತನಾಡಿ ಮುಳ್ಳೂರು ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರವನ್ನು ಶೀಘ್ರ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ದಾನಿಗಳು ಸ್ಥಳÀ ನೀಡಲು ಮುಂದೆ ಬಂದಿದ್ದು ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದರು. ಸಭೆಯಲ್ಲಿ ಇತರೆ ವಿಷಯಗಳ ಕುರಿತು ಚರ್ಚಿಸಲಾಯಿತು.
ಅನಧಿಕೃತ ಬಡಾವಣೆಗಳಲ್ಲಿ ನಿವೇಶನ ಖರೀದಿಸದಂತೆ ಚೂಡಾಧ್ಯಕ್ಷರಾದ ಪಿ.ಬಿ. ಶಾಂತಮೂರ್ತಿ ಮನವಿ
ಚಾಮರಾಜನಗರ, ಸೆಪ್ಟೆಂಬರ್ 15 (ಕರ್ನಾಟಕ ವಾರ್ತೆ):- ಚಾಮರಾಜನಗರ - ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಜಮೀನುಗಳಲ್ಲಿ ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ಬಡಾವಣೆಗಳಲ್ಲಿ ಸಾರ್ವಜನಿಕರು ನಿವೇಶನ ಖರೀದಿಸಬಾರದೆಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಿ.ಬಿ. ಶಾಂತಮೂರ್ತಿ ಅವರು ಮನವಿ ಮಾಡಿದ್ದಾರೆ.
ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಜಮೀನುಗಳಿಗೆ ಜಿಲ್ಲಾಧಿಕಾರಿ ಅವರಿಂದ ಭೂ ಪರಿವರ್ತನೆ, ನಗರಾಭಿವೃದ್ಧಿ ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಪಡೆಯದೆ, ಒಳಚರಂಡಿ, ವಿದ್ಯುತ್, ನೀರು ಸರಬರಾಜು, ರಸ್ತೆ, ಉದ್ಯಾನವನ ಹಾಗೂ ನಾಗರಿಕ ಸೌಕರ್ಯ ನಿವೇಶನ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸದಿರುವ ಅನಧಿಕೃತ ಬಡಾವಣೆಗಳಲ್ಲಿ ನಿವೇಶನಗಳನ್ನು ಮಾರಾಟ ಮಾಡುತ್ತಿರುವುದು ತಿಳಿದು ಬಂದಿದೆ.
ಜನಸಾಮಾನ್ಯರ ಮನಸ್ಥಿತಿಗನುಗುಣವಾಗಿ ಕಾನೂನಿಗೆ ವಿರುದ್ಧವಾಗಿ ಕೆಲವರು ಎಕರೆಗಟ್ಟಲೆ ಜಮೀನು ಖರೀದಿಸಿ ಯಾವುದೇ ಅನುಮತಿ ಇಲ್ಲದೇ ಭೂ ಪರಿವರ್ತನೆಯನ್ನು ಮಾಡದೆ ಗುಂಟೆ ರೂಪದಲ್ಲಿ ಮಾರಾಟ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಗುಂಟೆ ರೂಪದಲ್ಲಿ ಭದ್ರತೆಗೋಸ್ಕರ ರಿಜಿಸ್ಟರ್ ಮಾಡಿಸುತ್ತಿದ್ದು, ಇದರಿಂದ ನಿವೇಶನ ಕೊಂಡುಕೊಳ್ಳುವವರಿಗೆ ಮೂಲಭೂತ ಸೌಕರ್ಯಗಳು ದೊರೆಯುವುದಿಲ್ಲ. ಭೂ ಪರಿವರ್ತನೆ ಮಾಡದೆ ಗುಂಟೆ ರೂಪದಲ್ಲಿ ತೆಗೆದುಕೊಂಡು ಜಮೀನಿನಲ್ಲಿ ಕಟ್ಟಡ ನಿರ್ಮಿಸಿದರೆ ಅದು ಅನಧೀಕೃತವಾಗುತ್ತದೆ. ಇಂತಹ ಜಾಗಗಳಿಗೆ ಖಾತೆಯು ಕೂಡ ಅಗುವುದಿಲ್ಲ. ಬಡಾವಣೆ ನಿರ್ಮಾಣ ಮಾಡುವವರು ಗುಂಟೆ ರೂಪದಲ್ಲಿ ರಿಜಿಸ್ಟರ್ ಮೂಲಕ ತೆಗೆದುಕೊಂಡು ಗ್ರಾಮ ಪಂಚಾಯಿತಿ, ನಗರಸಭೆಯಲ್ಲಿ ಖಾತೆ ಮಾಡಿಸಿಕೊಂಡು ನಂತರ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಒಳಚರಂಡಿ, ರಸ್ತೆ, ವಿದ್ಯುಚ್ಛಕ್ತಿ ದೊರೆಯುತ್ತದೆ ಎಂದು ಮಾಹಿತಿ ನೀಡುತ್ತಿದ್ದಾರೆಂದು ಸಾರ್ವಜನಿಕರು ತಿಳಿಸುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಚಾಮರಾಜನಗರ, ಗ್ರಾಮಾಂತರದ ಚನ್ನಿಪುರಮೋಳೆ, ರಾಮಸಮುದ್ರ, ಕರಿನಂಜನಪುರ, ಸೋಮವಾರಪೇಟೆ, ಗಾಳಿಪುರ, ಮೂಡ್ಲುಪುರ, ಮಲ್ಲಯ್ಯನಪುರ, ಉತ್ತುವಳ್ಳಿ, ಕಾಡಹಳ್ಳಿ, ಮಸಗಾಪುರ, ಮನಗಾನಹಳ್ಳಿ, ಮುಂಚನಹಳ್ಳಿ, ಬೂದಿತಿಟ್ಟು, ಮರಿಯಾಲ, ಗಂಗವಾಡಿ, ಮಾದಾಪುರ, ದೊಡ್ಡಮೋಳೆ, ಕೋಡಿಮೋಳೆ, ಹರದನಹಳ್ಳಿ, ಬಂಡಿಗೆರೆ, ಯಡಪುರ, ಶಿವಪುರ, ಚಂದಕವಾಡಿ, ಕೂಡ್ಲೂರು, ಬಸವನಪುರ ಹಾಗೂ ಹಂಡ್ರಕಳ್ಳಿ ಗ್ರಾಮಗಳಲ್ಲಿ ನಿವೇಶನ ಕೊಂಡುಕೊಳ್ಳುವವರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಾಹಿತಿ ಪಡೆದುಕೊಳ್ಳಬೇಕು. ಜೊತೆಗೆ ಬಡಾವಣೆಯಲ್ಲಿನ ರಸ್ತೆ, ಒಳಚರಂಡಿ, ಕುಡಿಯುವ ನೀರಿನ, ವಿದ್ಯುಚ್ಛಕ್ತಿ ಸಂಪರ್ಕ ಹಾಗೂ ಅಭಿವೃದ್ಧಿಪಡಿಸಿದ ಪಾಕ್ರ್À ಮತ್ತು ಸಿ.ಎ. ನಿವೇಶನಗಳನ್ನು ಹೊಂದಿರುವ ಬಗ್ಗೆ ಖಚಿತಪಡಿಸಿಕೊಂಡು ನಿವೇಶನಗಳನ್ನು ಖರೀದಿಸಬೇಕೆಂದು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಮನವಿ ಮಾಡಿದ್ದಾರೆ.
ಒಂದು ವೇಳೆ ಇಂತಹ ಅನಧಿಕೃತ ಬಡಾವಣೆಗಳಲ್ಲಿನ ನಿವೇಶನಗಳನ್ನು ಖರೀದಿಸಿದಲ್ಲಿ, ಖರೀದಿದಾರರಿಗೆ ಮುಂದಿನ ದಿನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಕಾನೂನು ತೊಡಕುಗಳು ಸಂಭವಿಸಲಿದ್ದು, ಕಾನೂನು ತೊಡಕಿಗೆ ಖರೀದಿದಾರರೇ ಹೋಣೆಗಾರರಾಗಲಿದ್ದಾರೆ.
ಬಡಾವಣೆ ನಿರ್ಮಾಣ ಮಾಡುವವರು ಕಾನೂನಾತ್ಮಕವಾಗಿ ನಿಯಮಗಳಿಗನುಸಾರವಾಗಿ ನಿರ್ಮಾಣ ಮಾಡಬೇಕು, ಮುಂದಿನ ದಿನಗಳಲ್ಲಿ ನಿವೇಶನ ಪಡೆದುಕೊಂಡವರಿಗೆ ಮೂಲಭೂತ ಸೌಕರ್ಯ ದೊರೆಕಿಸಿಕೊಡಬೇಕು, ಇದರಿಂದ ಬಡಾವಣೆಗಳಿಗೂ ಕೂಡ ಮೂಲಭೂತ ಸೌಕರ್ಯಗಳು ದೊರೆಯುವುದರ ಜೊತೆಗೆ ನಗರವು ಯೋಜನಾಬದ್ಧವಾಗಿ ಅಭಿವೃದ್ಧಿಗೊಳ್ಳುತ್ತದೆ ಇದಕ್ಕಾಗಿ ಸಾರ್ವಜನಿಕರು ಸಂಪೂರ್ಣವಾಗಿ ಸಹಕರಿಸಬೇಕೆಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಿ.ಬಿ. ಶಾಂತಮೂರ್ತಿ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಕೊಳ್ಳೇಗಾಲ ನಗರಸಭಾ : ಸಾಕುಪ್ರಾಣಿಗಳನ್ನು ರಸ್ತೆಗೆ ಬಿಡದಂತೆ ಸೂಚನೆ
ಚಾಮರಾಜನಗರ, ಸೆಪ್ಟೆಂಬರ್ 15 (ಕರ್ನಾಟಕ ವಾರ್ತೆ):- ಕೊಳ್ಳೇಗಾಲ ನಗರಸಭೆಯ ವ್ಯಾಪ್ತಿಯಲ್ಲಿ ಬಿಡಾಡಿ ದನಗಳಿಂದ ಸಾರ್ವಜನಿಕರು ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯುಂಟಾಗುತ್ತಿದೆ. ಹಾಗಾಗಿ ಬಿಡಾಡಿ ದನಗಳನ್ನು ಸಾಕಾಣಿಕೆ ಮಾಡುವವರು ತಮ್ಮ ತಮ್ಮ ಮನೆಗಳಲ್ಲಿಯೇ ಕಟ್ಟಿ ಹಾಕಿಕೊಂಡು ಸಾಕಬೇಕು ಎಂದು ನಗರಸಭೆ ಸೂಚಿಸಿದೆ.
ದನ, ಕರು, ನಾಯಿ ಹಾಗೂ ಹಂದಿಗಳನ್ನು ಸಾಕುತ್ತಿರುವವರು ರಸ್ತೆಗಳಲ್ಲಿ ಬಿಡುತ್ತಿರುವುದರಿಂದ ಹಲವಾರು ಅಪಘಾತಗಳು ಸಂಭವಿಸುತ್ತಿದ್ದು ತುಂಬಾ ತೊಂದರೆಗಳಾಗುತ್ತಿರುವ ಬಗ್ಗೆ ಸಾರ್ವಜನಿಕರು ಮತ್ತು ನಗರಸಭಾ ಸದಸ್ಯರುಗಳಿಂದ ದೂರುಗಳು ಬಂದಿವೆ. ಇದರಿಂದಾಗಿ ಸಾಕಾಣಿಕೆ ಮಾಡುತ್ತಿರುವ ಮಾಲೀಕರು ರಸ್ತೆಗಳಿಗೆ ಸಾಕು ಪ್ರಾಣಿಗಳನ್ನು ಬಿಡಬಾರದು ಇಲ್ಲದಿದ್ದಲ್ಲಿ ಪ್ರಾಣಿಗಳನ್ನು ಮೈಸೂರಿನ ಪ್ರಿಂಜಾಪೋಲ್ಗೆ ಕಳುಹಿಸಲಾಗುತ್ತದೆ ಎಂದು ನಗÀರಸಭೆಯ ಪೌರಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೇಷ್ಮೆ ಕೃಷಿ ಪ್ರಶಸ್ತಿಗಾಗಿ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಸೆಪ್ಟೆಂಬರ್ 15 (ಕರ್ನಾಟಕ ವಾರ್ತೆ):- ರೇಷ್ಮೆ ಇಲಾಖೆಯಿಂದ 2019-20ನೇ ಸಾಲಿನ ರೇಷ್ಮೆ ಕೃಷಿ ಪ್ರಶಸ್ತಿಗಾಗಿ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ನೂಲು ಬಿಚ್ಚಾಣಿಕೆದಾರರು ಕಡ್ಡಾಯವಾಗಿ ಪ್ರಸಕ್ತ ಸಾಲಿಗೆ ನಿಯಮಾನುಸಾರ ನೋಂದಾಯಿಸಿರಬೇಕು. ಕನಿಷ್ಟ 6 ಮಲ್ಟಿ ಎಂಡ್ ಬೇಸಿನ್ ಹೊಂದಿರಬೇಕು. ಸ್ವಯಂಚಾಲಿತ ನೂಲು ಬಿಚ್ಚಾಣಿಕೆದಾರರು ಸ್ವಯಂಚಾಲಿತ ಯಂತ್ರವನ್ನು ಸ್ಥಾಪಿಸಿರಬೇಕು. ರೇಷ್ಮೆ ಗೂಡು ಮಾರುಕಟ್ಟೆಯಲ್ಲಿಯೇ ಗೂಡು ಖರೀದಿಸಿರುವುದನ್ನು ದಾಖಲಾತಿಯೊಂದಿಗೆ ದೃಢೀಕರಿಸಬೇಕು. ವರ್ಷದಲ್ಲಿ ಖರೀದಿಸಿದ ಗೂಡನ್ನು ಸಂಪೂರ್ಣವಾಗಿ ನೂಲು ಬಿಚ್ಚಾಣಿಕೆಗೆ ಬಳಸಿರಬೇಕು. ಖರೀದಿಸಿದ ಗೂಡನ್ನು ಇತರೆ ಮಾರುಕಟ್ಟೆಗಳಲ್ಲಿ ಇತರರಿಗೆ ಮಾರಾಟ ಮಾಡಿರಬಾರದು.
ಹೆಚ್ಚಿನ ಮಾಹಿತಿಗಾಗಿ ಕೊಳ್ಳೇಗಾಲದ ರೇಷ್ಮೆ ವಿಸ್ತರಣಾಧಿಕಾರಿಗಳು, ಗೂಡಿನ ನಂತರದ ಚಟುವಟಿಕೆಗಳ ರೇಷ್ಮೆ ಸಹಾಯಕರ ನಿರ್ದೇಶಕರ ಕಚೇರಿ ಸಂಪರ್ಕಿಸಿ ಅಗತ್ಯ ಮಾಹಿತಿ ದಾಖಲಾತಿಗಳೊಂದಿಗೆ ಒದಗಿಸಿ ಅರ್ಜಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಸೆಪ್ಟೆಂಬರ್ 25ರೊಳಗೆ ಸಲ್ಲಿಸಬೇಕು ಎಂದು ಕೊಳ್ಳೇಗಾಲದ ಗೂಡಿನ ನಂತರದ ಚಟುವಟಿಕೆಗಳ ರೇಷ್ಮೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment