Thursday, 10 December 2020

ಬೆಳೆ ಸಮೀಕ್ಷೆ ಪ್ರಗತಿ ಸಾಧಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರಿಂದ ತಾಕೀತು

 


     ಬೆಳೆ ಸಮೀಕ್ಷೆ ಪ್ರಗತಿ ಸಾಧಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ 

                            ಅವರಿಂದ ತಾಕೀತು 


ಚಾಮರಾಜನಗರ, ಸೆಪ್ಟೆಂಬರ್ 11 (ಕರ್ನಾಟಕ ವಾರ್ತೆ):- ಬೆಳೆ ನಷ್ಟ, ಬೆಳೆ ವಿಮೆ ಸೇರಿದಂತೆ ವಿವಿಧ ಪರಿಹಾರ ಸೌಲಭ್ಯಕ್ಕಾಗಿ ರೈತರೇ ಫೋಟೊ ತೆಗೆದು ಅಪ್ ಲೋಡ್ ಮಾಡಲು ಅವಕಾಶ ನೀಡಿರುವ ಸಮೀಕ್ಷೆ ಬಗ್ಗೆ ರೈತರಿಗೆ ಅಧಿಕಾರಿಗಳು ಮಾರ್ಗದರ್ಶನ ನೀಡಿ ಇನ್ನು 10 ದಿನಗಳೊಳಗೆ ಸಂಪೂರ್ಣ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. 


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು 2020-21ನೇ ಸಾಲಿನ ಬೆಳೆ ಸಮೀಕ್ಷೆ ಕಾರ್ಯದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 


ರೈತರು ತಾವು ಬೆಳೆದ ಬೆಳೆಯನ್ನು ತಾವೇ ಮೊಬೈಲ್ ಆ್ಯಪ್ ಮೂಲಕ ಅಪ್ ಲೋಡ್ ಮಾಡುವ ಅವಕಾಶ ನೀಡಲಾಗಿದೆ. ರೈತರಿಗೆ ಇಲಾಖೆ ಅಧಿಕಾರಿಗಳು ಮಾರ್ಗದರ್ಶನ ಮಾಡಿ ಸಮೀಕ್ಷಾ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಸೂಚಿಸಲಾಗಿರುವ ಗಡುವಿಗೆ ಕಾಯದೇ ಮುಂಚಿತವಾಗಿಯೇ ಸಮೀಕ್ಷೆ ಕಾರ್ಯದಲ್ಲಿ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿಯವರು ಕಟ್ಟುನಿಟ್ಟಿನ ಸೂಚನೆ ನೀಡಿದರು. 


ಸಮೀಕ್ಷಾ ಕಾರ್ಯದ ಉಸ್ತುವಾರಿ ವಹಿಸಿ ರೈತರಿಗೆ ನೆರವಾಗಲು ರೇಷ್ಮೆ, ಪಶುಸಂಗೋಪನೆ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳನ್ನೇ ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಈ ಅಧಿಕಾರಿಗಳು ವ್ಯಾಪಕವಾಗಿ ಕ್ಷೇತ್ರ ಪ್ರವಾಸ ಕೈಗೊಂಡು ಬೆಳೆ ಸಮೀಕ್ಷೆ ಪರಿಶೀಲನೆ ಮಾಡಬೇಕು. ಮಾಹಿತಿ ಅಪ್ ಲೋಡ್ ಮಾಡಲು ನೆರವಾಗಬೇಕು. ವಿಳಂಬ, ನಿರ್ಲಕ್ಷ್ಯ ಧೋರಣೆ ವಹಿಸುವುದನ್ನು ಸಹಿಸಲಾಗುವುದಿಲ್ಲ, ಬೆಳೆ ಸಮೀಕ್ಷೆ ಜಿಲ್ಲೆಯಲ್ಲಿ ಕುಂಠಿತವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹಿರಿಯ ಅಧಿಕಾರಿಗಳು ವಹಿಸಬೇಕು ಎಂದು  ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು. 


ರೈತರ ಜಮೀನಿನಲ್ಲಿ ಬೆಳೆ ಸರ್ವೇ ಮಾಡಲು ರೈತರೊಂದಿಗೆ ಮಾರ್ಗದರ್ಶನ ಮಾಡಲು ಖಾಸಗಿ (ಪಿ.ಆರ್) ನಿವಾಸಿಗಳಿಗೂ ಅವಕಾಶ ಕಲ್ಪಿಸಲಾಗಿದೆ. ರೈತರ ಸಮ್ಮತಿ, ಒಪ್ಪಿಗೆ ಪಡೆದು ನಿಯಮಾನುಸಾರ ಕ್ರಮಬದ್ದ ಮಾಹಿತಿಯೊಂದಿಗೆ ಸಮೀಕ್ಷೆಗೆ ಸಹಕರಿಸಲು ಅಧಿಕಾರಿಗಳು ಮುಂದಾಗಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು. 


ಬೆಳೆ ಸಮೀಕ್ಷೇ ಕಾರ್ಯಕ್ಕೆ ನಿಗದಿತ ಗುರಿ ನೀಡಿ ಅಂತಿಮ ದಿನಾಂಕ ನಿಗದಿಪಡಿಸಲಾಗಿದೆ. ಪೂರ್ಣ ಪ್ರಮಾಣದಲ್ಲಿ ಬೆಳೆ ಸರ್ವೇ ಕಾರ್ಯ ಆಗಲೇಬೇಕು, ಗ್ರಾಮಲೆಕ್ಕಿಗರು, ತಹಶೀಲ್ದಾರರು, ಸೇರಿದಂತೆ ಎಲ್ಲಾ ಅಧಿಕಾರಿಗಳು ಕ್ರಿಯಾ ಯೋಜನೆ ಅನುಸಾರ ಬೆಳೆ ಸಮೀಕ್ಷೆ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ರೈತರನ್ನು ಖುದ್ದು ಭೇಟಿ ಮಾಡಿ ಬೆಳೆ ಸಮೀಕ್ಷೆಗೆ ನೆರವಾಗಬೇಕು. ಸೂಚಿಸಲಾಗಿರುವ ಇಲಾಖೆ ಅಧಿಕಾರಿಗಳು ಬೆಳೆ ಸಮೀಕ್ಷೆ ಕಾರ್ಯವನ್ನು ಆದತ್ಯೆ ಮೇರೆಗೆ ಪರಿಗಣಿಸಿ ಪ್ರಗತಿ ಸಾಧಿಸಬೇಕು. ಇಲ್ಲವಾದಲ್ಲಿ ಗಂಭೀರ ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ಎಚ್ಚರಿಕೆ ನೀಡಿದರು.


ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಜಂಟಿ ಕೃಷಿ ನಿರ್ದೇಶಕರಾದ ಚಂದ್ರಕಲಾ ಸೇರಿದಮತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. 




ನವೆಂಬರ್ ಅಂತ್ಯದೊಳಗೆ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಜೀರ್ಣೋದ್ದಾರ ಕಾಮಗಾರಿ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಸೂಚನೆ 


ಚಾಮರಾಜನಗರ, ಸೆಪ್ಟೆಂಬರ್ 14 (ಕರ್ನಾಟಕ ವಾರ್ತೆ):- ಇತಿಹಾಸ ಪ್ರಸಿದ್ದ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಜೀರ್ಣೋದ್ದಾರ ಕಾಮಗಾರಿಯನ್ನು ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಿ ಭಕ್ತಾಧಿಗಳ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 


ಬಿಳಿಗಿರಿರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ಅಲ್ಲಿ ಕೈಗೊಂಡಿರುವ ವಿಮಾನ ಗೋಪುರ, ಪ್ರಾಕಾರ ಗೋಪುರದಲ್ಲಿನ ವಿಗ್ರಹಗಳ ನಿರ್ಮಾಣ ಸೇರಿದಂತೆ ಇತರೆ ಜೀರ್ಣೋದ್ದಾರ ಕಾಮಗಾರಿಯನ್ನು ಪರಿಶೀಲಿಸಿದರು.  


ಗರ್ಭಗುಡಿಗಳಿಗೆ ಗ್ರಾನೈಟ್ ಅಳವಡಿಕೆ ಕಾರ್ಯವನ್ನು ವೀಕ್ಷಿಸಿದ ಜಿಲ್ಲಾಧಿಕಾರಿ ಅವರು ನಿರ್ಮಾಣವಾಗಿರುವ ಯಾಗಶಾಲೆಗೆ ಬಾಕಿ ಉಳಿದಿರುವ ವಿದ್ಯುತ್ ವೈರಿಂಗ್, ಬಾಗಿಲುಗಳ ಅಳವಡಿಸಿಕೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ರಾಜಗೋಪುರಕ್ಕೆ ಸಾಗುವ ತಾತ್ಕಲಿಕ ಮೆಟ್ಟಿಲುಗಳ ನಿರ್ಮಾಣ, ರೈಲಿಂಗ್ಸ್ ಹಾಕುವ ಕೆಲಸಗಳನ್ನು ಅತ್ಯಂತ ಜರೂರಾಗಿ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.


ದೇವಾಲಯದ ಹೊರ ಪ್ರಕಾರದಲ್ಲಿ ಪ್ರವಾಸೋದ್ಯಮ ಹಾಗೂ ರಾಜ್ಯ ಪ್ರಾಚ್ಯವಸ್ತು ಇಲಾಖೆ ವತಿಯಿಂದ ಹಾಕಲಾಗುತ್ತಿರುವ ನೆಲಹಾಸು ಕೆಲಸವನ್ನು ಸಹ ವಿಳಂಬ ಮಾಡಬಾರದು ಎಂದು ಸೂಚಿಸಿದ ಜಿಲ್ಲಾಧಿಕಾರಿಯವರು ದೇವಾಲಯದ ಪ್ರಸ್ತುತ ನಿತ್ಯ ಅನ್ನದಾಸೋಹ ಭವನದ ಕಟ್ಟಡವನ್ನು ಶಾಶ್ವತವಾಗಿ ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸಬೇಕು, ಸುತ್ತುಗೋಡೆ ನಿರ್ಮಾಣಕ್ಕೂ ಅಗತ್ಯ ಅಂದಾಜು ಪಟ್ಟಿ ಸಿದ್ದಪಡಿಸುವಂತೆ ತಿಳಿಸಿದರು. 


ದೇವಾಲಯದ ಹಿಂಭಾಗದಲ್ಲಿರುವ ಕಮರಿ ಆವರಣದಲ್ಲಿ ಉತ್ತಮ ಉದ್ಯಾನವನವನ್ನು ನಿರ್ಮಾಣ ಮಾಡಬೇಕು, ವೀಕ್ಷಣಾ ಸ್ಥಳವನ್ನು ಸಮರ್ಪಕವಾಗಿ ನಿರ್ವಹಿಸಲು ಅಗತ್ಯವಿರುವ ಕೆಲಸಗಳ ಅಂದಾಜು ಪಟ್ಟಿಯನ್ನು ತಯಾರಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು. 


ಬಿಳಿಗಿರಿ ಭವನ ಅತಿಥಿ ಗೃಹಕ್ಕೆ ಭೇಟಿ ನೀಡಿ ಅಲ್ಲಿನ ಮೇಲಂತಸ್ತಿನಲ್ಲಿ ನಿರ್ಮಾಣವಾಗುತ್ತಿರುವ ಕೊಠಡಿ ಕಟ್ಟಡಗಳ ಕಾಮಗಾರಿಯನ್ನು ಪರಿಶೀಲಿಸಿದರು. ಅಪೂರ್ಣವಾಗಿರುವ ಕಟ್ಟಡವನ್ನು ಶೀಘ್ರವೇ ಪೂರ್ಣಗೊಳಿಸಬೇಕು, ಕೊಠಢಿಗಳಿಗೆ ಅಗತ್ಯವಿರುವ ಪೀಠೋಪಕರಣಗಳ ಅಳವಡಿಕೆ, ನೆಲ ಅಂತಸ್ತಿನ ಕೊಠಡಿಗಳ ದುರಸ್ತಿ, ವಿದ್ಯುತ್ ವೈರಿಂಗ್, ಸುಣ್ಣ ಬಣ್ಣ ಬಳಿಯುವಿಕೆ, ಕೊಳಾಯಿಗಳ ಸಂಪರ್ಕಕ್ಕೆ ತಗಲಬಹುದಾದ ವೆಚ್ಚದ ಅಂದಾಜು ಪಟ್ಟಿಯನ್ನು ಸಲ್ಲಿಸಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. 


ದೇವಾಲಯದ ಜೀರ್ಣೋದ್ದಾರ ಕಾಮಗಾರಿಯ ಪ್ರತಿ ಹಂತವನ್ನು ಅತ್ಯಂತ ನಿಗಾವಹಿಸಿ ನೋಡಿಕೊಳ್ಳಬೇಕು. ನವೆಂಬರ್ ಮಾಹೆಯ ಒಳಗೆ ಕಾಮಗಾರಿ ಪೂರ್ಣಗೊಂಡು ಮೂಲ ದೇವರ ದರ್ಶನಕ್ಕೆ ಭಕ್ತಾಧಿಗಳಿಗೆ ಅವಕಾಶವಾಗುವಂತೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ಅಧಿಕಾರಿಗಳಿಗೆ ತಿಳಿಸಿದರು. 


ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಡಿ.ಸತೀಶ್, ದೇವಾಲಯದ ಅರ್ಚಕ ವೃಂದ, ಇತರೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. 


ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣ ಬಹಳ ಅವಶ್ಯಕ : ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್


ಚಾಮರಾಜನಗರ, ಸೆಪ್ಟೆಂಬರ್ 14 (ಕರ್ನಾಟಕ ವಾರ್ತೆ):- ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣ ಬಹಳ ಮುಖ್ಯವಾಗಿದ್ದು, ಹೆಚ್ಚು ಜನರು ಸೇರುವಂತಹ ಸ್ಥಳಗಳಲ್ಲಿ ಸಾಕ್ಷರತೆಯ ಮಹತ್ವದ ಬಗ್ಗೆ ಅರಿವು ಮಾಡಿಸಿ ಮುಖ್ಯವಾಹಿನಿಗೆ ತರಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್ ಅವರು ತಿಳಿಸಿದರು.


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಲೋಕ ಶಿಕ್ಷಣ ನಿರ್ದೇಶನಾಲಯ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಲೋಕ ಶಿಕ್ಷಣ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 54ನೇ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಹಾಗೂ ಸಪ್ತಾಹ 2020ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಸಾರ್ವಜನಿಕರಲ್ಲಿ ಶಿಕ್ಷಣದ ಮಹತ್ವ, ಅವಶ್ಯಕತೆ ಹಾಗೂ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮಾಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಿತರನ್ನಾಗಿ ಮಾಡಬೇಕು. ಹೆಚ್ಚು ಶಿಕ್ಷಿತರಾಗುವುದರಿಂದ ಸಮೃದ್ಧ, ಸುಸ್ಥಿರ ಮತ್ತು ಅಭಿವೃದ್ಧಿ ಸಾಧಿಸಲು ಸಹಾಯವಾಗುತ್ತದೆ. ಅನಕ್ಷರಸ್ಥರೆಲ್ಲರೂ ವಿದ್ಯೆ ಕಲಿತು ಸಾಕ್ಷರಸ್ಥರಾಗಿಸಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಅವರು ಸಲಹೆ ಮಾಡಿದರು.


 ವಿಶೇಷವಾಗಿ ಮಹಿಳೆಯರು ಶಿಕ್ಷಣದಿಂದ ವಂಚಿತರಾಗದಂತೆ ಸಾಕ್ಷರರನ್ನಾಗಿಸುವ ಹೆಚ್ಚಿನ ಕಾರ್ಯಕ್ರಮಗಳನ್ನು ರೂಪಿಸಬೇಕು. ಪ್ರತಿ ಮನೆ ಮನೆಗೂ ಅಕ್ಷರ ಕಲಿಸುವ ಕೆಲಸ ಆಗಬೇಕು. ಜಿಲ್ಲೆಯಲ್ಲಿ ಸಾಕ್ಷರತೆಯ ಪ್ರಮಾಣ ಹೆಚ್ಚಳವಾಗÀಲು ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್ ಅವರು ತಿಳಿಸಿದರು. 


ಇದೇ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್ ಹಾಗೂ ಜಿಲ್ಲಾ ಪಂಚಾಯಿತಿಯ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಡಿ. ಲೇಖಾ ಅವರು ಸಾಕ್ಷರತಾ ಪ್ರಮಾಣ ವಚನವನ್ನು ಭೋದಿಸಿದರು. 


ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಎನ್. ವಿ. ಸ್ವಾಮಿ, ತಾಲೂಕು ಸಂಯೋಜಕರಾದ ಪಿ. ಸೋಮಪ್ಪ, ಸಿ. ಮಂಜುನಾಥ್, ವೈ. ಗಿರಿರಾಜ್ ಇತರರು ಉಪಸ್ಥಿತರಿದ್ದರು. 


ಸೆಪ್ಟೆಂಬರ್ 15 ರಂದು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ

 

ಚಾಮರಾಜನಗರ, ಸೆಪ್ಟೆಂಬರ್ 14 (ಕರ್ನಾಟಕ ವಾರ್ತೆ):- ಜಿಲ್ಲಾ ಪಂಚಾಯತ್‍ನ ಸಾಮಾನ್ಯ ಸಭೆಯು ಅಧ್ಯಕ್ಷರಾದ ಎಂ. ಅಶ್ವಿನಿ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 15 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸೆಪ್ಟೆಂಬರ್ 18 ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ಗೋಲಕ ಹಣ ಎಣಿಕೆ


ಚಾಮರಾಜನಗರ, ಸೆಪ್ಟೆಂಬರ್ 14 (ಕರ್ನಾಟಕ ವಾರ್ತೆ):– ಹನೂರು ತಾಲೂಕಿನ ಮಹದೇಶ್ವರ ಬೆಟ್ಟದ ಮಲೆಮಹದೇಶ್ವರಸ್ವಾಮಿ ದೇವಸ್ಥಾನದ ಗೋಲಕಗಳ ಹಣ ಎಣಿಕೆ ಕಾರ್ಯವು ಸೆಪ್ಟೆಂಬರ್ 18 ರಂದು ಬೆಳಿಗ್ಗೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಮಹಡಿಯ ವಿಶ್ರಾಂತಿ ಗೃಹದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿ ಸಹಯೋಗದೊಂದಿಗೆ ನಡೆಯಲಿದೆ ಎಂದು ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಈ ಸಭೆಗೆ ಮಾಧ್ಯಮ ಪ್ರತಿನಿಧಿಗಳು ಆಗಮಿಸುವಂತೆ ಕೋರಿದೆ. 

 


No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು