ವಿವಿಧ ಕೆರೆಗಳಿಗೆ ಶಾಸಕರು, ರೈತ ಮುಖಂಡರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್‍ಕುಮಾರ್ ಭೇಟಿ : ಪರಿಶೀಲನೆ
ಚಾಮರಾಜನಗರ, ಸೆಪ್ಟೆಂಬರ್ 12 :- ಕೊಳ್ಳೇಗಾಲ, ಯಳಂದೂರು ಹಾಗೂ ಹನೂರು ತಾಲೂಕಿನ ವಿವಿಧ ಕೆರೆಗಳಿಗೆ ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್‍ಕುಮಾರ್ ಅವರು ಇಂದು ಶಾಸಕರು ಹಾಗೂ ರೈತರೊಂದಿಗೆ ಭೇಟಿ ನೀಡಿ ಕೆರೆಗಳ ವಾಸ್ತವ ಸ್ಥಿತಿಯನ್ನು ಪರಿಶೀಲನೆ ಮಾಡಿದರು.
ಧನಗೆರೆ, ಪಾಪನಕೆರೆ, ಚಿಕ್ಕ ರಂಗನಾಥ ಕೆರೆ, ದೊಡ್ಡರಂಗನಾಥ ಕೆರೆ, ಕೊಂಗಳಕೆರೆ, ಮದ್ದೂರು ಕೆರೆ, ಯರಿಯೂರು ಕೆರೆ, ಕೆಸ್ತೂರು ಕೆರೆ, ಅಗರ ಕೆರೆ, ಯಳಂದೂರು ಕೆರೆ, ಮುಡಿಗುಂಡ ಕೆರೆ, ಹೊಂಡರಬಾಳು ಕೆರೆಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಜಿಲ್ಲಾ ಉಸ್ತುವರಿ ಸಚಿವರು ಪರಿವೀಕ್ಷಿಸಿದರು.
ಬೆಳಿಗ್ಗೆಯಿಂದಲೇ ಕೆರೆಗಳ ಪರಿಶೀಲನೆಗಾಗಿ ಭೇಟಿ ನೀಡಲು ಆರಂಭಿಸಿದ ಉಸ್ತುವಾರಿ ಸಚಿವರಿಗೆ ಶಾಸಕರಾದ ಆರ್. ನರೇಂದ್ರ, ಎನ್. ಮಹೇಶ್ ಹಾಗೂ ರೈತ ಮುಖಂಡರಾದ ಹೊನ್ನೂರು ಪ್ರಕಾಶ್, ಅಣಗಳ್ಳಿ ಬಸವರಾಜು ಸೇರಿದಂತೆ ಹಿರಿಯ ಅಧಿಕಾರಿಗಳು ಜೊತೆಗಿದ್ದು, ಕೆರೆಗಳ ಬಗ್ಗೆ ಉಸ್ತುವಾರಿ ಸಚಿವರಿಗೆ ವಿವರ ನೀಡಿದರು.
ಇದೇ ವೇಳೆ ಹೊಂಡರಬಾಳು ಕೆರೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಸುರೇಶ್‍ಕುಮಾರ್ ಅವರು ಬಾಗಿನ ಅರ್ಪಿಸಿದರು. ಪ್ರತಿ ಕೆರೆಯ ವೀಕ್ಷಣೆ ಸಮಯದಲ್ಲೂ ಸಚಿವರು ಕೆರೆಗಳ ಕುರಿತು ಸವಿವರವಾದ ಮಾಹಿತಿ ಪಡೆದುಕೊಂಡರು. ಕೆರೆಗಳಿಗೆ ಸಂಪರ್ಕ ಹೊಂದಿರುವ ಫೀಡರ್ ಚಾನಲ್‍ಗಳಲ್ಲಿ ಇರುವ ತ್ಯಾಜ್ಯ, ಅಕ್ಕಪಕ್ಕ ಬೆಳೆದಿರುವ ಅನುಪಯುಕ್ತ ಗಿಡಗಂಟಿಗಳನ್ನು ತೆರವುಗೊಳಿಸುವಿಕೆ, ಕೆರೆಗಳ ಅಕ್ಕಪಕ್ಕದ ಜಾಗಗಳಲ್ಲಿ ಶುಚಿತ್ವ ಕಾಪಾಡುವುದು, ನೀರು ಚಾನಲ್‍ಗಳಲ್ಲಿ ಸರಾಗವಾಗಿ ಹರಿಯುವಿಕೆ, ಹೂಳು ತೆಗೆಯುವ ಕೆಲಸಗಳನ್ನು ನಿರ್ವಹಿಸಬೇಕಿರುವ ಕುರಿತು ಅಗತ್ಯ ಸೂಚನೆಗಳನ್ನು ಸಚಿವರು ನೀಡಿದರು.
ಕೆರೆಗಳ ವ್ಯಾಪಕ ಪರಿಶೀಲನೆ ಬಳಿಕ ಕೊಳ್ಳೇಗಾಲ ಪಟ್ಟಣದ ಪ್ರವಾಸಿಮಂದಿರದಲ್ಲಿ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವರು ಕೆರೆಗಳ ಅಭಿವೃದ್ಧಿ ಕಾಮಗಾರಿಗಳಿಗಾಗಿ ಅಗತ್ಯವಿರುವ ಮಾಸ್ಟರ್ ಪ್ಲಾನ್ ತಯಾರಿಸಬೇಕು. ಫೀಡರ್ ಚಾನಲ್ ಗಳಲ್ಲಿ ಹೂಳು ತೆಗೆಯುವುದು, ತ್ಯಾಜ್ಯಗಳ ವಿಲೇವಾರಿ ಮಾಡುವ ಕೆಲಸವನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಇದೇ ಸಂದರ್ಭದಲ್ಲಿ ರೈತ ಮುಖಂಡರು, ಶಾಸಕರು ಕೊಳ್ಳೇಗಾಲ, ಯಳಂದೂರು ಹಾಗೂ ಹನೂರು ತಾಲೂಕಿನ ತಲಾ ಒಂದು ಕೆರೆಯನ್ನು ಸಮಗ್ರವಾಗಿ ಅಭಿವೃದ್ದಿಪಡಿಸಿ ಮಾದರಿಯನ್ನಾಗಿಸಬೇಕೆಂದು ಸಚಿವರಿಗೆ ಸಲಹೆ ನೀಡಿದರು.
ಶಾಸಕರಾದ ಆರ್. ನರೇಂದ್ರ ಅವರು ಮಾತನಾಡಿ ಯಾವುದೇ ಕಾಮಗಾರಿ ನಡೆಯುವಾಗ ಅಧಿಕಾರಿಗಳು ಮೇಲುಸ್ತುವಾರಿ ವಹಿಸಬೇಕು. ನೀರು ಬಿಡುವ ಮೊದಲೇ ಯೋಜನೆ ರೂಪಿಸಿ ಕೆರೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದರು.
ಶಾಸಕರಾದ ಎನ್. ಮಹೇಶ್ ಅವರು ಮಾತನಾಡಿ ಕೆರೆಗಳಿಗೆ ನೀರು ಹರಿದು ಬರುವ ಜಾಗಗಳು, ಚಾನಲ್‍ಗಳಲ್ಲಿ ಯಾವುದೇ ಅಡೆತಡೆಗಳು ಇಲ್ಲದಂತೆ ನೀರು ಸರಾಗವಾಗಿ ಹರಿಯಲು ಸ್ವಚ್ಚತೆಗೊಳಿಸಬೇಕು. ಕಾಲಬದ್ಧ ಕ್ರಿಯಾಯೋಜನೆ ತಯಾರಿಸಿ ತೂಬು, ಕೆರೆ ಅಂಗಳವನ್ನು ದುರಸ್ತಿಗೊಳಿಸಬೇಕು. ಒತ್ತುವರಿ ತೆರವುಗೊಳಿಸಿದ ಬಳಿಕ ಸಂಬಂಧಿಸಿದ ಕೆರೆ, ಇತರೆ ಭೂಮಿ ಓಡೆತನ ಹೊಂದಿರುವ ಇಲಾಖೆಗೆ ಹಸ್ತಾಂತರಿಸಿ ರಕ್ಷಣೆ ಮಾಡಕೊಳ್ಳುವಂತಾಗಬೇಕು ಎಂದರು.
ರೈತ ಮುಖಂಡರಾದ ಹೊನ್ನೂರು ಪ್ರಕಾಶ್ ಹಾಗೂ ಅಣಗಳ್ಳಿ ಬಸವರಾಜು ಅವರು ಮಾತನಾಡಿ ಕೆರೆಗಳ ಒತ್ತುವರಿಯನ್ನು ಅದಷ್ಟು ಬೇಗನೆ ತೆರವುಗೊಳಿಸಬೇಕು. ಹೂಳು, ಅನುಪಯುಕ್ತ ಗಿಡಗಂಟಿಗಳನ್ನು ತೆಗೆದ ಬಳಿಕ ರೈತರ ಜಮೀನುಗಳಿಗೆ ಹಾಕಲಾಗುತ್ತದೆ. ಇದರಿಂದ ಫೀಡರ್ ಚಾನಲ್‍ಗಳಲ್ಲಿ ಮತ್ತೆ ಹೂಳು ಸಂಗ್ರಹವಾಗುತ್ತಿದೆ. ಹೀಗಾಗಿ ತ್ಯಾಜ್ಯವನ್ನು ದೂರದ ಸ್ಥಳಗಳಲ್ಲಿ ಸುರಿಯುವಂತಾಗಬೇಕು. ಮಳೆ ನೀರು ಕೆರೆಗಳಿಗೆ ಸೇರಬೇಕು. ಜಮೀನುಗಳಿಗೆ ನೀರಿನ ಸೌಲಭ್ಯ ತಲುಪಬೇಕು. ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸಲಹೆ ಮಾಡಿದರು.
ಎಲ್ಲರ ಸಲಹೆ, ಅಭಿಪ್ರಾಯಗಳನ್ನು ಆಲಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಒತ್ತುವರಿಯಾಗಿರುವ ಕೆರೆಗಳನ್ನು ತೆರವುಗೊಳಿಸಬೇಕು. ಈಗಾಗಲೇ ಎಲ್ಲೆಲ್ಲಿ ಒತ್ತುವರಿಯಾಗಿದೆ, ಎಷ್ಟು ಕಡೆ ತೆರವುಗೊಳಿಸಲಾಗಿದೆ ಎಂಬ ಮಾಹಿತಿ ಒದಗಿಸಬೇಕು. ಈಗಾಗಲೇ ಒತ್ತುವರಿ ತೆರವುಗೊಳಿಸಿದ್ದಲ್ಲಿ ಸಂಬಂಧಪಟ್ಟ ಇಲಾಖೆಗಳಿಗೆ ಹಸ್ತಾಂತರಿಸಬೇಕು. ಕೆರೆ, ಭೂಮಿಗಳ ಒಡೆತನ ಹೊಂದಿರುವ ಇಲಾಖೆಗಳು ಇದರ ಸಂರಕ್ಷಣೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಒಟ್ಟಾರೆ ಕೆರೆಗಳ ಸಮಗ್ರ ಅಭಿವೃದ್ಧಿಗೆ ಗಮನ ಹರಿಸಬೇಕು. ಅದಷ್ಟು ಶೀಘ್ರವೇ ಕೆರೆಗಳ ಅಭಿವೃದ್ಧಿಗೆ ಯೋಜನೆ ತಯಾರಿಸಿ ಪ್ರಸ್ತಾವ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೋಯರ್ ಹರ್ಷಲ್ ನಾರಾಯಣರಾವ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ದಿವ್ಯಾ ಸಾರಾ ಥಾಮಸ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ತಹಸೀಲ್ದಾರರಾದ ಕೆ. ಕುನಾಲ್, ಸುದರ್ಶನ್, ಕಾವೇರಿ ನೀರಾವರಿ ನಿಗಮದ ಎಂಜಿನಿಯರ್ ರಘು ಹಾಜರಿದ್ದರು.
ಕೆರೆಗಳ ಸಮಗ್ರ ಅಭಿವೃದ್ಧಿಗೆ ಕ್ರಮ : ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್‍ಕುಮಾರ್
ಚಾಮರಾಜನಗರ, ಸೆಪ್ಟೆಂಬರ್ 12 (ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿರುವ ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಸಂಬಂಧ ಈ ಬಗ್ಗೆ ವಿವರಿಸಿ ಅನುಷ್ಟಾನಕ್ಕೆ ತರುವ ಉದ್ದೇಶದೊಂದಿಗೆ ನೀರಾವರಿ ಸಚಿವರನ್ನು ಜಿಲ್ಲೆಗೆ ಕರೆತರಲಾಗುವುದು ಎಂದು ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್‍ಕುಮಾರ್ ಅವರು ತಿಳಿಸಿದರು.
ಕೊಳ್ಳೇಗಾಲ ಪಟ್ಟಣದ ಪ್ರವಾಸಿಮಂದಿರದಲ್ಲಿಂದು ಕೊಳ್ಳೇಗಾಲ, ಯಳಂದೂರು ಹಾಗೂ ಹನೂರು ಭಾಗದ ಕೆರೆಗಳ ವೀಕ್ಷಣೆ ಹಾಗೂ ಅಧಿಕಾರಿಗಳ ಸಭೆಯ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದರು.
ಕಳೆದ ಸೆಪ್ಟೆಂಬರ್ 7ರಂದು ರೈತ ಮುಖಂಡರ ಜೊತೆ ನಡೆಸಿದ ಸಭೆಯಲ್ಲಿ ಕೆರೆಗಳ ಅಭಿವೃದ್ಧಿ ಸಂಬಂಧ ಕೆರೆಗಳ ವೀಕ್ಷಣೆ ಮಾಡುವುದಾಗಿ ತಿಳಿಸಿದ್ದೆ. ಅ ಪ್ರಕಾರವೇ ಇಂದು ಈ ಮೂರು ಭಾಗದ 12 ಕೆರೆಗಳನ್ನು ರೈತ ಮುಖಂಡರು ಹಾಗೂ ಶಾಸಕರೊಂದಿಗೆ ಖುದ್ದು ಭೇಟಿ ನೀಡಿ ಪರಿಸೀಲಿಸಿದ್ದೇನೆ. ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಯೋಜನೆ ವಿವರಿಸಿ ಅನುಷ್ಟಾನಕ್ಕೆ ತರುವ ಉದ್ದೇಶದಿಂದ ನೀರಾವರಿ ಸಚಿವರನ್ನು ಜಿಲ್ಲೆಗೆ ಮುಂಬರುವ ವಿಧಾನ ಮಂಡಲದ ಅಧಿವೇಶನದ ಬಳಿಕ ಕರೆತರಲಾಗುವುದು ಎಂದು ಸಚಿವರು ತಿಳಿಸಿದರು.
ಜಿಲ್ಲೆಯ ಬೆಳೆಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಪಡೆಯಲು ಮೂಗೂರಿನಿಂದ ಮುಂದಕ್ಕೆ ಚಾನಲ್‍ಗಳನ್ನು ಸರಿಪಡಿಸಬೇಕಿದೆ. ಈ ಬಗ್ಗೆ ಶಾಸಕರಾದ ನರೇಂದ್ರ ಅವರು ಗಮನಕ್ಕೆ ತಂದಿದ್ದಾರೆ. ಜಿಲ್ಲೆಯಲ್ಲಿರುವ ಕೆರೆಗಳ ಅಭಿವೃದ್ಧಿ ಕಾಮಗಾರಿ ಕೈಗೊಂಡು ರೈತರಿಗೆ ಅನುಕೂಲ ಕಲ್ಪಿಸಬೇಕಿದೆ. ಈ ಎಲ್ಲಾ ಉದ್ದೇಶಗಳಿಗಾಗಿ ನೀರಾವರಿ ಸಚಿವರನ್ನು ಜಿಲ್ಲೆಗೆ ಆಹ್ವಾನಿಸಿ ಕೆರೆಗಳ ಅಭಿವೃದ್ದಿ ಸಂಬಂಧ ಮುಂದಿನ ಕ್ರಮ ವಹಿಸಲಾಗುವುದು ಎಂದರು.
ಮೊದಲು ಕೊಳ್ಳೇಗಾಲ, ಯಳಂದೂರು ಹಾಗೂ ಹನೂರು ತಾಲೂಕಿನ ಪೈಕಿ ತಲಾ ಒಂದೊಂದು ಕೆರೆಯನ್ನು ಮಾದರಿ ಕೆರೆಯನ್ನಾಗಿ ಅಭಿವೃದ್ಧಿಗೊಳಿಸಲಾಗುವುದು. ಇದಕ್ಕಾಗಿ ಹೊನ್ನೂರು ಕೆರೆ, ಚಿಕ್ಕ ರಂಗನಾಥ-ದೊಡ್ಡರಂಗನಾಥ ಕೆರೆ ಹಾಗೂ ಪಾಳ್ಯಂ ಕೆರೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಮೂರು ಕೆರೆಗಳನ್ನು ಸರ್ವಾಂಗೀಣ ಅಭಿವೃದ್ಧಿಗೊಳಿಸಿ ಮಾದರಿ ಕೆರೆಗಳನ್ನಗಿ ಮಾರ್ಪಡಿಸಲಾಗುವುದು. ಇದದಕ್ಕಾಗಿ ಈ ತಿಂಗಳ 21ರೊಳಗೆ ಅಗತ್ಯವಿರುವ ಯೋಜನೆ ಹಾಗೂ ಪ್ರಸ್ತಾವಗಳನ್ನು ಸಿದ್ದಪಡಿಸಿ ಸಲ್ಲಿಸುವಂತೆ ಅಧಿಕರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಇದೇ ಸೆಪ್ಟೆಂಬರ್ 21ರಿಂದ 30ರವರೆಗೆ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಈ ಸಂದರ್ಭದಲ್ಲಿ ಜಿಲ್ಲೆಯ ಶಾಸಕರೊಂದಿಗೆ ನೀರಾವರಿ ಸಚಿವರ ಸಮ್ಮುಖದಲ್ಲಿ ಯೋಜನೆಯ ಪ್ರಸ್ತಾವ ಮುಂದಿಟ್ಟು ಅಗತ್ಯ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಮೊದಲ ಹಂತದಲ್ಲಿ ಇಂದು ಕೊಳ್ಳೇಗಾಲ, ಯಳಂದೂರು ಹಾಗೂ ಹನೂರು ತಾಲೂಕಿನ ಕೆರೆಗಳನ್ನು ವೀಕ್ಷಣೆ ಮಾಡಲಾಗಿದೆ. ಗುಂಡ್ಲುಪೇಟೆ ಹಾಗೂ ಚಾಮರಾಜನಗರ ಭಾಗದ ಕೆರೆಗಳ ವೀಕ್ಷಣೆಗೂ ಸಹ ದಿನಾಂಕ ನಿಗದಿ ಮಾಡಿಕೊಳ್ಳಲಿದ್ದೇನೆ. ಒಟ್ಟಾರೆ ರೈತರ ಸಹಭಾಗಿತ್ವ ಹಾಗೂ ಸಹಕಾರದೊಂದಿಗೆ ಜಿಲ್ಲೆಯ ಎಲ್ಲಾ ಭಾಗದ ಕೆರೆಗಳನ್ನು ಅಭಿವೃದ್ಧಿಪಡಿಸುವುದೇ ನಮ್ಮ ಉದ್ದೇಶವಾಗಿದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಕೆರೆಗಳ ಒತ್ತುವರಿ ವಿರುದ್ಧ ಗಂಭೀರ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. 2ನೇ ಶನಿವಾರ ಕೆರೆಗಳ ಸರ್ವೇ ಕಾರ್ಯ ಮಾಡಲಾಗುತ್ತಿದೆ. ಒತ್ತುವರಿ ತೆರವುಗೊಳಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಕೆರೆ, ಭೂಮಿಯನ್ನು ಹಸ್ತಾಂತರ ಮಾಡಿ ಸಂರಕ್ಷಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸುರೇಶ್‍ಕುಮಾರ್ ಅವರು ತಿಳಿಸಿದರು.
ಶಾಸಕರಾದ ಆರ್. ನರೇಂದ್ರ, ಎಸ್. ಮಹೇಶ್, ಇತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
No comments:
Post a Comment